ಗುಂಡಿಗೆ-ಕೊಳವೆಗಳ ಏರ‍್ಪಾಟು

ಯಶವನ್ತ ಬಾಣಸವಾಡಿ.

ಮಯ್ಯರಿಮೆಯ ಸರಣಿ ಬರಹಗಳನ್ನು ಮುಂದುವರೆಸುತ್ತಾ, ಮುಂದಿನ ನಾಲ್ಕು ಕಂತುಗಳಲ್ಲಿ ಗುಂಡಿಗೆ-ಕೊಳವೆಗಳ ಏರ‍್ಪಾಟಿನ ಬಾಗಗಳು, ಅವುಗಳ ಇಟ್ಟಳ ಹಾಗು ಅವು ಕೆಲಸ ಮಾಡುವ ಬಗೆಯನ್ನು ತಿಳಿಯೋಣ.

ಈ ಏರ‍್ಪಾಟಿನ ಕೆಲಸವೇನು?

ಗುಂಡಿಗೆ-ಕೊಳವೆಗಳ ಏರ‍್ಪಾಟು (cardio-vascular system) ಇಲ್ಲವೇ ಹರಿಯುವಿಕೆಯ ಏರ‍್ಪಾಟು (circulatory system) ಎಂದು ಕರೆಯಲಾಗುವ ಈ ಏರ‍್ಪಾಟು, ಮಯ್ ಬಾಗಗಳಿಗೆ ಉಸಿರುಗಾಳಿ (oxygen), ಸುರಿಕೆಗಳು (harmones) ಮತ್ತು ಆರಯ್ವಗಳನ್ನು (nutrients) ತಲುಪಿಸುತ್ತದೆ ಹಾಗು ತರುಮಾರ‍್ಪಿಸುವಿಕೆಯಿಂದ (metabolism) ಉಂಟಾಗುವ ಕಸಗಳನ್ನು ಮಯ್ಯಿಂದ ಹೊರ ಹಾಕುವ ಅಂಗಗಳಿಗೆ ಸಾಗಿಸುವಲ್ಲಿ ಈ ಏರ‍್ಪಾಟು ನೆರವಾಗುತ್ತದೆ.

titta 1

ಒಟ್ಟಾರೆ ಗುಂಡಿಗೆ-ಕೊಳವೆಗಳ ಏರ‍್ಪಾಟು ಎದೆಗುಂಡಿಗೆ (heart), ತೊರೆಗೊಳವೆಗಳು (arteries), ಸೇರುಗೊಳವೆಗಳು (veins), ನವಿರು-ನೆತ್ತರಗೊಳವೆಗಳು (capillaries) ಹಾಗು ಹೆಚ್ಚು-ಕಡಿಮೆ 5 ಲೀಟರ‍್ನಶ್ಟು ನೆತ್ತರನ್ನು (blood) ಒಳಗೊಂಡಿರುತ್ತದೆ. ಮೊದಲು ಈ ಇಟ್ಟಳಗಳ ಒಡಲರಿಮೆಯ (anatomy) ಬಗ್ಗೆ ತಿಳಿಯೋಣ. ಮುಂದೆ ಅವುಗಳ ಉಸಿರಿಯರಿಮೆಯನ್ನು (physiology) ತಿಳಿಸಿಕೊಡುತ್ತೇನೆ.

ಗುಂಡಿಗೆ (the heart): (ತಿಟ್ಟ 1, 2, 3)
ಕಂಡದ ಒತ್ತಡಕದ (muscular pump) ಅಂಗವಾಗಿರುವ ಗುಂಡಿಗೆಯು, ಎದೆಗೂಡಿನಲ್ಲಿರುವ ಎಡ-ಬಲ ಉಸಿರುಚೀಲಗಳ (lung) ನಡುವಿನ ನಡುಗೆರೆಯಲ್ಲಿ ಇರುತ್ತದೆ. ನೆತ್ತರು ಇಡಿ ಮಯ್ಯಲ್ಲಿ ಹರಿದಾಡಲು ಬೇಕಾದ ಒತ್ತಡವನ್ನು ಉಂಟುಮಾಡುವುದು ಇದರ ಮುಕ್ಯ ಕೆಲಸ. ಚೂಪಾಗಿರುವ ಗುಂಡಿಗೆಯ ಕೆಳಬಾಗವನ್ನು ‘ತುದಿ’ (apex) ಹಾಗು ಅಗಲವಾಗಿರುವ ಮೇಲ್ ಬಾಗವನ್ನು ‘ತಾಳು’ (base) ಎಂದು ಕರೆಯಬಹುದು.

titta 2

ಗುಂಡಿಗೆಯ ತುದಿಯು ಎಡಬಾಗಕ್ಕೆ ವಾಲಿಕೊಂಡಿರುತ್ತದೆ. ಇದರಿಂದಾಗಿ ಗುಂಡಿಗೆಯ 2/3ರಶ್ಟು ಮಯ್-ನಡುಗೆರೆಯ (body midline) ಎಡಬಾಗದಲ್ಲಿದ್ದರೆ, 1/3ರಶ್ಟು ಬಲಬಾಗದಲ್ಲಿರುತ್ತದೆ. ಗುಂಡಿಗೆಯ ತಾಳು ನಮ್ಮ ಮಯ್ಯಲ್ಲಿನ ದೊಡ್ಡ ನೆತ್ತರಗೊಳವೆಗಳಾದ ಉಸಿರು-ನೆತ್ತರಗೊಳವೆ (aorta), ಉಸಿರಿಳಿ-ನೆತ್ತರಗೊಳವೆ (vena cava), ಉಸಿರುಚೀಲದ ತೊರೆಗೊಳವೆ (pulmonary trunk), ಹಾಗು ಉಸಿರುಚೀಲದ ಸೇರುಗೊಳವೆಗಳನ್ನು (pulmonary veins) ಗುಂಡಿಗೆಗೆ ಹೊಂದಿಸುತ್ತದೆ.

ಗುಂಡಿಗೆ ಕಂಡದಿಂದ (cardiac muscle) ಮಾಡಲ್ಪಟ್ಟ ಟೊಳ್ಳಿನ ಅಂಗವಾದ ಗುಂಡಿಗೆಯ ಮುಕ್ಯ ಬಾಗಗಳೆಂದರೆ: ಗುಂಡಿಗೆ ಕೋಣೆಗಳು (heart chambers), ತೆರಪುಗಳು/ತಡೆಬಾಗಿಲುಗಳು (valves), ಗುಂಡಿಗೆ ಗೋಡೆ (heart wall) ಹಾಗು ಗುಂಡಿಗೆ ಬಡಿಕ (cardiac pacemaker).

ಗುಂಡಿಗೆ ಕೋಣೆಗಳು (heart chambers): (ತಿಟ್ಟ 2, 3) ಗುಂಡಿಗೆಯ ಟೊಳ್ಳಿನ ಒಳಬಾಗವು ನಾಲ್ಕು ಕೋಣೆಗಳಾಗಿ ಬೇರ‍್ಪಟ್ಟಿರುತ್ತದೆ, i) ಬಲ ಮೇಲ್ಕೋಣೆ (right atrium), ii) ಬಲ ಕೆಳಕೋಣೆ (right ventricle), iii) ಎಡ ಮೇಲ್ಕೋಣೆ (left atrium) ಮತ್ತು iv) ಎಡ ಕೆಳಕೋಣೆ (left ventricle).

ಬಲ ಮೇಲ್ಕೋಣೆಗೆ ಉಸಿರಿಳಿ-ನೆತ್ತರಗೊಳವೆಗಳು (vena cava) ತೆರೆದುಕೊಂಡರೆ, ಬಲ ಮೇಲ್ಕೋಣೆಯು ಬಲ ಕೆಳಕೋಣೆಗೆ ತೆರೆದುಕೊಂಡಿರುತ್ತದೆ. ಬಲ ಕೆಳಕೋಣೆಯು ಉಸಿರುಚೀಲದ ತೊರೆಗೊಳವೆಗೆ (pulmonary artery) ತೆರೆದುಕೊಳ್ಳುತ್ತದೆ. ಗುಂಡಿಗೆಯ ಎಡ ಬಾಗದ ಕೋಣೆಗಳಲ್ಲಿ, ಉಸಿರುಚೀಲದ ಸೇರುಗೊಳವೆ (pulmonary vein) ಎಡ ಮೇಲ್ಕೋಣೆಗೆ ತೆರೆದುಕೊಳ್ಳುತ್ತದೆ. ಎಡ ಮೇಲ್ಕೋಣೆಯು ಎಡ ಕೆಳಕೋಣೆಗೆ ತೆರೆದು ಕೊಂಡಿರುತ್ತದೆ. ಎಡ ಕೆಳಕೋಣೆಯು ಉಸಿರು-ನೆತ್ತರುಗೊಳವೆಗೆ (aorta) ತೆರೆದುಕೊಂಡಿರುತ್ತದೆ.

titta 3

ಗುಂಡಿಗೆ ತೆರಪುಗಳು (heart valves): (ತಿಟ್ಟ 3) ಗುಂಡಿಗೆಯಲ್ಲಿ ನೆತ್ತರು ಒಮ್ಮುಕವಾಗಿ ಹರಿಯಲು ತಡೆಬಾಗಿಲುಗಳು ಬೇಕು. ನೆತ್ತರು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ತಳ್ಳಲ್ಪಡುತ್ತದೆ. ಹೀಗೆ ತಳ್ಳಲ್ಪಟ್ಟ ನೆತ್ತರು ಹಿಮ್ಮುಕವಾಗಿ ಹರಿಯುವುದನ್ನು ತಡೆಯಲು ಗುಂಡಿಗೆಯ ತೆರಪುಗಳು ನೆರವಾಗುತ್ತವೆ. ತೆರಪುಗಳಲ್ಲಿ ಎರಡು ಬಗೆ.

1) ಮೇಲ್ಕೆಳಕೋಣೆ ತೆರಪುಗಳು (atrio-ventricular valves): ಬಲ ಮೇಲ್ಕೋಣೆ ಹಾಗು ಕೆಳಕೋಣೆಗಳ ನಡುವೆ ಮೂರ‍್ತುದಿ ತೆರಪು (tricuspid valve) ಎಂಬ ತಡೆಬಾಗಿಲು ಇರುತ್ತದೆ. ಹಾಗೆಯೇ ಇರ‍್ತುದಿ ತೆರಪು (bicuspid/mitral valve) ಎಡ ಮೇಲ್ಕೋಣೆ ಹಾಗು ಎಡ ಕೆಳಕೋಣೆಯ ಕಂಡಿಯನ್ನು ಕಾಯುತ್ತದೆ. ಮೂರ‍್ತುದಿ ತೆರಪು ಹಾಗು ಇರ‍್ತುದಿ ತೆರಪುಗಳು ಕಂಡರದ ಬಳ್ಳಿಗಳ (chordae tendinae) ನೆರವಿನಿಂದ ಗುಂಡಿಗೆಯ ಗೋಡೆಗೆ ಅಂಟಿಕೊಂಡಿರುತ್ತವೆ.

