ಮಂಗಗಳು ಯಾಕೆ ಮಾತನಾಡಲಾರವು?

ಡಿ. ಎನ್. ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 25

nudi_inukuಮಂಗಗಳಿಗೆ ಮಾತನ್ನು ಕಲಿಸಬೇಕೆಂದು ಪ್ರಯತ್ನಿಸುವವರು ಅದಕ್ಕಾಗಿ ಉಲಿಗಳನ್ನು ಬಳಸುವುದಿಲ್ಲ. ಯಾಕೆಂದರೆ, ಮಂಗಗಳು ಎರಡು ಮೂರು ಉಲಿಗಳನ್ನಶ್ಟೇ ಉಲಿಯಬಲ್ಲುವು. ಆದರೆ, ಒಂದು ನುಡಿಯಲ್ಲಿ ಮಾತನಾಡಬೇಕೆಂದಿದ್ದಲ್ಲಿ, ಅದಕ್ಕಾಗಿ ಹಲವಾರು ಉಲಿಗಳನ್ನು ಉಲಿಯಲು ತಿಳಿದಿರಬೇಕಾಗುತ್ತದೆ. ಎತ್ತುಗೆಗಾಗಿ, ಕನ್ನಡದಲ್ಲಿ ನುಡಿಯಲು ಹೆಚ್ಚುಕಡಿಮೆ ಮೂವತ್ತೊಂದು ಉಲಿಗಳು ಬೇಕಾಗುತ್ತವೆ. ಹಾಗಾಗಿ, ಮಂಗಗಳಿಗೆ ಮಾತನ್ನು ಕಲಿಸುವವರು ಉಲಿಗಳ ಬದಲು ಸನ್ನೆಗಳನ್ನು ಬಳಸಬೇಕಾಗಿದೆ.

ನಮಗಿರುವಂತಹ ನೂರಾರು ಉಲಿಗಳನ್ನು ಉಲಿಯುವ ಅಳವು ಮಂಗಗಳಿಗಿಲ್ಲದಿರಲು ನಮ್ಮ ಬಾಯಿಯ ರಚನೆಗೂ ಮಂಗಗಳ ಬಾಯಿಯ ರಚನೆಗೂ ನಡುವಿರುವ ವ್ಯತ್ಯಾಸವೇ ಮುಕ್ಯ ಕಾರಣ. ಮಂಗಗಳ ಬಾಯಿಯ ಬುಡದಲ್ಲೇನೇ ದಪ್ಪವಾದ ಎಲುಬಿರುವ ಎಪಿಗ್ಲೋಟಿಸ್ ಎಂಬ ಅಂಗವಿದೆ. ಮೂಗಿನಿಂದ ಶ್ವಾಸಕೋಶದೊಳಕ್ಕೆ ಉಸಿರು ನೇರವಾಗಿ ಹೋಗುವಂತೆ ಇದು ನೋಡಿಕೊಳ್ಳುತ್ತದೆ; ತಿನ್ನುವ ಸಮಯದಲ್ಲಿ ಈ ಅಂಗ ಉಸಿರಿನ ನಾಳವನ್ನು ಪೂರ‍್ತಿ ಮುಚ್ಚಿಬಿಡುತ್ತದೆ, ಮತ್ತು ತಿಂದ ತಿಂಡಿ ನೇರವಾಗಿ ಹೊಟ್ಟೆಗೆ ಹೋಗುವಂತೆ ಮಾಡುತ್ತದೆ. ಆದರೆ, ನಮ್ಮ ಬಾಯಿಯಲ್ಲಿರುವ ಎಪಿಗ್ಲೋಟಿಸ್‌ಗೆ ಈ ಕಸುವಿಲ್ಲ. ಯಾಕೆಂದರೆ, ಅದರೊಳಗೆ ಮಂಗನ ಎಪಿಗ್ಲೋಟಿಸ್‌ನಲ್ಲಿರುವ ಹಾಗೆ ದಪ್ಪವಾದ ಎಲುಬಿಲ್ಲ.

ಇದಲ್ಲದೆ, ಈ ಅಂಗ ನಮ್ಮ ಗಂಟಲಿನಲ್ಲಿ ಬಹಳ ಕೆಳಗೆ ಉಲಿಪೆಟ್ಟಿಗೆಯ ಹತ್ತಿರ ಇದೆ. ಈ ಕಾರಣಕ್ಕಾಗಿ, ಕೆಲವೊಮ್ಮೆ ನಾವು ತಿಂದ ತಿಂಡಿ ನೇರವಾಗಿ ಹೊಟ್ಟೆಯೊಳಕ್ಕೆ ಹೋಗುವ ಬದಲು ಉಲಿಪೆಟ್ಟಿಗೆಯಿರುವಲ್ಲಿಗೆ ಹೋಗಿ ನಮಗೆ ಉಸಿರುಕಟ್ಟಿದ ಹಾಗಾಗುತ್ತದೆ. ಇದರಿಂದಾಗಿ ಕೆಲವು ಮಂದಿ ಸತ್ತು ಹೋಗುವುದೂ ಇದೆ. ಮಾತಿಗೆ ಬೇಕಾಗುವ ಹಲವಾರು ಉಲಿಗಳನ್ನು ಉಂಟುಮಾಡಲು ಬಾಯಿಯಲ್ಲಿ ಹೆಚ್ಚು ಜಾಗ ಬೇಕಾಗುತ್ತದೆಯೆಂಬ ಒಂದೇ ಕಾರಣಕ್ಕಾಗಿ, ಹೀಗೆ ನಮ್ಮ ಬಾಯಿಯಲ್ಲಿ ಉಸಿರುನಾಳ ಮತ್ತು ಆಹಾರನಾಳಗಳನ್ನು ಬೇರ‍್ಪಡಿಸುವ ಜಾಗ ತುಂಬಾ ಅಪಾಯಕರವಾದ ರೀತಿಯಲ್ಲಿ ರಚಿತವಾಗಿದೆ.

ಉಲಿಗಳ ಬದಲು ಕಯ್ಸನ್ನೆ, ಕಣ್ಣುಸನ್ನೆ ಮೊದಲಾದವುಗಳನ್ನು ಬಳಸಿಯೂ ‘ಮಾತ’ನಾಡಲು ಬರುತ್ತದೆ ಎಂಬುದನ್ನು ಕಿವುಡರ ಸನ್ನೆನುಡಿ ತೋರಿಸಿಕೊಟ್ಟಿದೆ; ಮಂಗಗಳು ಇಂತಹ ಸನ್ನೆಗಳನ್ನು ಬಳಸಬಲ್ಲುವಾದರೂ ಬೇರೆ ಕೆಲವು ಕಾರಣಗಳಿಗಾಗಿ ಅವಕ್ಕೆ ನಮ್ಮ ಹಾಗೆ ಮಾತನ್ನು ಇಲ್ಲವೇ ನುಡಿಯನ್ನು ಬಳಸಲು ಸಾದ್ಯವಾಗದು. ಎತ್ತುಗೆಗಾಗಿ, ಮಾತನ್ನು ಮತ್ತು ಅದಕ್ಕೆ ಬೇಕಾಗುವ ಸಾವಿರಾರು ಪದಗಳನ್ನು ಮತ್ತು ಸೊಲ್ಲರಿಮೆಯ ಕಟ್ಟಲೆಗಳನ್ನು ಇರಿಸಿಕೊಳ್ಳಲು, ಮತ್ತು ಬೇಕಾದಾಗ ಬೇಕಾದಂತೆ ಅವನ್ನು ಬಳಸಿಕೊಳ್ಳಲು ಮಿದುಳು ಸಾಕಶ್ಟು ದೊಡ್ಡದಾಗಿರಬೇಕಾಗುತ್ತದೆ; ಆದರೆ, ಮಂಗಗಳಿಗಿರುವ ಮಿದುಳು ನಮ್ಮ ಮಿದುಳಿನ ಕಾಲಂಶದಶ್ಟೂ ಇಲ್ಲ.

ಮಾನವನಿಗೂ ಇತರ ಪ್ರಾಣಿಗಳಿಗೂ ನಡುವೆ ಒಂದು ಮಾತನ್ನು ಯಾವಾಗ ಮತ್ತು ಎಲ್ಲಿ ಬಳಸಲು ಸಾದ್ಯ ಎಂಬ ವಿಶಯದಲ್ಲಿ ದೊಡ್ಡ ವ್ಯತ್ಯಾಸವಿದೆ. ಶಾಲೆಯಿಂದ ಬಂದ ಹುಡುಗ ಆವತ್ತು ಶಾಲೆಯಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ತನ್ನ ತಾಯಿಗೆ ಹೇಳಬಲ್ಲ; ಮಾರನೆಯ ದಿವಸ ತನ್ನ ತರಗತಿಗೆ ಯಾರು ಬರಲಿದ್ದಾರೆ, ಅದಕ್ಕಾಗಿ ತಾನು ಏನು ಮಾಡಬೇಕು ಎಂಬುದನ್ನೂ ತಿಳಿಸಬಲ್ಲ; ತನ್ನ ಗೆಳೆಯ ಈಗ ತನ್ನ ಮನೆಯಲ್ಲಿ ಏನು ಮಾಡುತ್ತಿರಬಹುದು ಎಂಬುದನ್ನೂ ಕಲ್ಪಿಸಿ ಹೇಳಬಲ್ಲ. ಬೇರೆ ಪ್ರಾಣಿಗಳು ಇದೊಂದನ್ನೂ ಮಾಡಲಾರವು.

ಬೆಕ್ಕು ಹಸಿವಾದಾಗ ಮಾತ್ರ ಮಿಯಾಂ ಎನ್ನಬಹುದಲ್ಲದೆ ತನಗೆ ಬೆಳಿಗ್ಗೆ ಹಸಿವಾಗಿತ್ತು ಎಂಬುದನ್ನು ಸೂಚಿಸಲಾರದು. ಜೇನುಹುಳುಗಳು ಮಾತ್ರ ಇದಕ್ಕೆ ಸ್ವಲ್ಪಮಟ್ಟಿಗಿನ ಹೊರಪಡಿಕೆಗಳಾಗಿವೆಯೆಂದು ಹೇಳಬಹುದು; ಅವು ತುಂಬಾ ಹೂಬಿಟ್ಟಿರುವ ಮರವೊಂದನ್ನು ನೋಡಿ ಗೂಡಿಗೆ ಮರಳಿ ಬಂದ ಮೇಲೆ ಅದು ಎಲ್ಲಿದೆಯೆಂಬುದನ್ನು ಉಳಿದ ಜೇನುಹುಳುಗಳಿಗೆ ತಮ್ಮ ಕುಣಿತದ ಮೂಲಕ ತಿಳಿಸಬಲ್ಲುವು. ಆದರೆ, ಅವುಗಳ ಈ ಕಸುವಿಗೂ ಒಂದು ಮಿತಿಯಿದೆ: ಅವು ನಮ್ಮ ಹಾಗೆ ಮುಂದೆ ಏನು ನಡೆಯಬಹುದೆಂಬುದನ್ನು ಊಹಿಸಿ ತಿಳಿಸಲಾರವು.

ಮಾತನ್ನು ಬಳಸಲು ನಮಗೆ ಹೊರಗಿನ ಉತ್ತೇಜನ ಬೇಕಾಗಿಲ್ಲ. ಕೋಪ ಬರದಿದ್ದರೂ ಕೋಪದಿಂದ ಮಾತನಾಡಬಲ್ಲೆವು; ಹೋಳಿಗೆಯನ್ನು ತಿನ್ನದಿದ್ದರೂ ಅದರ ಸವಿಯನ್ನು ತಿಂದವನ ಹಾಗೆ ವರ‍್ಣಿಸಬಲ್ಲೆವು; ಸ್ವರ‍್ಗ ನರಕಗಳನ್ನು ಕಾಣದಿದ್ದರೂ ಅಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಬಲ್ಲೆವು. ಮಾನವನ ಮಾತಿನ ಬಳಕೆಯಲ್ಲಿ ಮಾತ್ರವೇ ಕಾಣಿಸುವ ಈ ಕಾಲ ಮತ್ತು ಜಾಗಗಳ ಕಟ್ಟಿಲ್ಲದಿರುವಿಕೆ ಅವನ ಮಾತಿಗೆ ಒಂದು ದೊಡ್ಡ ಕಸುವನ್ನು ತಂದುಕೊಟ್ಟಿದೆ. ನಮ್ಮ ಇಡೀ ಸಂಸ್ಕ್ರುತಿಯೇ ಈ ಕಸುವನ್ನು ಅವಲಂಬಿಸಿದೆ. ಅದಿಲ್ಲದೆ ನಾವು ಯಾವ ಸಂಶೋದನೆಯನ್ನೂ ಮಾಡಲಾರೆವು; ಸಾಹಿತ್ಯ, ನಾಟಕ, ಸಿನೆಮಾ, ಮೊದಲಾದ ನಮ್ಮ ಸಂಸ್ಕ್ರುತಿಯ ಯಾವ ಅಂಶವೂ ಅದಿಲ್ಲದೆ ಬೆಳೆದಿರಲಾರದು.

ಸಾಮಾನ್ಯವಾಗಿ, ನಾವು ನಡೆಸುವ ಹಲವಾರು ಬಗೆಯ ಕೆಲಸಗಳ ಕುರಿತಾಗಿರುವ ತಿಳುವಳಿಕೆಗಳು ನಮ್ಮ ಮಿದುಳಿನಲ್ಲಿ ಅರಿವಿಗೆ ಬಾರದ ರೂಪದಲ್ಲಿರುತ್ತವೆ. ಅವು ಎಂತಹವೆಂದು ನಮಗೆ ತಿಳಿಯದಿದ್ದರೂ ನಮ್ಮ ಕೆಲಸಗಳ ಮೇಲೆ ಅವುಗಳ ಕಯ್ವಾಡವಿದ್ದೇ ಇರುತ್ತದೆ. ಇಂತಹ ತಿಳುವಳಿಕೆಗಳಲ್ಲಿ ಹಲವನ್ನು ನಾವು ನಮ್ಮ ಅರಿವಿಗೆ ಬರುವಂತೆ ಮಾಡಬಲ್ಲೆವು, ಮತ್ತು ಮಾತಿನ ಮೂಲಕ ವಿವರಿಸಬಲ್ಲೆವು; ಆದರೆ ಬೇರೆ ಪ್ರಾಣಿಗಳು ಹಾಗೆ ಮಾಡಲಾರವು ಎಂಬುದು ಅವನ್ನು ನಮ್ಮಿಂದ ಬೇರ‍್ಪಡಿಸುವ ಇನ್ನೊಂದು ದೊಡ್ಡ ಪರಿಚೆಯಾಗಿದೆ.

ಈ ಪರಿಚೆ ನಮ್ಮ ಮಾತಿಗೆ ಒಂದು ದೊಡ್ಡ ಕಸುವನ್ನೂ ತಂದುಕೊಟ್ಟಿದೆ. ಎತ್ತುಗೆಗಾಗಿ, ಮನಸ್ಸಿಗೆ ಬಂದುದನ್ನು ನಾವು ಬರಬರನೆ ಉಸಿರಬಲ್ಲೆವು; ಇಲ್ಲವೇ ಅದನ್ನು ಮೊದಲಿಗೆ ನಮ್ಮ ಅರಿವಿಗೆ ತಂದುಕೊಂಡು, ಕೇಳುಗನ ಮೇಲೆ ಅದು ಎಂತಹ ಪರಿಣಾಮವನ್ನು ಬೀರಬಹುದು ಎಂಬುದನ್ನು ಆಲೋಚಿಸಿ, ಅನಂತರ ಅದನ್ನು ಆತನಿಗೆ ತಿಳಿಸಬಲ್ಲೆವು; ಇಲ್ಲವೇ ತಿಳಿಸದೆಯೂ ಇರಬಲ್ಲೆವು.

ಇತರ ಕೆಲಸಗಳಲ್ಲೂ ನಮ್ಮ ತಿಳುವಳಿಕೆಯನ್ನು ಅರಿವಿಗೆ ಬರುವಂತೆ ಮಾಡುವ ಮೂಲಕ ಆ ಕೆಲಸ ಮಾಡುವ ಕ್ರಮವನ್ನು ನಾವು ಹಲವು ರೀತಿಯಲ್ಲಿ ಬದಲಿಸಿನೋಡಬಲ್ಲೆವು ಮತ್ತು ಅದನ್ನು ಮಾಡಲು ಹೊಸ ಹೊಸ ಹೊಲಬುಗಳನ್ನು ಕಂಡುಹಿಡಿಯಬಲ್ಲೆವು. ಎತ್ತುಗೆಗಾಗಿ, ಕಣ್ಣಿನಿಂದ ಕಾಣಲು ಕಣ್ಣಿನ ಮಸೂರವನ್ನು ಹೇಗೆ ಹಿಗ್ಗಿಸುತ್ತೇವೆ ಇಲ್ಲವೇ ಕುಗ್ಗಿಸುತ್ತೇವೆ ಎಂಬುದನ್ನು ಅರಿವಿಗೆ ಎಟಕುವ ತಿಳುವಳಿಕೆಯಾಗಿ ಬದಲಿಸಿರುವ ಕಾರಣ, ಕಣ್ಣಿನ ದೋಶವನ್ನು ನಿವಾರಿಸುವುದಕ್ಕಾಗಿ ಕನ್ನಡಕವನ್ನು ಬಳಸುವ ಹೊಲಬನ್ನು ಕಂಡುಹಿಡಿಯಲು ನಮಗೆ ಸಾದ್ಯವಾಗಿದೆ.

ನಮ್ಮ ಮಾತಿನ ಬಳಕೆಯಲ್ಲೂ ಈ ಪರಿಚೆಯ ನೆರವಿನಿಂದ ಹಲವಾರು ಬಗೆಯ ಬದಲಾವಣೆಗಳನ್ನು ನಾವು ನಮ್ಮ ಜೀವನದಲ್ಲಿ ಮಾಡಿಕೊಂಡಿದ್ದೇವೆ. ಎತ್ತುಗೆಗಾಗಿ, ಈ  ಪರಿಚೆಯಿಲ್ಲದಿದ್ದಲ್ಲಿ ಮಾತನ್ನು ನಮಗೆ ಬರಹ ರೂಪಕ್ಕಿಳಿಸಲು ಆಗುತ್ತಿರಲಿಲ್ಲ. ನಮ್ಮ ನುಡಿಯಲ್ಲಿ ಬೇರೆ ಬೇರೆ ರೀತಿಯ ಅರಿಮೆಗಳ (ಶಾಸ್ತ್ರ ಮತ್ತು ವಿಜ್ನಾನಗಳ) ಬೆಳವಣಿಗೆಗಳುಂಟಾಗುವುದಕ್ಕೂ ಈ ಪರಿಚೆಯೇ ಕಾರಣ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು) 

<<ನುಡಿಯರಿಮೆಯ ಇಣುಕುನೋಟ – 24

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 29/01/2014

    […] << ನುಡಿಯರಿಮೆಯ ಇಣುಕುನೋಟ – 25  […]

ಅನಿಸಿಕೆ ಬರೆಯಿರಿ:

%d bloggers like this: