ಹಿಂದಿ ಹೇರಿಕೆ ಇನ್ನಾದರೂ ನಿಲ್ಲಲಿ
ನಾನಾ ನುಡಿಗಳ ತವರಾಗಿರುವ ದೇಶದಲ್ಲಿ ಒಂದು ದೇಶ ಒಂದು ಬಾಶೆ ಎಂಬ ಹಗಲುಗನಸನ್ನು ಹೊತ್ತು ಕೇಂದ್ರ ಸರಕಾರವು ಕೆಲಸಮಾಡುತ್ತಿದೆ ಎನಿಸುತ್ತದೆ. ದೇಶದಲ್ಲಿರುವ ಎಲ್ಲಾ ನುಡಿಗಳಿಗೆ ಒಂದೇ ರೀತಿಯ ಸ್ತಾನಮಾನ ನೀಡಿ ಎಲ್ಲಾ ನುಡಿಗಳ ಏಳಿಗೆಗೆ ಒತ್ತುಕೊಟ್ಟು, ಆ ಮೂಲಕ ನುಡಿಯ ಹಲತನವನ್ನು ಕಾಪಾಡಬೇಕಿದ್ದ ಕೇಂದ್ರ ಸರಕಾರ ಕೇವಲ ಹಿಂದಿ ಪ್ರಚಾರಕ್ಕೆ ಮಣೆ ಹಾಕುತ್ತಿರುವುದು ಬೇಸರದ ಸಂಗತಿ.
ಕೇಂದ್ರ ಸರಕಾರದ ಹಿಂದಿ ಹೇರಿಕೆಯಿಂದ ಹಿಂದಿಯೇತರ ಮಂದಿಗೆ ಅದರಲ್ಲೂ ಕನ್ನಡಿಗರಿಗೆ ಆಗುತ್ತಿರುವ ತೊಂದರೆಗಳ ಕುರಿತು ಹಲವು ಅಂಕಣಗಳು ಹೊನಲಿನಲ್ಲಿ ಮೂಡಿ ಬಂದಿವೆ. ಹಿಂದಿಯಾದರೇನು ಸಿವಾ? ಹೀಬ್ರುವಾದರೇನು ಸಿವಾ?, ಹಿಂದಿಯ ಪಾಲಾದ ಕನ್ನಡಿಗರ ಬ್ಯಾಂಕು, ಎಲ್ಲಾ ನುಡಿಗಳೂ ರಾಶ್ಟ್ರಬಾಶೆಗಳಾಗಬೇಕು, ಎಲ್ಲಾ ನುಡಿಗಳೂ ಸಮಾನ ಎನ್ನಲು ಏನು ತೊಂದರೆ?, ನ್ಯೂಯಾರ‍್ಕಿನಲ್ಲಿ ಬಂಗಾಳಿಗಿರುವ ಸ್ತಾನ ಕರ‍್ನಾಟಕದಲ್ಲಿ ಕನ್ನಡಕ್ಕೆ ಬೇಡವೇ? ಇನ್ನಿತರ ಬರಹಗಳಲ್ಲಿ ಕೇಂದ್ರ ಸರಕಾರದ ಹಿಂದಿ ಹೇರಿಕೆಯಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಹಾಗು ತೊಂದರೆಗಳನ್ನು ಈಗಾಗಲೇ ಓದಿದ್ದೇವೆ.
ಹಿಂದಿ ಹೇರಿಕೆಯ ಸರಣಿಯಲ್ಲಿ ಮತ್ತೊಂದು ಕಾರ್‍ಯಕ್ರಮವಿದೆ, ಅದೇ ‘ಹಿಂದಿ ದಿವಸ’. ಸೆಪ್ಟೆಂಬರ್ 14 ರಂದು ಕೇಂದ್ರ ಸರಕಾರದ ಕಚೇರಿಗಳಲ್ಲಿ ಹಿಂದಿ ದಿವಸವನ್ನು ಆಚರಿಸುತ್ತಾರೆ. ಆ ದಿನದಂದು ಕೇಂದ್ರ ಸರಕಾರಿ ಕಚೇರಿಗಳಲ್ಲಿ ಹಿಂದಿ ಸಿನಿಮಾ ಹಾಡು, ಅಂತ್ಯಾಕ್ಶರಿ, ಕುಣಿತ, ನಾಟಕ, ಪ್ರಹಸನ, ಪ್ರಬಂದ ಹೀಗೆ ಹಿಂದಿಗೆ ಸಂಬಂದಿಸಿದ ಸ್ಪರ‍್ದೆಗಳನ್ನು ಏರ‍್ಪಡಿಸಿ ಬಹುಮಾನಗಳನ್ನು ನೀಡುವರು. ಹಿಂದಿ ಪಂಡಿತರನ್ನು ಕರೆಸಿ ಬಾಶಣಗಳನ್ನು ಮಾಡಿಸಿ ಹಿಂದಿಯ ಮೇಲೆ ಒಂದು ವಿಶೇಶ ಅನಿಸಿಕೆ ಬರುವಂತೆ ಮಾಡುವರು. ಹಿಂದಿ ಗೊತ್ತಿದ್ದರೆ ಮಾತ್ರ ಅವನೊಬ್ಬ ನಿಜವಾದ ಬಾರತೀಯ ಎಂಬ ಪೊಳ್ಳು ನುಡಿಗಳನ್ನು ತಲೆಗೆ ತುಂಬಿಸುವರು. ಕೇಂದ್ರ ಸರಕಾರಿ ಕೆಲಸಗಾರರಿಗೆ ಹಾಗು ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿರುವವರಿಗೆ ಹಣದ ರೂಪದಲ್ಲಿ ಬಹುಮಾನಗಳನ್ನು ನೀಡಿ ಹಿಂದಿಯ ಕುರಿತು ಮಂದಿಯಲ್ಲಿ ಮೇಲರಿಮೆ ಮೂಡಿಸುವ ಪ್ರಯತ್ನಮಾಡುವರು.
ಹಿಂದಿ ದಿವಸವು ಈಗ ಹಿಂದಿ ವಾರ ಮತ್ತು ಹಿಂದಿ ತಿಂಗಳಾಗಿಯೂ ಕೂಡ ಆಚರಣೆಯಾಗುತ್ತಿದೆ, ಕೇಂದ್ರ ಸರಕಾರಿ ಕಚೇರಿಗಳಲ್ಲಿ ಹೆಚ್ಚಾಗಿ ಹಿಂದಿಯನ್ನು ಬಳಕೆ ಮಾಡುವಂತೆ ಹುರಿದುಂಬಿಸುವ ಸಲುವಾಗಿ ಈ ಆಚರಣೆಗಳನ್ನು ಮಾಡಲಾಗುತ್ತಿದೆ. ಕೇಂದ್ರ ಸರಕಾರವು, ಆಮಿಶಗಳನ್ನು ಒಡ್ಡಿ ಹಿಂದಿಯನ್ನು ಕಲಿತು ದಿನ ನಿತ್ಯದ ಕೆಲಸದಲ್ಲಿ ಬಳಸುವಂತೆ ಸರಕಾರಿ ಕೆಲಸಗಾರರನ್ನು ಸತತವಾಗಿ ಹುರಿದುಂಬಿಸುತ್ತಿದೆ. ಈಗಾಗಲೇ ರಯ್‍ಲ್ವೆ, ಹಣಮನೆ, ಆದಾಯ ತೆರಿಗೆ ಮತ್ತಿತರ ಕೇಂದ್ರ ಸರಕಾರದ ಸೇವೆಗಳಲ್ಲಿ ಹಿಂದಿಗೆ ಇನ್ನಿಲ್ಲದ ಹೆಚ್ಚುಗಾರಿಕೆಯನ್ನು ನೀಡಿ ಆಯಾ ರಾಜ್ಯದ ನುಡಿಗಳನ್ನು ಕಡೆಗಣಿಸುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಕೇಂದ್ರದ ಯಾವುದೇ ಸೇವೆಗಳು ಕರ‍್ನಾಟಕದಲ್ಲಿ ಕನ್ನಡದಲ್ಲಿ ಸಿಗದೆಹೋಗುವುದು. ಕನ್ನಡಿಗರು, ಒದ್ದಾಡಿಕೊಂಡು ಹಿಂದಿ ಕಲಿತು ಅದರ ಸೇವೆ ಪಡೆಯಬೇಕಾಗುವುದು! ಇದು ಒಟ್ಟಾರೆಯಾಗಿ ಆಯಾ ರಾಜ್ಯದ ನುಡಿಯ ಮತ್ತು ಮಂದಿಯ ಅಂದರೆ ಕರ‍್ನಾಟಕದಲ್ಲಿ ಕನ್ನಡದ ಮತ್ತು ಕನ್ನಡಿಗರ ಏಳಿಗೆಗೆ ಮುಳುವಾಗತ್ತದೆ.
ಕೇಂದ್ರ ಸರಕಾರವು ಹಿಂದಿ ಹೇರಿಕೆಯನ್ನು ಮಾಡುತ್ತಿಲ್ಲ ಎಂಬ ಮಾತನ್ನು ಹೇಳುತ್ತಲೇ ಬರುತ್ತಿದೆ. ಹಾಗದರೆ, ಹಿಂದಿ ದಿವಸಕ್ಕೆ ಹಣವನ್ನು ಕರ‍್ಚು ಮಾಡಿ ಇನ್ನಿಲ್ಲದ ಪ್ರಚಾರ ಮಾಡುತ್ತಿರುವಂತೆ ಇತರ ನುಡಿಗಳಿಗೂ ಏಕೆ ಮಾಡುತ್ತಿಲ್ಲ? ಕರ‍್ನಾಟಕದಲ್ಲಿ, ಹಿಂದಿಯನ್ನು ವ್ಯವಹಾರದಲ್ಲಿ ಬಳಸುವಂತೆ ಕೇಂದ್ರ ಸರಕಾರಿ ಕೆಲಸಗಾರರಿಗೆ ಬಹುಮಾನ ಇಲ್ಲವೇ ಹಣದ ರೂಪದಲ್ಲಿ ಆಮಿಶ ಒಡ್ಡಲು ಕಾರಣವೇನು? ಕೆಲವು ಕೇಂದ್ರ ಸರಕಾರಿ ಕೆಲಸ ಪಡೆಯಲು ಹಿಂದಿಯನ್ನು ಕಡ್ಡಾಯವಾಗಿ ಕಲಿತಿರಲೇ ಬೇಕೆಂಬ ನಿಯಮವೇಕೆ? ಕೇಂದ್ರದ ಎಲ್ಲಾ ಹಮ್ಮುಗೆ(Project)ಗಳಲ್ಲಿ (ಎತ್ತುಗೆಗೆ ಬಿ.ಎಸ್.ಎನ್.ಎಲ್ ಹಾಗು ರಯ್‍ಲ್ವೆ) ಹಿಂದಿಯಲ್ಲಿ ಸೇವೆ ಇರಲೇಬೇಕೆಂಬ ಕಡ್ಡಾಯವೇಕೆ?
ದೇಶದ ಎಲ್ಲಾ ಮಂದಿಯು ಒಂದೇ , ದೇಶದ ಎಲ್ಲಾ ನುಡಿಯಾಡುಗರಿಗೆ ಸಮಾನ ಸ್ತಾನಮಾನ ನೀಡಬೇಕು ಎಂದು ಸಂವಿದಾನ ಹೇಳುತ್ತದೆ. ಎಲ್ಲಾ ಮಂದಿಯು ಒಂದೇ ಎಂದ ಮೇಲೆ ಎಲ್ಲಾ ನುಡಿಗಳನ್ನು ಒಂದೇ ರೀತಿ ನೋಡಬೇಕು. ಆದರೆ ಕೇಂದ್ರ ಸರಕಾರವು ಹಿಂದಿಗೆ ಮಾತ್ರ ಮನ್ನಣೆ ನೀಡಿ ಉಳಿದ ನುಡಿಗಳನ್ನು ಎರಡನೆ ದರ‍್ಜೆಯ ನುಡಿಯನ್ನಾಗಿ ನೋಡುತ್ತಿದೆ. ಎಲ್ಲಾ ರಾಜ್ಯದ ಮಂದಿಯ ತೆರಿಗೆ ಹಣವನ್ನು ಕೇವಲ ಹಿಂದಿಯನ್ನು ಬೆಳೆಸಲು ಬಳಸದೆ ಎಲ್ಲಾ ನುಡಿಗಳಿಗೆ ಒಂದೇ ರೀತಿಯ ಮನ್ನಣೆಯನ್ನು ಕೇಂದ್ರ ಸರಕಾರವು ನೀಡಬೇಕಿದೆ. ಹಿಂದಿ ದಿವಸದಂತ ತಾರತಮ್ಯ ಎಸಗುವಂತಹ ಕಾರ‍್ಯಕ್ರಮಗಳನ್ನು ನಿಲ್ಲಿಸಬೇಕಾಗಿದೆ.
ಇತ್ತೀಚಿನ ಅನಿಸಿಕೆಗಳು