2) ಅರೆಚಂದಿರ ತೆರಪುಗಳು (semilunar valves): ಅರ‍್ದ ಚಂದ್ರನಂತೆ ಕಾಣುವ ಈ ತೆರಪುಗಳ ಸಂಕೆ ಎರಡು. ಅವುಗಳೆಂದರೆ ಬಲ ಕೆಳಕೋಣೆಯು ಉಸಿರುಚೀಲದ ತೊರೆಗೊಳವೆಗಳಿಗೆ ತೆರೆದುಕೊಳ್ಳುವ ಬಾಗದಲ್ಲಿ ಇರುವ ‘ಉಸಿರುಚೀಲದ ತೆರಪು’ (pulmonary valve) ಹಾಗು ಎಡ ಕೆಳಕೋಣೆಯು ಉಸಿರು-ನೆತ್ತರುಗೊಳವೆಗೆ (aorta) ತೆರೆದುಕೊಳ್ಳುವಲ್ಲಿ ಇರುವ ‘ಉಸಿರುನೆತ್ತರಿನ ತೆರಪು’ (aortic vavle).

ಒಬ್ಬ ಹದುಳವಾದ ಮನುಶ್ಯನಲ್ಲಿ ‘ಲಬ್’ & ‘ಡಬ್’ ಎಂಬ ಎದೆಬಡಿತದ ಸಪ್ಪಳಗಳು ಕೇಳಿಸುತ್ತವೆ. ಈ ಸಪ್ಪಳಗಳು ಮೂಡುವುದಾದರೂ ಹೇಗೆ? ಮೂರ‍್ತುದಿ ಹಾಗು ಇರ‍್ತುದಿ ತೆರಪುಗಳ ಮುಚ್ಚುವಿಕೆಯಿಂದ ಎದೆಬಡಿತದ ‘ಲಬ್’ ಸಪ್ಪಳ ಉಂಟಾದರೆ, ಅರೆಚಂದಿರ ತೆರಪುಗಳ ಮುಚ್ಚುವಿಕೆಯಿಂದ ‘ಡಬ್’ ಸಪ್ಪಳ ಮೂಡುತ್ತದೆ.

ಗುಂಡಿಗೆಯ ಗೋಡೆ (heart wall): (ತಿಟ್ಟ 4) ಗುಂಡಿಗೆಯ ಗೋಡೆಯು ಗುಂಡಿಗೆ ಒಳಪರೆ (endocardium), ಗುಂಡಿಗೆ ಕಂಡಪರೆ (myocardium), ಗುಂಡಿಗೆ ಹೊರಪರೆ (epicardium) ಎಂಬ ಪದರಗಳನ್ನು ಹೊಂದಿರುತ್ತದೆ. ಮೂರು ಪದರವನ್ನು ಹೊಂದಿರುವ ಗುಂಡಿಗೆ ಗೋಡೆಯ ಸುತ್ತಾ ಚೀಲದಂತಿರುವ ಗುಂಡಿಗೆ ಸುತ್ಪರೆಯ (pericardium) ಹೊದಿಕೆ ಇರುತ್ತದೆ.

titta 4

ಗುಂಡಿಗೆ ಒಳಪರೆ (endocardium): ಗುಂಡಿಗೆಯ ಒಳಬಾಗದ ಹೊದಿಕೆಯನ್ನು ಗುಂಡಿಗೆ ಒಳಪರೆ ಎಂದು ಹೇಳಬಹುದು. ಈ ಪದರವು ಸುಳುವಾದ ಹುರುಪೆ ಮೇಲ್ಪರೆಯಿಂದ ಮಾಡಲ್ಪಟ್ಟಿದೆ (simple squamous epithelium). ಒಳಪರೆಯು ಗುಂಡಿಗೆಯ ಕೋಣೆ ಹಾಗು ತೆರಪುಗಳಿಗೆ ಕಾಪನ್ನು (protection) ಒದಗಿಸುವುದರ ಜೊತೆಗೆ ನೆತ್ತರು-ಗುಂಡಿಗೆ-ಬೇರ‍್ಮೆಯಾಗಿ (blood-heart-barrier) ಕೆಲಸ ಮಾಡುವುದರ ಮೂಲಕ ಗುಂಡಿಗೆಕಂಡದ ಗೂಡುಗಳಲ್ಲಿನ ಮಿನ್ತುಣುಕುಗಳ (ions) ಮಟ್ಟವನ್ನು ಅಂಕೆಯಲ್ಲಿಡಲು ನೆರವಾಗುತ್ತದೆ.

ಗುಂಡಿಗೆ ಕಂಡದಪರೆ (myocardium): ಗುಂಡಿಗೆಕಂಡದಿಂದ (cardiac muscle) ಮಾಡಲ್ಪಟ್ಟ ಈ ಪದರವು ಉಳಿದ ಗುಂಡಿಗೆ ಪದರಗಳಿಗೆ ಹೋಲಿಸಿದರೆ ತುಂಬಾ ದಪ್ಪವಾಗಿರುತ್ತದೆ. ಇದು ಒಳಗಿನ ಒಳಪರೆ (endocardium) ಹಾಗು ಹೊರಗಿನ ಹೊರಪರೆಗಳ (epicardium) ನಡುವೆ ಕಂಡುಬರುತ್ತದೆ. ಗುಂಡಿಗೆಕಂಡದ ಗೂಡುಗಳ ಹೊಂದಾಣಿಕೆಯ ಕುಗ್ಗಿಸುವಿಕೆಯು ಗುಂಡಿಗೆಯೊಳಗಿನ ನೆತ್ತರನ್ನು ಮೇಲ್ಕೋಣೆಯಿಂದ ಕೆಳಕೋಣೆಗಳಿಗೆ ಹಾಗು ಕೆಳಕೋಣೆಗಳಿಂದ ನೆತ್ತರುಗೊಳವೆಗಳಿಗೆ ದಬ್ಬಲು ನೆರವಾಗುತ್ತದೆ.

ಗುಂಡಿಗೆಯ ಹೊರಪರೆ (epicardium): ಇದು ಗುಂಡಿಗೆಯ ಹೊರಗಿನ ಪದರ. ಕೆಲವು ಸಲ ಈ ಪದರವನ್ನು ನೀರ‍್ಬಗೆ ಸುತ್ಪರೆಯ (serous pericardium) ಒಳಪದರ ಎಂದು ಲೆಕ್ಕಕೆ ತೆಗೆದುಕೊಳ್ಳುವುದುಂಟು. ಹೆಚ್ಚಿನ ಮಟ್ಟದಲ್ಲಿ ಕೂಡಿಸುವ ಗೂಡುಕಟ್ಟನ್ನು (connective tissue) ಹೊಂದಿರುವ ಗುಂಡಿಗೆ ಹೊರಪರೆ, ಗುಂಡಿಗೆಗೆ ಕಾಪು (protection) ಒದಗಿಸುತ್ತದೆ.

ಗುಂಡಿಗೆ ಸುತ್ಪರೆ (pericardial membrane): ಗುಂಡಿಗೆ ಸುತ್ಪರೆಯು ಗುಂಡಿಗೆ ಹಾಗು ಗುಂಡಿಗೆಯಿಂದ ಹೊಮ್ಮುವ ಮುಕ್ಯ ನೆತ್ತರುಗೊಳವೆಗಳನ್ನು ಸುತ್ತುವರೆದಿರುವ ಚೀಲ. ಗುಂಡಿಗೆ ಸುತ್ಪರೆಯಲ್ಲಿ ಎರಡು ಪದರಗಳಿರುತ್ತವೆ:

1) ಹೊರಗಿನ ತಂತುಗೂಡಿನ ಸುತ್ಪರೆ (fibrous pericardium): ಮಂದವಾದ ಕೂಡಿಸುವ ಗೂಡುಕಟ್ಟನ್ನು ಹೊಂದಿರುವ ತಂತುಗೂಡಿನ ಸುತ್ಪರೆಯು ತೊಗಲ್ಪರೆ (diaphragm), ಎದೆಚಕ್ಕೆ (sternum) ಹಾಗು ಪಕ್ಕೆಲುಬಿನ ಮೆಲ್ಲೆಲುಬುಗಳಿಗೆ (costal cartilage) ಅಂಟುವ ಮೂಲಕ ಚೀಲದೊಳಗಿನ ಗುಂಡಿಗೆಗೆ ಕಾಪು (protection) ಮತ್ತು ಆನಿಕೆಯನ್ನು (support) ಕೊಡುತ್ತದೆ.

2) ನೀರ‍್ಬಗೆ ಸುತ್ಪರೆ (serous pericardium): ಸುಳುವಾದ ಹುರುಪೆ ಮೇಲ್ಪರೆಯಿಂದ (simple squamous epithelium) ಮಾಡಲ್ಪಟ್ಟಿರುವ ನೀರ‍್ಬಗೆ ಸುತ್ಪರೆಯಲ್ಲಿ ಹೊರ ನೀರ‍್ಬಗೆ ಸುತ್ಪರೆ (parietal serous pericardium), ಒಳ ನೀರ‍್ಬಗೆ ಸುತ್ಪರೆ (visceral serous pericardium) ಎಂಬ ನುಣುಪಾದ ಎರಡು ಹೊದಿಕೆಗಳಿರುತ್ತವೆ. ಈ ಎರಡು ಪದರಗಳ ನಡುವೆ ಇರುವ ನಾಳವನ್ನು (lumen), ಸುತ್ಪರೆ ಕುಳಿ (pericardial cavity) ಎಂದು ಹೇಳಬಹದು.

ಸುತ್ಪರೆ ಕುಳಿಯು ನೀರ‍್ಬಗೆ ಸುತ್ಪರೆಯ ಪದರಗಳು ಸೂಸುವ ಸುತ್ಪರೆ ಹರಿಕದಿಂದ (pericardial fluid) ತುಂಬಿಕೊಂಡಿರುತ್ತದೆ. ಈ ಪರೆಯ ಮುಕ್ಯ ಕೆಲಸಗಳೆಂದರೆ ಗುಂಡಿಗೆ ಸುತ್ತಲಿನ ಸೋಂಕು (infection) ಮತ್ತು ಉರಿಯೂತಗಳು (inflammation) ಗುಂಡಿಗೆಗೆ ಹಬ್ಬುವುದನ್ನು ತಡೆಯುವುದು, ಗುಂಡಿಯ ಹಿಗ್ಗುವಿಕೆಯನ್ನು ಅಂಕೆಯಲ್ಲಿಡುವುದು ಹಾಗು ಸುತ್ಪರೆ ಹರಿಕದ (pericardial fluid) ನೆರವಿನಿಂದ ಎದೆಗುಂಡಿಗೆ ಹಾಗು ಸುತ್ಪರೆಗಳ ನಡುವೆ ಉಂಟಾಗುವ ತಿಕ್ಕಾಟವನ್ನು ತಡೆಯುವುದು.

ಗುಂಡಿಗೆ ಕೊಳವೆಯೇರ‍್ಪಾಟಿನ ಉಳಿದ ಬಾಗವನ್ನು ಮುಂದಿನ ಕಂತುಗಳಲ್ಲಿ ತಿಳಿಸಿಕೊಡುತ್ತೆನೆ. ಈ ಕಂತು ನಿಮಗೆ ಹೇಗೆ ಅನಿಸಿತು? ಬರಹದ ಬಗ್ಗೆ ಏನಾದರು ಕೇಳ್ವಿಗಳು ಇಲ್ಲವೇ ಇನ್ನೇನಾದರೂ ಅನಿಸಿಕೆಗಳಿದ್ದರೆ ದಯವಿಟ್ಟು ಹಂಚಿಕೊಳ್ಳಿ. ನಿಮ್ಮ ಹಿನ್ನುಣಿಕೆಯು (feedback) ಮುಂದಿನ ಬರಹಗಳನ್ನು ಬರೆಯುವ ಶಯ್ಲಿಗೆ ದಿಕ್ಸೂಚಿ.

ಅರಿಕೆ: ಡಾ.ಡಿ.ಎಸ್.ಶಿವಪ್ಪ ಅವರು ಗುಂಡಿಗೆ ರೋಗದ ಕಯ್ಪಿಡಿ ಅನ್ನುವ ಹೊತ್ತಗೆಯನ್ನು ಬರೆದಿದ್ದಾರೆ. ಈ ಹೊತ್ತಗೆ ನಿಮ್ಮ ಬಳಿ ಇದ್ದರೆ ಇಲ್ಲವೇ ಅದು ದೊರೆಯುವ ಜಾಗ ಗೊತ್ತಿದ್ದರೆ ದಯವಿಟ್ಟು ತಿಳಿಸಿರಿ. ಮದ್ದರಿಮೆಯ ಬರಹಗಳನ್ನು ಕನ್ನಡಕ್ಕೆ ತರಲು ಅವರ ಹೊತ್ತಗೆಗಳು ದಾರಿದೀವಿಗೆಗಳಾಗಿವೆ. ನನ್ನ ಬರಹಗಳಲ್ಲಿರುವ ಹೆಚ್ಚಿನ ಪದಗಳನ್ನು ಅವರ ’ವಯ್ದ್ಯ ಪದಕೋಶ’ ಹೊತ್ತಗೆಯಿಂದ ಪಡೆದಿರುವುದು ನಿಮಗೆ ಗೊತ್ತಿರಬಹುದು. ಗುಂಡಿಗೆಯ ರೋಗಗಳ ಕುರಿತಾಗಿಯೇ ಬರೆದಿರುವ ಅವರ ಹೊತ್ತಗೆ ದೊರೆತರೆ, ನನಗೆ ಬರಹ ಬರೆಯಲು ನೆರವಾಗುವುದು. ನನ್ನಿ.

(ತಿಳಿವು ಮತ್ತು ತಿಟ್ಟ ಸೆಲೆಗಳು:1) cnx.org, 2) docstoc.com, 3) wikipedia 4) innerbody.com, 5) cnx.org/latest )

 

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ತುಂಬಾ ಒಳ್ಳೆಯ ಬರಹ.

  1. 10/06/2014

    […] ಹಿಂದಿನ ಬರಹದಿಂದ ನಮ್ಮ ಗುಂಡಿಗೆಯ ಜಗತ್ತಿನೊಳಗೆ ಇಣುಕಲು ನಾವು ಮುಂದಾಗಿದ್ದೆವು. ಸರಣಿಯ ಈ ಬಾಗದಲ್ಲಿ ಗುಂಡಿಗೆ-ಕೊಳವೆಗಳ ಏರ‍್ಪಾಟಿನ ಮುಕ್ಯ ಕವಲುಗಳಾದ ನೆತ್ತರುಗೊಳವೆಗಳ (blood vessels) ಬಗ್ಗೆ ತಿಳಿದುಕೊಳ್ಳೋಣ. ನೆತ್ತರುಗೊಳವೆಗಳ ಬಗೆಗಳು, ಅವುಗಳ ಕಟ್ಟಣೆ ಮುಂತಾದ ವಿಶಯಗಳನ್ನು ಈ ಬರಹದಲ್ಲಿ ಅರಿತುಕೊಳ್ಳೋಣ. […]

  2. 28/06/2014

    […] ಎರಡು  ಕಂತುಗಳಲ್ಲಿ (1, 2) ಎದೆಗುಂಡಿಗೆ (heart) ಹಾಗು ನೆತ್ತರುಗೊಳವೆಗಳ […]

ಅನಿಸಿಕೆ ಬರೆಯಿರಿ:

%d bloggers like this: