ಗೊಂದಲದ ಗೂಡಿಂದ ಕನ್ನಡಕ್ಕೆ ಬಿಡುಗಡೆ
– ಸಂದೀಪ್ ಕಂಬಿ.
ಕನ್ನಡ ಲಿಪಿಯು ಓದಿದಂತೆ ಬರೆಯುವಂತಹುದು ಎಂದು ಮೊದಲ ಹಂತದ ಶಾಲೆಯ ಕಲಿಕೆಯಿಂದಲೇ ನಮಗೆ ಹೇಳಿ ಕೊಡಲಾಗುತ್ತದೆ. ಕನ್ನಡದ ಲಿಪಿಯನ್ನು ಇಂಗ್ಲೀಶಿನ ತೊಡಕು ತೊಡಕಾದ ಸ್ಪೆಲ್ಲಿಂಗ್ ಏರ್‍ಪಾಡಿಗೆ ಹೋಲಿಸಿದಾಗ ನನಗೆ ಇದು ನಿಜವೆನಿಸಿತ್ತು. ಆದರೂ ಇದರ ಬಗ್ಗೆ ನನಗೆ ಕೆಲವು ಅನುಮಾನಗಳು ಮತ್ತು ಗೊಂದಲಗಳು ಚಿಕ್ಕಂದಿನಲ್ಲೇ ಹುಟ್ಟಿಕೊಂಡಿದ್ದವು ಮತ್ತು ನನ್ನ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿರದ ಕಾರಣ ಇವು ಹಲವು ವರುಶಗಳು ನನ್ನ ಮನಸಿನಲ್ಲಿ ಹಾಗೆಯೇ ಉಳಿದುಕೊಂಡವು. ಮುಂದೆ ಕನ್ನಡವನ್ನು ಹೆಚ್ಚು ಕಲಿತಂತೆ ಇನ್ನೂ ಕೆಲವು ಗೊಂದಲಗಳು ಎದುರಾದವು, ಆದರೆ ಈ ಯಾವ ಗೊಂದಲಗಳನ್ನು ಬಗೆಹರಿಸುವವರು ಮಾತ್ರ ಸಿಗದಾದರು. ನನ್ನ ಈ ಗೊಂದಲಗಳ ಬಗ್ಗೆ ಕೆಳಗೆ ಕೊಂಚ ಬಿಡಿಸಿ ಹೇಳುತ್ತೇನೆ.
ಮನೆಯಲ್ಲಿ ಇಂತಹ ಕೆಲವು ಪದಗಳನ್ನು ದಿನ ಬಳಕೆಯಲ್ಲಿ ಕೇಳಿದ್ದೆ: ಸಮ್ಮಂದ (ಸಂಬಂದ), ಬೂಮಿ, ಅರ್‍ತ, ಕ್ರಿಶ್ಣ, ರುಶಿ ಮುಂತಾದುವು. ಆದರೆ ಶಾಲೆಯಲ್ಲಿ ಇವುಗಳನ್ನು ಬರೆಯುವುದು ಕಲಿತಾಗ (ಸಂಬಂಧ, ಭೂಮಿ, ಅರ್ಥ, ಕೃಷ್ಣ, ಋಷಿ) ನನಗೆ ಅಚ್ಚರಿಯಾಗಿತ್ತು. ಏಕೆ ಹೀಗೆ ಬರಹಕ್ಕೂ ಮಾತಿಗೂ ಬೇರೆತನವಿದೆ ಎಂದು ಯೋಚಿಸಿದಾಗ ಬರಹದಲ್ಲ್ಲಿಇರುವುದೇ ಸರಿಯಾದುದು ಮತ್ತು ನಮ್ಮ ಮಾತಲ್ಲಿ ನಾವು ಈ ಪದಗಳನ್ನು ತಪ್ಪು ತಪ್ಪಾಗಿ ಉಲಿಯುತ್ತೇವೆ ಎಂಬ ತೀರ್‍ಮಾನಕ್ಕೆ ಬಂದಿದ್ದೆ. ಈ ರೀತಿಯಲ್ಲಿ, ಉಲಿಯುವುದಕ್ಕಿಂತ ಬೇರೆಯದಾಗಿ ಬರೆಯುವ ಇಂತಹ ಪದಗಳನ್ನು ನಾನು ಮತ್ತು ನನ್ನ ಕೆಲವು ಗೆಳೆಯರು ಬೇಗನೆ ಕಲಿತುಕೊಂಡೆವಾದರೂ ನನ್ನ ಇನ್ನು ಕೆಲವು ಗೆಳೆಯರು ಇಂಗ್ಲೀಶ್ ಸ್ಪೆಲ್ಲಿಂಗುಗಳು ಕಲಿಯುವಾಗ ಹೆಣಗುವ ಹಾಗೆಯೇ ಹಲವು ವರುಶಗಳ ಕಾಲ ಹೆಣಗಿದರು. ಕೆಲವರಂತೂ ‘ಸರಿಯಾಗಿ’ ಬರೆಯುವುದನ್ನು ಕಲಿಯಲೇ ಇಲ್ಲ.
‘ಶ’ ಮತ್ತು ‘ಷ’, ಗಳ ನಡುವೆ ಇರುವ ಬೇರೆತನ ಏನು ಎಂಬುದು ನನ್ನ ದೊಡ್ಡ ಗೊಂದಲವಾಗಿತ್ತು. ಕೆಲವು ಕಲಿಸುಗರು ಮೊದಲನೆಯ ಶಂಕು ‘ಶ’ ಅನ್ನು ‘ಶೆ’ ರೀತಿಯಲ್ಲಿ ಉಲಿಯಬೇಕು ಎಂದು ಹೇಳಿಕೊಟ್ಟಿದ್ದರು. ಹಾಗಾದರೆ ಕಾಗುಣಿತದಲ್ಲಿ ‘ಶೆ’ ಬರುತ್ತದಲ್ಲ ಅದಕ್ಕೂ ಇದಕ್ಕೂ ಏನು ಬೇರೆತನ ಎಂದು ಕೇಳಿದರೆ ಅದಕ್ಕೆ ಅವರಲ್ಲಿ ಉತ್ತರವಿರುತ್ತಿರಲಿಲ್ಲ. ಇನ್ನು ಕೆಲವರು ‘ತಲೆಹರಟೆ ಮಾಡಬೇಡ, ಹೇಳಿದ್ದು ಕೇಳು’ ಎಂದು ಹೇಳಿ ಸುಮ್ಮನಾಗಿಸಿದ್ದರು. ಕೆಲವು ಕಲಿಸುಗರು ಎರಡನೇ ‘ಶ’ವನ್ನು ಮಹಾಪ್ರಾಣದ ರೀತಿಯಲ್ಲಿ ಹೆಚ್ಚು ಉಸಿರು ಹಾಕಿ ಉಲಿಯಬೇಕು ಎಂದು ಹೇಳಿ ತಪ್ಪಿಸಿಕೊಂಡಿದ್ದರು. ಮುಂದೆ ಕಾಲೇಜಿನಲ್ಲಿ ನನಗೆ ಒಬ್ಬ ಕಲಿಸುಗರು ಈ ಎರಡು ‘ಶ’ಗಳ ನಡುವೆ ಉಲಿಯುವ ಬೇರೆತನವನ್ನು ಸರಿಯಾಗಿ ತಿಳಿಸಿಕೊಟ್ಟರು. ಆದರೆ ಎರಡು ಬಗೆಯ ‘ಶ’ಗಳು ಕಿವಿಗೆ ಒಂದೇ ಬಗೆಯಲ್ಲಿ ಕೇಳಿಸುತ್ತವಲ್ಲವೇ, ವೆತ್ಯಾಸ ಏಕಿದೆ ಎಂದು ಕೇಳಿದಾಗ, ಒಂದು ಅಚ್ಚರಿಯ ವಿಶಯ ತಿಳಿಸಿದರು. ‘ಹವ್ದು ಕನ್ನಡದ ಮಾತಿನಲ್ಲಿ ಇವುಗಳ ಬೇರೆತನವಿಲ್ಲ, ಸಂಸ್ಕ್ರುತದಲ್ಲಿದೆ. ಆದ್ದರಿಂದ ಕನ್ನಡಕ್ಕೆ ಒಗ್ಗಿರುವ ಕಿವಿಗಳಿಗೆ ಇದು ತಿಳಿಯಾಗಿ ಗೊತ್ತಾಗದೇ ಇರಬಹುದು’ ಎಂದರು.
ಸಂಸ್ಕ್ರುತದದಿಂದ ಬಂದ ಸ್ಪೆಲ್ಲಿಂಗನ್ನೇ ಹೀಗೆ ಕನ್ನಡದಲ್ಲೂ ಏಕೆ ಪಾಲಿಸಬೇಕು ಎಂಬ ಕೇಳ್ವಿ ನನ್ನ ಮನದಲ್ಲಿ ಮೂಡಿತಾದರೂ ಆಗ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನೊಂದು ದೊಡ್ಡ ಗೊಂದಲ ಎಂದರೆ ತೆರೆಯುಲಿಗಳ (ಸ್ವರಗಳ) ಪಟ್ಟಿಯಲ್ಲಿದ್ದ ‘ಋ’. ಇದನ್ನು ನಮಗೆ ಹೇಳಿ ಕೊಟ್ಟ ಕಲಿಸುಗರೆಲ್ಲರೂ ಉಲಿಯುತ್ತಿದ್ದುದು ‘ರು’ ಎಂದು. ಇದನ್ನು ಬಳಸುತ್ತಿದ್ದ ಪದಗಳಲ್ಲಿಯೂ (ಋಷಿ, ಕೃಷಿ) ಹಾಗೆಯೇ ಉಲಿಯಲಾಗುತ್ತಿತ್ತು. ಹಾಗಾದರೆ ಇದಕ್ಕೂ ‘ರು’ ಎಂಬುದಕ್ಕೂ ಏನು ವೆತ್ಯಾಸ ಎಂಬುದು ತಿಳಿದಿರಲಿಲ್ಲ. ಇಶ್ಟಕ್ಕೂ ರಕಾರವು ಒಂದು ಮುಚ್ಚುಲಿ (ವ್ಯಂಜನ) ಅಲ್ಲವೇ? ಇದು ಸ್ವರಗಳ ಪಟ್ಟಿಯಲ್ಲಿ ಹೇಗೆ ಬಂತು ಎಂದೂ ಹಲವರನ್ನು ಕೇಳಿದ್ದೆ. ಆದರೆ ಯಾರೂ ಇದಕ್ಕೆ ಸರಿಯಾದ ಉತ್ತರವನ್ನು ಕೊಟ್ಟಿರಲಿಲ್ಲ. ಹಾಗೆಯೇ, ‘ಙ’, ಮತ್ತು ‘ಞ’ಗಳ ಉಲಿಕೆಯ ಬಗ್ಗೆಯೂ ತಿಳಿಯದಾಗಿತ್ತು. ಇವುಗಳನ್ನು ‘ನ’ ಎಂದೇ ಉಚ್ಚರಿಸುತ್ತಿದ್ದೆ.
ಮಹಾಪ್ರಾಣಗಳ ಉಲಿಕೆಯ ವಿಶಯದಲ್ಲಿ ಈ ಬಗೆಯ ಗೊಂದಲವಾಗದಿದ್ದರೂ, ಮಾತಿನಲ್ಲಿ ಹೆಚ್ಚು ಕಡಿಮೆ ಎಲ್ಲರೂ ಇವುಗಳನ್ನು ಉಲಿಯದ ಕಾರಣ ಹೆಚ್ಚು ಕಡಿಮೆ ಎಲ್ಲ ಕನ್ನಡಿಗರಿಗೂ ಸರಿಯಾಗಿ ಕನ್ನಡ ಮಾತಾಡುವುದೇ ಬರುವುದಿಲ್ಲ ಎಂಬ ತೀರ್‍ಮಾನಕ್ಕೆ ಬಂದಿದ್ದೆ. ಇಂತಹುದೇ ಅನಿಸಿಕೆಗಳನ್ನು ಕನ್ನಡದ ಕೆಲವು ವಿದ್ವಾಂಸರು, ಸಾಹಿತಿಗಳು ಆಗಿಂದಾಗ ಹೇಳುವುದನ್ನು ಕೇಳಿರುತ್ತೇವೆ. ಇಂತಹುದೇ ಅನಿಸಿಕೆಗಳು ನನ್ನಲ್ಲೂ ಮೂಡಿದ್ದವು.
ಆದರೆ ಕೆಲವು ವರುಶಗಳ ಕೆಳಗೆ ಶಂಕರ ಬಟ್ಟರ ಬಗ್ಗೆ ಕೇಳಲ್ಪಟ್ಟೆ. ಅವರ ಹೊತ್ತಗೆಗಳಾದ ‘ಕನ್ನಡ ಪದಗಳ ಒಳರಚನೆ‘, ‘ಕನ್ನಡ ವಾಕ್ಯಗಳ ಒಳರಚನೆ‘, ‘ಕನ್ನಡದ ಸರ್‍ವನಾಮಗಳು’, ‘ಕನ್ನಡ ಬರಹವನ್ನು ಸರಿಪಡಿಸೋಣ‘, ‘ಮಾತಿನ ಒಳಗುಟ್ಟು‘, ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ‘ ಮುಂತಾದವುಗಳನ್ನು ಓದುತ್ತ ಬಂದೆ. ಮತ್ತು ಅವರು ಬರೆಯುತ್ತಿರುವ ‘ಕನ್ನಡ ಬರಹದ ಸೊಲ್ಲರಿಮೆ’ ಎಂಬ ಪುಸ್ತಕದ ಕಂತುಗಳನ್ನೂ ಒಂದೊಂದಾಗಿ ಕೊಂಡು ಓದತ್ತ ಬಂದಿದ್ದೇನೆ.
ಬಟ್ಟರ ಹೊತ್ತಗೆಗಳನ್ನು ಓದುತ್ತ ಮೇಲೆ ಹೆಸರಿಸಿರುವ ಗೊಂದಲಗಳಿಗೆ ಉತ್ತರಗಳು ಸಿಗತೊಡಗಿದವು. ಪ್ರತಿಯೊಂದು ನುಡಿಗೂ ಅದರದೇ ಆದ ಉಲಿಯರಿಮೆಯಿರುತ್ತದೆ (phonetics) ಮತ್ತು ಅದರದೇ ಸೋಲ್ಲಿಟ್ಟಳ (syntax), ಸೊಗಡುಗಳಿರುತ್ತವೆ. ಆ ನುಡಿಗೆ ಒಂದು ಲಿಪಿಯನ್ನು ಕಟ್ಟಿಕೊಳ್ಳುವಾಗ ಇಲ್ಲವೇ ಅಳವಡಿಸಿಕೊಳ್ಳುವಾಗ ಅದೇ ನುಡಿಯ ಉಲಿಯರಿಮೆಯನ್ನು ಗಮನದಲ್ಲಿಟ್ಟುಕೊಳ್ಳ ಬೇಕಲ್ಲದೆ ಬೇರೆ ನುಡಿಯಿಂದ ನೇರವಾಗಿ ತಂದುಕೊಳ್ಳಲು ಆಗುವುದಿಲ್ಲ. ಲಿಪಿಯ ವಿಶಯವಾಗಿ ಮತ್ತು ಉಲಿಗಳ ವಿಶಯವಾಗಿ ತಳಹದಿಯ ಮಟ್ಟದಲ್ಲಿಯೇ ಬೇರೆಯ ಬಗೆಯಲ್ಲಿ ಯೋಚಿಸಬೇಕಿದೆ ಎಂಬುದು ಶಂಕರ ಬಟ್ಟರ ಹೊತ್ತಗೆಗಳ ಮೂಲಕ ಮನವರಿಕೆಯಾಯಿತು.
ಸೊಲ್ಲರಿಮೆಯ (ವ್ಯಾಕರಣ) ವಿಶಯದಲ್ಲೂ ಹೀಗೆ. ಕನ್ನಡ ವ್ಯಾಕರಣದಲ್ಲಿ ವಿವರಿಸಿರುವ ವಿಬಕ್ತಿ, ಕಾಲ, ಸಂದಿ, ಸಮಾಸ ಮುಂತಾದವು ಸಂಸ್ಕ್ರುತದಿಂದ ನೇರವಾಗಿ ಎತ್ತಿಕೊಂಡು ಕನ್ನಡಕ್ಕಾಗಿ ಒಗ್ಗಿಸಿ ಬರೆದಂತಿರುವುದನ್ನು ಅರಿತುಕೊಳ್ಳಲು ಆಳವಾದ ಅರಕೆ ನಡೆಸಿ ತಿಳಿದುಕೊಳ್ಳಬೇಕಿಲ್ಲ. ಎತ್ತುಗೆಗೆ, ವಿಬಕ್ತಿಗಳಲ್ಲಿ ಇರುವ ಪಂಚಮ ವಿಬಕ್ತಿ (ದೆಸೆಯಿಂದ) ಇರಬಹುದು ಇಲ್ಲವೇ ವರ್‍ತಮಾನ ಮತ್ತು ಬವಿಶ್ಯತ್ ಕಾಲಗಳೆರಡರಲ್ಲೂ ಇರುವ ಸಾಮ್ಯತೆ ಇರಬಹುದು, ಇವು ಸಣ್ಣ ವಯಸ್ಸಲ್ಲೇ ನನ್ನಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದ್ದವು. ಆದರೆ ಮೇಲೆ ಹೇಳಿದ ಪ್ರಶ್ನೆಗಳಂತೆ ಇಂತಹ ಪ್ರಶ್ನೆಗಳಿಗೂ ಯಾವುದೇ ಬಗೆಯ ಉತ್ತರಗಳು ಯಾರಿಂದಲೂ ಬರಲಿಲ್ಲ. ಮುಂದೆ ಶಂಕರ ಬಟ್ಟರ ಹೊತ್ತಗೆಗಳನ್ನು ಓದುತ್ತ ಬಂದಂತೆ ಒಂದೊಂದಾಗಿ ಎಲ್ಲ ವಿಶಯಗಳೂ ನನಗೆ ತಿಳಿಯಾದವು.
ಬರೀ ವಿಶಯಗಳನ್ನು ತಿಳಿಯಾಗಿಸುವುದು ಮಾತ್ರವಲ್ಲ, ಶಂಕರ ಬಟ್ಟರ ಅರಕೆಗಳಿಂದ ಕನ್ನಡಕ್ಕೆ ಮತ್ತು ಕನ್ನಡ ಸಮಾಜಕ್ಕೆ ಹಲವು ಬಗೆಯಲ್ಲಿ ಉಪಯೋಗವಾಗುತ್ತದೆ. ಇದರ ಹೆಚ್ಚುಗಾರಿಕೆ ನನಗೆ ಅರಿವಾಗಿದ್ದು ನನ್ನದೇ ಒಂದು ಅನುಬವದಿಂದ.
ಎಣ್ಣುಕದರಿಮೆಯಲ್ಲಿ (Computer Science) ಬಿ. ಇ. ಮಾಡುವಾಗ ‘ತಿಯರಿ ಆಪ್ ಕಾಂಪ್ಯುಟೇಶನ್’ (theory of computation) ಎಂಬುದು ನನ್ನ ಮೆಚ್ಚಿನ ವಿಶಯಗಳಲ್ಲಿ ಒಂದಾಗಿತ್ತು. ಇದರಲ್ಲಿ ನುಡಿಗಳ ಸೊಲ್ಲಿಟಳಗಳ (syntax) ಕಟ್ಟಲೆಗಳನ್ನು ಒಂದು ವಿಶೇಶವಾದ ರೀತಿಯಲ್ಲಿ ಪಟ್ಟಿ ಮಾಡಿ ಒಂದು ಬಗೆಯ ಗುರುತುಬರಹದಲ್ಲಿ (notation) ಬರೆಯುವ ಬಗ್ಗೆ ಕಲಿಸಲಾಗುತ್ತದೆ. ಇಲ್ಲಿ ನುಡಿ ಎಂದರೆ ಆಡುನುಡಿಗಳು ಮಾತ್ರವಲ್ಲ. ಎಣಿಕೆಯರಿಮೆ (mathematics)ಯಲ್ಲಿ ಬಳಸುವ ಸಮೀಕರಣಗಳೂ ಒಂದು ನುಡಿಯೇ. ಏಕೆಂದರೆ ಅಂತಹ ಸಮೀಕರಣಗಳು ಒಂದು ಕಟ್ಟಲೆ ಮೀರದ ಸೊಲ್ಲಿಟ್ಟಳವನ್ನು ಪಾಲಿಸುತ್ತವೆ. ಹಾಗೆಯೇ ಹಮ್ಮುಗಾರಿಕೆಯ ನುಡಿಗಳಿಗೂ (programming lamguages) ಕಟ್ಟುನಿಟ್ಟಾದ ಸೊಲ್ಲಿಟ್ಟಳಗಳು ಇರುತ್ತವೆ. ಹೀಗೆ ಒಂದು ನುಡಿಯ ಎಲ್ಲ ಕಟ್ಟಲೆಗಳ ಪಟ್ಟಿಗೆ ಗ್ರಾಮರ್ ಅಂದರೆ ಸೊಲ್ಲರಿಮೆ ಎಂದೇ ಹೆಸರು. ಈ ಬಗೆಯ ಸೊಲ್ಲರಿಮೆಗಳನ್ನು ಆಡುನುಡಿಗಳಿಗೂ ಪಟ್ಟಿ ಮಾಡಬಹುದೇ ಎಂಬ ಚರ್‍ಚೆಗಳೂ ಈ ವಿಶಯದಲ್ಲಿ ಇದೆ. ಇದು ಆಡುನುಡಿಗಳು ಎಣ್ಣುಕಗಳಿಗೆ ತಿಳಿಯುವಂತೆ ಮಾಡುವಲ್ಲಿ ಬಳಕೆಯಾಗುತ್ತದೆ. ಹೀಗೆ ಕನ್ನಡಕ್ಕೆ ಬೇಕಾಗುವ ಸೊಲ್ಲಿಟ್ಟಳದ ಕಟ್ಟಲೆಗಳನ್ನು ಪಟ್ಟಿ ಮಾಡಿ ಕನ್ನಡಕ್ಕೆ ಕಂಪ್ಯೂಟರ್ ಗಳಿಗಾಗಿ ಒಂದು ಗ್ರಾಮರ್ (ಸೊಲ್ಲರಿಮೆ) ಬರೆಯಬಹುದೇ ಎಂದು ನಾನು ಯೋಚಿಸುತ್ತಿದ್ದೆ. ಆದರೆ ಇಂತಹ ಒಂದು ಕೆಲಸಕ್ಕೆ ಕಯ್ ಹಾಕಬೇಕಾದರೆ ಕನ್ನಡದ ವಾಕ್ಯಗಳನ್ನು ಕಟ್ಟುವ ಕಟ್ಟಲೆಗಳು ಎಂತಹವು ಎಂಬುದನ್ನು ಅರಿಯ ಬೇಕಾಗುತ್ತದೆ. ಇದರ ಬಗ್ಗೆ ಯಾವುದಾದರೂ ಕನ್ನಡ ವ್ಯಾಕರಣದ ಪುಸ್ತಕಗಳಲ್ಲಿ ಏನಾದರೂ ಹೇಳಲಾಗಿದೆಯೇ ಎಂದು ಹಲವು ವ್ಯಾಕರಣ ಪುಸ್ತಕಗಳನ್ನು ನಾನು ಹುಡುಕಾಡಿದ್ದೆ. ಪರೀಕ್ಶೆಗಳಲ್ಲಿ ಪಾಸಾಗಲು ಬೇಕಾಗುವಂತಹ ಕನ್ನಡ ವ್ಯಾಕರಣ ದೊರೆಯಿತೇ ಹೊರತು ಕನ್ನಡ ವಾಕ್ಯಗಳನ್ನು ಕಟ್ಟಲು ಬೇಕಾದ ಕಟ್ಟಲೆಗಳೇನೆಂಬುದರ ಬಗ್ಗೆ ಎಲ್ಲೂ ಮಾಹಿತಿ ದೊರಕಿರಲಿಲ್ಲ. ಮುಂದೆ ನನಗೆ ಅಂತಹ ಮಾಹಿತಿ ಸಿಕ್ಕಿದ್ದು ಬಟ್ಟರ ‘ಕನ್ನಡ ವಾಕ್ಯಗಳ ಒಳರಚನೆ‘ ಎಂಬ ಹೊತ್ತಗೆ ಓದಿದಾಗ.
ಕನ್ನಡದಲ್ಲಿ ಅರಿಮೆಯ ಪದಗಳನ್ನು ಕಟ್ಟುವ ಒಂದು ಸಣ್ಣ ಪ್ರಯತ್ನ ನಾನೂ ಒಮ್ಮೆ ಮಾಡಿದ್ದೆ. ಇದರ ಬಗ್ಗೆ ಈಗಾಗಲೇ ಬರೆದಿದ್ದೇನೆ. ಎಲ್ಲರೂ ಮಾಡುವಂತೆ ನಾನೂ ಮೊದಲು ಸಂಸ್ಕ್ರುತದಲ್ಲಿ ಪದಗಳನ್ನು ಕಟ್ಟಲು ತೊಡಗಿದೆ. ಇದು ಮಾಡುತ್ತ ಸಂಸ್ಕ್ರುತ ಪದಕೋಶವನ್ನಲ್ಲದೇ, ಸಂಸ್ಕ್ರುತದ ಪದಕಟ್ಟಣೆಯ ನಿಯಮಗಳನ್ನೂ ಕಲಿಯಬೇಕೆಂದು ನನಗೆ ಅರಿವಾಯಿತು. ಇದು ಸಾದ್ಯವಾಗದ ಮಾತು ಎನಿಸಿ ಕನ್ನಡದಲ್ಲಿ ನಮಗೆ ಬೇಕಾಗುವ ಅರಿಮೆಗಳನ್ನು ಕಟ್ಟಿಕೊಳ್ಳುವುದು ಬಹಳ ಕಶ್ಟದ ಹಾದಿ ಎಂದು ನಿರಾಸೆಯಾಗಿತ್ತು. ಪದಕಟ್ಟಣೆಯ ಕುರಿತಾಗಿ ಕನ್ನಡದಲ್ಲೇ ಎಲ್ಲ ಅರಿಮೆಗಳಿಗೆ ಬೇಕಾಗುವ ಪದಗಳನ್ನು ಕಟ್ಟಬಹುದು ಎಂಬ ಶಂಕರಬಟ್ಟರ ವಿಚಾರ ಓದಿ ಅರಿತುಕೊಂಡಾಗ ಅದು ನನ್ನ ಚಿಂತನೆಯ ಹಾದಿಯನ್ನೇ ಬದಲಿಸಿದ್ದಲ್ಲದೆ ಕನ್ನಡದಲ್ಲಿ ಏನು ಬೇಕಾದರೂ ಕಟ್ಟಬಹುದು ಎಂಬ ನಂಬಿಕೆಯನ್ನು ತಂದು ಕೊಟ್ಟಿತು. ಗೊಂದಲದ ಗೂಡಲ್ಲಿ ಸಿಲುಕಿದ್ದಂತೆ ಕಂಡ ಕನ್ನಡಕ್ಕೆ ಬಿಡುಗಡೆಯ ಹಾದಿ ಕಾಣಿಸಿತ್ತು.
ಸಾಮಾನ್ಯ ಜನರೇ ಆಡುನುಡಿಯಲ್ಲಿ ಚಂದದ ಕನ್ನಡ ಪದಗಳನ್ನು ಕಟ್ಟಿದ್ದಾರೆ. ಎತ್ತುಗೆಗೆ, ವಾರೆಗಣ್ಣು, ಬೀಸುಗಯ್ಯಿ, ಜಾರುಬಂಡಿ, ಮರಗೆಲಸ, ಬಾಯ್ಮಾತು. ಇಂತಹ ಸಾಮನ್ಯರ ಪದಕಟ್ಟಣೆಯಲ್ಲಿ ಬಳಕೆಯಾಗುವ ನಿಯಮಗಳನ್ನು ಅರಿತುಕೊಂಡರೆ ಕನ್ನಡದಲ್ಲೂ ಅರಿಮೆಯ ಪದಗಳನ್ನು ಕಟ್ಟಲು ಸಾದ್ಯ. ಇಂತಹ ಕನ್ನಡದ ನಿಯಮಗಳನ್ನು ಕಲಿಯದೇ ಹೋದವರಿಗೆ ಕನ್ನಡದಲ್ಲಿ ಅದಾಗುವುದಿಲ್ಲ ಇದಾಗುವುದಿಲ್ಲ ಎಂದೆನಿಸುವುದು ಸಹಜ.
ನುಡಿಯರಿಮೆಯ ವಿಚಾರಗಳಲ್ಲದೆ, ಬರಹ ಕನ್ನಡ ಎಲ್ಲರದ್ದಾಗಬೇಕು ಎಂಬ ಬಟ್ಟರ ಸಾಮಾಜಿಕ ಚಿಂತನೆಯ ವಿಚಾರಗಳೂ ನಾನು ಎಲ್ಲರಕನ್ನಡವನ್ನು ಒಪ್ಪುವ ಬಲವಾದ ಕಾರಣಗಳಲ್ಲಿ ಒಂದು. ಈಗಿರುವ ಬರಹಕನ್ನಡದ ಗೊಂದಲಗಳೇ ಹಲವು ಕನ್ನಡಿಗರಿಗೆ ತೊಡಕಾಗಿ ಅವರುಗಳನ್ನು ಬರಹದಿಂದ ದೂರ ಉಳಿಯುವಂತೆ ಮಾಡಿದೆ. ಓದು-ಬರಹ ಮುಕ್ಯವಾಗಿರುವ ಈ ಯುಗದಲ್ಲಿ ಈ ಕಾರಣದಿಂದ ಕನ್ನಡ ಸಮಾಜ ಹಿಂದುಳಿಯುತ್ತದೆ. ಜೊತೆಗೆ ಕನ್ನಡ ‘ಸರಿಯಾಗಿ’ ಓದಲು ಬರೆಯಲು ಬರುವುದಿಲ್ಲವೆಂಬ ಕೀಳರಿಮೆ ಅವರುಗಳನ್ನು ಸದಾ ಕಾಡುತ್ತಲಿರುತ್ತದೆ. ಇಂದು ನಮಗೆ ಎಂಟು ಗ್ನಾನ ಪೀಟಗಳು ಬಂದಿದ್ದರೂ ಕನ್ನಡದಲ್ಲಿ ತಳಮಟ್ಟದ ಅರಿಮೆಗಳನ್ನೇ ಕಟ್ಟಿಕೊಳ್ಳಲಾರದೆ ಹೆಣಗುತ್ತಿರುವುದಕ್ಕೆ ಇದೇ ಕಾರಣ. ಬಟ್ಟರ ಹೊಸ ವಿಚಾರಗಳು ಈ ಬಗೆಯ ಹಲವು ಸಮಸ್ಯೆಗಳಿಗೆ ಬಗೆಹರಿಕೆಗಳನ್ನು ನೀಡುವುದಲ್ಲದೆ ಮುಂದೆ ಗಟ್ಟಿಯಾದ ಕನ್ನಡ ಸಮಾಜವನ್ನು ಕಟ್ಟುವುದಕ್ಕೆ ಬುನಾದಿಯಾಗಬಲ್ಲುದು ಎಂಬುದು ನನ್ನ ಬಲವಾದ ನಂಬಿಕೆ.
(ಚಿತ್ರಸೆಲೆ: wallsave.com)
ಇತ್ತೀಚಿನ ಅನಿಸಿಕೆಗಳು