ನುಡಿಯರಿಮೆಯ ಸಂಶೋದನೆಗಳು ಕನ್ನಡವನ್ನು ಉಳಿಸಿ ಬೆಳೆಸುತ್ತವೆ
ಕ್ರುಶಿಕ ಕುಟುಂಬದ ಹಿನ್ನೆಲೆಯಿಂದ ಬಂದ ನಾನು ಹುಟ್ಟಿ ಬೆಳೆದಿದ್ದೆಲ್ಲ ಮಲೆನಾಡಿನಲ್ಲಿ, ಬೇರೆ ಬೇರೆ ಊರುಗಳನ್ನು ಮತ್ತು ದೇಶವನ್ನು ಸುತ್ತಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ವಿಶೇಶವಾಗಿ ಪೂರ್‍ಣಚಂದ್ರ ತೇಜಸ್ವಿಯವರ ಬರಹಗಳು ನನ್ನನ್ನು ತುಂಬಾ ಸೆಳೆದಿದ್ದವು. ಕನ್ನಡದ ಬಗ್ಗೆ ಒಲವಿತ್ತಾದರೂ ಕನ್ನಡ ನುಡಿಯರಿಯಮೆಯ ಬಗ್ಗೆ ನನಗೆ ತಿಳಿದಿದ್ದು ಕಡಿಮೆಯೇ ಆಗಿತ್ತು.
ಕೆಲ ವರ್‍ಶಗಳ ಹಿಂದೆ ಕನ್ನಡ ಪತ್ರಿಕೆಯೊಂದರಲ್ಲಿ ನುಡಿಯರಿಗ ಶಂಕರ ಬಟ್ಟರ ಬರಹವನ್ನು ಓದಿದ್ದೆ. ಅದರಲ್ಲಿ ಕನ್ನಡ ಬರಹವನ್ನು ಸರಿ ಪಡಿಸಬೇಕೆಂದು, ಕೆಲವು ಅಕ್ಶರಗಳನ್ನು ಕಯ್ಬಿಡಬೇಕೆಂದು ವಾದಿಸಿದ್ದರು. ಇದನ್ನು ಓದಿದಾಗ ನನಗೆ ಇದು ಕನ್ನಡದ ರೂಪವನ್ನು ಹಾಳು ಮಾಡುತ್ತದೆ ಎಂದು ಆತಂಕಕ್ಕೆ ಒಳಗಾಗಿದ್ದೆ. ಇದರ ಪ್ರಾಮುಕ್ಯತೆ ಅರ್‍ತವಾಗಿರಲಿಲ್ಲ. ಹಾಗಾಗಿಯೇ ಇದೊಂದು ಅವಶ್ಯಕತೆಯೇ ಇಲ್ಲದ ಕೆಲಸ ಎಂಬ ನಿಲುವು ತೆಳೆದಿದ್ದೆ. ಆದರೆ ಇದನ್ನು ಓದುವಾಗ ನನಗೆ ನುಡಿಯರಿಮೆ ಅನ್ನುವುದೊಂದಿದೆ, ನುಡಿಯೂ ಒಂದು ಬಗೆಯ ವಿಜ್ನಾನ ಅನ್ನುವುದರ ಬಗ್ಗೆ ಕಿಂಚಿತ್ತೂ ಅರಿವಿರಲಿಲ್ಲ. ಹಾಗಾಗಿಯೇ ನಾನು ವಯ್‍ಜ್ನಾನಿಕವಾಗಿ ಏನೂ ಯೋಚಿಸದೆ ಈಗ ಬಳಕೆಯಲ್ಲಿರುವ ಕನ್ನಡವು ನನಗೆ ಸಹಜವಾಗಿ ಸುಂದರವಾಗಿ ಕಾಣುತ್ತಿದ್ದುದರಿಂದ, ಅಲ್ಲಿ ಕೆಲವು ಅಕ್ಶರಗಳನ್ನು ಬಿಟ್ಟುಕೊಡುವುದು ಕನ್ನಡವನ್ನು ಹಾಳುಗೆಡವುತ್ತದೆ ಎಂಬ ಕಸಿವಿಸಿಯಶ್ಟೇ ನನಗೆ ಉಂಟಾಗಿತ್ತು.
ಆದರೆ ಇದು ನಂತರದ ದಿನಗಳಲ್ಲಿ ನನ್ನೊಳಗೆ ಹೆಚ್ಚಿನ ಕುತೂಹಲವನ್ನು ಹುಟ್ಟು ಹಾಕಿತು. ನಾನು ನನ್ನ ಶಾಲೆಯ ದಿನಗಳಲ್ಲಿ ಪಾಟ ಪುಸ್ತಕಗಳಲ್ಲಿ ಕಂಡು ಬರುತ್ತಿದ್ದ ಗಣಿತ ಹಾಗೂ ವಿಜ್ನಾನ ಪದಗಳೇಕೆ ಇಶ್ಟು ಕಶ್ಟವಾಗಿವೆ ಎಂದುಕೊಳ್ಳುತ್ತಿದ್ದೆ. ಗಣಿತ ಹಾಗೂ ವಿಜ್ನಾನದ ಪದಗಳು ಅತವಾ ಕಟ್ಟುವ ಹೊಸ ಪದಗಳೆಲ್ಲಾ ಸಂಸ್ಕ್ರುತ ಮೂಲದಿಂದಲೇ ಬರಬೇಕು ಎಂಬ ಬಾವನೆ ಹೆಚ್ಚಿನವರಲ್ಲಿ ಇದ್ದುದೇ ಇಂತಹ ರಾದ್ದಾಂತಕ್ಕೆ ಕಾರಣವಾಗಿರುವುದು ನನಗೆ ನಿದಾನಕ್ಕೆ ಅರಿವಾಯಿತು.
ಇನ್ನು ನನಗೆ ಬರೆಯುವಾಗ ಮಹಾಪ್ರಾಣ ಬಳಸಬೇಕೆ ಬೇಡವೇ ಎಂಬ ಗೊಂದಲವಂತೂ ಬಹಳವಾಗಿ ಕಾಡಿತ್ತು. ಆದರೆ ಇದಕ್ಕೆ ಉಲಿಯುವಿಕೆ ಮತ್ತು ಬರೆಯುವುದರ ನಡುವೆ ಇರುವ ವ್ಯತ್ಯಾಸವೇ ಇದಕ್ಕೆಲ್ಲ ಕಾರಣವೆಂಬ ಸತ್ಯ ಅರಿವಾದದ್ದು ತುಂಬ ತಡವಾಗಿ. ಇದರ ಬಗ್ಗೆ ಸಾಕಶ್ಟು ತಿಳಿದುಕೊಂಡಿದ್ದ ನನ್ನ ಕೆಲವು ಗೆಳೆಯರೊಡನೆ ಮಾತುಕತೆಯಾದಾಗ ಮತ್ತೂ ಮುಂದುವರೆದು ಶಂಕರ ಬಟ್ಟರ ‘ಕನ್ನಡ ಬರಹವನ್ನು ಸರಿ ಪಡಿಸೋಣ’, ‘ಮಾತು ಮತ್ತು ಬರಹದ ನಡುವಿನ ಗೊಂದಲ’ ಮೊದಲಾದ ಪುಸ್ತಕಗಳನ್ನು ಓದಿದ ನಂತರವೇ ಇದರ ಹಿಂದೆ ಆಗಿರುವ ಸಂಶೋದನೆಗಳು, ವಯ್‍ಜ್ನಾನಿಕ ಹಾಗೂ ಸಾಮಾಜಿಕ ಕಾರಣಗಳು ನನ್ನ ಅರಿವಿಗೆ ಬರಲಾರಂಬಿಸಿದವು. ಹಾಗಾಗಿಯೇ ‘ಉಲಿದಂತೆ ಬರೆ’ ಅನ್ನುವ ಬಟ್ಟರ ಮಾತುಗಳು ಅತ್ಯಂತ ಸಹಜ ಮತ್ತು ವಯ್‍ಜ್ನಾನಿಕ ಅನ್ನುವ ನಿಲುವಿಗೆ ಬಂದೆ.
ಆದರೆ ಈ ಗೊಂದಲ ಬೇರೆ ಬಾಶೆಗಳಲ್ಲೂ ಇತ್ತೇ, ಇಂತಹ ಸರ್‍ಜರಿಗೆ ಕನ್ನಡ ಮಾತ್ರ ಒಳಗಾಗಬೇಕೇಕೆ ಅನ್ನುವ ಪ್ರಶ್ನೆ ಮಾತ್ರ ನನ್ನಲ್ಲಿ ಹಾಗೇ ಇತ್ತು. ದಿನಗಳೆದಂತೆ ನುಡಿಯರಿಮೆ ಬಗ್ಗೆ ಹೆಚ್ಚೆಚ್ಚು ಓದಿಕೊಳ್ಳುವಂತೆ ನನ್ನನ್ನು ಹುರಿದುಂಬಿಸಿತು. ಬೇರೆ ಬೇರೆ ನುಡಿ ಸಮಾಜಗಳಲ್ಲಿ ಇಂತಹ ಸರ್‍ಜರಿಗಳು ನಡೆದಿರುವುದು ಹಾಗೂ ಅದು ಆ ನುಡಿಯನ್ನು ಹಾಳುಮಾಡದೆ ಅದನ್ನು ಇನ್ನಶ್ಟು ಬಲಗೊಳಿಸಿದೆ ಅನ್ನುವ ದಿಟವು ನನಗೆ ಮನದಟ್ಟಾಯಿತು. ಹಾಗಾಗಿಯೇ ಕನ್ನಡದಲ್ಲಿಯೂ ಸಹ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ನಡುವಿನ ಗೊಂದಲವನ್ನು ನಿವಾರಿಸಿಕೊಳ್ಳುವುದು, ಕೆಲವು ಅಕ್ಶರಗಳನ್ನು ಕಯ್ಬಿಡುವುದು, ಆಡುನುಡಿಯಲ್ಲೇ ಅರಿಮೆಯ ಪದಗಳನ್ನು ಕಟ್ಟಿಕೊಳ್ಳುವುದು ಮೊದಲಾದ ಕೆಲಸಗಳು ಸಹ ಕನ್ನಡವನ್ನು ಉಳಿಸುವ ಕೆಲಸವೇ ಹೊರತು ಅಳಿಸುವ ಕೆಲಸವಲ್ಲ ಎಂಬ ನಂಬಿಕೆ ಕಚಿತವಾಯಿತು.
(ಚಿತ್ರ ಸೆಲೆ: franchisebeacon.com)
ಇತ್ತೀಚಿನ ಅನಿಸಿಕೆಗಳು