’ನಾನು ಈ ಜಗತ್ತಿಗೆ ಏನು ಮಾಡಲು ಬಂದೆ?’

– ಕಿರಣ್ ಬಾಟ್ನಿ.

489860246_4d67c99281_o

’ನಾನು ಈ ಜಗತ್ತಿಗೆ ಏನು ಮಾಡಲು ಬಂದೆ?’ ಎಂಬುದು ಹಲವರ ಮುಂದಿರುವ ಪ್ರಶ್ನೆ. ತಮ್ಮ ಕೆಲಸದಿಂದ ಸಾಕಶ್ಟು ಹಣ ದೊರೆಯುತ್ತಿದ್ದರೂ ಈ ಪ್ರಶ್ನೆ ಅವರನ್ನು ಕಾಡುತ್ತದೆ. ಉತ್ತರವನ್ನು ಹುಡುಕುತ್ತ ಇಂತವರು ಹಲವರ ಉಪದೇಶಗಳನ್ನು ಕೇಳಿಸಿಕೊಳ್ಳುತ್ತಾರೆ, ಹಲವಾರು ’ತನ್ನೇಳಿಗೆ’ಯ ಹೊತ್ತಗೆಗಳನ್ನು ಓದುತ್ತಾರೆ, ಜಗತ್ತನ್ನೆಲ್ಲ ಸುತ್ತುತ್ತಾರೆ; ಆದರೆ ಕಡೆಗೂ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಇಂತವರಲ್ಲಿ ಕೆಲವರು ಆಕಸ್ಮಿಕವಾಗಿ ’ತವರಿ’ಗೆ ಹಿಂತಿರುಗುತ್ತಾರೆ; ತಮ್ಮ ನಾಡಿಗೆ, ತಮ್ಮ ನುಡಿಗೆ, ತಮ್ಮ ಜನರ ನಡುವಿನ ಜಗತ್ತಿಗೆ ಹಿಂತಿರುಗುತ್ತಾರೆ. ಆಗ ಅವರಿಗಲ್ಲಿ ಕಾಣಿಸುವುದೇನು?

ಜಗತ್ತಿನಲ್ಲಿ ತಮ್ಮ ಕೆಲಸವೇನೆಂದು ಇತ್ತ ತಾವು ಕೊರಗುತ್ತಿದ್ದಾಗ ಅತ್ತ ತಮ್ಮನ್ನು ಸಾಕಿ ಬೆಳೆಸಿದ ತವರೇ ತಾವಿಲ್ಲದೆ ಸೊರಗುತ್ತಿದೆ! ಹಲವರಿಂದ ಉಪಯೋಗವಿಲ್ಲದ ಉಪದೇಶವನ್ನು ಪಡೆದು ತಾವು ಸಮಯ ಹಾಳುಮಾಡಿಕೊಳ್ಳುತ್ತಿದ್ದಾಗ ತಮ್ಮ ತವರೇ ಕಾಲನ ಬಾಯೊಳಗೆ ಹೊಕ್ಕಿ ನಿಂತಂತಿದೆ! ’ತನ್ನೇಳಿಗೆ’ಯ ಹೊತ್ತಗೆಗಳನ್ನು ತಾವು ಓದಿ ಓದಿ ಮರುಳಾಗುತ್ತಿದ್ದಾಗ ತಮ್ಮ ತವರೇ ತಮಗಾಗಿ ಕಾದು ಕಾದು ನಿರಾಸೆಯಿಂದ ಬೀಳುಗೆಯ ಕಡೆಗೆ ತಿರುಗಿದೆ! ತಮ್ಮ ಕೆಲಸವು ಅಲ್ಲಿರಬಹುದು, ಇಲ್ಲಿರಬಹುದು ಎಂದು ಇಡೀ ಜಗತ್ತನ್ನೇ ಹುಡುಕುತ್ತಿದ್ದಾಗ ತಮ್ಮ ಜಗತ್ತೇ ವಿನಾಶದ ಅಂಚಿಗೆ ಬಂದು ನಿಂತಿದೆ!

ಇದನ್ನು ನೋಡಿದ ಕೂಡಲೆ, ನೋಡಿದ್ದನ್ನು ಅರಿತ ಕೂಡಲೆ, ಅದರಲ್ಲಿ ತಮ್ಮ ಪಾತ್ರವನ್ನು ಅರಿತ ಕೂಡಲೆ ’ನಾನು ಈ ಜಗತ್ತಿಗೆ ಏನು ಮಾಡಲು ಬಂದೆ?’ ಎಂಬ ಪ್ರಶ್ನೆ ಗಾಳಿಯಲ್ಲಿ ತೂರಿಹೋಗುತ್ತದೆ. ಮರೆತಂತಾಗುತ್ತದೆ. ಪ್ರಶ್ನೆಯ ಬದಲಾಗಿ ತಾವು ಮಾಡಬೇಕಾಗಿರುವ ಕೆಲಸಗಳ ಬೆಟ್ಟವೊಂದು ಕಾಣಿಸಿಕೊಳ್ಳುತ್ತದೆ. ಆ ಬೆಟ್ಟವನ್ನು ಕರಗಿಸುವ ಬಗೆಯೂ ಗೋಚರಿಸುತ್ತದೆ. ನೀವು ಇಂತಹ ಸ್ತಿತಿಯಲ್ಲಿರುವ ಅದ್ರುಶ್ಟವಂತರಲ್ಲಿ ಒಬ್ಬರಾಗಿದ್ದೀರಾ?

(ಚಿತ್ರ: www.flickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: