ದಾರಿಯಲ್ಲಿ ಸಿಕ್ಕಿದ ದುಡ್ಡು

ಸಿ.ಪಿ.ನಾಗರಾಜ

ದಾರಿ_ನೋಟು

ಸರಿಸುಮಾರು ಇಂದಿಗೆ ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು:-

ಒಂದು ದಿನ ನಡುಮದ್ಯಾನ್ನದ ವೇಳೆಯಲ್ಲಿ ಕಾಳಮುದ್ದನದೊಡ್ಡಿಯಲ್ಲಿನ ಮನೆಯಿಂದ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನ ಕಣ್ಣಿಗೆ ಅಯ್ವತ್ತು ರೂಪಾಯಿಯ ಒಂದು ನೋಟು ದಾರಿಯಲ್ಲಿ ಬಿದ್ದಿರುವುದು ಗೋಚರಿಸಿತು. ಕೂಡಲೇ ಕೆಳಕ್ಕೆ ಬಾಗಿ, ಆ ನೋಟನ್ನು ಎತ್ತಿಕೊಳ್ಳುತ್ತಿದ್ದಂತೆಯೇ…ಅದರ ಹತ್ತಿರದಲ್ಲಿ ಇಪ್ಪತ್ತು ರೂಪಾಯಿಯ ಎರಡು ನೋಟುಗಳು ಬಿದ್ದಿದ್ದವು. ಅವನ್ನು ಬೇಗ ಬೇಗ ಎತ್ತಿಕೊಳ್ಳುತ್ತಿದ್ದಂತೆಯೇ…ಅಲ್ಲೇ ಪಕ್ಕದಲ್ಲಿ ಹತ್ತು ರೂಪಾಯಿಯ ಮೂರು ನೋಟುಗಳು ಕಾಣಿಸಿದವು. ಒಂದೇ ಉಸಿರಿನಲ್ಲಿ ಅವೆಲ್ಲವನ್ನೂ ಗೋರಿಕೊಂಡು…ಅಕ್ಕಪಕ್ಕ ಮತ್ತು ಹಿಂದೆಮುಂದೆ ನೋಡಿದೆ. ಯಾರೊಬ್ಬರೂ ಹತ್ತಿರದಲ್ಲಿ ಕಾಣಲಿಲ್ಲ. ನನಗೆ ದುಡ್ಡು ಸಿಕ್ಕಿದ್ದನ್ನು ಯಾರೂ ನೋಡಲಿಲ್ಲವೆಂದು ತಿಳಿದು ಒಂದು ರೀತಿ ನೆಮ್ಮದಿಯಾಯಿತು.
ನೋಟುಗಳೆಲ್ಲವೂ ಸುರುಳಿ ಸುತ್ತಿದಂತಾಗಿದ್ದವು. ಎಲ್ಲವನ್ನೂ ಬಿಡಿಸಿ ಜೋಡಿಸಿಕೊಂಡೆ. ಆ ನೋಟುಗಳು ಈ ರೀತಿ ಮುದುರಿಕೊಳ್ಳಲು ಕಾರಣವೇನೆಂಬುದನ್ನು ಕುರಿತು ಯೋಚಿಸತೊಡಗಿದೆನು. ನೋಟುಗಳು ಬಿದ್ದಿದ್ದ ತುಸು ದೂರದಲ್ಲಿ ಗರೀಬಿ ಹಟಾವೋ ಬಡಾವಣೆಯಿದೆ. ಅಲ್ಲಿನ ನೂರಾರು ಗುಡಿಸಲುಗಳಲ್ಲಿ ಬೇಸಾಯದ ಕೂಲಿಗಳು, ಜಾಡಮಾಲಿಗಳು, ಕಲ್ಲೊಡ್ಡರು ಮತ್ತು ಇನ್ನಿತರ ಬಡವರ‍್ಗದ ಜನರು ನೆಲೆಸಿದ್ದಾರೆ. ಗರೀಬಿ ಹಟಾವೋ ಬಡಾವಣೆಯಲ್ಲಿರುವ ಯಾವುದೋ ಹೆಂಗಸಿನ ಬಾಳೆಕಾಯಿಯಲ್ಲಿ ಅಂದರೆ ನಡುವಿನ ಎಡೆಯಲ್ಲಿ ಬಿಗಿದು ಕಟ್ಟುವ ಸೀರೆಯ ನೆರಿಗೆಯ ಗಂಟಿನಲ್ಲಿ ಜೋಪಾನವಾಗಿ ಇಟ್ಟಿದ್ದ ನೋಟುಗಳು ಇವಾಗಿರಬೇಕೆಂದು ಊಹಿಸಿದೆ. ಯಾವ ಶ್ರಮಜೀವಿಯ ಬೆವರಿನ ಹಣವೋ ಇದು…ಈ ಹಣವನ್ನು ಸಂಪಾದಿಸಲು ಅವರು ಎಶ್ಟೊಂದು ಕಶ್ಟ ಪಟ್ಟಿರುತ್ತಾರೋ?…ಇಂತಹ ಆಲೋಚನೆಗಳು ನನ್ನನ್ನು ಕಾಡತೊಡಗುತ್ತಿದ್ದಂತೆಯೇ…ಆ ದುಡ್ಡನ್ನು ಜೇಬಿನೊಳಕ್ಕೆ ಇಡಲು ನನಗೆ ಹೆದರಿಕೆಯಾಯಿತು.
ಈಗ ಮತ್ತೆ ಒಂದು ಗಳಿಗೆ ಸುತ್ತಲೂ ನೋಡಿದೆ. ಹತ್ತಿರದಲ್ಲಿ ಯಾರೊಬ್ಬರೂ ಕಾಣಲಿಲ್ಲ. ದುಡ್ಡು ಸಿಕ್ಕಿದ ಜಾಗಕ್ಕೆ ತುಸು ಸಮೀಪದಲ್ಲಿ ದಾರಿಯ ಬದಿಯಲ್ಲಿನ ಒಂದು ಶೆಡ್ ಹೋಟೆಲ್ ಕಣ್ಣಿಗೆ ಬಿತ್ತು. ಸೀದಾ ಅದರೊಳಕ್ಕೆ ಹೋದೆ. ಗಿರಾಕಿಗಳು ಯಾರೂ ಇರಲಿಲ್ಲ.

ಒಳಗಿನಿಂದ “ಏನ್ ಬೇಕಾಗಿತ್ತಪ್ಪ” ಎಂದು ಪ್ರಶ್ನಿಸಿದ ಹೆಂಗಸಿನ ದನಿಯು ಕೇಳಿ ಬಂತು.

” ಏನು ಬೇಕಾಗಿಲ್ಲ ಕಣ್ರಮ್ಮ… ಸ್ವಲ್ಪ ಇಲ್ಲಿ ಬನ್ನಿ ” ಎಂದೆ. ಒಳಗಡೆ ಒಲೆಯ ಮುಂದೆ ಕುಳಿತಿದ್ದವರು, ಎದ್ದು ಬಂದರು.
ಅವರಿಗೆ ಸುಮಾರು ಅಯ್ವತ್ತು ವರುಶವಾಗಿತ್ತು. ತುಂಬಾ ಬಡಕಲಾಗಿದ್ದರು. ಟೀ ಮತ್ತು ಬೋಂಡ ಮಾರಿಕೊಂಡು ಬರುವ ಅಲ್ಪ ಆದಾಯದಲ್ಲೇ ಜೀವನ ನಡೆಸುತ್ತಾ, ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ವ್ಯಕ್ತಿಯೆಂಬುದು…ಅವರನ್ನು ನೋಡಿದ ಮೊದಲ ನೋಟಕ್ಕೆ ಗೋಚರಿಸುತ್ತಿತ್ತು. ಎದ್ದು ಬಂದವರನ್ನು ಹೋಟೆಲ್ಲಿನ ಬಾಗಿಲ ಬಳಿಗೆ ಕರೆದು ಅಲ್ಲಿಂದಲೇ ನನಗೆ ದುಡ್ಡು ಸಿಕ್ಕಿದ ಜಾಗವನ್ನು ತೋರಿಸುತ್ತಾ-

“ನೋಡ್ರಮ್ಮ… ನಿಮ್ಮ ಹೋಟೆಲ್ ಮುಂದಿನ ಆ ಜಾಗದಲ್ಲಿ ನನಗೆ ಈ ದುಡ್ಡು ಈಗ್ತಾನೆ ಸಿಕ್ತು. ಯಾರೋ ಈ ನೋಟುಗಳನ್ನು ಅಲ್ಲಿ ಬೀಳಿಸ್ಕೊಂಡು ಹೋಗವ್ರೆ. ಇಲ್ಲಿ ಒಟ್ಟು ನೂರಿಪ್ಪತ್ತು ರೂಪಾಯಿ ಇದೆ. ಈ ದಾರೀಲಿ ಯಾರಾದ್ರೂ ಅತ್ಕೊಂಡು ದುಡ್ಡನ್ನು ಹುಡುಕ್ತಾ ಬಂದ್ರೆ… “ಹಿಂಗೆ ದುಡ್ಡನ್ನು ಬೀಳಿಸ್ಕೊಂಡಿದ್ದೊ ” ಅಂತ…ಇಲ್ಲೇನಾದ್ರೂ ಬಂದು ನಿಮ್ಮನ್ನ ಕೇಳುದ್ರೆ..ಅಂತಾವರಿಗೆ ಈ ದುಡ್ಡು ಕೊಟ್ಟು ಬುಡ್ರಮ್ಮ” ಎಂದು ಹೇಳುತ್ತಾ, ನೋಟುಗಳನ್ನು ಅವರಿಗೆ ಕೊಡಲು ಹೋದೆ. ಅವರು ದುಡ್ಡಿನತ್ತ ನೋಡುತ್ತಾ-

” ಯಾರ‍್ಗೆ ಅಂತ ಕೊಟ್ಟೀಯಪ್ಪ “… ದುಡ್ಡು ಸಿಕ್ಕಯ್ತೆ ಅಂದ್ರೆ… ಊರೋರೆಲ್ಲಾ ನನ್ನದು ಅಂತ್ಲೆ ಬತ್ತರೆ. ”

” ಹಾಗಲ್ಲ ಕಣ್ರಮ್ಮ… ನೀವಾಗಿದ್ದು ನೀವು ದುಡ್ಡು ಸಿಕ್ಕಿದೆ ಅಂತ ಯಾರ‍್ಗೂ ಹೇಳ್ಬೇಡಿ.. ಅವರಾಗಿದ್ದು ಅವರು ಅತ್ಕೊಂಡೋ ಇಲ್ಲವೇ ಕೇಳ್ಕೊಂಡೋ ಬಂದ್ರೆ..ಎಶ್ಟು ರೂಪಾಯಿ ಅಂತ ಮೊದಲು ಕೇಳಿ. ಸರಿಯಾಗಿ ಹೇಳುದ್ರೆ.. ಆಮೇಲೆ ನೋಟುಗಳು ಯಾವುವು…ಅವು ಎಶ್ಟಿದ್ದೋ ಅಂತ ಕೇಳಿ, ಎಲ್ಲವನ್ನೂ ಸರಿಯಾಗಿ ಹೇಳುದ್ರೆ..ಅಂತಾವರಿಗೆ ಈ ದುಡ್ಡನ್ನು ಕೊಡಿ” ಎಂದು ಹೇಳಿ, ಅವರನ್ನು ಒಪ್ಪಿಸಿ, ಅವರ ಕಯ್ಗೆ ದುಡ್ಡನ್ನು ಕೊಟ್ಟು ಬಸ್ ನಿಲ್ದಾಣದ ಕಡೆಗೆ ಹೊರಟೆ.

ಈಗ ಮತ್ತೆ ನನ್ನ ಮನದಲ್ಲಿ ಹೊಸ ಬಗೆಯ ತಾಕಲಾಟ ಶುರುವಾಯಿತು-
ಸಿಕ್ಕಿದ್ದ ದುಡ್ಡನ್ನು ಸುಮ್ಮನೆ ಇಟ್ಟುಕೊಳ್ಳದೇನೆ.. ಇದ್ಯಾಕೆ ಹೀಗೆ ಮಾಡ್ಬುಟ್ಟೆ… ಮೊದಲೆಲ್ಲಾ ಎಶ್ಟೋ ಸತಿ ನಾಲ್ಕಾಣೆ, ಎಂಟಾಣೆ, ಒಂದು ರೂಪಾಯಿನ ನಾಣ್ಯಗಳು ದಾರೀಲಿ ಹಿಂಗೆ ಸಿಕ್ಕಿದ್ದಾಗ, ಯಾವ ಹಿಂಜರಿಕೇನೂ ಇಲ್ದೆ, ಎತ್ತಿಕೊಂಡು ಜೇಬಿಗೆ ಹಾಕೊಂಡಿಲ್ಲವೇ, ಈಗ ಆ ಹೋಟೆಲ್ಲಿನ ಹೆಂಗಸಿನ ಕಯ್ಗೆ ಕೊಟ್ಟಿದ್ದೀನಲ್ಲ.. ಅವಳು ಸರಿಯಾದೋರ‍್ಗೆ ಕೊಡ್ತಾಳೆ ಅನ್ನೋದು ಯಾವ ಗ್ಯಾರಂಟಿ.. ಒಂದು ವೇಳೆ ಅವಳೇ ಇಟ್ಕೊಂಡು..  ಇಂತಾವರು ಬಂದಿದ್ರು, ಸರಿಯಾಗೇ ಹೇಳುದ್ರು, ಕೊಟ್ಟು ಕಳುಹಿಸಿದೆ ಅಂದ್ರು ಅನ್ನಬಹುದು. ಆಮೇಲೆ ನಾನೇನು, ಅವರ‍್ನ ವಿಚಾರಿಸೋಕೆ ಹೋಗ್ತೀನಾ.. ಆವೊಮ್ಮನಿಗೆ ಒಂದು ದಿನಕ್ಕೆ ಹೋಟೆಲ್ ವ್ಯಾಪಾರದಲ್ಲಿ ಕರ‍್ಚುವೆಚ್ಚ ಕಳೆದು, ಮೂವತ್ತು-ನಲವತ್ತು ರೂಪಾಯಿ ಸಂಪಾದನೆ ಆದದೋ.. ಇಲ್ವೋ ! ಅಂತಾವಳಿಗೆ ಈಗ ನೂರಿಪ್ಪತ್ತು ರೂಪಾಯಿ ತಾನಾಗಿಯೇ ಸಿಕ್ಕಿರುವಾಗ, ತಾನೆ ಇಟ್ಕೊಳ್ಳದೆ ಬಿಡ್ತಳ !.. ಎಂತಹ ದಡ್ ನನ್ಮಗ ನಾನು ! ಕಯ್ಗೆ ಬಂದ ತುತ್ತು, ಬಾಯ್ಗೆ ಬರ‍್ದಂಗೆ ಮಾಡ್ಕೊಂಡೆ ಎಂದು ಚಿಂತಿಸಿತೊಡಗಿದಾಗ, ಮನಸ್ಸಿಗೆ ತುಂಬಾ ಕಸವಿಸಿಯಾಯಿತು. ಆದರೆ ಈಗೇನು ಮಾಡುವ ಹಾಗಿರಲಿಲ್ಲ. ಒಟ್ಟಿನಲ್ಲಿ ಆ ದುಡ್ಡಿನ ರುಣ ನನಗಿಲ್ಲವೆಂದು ಅಂದುಕೊಳ್ಳುತ್ತಾ ಬಸ್ ನಿಲ್ದಾಣದ ಒಳಕ್ಕೆ ಬಂದೆ.

ಸುಮಾರು ಆರೇಳು ದಿನಗಳ ನಂತರ, ಅದೇ ಮಾರ‍್ಗದಲ್ಲಿ ಶೆಡ್ ಹೋಟೆಲ್ಲಿನ ಮುಂದೆ ಬರುತ್ತಿದ್ದಾಗ, ನಾನು ಕೊಟ್ಟಿದ್ದ ದುಡ್ಡಿನ ನೆನಪಾಯಿತು.ಆ ದುಡ್ಡಿನ ಗತಿ ಏನಾಗಿದೆಯೋ ತಿಳಿಯೋಣವೆಂದು ಹೋಟೆಲ್ಲಿನ ಒಳಕ್ಕೆ ಹೋದೆ. ಒಂದಿಬ್ಬರ ಗಿರಾಕಿಗಳು ಟೀ ಕುಡಿಯುತ್ತ ನೆಲದ ಮೇಲೆ ಕುಳಿತಿದ್ದರು. ಒಳಗಿನಿಂದಲೇ ನನ್ನನ್ನು ನೋಡಿದ ಆ ಹೆಂಗಸು-

“ಒಂದು ಗಳ್ಗೆ ನಿಂತ್ಕೊಳಪ್ಪ.. ಬಂದೆ ” ಎಂದರು. ಒಂದೆರಡು ಕುಡಿಕೆ ಮಡಕೆಗಳನ್ನು ಅತ್ತಿತ್ತ ಎತ್ತಿಟ್ಟ ಶಬ್ದ ಒಳಗಡೆಯಿಂದ ಕೇಳಿಬಂತು. ಕೆಲವು ಗಳಿಗೆಯ ನಂತರ ಹೊರಬಂದ ಅವರು-

“ಅವತ್ತಿನಿಂದ ಇವತ್ತಿನವರೆಗೂ ನಾನು ಕಾದು ನೋಡ್ದೆ ಕನಪ್ಪ. ದುಡ್ಡನ್ನ ತೀರಿಸ್ಕೊಂಡಿದ್ದೀವಿ ಅಂತ.. ಯಾರೊಬ್ಬರೂ ಕೇಳ್ಕೊಂಡು.. ಹುಡೀಕೊಂಡು.. ಇತ್ತಗೆ ಬರಲಿಲ್ಲ.. ತಕೊಪ್ಪ ನಿನ್ನ ದುಡ್ಡ ” ಎಂದು ನನ್ನ ಕಯ್ಯಲ್ಲಿ ಇಟ್ಟು-

“ಸರಿಯಾಗಿದ್ದದೆ ಅಂತ ಒಂದ್ ಸಲ ಎಣಿಸಿ ನೋಡ್ಕೊಳಪ್ಪ ” ಎಂದು ಹೇಳುತ್ತಾ, ಒಳಗಡೆ ಉರಿಯುತ್ತಿದ್ದ ಒಲೆಯತ್ತ ನಡೆದರು.

ನೋಟುಗಳನ್ನು ಹಾಗೇಯೆ ಹಿಡಿದುಕೊಂಡು ಶೆಡ್ ಹೋಟೆಲ್ಲಿನಿಂದ ಹೊರಬಂದು ಅವನ್ನು ನೋಡಿದಾಗ ದುಡ್ಡನ್ನೇ ದೊಡ್ಡದೆಂದು ತಿಳಿದಿದ್ದ ನನ್ನನ್ನು ಅವು ಅಣಕಿಸುತ್ತಿರುವಂತೆ ಕಂಡುಬಂದಿತು.

(ಚಿತ್ರ: jansibhathere.blogspot.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಬಾಳಾ ಸಂದಾಕಿದೆ ಕಣಣ್ಣೋ ..

ಅನಿಸಿಕೆ ಬರೆಯಿರಿ: