ಆಟ ಒಂದೇ…ಆದರೆ ನೋಟ

ಸಿ.ಪಿ.ನಾಗರಾಜ

12105

ಇಂಡಿಯಾ ಮತ್ತು ಶ್ರೀಲಂಕಾ ದೇಶಗಳ ನಡುವೆಕೆಲವು ವರುಶಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿಇಂಡಿಯಾದ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಅರವಿಂದ ಡಿಸಿಲ್ವ ಮನಮೋಹಕವಾಗಿ ಆಡಿ ಸೆಂಚುರಿಗಳನ್ನು ಹೊಡೆದರು. ಇವರಿಬ್ಬರ ಆಟವನ್ನುಹತ್ತಾರು ಮಂದಿ ಗೆಳೆಯರ ಜತೆ ಟಿ.ವಿ. ಪರದೆಯ ಮುಂದೆಕುಳಿತು ನೋಡುತ್ತಿದ್ದಾಗ , ನಾವೆಲ್ಲರೂ ವ್ಯಕ್ತಪಡಿಸಿದ ಬಹುಬಗೆಯ ಪ್ರತಿಕ್ರಿಯೆಗಳನ್ನು ಇಲ್ಲಿ ಬರೆಯುತ್ತಿದ್ದೇನೆ.

ಮೊದಲು ಇಂಡಿಯಾಬ್ಯಾಟಿಂಗ್ :

ಆಡುವ ಜಾಗಕ್ಕೆಮತ್ತೊಬ್ಬಆಟಗಾರನೊಡನೆಬ್ಯಾಟನ್ನು ಹಿಡಿದುಕೊಂಡು ತೆಂಡೂಲ್ಕರ್ ಬರುತ್ತಿದ್ದಂತೆಯೇ –

“ಇವತ್ತು ಏನ್ ಮಾಡನೋ ಕಾಣನಲ್ಲಪ್ಪ!…ಶಾರ್‍ಜಾದಲ್ಲಿ ಹೊಡೆದಂಗೆ ಇಲ್ಲೂ ಸೆಂಚುರಿ ಬಾರಿಸಿದರೆ ನೋಡಪ್ಪ…ನಮಗೆ ಕಪ್ ಗ್ಯಾರಂಟಿ” ಎಂಬ ಹಂಬಲ. ತೆಂಡೂಲ್ಕರ್ ತಾನು ಎದುರಿಸಿದ ಮೊದಲನೆಯ ಓವರ್ ನಲ್ಲೇ ಬವುಂಡರಿಗಳನ್ನುಹೊಡೆಯತೊಡಗಿದಾಗ –

“ಅಬ್ಬಾ…ಎಂತಹ ಹೊಡೆತಗಳಯ್ಯಾ ! ಪೀಲ್ಡರ್ ಗಳು ಬಾಲ್ ಹಿಡಿಯೋದಿರ್‍ಲಿ … ಅದನ್ನು ಟಚ್ ಮಾಡುವುದಕ್ಕೂ ಆಗುತ್ತಿಲ್ಲ” ಎಂಬ ಮೆಚ್ಚುಗೆ. ಮತ್ತೊಮ್ಮೆ ಸಚಿನ್ ಹೊಡೆದ ಚೆಂಡು, ಮೇಲಕ್ಕೆ ಹಾರಿದಾಗ…ಅದೆಲ್ಲಿ ಕ್ಯಾಚ್ ಆಗುವುದೋ ಎಂಬ ಆತಂಕ. ಮೇಲಕ್ಕೆ ನೆಗೆದ ಆ ಚೆಂಡು ಪೀಲ್ಡರ್ ಗಳು ಇಲ್ಲದ ಜಾಗದಲ್ಲಿ ಬಿದ್ದು ಗೆರೆಯನ್ನು ದಾಟಿದಾಗ-

“ನೋಡ್ದೇನಯ್ಯ …ಹೆಂಗೆ ‘ನೋ ಮ್ಯಾನ್ಸ್ ಲ್ಯಾಂಡ್‘ ಕಡೆ ಬಾಲನ್ನು ಹೊಡೀತನೆ! ಎಂತಹ ಚಾಣಕ್ಯತನದ ಆಟ!” ಎಂಬ ಶಹಬಾಸ್ ಗಿರಿ. ಒಮ್ಮೊಮ್ಮೆ ತೆಂಡೂಲ್ಕರ್ ಸಿಕ್ಸರ್ ಎತ್ತಿದಾಗ…ನಾವು ಎದ್ದು ಕುಣಿದಾಡುತ್ತಾ … ಚಪ್ಪಾಳೆ ತಟ್ಟುತ್ತಾ …ಅಕ್ಕಪಕ್ಕದಲ್ಲಿರುವ ಗೆಳೆಯರ ಬೆನ್ನಿನ ಮೇಲೆ ಗುದ್ದುತ್ತಾ …ನಮಗೆ ಉಂಟಾದ ಆನಂದವನ್ನು ಹೊರಹಾಕುವ ಚಪಲ. ಮಗದೊಮ್ಮೆ ತೆಂಡೂಲ್ಕರ್ ಬವುಂಡರಿ ಗೆರೆಯೊಳಗೆ ಅತಿ ಮೇಲಕ್ಕೆ ಹೊಡೆದ ಚೆಂಡನ್ನು, ಲಂಕೆಯ ಪೀಲ್ಡರ್ ಹಿಡಿಯಲೆತ್ನಿಸುತ್ತಿದ್ದಾಗ-

“ಅಯ್ಯೋ …ಅದೆಲ್ಲಿ ಆತನ ಅಂಗಯ್ ಗಳಲ್ಲಿ ಸಿಕ್ಕಿಕೊಳ್ಳುವುದೋ “ ಎಂಬ ತಲ್ಲಣ. ಪೀಲ್ಡರನು ಆ ಚೆಂಡನ್ನು ಹಿಡಿಯಲಾಗದೆ… ನೆಲದ ಮೇಲೆ ಹಾಕಿದಾಗ … ಅಪಾರವಾದ ಆನಂದ.

ಶ್ರೀಲಂಕ ಬ್ಯಾಟಿಂಗ್ :

ಶ್ರೀಲಂಕಾದ ಬ್ಯಾಟಿಂಗ್ ಶುರುವಾಗಿ ಸನತ್ ಜಯಸೂರ‍್ಯ ಬೋಲ್ಡ್ ಆಗಿ ಹೊರಬಿದ್ದ ನಂತರ ಬ್ಯಾಟ್ ಮಾಡಲು ಬಂದ ಅರವಿಂದ ಡಿಸಿಲ್ವ , ತಾನು ಎದುರಿಸಿದ ಮೊದಲ ಓವರಿನಲ್ಲೇ ಪಟಪಟನೆ ಬವುಂಡರಿಗಳನ್ನು ಬಾರಿಸತೊಡಗಿದಾಗ-

“ತೂ…ಎಂತಹ ಹೋಪ್ಲೆಸ್ ಬವುಲಿಂಗಯ್ಯನಮ್ಮದು. ಈ ರೀತಿ ಸಿಕ್ಕಾಬಟ್ಟೆ ಹೊಡಿಯೂವಂಗೆ ಚೆಂಡನ್ನು ಯಾರಾದ್ರೂ ಹಾಕ್ತಾರೇನಯ್ಯ?” ಎಂದು ಒಬ್ಬರು ನಿಂದಿಸಿದರೆ, ಮತ್ತೊಬ್ಬರು –

“ಅಲ್ ನೋಡಯ್ಯ…ನಮ್ಮ ಪೀಲ್ಡರ್ ಗಳಲ್ಲಿ ಒಬ್ಬನಾದ್ರೂ ಸರಿಯಾಗಿ ಬಾಲ್ ಹಿಡೀತ ಇದ್ದನ ನೋಡು…ಬಾಲು ಬವುಂಡರಿ ಗೆರೆಯತ್ತ ಹೊಯ್ತಿದ್ರೆ…ಅದರ ಹಿಂದೆ ಸುಮ್ಮನೆ ಓಡ್ತರೋ ಹೊರ್‍ತು…ಜಾಂಟಿರೋಡ್ಸ್ ತರ ಅಡ್ಡಲಾಗಿ ಬಿದ್ದು ತಡಿಯೋದೆ ಇಲ್ಲ” ಎಂಬ ಸಂಕಟ.

ಮತ್ತೊಮ್ಮೆ ಅರವಿಂದ ಡಿಸಿಲ್ವ ಹೊಡೆದ ಚೆಂಡು ಬವುಂಡರಿಯ ಒಳಗೆ ಮೇಲಕ್ಕೆ ನೆಗೆದು, ಪೀಲ್ಡರ‍್ಗಳು ಇಲ್ಲದ ಜಾಗದಲ್ಲಿ ಬಿದ್ದಾಗ-

“ನಮ್ಮಕ್ಯಾಪ್ಟನ್ ಎಂತಾವನಯ್ಯ ? ಪೀಲ್ಡರ್ ಗಳನ್ನ ಎಲ್ಲೆಲ್ಲೋ ನಿಲ್ಸವ್ನೆ. ಕ್ಯಾಚ್ ಬರುವ ಇಂತಹ ಕಡೆಗಳಲ್ಲಿ ನಿಲ್ಲಿಸಬಾರ್‍ದೇನು ? ಮ್ಯಾಚ್ ಗೆಲ್ಲಬೇಕು ಅನ್ನೋ ಗುರಿನೇ ಇಲ್ಲ ಕಣಯ್ಯಾ …ನಮ್ಮ ಅಜರುದ್ದೀನ್ ಗೆ” ಎಂಬ ಆರೋಪ.

ಡಿಸಿಲ್ವ ಒಮ್ಮೊಮ್ಮೆ ಸಿಕ್ಸರ್ ಎತ್ತಿದಾಗ…ಮುಗಿಲತ್ತಹಾರಿ…ಬವುಂಡರಿಯ ಗೆರೆಯಿಂದ ಹೊರಬೀಳುತ್ತಿರುವಆ ಚೆಂಡಿನ ಗತಿಯನ್ನುನೋಡನೋಡುತ್ತಿದ್ದಂತೆಯೇ…”ಅಯ್ಯೋ …ಹೆಂಗೆ ಹೊಡೀತಾವ್ನಲ್ಲ” ಎಂಬ ಸಂಕಟದಿಂದ ಮನದಲ್ಲೇ ಒದ್ದಾಡುತ್ತ …ನಮ್ಮ ಮಯ್ ತಣ್ಣಗಾಗಿ…ಸೊಲ್ಲಡಗಿ ಸುಮ್ಮನೆ ಕೂರುತ್ತಿದ್ದೆವು. ಮಗದೊಮ್ಮೆ ಡಿಸಿಲ್ವ ಬವುಂಡರಿಯ ಒಳಗೆ ಮೇಲಕ್ಕೆ ಹೊಡೆದ ಚೆಂಡನ್ನು ನಮ್ಮಪೀಲ್ಡರ್ ಹಿಡಿಯಲೆತ್ನಿಸುವಾಗ…ಅದು ಎಲ್ಲಿ ಕಯ್ಯಿಂದ ಜಾರಿ ನೆಲಕ್ಕೆ ಬೀಳುವುದೋ ಎಂಬ ಆತಂಕ. ನಮ್ಮ ಪೀಲ್ಡರ್ ಆ ಕ್ಯಾಚನ್ನು ಹಿಡಿದಾಗ, ದೊಡ್ಡದಾಗಿ ನಿಟ್ಟುಸಿರನ್ನುಬಿಟ್ಟು, ನೆಮ್ಮದಿಯಿಂದ ಚಪ್ಪಾಳೆ ತಟ್ಟಿದೆವು.

ಸಚಿನ್ ತೆಂಡೂಲ್ಕರ್ ಮತ್ತು ಅರವಿಂದ ಡಿಸಿಲ್ವ ಅವರ ಕಲಾತ್ಮಕವಾದ ಮತ್ತು ಆಕ್ರಮಣಶೀಲವಾದ ಕ್ರಿಕೆಟ್ ಆಟದ ಬಗ್ಗೆ ನಮ್ಮಿಂದ ಹೊರಹೊಮ್ಮಿದ ಇಬ್ಬಗೆಯ ಪ್ರತಿಕ್ರಿಯೆಗಳಿಗೆ ಕಾರಣವೇನೆಂದರೆ…ನಾವು ಇಂಡಿಯಾ ದೇಶದವರಾಗಿರುವುದು. ಒಂದುವೇಳೆ ನಾವು ಶ್ರೀಲಂಕಾದವರಾಗಿದ್ದರೆ…ಆಗ ತೆಂಡೂಲ್ಕರ್ ಆಟವನ್ನು ನೋಡುತ್ತಾ ಅಸಹನೆಯಿಂದ ಒದ್ದಾಡುತ್ತಿದ್ದೆವು.

ಇಂತಹ ಸನ್ನಿವೇಶಗಳಲ್ಲಿ ಮಾನವತಾವಾದಿ ಚಿಂತಕರು ಹೇಳಿರುವ “ರಾಶ್ಟ್ರೀಯತೆ ಎಂಬ ಪರಿಕಲ್ಪನೆಯು ಮನುಕುಲದ ಸಹಬಾಳ್ವೆಗೆ ಒಂದು ಶಾಪವಾಗಿದೆ” ಎಂಬ ಮಾತುಗಳು ನೆನಪಾಗುತ್ತವೆ. “ನನ್ನದು ಈ ನಾಡು… ನಮ್ಮದು ಈ ದೇಶ” ಎಂಬ ಪರಿಕಲ್ಪನೆಯು ಮಾನವ ಸಮುದಾಯಗಳನ್ನು ಒಂದೊಂದು ಪ್ರಾದೇಶಿಕ ಎಲ್ಲೆಗಳ ಒಳಗೆ ಸೀಮಿತಗೊಳಿಸುವುದರ ಜತೆಗೆ , ಮಾನಸಿಕವಾಗಿ “ನಾವು ಬೇರೆ/ಅವರು ಬೇರೆ” ಎಂಬ ಅನಿಸಿಕೆಯನ್ನು ಮೂಡಿಸಿ, ತನ್ನವರನ್ನು ತೀವ್ರವಾಗಿ ಮೋಹಿಸುವ, ಹೊರಗಿನವರನ್ನು ಹಗೆತನ ಇಲ್ಲವೇ ತಿರಸ್ಕಾರದಿಂದ ಕಡೆಗಣಿಸುವ ನಡೆನುಡಿಗಳಿಗೆ ಪ್ರೇರಣೆಯನ್ನು ನೀಡುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ, ನಾಲ್ಕು ವರುಶಗಳಿಗೊಮ್ಮೆ ನಡೆಯುವ ವಿಶ್ವಮಟ್ಟದ ಪುಟ್ ಬಾಲ್ ಪಂದ್ಯಗಳಲ್ಲಿ ತಮ್ಮ ತಮ್ಮ ದೇಶದ ಪಂಗಡಗಳು ಗೆದ್ದಾಗ/ಸೋತಾಗ, ಆಯಾಯ ದೇಶದ ಜನಸಮೂಹದಲ್ಲಿ ಸಿಡಿದೇಳುವ ಆಕ್ರೋಶ ಮತ್ತು ಹಿಂಸಾಚಾರದ ನಡೆನುಡಿಗಳು ರಾಶ್ಟ್ರೀಯತೆಯ ಪರಿಕಲ್ಪನೆಯಿಂದ ಉಂಟಾಗಿರುವ ಮಾನಸಿಕ ತಳಮಳವನ್ನು ಎತ್ತಿತೋರಿಸುತ್ತವೆ. ಆಟದ ಗುಣಮಟ್ಟಕ್ಕಿಂತ, ಜನರಿಗೆ ತಮ್ಮ ತಮ್ಮ ದೇಶದ ತಂಡಕ್ಕೆ ದೊರೆಯುವ ಗೆಲುವು ದೊಡ್ಡದಾಗುತ್ತದೆ.

‘ರಾಶ್ಟ್ರೀಯತೆ‘ ಎಂಬ ಪರಿಕಲ್ಪನೆಯು ಮನುಕುಲದ ಸಾವುನೋವುಗಳಿಗೆ ಎಡೆಕೊಡುವ ಸಮರಗಳಿಗೆ ಎಂದಿನಿಂದಲೂ ಕಾರಣವಾಗಿದೆ. ಇದರ ಜತೆಜತೆಗೆ ಜಗತ್ತಿನ ಉದ್ದಗಲಕ್ಕೂ ಮಾನವ ಸಮುದಾಯಗಳ ಸಾಮಾಜಿಕ ವ್ಯವಹಾರದಲ್ಲಿ ಹಾಸುಹೊಕ್ಕಾಗಿರುವ ಜಾತಿ-ಮತ-ದೇವರುಗಳ ನೂರೆಂಟು ಬಗೆಯ ಆಚರಣೆಗಳು ಮಾನವರನ್ನುಪರಸ್ಪರ ಮೇಲರಿಮೆ-ಕೀಳರಿಮೆಯ ಒಳಗುದಿಗೆ ಒಳಗಾಗಿಸಿ, ಬೇರೆ ಬೇರೆ ಗುಂಪುಗಳನ್ನಾಗಿ ಒಡೆದಿವೆ. ಈ ಎಲ್ಲಾ ಸಂಗತಿಗಳಿಂದಾಗಿ ನಮ್ಮವರಲ್ಲದ ವ್ಯಕ್ತಿಗಳ ಯಾವುದೇ ಒಳ್ಳೆಯ ಗುಣಗಳನ್ನು ಮತ್ತು ಉತ್ತಮ ಕೆಲಸಗಳನ್ನು ಸಹನೆಯಿಂದ ನೋಡದ ಹಾಗೂ ಒಲವಿನಿಂದ ಮೆಚ್ಚದ ಸಿನಿಕತನವು ನಮ್ಮೆಲ್ಲರ ಮನದಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಆಳವಾಗಿ ಬೇರೂರಿದೆ.

(ಚಿತ್ರ: www.espncricinfo.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks