ಸಾಹಿತಿಗೆ ವ್ಯಾಕರಣದ ತಿಳಿವು ಬೇಕೇ?

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 21

nudi_inukuಕತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯುವ ಸಾಹಿತಿಗಳಿಗೆ ಕನ್ನಡ ನುಡಿಯ ವ್ಯಾಕರಣದ ತಿಳಿವಿನಿಂದ ಯಾವ ಬಗೆಯ ನೆರವೂ ಸಿಗಲಾರದೆಂಬ ಅನಿಸಿಕೆ ಹಲವು ಮಂದಿ ಬರಹಗಾರರಲ್ಲಿದೆ. “ಕನ್ನಡ ವ್ಯಾಕರಣ”ವೆಂಬ ಹೆಸರಿನಲ್ಲಿ ಇವತ್ತು ಶಾಲೆಗಳಲ್ಲಿ ಕಲಿಸುತ್ತಿರುವುದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲದಿರುವುದು ಇದಕ್ಕೆ ಮುಕ್ಯ ಕಾರಣ; ನಿಜವಾದ ಕನ್ನಡದ ವ್ಯಾಕರಣ ಎಂತಹದು, ಅದು ಹೇಗೆ ಕನ್ನಡದಲ್ಲಿ ಪದಗಳನ್ನು ಮತ್ತು ಸೊಲ್ಲುಗಳನ್ನು ಕಟ್ಟುವ ಬಗೆಯನ್ನು ತಿಳಿಸಿಕೊಡುತ್ತದೆ, ಮತ್ತು ಈ ತಿಳಿವಿನ ಮೂಲಕ ಹೇಗೆ ಬರಹಗಳನ್ನು ಸರಿಯಾಗಿ ಬರೆಯಲು ಇಲ್ಲವೇ ಬರೆದುದನ್ನು ಸರಿಪಡಿಸಲು ಬರುತ್ತದೆ ಎಂಬುದನ್ನು ತಿಳಿಸಿಕೊಟ್ಟಲ್ಲಿ ಯಾರೂ ಅದರ ನೆರವನ್ನು ಅಲ್ಲಗಳೆಯಲಾರರು.

ಹಲವು ಜನರಿಗೆ ತುಂಬಾ ಸ್ವಾರಸ್ಯವಾದ ವಿಶಯಗಳು ಹೊಳೆಯುತ್ತಿರುತ್ತವೆ; ಆದರೆ, ಅವನ್ನು ಇತರರಿಗೆ ತಿಳಿಯುವ ಹಾಗೆ ಬರೆಯುವುದು ಹೇಗೆ ಎಂದು ಗೊತ್ತಾಗುವುದಿಲ್ಲ. ಕತೆ, ಕವಿತೆ ಮೊದಲಾದುವನ್ನು ಕಲ್ಪಿಸಿಕೊಳ್ಳುವಶ್ಟೇ ಓದುಗರಿಗೆ ತಲಪುವ ಹಾಗೆ ಅವನ್ನು ಬರೆಯುವುದೂ ಮುಕ್ಯವಾದ ಕೆಲಸವಾಗಿದೆ. ಈ ಎರಡನೇ ಕೆಲಸವನ್ನು ನಡೆಸುವುದು ಹೇಗೆ ಎಂಬುದನ್ನು ಕಲಿಯಬೇಕೆಂದಿರುವವರಿಗೆ ಸೊಲ್ಲರಿಮೆಯ (ವ್ಯಾಕರಣದ) ತಿಳಿವು ಹಲವು ಬಗೆಗಳಲ್ಲಿ ನೆರವಿಗೆ ಬರಬಲ್ಲುದು. ಇದಲ್ಲದೆ, ಹಲವು ಮಂದಿ ಬರಹಗಾರರಿಗೆ ತಮ್ಮ ಬರಹವನ್ನು ಸಾವಗಿಸುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.

ಅವುಗಳಲ್ಲಿ ಬರುವ ಕೆಲವು ಕುರಳು(ಪಾರಾ)ಗಳನ್ನು ಅವರು ಒಂದೆರಡು ಪುಟಗಳಶ್ಟು ಉದ್ದಕ್ಕೂ ಎಳೆಯುತ್ತಿರುತ್ತಾರೆ. ಇದರಿಂದಾಗಿ ಅವನ್ನು ಓದುವವರಿಗೆ ಉಸಿರುಕಟ್ಟಿದ ಹಾಗಾಗುತ್ತದೆ. ತಡೆ(,), ಅರೆಕೊನೆ(;), ಅಡ್ಡಗೆರೆ(-) ಮೊದಲಾದ ಬರಹದ ಗುರುತುಗಳನ್ನೂ ಅವರು ಸರಿಯಾಗಿ ಬಳಸುವುದಿಲ್ಲ. ಹಾಗಾಗಿ, ಅವರ ಬರಹಗಳು ಚನ್ನಾಗಿದ್ದರೂ ಹೆಚ್ಚಿನ ಓದುಗರಿಗೂ ತೊಡಕಿನವಾಗಿ ಕಾಣಿಸುತ್ತವೆ. ಬರಹದ ಗುರುತುಗಳನ್ನು ಸರಿಯಾಗಿ, ಓದುಗರಿಗೆ ನೆರವಾಗುವ ಹಾಗೆ, ಬಳಸಬೇಕಿದ್ದಲ್ಲಿ ಅದಕ್ಕೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಬಣ್ಣಗಳ ಅರಿವು ಕಲೆಗಾರರಿಗೆ ಹೇಗೆ ನೆರವು ನೀಡಬಲ್ಲುದೋ ಹಾಗೆಯೇ ಸೊಲ್ಲುಗಳ ಅರಿವು ನಲ್ಬರಹಗಾರರಿಗೂ ನೆರವು ನೀಡಬಲ್ಲುದು.

ಕನ್ನಡದಲ್ಲಿ ಎಂತಹ ಸೊಲ್ಲುಗಳು ಬಳಕೆಯಲ್ಲಿವೆ, ಅವುಗಳ ನಡುವಿನ ವ್ಯತ್ಯಾಸಗಳು ಎಂತಹವು, ಓದುಗರ ಮೇಲೆ ಅವು ಎಂತಹ ಪರಿಣಾಮವನ್ನು ಬೀರುತ್ತವೆ ಎಂಬಂತಹ ವಿಶಯಗಳನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ. ಎತ್ತುಗೆಗಾಗಿ, ಒಂದು ಕತೆಯಲ್ಲಿ ಒಬ್ಬ ವ್ಯಕ್ತಿಯ ಪರಿಚೆಯನ್ನು ಮಾಡಿಕೊಡಬೇಕಾದಾಗ, ಎಸಕ(ಕ್ರಿಯಾ)ಪದಗಳಿಲ್ಲದಿರುವ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಬೇಕಾಗುತ್ತದೆ; ಇದಕ್ಕೆ ಬದಲು, ಕತೆ ಬಹಳ ಬೇಗನೆ ಮುಂದಕ್ಕೆ ಹೋಗುವಂತೆ ಮಾಡಬೇಕಿದ್ದಲ್ಲಿ ಎಸಕ ಪದಗಳಿರುವಂತಹ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಬೇಕಾಗುತ್ತದೆ. ಇಂತಹ ಚಿಕ್ಕ ಚಿಕ್ಕ ಸೊಲ್ಲುಗಳ ಬದಲು, ಹಲವಾರು ಒಳಸೊಲ್ಲುಗಳಿರುವ ಉದ್ದುದ್ದವಾದ ಸಿಕ್ಕಲು ಸೊಲ್ಲುಗಳನ್ನು ಬಳಸಿದಲ್ಲಿ, ಕತೆಯ ವೇಗ ಕಡಿಮೆಯಾಗಿ, ಅದು ತುಂಬಾ ಮೆಲ್ಲನೆ ಸಾಗುವಂತಾಗುತ್ತದೆ.

ಎಸಕ ಪದಗಳಲ್ಲಿ ಕೆಲವು ತೀರಾ ಬಡವಾಗಿರುತ್ತವೆ; ಆದರೆ ಇನ್ನು ಕೆಲವು ತುಂಬಾ ಹುಲುಸಾಗಿದ್ದು, ಎಸಕಗಳನ್ನು ಎದ್ದುಕಾಣುವಂತೆ ಓದುಗರ ಮುಂದಿರಿಸಬಲ್ಲುವು. ಎತ್ತುಗೆಗಾಗಿ, ಇರು, ಮಾಡು, ಆಗು, ಹೇಳು, ತಿನ್ನು, ನಡೆ, ಬರು ಮೊದಲಾದುವು ತೀರಾ ಬಡವಾಗಿರುವ ಎಸಕ ಪದಗಳು. ಅವನ್ನು ಬಳಸಿರುವಲ್ಲೂ ಎಸಕಗಳು ಎದ್ದುಕಾಣಿಸುವ ಹಾಗೆ ಮಾಡಬೇಕಿದ್ದರೆ, ಅವಕ್ಕೆ ಯಾವುದಾದರೊಂದು ಪರಿಚೆಪದವನ್ನು ಸೇರಿಸಬೇಕಾಗುತ್ತದೆ (ಕತಕತನೆ ಕುದಿಯಿತು, ದೊಪ್ಪನೆ ಬಿತ್ತು, ತಟಕ್ಕನೆ ಹೇಳಿದಳು). ಆದರೆ ಈ ರೀತಿ ಪರಿಚೆ ಪದಗಳನ್ನು ಸೇರಿಸಿ ಹೇಳುವುದಕ್ಕಿಂತಲೂ, ಅಂತಹ ಪರಿಚೆಗಳನ್ನು ಒಳಗೊಂಡಿರುವ ಹುಲುಸುಪದಗಳನ್ನು ಬಳಸುವುದು ಹೆಚ್ಚು ಒಳ್ಳೆಯದು. ನುಗ್ಗು, ಮುತ್ತು, ಚಿವುಟು, ದುಮುಕು, ನುಸುಳು ಮೊದಲಾದುವು ಇಂತಹ ಪರಿಚೆಗಳನ್ನು ಒಳಗೊಂಡಿರುವ ಹುಲುಸುಪದಗಳು. ಅವನ್ನು ಬಳಸಿರುವಲ್ಲಿ ಸೊಲ್ಲುಗಳು ಹೆಚ್ಚು ಅಡಕವಾಗಿಯೂ ಇರುತ್ತವೆ.

ಜನರು ಒಳಗೆ ಹೋದರು ಎಂಬ ಸೊಲ್ಲು ತಿಳಿಸುವ ಎಸಕವನ್ನೇ ಜನರು ಒಳಗೆ ನುಗ್ಗಿದರು ಎಂಬುದು ನಿಜಕ್ಕೂ ಏನು ನಡೆಯಿತು ಎಂಬುದನ್ನು ಹೆಚ್ಚು ಚನ್ನಾಗಿ, ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ. ಇಂತಹದೇ ವ್ಯತ್ಯಾಸವನ್ನು ಅವನು ಕೆಳಗೆ ಹಾರಿದ ಎನ್ನುವುದಕ್ಕೂ ಅವನು ಕೆಳಗೆ ದುಮುಕಿದ ಎನ್ನುವುದಕ್ಕೂ ನಡುವೆ ಕಾಣಬಹುದು. ಸನ್ನಿವೇಶಕ್ಕೆ ತಕ್ಕ ಹಾಗೆ ಇಂತಹ ಹೆಚ್ಚು ಹುಲುಸಾಗಿರುವ ಪದಗಳನ್ನು ಆರಿಸಿಕೊಳ್ಳುವ ಜಾಣ್ಮೆ ಬರಹಗಾರರಿಗಿರಬೇಕು. ಈ ಅಳವನ್ನು ಪಡೆಯುವಲ್ಲಿ ಬರಹಗಾರರಿಗೆ ಸೊಲ್ಲರಿಮೆ ನೆರವು ನೀಡಬಲ್ಲುದು. ಹುಲುಸಾಗಿರುವ ಎಸಕಪದ ಸಿಗದಿದ್ದಲ್ಲಿ ಅಣಕು ಪದಗಳನ್ನು ಬಳಸಬೇಕಾಗುತ್ತದೆ.

ಕನ್ನಡದಲ್ಲಿ ಇಂತಹ ಎರಡು ಬಗೆಯ ಪದಗಳು ಬಳಕೆಯಲ್ಲಿವೆ: ಚಿಲ್ಲನೆ, ತಟ್ಟನೆ, ದುಡುಮ್ಮನೆ, ತಟಾರನೆ, ದಿಡೀರನೆ ಮೊದಲಾದ ಒತ್ತುಬರಿಗೆ ಇಲ್ಲವೇ ಉದ್ದ ತೆರೆಯುಲಿಯಿರುವ ಪದಗಳು, ಮತ್ತು ಚಟಚಟನೆ, ದಡದಡನೆ, ಪಳಪಳನೆ ಮೊದಲಾದ ಒತ್ತುಬರಿಗೆ ಇಲ್ಲವೇ ಉದ್ದ ತೆರೆಯುಲಿಯಿಲ್ಲದ ಪದಗಳು. ಇವುಗಳಲ್ಲಿ ಮೊದಲನೇ ಬಗೆಯ ಪದಗಳು ಒಮ್ಮೆಗೇನೇ ನಡೆದು ಹೋಗುವ ಎಸಕಗಳ ಪರಿಚೆಯನ್ನು ಸೂಚಿಸುತ್ತವೆ; ಇದನ್ನು ದೊಪ್ಪನೆ ಕೆಳಗೆ ಬಿತ್ತು, ಗಬಕ್ಕನೆ ಬಾಯಿ ಹಾಕಿತು, ಬುರ್ರನೆ ಹಾರಿಹೋಯಿತು ಮೊದಲಾದ ಎತ್ತುಗೆಗಳಲ್ಲಿ ಕಾಣಬಹುದು. ಎರಡನೇ ಬಗೆಯ ಪದಗಳು ತುಸು ಹೊತ್ತು ನಡೆಯುತ್ತಿರುವ ಎಸಕಗಳ ಪರಿಚೆಯನ್ನು ಸೂಚಿಸುತ್ತವೆ. ಎಲ್ಲರೂ ದಡದಡನೆ ಇಳಿದು ಬಂದರು, ಪಳಪಳನೆ ಹೊಳೆಯುತ್ತಿತ್ತು, ಗಬಗಬನೆ ತಿಂದುಮುಗಿಸಿದ ಮೊದಲಾದ ಎತ್ತುಗೆಗಳಲ್ಲಿ ಇದನ್ನು ಕಾಣಬಹುದು.

ಅಣಕುಪದಗಳ ನಡುವಿರುವ ಈ ವ್ಯತ್ಯಾಸವನ್ನು ಗಮನಿಸದಿದ್ದಲ್ಲಿ ತೊಂದರೆಯಾಗುತ್ತದೆ: ಎತ್ತುಗೆಗಾಗಿ, ದಡಕ್ಕೆಂದು ಗಾಡಿ ಕೊರಕಲಲ್ಲಿ ಬಿದ್ದು ಎದ್ದು ಕುಲುಕಾಡುತ್ತ ಸಾಗಿತ್ತು ಎಂಬ ಸೊಲ್ಲಿನಲ್ಲಿ ತುಸು ಹೊತ್ತು ನಡೆಯುತ್ತಿರುವ ಒಂದು ಎಸಕವನ್ನು ಸೂಚಿಸಲಾಗಿದೆ; ಆದರೆ, ಇದರಲ್ಲಿ ಒಮ್ಮೆಗೇನೇ ನಡೆದು ಹೋಗುವಂತಹ ಎಸಕದ ಪರಿಚೆಯನ್ನು ಸೂಚಿಸಬಲ್ಲ ದಡಕ್ಕನೆ ಎಂಬ ಅಣಕು ಪದವನ್ನು ಬಳಸಲಾಗಿದೆ, ಮತ್ತು ಇದರಿಂದಾಗಿ ಈ ಸೊಲ್ಲು ಅಶ್ಟು ಚನ್ನಾಗಿ ಓದಿಸಿಕೊಂಡು ಹೋಗುವುದಿಲ್ಲ. ಇದಕ್ಕೆ ಬದಲು, ತುಸು ಹೊತ್ತು ನಡೆಯುವಂತಹ ಎಸಕದ ಪರಿಚೆಯನ್ನೇ ತಿಳಿಸಬಲ್ಲ ದಡದಡನೆ ಎಂಬಂತಹ ಅಣಕು ಪದವನ್ನು ಬಳಸಿದಲ್ಲಿ ಅದು ಹೆಚ್ಚು ಚನ್ನಾಗಿ ಓದಿಸಿಕೊಂಡು ಹೋಗಬಲ್ಲುದು.

ಬರಹದಲ್ಲಿ ಬರುವ ಕೆಲವು ಸೊಲ್ಲುಗಳು ಯಾಕೆ ಅಶ್ಟು ಚನ್ನಾಗಿ ಓದಿಸಿ ಕೊಂಡು ಹೋಗುತ್ತವೆ, ಮತ್ತು ಬೇರೆ ಕೆಲವು ಸೊಲ್ಲುಗಳು ಯಾಕೆ ಆ ರೀತಿ ಓದಿಸಿಕೊಂಡು ಹೋಗುವುದಿಲ್ಲ ಎಂಬುದನ್ನು ತಿಳಿಯಲು, ಮತ್ತು ಚನ್ನಾಗಿ ಓದಿಸಿಕೊಂಡು ಹೋಗದಿರುವ ಸೊಲ್ಲೊಂದು ತಮ್ಮ ಬರಹದಲ್ಲಿ ಬಂದಿದೆಯಾದರೆ, ಅದನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ಈ ರೀತಿ ಬರಹಗಾರರ ನೆರವಿಗೆ ಬರಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

 << ನುಡಿಯರಿಮೆಯ ಇಣುಕುನೋಟ – 20

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 01/01/2014

    […]  << ನುಡಿಯರಿಮೆಯ ಇಣುಕುನೋಟ – 21 […]

ಅನಿಸಿಕೆ ಬರೆಯಿರಿ: