ನೆಸ್ಟ್ ಕೊಂಡುಕೊಂಡ ಗೂಗಲ್ಲಿಗೆ ಆಪಲ್ ಮೇಲೆ ಕಣ್ಣು

ಪ್ರಿಯಾಂಕ್ ಕತ್ತಲಗಿರಿ.

Nest

ಮನೆಯೊಳಗಡೆ ಬಳಸಲ್ಪಡುವ ಸಲಕರಣೆಗಳನ್ನು ಕಟ್ಟುವ ನೆಸ್ಟ್ (Nest) ಎನ್ನುವ ಕಂಪನಿಯೊಂದನ್ನು ಹೆಸರುವಾಸಿ ಕಂಪನಿ ಗೂಗಲ್ ನೆನ್ನೆ ಕೊಂಡುಕೊಂಡಿದೆ. ಚಳಿ ಹೆಚ್ಚಿರುವ ನಾಡುಗಳಲ್ಲಿ ಮನೆಯೊಳಗೆ ಬೆಚ್ಚಗಿರುವಂತೆ ನೋಡಿಕೊಳ್ಳುವ ಸಲಕರಣೆಯೊಂದನ್ನು ಕಟ್ಟಿದ್ದ ನೆಸ್ಟ್ ಸಾಕಶ್ಟು ಹೆಸರು ಮಾಡಿತ್ತು. ಇದೊಂದೇ ಅಲ್ಲದೇ, ಮನೆಯೊಳಗೆ ಹೊಗೆ ಅತವಾ ಬೆಂಕಿ ಕಾಣಿಸಿಕೊಂಡರೆ ತಟ್ಟನೇ ಗುರುತಿಸಿ ಕಹಳೆ ಊದುವ ಸಲಕರಣೆಯೊಂದನ್ನೂ 2010ರಲ್ಲಿ ಹುಟ್ಟಿದ ನೆಸ್ಟ್ ಕಂಪನಿ ಕಟ್ಟಿತ್ತು.

ಈ ಸಲಕರಣೆಗಳಲ್ಲೇನು ಹೊಸತು?
ನೆಸ್ಟ್ ಕಂಪನಿ ಹುಟ್ಟು ಕಾಣುವ ಮೊದಲೂ ಇಂತಹ ಸಲಕರಣೆಗಳು ಮಾರುಕಟ್ಟೆಯಲ್ಲಿದ್ದವು. ಆದರೂ ನೆಸ್ಟ್ ಕಂಪನಿಯ ಸಲಕರಣೆಗಳು ಹೆಸರುಗಳಿಸಲು ಕಾರಣ ಅವುಗಳು ಮಿಂಬಲೆಗೆ ತಮ್ಮನ್ನು ತಳುಕು ಹಾಕಿಕೊಂಡಿದ್ದು.

ವಯ್-ಪಯ್ (wi-fi) ಮೂಲಕ ತಮ್ಮನ್ನು ತಾವು ಮಿಂಬಲೆಗೆ ತಳುಕು ಹಾಕಿಕೊಳ್ಳುವ ಈ ಸಲಕರಣೆಗಳನ್ನು, ಬಳಕೆದಾರರು ತಮ್ಮ ಮೊಬಯ್ಲ್ ಮೂಲಕವೇ ಆಡಿಸಬಹುದು. ಬಳಕೆದಾರರು ಮನೆಯಿಂದ ಹೊರಹೋದಾಗ, ಸಲಕರಣೆಯು ತನ್ನನ್ನು ತಾನೇ ಆರಿಸಿಕೊಂಡು ಮಿಂಚಿನ ಉಳಿತಾಯ ಮಾಡುತ್ತದೆ. ಬಳಕೆದಾರರು ಮನೆಗೆ ಬರುವ ತುಸುಹೊತ್ತು ಮುನ್ನ, ತಾನಾಗೇ ಶುರುವಾಗಿ ಮನೆಯನ್ನು ಬೆಚ್ಚಗಿಟ್ಟಿರುತ್ತದೆ. ಇದೇ ಕಾರಣಕ್ಕಾಗಿ ಈ ಸಲಕರಣೆಗಳು ಮಂದಿ-ಮೆಚ್ಚುಗೆ ಗಳಿಸಿದವು.

ಆಪಲ್ ಮೇಲೆ ಕಣ್ಣಿಟ್ಟಿರುವ ಗೂಗಲ್
ನೆಸ್ಟ್ ಕಂಪನಿಯನ್ನು ಗೂಗಲ್ 3.2 ಬಿಲಿಯನ್ ಡಾಲರುಗಳಶ್ಟು (ಸುಮಾರು 20,000 ಕೋಟಿ ರುಪಾಯಿಗಳು) ಹಣ ಕೊಟ್ಟು ನೆನ್ನೆ ಕೊಂಡುಕೊಂಡಿದ್ದು ಹಲವರ ಹುಬ್ಬೇರಿಸಿದೆ. ನೆಸ್ಟ್ ಕಂಪನಿಯನ್ನು ಹುಟ್ಟುಹಾಕಿದ್ದು ಟೋನಿ ಪಾಡೆಲ್ ಮತ್ತು ಮ್ಯಾಟ್ ರಾಜರ‍್ಸ್ ಎಂಬುವರು. ಆಪಲ್ ಕಂಪನಿಯಲ್ಲಿ 2001ರಲ್ಲಿ ಅಯ್ಪಾಡ್ (ipod) ಅನ್ನು ಕಟ್ಟುವಲ್ಲಿ ಮುಂದಾಳ್ತನ ವಹಿಸಿಕೊಂಡಿದ್ದ ಹೆಗ್ಗಳಿಕೆ ಟೋನಿ ಪಾಡೆಲ್ ಅವರದ್ದು.

2010ರಲ್ಲಿ ನೆಸ್ಟ್ ಕಂಪನಿ ಶುರುಮಾಡಿದ್ದಾಗ, ಅವರ ಸಲಕರಣೆಗಳ ಕಟ್ಟು-ಬಗೆ (design) ನೋಡಿ ಗೂಗಲ್ ಮೆಚ್ಚಿಕೊಂಡು ಹಣ ತೊಡಗಿಸಿತ್ತು. ನೆಸ್ಟ್ ಕಂಪನಿಯು ಹಿಂದೆಂದೂ ಕಾಣದ ಬಗೆಯಲ್ಲಿ ಮಾರುಕಟ್ಟೆಯನ್ನು ಕಬಳಿಸಲು ಸಜ್ಜಾಗಿರುವಂತೆ ಕಾಣುತ್ತಿದ್ದ ಹೊತ್ತಿನಲ್ಲಿ ಮತ್ತು ‘ಮಿಂಬಲೆಗೆ ತಳುಕುಬಿದ್ದ ವಸ್ತು’ಗಳ (internet of things) ಮಾರುಕಟ್ಟೆ ಬೆಳೆಯುತ್ತಿರುವ ಹೊತ್ತಿನಲ್ಲಿ, ಗೂಗಲ್ ತನ್ನ ಬತ್ತಳಿಕೆಗೆ ಅತಿಮುಕ್ಯ ಬಾಣವನ್ನಾಗಿ ನೆಸ್ಟ್ ಕಂಪನಿಯನ್ನು ಸೇರಿಸಿಕೊಂಡಂತಾಗಿದೆ.

ಜನರು ತಮ್ಮ ಮೊಬಯ್ಲ್ ಮೂಲಕವೇ ಮನೆಯೊಳಗಣ ಎಲ್ಲಾ ವಸ್ತುಗಳನ್ನೂ ಆಡಿಸುವಂತಾಗುವುದು ಮುಂಬರುವ ದಿನಗಳಲ್ಲಿ ಹೆಚ್ಚೆಚ್ಚು ಬೇಡಿಕೆ ಪಡೆದುಕೊಳ್ಳುತ್ತದೆ. ಮೊಬಯ್ಲ್ ಮೂಲಕ ಜನರಿಗೆ ತಮ್ಮೆಲ್ಲಾ ಕೆಲಸಗಳನ್ನೂ ಮಾಡಿಕೊಳ್ಳಲು ಸಾದ್ಯವಾಗಿಸುವವರೇ ಈ ಮಾರುಕಟ್ಟೆಯಲ್ಲಿ ಗೆಲ್ಲಲು ಸಾದ್ಯ ಎಂಬಂತಿರುವಾಗ, ಆಪಲ್‍ ಕಂಪನಿಯನ್ನು ಮಣಿಸಲು ಗೂಗಲ್ಲಿಗೆ ನೆಸ್ಟ್ ನೆರವಾಗಲಿದೆ.

ಮಿಂಬಲೆಗೆ ತಳುಕುಬಿದ್ದ ವಸ್ತುಗಳ ಮಾರುಕಟ್ಟೆ ಮುಂಬರುವ ದಿನಗಳಲ್ಲಿ ಕುತೂಹಲಕಾರಿಯಾಗಿ ಬೆಳೆಯಲಿದೆ, ಜನರಿಗೆ ನೆರವಾಗುವ ಹಲವಾರು ಸಲಕರಣೆಗಳನ್ನು ಮಾರುಕಟ್ಟೆಗೆ ಒದಗಿಸಲಿದೆ.

(ತಿಟ್ಟಸೆಲೆ: nest.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications