ನುಡಿಗಳ ನಡುವಿನ ನಂಟಸ್ತಿಕೆ
ನುಡಿಯರಿಮೆಯ ಇಣುಕುನೋಟ – 18
ಜನರ ನಡುವೆ ಕಾಣಿಸುವ ಹಾಗೆ, ಅವರಾಡುವ ನುಡಿಗಳ ನಡುವೆಯೂ ‘ನಂಟಸ್ತಿಕೆ’ಯನ್ನು ಕಾಣಲು ಸಾದ್ಯವಿದೆ. ಕೆಲವು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆಯೆಂದು ಹೇಳಬಹುದು, ಮತ್ತು ಬೇರೆ ಕೆಲವು ನುಡಿಗಳ ನಡುವೆ ದೂರದ ನಂಟಸ್ತಿಕೆ ಮಾತ್ರ ಇದೆಯೆಂದು ಹೇಳಬಹುದು. ಆದರೆ, ಇನ್ನು ಕೆಲವು ನುಡಿಗಳ ನಡುವೆ ಯಾವ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳಲು ಬರುವುದಿಲ್ಲ. ಹಾಗೆ ಹೇಳಲು ಯಾವ ಆದಾರವೂ ದೊರಕದಿರುವುದೇ ಇದಕ್ಕೆ ಕಾರಣ.
ಎತ್ತುಗೆಗಾಗಿ, ಕನ್ನಡ ಮತ್ತು ತಮಿಳು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಕನ್ನಡ ಮತ್ತು ತುಳು ನುಡಿಗಳ ನಡುವೆ ಇದಕ್ಕಿಂತ ಸ್ವಲ್ಪ ದೂರದ ನಂಟಸ್ತಿಕೆಯಿದೆ. ಇದೇ ರೀತಿಯಲ್ಲಿ, ಹಿಂದಿ ಮತ್ತು ಮರಾಟಿ ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಹಿಂದಿ ಮತ್ತು ಇಂಗ್ಲಿಶ್ ನುಡಿಗಳ ನಡುವೆ ದೂರದ ನಂಟಸ್ತಿಕೆಯಿದೆ. ಆದರೆ ಕನ್ನಡ ಮತ್ತು ಹಿಂದಿ ನುಡಿಗಳ ನಡುವೆ, ಇಲ್ಲವೇ ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವೆ, ಹತ್ತಿರದ್ದಾಗಲಿ ದೂರದ್ದಾಗಲಿ ಯಾವುದೇ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳುವುದಕ್ಕೆ ಯಾವ ಆದಾರವೂ ದೊರಕುವುದಿಲ್ಲ.
ನುಡಿಗಳ ನಡುವಿನ ನಂಟಸ್ತಿಕೆಯನ್ನು ಜನರ ನಡುವಿನ ನಂಟಸ್ತಿಕೆಯ ಹಾಗೆ ಅವುಗಳ ಹುಟ್ಟು ಮತ್ತು ಬೆಳವಣಿಗೆಗಳ ಆದಾರದ ಮೇಲೆ ಕಲ್ಪಿಸಿಕೊಳ್ಳಲಾಗಿದೆ. ಆದರೆ, ಜನರ ಹುಟ್ಟಿಗೂ ನುಡಿಗಳ ಹುಟ್ಟಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಎತ್ತುಗೆಗಾಗಿ, ಜನರಲ್ಲಿ ಹೆಣ್ಣು-ಗಂಡುಗಳ ಕೂಡಿಕೆಯಿಂದ ಮಗು ಹುಟ್ಟುತ್ತದೆ; ಆದರೆ ನುಡಿಗಳಲ್ಲಿ ಆ ರೀತಿ ಎರಡು ನುಡಿಗಳ ಕೂಡಿಕೆಯಿಂದ ಮೂರನೆಯ ನುಡಿ ಹುಟ್ಟಿಕೊಳ್ಳುವುದಿಲ್ಲ; ಒಂದು ನುಡಿಯಿದ್ದದ್ದು ಇನ್ನೊಂದು ನುಡಿಯಾಗಿ ಬದಲಾಗುತ್ತದೆ, ಇಲ್ಲವೇ ಎರಡು ನುಡಿಗಳಾಗಿ ಒಡೆದುಕೊಳ್ಳುತ್ತದೆ.
ಎತ್ತುಗೆಗಾಗಿ, ಸಂಸ್ಕ್ರುತ ನುಡಿ ಇವತ್ತಿನ ಮರಾಟಿ ನುಡಿಯಾಗಿ ಬದಲಾಗಿದೆಯೆಂದು ಹೇಳಬಹುದು; ಇಲ್ಲವೇ ಅದೇ ನುಡಿ ಮರಾಟಿ, ಕೊಂಕಣಿ, ಹಿಂದಿ, ಗುಜರಾತಿ, ಪಂಜಾಬಿ, ಬಂಗಾಲಿ ಮೊದಲಾದ ಇವತ್ತಿನ ಹಲವು ನುಡಿಗಳಾಗಿ ಒಡೆದುಕೊಂಡಿದೆಯೆಂದೂ ಹೇಳಬಹುದು. ಆದರೆ, ಇದೇ ರೀತಿಯಲ್ಲಿ ಸಂಸ್ಕ್ರುತ ನುಡಿ ಕನ್ನಡ ನುಡಿಯಾಗಿ ಬದಲಾಗಿದೆಯೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಅವುಗಳ ಪದಗಳಲ್ಲಿ ಮತ್ತು ವ್ಯಾಕರಣ ನಿಯಮಗಳಲ್ಲಿ ಹಲವು ಬುಡಕಟ್ಟಿನ ವ್ಯತ್ಯಾಸಗಳಿವೆ. ಈ ಎಲ್ಲಾ ವ್ಯತ್ಯಾಸಗಳೂ ಹೇಗೆ ಉಂಟಾಗಿವೆ ಎಂಬುದನ್ನು ವಿವರಿಸಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ.
ಇಂತಹ ವಿವರಿಸಲು ಸಾದ್ಯವಾಗದ ವ್ಯತ್ಯಾಸಗಳಿರುವ ಕಾರಣ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳನ್ನು ಎರಡು ತೀರ ಬೇರಾಗಿರುವ ಮೂಲನುಡಿಗಳಿಂದ ಬೆಳೆದು ಬಂದಿರುವವುಗಳೆಂಬುದಾಗಿ ಪರಿಗಣಿಸಬೇಕಾಗಿದೆ. ಸಂಸ್ಕ್ರುತ ‘ಇಂಡೋ-ಆರ‍್ಯನ್’ ಎಂಬ ಹೆಸರಿನ ಮೂಲ ನುಡಿಯಿಂದ, ಮತ್ತು ಕನ್ನಡ ಅದಕ್ಕಿಂತ ತೀರ ಬೇರಾಗಿರುವ ‘ದ್ರಾವಿಡ’ ಎಂಬ ಹೆಸರಿನ ಮೂಲ ನುಡಿಯಿಂದ ಬೆಳೆದು ಬಂದಿದೆಯೆಂಬುದಾಗಿ ಇವತ್ತು ಕಲ್ಪಿಸಿಕೊಳ್ಳಬೇಕಾಗಿದೆ.
ನುಡಿಗಳನ್ನು ಈ ರೀತಿ ಬೇರೆ ಬೇರೆ ನುಡಿಕುಟುಂಬಗಳಲ್ಲಿ ಇರಿಸಿ ಹೇಳಲು ಮುಕ್ಯವಾಗಿ ಅವುಗಳ ಚರಿತ್ರೆ ಆದಾರವಾಗಿರುತ್ತದೆ. ಒಂದು ನುಡಿಯನ್ನಾಡುವ ಜನ ದೂರ ದೂರದಲ್ಲಿರುವ ಊರುಗಳಿಗೆ ಹೋಗಿ ನೆಲೆಸಿದಾಗ, ಅವರೊಳಗಿನ ಸಂಪರ‍್ಕ ಕಡಿಮೆಯಾಗುತ್ತಾ ಹೋಗುತ್ತದೆ, ಮತ್ತು ಇದರಿಂದಾಗಿ, ಅವರು ಬಳಸುವ ನುಡಿಯಲ್ಲಿ ಬದಲಾವಣೆಗಳು ಒಂದೇ ದಿಕ್ಕಿನಲ್ಲಿ ನಡೆಯದೆ ಬೇರೆ ಬೇರೆ ದಿಕ್ಕುಗಳಲ್ಲಿ ನಡೆಯತೊಡಗುತ್ತವೆ.
ಎತ್ತುಗೆಗಾಗಿ, ಕನ್ನಡ ನುಡಿಯನ್ನಾಡುವ ಜನ ಬಡಗು ಕರ‍್ನಾಟಕ, ತೆಂಕು ಕರ‍್ನಾಟಕ ಮತ್ತು ಕರಾವಳಿ ಎಂಬ ಮೂರು ಮುಕ್ಯ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇವರಾಡುವ ನುಡಿಯೂ ಬಡಗು, ತೆಂಕು ಮತ್ತು ಕರಾವಳಿ ಎಂಬ ಮೂರು ಮುಕ್ಯ ಒಳನುಡಿಗಳಾಗಿ ವ್ಯತ್ಯಾಸಗಳನ್ನು ತೋರಿಸುತ್ತದೆ. ಈ ಒಳನುಡಿಗಳ ನಡುವೆ ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಎಂಬುದು ಈ ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ ಇವರ ನಡುವೆ ಎಂತಹ ಸಂಪರ‍್ಕ ಸಾದ್ಯವಿತ್ತು ಎಂಬುದರ ಮೇಲೆ ಅವಲಂಬಿಸಿದೆ.
ನುಡಿಗಳೆಲ್ಲ ಈ ರೀತಿ ಅವನ್ನಾಡುವ ಜನರ ನಡುವಿರುವ ಸಂಪರ‍್ಕ ಕಡಿಮೆಯಾದಾಗ ಬೇರೆ ಬೇರೆ ಒಳನುಡಿಗಳಾಗಿ ಒಡೆದುಕೊಳ್ಳುತ್ತವೆ, ಮತ್ತು ಆಮೇಲೆ ಅವೇ ಒಳನುಡಿಗಳು ಸ್ವತಂತ್ರ ನುಡಿಗಳಾಗಿ ಬೆಳೆಯುತ್ತವೆ ಎಂಬ ಈ ಅಬಿಪ್ರಾಯದ ಮೇಲೆ ನುಡಿಕುಟುಂಬಗಳ ಕಲ್ಪನೆಯನ್ನು ನಿಲ್ಲಿಸಲಾಗಿದೆ. ಹಿಂದೆ ಒಂದು ಕಾಲದಲ್ಲಿ ಕೆಲವೇ ಕೆಲವು ಮೂಲ ನುಡಿಗಳಿದ್ದಿರಬೇಕು, ಮತ್ತು ಈ ಮೂಲ ನುಡಿಗಳು ಮೇಲೆ ಸೂಚಿಸಿದ ಹಾಗೆ ಕವಲೊಡೆದು ಬೇರೆ ಬೇರೆ ನುಡಿಗಳಾದುದರಿಂದಾಗಿ, ಇವತ್ತು ಸಾವಿರಾರು ನುಡಿಗಳು ಬಳಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ ಎಂಬುದೇ ಈ ಕಲ್ಪನೆ.
ಈ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ ಇವತ್ತು ಬಳಕೆಯಲ್ಲಿರುವ ಸಾವಿರಾರು ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಪ್ರಯತ್ನ ನಡೆಯುತ್ತಿದೆ. ಎಂದರೆ, ಈ ಸಾವಿರಾರು ನುಡಿಗಳು ಹದಿನಯ್ದಿಪ್ಪತ್ತು ಮೂಲ ನುಡಿಗಳಿಂದ ಅವುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾಗುವುದರ ಮೂಲಕ ಹೇಗೆ ಬೆಳೆದು ಬಂದಿರಬೇಕು ಎಂಬುದನ್ನು ತೋರಿಸಿ ಕೊಡುವ ಪ್ರಯತ್ನ ನಡೆಯುತ್ತಿದೆ.
ಇವತ್ತು ಬೇರೆ ಬೇರಾಗಿ ಕಾಣಿಸುವ ಎರಡು ನುಡಿಗಳು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ನಾವು ತೋರಿಸಿಕೊಡಬೇಕಿದ್ದಲ್ಲಿ, (ಎಂದರೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ವಾದಿಸಬೇಕಿದ್ದಲ್ಲಿ) ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳೆಲ್ಲ ಮೂಲ ನುಡಿಯೊಂದರಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಬೇಕು. ಎಂದರೆ, ಆ ಮೂಲ ನುಡಿಯನ್ನಾಡುವ ಜನರು ದೂರದ ಎರಡು ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ, ಅವರ ಮಾತಿನಲ್ಲಿ ಬದಲಾವಣೆಗಳು ಎರಡು ಬೇರೆ ಬೇರೆ ದಿಕ್ಕುಗಳಲ್ಲಿ ನಡೆದಿರಬೇಕು, ಮತ್ತು ಒಂದು ಪ್ರದೇಶದಲ್ಲಿ ನಡೆದ ಬದಲಾವಣೆಗಳು ಇನ್ನೊಂದು ಪ್ರದೇಶದಲ್ಲಿ ನಡೆಯದಿದ್ದುದೇ ಆ ಎರಡು ಪ್ರದೇಶಗಳ ಜನರ ಮಾತುಗಳ (ಎಂದರೆ ನುಡಿಗಳ) ನಡುವೆ ಇವತ್ತು ಕಾಣಿಸುವ ವ್ಯತ್ಯಾಸಗಳಿಗೆ ಮೂಲ ಕಾರಣ ಎಂಬುದನ್ನು ತೋರಿಸಿಕೊಡಬೇಕು.
ಹಾಗಾಗಿ, ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಕೆಲಸದಲ್ಲಿ ಅವುಗಳ ನಡುವೆ ಕಾಣಿಸುವ ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳಿಗೇನೇ ಹೆಚ್ಚಿನ ಮಹತ್ವವಿದೆ. ಎರಡು ನುಡಿಗಳ ನಡುವೆ ಸ್ವಲ್ಪವೂ ಹೋಲಿಕೆ ಕಾಣಿಸದಿದ್ದರೂ, ಅವುಗಳ ನಡುವಿರುವ ವ್ಯತ್ಯಾಸಗಳೆಲ್ಲ ಆ ಎರಡು ನುಡಿಗಳ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ಮೇಲೆ ಸೂಚಿಸಿದ ಹಾಗೆ ತೋರಿಸಿಕೊಟ್ಟಲ್ಲಿ, ಅವನ್ನು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ಹೇಳಲು ಬರುತ್ತದೆ. ಇದಕ್ಕೆ ಬದಲು, ಎರಡು ನುಡಿಗಳ ನಡುವೆ ಎಶ್ಟೇ ಹೋಲಿಕೆಯಿರಲಿ, ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಒಂದು ಮೂಲ ನುಡಿಯಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಲು ಬರುವುದಿಲ್ಲವಾದಲ್ಲಿ, ಅವು ಒಂದೇ ನುಡಿ ಕುಟುಂಬಕ್ಕೆ ಸೇರಿದವುಗಳೆಂದು ವಾದಿಸಲು ಬರುವುದಿಲ್ಲ.
ಎರಡು ನುಡಿಗಳ ನಡುವೆ ಹೋಲಿಕೆಗಳು ಕಾಣಿಸಿಕೊಳ್ಳಲು ಬೇರೆ ಕಾರಣಗಳೂ ಇರಬಲ್ಲುವು: ಎತ್ತುಗೆಗಾಗಿ, ಅವುಗಳಲ್ಲಿ ಒಂದು ಇನ್ನೊಂದರಿಂದ ಹಲವಾರು ಪದಗಳನ್ನು ಎರವಲಾಗಿ ಪಡೆದಿದೆಯಾದರೆ, ಅವೆರಡರ ನಡುವೆ ತುಂಬಾ ಹೋಲಿಕೆಯಿದೆಯೆಂದು ಅನಿಸಬಹುದು. ಇದಲ್ಲದೆ, ಆಕಸ್ಮಿಕವಾಗಿಯೂ ಎರಡು ನುಡಿಗಳಲ್ಲಿ ಬಳಕೆಯಾಗುವ ಪದಗಳ ನಡುವೆ ಹೋಲಿಕೆಗಳು ಕಾಣಿಸಬಹುದು. ನುಡಿಗಳನ್ನು ಬಳಸುವ, ಬೆಳೆಸುವ ಮತ್ತು ಬದಲಾಯಿಸುವವರೆಲ್ಲರೂ ಮನುಶ್ಯರೇ ಆಗಿರುವುದರಿಂದ, ಇಂತಹ ಆಕಸ್ಮಿಕ ಹೋಲಿಕೆಗಳು ಕಾಣಿಸಿಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ.
ಹಾಗಾಗಿ, ಎರಡು ನುಡಿಗಳ ನಡುವೆ ಕಾಣಿಸುವ ಹೋಲಿಕೆಗಳ ಆದಾರದ ಮೇಲೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಲು ಬರುವುದಿಲ್ಲ. ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಯಾವ ರೀತಿಯಲ್ಲಿ ಮೂಡಿಬಂದಿವೆ ಎಂಬುದನ್ನು ಮೇಲೆ ಸೂಚಿಸಿದ ಹಾಗೆ ವಿವರಿಸಲು ಸಾದ್ಯವಾಗುವುದಿದ್ದಲ್ಲಿ ಮಾತ್ರ ಅವನ್ನು ಒಂದೇ ಕುಟುಂಬದ ನುಡಿಗಳೆಂದು, ಎಂದರೆ ಚಾರಿತ್ರಿಕವಾಗಿ ಅವು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ಪರಿಗಣಿಸಲು ಸಾದ್ಯವಾಗುತ್ತದೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
1 Response
[…] << ನುಡಿಯರಿಮೆಯ ಇಣುಕುನೋಟ – 18 […]