ಕಾರಲ್ಲೊಂದು ಹೊಸ ಚೂಟಿಮಣೆ

ಜಯತೀರ‍್ತ ನಾಡಗವ್ಡ.

Carplay in Volvo

ಜಗತ್ತಿನ ದೊಡ್ಡ ಹಾಗೂ ಪ್ರಮುಕ ತೋರ‍್ಪುಗಳಲ್ಲಿ (show) ಒಂದಾದ ಬಂಡಿಗಳ ಸಂತೆ ಕಳೆದ ವಾರದಿಂದ ಸ್ವಿಟ್ಜರ‍್ಲೆಂಡ್ ನ ಎರಡನೇಯ ದೊಡ್ಡ ನಗರವಾದ ಜಿನೀವಾದಲ್ಲಿ ಶುರುವಾಗಿದೆ. ಜಿನೀವಾ ಸಂತೆ ಪ್ರತಿವರುಶ ಮಾರ‍್ಚ್ ತಿಂಗಳಲ್ಲಿ ಜರುಗುತ್ತದೆ. ಅಮೇರಿಕಾ, ಯುರೋಪ್, ಚೀನಾ, ಜಪಾನ್, ಕೊರಿಯಾ ಹಾಗೂ ಬಾರತ ಸೇರಿದಂತೆ ಜಗತ್ತಿನ ಎಲ್ಲೆಡೆಯ ಕಾರು ತಯಾರಕರು ಇಲ್ಲಿ ಪಾಲ್ಗೊಳ್ಳುತ್ತಾರೆ.

ಜಗತ್ತಿನಲ್ಲಿ ಕೆಡುಕು ಹೊಗೆ ಕಡಿಮೆಗೊಳ್ಳಿಸಬಲ್ಲ ಮತ್ತು ಬಿಣಿಗೆಯ ಗಾತ್ರ ಕಡಿಮೆ ಮಾಡಿ ಹೆಚ್ಚಿನ ಕಸುವು ನೀಡಬಲ್ಲ ಹಲವಾರು ಬಗೆಯ ಕಾರುಗಳು ಮೊದಲು ಕಾಣಿಸುವುದೇ ಜಿನೀವಾ ತೋರ‍್ಪಿನಲ್ಲಿ ಎಂದರೆ ತಪ್ಪಲ್ಲ. ಜಿನೀವಾ ತಾನೋಡಗಳ ತೋರ‍್ಪು 1905ರಿಂದ ನಡೆಯುತ್ತ ಬಂದಿರುವುದು ಇದಕ್ಕೆ ಹಿಡಿದ ಕನ್ನಡಿ.

ಇತರೆ ನಾಡುಗಳಿಗಿಂತ ಬಂಡಿಗಳು ಉಗುಳುವ ಕೆಡುಕು ಹೊಗೆಯ ಮಿತಿಯನ್ನು ಬಿಗಿಗೊಳಿಸಿರುವ ಅಮೇರಿಕಾ, ಜಪಾನ್ ಮತ್ತು ಯೂರೋಪ್ ನಾಡುಗಳ ಕಾರು ತಯಾರಕರು ತಮ್ಮ ಹೊಸ ಚಳಕಗಳನ್ನು ಇಲ್ಲಿ ಪಣಕ್ಕೊಡ್ಡಲು ನಾಮುಂದು ತಾಮುಂದು ಎಂದು ಸಜ್ಜುಗೊಂಡಿರುತ್ತಾರೆ. ಈ ಬಾರಿಯ ವಿಶೇಶ ಚಳಕವೊಂದು ಜಿನೀವಾ ತೋರ್‍ಪಿನಲಿ ಸಾಕಶ್ಟು ಗಮನಸೆಳೆಯುತ್ತಿದೆ. ಚೂಟಿಯುಲಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್ ಕೂಟದವರ ಹೊಸ ಚಳಕವೊಂದು ಕಾರುಗಳಿಗೆಂದು ಅಣಿಗೊಳಿಸಿದ್ದು ಈ ಬಾರಿಯ ವಿಶೇಶ.

ಬಿಡುವಾಗಿದ್ದಾಗ ಬರದ ಕರೆಗಳು, ನೀವು ಕೆಲಸದೆಡೆಯಿಂದ ಮನೆಗೆ ತೆರಳಲು ಅಣಿಯಾಗಿ ಕಾರು ಏರಿದ ಕೆಲವೇ ನಿಮಿಶಗಳಲ್ಲಿ ನಿಮ್ಮ ಚೂಟಿಯುಲಿ ರಿಂಗಣಿಸುತ್ತದೆ (ಮರ‍್ಪಿರವರ ಕಟ್ಟಲೆ ನೆನಪಿಸಿಕೊಳ್ಳಬಹುದು). ಎಶ್ಟೋ ಸಲ ಹಲವು ಮುಕ್ಯದ ಕರೆಗಳನ್ನು ನೀವು ತಪ್ಪಿಸಿಕೊಳ್ಳುತ್ತೀರಿ ಕಾರಣ ನಿಮ್ಮ ಚೂಟಿಯುಲಿಯನ್ನು ನೀವು ಹಿಡಿತದಲ್ಲಿಡಲು ಸಾದ್ಯವಾಗುವುದಿಲ್ಲ.

ಇದೀಗ ಆಪಲ್ ಕೂಟದವರು ಇದನ್ನು ಸುಲಬವಾಗಿಸಿದ್ದಾರೆ. ಜಿನೀವಾ ತೋರ‍್ಪಿನಲ್ಲಿ ಸ್ವೀಡನ್ ನಾಡಿನ ವೋಲ್ವೋದವರ ಕಾರೊಂದಕ್ಕೆ ಆಪಲ್ ತನ್ನ ಹೊಸ ಚಳಕ ಅಳವಡಿಸಿ ಎಲ್ಲರ ಗಮನ ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ. ವೋಲ್ವೋದ ಎಕ್ಸ್ ಸಿ 90 ಕಾರು ಮಾತ್ರವಲ್ಲದೇ ಜರ‍್ಮನಿಯ ಮರ‍್ಸಿಡಿಸ್ ಬೆಂಜ್, ಇಟಲಿಯ ಪೆರಾರಿ, ಬ್ರಿಟನ್ನಿನ ಜಾಗ್ವಾರ್‍, ಜಪಾನಿನ ಹೋಂಡಾ ಮತ್ತು ಕೊರಿಯಾದ ಹ್ಯುಂಡಾಯ್ ಕಾರುಗಳ ಮಾದರಿಯಲ್ಲೂ ಈ ಚಳಕವನ್ನು ಒರೆಗೆ ಹಚ್ಚುವಲ್ಲಿ ಆಪಲ್ ಗೆಲುವು ಕಂಡಿದೆ. ಈ ಹೊಸ ಚಳಕಕ್ಕೆ ಕಾರ್‍-ಪ್ಲೇ ಎಂಬ ಹೆಸರು ನೀಡಿದೆ ಆಪಲ್.

Carplay_1

ಸಿರಿ (Siri-Voice recognition feature) ಎಂಬುದು ಆಪಲ್ ನ ದನಿ ಕಂಡುಹಿಡಿಯುವ ಚಳಕ. ಇದನ್ನೇ ಆದರಿಸಿ ’ಕಾರ್‍-ಪ್ಲೇ’ಯನ್ನು ಬೆಳಸಲಾಗಿದೆ. ನಿಮ್ಮ ಕಾರುಬಂಡಿಯ ಹಿಡಿಗೆಯ (steering) ಮೂಲಕ ನಿಮ್ಮ ಚೂಟಿಯುಲಿಯನ್ನು ಹಿಡಿತದಲ್ಲಿಡಬಹುದು. ಹಿಡಿಗೆಗೆ (steering wheel) ಹತ್ತಿರದಲ್ಲಿ ಇಲ್ಲವೇ ಓಡಿಸುಗನಿಗೆ ಅನುವಾಗುವಂತೆ ಪುಟಾಣಿ ಗುಂಡಿ (buton) ಇಲ್ಲವೇ ಬುಗುಟು (knob) ನೀಡಲಾಗಿದ್ದು ಅದನ್ನು ಅದುಮಿದರೆ ಸಾಕು ಕಾರಿನ ತೋರುಮಣೆಯೇ (Dash board) ನಿಮ್ಮ ಚೂಟಿಯುಲಿಯ ಸೋಕುತೆರೆಯಾಗಿ (touch screen) ಬದಲಾಗುತ್ತದೆ.

apple_dashboard

ಕಾರಿನ ತೋರುಮಣೆಯ ಮೂಲಕವೇ ನೀವು ಕರೆಮಾಡಿ, ಚಿಕ್ಕೋಲೆ ಕಳುಹಿಸಿ, ನೀವು ತೆರಳಬೇಕಿರುವ ದಾರಿ-ದಿಕ್ಕು ತಿಳಿದುಕೊಳ್ಳಿ, ನಿಮ್ಮ ನೆಚ್ಚಿನ ರೇಡಿಯೊ ಆಲಿಸಿ ಇಲ್ಲವೇ ನಿಮ್ಮ ಚೂಟಿಯಲಿಯಲ್ಲಿ ಕೂಡಿಟ್ಟಿರುವ ಹಾಡುಗಳನ್ನು ಕೇಳಿ ಆನಂದಿಸಿ. ಈ ಎಲ್ಲವೂ ಗುಂಡಿ/ಬುಗುಟಿನ ಮೂಲಕ ನೀವು ಸುಲಬವಾಗಿ ಮಾಡಬಹುದು. ಬಂಡಿ ಓಡಿಸುವಾಗ ರಸ್ತೆ ಮದ್ಯದಲ್ಲಿ ಕಾರು ನಿಲ್ಲಿಸಿ ಚೂಟಿಯುಲಿ ಕಯ್ಗೆತ್ತಿಕೊಂಡು ಕರೆ ಮಾಡಬೇಕಿಲ್ಲ, ರಸ್ತೆಯ ಮೇಲೆ ನಿಮ್ಮ ಗಮನವಿಟ್ಟು ಹಾಯಾಗಿ ಕಾರು ಓಡಿಸಲು ಈ ಹೊಸ ಚಳಕ ನೆರವಾಗಲಿದೆ.

ಮೇಲೆ ತಿಳಿಸಿದ ಹಲವು ಕಾರು ತಯಾರಕರು ಈ ಚಳಕದ ಕಾರನ್ನು ಸದ್ಯದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಣಿಯಾಗಿದ್ದಾರೆ. ಇದಲ್ಲದೇ ಮುಂದಿನ ದಿನಗಳಲ್ಲಿ ಪೋರ‍್ಡ್, ಜಿಎಂ, ನಿಸ್ಸಾನ್, ಮಿಟ್ಸುಬಿಶಿ, ಬಿ.ಎಂ.ಡಬಲ್ಯೂ, ಸುಜುಕಿ, ಟೋಯೊಟಾ ಮುಂತಾದ ಎಲ್ಲರೂ ಈ ಚಳಕದ ಕಾರನ್ನು ತಯಾರಿಸಲು ಮುಂದಾಗಿದ್ದಾರೆ. ಬಾರತದ ಬಂಡಿ ತಯಾರಕರು ಇದನ್ನು ಅಳವಡಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಬರುವ ದಿನಗಳಲ್ಲಿ ಟಾಟಾ, ಮಹೀಂದ್ರಾ & ಮಹೀಂದ್ರಾ ಬಂಡಿಗಳಲ್ಲಿಯೂ ಕೂಡ ನೀವು ಕಾರ್‍-ಪ್ಲೇ ಕಾಣಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: