“ನಿಂಗೆಲ್ಲೊ ಸುಮಾನ ಕಣಪ್ಪ!”

ಸಿ.ಪಿ.ನಾಗರಾಜ

AVN12_PADDY_12055f

ಇಂದಿಗೆ ಸುಮಾರು ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು. ತಿಂಗಳಿನ ಮೊದಲನೆಯ ವಾರದಲ್ಲಿ ಒಂದು ದಿನ ಕಾಳಮುದ್ದನದೊಡ್ಡಿಯಲ್ಲಿರುವ ಮಯ್ಸೂರು ಬ್ಯಾಂಕಿಗೆ ಸಂಬಳದ ಹಣವನ್ನು ಪಡೆಯಲೆಂದು ಹೋದೆನು.

ಅಂದು ಅಲ್ಲಿ ತುಂಬಾ ಜನರಿದ್ದರು. ಅವರಲ್ಲಿ ಬೇಸಾಯಗಾರರೇ ಹೆಚ್ಚಾಗಿದ್ದರು. ಬ್ಯಾಂಕಿನಲ್ಲಿ ಚೆಕ್ ಬರೆದು ಕೊಟ್ಟು, ಟೋಕನ್ ಪಡೆದು, ಹಣಕ್ಕಾಗಿ ಕಾಯುತ್ತ ಕುಳಿತಿದ್ದಾಗ, ನನ್ನ ಪಕ್ಕದಲ್ಲಿದ್ದವರನ್ನು ಕುರಿತು-

“ಇವತ್ತೇನು ಇಶ್ಟೊಂದು ಜನ ರಯ್ತರು ಬ್ಯಾಂಕಿಗೆ ಬಂದವ್ರಲ್ಲ!” ಎಂದು ಕೇಳಿದೆನು.

“ಕಬ್ಬಿನ ಬೆಳೆ ಸಾಲ ಕೊಡ್ತಾವ್ರೆ ಕಣಪ್ಪ. ಅದ ತಕೋಕೆ ಬಂದವ್ರೆ”.

“ನೀವು.. ಸಾಲ ತಕೋಕೆ ಬಂದಿದ್ದೀರಾ?”

“ಹೂ ಕಣಪ್ಪ “ಎಂದು ಉತ್ತರಿಸಿದ ಅವರು, ಕುಳಿತ ಕಡೆಯಿಂದಲೇ ಹಣ ಕೊಡುತ್ತಿರುವ ಟೇಬಲ್ಲಿನ ಕಡೆಗೆ ಒಂದು ಬಗೆಯ ಆತಂಕದಿಂದ ನೋಡತೊಡಗಿದರು.

ಈಗ ನಾನು ಅಲ್ಲಿ ಜಮಾಯಿಸಿದ್ದ ನಮ್ಮ ಹಳ್ಳಿಗಾಡಿನ ಬೇಸಾಯಗಾರರ ಉಡುಗೆ-ತೊಡುಗೆಗಳನ್ನು ಗಮನಿಸತೊಡಗಿದೆನು . ಅವರಲ್ಲಿ ಹೆಚ್ಚಿನ ಮಂದಿ ಅಂಗಿ-ಚಡ್ಡಿಯನ್ನು ತೊಟ್ಟಿದ್ದರು . ಇನ್ನು ಕೆಲವರು ಉಟ್ಟಿದ್ದ ಪಂಚೆಗಳು ಸಾಕಶ್ಟು ಕೊಳೆಯಾಗಿದ್ದವು . ಅವರಲ್ಲಿ ಬಹುತೇಕ ಮಂದಿ ಕಾಲಿಗೆ ಚಪ್ಪಲಿಯನ್ನೇ ಹಾಕಿರಲಿಲ್ಲ. ಹೊಲಗದ್ದೆ ತೋಟಗಳಲ್ಲಿ ದುಡಿಯುವ ನಮ್ಮ ರಯ್ತರು ಎಶ್ಟೇ ಸಂಪಾದಿಸಿದರೂ, ತಮ್ಮ ದಿನನಿತ್ಯದ ಉಡುಗೆ-ತೊಡುಗೆಗಳ ಬಗ್ಗೆ ಅಶ್ಟಾಗಿ ಗಮನ ಕೊಡದಿರುವುದರ ಬಗ್ಗೆ, ನಾನು ಅನೇಕ ಸಾರಿ ಆಲೋಚಿಸಿದ್ದೆನು. ಆದ್ದರಿಂದ ಈಗ ಮತ್ತೊಮ್ಮೆ ನನ್ನ ಪಕ್ಕದಲ್ಲಿ ಕುಳಿತಿದ್ದ ರಯ್ತರನ್ನು, ಅವರಿಗೆ ತಿಳಿಯದಂತೆ ಓರೆಗಣ್ಣಿನಿಂದ ಗಮನಿಸತೊಡಗಿದೆನು . ಸುಮಾರು ಅಯ್ವತ್ತು-ಅಯ್ವತ್ತಯ್ದು ವರುಶ ವಯಸ್ಸಿನ ಅವರ ಮಯ್ಯಿ ಕಟ್ಟುಮಸ್ತಾಗಿತ್ತು. ಉದ್ದನೆಯ ಚಡ್ಡಿಯ ಕೆಳಗೆ ಕಣಕಾಲಿನ ಕಂಡದಲ್ಲಿನ ನರಗಳು ಎದ್ದು ಕಾಣುತ್ತಿದ್ದವು . ಬರಿಗಾಲಲ್ಲೇ ಬ್ಯಾಂಕಿಗೆ ಬಂದಿದ್ದ ಅವರ ಹಣಕಾಸಿನ ವಿವರಗಳನ್ನು ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ-

“ಯಾವೂರ‍್ನೋರು ನೀವು?”

“ಕರಡಕೆರೆ ಕಣಪ್ಪ”

“ಎಶ್ಟು ಎಕರೆ ಜಮೀನಿದೆ?”

“ಮೂರು ಎಕರೆ ಅದೆ”. ನನ್ನ ಮಾತುಗಳಿಗೂ ಉತ್ತರಿಸುತ್ತಿದ್ದರೂ, ಅವರ ನೋಟ ಮಾತ್ರ ಆಗಾಗ್ಗೆ ಹಣ ಕೊಡುವ ಟೇಬಲ್ಲಿನ ಕಡೆಗೆ ಹಾಯುತ್ತಿತ್ತು.

“ಬೆಳೆ ಏನೇನು ಒಡ್ಡಿದ್ದೀರಿ?”

“ಎರಡು ಎಕರೇಲಿ ಕಬ್ಬು.. ಒಂದು ಎಕರೇಲಿ ಬತ್ತ ಅದೆ ಕಣಪ್ಪ “.

“ನೀವೇನೂ ಬೇಜಾರ್ ಮಾಡ್ಕೊಳ್ಳದೇ ಇದ್ರೆ.. ಒಂದು ಮಾತು” ಎಂದು ಅವರ ಮೊಗವನ್ನು ನೋಡಿದೆ.

ಇದುವರೆಗೂ ಕಾಟಾಚಾರಕ್ಕೆಂದು ನನ್ನೊಡನೆ ಮಾತನಾಡುತ್ತಿದ್ದವರು, ಈಗ ಇವನ್ಯಾರೋ ನಂಗೆ ಹಿಂಗೆ ಒಕ್ಕರಿಸವ್ನಲ್ಲ ಎಂಬಂತೆ ನನ್ನತ್ತ ನೋಡುತ್ತಾ- “ಅದೇನ್ ಹೇಳಪ್ಪ” ಎಂದರು. “ನೀವು.. ಮೂರು ಎಕರೆ ಜಮೀನ್ದಾರರಾಗಿ, ಕಾಲಿಗೆ ಒಂದು ಜೊತೆ ಚಪ್ಪಲಿಯಿಲ್ಲದೇ, ಬರಿಗಾಲಲ್ಲಿ ಬ್ಯಾಂಕಿಗೆ ಬಂದಿದ್ದೀರಲ್ಲ.. ಯಾಕೆ ?”

“ನಿಂಗೆಲ್ಲೊ ಸುಮಾನ ಕಣಪ್ಪ. ಅದಕ್ಕೆ ಹಿಂಗೆಲ್ಲಾ ಕೇಳ್ತಾ ಇದ್ದೀಯೆ ! ” ಅವರ ಮಾತಿನಿಂದ ಒಂದು ಗಳಿಗೆ ತಬ್ಬಿಬ್ಬಾಗಿ ಸುಮ್ಮನಾದ ನನ್ನನ್ನೇ ಈಗ ದಿಟ್ಟಿಸಿ ನೋಡುತ್ತ-

“ಮೊಗ.. ನೀನು ಏನ್ ಕೆಲಸದಲ್ಲಿ ಇದ್ದೀಯಪ್ಪ ?”

“ಇಲ್ಲೇ ಕಾಲೇಜ್ನಲ್ಲಿ ಮೇಸ್ಟರಾಗಿದ್ದೀನಿ. ”

“ತಿಂಗಳ ತಿಂಗಳ ಸಂಬಳ ಎಶ್ಟು ಬಂದದಪ್ಪ ?”

“ಹನ್ನೆರಡು ಸಾವಿರ ಬತ್ತದೆ “.

“ಹಿಂಗಂತೀನೆ ಅಂತ ಏನು ತಿಳ್ಕೊಬ್ಯಾಡ ಕಣಪ್ಪ. ಯಾವ ಮಳೆ ಹುಯ್ಯಲಿ ಹುಯ್ದೆ ಹೋಗಲಿ.. ನಾಲೇಲಿ ನೀರು ಬರ‍್ಲಿ ಬರ‍್ದೆ ಹೋಗಲಿ.. ನಿನಗೆ ಬರೋ ಸಂಬಳ ಬಂದ್ಬುಡ್ತದೆ. ಬೇಸಾಯ ಮಾಡೋ ನಮ್ಮ ಹಳ್ಳಿ ಜನಕ್ಕೆ ಎಲ್ಲಪ್ಪ ಹಂಗೆ ಬಂದದು ? ನಾವು ದುಡ್ಡಿನ ಮೊಕ ಕಾಣೂದೆ ವರುಶಕ್ಕೆ ಒಂದು ದಪವೋ.. ಎರಡು ದಪವೋ ! ಅದು ಯಾವಾಗ.. ಮಳೆ ಚೆನ್ನಾಗಿ ನಡೆಸಿಕೊಟ್ಟು, ಬೆಳೆ ಕಯ್ಗೆ ಹತ್ತಿ, ಬೆಳೆಗಳಿಗೆ ಒಳ್ಳೇ ರೇಟು ಇದ್ರೆ.. ಇಲ್ದೇದ್ರೆ ಆಗ್ಲೂ ಏನೂ ಸಿಕ್ಕೂದಿಲ್ಲ” ಎಂದು ನಿಟ್ಟುಸಿರು ಬಿಟ್ಟರು.

“ಹಂಗಂತ ಒಂದು ಜೊತೆ ಚಪ್ಪಲಿ ಹಾಕ್ಕೊಂಡು ತಿರುಗಾಡುವಶ್ಟು ನಮ್ಮ ರಯ್ತರ ಹತ್ರ ದುಡ್ಡಿಲ್ಲವೇ?” ಎಂದು ಮರು ಪ್ರಶ್ನಿಸಿದೆ.

“ಇದು ದುಡ್ಡಿನ ಪ್ರಶ್ನೆಯಲ್ಲ ಕಣಪ್ಪ. ನಿಂಗೆ ರಯ್ತರ ಒಡ್ಬಾಳು ಗೊತ್ತಿಲ್ಲ. ಅದಕ್ಕೆ ಹಿಂಗೆಲ್ಲ ಕೇಳ್ತಾಯಿದ್ದೀಯೆ ! ನೋಡಪ್ಪ, ಇವತ್ತು ಇಲ್ಲಿಗೆ ಬರೋಕೆ ಮುಂಚೆ ನಾನು ಗದ್ದೆ ತಾವು ನಾಲ್ಕು ಗಂಡಾಳು ಕಟ್ಕೊಂಡು ಗೆಯ್ತಿದ್ದೋನು..ಹೊಂಗ್ಲೋ ಅಂತ ಇಲ್ಲಿಗೆ ಬಂದಿವ್ನಿ. ಇಲ್ಲಿಗೆ ಬಂದಿದ್ರು ನನ್ನ ಗ್ಯಾನವೆಲ್ಲ ಅಲ್ಲೇ ಅದೆ. ಈಗ ದುಡ್ಡ ತಕೊಂಡು ತಿರ‍್ಗ ಗದ್ದೇತಕೆ ಓಡ್ಬೇಕು. ಅದೂ ಅಲ್ಲದೇ ಬೂಮ್ತಾಯಿ ಜೊತೇಲಿ ದುಡಿಯುವ ರಯ್ತಾಪಿ ಜನ ನಾವು.. ನಿಮ್ಮಂಗೆ ಎಲ್ಲಾ ಕಡೆಗೂ ಜೋಡು ಮೆಟ್ಕೊಂಡು ತಿರುಗಾಡೂಕೆ ಎಲ್ಲಾದದಪ್ಪ ?” ಬರಿಗಾಲಲ್ಲೇ ದುಡಿದು ನಾಡಿಗೆ ಅನ್ನ ಕೊಡುತ್ತಿರುವ ಬೇಸಾಯಗಾರನ ಬೆನ್ನಿಗೆ ಹೊರೆಯಾಗಿರುವ ನಾನು ಮರು ಮಾತನಾಡದೆ, ನನ್ನ ಟೋಕನ್ ನಂಬರ್ ಅನ್ನು ಇನ್ನೂ ಕರೆಯದಿರುವ ಬ್ಯಾಂಕಿನ ಕ್ಯಾಶಿಯರ್ ಕಡೆಗೆನೋಡತೊಡಗಿದೆ.

( “ಸುಮಾನ “ಎಂದರೆ ಹಿಗ್ಗಿನಿಂದ ಮೆರೆಯುತ್ತಾ ಇತರರನ್ನು ಕಡೆಗಣಿಸುವ ಇಲ್ಲವೇ ಹಂಗಿಸುವ ನಡೆನುಡಿ)

(ಚಿತ್ರ: www.thehindu.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: