ಇದೇ ಜೀವನ!

ಸರಿತಾ ಸಂಗಮೇಶ್ವರನ್.

EnjoyingTheLifePhotographyByAsit1

“ಒಮ್ಮೊಮ್ಮೆ ಹೀಗೂ ಆಗುವುದು ಎಲ್ಲಿಯೋ ಮನಸು ಹಾರುವುದು …ಯಹೀ ತೊ ಹೇ ಜಿಂದಗಿ…..” ಇದು ಕನ್ನಡ ಸಿನೆಮಾದ ಒಂದು ಹಾಡು. ಇದನ್ನು ಕೇಳುವಾಗಲೆಲ್ಲ ನನ್ನನ್ನು ಕಾಡುವುದು ಒಂದೇ ವಿಶಯ. ನಾವು ಮನುಶ್ಯರು ಏನನ್ನು ಅರಸುತ್ತೇವೆ? ಯಾವಾಗಲೂ “ಅದು ಬೇಕು ಇದು ಬೇಕು…”, ಅದಕ್ಕೆ ಕೊನೆ ಮೊದಲಿಲ್ಲ. ನಾವು ಏನೋ ಬೇಕು ಎಂದುಕೊಳ್ಳುತ್ತೇವೆ ಆದರೆ ಅದು ನಮಗೆ ಇನ್ನು ಯಾವಾಗಲೋ ದೊರಕುತ್ತದೆ. ಒಮ್ಮೊಮ್ಮೆ ಶತ ಪ್ರಯತ್ನ ಪಟ್ಟರೂ ಕೂಡ ಸಿಗದು. ಇನ್ನು ಯಾವಾಗಲೋ ಅನಾಯಾಸವಾಗಿ ಸಿಕ್ಕಾಗ ಅದಕ್ಕೆ ಮಹತ್ವ ಇರುವುದಿಲ್ಲ. ಅದೇ ಅಲ್ಲವೇ ಜೀವನ ಎಂದರೆ?

ಒಂದು ಮಗುವನ್ನ ನೋಡಿ. ಅದನ್ನು ತ್ರುಪ್ತಿ ಪಡಿಸುವುದು ಎಶ್ಟೋಂದು ಸುಲಬ. ಒಂದು ಚಾಕಲೇಟ್ ಅತವಾ ಒಂದು ಪಾರ್‍ಕ್ ಸಾಕು ಅದರ ಮುಕದಲ್ಲಿ ನಗು ಬರಿಸಲು. ಮಗು ಮನಸ್ ಪೂರ್‍ತಿಯಾಗಿ ಸಂತೋಶ ಅನುಬವಿಸುತ್ತದೆ. ಬಹುಶಹ ಮಗುವಿನ ಪ್ರಪಂಚ ತುಂಬಾ ಚಿಕ್ಕದಾಗಿರುವ ಕಾರಣ ಸಿಗುವ ಎಲ್ಲಾ ಸಂತೋಶವನ್ನು ಅನುಬವಿಸುತ್ತದೆ. ನಾವು ದೊಡ್ಡವರು ಹಾಗಲ್ಲ, ಎಲ್ಲಾ ಒಳ್ಳೆಯದು, ಎಲ್ಲಾ ಸರಿಯಾದುದಶ್ಟೇ ನಮಗೆ ಬೇಕು. ಪರಿಸ್ತಿತಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನಾವು ಸಿದ್ದರಿರುವುದಿಲ್ಲ. ಆಸೆ ಪಟ್ಟಿದ್ದು ಸಿಗುವವರೆಗೂ ನೆಮ್ಮದಿ ಇರುವುದಿಲ್ಲ, ಅದಿನ್ನೂ ಸಿಗಲಿಲ್ಲವಲ್ಲ ಎನ್ನುವ ಚಿಂತೆ ಒಂದು ಕಡೆ ಆದರೆ, ಅದು ಮತ್ತಾರದೋ ಪಾಲಾಯಿತಲ್ಲ ಎನ್ನುವ ಚಿಂತೆ ಇನ್ನೊಂದು ಕಡೆ. ಅದು ಸಿಕ್ಕಾಗ “ಇಶ್ಟೇನಾ? ಇದಕ್ಕಾಗಿ ನಾನು ಇಶ್ಟೊಂದು ಆಸೆ ಪಟ್ಟೆನಾ” ಎಂದು ಎಶ್ಟೋ ಸಲ ಅನಿಸುವುದುಂಟು.

ಆಸೆಯೇ ದುಕ್ಕಕ್ಕೆ ಕಾರಣ ಎಂದು ಯಾರಿಗೆ ಗೊತ್ತಿಲ್ಲ? ಹಾಗೆಂದು ಆಸೆಯನ್ನು ತಡೆದು ಯಾರೂ ಬದುಕುವುದಿಲ್ಲ. ಆಸೆಯೇ ಇಲ್ಲದೆ ಜೀವನಕ್ಕೆ ಒಂದು ಗುರಿ, ಒಂದು ದ್ಯೇಯ ಇರುವುದಿಲ್ಲ. ಆಸೆ ಪಡಬೇಕು ನಿಜ, ಆದರೆ ದುರಾಸೆ ಸಲ್ಲದು. ಹಾಗೆಯೇ ಅದಕ್ಕಾಗಿ ಆರಿಸಿಕೊಂಡ ದಾರಿಯೂ ತುಂಬಾ ಮುಕ್ಯ.

“ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು” ಎಂದು ಸಿದ್ದರಿದ್ದರೆ, ಜೀವನದಲ್ಲಿ ಬರುವ ಕಶ್ಟಗಳನ್ನ ಎದುರಿಸುವುದು ಪ್ರಾಯಶಹ ಸುಲಬವಾಗುವುದೇನೋ. ಸಮಸ್ತಿತಿಯ ಜೀವನವನ್ನು ನಡೆಸಬಹುದು. ಎಂತಹ ಕಶ್ಟ ಬಂದರೂ ಅದು ಮಂಜಿನಂತೆ ಕರಗುತ್ತದೋ ಇಲ್ಲವೋ ಆದರೆ, ಅದನ್ನ ಎದುರಿಸುವ ದಯ್ರ್ಯ, ಮನಸ್ಸು, ಶಕ್ತಿ, ಬುದ್ದಿವಂತಿಕೆ ಎಲ್ಲವೂ ಬರುತ್ತದೆ. ಜೀವನ ಹೇಗೆ ಬರುತ್ತದೋ ಹಾಗೆಯೇ ತೆಗೆದುಕೊಳ್ಳಬೇಕು. ನಾವು ಏನೋ ಲೆಕ್ಕ ಹಾಕಿ ಆಸೆಯ ಗಂಟು ಕಟ್ಟಿದರೆ ಅದು ನಿಸ್ಸಂಶಯವಾಗಿ ಮತ್ತಾರದೋ ಪಾಲಾಗುತ್ತದೆ. ಇದೇ ಜೀವನ!

(ಚಿತ್ರ ಸೆಲೆ: www.bigpicture.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: