’ಕಶ್ಟ ಪಡುವ ಜನರೇ ಕೊನೆಗೆ ಗೆಲ್ಲೋದು’
– ಕಿರಣ್ ಬಾಟ್ನಿ.
ಸುಮಾರು ಎರಡು ವಾರದಿಂದ ಪ್ರತಿ ದಿನವೂ ಟಿ.ಎಸ್.ನಾಗಾಬರಣ ಅವರ ’ಚಿನ್ನಾರಿ ಮುತ್ತ’ ಚಿತ್ರವನ್ನು ಮಕ್ಕಳೊಡನೆ ಸಿ.ಡಿ. ಹಾಕಿಕೊಂಡು ನೋಡುತ್ತಲೇ ಇದ್ದೇನೆ. ಎಶ್ಟು ಸರಿ ನೋಡಿದರೂ ಮತ್ತೊಮ್ಮೆ ನೋಡಬೇಕೆಂಬ ಆಸೆ ಮಕ್ಕಳಿಗಶ್ಟೇ ಅಲ್ಲ, ನನಗೂ, ನನ್ನ ಹೆಂಡತಿಗೂ ಹತ್ತಿಬಿಟ್ಟಿದೆ! ಅದೇನು ಕತೆ, ಅದೇನು ಚಿತ್ರಿಸುವಿಕೆ, ಅದೇನು ಹಾಡುಗಳು! ಅಬ್ಬಬ್ಬಾ! ಎಲ್ಲರ ತಲೆಯಲ್ಲೂ ಮುತ್ತನ ಪಾತ್ರವೇ, ಎಲ್ಲರ ನಾಲಿಗೆಯಲ್ಲೂ ಅದೇ ಹಾಡುಗಳು!
ಇಂತಹ ಚಿತ್ರಗಳು ಕನ್ನಡದಲ್ಲಿ ನಿಜಕ್ಕೂ ಬಂದಿದ್ದವಾ ಎಂದು ನಂಬುವುದೇ ಒಮ್ಮೊಮ್ಮೆ ಕಶ್ಟವಾಗುತ್ತದೆ. ಮುಂದೆ ಬರುತ್ತವೆ ಎಂದು ನಂಬುವುದಂತೂ ಇನ್ನೂ ಕಶ್ಟವೇ. ಅಲ್ಲವೇ? ಆಗ ಅನ್ನಿಸಿತು – ಡಬ್ಬಿಂಗ್ ಬರಲಿ ಎಂದು ಎಲ್ಲರೊಡನೆ ನಾನೂ ಸೇರಿ ಹೇಳುತ್ತಿದ್ದೇನಲ್ಲ, ಇದರಿಂದ ಇಂತಹ ಚಿತ್ರಗಳು ಮುಂದೆ ಬಾರದೆ ಹೋದರೆ ಏನು ಮಾಡುವುದು? ಡಬ್ಬಿಂಗ್ ಬಂದು ಮಾರುಕಟ್ಟೆಯಲ್ಲಿ ಬರೀ ಕನ್ನಡೇತರರು ಮಾಡಿದ ಚಿತ್ರಗಳೇ ಸಿಗಲು ಶುರುವಾಗಿಬಿಟ್ಟರೆ ನಾಗಾಬರಣ ಅವರಂತಹ ಕನ್ನಡದ ಕಲಾವಿದರು ತಮ್ಮ ಕಲೆಯನ್ನು ಕನ್ನಡಿಗರ ಮುಂದೆ ಇಡುವುದಕ್ಕೇ ಕಶ್ಟವಾಗುವುದಿಲ್ಲವೇ? ಎಲ್ಲರೂ ಸಾಕೆಂದು ಬೇರೆ ಕೆಲಸಗಳನ್ನು ಹುಡುಕಿಕೊಂಡು ಬಿಟ್ಟರೆ ಕನ್ನಡ ಚಿತ್ರರಂಗವನ್ನು ಪೂರ‍್ತಿ ಮುಚ್ಚಬೇಕಾಗಿ ಬಂದರೆ?
