ಪದಗಳನ್ನು ಓದುವ ಹಾಗೆಯೇ ಬರೆಯಬೇಕು

– ಡಿ.ಎನ್.ಶಂಕರ ಬಟ್

ನುಡಿಯರಿಮೆಯ ಇಣುಕುನೋಟ – 3

nudi_inukuಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಓದುವ ಹಾಗೆಯೇ ಬರೆಯುತ್ತೇವೆ; ಆದರೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನು ಮಾತ್ರ ಓದುವ ಹಾಗೆ ಬರೆಯದೆ, ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತ್ತೇವೆ: ವಿಶೇಶ ಎಂಬುದಾಗಿ ಓದಿದರೂ ವಿಶೇಷ ಎಂಬುದಾಗಿ ಬರೆಯುತ್ತೇವೆ, ಮತ್ತು ಅದಿಕಾರಿ ಎಂಬುದಾಗಿ ಓದಿದರೂ ಅಧಿಕಾರಿ ಎಂಬುದಾಗಿ ಬರೆಯುತ್ತೇವೆ.

ಸಂಸ್ಕ್ರುತವನ್ನು ಹೊರತುಪಡಿಸಿ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳನ್ನೆಲ್ಲ ಓದುವ ಹಾಗೆ ಬರೆಯುತ್ತೇವಲ್ಲದೆ, ಆ ನುಡಿಗಳಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ. ಇಂಗ್ಲಿಶ್‌ನ ವಯ್ಪರ್ ಮತ್ತು ವಯ್ರಸ್ ಪದಗಳ ಮೊದಲ ಬರೆಗೆಗಳು ಇಂಗ್ಲಿಶ್‌ನಲ್ಲಿ ಬೇರಾಗಿವೆ, ಆದರೆ ಕನ್ನಡದಲ್ಲಿ ವ ಎಂಬ ಒಂದೇ ಬರಿಗೆಯನ್ನು ಬಳಸಲಾಗುತ್ತದೆ. ಅವೆರಡನ್ನೂ ಒಂದೇ ರೀತಿ ಓದುತ್ತಿರುವುದೇ ಇದಕ್ಕೆ ಕಾರಣ.

ಒಂದು ಬರಹದಲ್ಲಿ ಪದಗಳನ್ನು ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಬರೆಯಬೇಕಾಗಿದೆಯಾದರೆ, ಅದು ಅಂತಹ ಬರಹವನ್ನು ಕಲಿಯುವವರಿಗೆ ಮತ್ತು ಬಳಸುವವರಿಗೆ ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತದೆ; ಕನ್ನಡ ಬರಹದ ಈ ಸಂಪ್ರದಾಯ ಮುಕ್ಯವಾಗಿ ಕೆಳಗೆ ಕೊಟ್ಟಿರುವಂತಹ ತೊಡಕುಗಳನ್ನು ಕೊಡುತ್ತಿದೆ:

(೧) ಓದಲು ಮತ್ತು ಬರೆಯಲು ಕಲಿಯಹೊರಡುವ ಮಕ್ಕಳು ಅನವಶ್ಯಕವಾಗಿ ಹದಿನೇಳು ಹೆಚ್ಚಿನ ಬರಿಗೆ(ಅಕ್ಶರ)ಗಳನ್ನು ಕಲಿಯಬೇಕಾಗುತ್ತದೆ.

(೨) ಸರಿಯಾಗಿ ಮತ್ತು ಸಲೀಸಾಗಿ ಓದಲು ಕಲಿಯಬೇಕಿದ್ದಲ್ಲಿ, ಪದಗಳನ್ನು ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ (ಎತ್ತುಗೆಗೆ, ಮನೆ ಎಂಬುದನ್ನು ಮ್, ಅ, ನ್ ಮತ್ತು ಎ ಎಂಬ ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ) ಎಂಬುದನ್ನು ಗಮನಿಸಬೇಕು, ಮತ್ತು ಈ ಉಲಿಗಳನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ಬರಿಗೆಗಳನ್ನು ಬಳಸಲಾಗುತ್ತದೆ ಎಂಬುದನ್ನೂ ಗಮನಿಸಬೇಕು. ಇವೆರಡನ್ನು ಗಮನಿಸಿದವರು ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗಲೂ ಅವನ್ನು ಸುಲಬವಾಗಿ ಓದಬಲ್ಲವರಾಗುತ್ತಾರೆ.

ಪದಗಳನ್ನು ಓದುವ ಹಾಗೆಯೇ ಬರೆದಿದೆಯಾದರೆ ಮಾತ್ರ, ಈ ರೀತಿ ಓದುವಾಗ ಬಳಸುವ ಉಲಿಗೂ ಬರಹದಲ್ಲಿ ಕಾಣಿಸುವ ಬರಿಗೆಗಳಿಗೂ ನಡುವೆ ಸಂಬಂದವಿದೆ ಎಂಬುದು ಓದಲು ಕಲಿಯುವವರ ಗಮನಕ್ಕೆ ಸುಲಬವಾಗಿ ಬರುತ್ತದೆ.

ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಪದಗಳನ್ನು ಬರೆದಿದೆಯಾದರೆ, ಅವುಗಳಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವೆ ಇಂತಹದೊಂದು ಸಂಬಂದವಿದೆಯೆಂಬುದು ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ, ಮತ್ತು ಇದರಿಂದಾಗಿ ಎಶ್ಟು ಕಲಿತರೂ ಅವರಿಗೆ ಸಲೀಸಾಗಿ ಓದಲು ಬರುವುದೇ ಇಲ್ಲ. ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗ ಅವನ್ನು ಹೇಗೆ ಓದಬೇಕೆಂಬುದು ಅವರಿಗೆ ಗೊತ್ತಾಗುವುದೂ ಇಲ್ಲ.

(೩) ಓದುವ ಹಾಗೆ ಬರೆಯುವ ಪದಗಳನ್ನು ಬರಹಗಳಲ್ಲಿ ಬಳಸುವುದು ಸುಲಬ; ಬೇರೆ ಬಗೆಯಲ್ಲಿ ಬರೆಯುವ ಒಂದೊಂದು ಪದವನ್ನೂ ಅದನ್ನು ಬರೆಯುವುದು ಹೇಗೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಮನೆ ಎಂಬ ಪದವನ್ನು ಓದುವ ಹಾಗೆಯೇ ಬರೆಯುವ ಕಾರಣ, ಅದನ್ನು ಹೇಗೆ ಬರೆಯುವುದೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿಲ್ಲ.
ಆದರೆ, ವಿಶೇಷ ಎಂಬ ಪದವನ್ನು ಬರೆಯುವಾಗ ಎರಡನೆಯ ಮುಚ್ಚುಲಿಯನ್ನು ಶ್ ಎಂಬುದಾಗಿ, ಮತ್ತು ಮೂರನೆಯ ಮುಚ್ಚುಲಿಯನ್ನು ಷ್ ಎಂಬುದಾಗಿ ಬರೆಯಬೇಕೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಯಾಕೆಂದರೆ, ಅವೆರಡನ್ನೂ ಒಂದೇ ರೀತಿಯಲ್ಲಿ ಓದಲಾಗುತ್ತದೆ.ಇದನ್ನು ನೆನಪಿನಲ್ಲಿಟ್ಟುಕೊಳ್ಳಲಾರದವರು ಬರವಣಿಗೆಯಲ್ಲಿ ತಪ್ಪು ಮಾಡುತ್ತಾರೆ.

ಇವತ್ತು ದಿನಪತ್ರಿಕೆಗಳಲ್ಲಿ, ಕತೆ-ಕಾದಂಬರಿಗಳಲ್ಲಿ, ಮತ್ತು ಬೇರೆ ಬಗೆಯ ಬರಹಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸುವುದು ಓದುವ ಹಾಗೆ ಬರೆಯದಿರುವ ಮಹಾಪ್ರಾಣಾಕ್ಶರ, ಷಕಾರ, ಋಕಾರ ಮೊದಲಾದ ಬರಿಗೆಗಳಿರುವ ಸಂಸ್ಕ್ರುತ ಪದಗಳ ಬಳಕೆಯಲ್ಲಿ ಎಂಬುದನ್ನು ಗಮನಿಸಬಹುದು.

(೪) ಸಾಮಾನ್ಯವಾಗಿ ಜನರು ಪದಕೋಶಗಳನ್ನು ನೋಡಲು ಹೋಗುವುದು ಹೊಸದಾಗಿ ಅವರ ಓದಿನಲ್ಲಿ ಕಾಣಿಸಿಕೊಳ್ಳುವ ಪದಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಾಗಿ; ಆದರೆ, ಓದುವ ಹಾಗೆ ಬರೆಯದಿರುವ ವಿಶೇಷ, ಅಧಿಕಾರಿ ಮೊದಲಾದ ಪದಗಳನ್ನು ಅವುಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಿಂತಲೂ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಾಗಿ ಪದಕೋಶಗಳನ್ನು ನೋಡಬೇಕಾಗುತ್ತದೆ. ಓದುವ ಹಾಗೆಯೇ ಬರೆಯುವ ಯಾವ ಪದವನ್ನೂ ಈ ರೀತಿ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯಲು ಪದಕೋಶವನ್ನು ನೋಡಬೇಕಾಗುವುದಿಲ್ಲ.

(೫) ಕೆಳವರ‍್ಗದ ಮಕ್ಕಳಲ್ಲಿ ಇಂತಹ ಪದಗಳ ಕಲಿಕೆ ಕೀಳರಿಮೆಯನ್ನು ಉಂಟುಮಾಡುತ್ತದೆ; ಅವು ಕೊಡುವ ತೊಂದರೆಯಿಂದಾಗಿ ಕೆಲವರು ಬರಹದ ಕಲಿಕೆಯನ್ನು ನಡುವಿನಲ್ಲೇ ನಿಲ್ಲಿಸಿಬಿಡುತ್ತಾರೆ. ಓದಲು ಕಲಿತವರೂ ಅದನ್ನು ತುಂಬಾ ಅಪರೂಪವಾಗಿ ಮಾತ್ರ ಬಳಸುತ್ತಾರೆ. ಯಾಕೆಂದರೆ, ಅವರಿಗೆ ಸಲೀಸಾಗಿ ಓದುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.
ಸಮಾಜಗಳಲ್ಲಿ ಹಲವಾರು ಬಗೆಯ ಸಂಪ್ರದಾಯಗಳು ಬೇರೆ ಬೇರೆ ಕಾರಣಗಳಿಗಾಗಿ ಬಳಕೆಗೆ ಬರುತ್ತವೆ, ಮತ್ತು ಅವುಗಳಿಂದ ಸಮಾಜಕ್ಕೆ ಪ್ರಯೋಜನಗಳೇನೂ ಇಲ್ಲದಿದ್ದರೂ, ಹೆಚ್ಚಿನ ತೊಂದರೆಯಿಲ್ಲವಾದಲ್ಲಿ ಅವು ಹಾಗೆಯೇ ವರ‍್ಶಗಟ್ಟಲೆ ಸಮಯ ಮುಂದುವರಿಯುತ್ತಿರುತ್ತವೆ.

ಸಂಸ್ಕ್ರುತದ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬುದೂ ಇಂತಹದೇ ಒಂದು ಸಂಪ್ರದಾಯ. ಅದರಿಂದ ಕನ್ನಡ ಬರಹದ ಮಟ್ಟಿಗೆ ಯಾವ ಪ್ರಯೋಜನವೂ ಇಲ್ಲ. ಹಳೆಗನ್ನಡದ ಸಮಯದಲ್ಲಿ ಇಂತಹ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬಹುದಿತ್ತು, ಇಲ್ಲವೇ ಕನ್ನಡದ ಸೊಗಡನ್ನು ಕೆಡಿಸದಂತೆ ಅವನ್ನು ಮಾರ‍್ಪಡಿಸಿ ತದ್ಬವಗಳನ್ನಾಗಿ ಮಾಡಿಯೂ ಬಳಸಬಹುದಿತ್ತು. ಆಂಡಯ್ಯನ ಕಬ್ಬಿಗರ ಕಾವದಲ್ಲಿ ಅಂತಹ ತದ್ಬವ ಪದಗಳನ್ನು ಮಾತ್ರ ಬಳಸಲಾಗಿದೆ.

ಆದರೆ, ಇವತ್ತು ಹೊಸಗನ್ನಡದಲ್ಲಿ ಬರಹಗಾರರು ಈ ಆಯ್ಕೆಯನ್ನು ಕಳೆದುಕೊಂಡಿದ್ದಾರೆ. ಬಳಕೆಯಲ್ಲಿರುವ ಕೆಲವೇ ಕೆಲವು ತದ್ಬವ ಪದಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಂಸ್ಕ್ರುತ ಪದಗಳನ್ನೂ ಇವತ್ತು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕಾಗಿದೆ. ಅವುಗಳಲ್ಲಿ ಯಾವುದೇ ಬಗೆಯ ಮಾರ‍್ಪಾಡನ್ನು ನಡೆಸಿದರೂ ಅದನ್ನು ತಪ್ಪೆಂದು ತಿಳಿಯಲಾಗುತ್ತದೆ.
ಮೊನ್ನೆ ಮೊನ್ನೆಯ ವರೆಗೂ ಈ ಸಂಪ್ರದಾಯ ಹೆಚ್ಚಿನ ತೊಂದರೆಯನ್ನೇನೂ ಕೊಡುತ್ತಿರಲಿಲ್ಲ. ಯಾಕೆಂದರೆ, ಸಮಾಜದಲ್ಲಿ ಮೇಲ್ವರ‍್ಗಕ್ಕೆ ಸೇರಿದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಬಳಸಬೇಕಾಗಿತ್ತು, ಮತ್ತು ಅವರಲ್ಲಿ ಹೆಚ್ಚಿನವರೂ ಕನ್ನಡದೊಂದಿಗೆ ಸಂಸ್ಕ್ರುತವನ್ನೂ ಕಲಿಯುತ್ತಿದ್ದರು; ಹಾಗಾಗಿ, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡುಹೋಗುವುದು ಅವರಿಗೆ ತೊಡಕಿನದಾಗಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರು ಮತ್ತು ಎಲ್ಲರೂ ಬರಹವನ್ನು ಬಳಸಬೇಕಾಗಿದೆ. ಯಾಕೆಂದರೆ, ಇವತ್ತು ಸಮಾಜದಲ್ಲಿ ಬರಹಕ್ಕೆ ಅಂತಹದೊಂದು ಪ್ರಾಮುಕ್ಯತೆ ಬಂದಿದೆ. ಬರಹವನ್ನು ಬಳಸಲು ತಿಳಿಯದವರು ಮುಂದೆ ಬರಲು ಸಾದ್ಯವೇ ಇಲ್ಲ, ಮತ್ತು ಅಂತಹ ಹಲವು ಮಂದಿ ಜನರಿರುವ ಸಮಾಜ ಏಳಿಗೆಯಾಗಲೂ ಸಾದ್ಯವೇ ಇಲ್ಲ ಎಂಬ ಪರಿಸ್ತಿತಿ ಇವತ್ತಿನದಾಗಿದೆ.

ಈ ರೀತಿ ಕನ್ನಡ ಬರಹವನ್ನು ಬಳಸಲು ಕಲಿಯಲೇ ಬೇಕಾಗಿರುವ ಜನರಲ್ಲಿ ಹೆಚ್ಚಿನವರಿಗೂ ಸಂಸ್ಕ್ರುತದ ಅರಿವು ಬೇಕಾಗಿಲ್ಲ; ಅದಕ್ಕಿಂತಲೂ ಅವರಿಗೆ ಇಂಗ್ಲಿಶ್ ನುಡಿಯ ಅರಿವು ಹೆಚ್ಚಿನ ನೆರವು ನೀಡಬಲ್ಲುದು. ಹಾಗಾಗಿ, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಮೇಲಿನ ಸಂಪ್ರದಾಯ ಒಂದು ಹೆಚ್ಚಿನ ತೊಡಕನ್ನು ಮಾತ್ರ ತಂದೊಡ್ಡುತ್ತದಲ್ಲದೆ, ಅದರಿಂದ ಅವರು ಪಡೆಯಬಹುದಾದ ಪ್ರಯೋಜನ ಯಾವುದೂ ಇಲ್ಲ.

ಈ ರೀತಿ ಕನ್ನಡದ ಮಟ್ಟಿಗೆ ಯಾವ ಪ್ರಯೋಜನವನ್ನೂ ನೀಡದ, ಹಲವು ಮಂದಿ ಕನ್ನಡಿಗರಿಗೆ ತೊಡಕನ್ನು ಮಾತ್ರವೇ ಕೊಡುವ, ಮತ್ತು ನಮ್ಮ ಸಮಾಜದ ಏಳಿಗೆಗೂ ತೊಡಕಾಗಿರುವ ಈ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಜಾಣತನ. ಇದು ಒಂದೂವರೆ-ಎರಡು ಸಾವಿರ ವರ‍್ಶದ ಹಿಂದಿನ ಸಮಾಜಕ್ಕಾಗಿ ಮಾಡಿಕೊಂಡಿದ್ದ ಸಂಪ್ರದಾಯ. ಇಂದಿನ ಸಮಾಜ ಆಗಿನದಕ್ಕಿಂತ ತೀರ ಬೇರೆಯಾಗಿದೆ. ಹೀಗಿರುವಾಗಲೂ ಆ ಹಳೆಯ ಸಂಪ್ರದಾಯವನ್ನು ತೊರೆಯಲು ಹಿಂಜರಿಯುವುದೆಂದರೆ, ಅಪ್ಪ ನೆಟ್ಟ ಆಲದ ಮರವೆಂದು ನೇಣು ಹಾಕಿಕೊಳ್ಳುವ ಹಾಗೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 2

ನಿಮಗೆ ಹಿಡಿಸಬಹುದಾದ ಬರಹಗಳು

6 Responses

 1. ಆಡಿದ್ದನ್ನೇ ಬರೆಯೋದರ ಬದ್ಲು.. ಬರಿಯೋದನ್ನೇ ಯಾಕಾದಬಾರದು.. ಶ ಹಾಗೂ ಷ ಆಡುವುದರಲ್ಲಿ (ಉಚ್ಛಾರಣೆ)ಯಲ್ಲಿ ವ್ಯತ್ಯಾಸ ಇದೆ.. ಅದನ್ನ ಮಕ್ಕಳಿಗೆ ಹೇಳಿಕೊಡೋದು ಬಿಟ್ಟು.. ಇದೇನ್ರೀ ಭಂಡವಾದ… ನಾನು ಒಪ್ಪಲ್ಲ.. ಬಾಯಿಂದ ಬರೋ ಎಲ್ಲಾ ಅಕ್ಷರಕ್ಕೂ ಶಬ್ದ ರೂಪ ಇರ್ಬೇಕು.. ರು ಹಾಗು ಋ ಆಡುವುದರಲ್ಲೂ ವ್ಯತ್ಯಾಸ ಇದೆ.. ರು ನಾಲಿಗೆ ಹಾಗು ಹಲ್ಲುಗಳ ತುದಿಯಿಂದ.. ಋ ನಾಲಿಗೆ ಹಾಗು ಅಂಗಳದಿಂದ.. ಮಕ್ಕಳಿಗೆ ಪಾಠ ಹೇಳಿಕೊಡೋ ಗುರುಗಳಿಗೆ ಇದರಲ್ಲಿ ಸರಿಯಾಗಿ ಅರಿವು ಮೂಡಿಸಬೇಕು.. ಅದು ಬಿಟ್ಟು ಅಕ್ಷರನೇ ಬೇಡ ಅಂದ್ರ ಹೆಂಗ್ರೀ…

  • ’ಬಾಯಿಂದ ಬರುವ ಎಲ್ಲ ಅಕ್ಶರಕ್ಕೂ ಶಬ್ದ ರೂಪ ಇರಬೇಕು’ ಎಂದರೇನು? ಬಾಯಿಂದ ಬರುವುದು ಶಬ್ದವೇ ಹೊರತು ಅಕ್ಶರವಲ್ಲವಾದುದರಿಂದ, ’ಬಾಯಿಂದ ಬರುವ ಎಲ್ಲ ಶಬ್ದಕ್ಕೂ ಅಕ್ಶರ ರೂಪ ಇರಬೇಕು’ ಎಂದು ನಿಮ್ಮ ಅನಿಸಿಕೆ ಎಂದುಕೊಳ್ಳೋಣ. ಅದನ್ನೇ ಇಲ್ಲಿ ನಾಡೋಜ ಡಾ|| ಡಿ.ಎನ್.ಶಂಕರಬಟ್ಟರು ಹೇಳುತ್ತಿರುವುದು. ’ರು’ ಹಾಗೂ ’ಋ’ ಆಡುವುದರಲ್ಲಿ ವ್ಯತ್ಯಾಸ ಇದೆ ಎಂದು ನೀವು ಹೇಳುತ್ತಿರುವುದರಿಂದ, ಈ ವ್ಯತ್ಯಾಸ ಇರುವಂತೆ ಮಾತನಾಡಿರುವ ಯಾರಾದರೂ ಕನ್ನಡಿಗರ ವೀಡಿಯೋ ಒಂದನ್ನು ಯೂಟ್ಯೂಬಿಗೆ ಏರಿಸಿ ಅದರ ಕೊಂಡಿಯನ್ನು ಇಲ್ಲಿ ಹಾಕಿ. ಈ ವ್ಯತ್ಯಾಸ ’ಹೀಗಿರಬೇಕು’ ಎಂದು ತೋರಿಸುವ ವೀಡಿಯೋ ಅಲ್ಲ, ಏಕೆಂದರೆ ಅದು ಗೊತ್ತಿರುವ ಮಾತು; ನಾನು ಕೇಳುತ್ತಿರುವುದು ಈ ವ್ಯತ್ಯಾಸವನ್ನು ಕನ್ನಡಿಗರು ಸಹಜವಾಗಿ (ನಿಮ್ಮ ಯಾವುದೇ ಕಯ್ವಾಡವಿಲ್ಲದೆ) ತಮ್ಮ ಮಾತಿನಲ್ಲಿ ತೋರ‍್ಪಡಿಸುತ್ತಿದ್ದಾರೆ ಎಂದು ತೋರಿಸುವ ವೀಡಿಯೋ.

 2. kspriyank says:

  ಮಾನ್ಯ ಪ್ರಬುರಾಜ್ ಅವರೇ,
  ನುಡಿಯನ್ನು ಮಕ್ಕಳಿಗೆ ಪಾಟ ಮಾಡುವ ಗುರುಗಳೇ ಹೇಳಿಕೊಡಬೇಕು ಎಂಬುದು ತಪ್ಪುನಂಬಿಕೆ.
  ಶಾಲೆಗೆ ಹೋಗದ ಮಕ್ಕಳೂ ನುಡಿಯನ್ನಾಡಬಲ್ಲರು. ಶಾಲೆಯೇ ಇಲ್ಲದಿದ್ದ ಸಮಯದಿಂದಲೂ ಕನ್ನಡವು ಬೆಳೆದು ಬಂದಿದೆ. ಕನ್ನಡವೇ ಅಲ್ಲ, ಇಂಗ್ಲೀಶು ಕೂಡಾ ಶಾಲೆಯೇ ಇಲ್ಲದಿದ್ದ ಸಮಯದಲ್ಲೂ ಇಂಗ್ಲೆಂಡಿನ ಜನರ ಬಾಯಲ್ಲಿ ಇದ್ದಿತ್ತು.
  ನುಡಿಯನ್ನು ಜನರು ತಾವಾಗೇ ಪಡೆದುಕೊಳ್ಳುತ್ತಾರೆ, ಯಾರೋ ಒಬ್ಬರು ಹೇಳಿಕೊಡುವುದರಿಂದ ನುಡಿ ಬರುವುದಿಲ್ಲ. Language is an acquired skill ಎಂಬುದಾಗಿ ಎಲ್ಲಾ ನುಡಿಯರಿಗರೂ (linguists) ಒಪ್ಪುತ್ತಾರೆ.
  ಮೇಲಾಗಿ, ನುಡಿಯು ಬದಲಾಗುತ್ತಾ ಸಾಗುತ್ತದೆ. ಹಳೆಗನ್ನಡದಲ್ಲಿ “ಪುಲಿ” ಎಂದು ಕರೆಯಲಾಗುತ್ತಿದ್ದ ಪದವು ಇವತ್ತಿನ ಕನ್ನಡದಲ್ಲಿ “ಹುಲಿ” ಎಂದಾಗಿದೆ. ಅದು ಜನರ ಮಾತಿನಲ್ಲಿ ತಾನಾಗೇ ಬದಲಾದುದು. ಯಾರೋ ಒಬ್ಬರು ತೀರ‍್ಮಾನಿಸಿ ಮಿಕ್ಕವರೆಲ್ಲರೂ ಹಿಂಬಾಲಿಸಿದುದಲ್ಲ.
  ಅಂದ ಹಾಗೇ, ’ಶ’ ಮತ್ತು ’ಷ’ ಉಲಿಕೆಯನ್ನು ಕನ್ನಡಿಗರು ’ಶ’ ಎಂದೇ ಉಲಿಯುತ್ತಾರೆ. ಕನ್ನಡಿಗರ ಉಲಿಕೆಯಲ್ಲಿ ’ಶ’ ಮತ್ತು ’ಷ’ ವ್ಯತ್ಯಾಸ ಇಲ್ಲ. ತಾವು ಈ ವ್ಯತ್ಯಾಸವನ್ನು ಎಲ್ಲಿ ಕೇಳಿದಿರಿ?

 3. ಪ್ರಬುರಾಜ್ ಅವರೇ, ಮಾತಿನಿಂದ ಬರಹ ಬಂದಿತೆ ಹೊರತು , ಬರಹದಿಂದ ಮಾತಲ್ಲ .

 1. 14/08/2013

  […] ನುಡಿಯರಿಮೆಯ ಇಣುಕುನೋಟ – 3 >> […]

 2. 21/08/2013

  […] << ನುಡಿಯರಿಮೆಯ ಇಣುಕುನೋಟ – 3 […]

ಅನಿಸಿಕೆ ಬರೆಯಿರಿ: