ತೇಜಸ್ವಿ, ನೀನು ಕಡಲು ನಾನು ಮರಳು!
– ರತೀಶ ರತ್ನಾಕರ.
ತೋಚಿದ್ದು ಗೀಚಿ ಹಲವು ಹಗಲುಗಳಾಯ್ತು. ಏಕೋ ಗೊತ್ತಿಲ್ಲ, ಇತ್ತೀಚಿಗೆ ಹಲವು ಮೋರೆಗಳು, ಕೆಲವು ತಿಟ್ಟಗಳು ಒಳಗನ್ನು ಕೊರೆಯುತ್ತಿವೆ. ನಾನು ಎಲ್ಲಿಗೆ ಸೇರಬೇಕು ಎಂದುಕೊಂಡಿದ್ದೆನೋ ಆ ಗುರಿಯು ತೂಗುಯ್ಯಾಲೆಯಲ್ಲಿದೆ. ಏನಾದರೊಂದು ಸಾದಿಸಿಯೇ ಸಾಯೋಣ ಎಂದು ಒಮ್ಮೊಮ್ಮೆ ಎನಿಸಿದರೆ, ಇದ್ದ ಬಾಳನ್ನು ನೆಟ್ಟಗೆ ಬದುಕಿ ಹೋದರೆ ಸಾಕು ಎಂಬ ತಣಿವು ಮತ್ತೊಮ್ಮೆ. ಹೋಗುತ್ತಿರುವುದು ಒಂದೇ ದಾರಿಯಲ್ಲಿ, ಯಾವ ಕಯ್ಮರವು ಎದುರಾಗಿಲ್ಲ ಆದರೂ ಹಾದಿ ಬದಲಿಸುವ ಎಣಿಕೆ, ಹಿಂತಿರುಗಿ ಹೋಗುವ ಹಪಹಪಿ, ಮುಂದೆನಿತು ದೂರವೋ ಎಂಬ ಕೇಳ್ವಿ. ಒಳಗಿನ ಈ ದೊಂಬರಾಟಕ್ಕೆ ಯಾವ ಮದ್ದು ಇಲ್ಲಾ ಬಿಡಿ. ಅದರಾಟವನ್ನು ನೋಡಲು ಮತ್ತು ಅನುಬವಿಸಲು ನಾನೊಬ್ಬನೇ ಬಿಟ್ಟಿಯ ನೋಡುಗ, ಬಲಿಪಶುವೂ ನಾನೇ!
ಇತ್ತೀಚಿಗೆ ಒಂದು ತಿಟ್ಟ ತುಂಬಾ ಕಾಡುತ್ತಿದೆ. ಅದು ಮೂಡಿಗೆರೆಯ ಹಸಿರು ಕಾಪಿತೋಟದ ನಡುವೆ ನಿರುತ್ತರವಾಗಿರುವ ತಿಟ್ಟ. ಎಲ್ಲಿ ಹುಡುಕಲಿ ಆ ತಿಟ್ಟದೊಳಗಿರುವ ತೇಜಸ್ವಿಯ? ದಟ್ಟ ಹಸಿರು ಕಾಡಿನ ನಡುವೆ ತಲೆಯೆತ್ತಿ ಬೆಳೆದು, ಹೇರಳ ಹಣ್ಣುಗಳ ಹೆತ್ತು, ಹಕ್ಕಿಗಳ ಕರೆಯುತಿರುವ ಮರದ ಸಿರಿಯಲ್ಲೇ? ಆ ಹಣ್ಣುಗಳ ಹೊಟ್ಟೆ ಬಿರಿಯೇ ತಿಂದು ಕೊಕ್ಕ ಪುಕ್ಕದೊಳಗೆ ಒರೆಸುತ್ತಿರುವ ಹೆಸರರಿಯದ ಹಕ್ಕಿಯ ಕಣ್ಣುಗಳಲ್ಲೇ? ಜುಂಯ್‍ಗುಡುವ ಕಾಡಿನಿಂದ ಹರಿವ ನೀರ ಕೋಡಿಯೊಂದು ಊರ ಬಯಲ ಪಕ್ಕದಲ್ಲಿ ಕೊಂಚ ವಿಶ್ರಾಂತಿ ಪಡೆಯುತಿದೆ, ಅಲ್ಲಿ ಹೋಗಿ ಪ್ರತಿಬಿಂಬ ಹುಡುಕಲೇ? ಇಲ್ಲವೇ , ಹಸಿಮಣ್ಣಿನ ಒಳಗೆ ಹುದುಗಿರುವ ಎರೆಹುಳುವನ್ನು ಹಿಡಿದು ಗಾಳಕ್ಕೆ ಸಿಕ್ಕಿಸಿ, ನೀರು ಸಾಕಿದ ಮೀನಿಗೆ ಹೊಂಚಿಹಾಕುತ್ತ ಕಾಯಲೇ? ಅಯ್ಯೋ… ಈ ತೊಳಲಾಟಕ್ಕೆ ಏನು ಹೇಳಬೇಕೋ ಅರಿಯೇ? ಎಲ್ಲವು ಮರುನುಡಿಯ ಬಯಸುವ ಕೇಳ್ವಿಗಳು ಆದರೂ ಒಮ್ಮೆಯೂ ಕೇಳಿಲ್ಲ ಹೊರಗೆ, ಅವುಗಳೇನಿದ್ದರೂ ಒಳಗಿನ ಹುಲಿಗಳು ಹೊರಗಿನ ಇಲಿಗಳು!
ತೇಜಸ್ವಿ ಎಂದೊಡನೆ ನೆನಪಾಗುವುದು ನನ್ನ ಗೆಳೆಯ ಕಿಶೋರ. ಕಯ್ಗೆ ಸಿಕ್ಕ ಹೊತ್ತಗೆಗಳೊಡನೆ ಹೊತ್ತು ಕಳೆಯುತ್ತಿದ್ದವನು ನಾನು, ತೇಜಸ್ವಿಯ ಹುಚ್ಚು ನನಗೆ ಅವನೇ ಹಿಡಿಸಿದ್ದು. ಎಶ್ಟು ತಿಳಿದುಕೊಂಡಿದ್ದಾನೆ ಆತ ಅವರ ಬಗ್ಗೆ. ‘ಬಗ್ಗೆ’ ಎಂದರೆ ಅವರ ಊಟ-ತಿಂಡಿಯ, ಬಟ್ಟೆ-ಬರೆಯ ಅಚ್ಚುಮೆಚ್ಚುಗೆಗಳಲ್ಲ. ಹಸಿರು ಕಾಡಿನ ನಡುವೆ, ಹಲುಬುವ ಮಂದಿಯ ನಡುವೆ, ಹಣದ ಮೇಲ್ತನದ ನಡುವೆ ತನಗೆ ಬೇಕಾದ ಬಾಳನ್ನು ಬಾಳಿದ ಅವರ ಗಟ್ಟಿತನವನ್ನು ಅರಿತವನು ಕಿಶೋರ. ಹಳ್ಳಿಯವನಲ್ಲಿ ನೂರೆಂಟು ಕುರುಡು ನಂಬಿಕೆಗಳು, ಪೇಟೆಯವನ ಬಳಿ ಕೂಡ ಅವು ಮೂಟೆ ಮೂಟೆಗಳಶ್ಟು ಇವೆ. ಕಲಿತವನು ಕಲಿತಿಲ್ಲ ಬಾಳುವುದನ್ನು. ಎಲ್ಲರೂ ಹೊರಟಿಹರು ಒಬ್ಬರ ಹಿಂದೆ ಒಬ್ಬರು ಅದೊಂದು ಕುರಿಯ ಮಂದೆ, ಅಲ್ಲಿ ಜನ ಮರುಳೋ? ಜಾತ್ರೆ ಮರುಳೋ? ಆದರಿವನೊಬ್ಬ ಹೊರಟಿದ್ದ, ತನ್ನದೇ ಹಾದಿಯಲ್ಲಿ, ಎಲ್ಲರೂ ಅಲ್ಲಿ ಕತ್ತಲು ಕತ್ತಲು ಎಂದರು. ಆದರಿವನೆಂದ “ಅಯ್ಯೋ ಹುಚ್ಚರಾ… ನಾ ಹೊರಟಿರುವ ಹಾದಿಯಲಿ ಮೊದಲು ನನಗೂ ಕತ್ತಲಿತ್ತು. ಅರಿಮೆಯ ದೊಂದಿಯ ಹಿಡಿದು ಮುನ್ನಡೆಯುತಿರುವೆ. ಬೆಳಕಿಗಂತು ಇಲ್ಲಿ ಬಡತನವಿಲ್ಲ, ಎಡವಿ ಬೀಳುವ ಹೆದರಿಕೆಯಿಲ್ಲ, ಬಿದ್ದರೂ ಮಯ್ ಕೊಡವಿ ಮುಂದಡಿಯಿಡದಿರಲು ನನ್ನತನವ ನಾ ಮರೆತಿಲ್ಲ.”
ಯಾಕೋ ಗೊತ್ತಿಲ್ಲ, ನನಗೂ ಇವರನ್ನೊಮ್ಮೆ ಕಾಣಬೇಕೆನಿಸಿದೆ. ಎರೆಡು ನಳಿಗೆಯ ಕೋವಿ ಹಿಡಿದು, ಅವರೊಡನೆ ನಡೆದು, ಕಾಡೆಲ್ಲಾ ಅಲೆದು ಅರಿಕೆ ತೀರುವ ತನಕ ಹರಟೆ ಹೊಡೆಯಬೇಕೆನಿಸಿದೆ. ಜುಗಾರಿ ಕ್ರಾಸಿನಲ್ಲೊಮ್ಮೆ ಕುಳಿತು ಕರ್‍ವಾಲೋ ಸಾಹೇಬರನ್ನು ಬೇಟಿ ಮಾಡಿ, ಹಾಗೆಯೇ ಮಂದಣ್ಣನನ್ನು ಒಮ್ಮೆ ಮಾತನಾಡಿಸಬೇಕೆನಿಸಿದೆ. ಕಾಡಿನ ಕತೆಗಳನ್ನೊಮ್ಮೆ ಕೇಳಿ, ಹಕ್ಕಿಗಳ ಲೋಕವನ್ನೊಮ್ಮೆ ಇಣುಕಿ ನೋಡಿ ಬರಬೇಕಿನಿಸಿದೆ. ಹುಲಿಯೂರು ಸರಹದ್ದನ್ನು ದಾಟಿ ಅಬಚೂರಿನ ಪೋಸ್ಟ್ ಆಪೀಸಿನ ಕಡೆ ನಡೆದು ಕಿರಗೂರಿನ ಗಯ್ಯಾಳಿಗಳ ಗಲಾಟೆಯ ನೋಡಬೇಕಿನೆಸಿದೆ. ಕುಬಿ ಮತ್ತು ಇಯಾಲರ ಜೊತೆಗೂಡಿ ರುದ್ರ ಪ್ರಯಾಗದ ನಿಗೂಡ ಮನುಶ್ಯರ ಹುಡುಕಿ ಅವರಿಂದ ತಬರನ ಕತೆ ಕೇಳಬೇಕಿನಿಸಿದೆ. ಈ ರಹಸ್ಯ ವಿಶ್ವದ ಚಿದಂಬರ ರಹಸ್ಯವ ಬಿಡಿಸಿ ಮಾಯಮ್ರುಗವ ಬೆನ್ನತ್ತ ಬೇಕೆನಿಸಿದೆ.
ಇದೊಂದು ಮಾಯಾಲೋಕ, ವಿಸ್ಮಯದ ಜಗತ್ತು, ಇಲ್ಲಿವೆ ನಡೆಯುವ ಕಡ್ಡಿಗಳು ಹಾರುವ ಎಲೆಗಳು. ಸಾಕೆನಿಸಿದೆ ಇದರ ಸಹವಾಸ, ಹಾರುವ ತಟ್ಟೆಯಲ್ಲಿ ಕುಳಿತು ಕನ್ನಡ ನಾಡಿನ ಹಕ್ಕಿಗಳ ಕಂಡು ಅದರಲ್ಲೇ ಊರನ್ನು ಸೇರಿ ಸಹಜ ಕ್ರುಶಿಯ ಮಾಡಬೇಕೆನಿಸಿದೆ. ನಿಸರ್‍ಗದ ನಡುವೆ ಅದರ ನೇಮದಂತೆ ನಡೆದು ಅದರೊಳಗೆ ಕರಗಿಹೋಗಬೇಕೆನಿಸಿದೆ. ಹೊಸತನದ ಬೆನ್ನು ಹತ್ತಿ ಕಳೆದುಕೊಂಡಿರುವ ನನ್ನನ್ನು ಹುಡುಕಬೇಕೆನಿಸಿದೆ.
ಒಟ್ಟಿನಲ್ಲಿ ತೇಜಸ್ವಿಯನ್ನೊಮ್ಮೆ ಅರಿಯಬೇಕೆನಿಸಿದೆ. ಆಗಲಾದರೂ ಅರಿಮೆಯ ಗಾಳಿ ನನಗೂ ಸೋಕಬಹುದೇನೋ? ನನ್ನತನದಿ ನಡೆಯುವ ಹಾದಿ ನನಗೆ ಕಾಣಬಹುದೇನೋ? ಹೊಸವಿಚಾರಗಳಿಗಿನ್ನೂ ತೆಲೆಹಾಕಿಲ್ಲ, ಅದನ್ನೊಮ್ಮೆ ಅರಿತು ಅವರನ್ನರಿಯುವ ಬಯಕೆ. ಗೊಂದಲದ ಗೂಡಾಗಿರುವ ತಲೆಗೆ ನೆಮ್ಮದಿಯನ್ನು ಕೊಟ್ಟು ಗುರಿಯನ್ನು ಗಟ್ಟಿಮಾಡುವ ಬಯಕೆ.
ಅವರಿಗಾಗಿ ಗೀಚಿದ ಕೆಲವು ಸಾಲುಗಳು.
|ತೇಜಸ್ವೀ, ನೀನು ಕಡಲು ನಾನು ಮರಳು|
ನೀನು ಕಡಲು ನಾನು ಮರಳು
ದಡದೊಳು ಹರಡಿಕೊಂಡಿಹೆನು
ತಾಗುತ ಮಳೆ ಬಿಸಿಲು ಗಾಳಿಗೆ,
ಎದುರುನೋಡುತ್ತಿರುವೆ ಸೇರಲು ನಿನ್ನನು।
ಬಂದೆರಗುತ್ತಿವೆ ನಿನ್ನರಿವಿನ ಅಲೆಗಳು
ಒಮ್ಮೆ ಮೆಲ್ಲನೆ ಸವರಿ ಹೋದವು
ಮತ್ತೊಮ್ಮೆ ಅಬ್ಬರಿಸಿ ಹೊಡೆದವು,
ಕೊಚ್ಚಿಕೊಂಡು ಹೋಗಬಾರದೇಕೆ ಒಮ್ಮೆಲೆ?
ಕಾಡು ಬಿಟ್ಟು ಊರು ಸುತ್ತಿ ಬರುವ
ತಿಳಿವಿಗರ ನದಿಯ ಬರಮಾಡಿಕೊಳ್ಳುವೆ
ನಿನ್ನೆದುರಿಗೇ ಬಿದ್ದಿರುವೆ, ಸೇರಿಸಿಕೊಳ್ಳಬಾರದೇಕೆ?
ನೆಮ್ಮದಿಯಲಿ ನಿದಿರಿಸುವೆ ಕಡಲ ತಳದಲಿ।
ತುಂಬಿದ ತಿಂಗಳಿರುಳು ಬರಲಿ
ಮುಗಿಲೆತ್ತರಕೆ ಚಿಮ್ಮುತ ನಿನ್ನಲೆಗಳು
ಒಮ್ಮೆಲೆ ಕರೆದೊಯ್ಯಲಿ ನನ್ನ
ಅಲೆಗಳ ಗೋಜಿಲ್ಲದ ಕಡಲ ನಡುವಿಗೆ|
||ತೇಜಸ್ವೀ, ನೀನು ಕಡಲು ನಾನು ಮರಳು||
(ಚಿತ್ರ: www.thehindu.com)
ಇತ್ತೀಚಿನ ಅನಿಸಿಕೆಗಳು