ಈ ಯೋಚನೆಗಳು ಬರುತ್ತಿದ್ದಂತೆಯೇ, ಕನ್ನಡ ಚಿತ್ರರಂಗ ಮುಚ್ಚಿಹೋಗಲಿ ಎಂಬ ಕೆಟ್ಟಬುದ್ದಿಯಿಂದೇನೂ ನಾನು ಡಬ್ಬಿಂಗ್ ಪರವಾಗಿ ನಿಂತಿಲ್ಲ; ಹೊರನುಡಿಗಳ ಚಿತ್ರಗಳನ್ನೇ ಕನ್ನಡಿಗರು ನಾಮುಂದು-ತಾಮುಂದು ಹೋಗಿ ನೋಡುತ್ತಿರುವುದನ್ನು ಡಬ್ಬಿಂಗಿನಿಂದ ತಪ್ಪಿಸಬಹುದೆಂದು ಅದರ ಪರವಾಗಿ ನಿಂತಿದ್ದೇನೆ ಎಂದು ನೆನಪಾಯಿತು. ಕನ್ನಡನಾಡಿನ ಚಿತ್ರಮಂದಿರಗಳಲ್ಲಿ ಹೊರನುಡಿಗಳ ಬದಲಾಗಿ ಕನ್ನಡವೇ ಕೇಳಿಸಲಿ ಎಂಬ ಒಳ್ಳೆಯ ಕಾರಣಕ್ಕಾಗಿ ನಾನು ಡಬ್ಬಿಂಗ್ ಪರವಾಗಿದ್ದೇನೆ ಎಂದು ನೆನಪಾಯಿತು.
ಒಟ್ಟಿನಲ್ಲಿ ಹೇಳುವುದಾದರೆ, ಕನ್ನಡ ಚಿತ್ರರಂಗ ಮುಚ್ಚಿ ಹೋಗುವ ಗಂಡಾಂತರ ಒಂದು ಕಡೆಯಾದರೆ, ಚಿತ್ರಮಂದಿರಗಳಿಂದ ಕನ್ನಡವೇ ಕಾಣೆಯಾಗುವ ಗಂಡಾಂತರ ಇನ್ನೊಂದು ಕಡೆ. ಇವೆರಡರಲ್ಲಿ ನಾನು ಕಾಣುವಂತೆ ಎರಡನೆಯದೇ ದೊಡ್ಡ ಗಂಡಾಂತರ. ಕನ್ನಡವೇ ಕಾಣೆಯಾಗಿಹೋದರೆ ಕನ್ನಡದ ಚಿತ್ರಗಳು ಕಾಣೆಯಾಗುವ ದಿನ ದೂರವಿರುವುದಿಲ್ಲ; ಆದರೆ ಕನ್ನಡ ಚಿತ್ರರಂಗ ಮುಚ್ಚಿಹೋದರೂ ಕನ್ನಡ ಕೇಳಿಸುತ್ತಿದ್ದರೆ ಅದು ಕೇಳಿಸದಿರುವುದಕ್ಕಿಂತ ಒಳ್ಳೆಯದು ಎಂದು ನನ್ನ ಗಟ್ಟಿಯಾದ ನಿಲುವು.
ಆದರೆ ನಿಜಕ್ಕೂ ಡಬ್ಬಿಂಗ್ ಬಂದುಬಿಟ್ಟರೆ ’ಚಿನ್ನಾರಿ ಮುತ್ತ’ ದಂತಹ ಚಿತ್ರಗಳು ಕಾಣೆಯಾಗಿ ಹೋಗುತ್ತವೇನು? ಟಿ.ಎಸ್.ನಾಗಾಬರಣ ಅವರಂತಹ ಕಲಾವಿದರು ಕಾಣೆಯಾಗಿ ಹೋಗುತ್ತಾರೇನು? ನಮ್ಮ ನೆತ್ತರಿನಲ್ಲಿ ಹರಿಯುತ್ತಿರುವ ಕಲೆ ಎಲ್ಲೂ ಕಾಣಿಸಿಕೊಳ್ಳದೆಯೇ ಹೋಗುತ್ತದೇನು? ಮೆಲ್ಲನೆ ನನಗೆ ಇದಾವುದೂ ಆಗಬೇಕಿಲ್ಲ ಎಂಬ ಅನಿಸಿಕೆ ಮತ್ತೆ ಬಂದಿತು. ಹವ್ದು, ಉತ್ತಮ ಗುಣಮಟ್ಟದವಲ್ಲದ ಚಿತ್ರಗಳು ಕನ್ನಡದಲ್ಲಿ ಇನ್ನು ಕಾಣದೆ ಹೋಗಬಹುದು. ಆದರೆ ಅವುಗಳು ಕಾಣದೆ ಹೋದರೆ ’ಚಿನ್ನಾರಿ ಮುತ್ತ’ದಂತಹ ಚಿತ್ರಗಳು ಮತ್ತಶ್ಟು ಸುಲಬವಾಗಿ ಕಾಣಿಸಿಕೊಳ್ಳುವುದಿಲ್ಲವೇ? ಕನ್ನಡದ ಕಲಾವಿದರು ಅಂತಹ ಚಿತ್ರಗಳೊಡನೆ ಪಯ್ಪೋಟಿಗೆ ನಿಲ್ಲುವ ಬದಲು ಇನ್ನೂ ಬಹಳ ಒಳ್ಳೆಯ ಚಿತ್ರಗಳೊಡನೆ ಪಯ್ಪೋಟಿಗೆ ನಿಲ್ಲುವುದು ಒಳ್ಳೆಯದೇ ಎನಿಸಿತು.
ಇಂದು ಯಾವುದೇ ಹೆಚ್ಚಿನ ಪಯ್ಪೋಟಿಯ ವಾತಾವರಣವೂ ಇಲ್ಲದೆ ಇರುವುದರಿಂದ ಕನ್ನಡ ಚಿತ್ರರಂಗ ಒಂದು ರೀತಿಯಲ್ಲಿ ತುಕ್ಕು ಹಿಡಿದಿದೆ ಎಂದರೆ ತಪ್ಪಾಗಲಾರದೇನೋ. ಕನ್ನಡದಲ್ಲಿ ಏನು ಬಂದರೂ ಅದನ್ನೇ ನೋಡಬೇಕು ಜನ ಎಂಬಂತಿದೆ. ಚೆನ್ನಾಗಿಲ್ಲದಿದ್ದರೆ ತಮಿಳೋ ತೆಲುಗೋ ಹಿಂದಿಯನ್ನೋ ಇಂಗ್ಲಿಶನ್ನೋ ನೋಡುತ್ತಾರೆ, ಅಶ್ಟೇ! ಇದೆಲ್ಲದರ ಬದಲಾಗಿ, ಹೊರನುಡಿಗಳ ಚಿತ್ರಗಳೊಡನೆ ಕಶ್ಟ ಪಟ್ಟು ಪಯ್ಪೋಟಿಯಲ್ಲಿ ಗೆದ್ದರೆ ಕನ್ನಡ ಚಿತ್ರರಂಗವನ್ನು ಏಕೆ ಮುಚ್ಚಬೇಕಾದೀತು? ಬಿದ್ದ ಚಿನ್ನಾರಿ ಮುತ್ತನಿಗೆ ಸಾವಂತ್ ಹೇಳುವಂತೆ, ಕಶ್ಟ ಪಡುವ ಜನರೇ ತಾನೆ ಕೊನೆಗೆ ಗೆಲ್ಲೋದು? ಯಾವ ಕಶ್ಟವೂ ಇಲ್ಲದೆ ಸೋಲನ್ನೇ ಗೆಲುವೆಂದುಕೊಂಡಿರುವುದು ಸರಿಯಲ್ಲವಲ್ಲ?
ಯೋಚಿಸಿ ನೋಡಿ. ಒಳ್ಳೆಯ ಕನ್ನಡದ ಚಿತ್ರಗಳನ್ನು ಕನ್ನಡಿಗರು ಒಪ್ಪದೆ ಇರಲು ಸಾದ್ಯವೇ ಇಲ್ಲ. ಮಾರುಕಟ್ಟೆಯಲ್ಲಿ ಅಂತಹ ಚಿತ್ರಗಳು ಚೆನ್ನಾಗಿ ಓಡೇ ಒಡುತ್ತವೆ. ಆದರೆ ಕನ್ನಡದ ಚಿತ್ರಗಳೊಡನೆ ಪಯ್ಪೋಟಿಗೆ ನಿಲ್ಲುವ ಹೊರನುಡಿಯ ಚಿತ್ರಗಳೆಲ್ಲ ಕಾಳಗದ ಕಟ್ಟಲೆಗಳನ್ನು ಪಾಲಿಸುತ್ತವೆ ಎಂದೇನೂ ನನಗೆ ನಂಬಿಕೆಯಿಲ್ಲ. ಚಿತ್ರದ ತುಂಬ ಬಿಚ್ಚಮ್ಮಂದಿರನ್ನು ನಿಲ್ಲಿಸಿ ಮಾಡಬಾರದ್ದನ್ನು ಮಾಡಿಸಿದರೂ ಇಂದಿನ ದಿನ ಅದನ್ನು ನೋಡಲು ಕೂಡ ಕನ್ನಡಿಗರು ಹೋಗುತ್ತಾರೆ. ಇಂತಹ ಚಿತ್ರಗಳೊಡನೆ ಇಂದು ಕನ್ನಡ ಚಿತ್ರರಂಗ ಪಯ್ಪೋಟಿಗೆ ನಿಂತಿದೆ. ಈ ಬೀಳುಗೆಯ ಪಯ್ಪೋಟಿಯಿಂದ ಹೊರಬಂದು ಏಳಿಗೆಯ ಪಯ್ಪೋಟಿಯಲ್ಲಿ ಕನ್ನಡ ಚಿತ್ರರಂಗ ಮುಂದೆ ಬರಬೇಕು. ಮುಂದೆ ಬರಲು ಕಂಡಿತ ಸಾದ್ಯ, ಮತ್ತು ಬಂದೇ ಬರುತ್ತದೆ ಎಂಬ ನಂಬಿಕೆ ನನಗಿದೆ. ಹಾಗೆಯೇ, ಈ ಬೀಳುಗೆಯ ಪಯ್ಪೋಟಿಗೆ ಎಳೆಯುವ ಹೊರನುಡಿಗಳ ಚಿತ್ರಗಳನ್ನು ಕನ್ನಡನಾಡಿನೊಳಗೆ ಬಾರದಂತೆ ತಡೆಯುವ ಅದಿಕಾರವೂ ಕರ‍್ನಾಟಕ ಸರ‍್ಕಾರಕ್ಕೆ ಸಿಗಲಿ; ಎಲ್ಲವೂ ದೆಹಲಿಯ ಸೆನ್ಸಾರ್ ಬೋರ‍್ಡಿನವರ ಕಯ್ಯಲ್ಲೇ ಇದ್ದರೆ ಇದು ಸಾದ್ಯವಿಲ್ಲ. ಇಲ್ಲೂ ಕೆಲಸವಾಗಬೇಕು.
ಇಪ್ಪತ್ತೊಂದು ವರ‍್ಶದ ಹಿಂದೆ ಮಾಡಿದ ’ಚಿನ್ನಾರಿ ಮುತ್ತ’ ಇಂದಿಗೂ ಕನ್ನಡಿಗರ ಮನಸ್ಸನ್ನು ಗೆಲ್ಲುತ್ತಾನೆ ಎನ್ನುವುದಾದರೆ ಅದನ್ನು ಮಾಡಿದ ಕನ್ನಡಿಗ ಇನ್ನೂ ಬದುಕಿದ್ದಾನೆ. ಬದುಕಿರಲೇ ಬೇಕು. ಸಾಯಲು ಹೊರಟಿದ್ದರೆ ಅವನನ್ನು ನಾವು ಬದುಕಿಸಲೇ ಬೇಕು. ಇಲ್ಲದಿದ್ದರೆ ನಾವೆಲ್ಲರೂ ಸತ್ತಂತೆ, ನಾಡೇ ಸತ್ತಂತೆ. ಇಂತಹ ಚಿತ್ರಗಳನ್ನು ಮಾಡಿ ಬಾರತದ ಇತರ ನುಡಿಗಳ ಚಿತ್ರರಂಗಗಳಿಗೆ ಕನ್ನಡ ಚಿತ್ರರಂಗ ದಾರಿತೋರುಗವಾಗಲಿ ಎನ್ನುವುದು ನನ್ನ ಆಸೆ. ಕನ್ನಡದ ಸಂಸ್ಕ್ರುತಿ ನಿಜವಾದುದು ಯಾವುದಿದೆಯೋ ಅದು ಈ ಮೂಲಕ ಬಾರತದಲ್ಲೆಲ್ಲ ಹರಡಲಿ. ಕನ್ನಡದ ಚಿತ್ರಗಳು ಎಲ್ಲ ನುಡಿಗಳಿಗೂ ಡಬ್ಬಾಗಲಿ. ನಾಡಿನೊಡನೆಯೇ ಕನ್ನಡ ಚಿತ್ರರಂಗ ಮುನ್ನಡೆಯಲಿ. ಇದಕ್ಕೆ ಯಾವ ಶಕ್ತಿ ಎದುರಾದರೂ ಅದನ್ನು ನುಚ್ಚುನೂರು ಮಾಡುವ ಶಕ್ತಿ ನಮಗಿದೆ. ಇವೆಲ್ಲ ಕಶ್ಟಗಳನ್ನು ಎದುರುಹಾಕಿಕೊಂಡೇ ನಾವು ಮುನ್ನಡೆಯಲು ಸಾದ್ಯ. ಇಲ್ಲದಿದ್ದರೆ ಹಿನ್ನಡೆಯನ್ನೇ ಮುನ್ನಡೆಯೆಂದುಕೊಂಡು ಕುಳಿತಿರುತ್ತೇವೆ, ಅಶ್ಟೇ.
(ತಿಟ್ಟ: http://www.game-ost.com/)
ಇತ್ತೀಚಿನ ಅನಿಸಿಕೆಗಳು