ಲೂಸಿಯಾ ಎಂಬ ಕನಸು

ಪ್ರಿಯಾಂಕ್ ರಾವ್  ಕೆ. ಬಿ.

kannada-lucia-online-movie-free

ಮೂವೀ ನೋಡಿದ ಮೇಲೆ ನಂಗೊಂದು ಲೂಸಿಯಾ ಮಾತ್ರೆ ಇದ್ರೆ ಕೊಡಿ ಮಾರಾಯ್ರೆ ಜೀವನ ಸಾಕಾಗಿ ಹೋಗಿದೆ ಅಂತ ಹೇಳುವ ಜನರನ್ನ ತುಂಬಾ ನೋಡಿದೆ. ನಾನು ಒಂದು ಬಾರಿ ಈ ಮೂವೀ ನೋಡಿ ರಿವ್ಯೂ ಬರೀತಾ ಇದೀನಿ. ಇನ್ನೊಮ್ಮೆ ನೋಡಿದ್ರೆ ಬಹುಶಹ ಇನ್ನೂ ಚೆನ್ನಾಗಿ ಕತೆ ಅರ್‍ತ ಆಗಬಹುದು ಅನ್ನಿಸುತ್ತೆ.

ಇನ್ಸೋಮ್ನಿಯಾ (ನಿದ್ರೆ ಬರದೇ ಇರುವ ಕಾಯಿಲೆ) ಇರುವ ಒಬ್ಬ ಹುಡುಗನ ಸುತ್ತ ಹೆಣೆದಿರುವ ಕತೆ ಇದು. ಕನ್ನಡದಲ್ಲಿ ಪ್ರಪ್ರತಮ ಬಾರಿಗೆ ನೋಡುಗರೇ ದುಡ್ಡು ಹಾಕಿ ತೆಗೆದಿರುವ ಮೂವೀ. ಸುಮಾರು 1700 ಜನ ತಮ್ಮ ಹಣವನ್ನು ಇದಕ್ಕೆ ಹಾಕಿದ್ದಾರೆ . ಹೀಗೊಂದು ವಿಬಿನ್ನ ಪ್ರಯತ್ನಕ್ಕೆ ಕಯ್ ಹಾಕಿ ಯಶಸ್ವಿ ಆಗ್ತಾ ಇರೋರು ಇನ್ಯಾರೂ ಅಲ್ಲ ನಮ್ಮ ಲಯ್ಪು ಇಶ್ಟೇನೆ ಮೂವೀ ಡಯ್ರೆಕ್ಟರ್ ಪವನ್ ಕುಮಾರ್ ಅವರು. ಕನಸಿನ ಲೋಕ ಹಾಗೂ ನಿಜ ಜೀವನದ ನಡುವೆ ಹೆಣೆದಿರುವ ಕತೆಯನ್ನು ತುಂಬಾ ಚೆನ್ನಾಗಿ ಬಿಡಿಸಿದ್ದಾರೆ ಡಯ್ರೆಕ್ಟರ್ ಪವನ್ ಕುಮಾರ್.  ನಿದ್ರೆ ಬಾರದೆ ಇರುವ ಹುಡುಗ ಲೂಸಿಯಾ ಅನ್ನೋ ಕೆಮಿಕಲ್ ಹೆಲ್ಪಿಂದ ಸುಂದರವಾದ ಕನಸುಗಳನ್ನ ಕಾಣೋಕೆ ಶುರು ಮಾಡ್ತಾನೆ. ಅವನು ನಿಜ ಜೀವನದಲ್ಲಿ ಮಾಡೋಕೆ ಆಗದೆ ಇರುವ ಕೆಲಸಗಳ ಬಗ್ಗೆ ಕನಸು ಕಟ್ಟುತಾನೆ. ಇನ್ನೊಂದು ಕಡೆ ಪೋಲೀಸ್ ಲೂಸಿಯಾ ಡ್ರಗ್ ಬಗ್ಗೆ ಇನ್ವೆಸ್ಟಿಗೇಶನ್ ಮಾಡ್ತಾ ಇರ್‍ತಾರೆ. ಹೀಗೆ ಹೀರೋವಿನ ನಿಜ ಜೀವನ, ಕನಸು ಮತ್ತು ಪೋಲೀಸ್ ಇನ್ವೆಸ್ಟಿಗೇಶನ್ ಮೂರು ಕತೆಗಳು ಒಂದರ ಪಕ್ಕ ಒಂದು ಮುನ್ನಡೆಯುತ್ತವೆ. ಹೀರೊ ನೀನಾಸಂ ಸತೀಶ್ ಅವ್ರ ಆಕ್ಟಿಂಗಿಗೆ ಪುಲ್ ಕ್ರೆಡಿಟ್. ನಿಜ ಜೀವನ ಹಾಗೂ ಕನಸಿನ ಜೀವನದ ರೋಲ್‌ಗಳನ್ನು ತುಂಬಾ ಚೆನ್ನಾಗಿ ನಿಬಾಯಿಸಿದ್ದಾರೆ.

ಮೂರು ಕತೆಗಳನ್ನ ತಕ್ಕಡಿ ಮೇಲಿಟ್ಟು ತೂಗಿದಂತೆ ತಗೊಂಡು ಹೋಗ್ತಾರೆ ಡಯ್ರೆಕ್ಟರ್. ಅವರ ಕತೆ ಹೇಳುವ ಬಗೆ , ಎಡಿಟಿಂಗ್ ಸ್ವಲ್ಪ ಉಪೇಂದ್ರ ಅವರ ‘ಏ’ ಮೂವೀ ನೆನಪಿಗೆ ತಂದರೂನೂ ಇದು ‘ಏ’ಗಿನ್ನಾ ತುಂಬಾ ಬಿನ್ನವಾಗಿ ಹಾಗೂ ಅಪರೂಪದ ಮೂವೀ ಆಗಿ ಹೊರಬಂದಿದೆ. ನೋಡುಗನಿಗೆ ಯಾವುದು ನಿಜ, ಯಾವುದು ಕನಸು ಅನ್ನುವ ಇಕ್ಕಟ್ಟಿನಲ್ಲಿ ಸಿಕ್ಕಿಸುವ ಮೂವೀ ತನ್ನ ಸಸ್ಪೆನ್ಸ್ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. “ಕನ್ನಡದಲ್ಲಿ ಯಾಕೆ ಡಿಪರೆಂಟ್ ಮೂವೀಸ್ ಟ್ರಯ್ ಮಾಡಲ್ಲ?” ಅಂತ ಕೇಳುವವರಿಗೆ ಪವನ್ ಕುಮಾರ್ ಒಂದು ಒಳ್ಳೆಯ ಉತ್ತರ ಕೊಟ್ಟಿದ್ದಾರೆ . ಹೊಸ ಸಂಗೀತ ನಿರ್‍ದೇಶಕ ಪೂರ್‍ಣಚಂದ್ರ ತೇಜಸ್ವಿ ಅವರ ಮ್ಯೂಸಿಕ್ ಸಕ್ಕತ್. ಹೇಳು ಶಿವ, ತಿನ್ಬೇಡ ಕಮ್ಮಿ, ಜಮ್ಮಾ ಜಮ್ಮಾ ಹಾಡುಗಳು ಪ್ರೇಕ್ಶಕನನ್ನು ಮೆಚ್ಚಿಸುವಲ್ಲಿ ಯಶಸ್ವಿ ಆಗಿದೆ. ನಾಯಕಿ ಶ್ರುತಿ ಹರಿಹರನ್ ಅವರ ನಟನೆ ಕೂಡ ತುಂಬಾ ಚೆನ್ನಾಗಿದೆ. ಕ್ಯಾಮರಾ ಕೆಲಸ ಅಂತೂ ತುಂಬಾನೇ ಚೆನ್ನಾಗಿದೆ. ಎಚ್.ಡಿ ಪಿಕ್ಚರ್ ಕ್ವಾಲಿಟಿ.

ಲಂಡನ್ ಪಿಲ್ಮ್ ಪೆಸ್ಟಿವಲ್‌ನಲ್ಲಿ ಬೆಸ್ಟ್ ಪಿಲ್ಮ್ ಆಡಿಯೆನ್ಸ್ ಚಾಯ್ಸ್ ಗೆದ್ದಿರುವ ಈ ಮೂವೀಯನ್ನ ಕಂಡಿತ ನೋಡಿ. ಸದಬಿರುಚಿಯ ಕನ್ನಡ ಮೂವೀಗಳಿಗೆ ಬೆಂಬಲಿಸದಿದ್ದರೆ ಯಾರೂ ಈ ತರ ಪ್ರಯತ್ನಗಳಿಗೆ ಮತ್ತೆ ಕಯ್ ಹಾಕೋಲ್ಲ. ಅಪರೂಪಕ್ಕೆ ಬರುವ ಒಳ್ಳೆ ಮೂವೀಗಳನ್ನ ಬೆಂಬಲಿಸಿದರೆ ಕನ್ನಡ ಸಿನೆಮಾ ಉದ್ದಿಮೆ ಬೆಳೆಯುತ್ತೆ, ಕನ್ನಡ ಬೆಳೆಯುತ್ತೆ.

ಪುಣೆ, ಚೆನ್ನಯ್ ಹೀಗೆ ಆಲ್-ಓವರ್ ಇಂಡಿಯಾದಲ್ಲಿ ಪಿಲ್ಮ್ ಬಿಡುಗಡೆ ಆಗಿದೆ. ಕನ್ನಡಿಗರಲ್ಲದ ಗೆಳೆಯರಿಗೋಸ್ಕರ ಸಬ್‌ಟಯ್ಟಲ್ಸ್ ಕೊಡಲಾಗಿದೆ. ಎಲ್ಲಾ ಊರಿನಲ್ಲಿರುವ ಕನ್ನಡಿಗರಿಗೆ ನಾನು ಹೇಳುವುದಿಶ್ಟೆ: ನೀವು 100 ಕೆಟ್ಟ ಕನ್ನಡ ಸಿನೆಮಾ ನೋಡಿರಬಹುದು, ಕನ್ನಡ ಮೂವೀಸ್ ನೋಡುವುದನ್ನ ನಿಲ್ಲಿಸರಬಹುದು ಆದರೆ ಸ್ವಲ್ಪ ಕನ್ನಡ ಅಬಿಮಾನ ಇದ್ರೆ ಹೋಗಿ ಲೂಸಿಯಾ ನೋಡಿ , ನಿಮ್ಮ ಗೆಳೆಯರನ್ನು ಕರೆದುಕೊಂಡು ಹೋಗಿ . ನಿಮಗೆ ಕಂಡಿತ ನಿರಾಸೆ ಆಗಲ್ಲ. ಆದರೆ ಇದ್ರಲ್ಲಿ ಯಾರೂ ಮಚ್ಚು ಬೀಸಲ್ಲ, ಟಾಟಾ ಸುಮೋಗಳು ಹಾರಲ್ಲ, ಆದರೆ ಒಂದು ಒಳ್ಳೆ ಕತೆ ಇದೆ, ಡಯ್ರೆಕ್ಶನ್ ಇದೆ, ನಟನೆ ಇದೆ, ಇದೆಲ್ಲಾದುಕ್ಕಿಂತ ಜಾಸ್ತಿ ಕನ್ನಡದಲ್ಲಿ ಬೇರೆ ಬೇರೆ ತರ ಮೂವೀಸ್ ಮಾಡುವ ಹುರುಪು ತರಬೇಕು ಅನ್ನುವ ಕನಸಿದೆ.

(ಚಿತ್ರ: chitthara.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: