ಸತೀಶ್ ನೀನ್ ಆಸಮ್! ಲೂಸಿಯಾ ನೀನ್ *****!

ವಲ್ಲೀಶ್ ಕುಮಾರ್

Lucia reviewಸುಮಾರು ಒಂದೂವರೆ ವರ್‍ಶದಿಂದ ಕುತೂಹಲ ಹುಟ್ಟಿಸಿದ್ದ ಲೂಸಿಯಾ ಚಿತ್ರ ತೆರೆ ಕಂಡಿದೆ. ನೋಡುಗರೇ ಹಣ ಕೂಡಿಸಿ ಈ ಚಿತ್ರವನ್ನು ನಿರ್‍ಮಿಸಿದ್ದು ಎಲ್ಲರಿಗೂ ತಿಳಿದಿದೆ. ಸಾವಿರಾರು ಮಂದಿ ನಂಬಿ ಒಂದು ಕನ್ನಡ ಚಿತ್ರವನ್ನು ನೋಡದೆಯೇ ಮಿಂಬಲೆಯ ಮೂಲಕ ಹಂಚಿಕೆ ಮಾಡಲು ಒಪ್ಪಿದ್ದು ಈ ಚಿತ್ರದ ನಿರ್‍ದೇಶಕರಾದ ಪವನ್ ಕುಮಾರ್‍ ಅವರ ಬಗ್ಗೆ ಕನ್ನಡಿಗರು ಇಟ್ಟಿರುವ ನಂಬಿಕೆಯನ್ನು ಸಾರುತ್ತದೆ. ಆ ನಂಬಿಕೆಯನ್ನು ಪವನ್ ಹುಸಿ ಮಾಡಿಲ್ಲ. ಬದಲಾಗಿ ಈ ಹಮ್ಮಿಕೊಳ್ಳುವಿಕೆಗಾಗಿ ಒಂದಾದ ಎಲ್ಲಾ ಕನ್ನಡಿಗರೂ ಹೆಮ್ಮೆ ಪಡುವಂತ ಕುಶಲತೆಯಿಂದ ಚಿತ್ರವನ್ನು ಕಟ್ಟಿದ್ದಾರೆ.

ಚಿತ್ರದ ಕತೆ ಅಶ್ಟು ಸುಲಬವಾಗಿ ಹೇಳುವಂತದ್ದಲ್ಲ. ನಿದ್ದೆ ಬಾರದ ಬೇನೆ (Insomnia) ಇಂದ ಬಳಲುವ ಒಬ್ಬನ ಪಾಡನ್ನು ಹೇಳುತ್ತಾ ಹೋಗುವ ನಿರ್‍ದೇಶಕರು ಮೂರು ಕಾಲಿನ ಜಡೆ ಹೆಣೆದಂತೆ ಮೂರು ಕತೆಗಳನ್ನು ಹೆಣೆಯುತ್ತಾರೆ. ನಿದ್ದೆ ಬಾರದ ತುಳಿಲಾಳು (hero) ನಿಕಿಲ್ , ತನ್ನ ಪಾಡಿಂದ ಬೇಸತ್ತು ನಿದ್ದೆಗೆ ಜಾರಲು ಮದ್ದೊಂದಕ್ಕೆ ಸೋಲುತ್ತಾನೆ. ಆ ಮದ್ದಿನ ಪರಿಣಾಮ ಚೆಂದದ ಕನಸುಗಳ ಕಾಣುತ್ತಾನೆ, ಅದನ್ನೇ ದಿಟವೆಂದು ನಂಬುತ್ತಾನೆ. ಕನಸು ಕಾಣುತ್ತಾ ಅದನ್ನೇ ದಿಟವೆಂದುಕೊಳ್ಳುವ ನೆನೆಕೆಗೆ Lucid dreaming ಅನ್ನುತ್ತಾರೆ. ಅದರಂತೆ ನಂತರದ ನಡಾವಳಿಗಳಲ್ಲಿ ಯಾವುದು ದಿಟ, ಯಾವುದು ಕನಸು, ಇದರ ನಡುವೆ ಈಗ ತುಳಿಲಾಳ ಕತೆ ಏನಾಗಿದೆ ಅನ್ನುವುದೇ ಪವನ್ ಹೆಣೆದಿರುವ ಜಡೆಯ ಮೂರು ಕಾಲುಗಳು. ಈ ಕತೆಯ ತಿರುಳೇನು, ಕೊನೆಯಲ್ಲಿ ಏನಾಗುತ್ತದೆ ಅನ್ನುವುದನ್ನು ನೀವೇ ದೊಡ್ಡ ತೆರೆಯ ಮೇಲೆ ನೋಡಬೇಕು. ಆಗಲೇ ಚಿತ್ರ ತಂಡದ ಎತ್ತುಗಡೆಗೆ ಬೆಲೆ ಸಿಗುವುದು.

ಚಿತ್ರದಲ್ಲಿ ಮಂದಿಗನ ಹುಚ್ಚುತನಗಳು, ನೆನೆಕೆಗಳು, ಕನಸುಗಳನ್ನು ಅಚ್ಚುಕಟ್ಟಾಗಿ ಬಿಡಿಸಲಾಗಿದೆ. ಸರಿಸಾಟಿಯಿಲ್ಲದ ಅರಿವಿನರಿಮೆಯ ಮಾತುಗಳಿಗೆ ಎಲ್ಲರೂ ತಲೆ ಬಾಗುವಂತಿದೆ. ಎಲ್ಲರಿಗೂ ತಿಳಿದೂ ತಿಳಿಯದ ಎಶ್ಟೋ ಹುರುಳುಗಳನ್ನು ನವಿರಾಗಿ ಹೇಳಿದ್ದಾರೆ ಪವನ್. ಸಾದಾರಣ ಮಂದಿ ದೊಡ್ಡ ಕನಸು ಕಾಣುತ್ತಾರೆ. ಆದರೆ ಬಾಳಲ್ಲಿ ಹಣ ಉಳ್ಳವನು, ಎಲ್ಲರಿಗೂ ತಿಳಿದವನು (famous personality) ಎಂತ ಕನಸು ಕಾಣಬಲ್ಲ? ಇಂತ ಸಣ್ಣ ಸಣ್ಣ ವಿಶಯಗಳಿಗೆ ಸೇರ್‍-ಕನ್ನಡಿ (lens) ಹಿಡಿದ ಹಾಗಿದೆ ಈ ಚಿತ್ರದ ಹುರುಳು.

ಹಾಗಂತ ಏನೇನೋ ತೋರಿಸಿ ತಲೆ ಕೆಡಿಸಿಲ್ಲ ರೀ… ಚಿತ್ರದಲ್ಲಿ ನಗುವಿಗೇನೂ ಕಮ್ಮಿ ಇಲ್ಲ. “ನಿನಗೆ ನಿದ್ದೆ ಬರುವ ಗುಳಿಗೆ ಕೊಡುತ್ತೇನೆ” ಅಂತ ಹೇಳಿದವನಿಗೆ ನಿದ್ದೆ ಬಾರದೆ ಬೇಸತ್ತ ತುಳಿಲಾಳು ನಲಿವಿಂದ “ಅಯ್ಯೋ ನಿಂಗೆ ಪಸ್ಟ್ ನಯ್ಟಲ್ಲೂ ನಿದ್ದೆ ಬರಲಣ್ಣ” ಅಂತ ಹರಸಿದಾಗ ಇಡೀ ಚಿತ್ರ ಮಂದಿರದ ಮಂದಿ ಒಮ್ಮೆಲೇ ಗೊಳ್ಳನೆ ನಕ್ಕುಬಿಡುತ್ತಾರೆ. ಯಾವೊಂದು ಹಾಡೂ ಕತೆಗೆ ಪೂರಕವಲ್ಲದೆಯೇ ತುರುಕಲಾಗಿಲ್ಲ. ಹಾಗಾಗಿ ಎಲ್ಲಾ ಹಾಡುಗಳೂ ಮುದ ನೀಡುತ್ತವೆ. ಹಾಡುಗಳಲ್ಲಿ ಮಯ್ಮರೆಸುವ ಪೂರ್‍ಣಚಂದ್ರ ತೇಜಸ್ವಿ ಬಗ್ಗೆ ಹೆಚ್ಚು ಹೇಳುವುದೇ ಬೇಡ. ಚಿತ್ರ ಬಿಡುಗಡೆ ಆಗುವ ಮುನ್ನವೇ 3 ಲಕ್ಶಕ್ಕೂ ಹೆಚ್ಚು ಮಂದಿ ಯುಟ್ಯೂಬ್ ನಲ್ಲಿ “ತಿನ್ಬೇಡ ಕಮ್ಮಿ” ಹಾಡು ನೋಡಿದ್ದಾರೆ…!

ಬಿಟ್ಟೂ ಬಿಡದೆ ಎಲ್ಲ ನೋಟಗಳಲ್ಲೂ ಅಚ್ಚುಕಟ್ಟಾಗಿ ನಟಿಸಿರುವ ಸತೀಶ್ ನೀನಾಸಮ್, ಅಚ್ಯುತ ಕುಮಾರ್‍, ಶ್ರುತಿ ಹರಿಹರನ್ ಮತ್ತು ಇತರರನ್ನೊಳಗೊಂಡ ನಟನೆಯ ತಂಡ, ಕಣ್ಣಿಗೆ ತಂಪೆನಿಸುವ ನೋಟಗಳನ್ನು ಕಟ್ಟಿರುವ ಸಿದ್ದಾರ್‍ತ್ ನುನಿ, ಚಿತ್ರವನ್ನು ಬರೆದಿರುವ ಪವನ್ ಒಂದಾಗಿರುವುದು ಕನ್ನಡದಲ್ಲಿ ಇಂತ ಒಂದು ಕಂಡು ಕೇಳರಿಯದ ಚಿತ್ರ ಕಟ್ಟಲೆಂದೇ ಇರಬೇಕು. ಇಡೀ ಚಿತ್ರವನ್ನು ಒಂದೇಒಂದು ನೂಲಿನಶ್ಟೂ ಬೇಸರಗೊಳಿಸದಂತೆ ಕೊಂಡೊಯ್ಯಲಾಗಿದೆ. ಹಲವಾರು ನೋಟಗಳನ್ನು ಅಚ್ಚಿಗೆ ಅಳವಡಿಸಿರುವ ಪರಿ (editing) ಕಣ್ಣು ಮಿಟುಕಿಸದೇ ಚಿತ್ರ ನೋಡುವಂತೆ ಮಾಡುತ್ತದೆ. ಹೊಲಸು ಮಾತುಗಳಿಲ್ಲ, ಹದನಲ್ಲದ (vulgar) ನೋಟಗಳಿಲ್ಲ – ಮನೆಮಂದಿಯೆಲ್ಲ ಕೂತು ಮುಜುಗರವಿಲ್ಲದೆ ನೋಡಬಹುದಾದ ಚಿತ್ರ ಇದಾಗಿದೆ.

ಇನ್ನು, ಕನ್ನಡಿಗರು ಇಂತ ಹದವಾದ ಇಂಪಣದ ಚಿತ್ರಗಳನ್ನು ನೋಡಿ ಬೆನ್ನು ತಟ್ಟಬೇಕಿದೆ. ಕರ್‍ನಾಟಕದ ಹೊರಗೆ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಕಟ್ಟುವ ನಿಟ್ಟಿನಲ್ಲಿ ಇಂತಹ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕಿದೆ. ನೋಡುಗರನ್ನು ಬೆರಗಾಗಿಸಿದ ಶಟರ್‍ ಅಯ್ಲಾನ್ಡ್, ಎ ರೆಕ್ವಿಂ ಪಾರ್‍ ಅ ಡ್ರೀಮ್, ಬ್ಲಾಕ್ ಸ್ವಾನ್ ನಂತಹ ಚಿತ್ರಗಳು ಕನ್ನಡದಲ್ಲೂ ಬಂದರೆ ನಮಗೇ ಹೆಮ್ಮೆ – ಅಲ್ಲವೆ?

ಈ ಚಿತ್ರಕ್ಕೆ ನಾನು ಕೊಡುವ ಎಣಿಕೆ 5/5.

(ಚಿತ್ರ: ಹೋಮ್ ಟಾಕೀಸ್)

ಹೆಚ್ಚಿನ ಓದಿಗೆ: ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ ನೀ ’ಅಲ್ಲಗಳೆ’ಯ…!

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ಇದನ್ನ ಆಸ್ಕರ ಗೆ ಹೆಸರು ನೊಂದಾಯಿಸಬೇಕು… ಕನ್ನಡಕ್ಕೆ ಮೊದಲ ಆಸ್ಕರ ಸಿಗುವಂತಾದರೆ ಎಶ್ಟು ನಲಿವಾಗುತ್ತದೆ.

    • ಹೌದು, ಅಸ್ಕರ್ಗೆ ಅಯ್ಕೆಯಾಗುವ ಎಲ್ಲ ಗುಣಗಳು ಈ ಚಿತ್ರದಲ್ಲಿವೆ.
      ಚಿತ್ರರಂಗ ನಿರ್ದೇಶಕನ ಮಾದ್ಯಮ ಎಂದು ಪವನ್ ರವರು ಮತ್ತೊಮ್ಮೆ ಸಾರಿಹೇಳಿದ್ದಾರೆ, ಇಂದಿನ ಸ್ಟಾರ್ ನಟರು ರಿಮೇಕ್ ಚಿತ್ರಗಳ ಹಿಂದೆ ಬಿದ್ದು ಕನ್ನಡ ಚಿತ್ರರಂಗವನ್ನು ಪಾತಳಕ್ಕೆ ತಳ್ಳುತಿದ್ದಾರೆ ಆದರೆ ಪವನ್ ರವರಂತ ನಡೆಸಾಳುಗಳು ನಮ್ಮ ಚಿತ್ರರಂಗವನ್ನು International ಎತ್ತರಕ್ಕೆ ಕೊಂಡೊಯ್ದಿದ್ದಾರೆ ಅವರಿಗೆ ನಮ್ಮ ನಲ್ಮೆಯ ಹಾರೈಕೆಗಳು, ಅವರಿಂದ ಇಂತಹ ಚಿತ್ರಗಳನ್ನು ಮತಶ್ಟು ಬಯಸುತ್ತೇವೆ….

  1. 05/05/2014

    […] ಹೊತ್ತಿನಲ್ಲಿ ಲೂಸಿಯಾ ಚಿತ್ರದ ನಿಕ್ಕಿ ಮತ್ತು ಮದ್ದು ಮಾರುವವನ […]

ವಿನಾಯಕ ಕವಾಸಿ ಗೆ ಅನಿಸಿಕೆ ನೀಡಿ Cancel reply