ಬೇರ‍್ಮೆಯ ಅಳಿಸುವ ಕಳ್ಳ ಜಾಣ್ಮೆ

– ಸಂದೀಪ್ ಕಂಬಿ.

diversity_board

ಒಂದು ನುಡಿ ಮತ್ತು ಅದನ್ನು ಬರೆಯುವುದಕ್ಕಾಗಿ ಬಳಸುವ ಲಿಪಿಯ ನಡುವೆ ಯಾವುದೇ ನೇರವಾದ ನಂಟು ಇರುವುದಿಲ್ಲ. ನುಡಿಗಳು ಮಾತಲ್ಲಿ ಲಕ್ಶಗಟ್ಟಲೆ ವರುಶಗಳಿಂದಲೂ ಬಳಕೆಯಲ್ಲಿವೆ. ಆದರೆ ಲಿಪಿ ಎಂಬುದು ಕೆಲವು ಸಾವಿರ ವರುಶಗಳ ಹಿಂದೆಯಶ್ಟೇ ಬಳಕೆಗೆ ಬಂದಿರುವಂತಹುದು. ಲಿಪಿ ಎಂಬುದು ಇತ್ತೀಚಿನ ವರೆಗೂ ಸಮಾಜದ ಕೆಲವೇ ಮಂದಿ ಬಳಸುತ್ತಿದ್ದುದು, ಆದರೆ ನುಡಿಯು ಎಲ್ಲರೂ ಬಳಸುತ್ತಾರೆ. ಒಂದೇ ಲಿಪಿಯನ್ನು ಹಲವು ನುಡಿಗಳು ಬಳಸುವುದನ್ನು ನೋಡಿದ್ದೇವೆ. ಹಾಗೇ ಒಂದೇ ನುಡಿಯು ಹಲವು ಲಿಪಿಗಳಲ್ಲಿ ಬರೆಯುವ ಎತ್ತುಗೆಗಳೂ ಇವೆ.

ಎತ್ತುಗೆಗೆ, ರೋಮನ್ ಲಿಪಿಯನ್ನು, ಇಂಗ್ಲೀಶ್, ಪ್ರೆಂಚ್, ಜರ‍್ಮನ್, ಟರ‍್ಕಿಶ್ ಮುಂತಾದ ಪ್ರಪಂಚದ ಹಲವು ನುಡಿಗಳನ್ನು ಬರೆಯುವುದಕ್ಕಾಗಿ ಬಳಸಲಾಗುತ್ತದೆ. ಆದರೆ ಕೊಂಕಣಿಯಂತಹ ನುಡಿಯು ಕನ್ನಡ, ರೋಮನ್, ದೇವನಾಗರಿ, ಮಲಯಾಳಂ ಮತ್ತು ಪರ‍್ಸೋ-ಅರೇಬಿಕ್ ಲಿಪಿಗಳಲ್ಲಿ ಬರೆಯಲಾಗುತ್ತದೆ. ಇದಕ್ಕೆ ಕಾರಣ ಕೊಂಕಣಿ ನುಡಿ ಆಡುಗರು ಹಲವು ಕಡೆಗಳಲ್ಲಿ ನೆಲೆಸಿದ್ದು ಆಯಾ ನಾಡುಗಳಲ್ಲಿ ಬಳಕೆಯಲ್ಲಿರುವ ಲಿಪಿಗಳನ್ನೇ ತಮ್ಮ ಬರಹದಲ್ಲಿ ಅಳವಡಿಸಿಕೊಂಡಿದ್ದಾರೆ.

ಹೀಗೆ ನುಡಿಗೂ ಲಿಪಿಗೂ ನೇರವಾದ ನಂಟು ಇಲ್ಲದಿದ್ದರೂ ಒಂದು ನುಡಿ ಸಮುದಾಯವು ಹಲ ಕಾಲದಿಂದ ಬಳಸುತ್ತಿರುವ ಲಿಪಿಯು ಆ ನುಡಿ ಮತ್ತು ಅದಕ್ಕೆ ಹೊಂದಿಕೊಂಡ ಸಂಸ್ಕ್ರುತಿಯ ಗುರುತಾಗಿ ಬಿಡುತ್ತದೆ. ಎತ್ತುಗೆಗೆ, ಕನ್ನಡಿಗರು ಕನ್ನಡ ಲಿಪಿಯನ್ನು ಕನ್ನಡ ನುಡಿ ಮತ್ತು ಸಂಸ್ಕ್ರುತಿಗಳ ಒಂದು ಬಾಗದಂತೆ ಕಾಣುತ್ತಾರೆ, ಹಾಗಾಗಿ ಹೊರ ನಾಡುಗಳಲ್ಲಿ ಕನ್ನಡ ಬರಹವನ್ನು ಎಲ್ಲಾದರೂ ಕಂಡರೆ, ಅದು ಅವರ ಗಮನ ಸೆಳೆಯುತ್ತದಲ್ಲದೆ ಹೆಚ್ಚಿನ ಕನ್ನಡಿಗರಿಗೆ ಅದು ಹೆಮ್ಮೆಯ ವಿಶಯವಾಗುತ್ತದೆ. ಹೊರ ನಾಡಿನವರು ಯಾರಾದರೂ, ತೆಲುಗೋ, ತಮಿಳೋ, ಇಲ್ಲವೇ ದೇವನಾಗರಿ ಲಿಪಿಯನ್ನೋ ತೋರಿಸಿ ಅದು ನಿಮ್ಮದೇ ಎಂದು ಕೇಳಿದರೆ ಕೂಡಲೇ ‘ಇಲ್ಲ ನಮ್ಮ ಲಿಪಿ ಕನ್ನಡ ಲಿಪಿ, ಅದು ಬೇರೆ’ ಎಂದು ಅವರನ್ನು ತಿದ್ದುವ ಮೂಲಕ ಕನ್ನಡಿಗರು ತಮ್ಮ ಬೇರ‍್ಮೆಯನ್ನು ತೋರಿಸಿಕೊಳ್ಳುತ್ತಾರೆ. ಇದು ಬೇರ‍್ಮೆಯ, ತನ್ನತನದ ಗುರುತಲ್ಲದೆ ಹೆಮ್ಮೆಯ ಗುರುತೂ ಆಗಿರುತ್ತದೆ.

ಲಿಪಿಗಳಿಗಿರುವ ಈ ಗುಣವನ್ನು ಕಂಡುಕೊಂಡಿರುವ ಆಡಳಿತಗಾರರು ತಮ್ಮ ನಾಡು, ನುಡಿ ಮತ್ತು ಸಂಸ್ಕ್ರುತಿಗಳನ್ನು ಬೇರೆ ನುಡಿ ಸಮುದಾಯಗಳ ಮೇಲೆ, ನಾಡುಗಳ ಮೇಲೆ ಹೇರುವುದನ್ನು ಇತಿಹಾಸದ ಉದ್ದಕ್ಕೂ ಕಾಣುತ್ತೇವೆ. ಹಲವು ಕಡೆಗಳಲ್ಲಿ ಇದು ಈಗಲೂ ನಡೆಯುತ್ತಲಿದೆ. ಹಿಂದೆ ಯೂಕ್ರೇನಿನಲ್ಲಿ ಉಂಟಾಗಿರುವ ಕದಲಿಕೆ ಮತ್ತು ಅದಕ್ಕೆ ಇರುವ ರಶ್ಶಿಸಿಕೆಯ ಹಿನ್ನೆಲೆಯನ್ನು ಕೊಂಚ ನೋಡಿದ್ದೇವೆ. ಯೂಕ್ರೇನಿನಲ್ಲಿ ಅಲ್ಲಿನ ಲಿಪಿಯ ಬದಲಾಗಿ ರಶ್ಯನ್ ಲಿಪಿಯನ್ನೇ ಬಳಸಬೇಕೆಂಬ ಒತ್ತಾಯ 1930ರಲ್ಲಿ ತೊಡಗಿತು. ಇದಕ್ಕೂ ಮೊದಲು ಯೂಕ್ರೇನಿಯನ್ ನುಡಿ ಮತ್ತು ಲಿಪಿ ಹೆಚ್ಚಿನ ಲವಲವಿಕೆಯಿಂದ ಕೂಡಿದ್ದು ಹಲವು ತಿದ್ದುಪಾಟುಗಳನ್ನೂ (reforms) ಕಂಡಿದ್ದವು.

ಇಂತಹ ತಿದ್ದುಪಾಟುಗಳನ್ನು ಮುಂದೆ ತಂದು ಯೂಕ್ರೇನಿಯನ್ ನುಡಿ ಮತ್ತು ಲಿಪಿಯನ್ನು ಬೆಳೆಸುತ್ತಿದ್ದವರಲ್ಲಿ, ನಾಡಿನ ಕಲಿಕೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಸ್ಕ್ರಿಪ್ನಿಕ್ ಎಂಬುವವನು ಮುಂಚೂಣಿಯಲ್ಲಿದ್ದನು. ಆದರೆ ಈ ಮೂಲಕ ಯೂಕ್ರೇನಿಯನ್ ನಾಡೊಲುಮೆಯ ಕಿಚ್ಚನ್ನು ಹಚ್ಚುತ್ತಿದಾನೆಂದು ಬಗೆದ ಸೋವಿಯೆತ್ ಸರಕಾರ ಅವನಿಗೆ ಹಲವು ಬಗೆಗಳಲ್ಲಿ ಕಿರುಕುಳ ಕೊಟ್ಟಿತೆಂದು ಹೇಳಲಾಗುತ್ತದೆ. 1933ರಲ್ಲಿ ಸ್ಕ್ರಿಪ್ನಿಕ್ ತನ್ನನ್ನೇ ಕೊಂದುಕೊಂಡನು.

ಬಳಿಕ ಸುಮಾರು 1936-38ರ ಹೊತ್ತಿಗೆ ರಶ್ಯನ್ ನುಡಿಯನ್ನು ಹೆಚ್ಚು ಕಡಿಮೆ ಆಡಳಿತದ ಎಲ್ಲ ಕಡೆಗಳಲ್ಲೂ ಬಳಕೆಗೆ ತರಲಾಗಿತ್ತು ಮತ್ತು ಸ್ಕ್ರಿಪ್ನಿಕ್ ಲಿಪಿ – ಅಂದರೆ ಮೂಲ ಯೂಕ್ರೇನಿಯನ್ ಲಿಪಿಯನ್ನು ಬಳಸಿದವರನ್ನು ಸೆರೆ ಹಿಡಿಯಲಾಗುತ್ತಿತ್ತು ಇಲ್ಲವೇ ಸಾವಿಗೆ ಈಡು ಮಾಡಲಾಗುತ್ತಿತ್ತು. ರಶ್ಯನ್ ಲಿಪಿಯ ಬಳಕೆ ಯೂಕ್ರೇನಿಯನ್ನರಲ್ಲಿ ತಮ್ಮ ನುಡಿ, ಸಂಸ್ಕ್ರುತಿಗಳು, ರಶ್ಯನ್ ನುಡಿ ಮತ್ತು ಸಂಸ್ಕ್ರುತಿಗಳ ಒಂದು ಬಾಗ ಎನ್ನುವ ಅನಿಸಿಕೆಯನ್ನೂ ಕೀಳರಿಮೆಯನ್ನೂ ಮೂಡಿಸಿತ್ತಲ್ಲದೆ, ರಶ್ಯನ್ನರಲ್ಲಿ ಯೂಕ್ರೇನಿಯನ್ ನಾಡು ಮತ್ತು ಮಂದಿಯನ್ನು ಗೆದ್ದುಕೊಂಡಂತಹ ಮೇಲರಿಮೆಯನ್ನು ಮೂಡಿಸಿತ್ತು. ಇದೇ ಬಗೆಯ ರಶ್ಯನ್ ಲಿಪಿ ಹೇರಿಕೆಯನ್ನು ಸೋವಿಯೆತ್ ಒಕ್ಕೂಟದ ಇತರೆ ನಾಡುಗಳಲ್ಲೂ ಮಾಡಲಾಯಿತು.

ಸೋವಿಯೆತ್ ಒಕ್ಕೂಟದಲ್ಲಿ ತುರ್‍ಕ್ಮೇನಿಸ್ತಾನ್, ಅಜರ್‍ಬಾಯ್ಜಾನ್, ತಜಿಕಿಸ್ತಾನ್, ಕಜಕ್ಸ್ತಾನ್ ಮುಂತಾದ ಟರ‍್ಕಿಕ್ ನಾಡುಗಳು ಇದ್ದವು. ಹಲವು ಕಡೆಗಳಲ್ಲಿ ಚದುರಿ ಹೋಗಿದ್ದ ಟಾಟರ್ ಎಂಬ ಟರ‍್ಕಿಕ್ ಜನಾಂಗವೂ ಇತ್ತು. ಮೊದಲು, ಆ ಮಂದಿಯ ಇಸ್ಲಾಂ ನಂಟನ್ನು ಸಡಿಲಿಸಿ, ಸೋವಿಯೆತ್ ಕಯ್ವಾಡವನ್ನು ಗಟ್ಟಿಗೊಳಿಸಲು, ಆ ನಾಡುಗಳಲ್ಲೆಲ್ಲ ಬಳಕೆಯಲ್ಲಿದ್ದ ಅರೇಬಿಕ್ ಲಿಪಿಯನ್ನು ಕಿತ್ತೊಗೆದು ರೋಮನ್ ಲಿಪಿಯನ್ನು ಬಳಸಲಾಯಿತು. ಮುಂದೆ ರೋಮನ್ ಲಿಪಿಯನ್ನೂ ಕಿತ್ತು ರಶ್ಯನ್ ಸಿರಿಲಿಕ್ ಲಿಪಿಯನ್ನು ಕಡ್ಡಾಯ ಮಾಡಲಾಯಿತು. ಈ ಸಿರಿಲಿಕ್ ಲಿಪಿಯ ಅಳವಡಿಕೆ, ಯೂಕ್ರೇನಿನಲ್ಲಿ ಆದಂತೆಯೇ, ಸುಮಾರು 1930-40ರಲ್ಲಿ ನಡೆಯಿತು. ಅಂದಿನಿಂದ 1991ರಲ್ಲಿ ಈ ನಾಡುಗಳು ಬಿಡುಗಡೆ ಹೊಂದುವ ವರೆಗೂ ರಶ್ಯನ್ ಸಿರಿಲಿಕ್ ಲಿಪಿಯನ್ನೇ ಬಳಸುತ್ತಿದ್ದವು. ತಜಿಕ್, ಕಜಕ್, ಟಾಟರ್ ನುಡಿಗಳನ್ನು ಬರೆಯಲು ಇಂದಿಗೂ ಸಿರಿಲಿಕ್ ಲಿಪಿಯನ್ನೇ ಬಳಸಲಾಗುತ್ತದೆ. ಆದರೆ ಬಿಡುಗಡೆಯ ಬಳಿಕ ಅಜರ್‍ಬಾಯ್ಜಾನಿ ಮತ್ತು ತುರ್‍ಕ್ಮೆನ್ ನುಡಿಗಳಿಗೆ ರೋಮನ್ ಲಿಪಿಯನ್ನು ಅಳವಡಿಸಲಾಗಿದೆ.

ಬಾರತದಲ್ಲೂ, ಒಕ್ಕೂಟದೆಲ್ಲೆಡೆ ಒಂದೇ ಲಿಪಿ – ಅಂದರೆ ದೇವನಾಗರಿಯನ್ನು ಬಳಸಬೇಕು ಎಂಬ ಕೂಗುಗಳು ಆಗಿಂದಾಗ್ಗೆ ಕೇಳಿ ಬರುತ್ತವೆ. ರಶ್ಯಾದಲ್ಲಿ ನಡೆದಂತೆ, ಒಕ್ಕೂಟದೆಲ್ಲೆಡೆಯ ಬೇರ‍್ಮೆಗಳನ್ನು ತುಳಿಯಲು ಬಳಸುವ ಹಲವು ಉಪಾಯಗಳಲ್ಲಿ ಇದೂ ಒಂದು. ಆದರೆ ಒಂದು ಹೊಸ ಲಿಪಿ ತಮ್ಮ ನುಡಿಗೆ ಅಳವಡಿಸಿಕೊಂಡು, ಕಲಿತು, ಬಳಸಲು ತೊಡಗುವ ಹಿಂದೆ ಇರುವ ತೊಡಕುಗಳಿಂದಾಗಿ ಇಂತಹ ಪ್ರಯತ್ನಗಳಿಗೆ ಹೆಚ್ಚು ಮಂದಿ ಮನ್ನಣೆ ದೊರಕಿಲ್ಲ. ಆದರೆ ಕೊಂಕಣಿ ನುಡಿಯ ವಿಶಯದಲ್ಲಿ ಒತ್ತಾಯದಿಂದ ದೇವನಾಗರಿಯನ್ನು ಹೇರುಲಾಗುತ್ತಿದ್ದು ಇದು ಕರ‍್ನಾಟಕ, ಕೇರಳ ಮುಂತಾದ ಕಡೆಗಳಲ್ಲಿ ನೆಲೆಸಿರುವ ಕೊಂಕಣಿಗರಿಗೆ ತೊಂದರೆಗಳನ್ನು ಒಡ್ಡುತ್ತಿದೆ.

ಇದರ ಹಿಂದೆ ಒಕ್ಕೂಟ ಸರಕಾರದ ಸಂಚಿದೆಯೇ ಎಂಬುದು ನೇರವಾಗಿ ತಿಳಿಯಲಾಗದಾದರೂ ಇದು ಉಂಟು ಮಾಡುವ ಪರಿಣಾಮಗಳು ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತವೆ. ತಮ್ಮ ನುಡಿಗೆ ಯಾವ ಲಿಪಿಯನ್ನು, ಇಲ್ಲವೇ ಲಿಪಿಗಳನ್ನು, ಬಳಸಬೇಕೆಂಬುದು ಆಯಾ ನುಡಿ ಸಮುದಾಯಗಳಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಬೇರೆ ನುಡಿ ಸಮುದಾಯಗಳು ಇಲ್ಲವೇ ಆಡಳಿತಗಳು ಮೂಗು ತೂರಿಸುವುದು ಸರಿಯಲ್ಲ. ಏಕೆಂದರೆ ತಮಗೆ ಯಾವುದು ಸರಿ ಎಂಬುದರ ಬಗ್ಗೆ ತಾವೇ ತೀರ‍್ಮಾನ ತೆಗೆದುಕೊಳ್ಳುವುದೇ ಸರಿಯಾದುದು ಮತ್ತು ಮಂದಿಯಾಳ್ವಿಕೆಯ ಏರ‍್ಪಾಟಲ್ಲಿ ತಾವೇ ತೀರ‍್ಮಾನಗಳನ್ನು ತೆಗೆದುಕೊಳ್ಳುವ ಹಕ್ಕು ಒಬ್ಬ ವ್ಯಕ್ತಿಗೂ ಇರುತ್ತದೆ, ಒಂದು ಸಮುದಾಯಕ್ಕೂ ಇರುತ್ತದೆ.

ಮೇಲೆ ಹೇಳಿದಂತೆ, ರಾಜಕೀಯದಲ್ಲಿ ಒಂದು ನಾಡು ಇನ್ನೊಂದು ನಾಡಿನಲ್ಲಿ ತನ್ನ ಕಯ್ವಾಡವನ್ನು ಹಬ್ಬಲು ಬಯಸುವುದು ಸಾಮಾನ್ಯ. ಆದರೆ ಮಂದಿಯಾಳ್ವಿಕೆಯೆಂದು ಹೇಳಿಕೊಳ್ಳುವ ಬಾರತ ಒಕ್ಕೂಟದಲ್ಲೂ ಇಂತಹ ಕೇಡು ತರುವ ಕೆಲಸಗಳಿಗೆ ಅವಕಾಶಗಳಿವೆ ಎಂಬುದು ಆತಂಕದ ವಿಶಯ. ಇಂತಹ ನಿಲುವುಗಳು ಮತ್ತು ಒಲವುಗಳು ಮಂದಿಯ ಹಕ್ಕುಗಳ ಮುರಿಯುವಿಕೆಯಲ್ಲದೆ ಒಂದು ಸಮುದಾಯದ ಒಳಿತಿಗೆ ನೇರವಾಗಿ ತಂದಿಡುವ ಕುತ್ತುಗಳು. ಇದರ ಬಗ್ಗೆ ಮಂದಿಯಲ್ಲಿ ಹೆಚ್ಚು ಅರಿವು ಮೂಡಿಸಿ, ಬೇರ‍್ಮೆಗಳನ್ನು ತುಳಿಯುವ ಎಲ್ಲ ಬಗೆಯ ಎಣಿಕೆಗಳಿಗೆ, ದಾರಿಗಳಿಗೆ ಕಡಿವಾಣ ಹಾಕಬೇಕಿದೆ.

(ಚಿತ್ರ ಸೆಲೆ: mycustomer)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: