ಅವಳು ಒಲುಮೆಯ ಹೊನಲು

ರತೀಶ ರತ್ನಾಕರ

MACEDONIA-KOKINO-SUMMER SOLSTICE

ಬಾಳ ನೊಗವದು ಒಂಟಿ ಕುಂಟುತ್ತ ಸಾಗಿತ್ತು
ನಡೆಸುಗನ ಚಾಟಿ ಏಟಿನ ಬಿರುಸು ಜೋರಿತ್ತು|
ಬಂದೆನ್ನ ಹೆಗಲನ್ನು ನೀಡಿದಳು ನೋಡವಳು
ನಂಬುಗೆಯ ಬಿತ್ತಲು ನಲಿವನ್ನು ಬೆಳೆಯಲು|

ಗಾಜು ಮೀರಿಸೋ ನುಣುಪು, ತೀಡಿದವರಾರು?
ಕನ್ನಡಿಯು ನಾಚುವುದು ಇವಳಂದ ಬಲುಜೋರು|
ನೊರೆಹಾಲು ಸವಿಜೇನ ಬೆರೆಸಿ ಮೂಡಿಸಿದವ
ಮೇಲೆಲ್ಲೋ ಕುಳಿತು ಹಣೆಬರಹ ಗೀಚುವವ|

ಮುಟ್ಟಿದರೆ ಮುದುಡುವಳು ಅಪ್ಪಿದರೆ ಅರಳುವಳು
ಕಡಲು ಸಾಲದು ಅವಳ ಮುತ್ತುಗಳ ಕೂಡಿಡಲು|
ಒಮ್ಮೊಮ್ಮೆ ಬಂದೆರೆಗೋ ಆ ತುಂಟ ಮಾರನು
ಅವಳಿಕ್ಕಿದ ಎಡೆಯ ತಿಂದುಂಡು ಹೋಗುವನು!

ಪೆದ್ದುತನ ಮುದ್ದುತನ ಮೇಳಯ್ಸಿದ ಮಾತು
ಕೊಂಕು ಬಿಂಕಗಳಿಲ್ಲ ನಡತೆಯೊಳು ಇನಿತು|
ಕೋಪಗಳು ಅಪರೂಪ ಹಬ್ಬಗಳು ಬಂದಂತೆ
ಮುನಿಸು ಕೂಡ ಚಂದ ಬಿಸಿಯೂಟದಂತೆ|

ಮದುವೆಯಾಗಿಹೆ ನಾನಿವಳ ಹೆಣ್ಣೆಂದು ಬಗೆದು
ಮಯ್ ಅದೋ ಹೆಣ್ಣು ಮನಸಂತು ಮಗುವದು|
ಅವಳು, ಕತ್ತಲೆಯ ಬಾನೊಳು ಬೆಳಗಿದ ಅರಿಲು
ಬರಡು ನೆಲಕೆ ಹರಿದ ಒಲುಮೆಯ ಹೊನಲು|

(ಚಿತ್ರ: www.montrealgazette.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. smhamaha says:

    ನಿಮ್ಮನು ಮದುವೆ ಆದ ಆ ಹೆಣ್ಣು ಸಿಕ್ಕಾಪಟ್ಟೆ ಪುಣ್ಯ ಮಾಡಿರಬೇಕು … ಸೊಗಸಾದ ಕಟ್ಟೊರೆ

ಅನಿಸಿಕೆ ಬರೆಯಿರಿ:

%d bloggers like this: