ಸಕಲೇಶ ಮಾದರಸನ ವಚನಗಳ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಸಕಲೇಶ ಮಾದರಸ
ಕಾಲ: ಕ್ರಿ.ಶ.1150
ದೊರೆತಿರುವ ವಚನಗಳು: 134
ವಚನಗಳ ಅಂಕಿತನಾಮ: ಸಕಲೇಶ್ವರದೇವ/ಸಕಳೇಶ್ವರದೇವ

=================================================

ಕಂಡುದ ನುಡಿದಡೆ ಕಡುಪಾಪಿಯೆಂಬರು
ಸುಮ್ಮನಿದ್ದಡೆ ಮುಸುಕುರ್ಮಿಯೆಂಬರು
ಎನಲುಬಾರದು ಎನದಿರಲುಬಾರದು
ಸಟೆ ಕುಹಕ ಪ್ರಪಂಚಿಗಲ್ಲದೆ ಭಜಿಸರು
ಸಕಲೇಶ್ವರದೇವಾ ನಿಮ್ಮಾಣೆ

ಸುಳ್ಳು/ತಟವಟ/ಮೋಸ/ವಂಚನೆಗಳಿಂದ ಜನರನ್ನು ಮರುಳುಮಾಡುವ ವ್ಯಕ್ತಿಗೆ ನಮ್ಮ ಕಣ್ಣ ಮುಂದಿನ ಸಮಾಜದಲ್ಲಿ ದೊರಕುವ ಜನಮನ್ನಣೆಯು ನೇರವಾದ ನಡೆನುಡಿಯುಳ್ಳ ಸತ್ಯವಂತರಿಗೆ/ದಿಟವಂತರಿಗೆ/ನಿಜವಂತರಿಗೆ ದೊರೆಯುವುದಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ಕಾಣ್/ಕಾಣು=ನೋಡು/ಅರಿತುಕೊ/ತಿಳಿದಿಕೊ; ಕಂಡುದ=ಕಂಡಿದ್ದನ್ನು/ನೋಡಿದ್ದನ್ನು/ತಿಳಿದಿರುವುದನ್ನು/ಗೊತ್ತಿರುವುದನ್ನು; ನುಡಿ=ಹೇಳು/ಮಾತನಾಡು; ನುಡಿದಡೆ=ಹೇಳಿದರೆ; ಕಂಡುದ ನುಡಿದಡೆ=ವ್ಯಕ್ತಿಯು ತಾನು ಕಂಡಿರುವ/ತಿಳಿದಿರುವ/ತನಗೆ ಗೊತ್ತಿರುವ ಸತ್ಯ/ದಿಟ/ವಾಸ್ತವದ ಸಂಗತಿಯನ್ನು ಹೇಳಿದರೆ; ಕಡು+ಪಾಪಿ+ಎಂಬರು; ಕಡು=ಹೆಚ್ಚಾಗಿ/ಅತಿಯಾಗಿ; ಪಾಪ=ಕೆಟ್ಟ ಕೆಲಸ/ನೀಚ ಕಾರ‍್ಯ/ತನಗೆ ಮತ್ತು ಇತರರಿಗೆ ಹಾನಿಯನ್ನು/ಕೇಡನ್ನು/ನೋವನ್ನು ಉಂಟುಮಾಡಿಕೊಳ್ಳುವ ನಡೆನುಡಿ; ಪಾಪಿ=ಕೆಟ್ಟವನು/ನೀಚ; ಕಡುಪಾಪಿ=ಕೆಟ್ಟ ನಡೆನುಡಿಗಳಲ್ಲೇ ತೊಡಗಿದವನು/ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವವನು; ಎಂಬರು=ಎನ್ನುತ್ತಾರೆ/ಎಂದು ಕರೆಯುತ್ತಾರೆ;

ಸುಮ್ಮನೆ+ಇದ್ದಡೆ; ಸುಮ್ಮನೆ=ಮಾತನಾಡದಿರುವುದು ಮತ್ತು ಏನೊಂದು/ಯಾವೊಂದು ಬಗೆಯ ಪ್ರತಿಕ್ರಿಯೆಯನ್ನು ತೋರಿಸದಿರುವುದು; ಇದ್ದಡೆ=ಇದ್ದರೆ; ಮುಸುಕುರ್ಮಿ+ಎಂಬರು; ಮುಸುಕುರ್ಮಿ/ಮುಸುಕರ್ಮಿ=ಇತರರ ಕಣ್ಣಿಗೆ ಕಾಣದಂತೆ ಇಲ್ಲವೇ ತಿಳಿಯದಂತೆ ಮರೆಯಲ್ಲಿ/ಒಳಗೊಳಗೆ ಕೆಟ್ಟಕೆಲಸಗಳಲ್ಲಿ ತೊಡಗಿದವನು/ಗುಮ್ಮನಗುಸುಕ/ತನ್ನ ಮನದ ಒಳಮಿಡಿತವನ್ನಾಗಲಿ/ಅನಿಸಿಕೆಯನ್ನಾಗಲಿ ಇತರರ ಮುಂದೆ ಹೇಳಿಕೊಳ್ಳದೆ ಯಾರೊಂದಿಗೂ ಬೆರೆಯದಿರುವವನು;

ಎನ್+ಅಲ್+ಬಾರದು; ಎನ್+ಅಲು=ಎನಲು; ಎನ್=ಹೇಳು/ನುಡಿ/ಮಾತನಾಡು; ಎನಲು=ಹೇಳಲು/ನುಡಿಯಲು/ಮಾತನಾಡಲು; ಬಾರದು=ಆಗುವುದಿಲ್ಲ; ಎನದೆ+ಇರಲು+ಬಾರದು; ಎನದೆ=ಹೇಳದೆ/ನುಡಿಯದೆ/ಮಾತನಾಡದೆ; ಎನಲುಬಾರದು=ಹೇಳಲಾಗುವುದಿಲ್ಲ; ಎನದಿರಲುಬಾರದು=ಹೇಳದೇ ಇರಲು ಆಗದು;

ಎನಲುಬಾರದು ಎನದಿರಲುಬಾರದು=ವ್ಯಕ್ತಿಯು ತನಗೆ ತಿಳಿದಿರುವ/ತಾನು ಕಂಡಿರುವ ಸಂಗತಿಯನ್ನು ನೇರವಾಗಿ ಹೇಳುವಂತೆಯೂ ಇಲ್ಲ, ಹೇಳದೆ ಇರುವಂತೆಯೂ ಇಲ್ಲ. ವ್ಯಕ್ತಿಯು ಹೇಗೆ ನಡೆದುಕೊಂಡರು ಸುತ್ತಮುತ್ತಲಿನ ಜನರಲ್ಲಿ ಕೆಲವರಾದರೂ ಒಂದಲ್ಲ ಒಂದು ಬಗೆಯ ತಪ್ಪನ್ನು ಕಂಡುಹಿಡಿದು ತೆಗಳುತ್ತಾರೆ/ನಿಂದಿಸುತ್ತಾರೆ/ಬಯ್ಯುತ್ತಾರೆ ಎಂಬ ತಿರುಳಿನಲ್ಲಿ ಬಳಕೆಯಾಗಿರುವ ಪದಕಂತೆ;

ಸಟೆ=ಸುಳ್ಳು/ಹುಸಿ/ಇರುವುದನ್ನು ಇಲ್ಲವೆಂದು, ಇಲ್ಲದಿರುವುದನ್ನು ಇದೆಯೆಂದು ಹೇಳುವುದು; ಕುಹಕ=ಮೋಸ/ಕಪಟ/ವಂಚನೆ; ಪ್ರಪಂಚಿ+ಗೆ+ಅಲ್ಲದೆ; ಪ್ರಪಂಚಿ=ನಿತ್ಯಜೀವನದ ವ್ಯವಹಾರಗಳಲ್ಲಿ ಕುಶಲನಾದವನು/ತನ್ನ ಹಿತಕ್ಕಾಗಿ ಯಾವುದೇ ಬಗೆಯ ಕೆಲಸವನ್ನು ಮಾಡಲು ಹಿಂಜರಿಯದ ಮತ್ತು ಯಾರನ್ನು ಬೇಕಾದರೂ ತುಳಿಯುವ/ಹಾಳುಮಾಡುವ ಕೆಟ್ಟ ನಡೆನುಡಿಗಳನ್ನು ಹೊಂದಿರುವವನು; ಅಲ್ಲದೆ=ಮಾತ್ರ/ಕೇವಲ; ಭಜಿಸು=ಅನುಸರಿಸು/ಆಶ್ರಯಿಸು/ಪೂಜಿಸು/ಹೊಗಳು/ಕೊಂಡಾಡು;

ಸಟೆ ಕುಹಕ ಪ್ರಪಂಚಿಗಲ್ಲದೆ ಭಜಿಸರು=ಸುಳ್ಳುಗಾರ/ಕಪಟಿ/ವಂಚಕ/ಕ್ರೂರಿ/ಮೋಸಗಾರನನ್ನು ಜನಸಮುದಾಯದಲ್ಲಿ ಹೆಚ್ಚಿನ ಮಂದಿ ಮೆಚ್ಚಿಕೊಂಡು ಕೊಂಡಾಡುತ್ತಾರೆಯೇ ಹೊರತು ಒಳ್ಳೆಯ ನಡೆನುಡಿಯುಳ್ಳವರನ್ನು ಒಂದಲ್ಲ ಒಂದು ಬಗೆಯ ಕೊಂಕುನುಡಿಗಳ ಮೂಲಕ ತೆಗಳುತ್ತಾರೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ;

ಸಕಲೇಶ್ವರದೇವ=ಶಿವ/ದೇವರು/ಸಕಲೇಶ ಮಾದರಸನ ವಚನಗಳಲ್ಲಿ ಕಂಡುಬರುವ ಅಂಕಿತನಾಮ; ನಿಮ್ಮ+ಆಣೆ; ಆಣೆ=ವ್ಯಕ್ತಿಯು ತಾನು ಹೇಳುತ್ತಿರುವ ಸಂಗತಿಯು ನಿಜ/ದಿಟ/ಸತ್ಯವಾದುದೆಂದು ಪ್ರತಿಪಾದಿಸಲು ದೇವರನ್ನು/ತನ್ನ ಮಯ್ಯಿನ ಅಂಗಾಂಗಗಳನ್ನು/ಪವಿತ್ರವೆಂದು ನಂಬಿರುವ ವಸ್ತುಗಳನ್ನು/ತನ್ನ ಒಲವಿಗೆ ಪಾತ್ರರಾಗಿರುವ ವ್ಯಕ್ತಿಗಳ ಹೆಸರನ್ನು ಹೇಳುತ್ತಾ ಮಾತನಾಡುವ ಬಗೆಯನ್ನು ಆಣೆಯಿಡುವುದು ಎಂದು ಕರೆಯುತ್ತಾರೆ; ನಿಮ್ಮ ಆಣೆ=ವಚನಕಾರನು ತಾನು ಹೇಳುತ್ತಿರುವ ನುಡಿಗಳು ನಿಜವೆಂದು ತಿಳಿಸಲು ಸಕಲೇಶ್ವರದೇವರನ್ನೇ ಹೆಸರಿಸಿದ್ದಾನೆ.)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: