ಮೀನು, ಇರುವೆ ’ಹಾರಿಸುವ’ ಅರಿಮೆ!

– ಶ್ರೀಕಿಶನ್ ಬಿ. ಎಂ.

levitation

ಮ್ಯಾಗ್ಲೇವ್ ರೆಯ್ಲು ಬಂಡಿಗಳ ಹಿಂದಿರುವ ಚಳಕ, ಮೇಲ್ತೇಲುವಿಕೆಯ (levitation) ಬಗ್ಗೆ ನೀವು ಓದಿರಬಹುದು ಇಲ್ಲವೇ ಯೂರೋಪಿನ ಹುಡುಗನೊಬ್ಬ ನನ್ನನ್ನು ಕೇಳಿದಂತೆ, ಪಡುವಣದ ನಾಡುಗಳಲ್ಲಿ ಗುಲ್ಲುಮಾತಗಿದ್ದ ಗಾಳಿಯಲ್ಲಿ ತೇಲುತ್ತಾ ಜನರನ್ನು ಬೆಕ್ಕಸ ಬೆರಗಾಗಿಸುತ್ತಿದ್ದ ಬಾರತದ ’ಸಿದ್ದ-ಯೋಗಿಗಳ’ ಬಗ್ಗೆಯಾದರೂ ಕೇಳಿರಬಹುದು. ಈ ಮೇಲ್ತೇಲುವಿಕೆಯ ಕೆಲ ಅರಿಮೆಯ ಸಂಗತಿಗಳು, ಅದರ ಪತ್ತುಗೆಗಳು, ಬಳಕೆಗಳು, ಏನೇನಿವೆ ಅಂತಾ ಅರಿಯಲು ಈ ಬರಹ.

ವಸ್ತುವೊಂದರ ಮೇಲ್ತೇಲುವಿಕೆ ಎಂಬುದನ್ನು ಅರಿಮೆಯಿಂದ ಹುರುಳಿಸುವುದಾದರೆ,

ವಸ್ತುವನ್ನು ಬವ್ತಿಕ ಕಸುವಿನಿಂದ (physical force), ಆದರೆ ಯಾವ ಗಟ್ಟಿತನದ ಸೋಕಿಲ್ಲದೆಯೆ (solid contact) ನೆಲಸೆಳೆತಕ್ಕೆ ಎದುರಾಗಿ ನೇಲಿಸುವುದು (suspend).

ಈ ಬಗೆಯ ನೇಲುವಿಕೆಯನ್ನು ಹಲಬಗೆಗಳಿಂದ, ಮಾಳಿನಿಂದ (cause/ influence) ಆಗಿಸಬಲ್ಲೆವು. ಗಾಳಿಯಾಡಿಕೆಯ (aerodynamic) ಮಾಳು, ಸೆಳೆಗಲ್ಲಿಕೆಯ (magnetic), ಅದುರಿಕೆಯ (acoustic), ಮಿನ್ಸೆಳೆತದ (electromagnetic), ಮಿಂಚುನಿಲ್ಮೆಯ (electrostatic), ಕದಿರಾಡಿಕೆಯ (optical) ಮಾಳು ಹೀಗೆ ಹಲವು ಕ್ರಮಗಳಿಂದ ಜರುಗಿಸಬಹುದು.

ಮೇಲ್ತೇಲುವಿಕೆಯ ಕೆಲವು ಕುತೂಹಲಕಾರಿ ಬಳಕೆಗಳು:

ಬಡಗಣ ಚೀನಾದ ಅರಕೆಯೆಡೆಯೊಂದರಲ್ಲಿ ಅರಕೆಗಾರರು ಸದ್ದಿನಲೆಗಳ ನೆರವಿನಿಂದ ಇರುವೆ, ಮೀನು, ಮತ್ತಿತರ ಸಣ್ಣ ಪ್ರಾಣಿಗಳನ್ನು ‘ಹಾರುವಂತೆ’ ಮಾಡಿದ್ದಾರೆ! ಈ ಪ್ರಾಣಿಗಳು ಜೀವಂತವಾಗಿದ್ದು, ಈ ಪ್ರಯೋಗದಲ್ಲಿ ಅವುಗಳಿಗೆ ಏನೂ ತೊಂದರೆಯಾಗಲಿಲ್ಲ. ಅರಿಗರು ಹೇಳಿದ ಹಾಗೆ, ’ಮೇಲ್ತೇಲುವಿಕೆಯ ಅರಕೆಗೆ ಒಳಪಟ್ಟ ಮೀನಿನ ಹುರುಪಿನಳವು (vitality) ಸ್ವಲ್ಪ ತಗ್ಗಿತಾದರೂ ಅದಕ್ಕೆ ಮುಕ್ಯ ಕಾರಣ, ಅದು ಅದರ ನೀರು ಕೊಳವನ್ನು ಬಿಟ್ಟಿದುದಕ್ಕಾಗಿಯೇ. ಚುಚ್ಚುಕೊಳವೆಯಿಂದ ಅದಕ್ಕೆ ನೀರು ಸಿಂಪಡಿಸಿದರೂ ಅದಕ್ಕದು ಸಾಲಲಿಲ್ಲ. ಆದರೆ ಇರುವೆ, ದುಂಬಿ, ಜೇಡ ಇವುಗಳಿಗೆ ಯಾವ ಕುತ್ತೂ ಬರಲಿಲ್ಲ’

ಈ ರೀತಿಯ ಅರಕೆಗಳನ್ನು ಸುಮಾರು 1997 ರಿಂದಲೇ ನಡೆಸಲಾಗುತ್ತಿದೆಯಂತೆ. ನೆದರ್ ಲೆಂಡ್ಸ್ನ ಅರಕೆಯೆಡೆಯೊಂದರಲ್ಲಿ ಸೆಳೆಗಲ್ಲಿನಿಂದ ಕಪ್ಪೆಯೊಂದಕ್ಕೆ ಮೇಲ್ತೇಲುವಿಕೆಯ ‘ಮೇಲ್ಮೆಯನುಬವ’ವನ್ನು ನೀಡಲಾಗಿತ್ತು! ಬಲವಾದ ಸೆಳೆಗಲ್ಲಿನ ಮಾಳಿನಿಂದ ಕಪ್ಪೆಯ ಮಯ್ಯ ನವುರುಕಟ್ಟುಗಳಲ್ಲಿ (tissues) ಕೊಂಚ ಮಟ್ಟಿನ ಸೆಳೆತನವನ್ನು (magnetism) ಉಂಟುಮಾಡಿ, ಅದರಿಂದ ಬರುವ ಸೆಳೆಗಲ್ಲಿನ ಹಿಮ್ಮೆಟ್ಟುವ ಕಸುವಿನಿಂದ (magnetic repulsive Force) ಕಪ್ಪೆಯನ್ನು ಮೇಲ್ತೇಲಿಸಲಾಯಿತು.

ಹೆಬ್ಬಿಡುವೆಗಳು (superconductors) ಮೇಲ್ತೇಲುವಿಕೆಯನ್ನು ಉಂಟುಮಾಡುವ ಗುಣವನ್ನು ಹೊಂದಿರುತ್ತವೆ. ಜಪಾನಿನಲ್ಲಿ ಸೆಳೆಗಲ್ಲಿನ ಬಯಲುಗಳನ್ನು ಹಿಮ್ಮೆಟ್ಟಿಸುವಂತ ಅಳವುಳ್ಳ ಹೆಬ್ಬಿಡುವೆಗಳನ್ನು ತಟ್ಟೆಯೊಂದರ ಮೇಲೆ ಸುಮೋ ಜಟ್ಟಿಗನನ್ನು ನಿಲ್ಲಿಸಿ, ಮೇಲ್ತೇಲುವಿಕೆಯ ಮಾಳಿನಿಂದ ತಟ್ಟೆಯನ್ನೂ ಅದರ ಮೇಲಿನ ಜಟ್ಟಿಯನ್ನೂ ನಡುಗಾಳಿಯಲ್ಲಿ ನೇಲುವಂತೆ ಮಾಡಿದರಂತೆ! ಈ ಹೆಬ್ಬಿಡುವೆಗಳ ಬಳಕೆಯೇ ಈಗಿನ ಮ್ಯಾಗ್ಲೇವ್ ರಯ್ಲಿನ ಅಡಿಪಾಯವಾಗಿದೆ.

levitation-2

ಇನ್ನು ’ಅದುರಿಕೆಯ’ ಮೇಲ್ತೇಲುವಿಕೆಯ ಬಗ್ಗೆ ಹೇಳಬೇಕೆಂದರೆ, ಇದರಲ್ಲಿ ಕೇಳುಹ-ಮೀರಿದ ಸದ್ದಿನ (ultrasound) ಅಲೆಗಳ ಗಾಳಿಯೊತ್ತಡವನ್ನು (air pressure) ಬಳಸಿ ವಸ್ತುವನ್ನು ಮೇಲಕ್ಕೆ ಹಿಡಿದಿಡಲಾಗುತ್ತದೆ. ಈ ಪರಿಣಾಮವು 1930ರಶ್ಟರಲ್ಲೇ ತಿಳಿಯಲ್ಪಟ್ಟಿದ್ದು, ಅರಕೆಗಾರರು ಈ ರೀತಿಯ ಸದ್ದಿನಲೆಗಳಿಂದ ಬಹಳ ದಟ್ಟನೆಯ ಟಂಗ್ಸ್ಟನ್ ಉಂಡೆಗಳನ್ನೂ ಮೇಲ್ತೇಲಿಸಿದ್ದಾರೆ.

ಈ ಮೇಲ್ತೇಲುವಿಕೆಯ ಕಸುವು ಯಾವಾಗ ಹೆಚ್ಚು ಪ್ರಬಲವಾಗಿರುವುದೆಂದರೆ, ತೇಲಿಸಲ್ಪಡುತ್ತಿರುವ ವಸ್ತುವು ಅದುರಿಕೆ/ಸದ್ದಿನಲೆಯ ಅಲೆಯಗಲಕ್ಕೆ ಹತ್ತಿರದ ಗಾತ್ರದಲ್ಲಿದ್ದಾಗ. ಮೊದಲು ಈ ಅರಕೆಗಳನ್ನು ನಡೆಸಿದ ಚೀನಿ ಅರಿಗರು, ಕೇಳುಹ-ಮೀರಿದ ಸದ್ದನ್ನು ಹೊರಡಿಸಲು ಸೆಳೆಗಲ್ಲಿನ ನೆರವು ಪಡೆದು, ಅದನ್ನು ಹೊಯ್ದಾಡುವ ಮಿನ್ಬಯಲಿಗೆ (oscillating electric field) ತಂದು, ಅದರಿಂದ ಸೆಳೆಗಲ್ಲು ಬಿರುಸಾಗಿ ಕುಗ್ಗಿ, ಮುಂಚಿನ ಗಾತ್ರಕ್ಕೆ ಮರಳುವಂತಹ ಕದಲುವಿಕೆಗಳಿಂದ ಸುಮಾರು 20 ಮಿಲೀ ಮೀಟರ್ ಅಲೆಯಗಲದ ಗಾಳಿಯ ಮಿಡಿತಗಳನ್ನು (pulse) ಉಂಟುಮಾಡಿ, ಸರಿಸುಮಾರು ಅಶ್ಟೇ ಗಾತ್ರದ ಇರುವೆಯನ್ನೂ ಮತ್ತು ಸಣ್ಣ ಮೀನನ್ನೂ ಮೇಲೆ ತೇಲಿಸಿದ್ದಾರೆ.

ಈ ಪ್ರಯೋಗದಲ್ಲಿ ಗಮನಿಸಿದ ಹಾಗೆ, ನಡುಗಾಳಿಯಲ್ಲಿ ತೇಲಿಸಲ್ಪಟ್ಟ ಹುಳು-ಮೀನುಗಳು ಆ ಅನುಬವದಿಂದ ಸ್ವಲ್ಪ ತಲ್ಲಣಗೊಂಡಂತೆ ಕಂಡುಬಂದವು. ಇರುವೆಯು ಆಚೆ ಹೊರಟು ಹೋಗಲು ಕಾಲ್ಗಳನ್ನು ಚಟಪಟನೆ ಆಡಿಸಿತಂತೆ, ಲೇಡಿಬರ‍್ಡ್ (ladybird) ದುಂಬಿಯು ರೆಕ್ಕೆಗಳನ್ನು ಹರಡಿತಂತೆ, ಮೀನು-ಮರಿಕಪ್ಪೆಗಳು ಈಜಿ ಹೋಗಲು ಯತ್ನಿಸಿದವಂತೆ, ಯಾವುದೂ ಪ್ರಯೋಜನಕ್ಕೆ ಬಾರದೇ. ಆದರೆ ಇವುಗಳ ಮೇಲೆ ತೊಂದರೆಯಾಗುವಂತಹ ಯಾವ ಪರಿಣಾಮ ಆಗಲಿಲ್ಲ.

ಹಾಗಾದರೆ, ಎಲ್ಲೆಡೆ ಕಣ್ಕಟ್ಟು-ಕಯ್ವಾಡಗಳು ಮಾಡುವ ಹಾಗೆ ಇದೂ ಸುಮ್ಮನೆ ಒಂದು ಆಟವೇ? ಇದರಲ್ಲಿ ಅಂತಹ ಹೆಗ್ಗಳಿಕೆಯೇನಿದೆ? ಇದು ಸುಮ್ಮನೆ ಒಂದು ಹೊಸ ಚಳಕದ ಆಟವಲ್ಲ. ಸಣ್ಣ ಜೀವಂತ ಉಸುರಿಗಳನ್ನು ಮೇಲ್ತೇಲಿಸಿದ್ದು, ತೂಕವಿಲ್ಲದ ಸುತ್ತಣದಲ್ಲಿ (weightless environment) ಉಂಟಾಗಬಲ್ಲ ಪರಿಣಾಮಗಳನ್ನು ಅಣಕಮಾಡಿ ನೋಡಲು ಸುಳುವಾಗಿಸುತ್ತದೆ. ಎತ್ತುಗೆಗೆ, ಮಾನವನ ಬಾನಾಚೆಯ ನಡೆಪಾಡಿನಲ್ಲಿ, ಒಡಲಿನ ಮೂಳೆ, ನರಕಟ್ಟು-ನವುರುಕಟ್ಟುಗಳು ಎಂತೆಂತಹ ಒತ್ತಡ-ಆಗುಹಗಳಿಗೆ ಈಡಾಗಬಹುದೆಂಬ ಹೊಳಹು ಸಿಗುತ್ತದೆ.

ಇದಲ್ಲದೆ, ಪರಲುಗಳ (crystals) ಮಾಡುವಿಕೆಯಲ್ಲಿ, ಮೇಲ್ತೇಲಿಕೆಯಿಂದ ಮಾಡಲ್ಪಟ್ಟ ಪರಲುಗಳು ಇನ್ನೂ ಕಡಿಮೆ ಅಯ್ಬುಗಳನ್ನು ಹೊಂದಿರುತ್ತವೆ. ಹಿಡಿತವಿಲ್ಲದೆ ತೇಲಾಡುವ ವಸ್ತುಗಳು ಯಾವ ಹಿಡಿವಿಗೆಯ (container) ಸುತ್ತಾಲೆಗಳೊಂದಿಗೆ (walls) ಸೋಕಿಗೆ ಬಾರದರಿಂದ, ವಸ್ತುವಿನ ಕೆಡುವಿಕೆಯು ತಪ್ಪುತ್ತದೆ.

ಅಳಕಗಳನ್ನು (liquids) ಕಡುತಣ್ಪಿಕೆಗೊಳಿಸಬೇಕೆಂದರೆ (super-cooling) ಅಳಕವು ಹೊರಗಿನ ಪ್ರಬಾವಕ್ಕೆ (external stimulus) ಒಳಗಾಗದೆ ಇರಬೇಕು, ಏಕೆಂದರೆ ಅದು ಅಂತಹ ಬಹಳ ಸಣ್ಣ ಪ್ರಬಾವದಲ್ಲೂ ಹೆಪ್ಪುಗಟ್ಟಿದ ಇರವಿಗೆ (frozen state) ಜಾರಿ ಹೋಗಬಲ್ಲದು. ಹಿಡಿವಿಗೆಯೊಳಗಿನ ಅಳಕಕ್ಕೆ ಈ ತೊಡಕು ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ಮೇಲ್ತೇಲಿಕೆಗೆ ಒಳಪಡಿಸಬೇಕಾಗುವ ಬೇಡಿಕೆ ಕಂಡುಬರುತ್ತದೆ.

(ಮಾಹಿತಿ ಮತ್ತು ತಿಟ್ಟದ ಸೆಲೆಗಳು: nature.com, personal.psu.edu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications