ಕಂಪ್ಯೂಟರ್ ಮಿದುಳಿನ ಹೆಣ್ಣು – ಶಕುಂತಲಾದೇವಿ

– ಪ್ರೇಮ ಯಶವಂತ.

ಶಕುಂತಲಾ ದೇವಿ

ನಾವು ಸಣ್ಣ ಪುಟ್ಟ ಲೆಕ್ಕಗಳಿಗೆಲ್ಲಾ ಲೆಕ್ಕರಣೆ (calculator) ಅತವಾ ಎಣ್ಣುಕಗಳ (computer) ಮೊರೆಹೊಗುತ್ತೇವೆ. ಆದರೆ, ಇಲ್ಲೊಬ್ಬರು ಇಂತಹ ಎಣ್ಣುಕಗಳಿಗೆ ಸವಾಲೆಸೆದು ಸಯ್ ಎನಿಸಿಕೊಂಡಿದ್ದಾರೆ. ಇವರೇ ನಮ್ಮ ಹೆಮ್ಮೆಯ ಕನ್ನಡಿತಿ ಶಕುಂತಲಾದೇವಿಯವರು. ಪ್ರಪಂಚದೆಲ್ಲೆಡೆ “ಮಾನವ ಎಣ್ಣುಕ” ಎಂದೇ ಹೆಸರಾಗಿರುವ ಶಕುಂತಲಾದೇವಿಯವರದ್ದು ವಯಸ್ಸಿಗೆ ಮೀರಿದ ಜಾಣ್ಮೆ. ಇವರ ಈ ಹುಟ್ಟಳವು ಇವರಿಗೆ 1982ರಲ್ಲಿ ಗಿನ್ನಿಸ್ ದಾಕಲೆಯನ್ನೂ ತಂದುಕೊಟ್ಟಿತ್ತು.

ಶಕುಂತಲಾದೇವಿಯವರು 1929ರ ನವೆಂಬರ್ 4ರಂದು ಬ್ರಾಮಣ ಕುಟುಂಬವೊಂದಲ್ಲಿ ಹುಟ್ಟಿದರು. ಇವರ ತಂದೆಯವರ ಮನಸ್ಸು ದೊಂಬರಾಟದೆಡೆಗೆ ಸೆಳೆಯುತ್ತಿದ್ದರಿಂದ, ತಮ್ಮ ಕುಲಕಸುಬಾದ ಅರ್‍ಚಕ ಗೆಯ್ಮೆಯನ್ನು ಬಿಟ್ಟು, ದೊಂಬರಾಟದಲ್ಲಿ ತಲ್ಲೀನರಾಗತೊಡಗಿದರು. ಮಗಳು ಸಹ ತಂದೆಯ ಜೊತೆಗೂಡಿ ಅಂಕೆಗಳಲ್ಲಿ ತಮಗಿದ್ದ ಜಾಣ್ಮೆಯನ್ನು ಜನರ ಮುಂದಿಡುತ್ತಿದ್ದರು. ಶಕುಂತಲಾರವರು ತಮ್ಮ ಮೂರನೇ ವಯಸ್ಸಿನಲ್ಲೇ ಅಂಕೆಗಳನ್ನು ನೆನಪಿಟ್ಟುಕೊಳ್ಳುವಂತ ಹುಟ್ಟಳವನ್ನು ಗಮನಿಸಿದ ಅವರ ತಂದೆ ಅಂಕೆಗಳಿಗೆ ಸಂಬಂದಪಟ್ಟ ಕಯ್ಚಳಕಗಳನ್ನು ಅವರಿಗೆ ಹೇಳಿಕೊಡತೊಡಗಿದರು. ತಂದೆ ದೊಂಬರಾಟದ ಕಸುಬನ್ನು ತೊರೆದು ತಮ್ಮ ಮಗಳ ಜಾಣ್ಮೆಯನ್ನು ಬೀದಿ ಆಟಗಳ ಮೂಲಕ ಜನಗಳ ಮುಂದೆ ತೋರಿಸುತ್ತ, ಅದನ್ನೇ ಬದುಕಾಗಿ ಮಾಡಿಕೊಂಡರು. ಒಟ್ಟಿನಲ್ಲಿ ಹೇಳುವುದಾದರೆ ಶಕುಂತಲಾರವರು ತಮ್ಮ ಸಣ್ಣ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿಯನ್ನು ಹೊತ್ತರು. “ಹಾಡ್ತಾ ಹಾಡ್ತಾ ರಾಗ” ಎಂಬಂತೆ ಅಂಕೆಗಳ ಜೊತೆ ಆಡುತ್ತ ಆಡುತ್ತ ಎಂತಹ ಕಶ್ಟವಾದ ಲೆಕ್ಕವನ್ನೂ ಸಹ ಅತಿ ಸುಳುವಾಗಿ ಬಿಡಿಸುತ್ತಿದ್ದರು .

ಮಯ್ಸೂರಿನ ಕಲಿವೀಡಿನಲ್ಲಿ (university) ಶಕುಂತಲಾದೇವಿಯವರು ಕೊಟ್ಟ ಮೊಟ್ಟ ಮೊದಲನೆಯ ನೆಗಳಿಕೆ (performance), ಅವರ ಜೀವನದ ದಿಕ್ಕನ್ನೇ ಬದಲಾಯಿಸಿತ್ತು. ಆಗ ಅವರಿಗೆ ಕೇವಲ ಆರು ವರ್‍ಶ. ನಂತರ ಶಕುಂತಲಾರವರು ಪ್ರಪಂಚದೆಲ್ಲೆಡೆ ತಮ್ಮ ಹುಟ್ಟಳವನ್ನು ಪ್ರದರ್‍ಶಿಸುತ್ತಾ ಹೋದರು. 1950ರಲ್ಲಿ ಯುರೋಪ್, 1976ರಲ್ಲಿ ಅಮೇರಿಕದಂತಹ ದೇಶಗಳಲ್ಲಿ ತಮ್ಮ ಹುಟ್ಟಳವನ್ನು ಮಂದಿಗೆ ಪರಿಚಯಿಸಿ ಅಚ್ಚರಿಯನ್ನುಂಟು ಮಾಡಿದ್ದರು. ಅತಿ ದೊಡ್ಡ ಅಂಕೆಗಳ ವರ್‍ಗಮೂಲ, ಗನಮೂಲಗಳನ್ನು ಸುಳುವಾಗಿ ತಿಳಿಸುತ್ತಿದ್ದರು. ವಿಶೇಶವೆಂದರೆ ನಮ್ಮ ಎಲ್ಲಾ ಎಣ್ಣುಕಗಳಿಗಿಂತ ಬೇಗ ಮರುನುಡಿಯನ್ನು ತಿಳಿಸುವ ಜಾಣ್ಮೆಯನ್ನು ಹೊಂದಿದ್ದರು. ಒಮ್ಮೆ ಯಾವುದೋ ಒಂದು ಪ್ರಶ್ನೆಗೆ ಶಕುಂತಲಾದೇವಿಯವರು ಕೊಟ್ಟ ಮರುನುಡಿ ಸರಿಯಿದ್ದು, ಎಣ್ಣುಕದ ಮರುನುಡಿಯೇ ತಪ್ಪಾಗಿದ್ದುದುಂಟು. ಅಶ್ಟೇ ಅಲ್ಲದೆ ಇವರು ಯಾವುದೇ ಇಸವಿಯ ತೇದಿಯನ್ನು ಕೊಟ್ಟರೂ ವಾರವನ್ನು ಸರಿಯಾಗಿ ತಿಳಿಸುತ್ತಿದ್ದರು.

1977 ರಲ್ಲಿ ಅಮೇರಿಕಾದಲ್ಲಿ ಎಣ್ಣುಕದೊಂದಿಗೆ ಪಯ್ಪೋಟಿಗೆ ನಿಂತ ಶಕುಂತಲಾರವರು 9 ಎಣಿಗೆಯ (digits) ಅಂಕೆಗೆ ಎಣ್ಣುಕಕ್ಕಿಂತ ಮೊದಲೇ ಗನಮೂಲ (cube root) ತಿಳಿಸಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು. ಅದೇ ವರ್‍ಶದಲ್ಲಿ “ಸದರ್‍ನ್ ಮೆತಾಡಿಸ್ಟ್ ಯೂನಿವರ್‍ಸಿಟಿ” ಎಂಬಲ್ಲಿ 201 ಎಣಿಗೆಯ (digit) ಅಂಕೆಗೆ 23ರ ಮೂಲವನ್ನು ಕ್ಶಣಮಾತ್ರದಲ್ಲಿ ತಿಳಿಸಿ ಸಯ್ ಎನಿಸಿಕೊಂಡಿದ್ದರು. ಇದಲ್ಲದೆ 1980 ಜೂನ್ 18 ರಂದು ಲಂಡನ್ನಿನ “ಇಂಪೀರಿಯಲ್ ಕಾಲೇಜ್” ನಲ್ಲಿ ಎರಡು 13ಎಣಿಗೆಯ ಅಂಕೆಗಳಿಗೆ ಗುಣಾಕಾರ ಮಾಡಿ ಅರ್‍ದ ನಿಮಿಶಕ್ಕಿಂತ ಕಡಿಮೆ ವೇಳೆಯಲ್ಲಿ ಮರುನುಡಿ ತಿಳಿಸಿ ಗಿನ್ನಿಸ್ ದಾಕಲೆಯನ್ನು ಮಾಡಿದರು.

ಕೇವಲ ಅಂಕೆಗಳ ಲೆಕ್ಕಾಚಾರವಲ್ಲದೆ ಶಕುಂತಲಾದೇವಿಯವರು ಜನಪ್ರಿಯ ನುಡಿಗರು (astrologer) ಹಾಗೂ ಕಾದಂಬರಿಕಾರರು ಆಗಿದ್ದರು. ಇತ್ತೀಚೆಗಶ್ಟೆ ಇವರನ್ನು ನಾವು ಕಳೆದುಕೊಂಡಿದ್ದೇವೆ. ಇಂತಹ ಮತ್ತಶ್ಟು ಕನ್ನಡ ಪ್ರತಿಬೆಗಳು ಮತ್ತೆ ಹುಟ್ಟಿ ಬರಲಿ ಎಂದು ಹಾರಯ್ಸೋಣ.

(ಮಾಹಿತಿ ಸೆಲೆ: en.wikipedia.org)
(ಚಿತ್ರ ಸೆಲೆ: livemint.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: