ನಮ್ ಕಡೆನೂ ’ಮಹಾಪ್ರಾಣ’ ಬ್ಯಾಡ್ರೀ

ಬಸವರಾಜ್ ಕಂಟಿ.

(ಇದು ದಟ್ಸ್ ಕನ್ನಡದಲ್ಲಿ ಮೂಡಿಬಂದ ಬರಹಕ್ಕೆ ನೀಡಿರುವ ಪ್ರತಿಕ್ರಿಯೆ.) 

ವಿನಾಯಕ್ ಅವ್ರ,

ಮಹಾಪ್ರಾಣ ಕಯ್ ಬಿಟ್ರ ನಮ್ ಕಡೆ ಕನ್ನಡ ಬರ‍್ಯಾಕ ಬರಾಂಗಿಲ್ಲ ಅನ್ನು ಹಂಗದ ನಿಮ್ ಮಾತು. ನಿಮ್ ಬರಹದಾಗ ಉದಾಹರಣೆ ತೊಗೊಂಡಿರು ಪದಗಳನ್ನ ಬಿಟ್ರ ಎಶ್ಟ್ ಮಹಾಪ್ರಾಣ ಪದಗಳ ಬಳಕೆ ಮಾಡೀರಿ? ಮಹಾಪ್ರಾಣ ತಗದ್ರ ನಮ್ ಕಡೆ ಸಾಹಿತ್ಯ ಇರಾಂಗೇ ಇಲ್ಲಾ ಅನ್ನು ಹಂಗ ಬರ‍್ದೀರಿ. ಬೇಂದ್ರೆ, ಕಂಬಾರರ ಹಾಡಿನ್ಯಾಗ ಎಶ್ಟ್ ಮಹಾಪ್ರಾಣ ಬಳಕೆ ಆಗ್ಯಾವ ಸ್ವಲ್ಪ ನೋಡ್ರಿ. ಅಲ್ಲೊಂದು-ಇಲ್ಲೊಂದು ಇರು ಮಹಾಪ್ರಾಣಗಳ ಜಾಗದಾಗ ಅಲ್ಪಪ್ರಾಣಗಳನ್ನ ಬಳಸಿದ್ರ ಅವರ ಹಾಡಗೋಳೇನೂ ಚೆಂದ ಕಳ್ಕೊಳಾಂಗಿಲ್ಲಾ,ಹುರುಳೂ ಬದಲಾಗಲ್ಲಾ. ಬ್ಯಾರೆ ಬಾಶೆ ಪದಗಳನ್ನ ತಂದು ಕನ್ನಡಕ್ಕ ತುರಿಕಿ ಅವು ನಮ್ ಪದಗಳು ಅಂತ ಹೇಳ್ಕೊಳ್ಳೊದ್ರಾಗ ದೊಡ್ಡಸ್ತಿಕಿ ಇಲ್ಲಾ.

ಅಚ್ಚ ಕನ್ನಡದಾಗ ಮಹಾಪ್ರಾಣ ಇಲ್ಲಾ,ತಿಳ್ಕೋರಿ. ಮಹಾಪ್ರಾಣ ಇರು ಪದಗಳು ಕನ್ನಡಕ್ಕ ಬಂದಾಗ ಮಹಾಪ್ರಾಣ ಬಿದ್ದ ಹೋಗಿರು ಎಶ್ಟೋ ಪದಗಳು ಅವ. ನೀವ ಬಳಸಿರೋ “ಘಂಟೆ” ಕನ್ನಡದಾಗ “ಗಂಟೆ” ಆಗೇದ. ಹಂಗ “ಖಿಡಕಿ” ಕನ್ನಡದಾಗ “ಕಿಟಕಿ/ಕಿಡಕಿ” ಆಗೇದ.

ಆಡು ಮಾತಿನ್ಯಾಗ ನಾವು ಮಹಾಪ್ರಾಣ ಇರು ಪದಗಳನ್ನ ಬಳಸೋದ ಕಮ್ಮಿ. ಇನ್ನ ಇದ್ರು ಅವುಗಳನ್ನ ಉಚ್ಚಾರ ಮಾಡು ಮಂದಿ ಇನ್ನಾ ಕಮ್ಮಿ. ಹಂಗಂತ ಮಂದಿ ತಪ್ಪ ಉಚ್ಚಾರ ಮಾಡತಾರ ಅಂತ ಅಲ್ಲಾ, ನಮ್ಮ ಕನ್ನಡದಾಗ ಮಹಾಪ್ರಾಣದ ಉಚ್ಚಾರನ ಇಲ್ಲಾ.

ಕನ್ನಡ ಲಿಪಿ ಇರೂದು ಕನ್ನಡ ಬರೀಲಿಕ್ಕ. ಸಂಸ್ಕ್ರುತ,ಮರಾಟಿ ಬರೀಲಿಕ್ಕ ಅಲ್ಲ. ಕನ್ನಡದಾಗ ಸಂಸ್ಕ್ರುತನೂ ಬರಿಲಿಕ್ಕ ಬರಬೇಕು ಅನ್ನೂದು ಪೊಳ್ಳುತನ ಆಗ್ತದ.
ಇನ್ನು ಮಹಾಪ್ರಾಣ ಬಿಡೂದ್ರಿಂದ ಆಗು ಅನುಕೂಲ ಎನು ಅಂತ ನೋಡೂನು.

1. ಮಹಾಪ್ರಾಣ ಉಚ್ಚಾರ ಸರಿಯಾಗಿ ಮಾಡ್ಲಿಲ್ಲಾ ಅಂದ್ರ ಅದು ತಪ್ಪು ಅನ್ನು ಬಾವನೆ ನಮ್ ತೆಲ್ಯಾಗ ತುಂಬೇದ. ಉಚ್ಚಾರ ಸರಿ ಬರಲಿಲ್ಲಾಂದ್ರ ಅಂತವರನ್ನ ಕೀಳಾಗಿ ನೋಡತಾರ. ಮಹಾಪ್ರಾಣ ಬಿಡುದ್ರಿಂದ ಇದನ್ನ ತಪ್ಪಿಸಬಹುದು. ಏನೋ ಸ್ವಲ್ಪ ಮಂದಿಗೆ ಮಹಪ್ರಾಣ ಇಲ್ಲಾ ಸಂಸ್ಕ್ರುತದ್ ಕಡೆ ಒಲವು ಅದ ಅಂತ ಹೇಳಿ ಎಲ್ಲಾರಿಗೂ ಮಹಾಪ್ರಾಣ ಹೇರೂದು ಸರಿಯಲ್ಲ ನೋಡ್ರಿ.

2. ಮಹಾಪ್ರಾಣ ಇರೂದ್ರಿಂದ ಬರವಣಿಗೆನಾಗ ಎಶ್ಟೊ ಮಂದಿಗೆ ಗೊಂದಲ ಆಗ್ತದ. ತಪ್ಪಾಗಿ ಬಳಸೋ ಸಾದ್ಯತೆ ಹೆಚ್ಚ. ಎಲ್ಲಿ ಬಳಸಬೇಕೋ ಅಲ್ಲಿ ಬಳಸಲ್ಲಾ, ಎಲ್ಲಿ ಬಳಸಬಾರ‍್ದೋ ಅಲ್ಲಿ ಬಳಸತಾರ. ಉದಾಹರಣೆಗೆ: ಸಂದರ್ಭ ->ಸಂಧರ್ಬ, ಬಂಧು -> ಭಂದು, ಸಂಬಂಧ ->ಸಂಭಂದ, ಮುಂತಾದವು. ಹಿಂಗ ತಪ್ಪಾಗಿ ಬಳಸೋದನ್ನ ನಾವು ದಿನಾ ಎಲ್ಲಾ ಕಡೆ ನೋಡ್ತೀವಿ. ಮಹಾಪ್ರಾಣ ಬಿಡೂದ್ರಿಂದ ಈ ಗೊಂದಲ ಹೋಗ್ತದ.

3. ಮಹಾಪ್ರಾಣ ಬಿಟ್ರ ಈಗಿರೂ ಸಂಸ್ಕ್ರುತದ ಪದಗಳ ಜಾಗದಾಗ ಪ್ರತಿದಿನ ನಾವು ಬಳಸುವಂತಾ ಹೆಚ್ಚ ಹೆಚ್ಚು ಕನ್ನಡದ್ದ ಪದಗಳು ಬಳಸಾಕ ದಾರಿ ಆಗ್ತದ. ಕಲಿಯೂ ಹುಡುಗ್ರಿಗೆ ಬಾಳ ಸರಳ ಆಗ್ತದ ನೋಡ್ರಿ. ಜಠರ ->ಹೊಟ್ಟೆ, ಭೋಜನ ->ಊಟ, ಸಂಧ್ಯಾ ->ಸಂಜೆ, ಮಧ್ಯ ->ನಡು, ಫಲ ->ಹಣ್ಣು, ಭಾಶೆ ->ನುಡಿ, ಧನ ->ದುಡ್ಡು/ರೊಕ್ಕ, ಮುಖ ->ಮೊಗ/ಮಾರಿ ಮುಂತಾದವು.

ಆಡು ನುಡಿನಾಗ್ ಇರು ಪದಗಳು ಓದು ಪುಸ್ತಕದಾಗೂ ಇದ್ರ ಕಲಿಕಿ ಎಶ್ಟು ಸರಳ ಆಗ್ತದ. ವಿಚಾರ ಮಾಡ್ರಿ. ನಮ್ದ್ ಅಲ್ಲದ ಪದಗಳನ್ನ ಬರ‍್ಯಾಕ, ಅನ್ನಾಕ ಕಲತು, ಅವುಗಳ ಅರ‍್ತಾನೂ ನೆನಪಿಟ್ಟುಕೊಂಡು, ಮಾತನ್ಯಾಗ ಅಲ್ಲದ ಬರೀ ಬರಹದಾಗ ಉಪಯೋಗ ಮಾಡುವಂತಾ ಹರಕತ್ತು ಎನ್ ಅದ?

ಹಳೆಗನ್ನಡದ್ “ಱ” ಆಮೇಲೆ “ೞ” ಬಿದ್ದ್ ಹೋಗ್ಯಾವ ನೋಡ್ರಿ. ಈಗ ಯಾರು ಅವ್ನ ಬಳಸಲ್ಲಾ. “ರ” ಮತ್ತ “ಳ” ಬಳಸ್ತಾರ. ಹಂಗ ಮಹಾಪ್ರಾಣ ಬಿಡೂದ್ರಾಗೂ ಎನ್ ತಪ್ಪಿಲ್ಲಾ.

ಆಡು ಮಾತಿನ್ಯಾಗ ಬಯ್ಗುಳಾ ಬಳಸಿದ್ರ ಅದು ಗಂಡು ಬಾಶೆ ಆಗಲ್ಲಾ, ಒರಟ ಬಾಶೆ ಆಗ್ತದ. ಅಂದ್ಹಾಂಗ, ನಮ್ ಬಿಜಾಪುರ ಕಡೆ ಕಡ್ಲಿಹಿಟ್ಟು, ಹೆಸರಹಿಟ್ಟಿಲೆ ಜುನಕ ಮಾಡ್ತಾರ. ಮಯ್ದಾ ಹಿಟ್ಟು ಬ್ರೆಡ್ಡು-ಬನ್ನು ಮಾಡಾಕ್ ಬಳಸ್ತಾರ 🙂

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: