ಬೋರ‍್ವೆಲ್ ಹಾಲು

ಸಿ.ಪಿ.ನಾಗರಾಜ

07-milk_600

ಒಂದು ಶನಿವಾರ ಬೆಳಿಗ್ಗೆ ಏಳೂವರೆ ಗಂಟೆಯ ಸಮಯದಲ್ಲಿ ಮಂಡ್ಯ ನಗರದ ಬೀದಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಸಮೀಪದಲ್ಲಿಯೇ ಸುಮಾರು ಎಂಟು ವರುಶದ ವಯಸ್ಸಿನ ಮೂವರು ಗಂಡು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅವರಲ್ಲಿ ಒಬ್ಬ ಹುಡುಗ “ಲೋ…ಅಲ್ ನೋಡ್ರೋ” ಎಂದು ಜೋರಾಗಿ ಕಿರುಚಿದ. ಕೂಗಿದ ಹುಡುಗನ ಕಡೆಗೆ ಮೊದಲು ನೋಡಿ, ಅನಂತರ ಇನ್ನಿಬ್ಬರ ದಿಟ್ಟಿ ಹರಿದಿದ್ದ ಕಡೆಗೆ ನೋಡಿದೆ.

ಬೀದಿಯ ಬದಿಯಲ್ಲಿದ್ದ ಬೋರ‍್ವೆಲ್ನಿಂದ ಹಾಲಿನ ಎರಡು ಡಬ್ಬಗಳಿಗೆ ಹಾಲು ಮಾರುವ ವ್ಯಕ್ತಿಯೊಬ್ಬ ನೀರನ್ನು ಒತ್ತುತ್ತಿದ್ದ. ಹಳ್ಳಿಯಿಂದ ಸಂಗ್ರಹಿಸಿ ತರುವಾಗ ಡಬ್ಬದಲ್ಲಿ ಅರೆ ಇಲ್ಲವೇ ಮುಕ್ಕಾಲು ಪ್ರಮಾಣದಲ್ಲಿದ್ದ ಹಾಲಿಗೆ ಬೋರ್ ವೆಲ್ ನೀರು ಬೆರೆಯುತ್ತಿದ್ದಂತೆಯೇ ಒಂದೆರಡು ಗಳಿಗೆಯಲ್ಲಿ ಹಾಲಿನ ಡಬ್ಬಗಳು ತುಂಬಿ ತುಳುಕತೊಡಗಿದವು.

ಈಗ ಹಾಲು ಮಾರುವ ವ್ಯಕ್ತಿಯ ಬಳಿಗೆ ಬಂದ ಹುಡುಗ, ಇನ್ನೂ ಎತ್ತರದ ದನಿಯಲ್ಲಿ “ಇದೇನ್ರೀ …ಬೋರ‍್ವೆಲ್ ನೀರ್ ತುಂಬಿ, ದಿನಾ ನಮಗೆ ಹಾಲು ಕೊಡ್ತೀರಾ…ಬನ್ನಿ ಮನೆಗೆ…ಅಮ್ಮನಿಗೆ ಹೇಳ್ತೀನಿ…ಇದು ಬೋರ‍್ವೆಲ್ ಹಾಲು ಅಂತ” ಎಂದಾಗ, ಹಾಲಿನವನು ಯಾವ ಮಾತನ್ನೂ ಆಡಲಿಲ್ಲ. ಹುಡುಗರು ಮುಂದೆ ನಡೆದರು. ಈ ಹಿಂದೆ ನಡೆದಿದ್ದ ಇದೇ ಬಗೆಯ ಪ್ರಸಂಗವೊಂದು ನನ್ನ ನೆನಪಿಗೆ ಬಂತು.

ನನ್ನ ಗೆಳೆಯರೊಬ್ಬರ ಮನೆಯ ಮುಂದುಗಡೆಯಿದ್ದ ಬೋರ್ ವೆಲ್ ನಿಂದ ತನ್ನ ಹಾಲಿನ ಡಬ್ಬಗಳಿಗೆ ನೀರನ್ನು ತುಂಬಿ, ಅನಂತರ ಮನೆಗೆ ಹಾಲನ್ನು ನೀಡಿದಾಗ, ಹಾಲಿನವನಿಗೂ ಮತ್ತು ನನ್ನ ಗೆಳೆಯರಿಗೂ ನಡೆದಿದ್ದ ಮಾತುಕತೆ-
“ಏನಪ್ಪ ? ನಮ್ ಕಣ್ ಮುಂದೇನೆ ಈ ರೀತಿ ಬೋರ್ ವೆಲ್ ನೀರ್ ತುಂಬಿ, ನಮಗೆ ಹಾಲು ಕೊಡ್ತಾಯಿದ್ದೀಯಲ್ಲ …ಸರಿಯೇನಯ್ಯ ಇದು?”

“ಇದರಲ್ಲಿ ತಪ್ಪೇನ್ ಸಾರ್‍! ಹಳ್ಳಿಯಿಂದ ಕೊಂಡ್ಕೊಂಡು ತಂದ ಗಟ್ಟಿ ಹಾಲನ್ನ…ಹಂಗಂಗೇ ನಿಮಗೆ ಹಾಕುದ್ರೆ…ನಂಗೇನೂ ಗಿಟ್ಟೂದಿಲ್ಲ.”

“ಇದರಲ್ಲಿ ಮೂರ‍್ಕಾಸು ಅಂತ ಸಂಪಾದನೆ ಮಾಡಿ…ನಾನು ಜೀವನ ಮಾಡಬಾರದೆ ಸಾರ್ ? ಅಲ್ಲೆಲ್ಲೋ ನಿಮ್ ಕಣ್ಣಿಗೆ ಮರೆಯಾಗಿ ಹೆಬ್ಬಳ್ಳದ ಕೊಳಕು ನೀರನ್ನ ಹಾಲಿಗೆ ತುಂಬ್ಕೊಂಡು ಬರುವ ಬದಲು, ಬೋರ್ ವೆಲ್ ನಿಂದ ಒಳ್ಳೆಯ ನೀರನ್ನು ಬೆರೆಸಿಕೊಡ್ತಾಯಿದ್ದೀನಿ. ಅದಕ್ಕೆ ನೀವು ನನ್ ಬೆನ್ ತಟ್ಬೇಕು ಸಾರ್” ಎಂದಾಗ, ನನ್ನ ಗೆಳೆಯರು ಮರುಮಾತಾಡದೆ ಸುಮ್ಮನಾಗಿದ್ದರು.

ಹಾಲಿಗೆ ನೀರನ್ನು ಬೆರೆಸುವ ಕ್ರಿಯೆಯನ್ನು ಇಂದು ಕಂಡ ಆ ಪುಟ್ಟ ಹುಡುಗನ ತಿಳಿಯಾದ ಮನದಲ್ಲಿ ಉಂಟಾದ ಅಚ್ಚರಿ ಹಾಗೂ ಗಾಸಿಯು, ಮುಂದೆ ಬೆಳೆದು ದೊಡ್ಡವನಾಗುತ್ತಾ ಕೋಟಿಗಟ್ಟಲೆ ಸಹಮಾನವರ ಹಾಲಿನಂತಹ ಬದುಕಿಗೆ ಜಾತಿ, ಮತ, ದೇವರು ಮತ್ತು ರಾಜಕೀಯದ ಹೆಸರಿನಲ್ಲಿ ನಂಜನ್ನು ಎರೆಯುವ ಕ್ರಿಯೆಗಳನ್ನು ಕಾಣುವಾಗ ಮತ್ತು ಅಂತಹ ಕ್ರಿಯೆಗಳನ್ನು ಸರಿಯೆಂದು ವಾದ ಮಾಡಿ, ಜನಗಳನ್ನು ಮರುಳುಗೊಳಿಸುವವರ ಮಾತುಗಳನ್ನು ಕೇಳುವಾಗ, ಇನ್ನೂ ಹೆಚ್ಚಿನ ಗಾಸಿಗೆ ಒಳಗಾಗಬಹುದೆಂಬುದನ್ನು ಊಹಿಸಿಕೊಳ್ಳುತ್ತ ಮುಂದೆ ನಡೆದೆ.

(ಚಿತ್ರ: kannada.boldsky.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: