ನಾಡಿನ ವಿಶಯಗಳಲ್ಲಿ ಸಂಸದರ ಸಾದನೆ ಸೊನ್ನೆ

ಮಲ್ಲೇಶ್ ಬೆಳವಾಡಿ ಗವಿಯಪ್ಪ.

govt-seeks-parliaments-approval-for-additional-rs-7500-crore-spending_230813013111

ಮುಂದಿನ ತಿಂಗಳು ಏಪ್ರಿಲ್ ನಲ್ಲಿ ಲೋಕಸಬೆ ಚುನಾವಣೆ ನಡೆಯಲಿದೆ. ಪೋಟಿಯಲ್ಲಿರುವ ಬೇರೆ-ಬೇರೆ ಬಣಗಳು ಚುನಾವಣೆಗೆ ಸಜ್ಜುಗೊಳ್ಳುತ್ತಿವೆ. ಕರ‍್ನಾಟಕದಲ್ಲಿ ಎಂದಿನಂತೆ ಮುಕ್ಯವಾಗಿ 3 ಬಣಗಳು ಚುನಾವಣೆ ತಯಾರಿಯಲ್ಲಿವೆ. ಕರ‍್ನಾಟಕದಲ್ಲಿ ಹೆಚ್ಚು ಸದ್ದುಮಾಡುತ್ತಿರುವ, ಸೆಣೆಸಲಿರುವ 3 ಬಣಗಳೆಂದರೆ, ಕಾಂಗ್ರೆಸ್, ಬಿ.ಜೆ.ಪಿ ಹಾಗೂ ಜೆಡಿಎಸ್. ಹಿಂದಿನಿಂದ ಈವರೆಗೂ ಕರ‍್ನಾಟಕವನ್ನು ಲೋಕಸಬೆಯಲ್ಲಿ ಪ್ರತಿನಿದಿಸಿರುವುದು ಹೆಚ್ಚಾಗಿ ಈ ಬಣಗಳೇ. ಕಳೆದ ಲೋಕಸಬೆ ಚುನಾವಣೆಯಲ್ಲಿ, 2009-2014 ರ ಅವದಿಗೆ 18 ಸದಸ್ಯರನ್ನು ಬಿಜೆಪಿ ಯಿಂದ, 9 ಮಂದಿ ಸದಸ್ಯರನ್ನು ಕಾಂಗ್ರೆಸ್ಸಿನಿಂದ ಲೋಕಸಬೆಗೆ ಆರಿಸಿ ಕಳುಹಿಸಿದ್ದರು.

ಬಿಜೆಪಿಯ ಸಂಸದರಾಗಲೀ, ಕಾಂಗ್ರೆಸ್ಸಿನ ಸಂಸದರಾಗಲೀ ಕಳೆದ 5 ವರುಶಗಳಲ್ಲಿ ನಾಡನ್ನು ಪ್ರತಿನಿದಿಸಿದ ಬಗೆ ನಾಡಿನ ಮಂದಿಗೆ ನಿರಾಸೆ ಮೂಡಿಸಿದೆ. ಈ ಅವದಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅದಿಕಾರದ ಚುಕ್ಕಾಣಿ ಹಿಡಿದಿತ್ತು, ಕೇಂದ್ರದಲ್ಲಿ ಕಾಂಗ್ರೆಸ್ ಮುಂದಾಳ್ತನದ ಯುಪಿಎ ಅದಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಎರಡೂ ಬಣಗಳು ಎಂದಿನಂತೆ ನಾಡಿನ ಹಿತಕಾಯುವಲ್ಲಿ ಸೋತಿವೆ.

5 ವರುಶಗಳಿಗೊಮ್ಮೆ ನಡೆಯಲಿರುವ ಲೋಕಸಬೆ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ. ಈ ಹೊತ್ತಿನಲ್ಲಿ ನಮ್ಮನ್ನು ಈವೆರೆಗೂ ಪ್ರತಿನಿದಿಸಿರುವ ಇದೇ ಬಣಗಳು ಮತ್ತದರ ಅಬ್ಯರ‍್ತಿಗಳು ಕಳೆದ ಅದಿಕಾರಾವದಿಯಲ್ಲಿ ನಾಡು-ನುಡಿ-ನಾಡಿಗರನ್ನು ಹೇಗೆ ಪ್ರತಿನಿದಿಸಿದರು ? ನಾಡಿನ ಮಂದಿಯನ್ನು ಹೇಗೆ ನಡೆಸಿಕೊಂಡರು ? ಇವರುಗಳ ಸಾದನೆಯೇನು ಎಂಬುದನ್ನು ಒರೆಗೆ ಹಚ್ಚಿ ನೋಡಬೇಕಿದೆ. ಆ ಮೂಲಕ ಕಳೆದ ಬಾರಿ ಈ ಬಣಗಳಿಂದ ಅಬ್ಯರ‍್ತಿಗಳನ್ನು ಆರಿಸಿ ಕಳುಹಿಸಿದುದರ ಪಲವೇನು ಎಂಬುದನ್ನು ಮೆಲುಕು ಹಾಕಿ ನಾಡಿನ ಮಂದಿ ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕಿದೆ.

ಎಂದಿನಂತೆ ಕಳೆದ 5 ವರುಶಗಳಲ್ಲಿಯೂ ಸಹ ಕನ್ನಡ ನಾಡನ್ನು ಹಲವು ತೊಂದರೆಗಳು ಸುತ್ತ-ಮುತ್ತಲೂ ಕಾಡಿದವು. ಬೂದಿ ಮುಚ್ಚಿದ ಕೆಂಡದಂತೆ ಈ ತೊಂದರೆಗಳು ಆಗಿಂದಾಗೆ ಮರುಕಳಿಸುತ್ತಿವೆ. ಇವುಗಳಲ್ಲಿ ಕಾವೇರಿ ನದಿ ನೀರು ಹಂಚಿಕೆ ತೊಂದರೆ, ಕ್ರಿಶ್ಣಾ ನದಿ ನೀರು ಹಂಚಿಕೆ, ಬೆಳಗಾವಿ ಗಡಿ ತೊಂದರೆ, ಹೊಗೇನಕಲ್ ತೊಂದರೆ, ಕೇಂದ್ರ ಸರಕಾರದ ತಾರತಮ್ಯ ನಡೆ(ರಯ್ಲು ಹಾಗೂ ಇತರೆ ಯೋಜನೆಗಳಲ್ಲಿ) ಮುಕ್ಯವಾದವುಗಳು.

ಕಾವೇರಿ ನದಿ ನೀರು ಹಂಚಿಕೆ ಅನ್ಯಾಯ:
ಕೇಂದ್ರ ಸರಕಾರ ಪೆಬ್ರವರಿ 20, 2013 ರಂದು ಕಾವೇರಿ ನದಿ ಪ್ರಾದಿಕಾರದ ಅಯ್ ತೀರ‍್ಪಿನ ಅದಿಸೂಚನೆ ಹೊರಡಿಸಿತು. ಗೆಜೆಟ್ಟಿನಲ್ಲಿ ಈ ತೀರ‍್ಪು ಮಂಡನೆಯಾಗಿದ್ದು ಕರ‍್ನಾಟಕದ ಪಾಲಿಗೆ ಸಾವಿನ ಶಾಸನ ಬರದಂತೆ. ಹಿಂದಿನಿಂದಲೂ ನಮ್ಮನಾಳಿದ ರಾಶ್ಟ್ರೀಯ ಬಣಗಳ ಕೊಡುಗೆಯಿದು. ಈ ಹೊತ್ತಿನಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿತ್ತು. ಲೋಕಸಬೆಗೆ ರಾಜ್ಯದಿಂದ ಆರಿಸಿ ಕಳಿಸಲ್ಪಟ್ಟ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು ಒಬ್ಬರ ಮೇಲೊಬ್ಬರು ಗೂಬೆ ಕೂರಿಸಿ, ಕೆಸರೆರಚಾಟ ಮಾಡಿದ್ದಶ್ಟೇ ಇವರ ಸಾದನೆ. ಪರಸ್ಪರ ಒಬ್ಬರನ್ನೊಬ್ಬರು ದೂರಿ ಹೊಣೆಗೇಡಿತನ ತೋರಿ ನಾಡಿನ ಮಂದಿಗೆ ಬಹುದೊಡ್ಡ ಅನ್ಯಾಯವೆಸಗಿದರು. 2007 ರ ಅಯ್ ತೀರ‍್ಪು 2013 ರ ವರೆಗಾದರೂ ಗೆಜೆಟ್ಟಿನಲ್ಲಿ ಪ್ರಕಟವಾಗದಂತೆ ತಡೆ ಹಿಡಿದದ್ದು ನಾಡಿನ ಕನ್ನಡಪರ ಸಂಗಟನೆಗಳು(ಮುಕ್ಯವಾಗಿ ಪ್ರತಿ ಹೆಜ್ಜೆಯಲ್ಲೂ ಎಡೆಬಿಡದೆ ಹೋರಾಡಿದ ಕರ‍್ನಾಟಕ ರಕ್ಶಣಾ ವೇದಿಕೆ). ದಶಕಗಳಿಂದಲೂ ಕಾವೇರಿ ನದಿ ವಿವಾದದಲ್ಲಿ ನಾಡಿಗೆ ಅನ್ಯಾಯವಾಗುತ್ತಲೇ ಇರುವಂತೆ ನೋಡಿಕೊಂಡು 2013 ಅಲ್ಲಿ ಕೊನೇ ಮೊಳೆ ಜಡಿದದ್ದೇ ನಾಡಿಗೆ ಈ ರಾಶ್ಟ್ರೀಯ ಬಣಗಳ ಕೊಡುಗೆ !

ಕ್ರಿಶ್ಣಾ ನದಿ ನೀರು ಹಂಚಿಕೆ:
ಉತ್ತರ ಕರ‍್ನಾಟಕದ ಪ್ರಮುಕ ನದಿ ಕ್ರಿಶ್ಣಾ. ಕ್ರಿಶ್ಣಾ ನದಿ ನೀರು ಕರ‍್ನಾಟಕ, ಮಹಾರಾಶ್ಟ್ರ ಮತ್ತು ಆಂದ್ರ ಪ್ರದೇಶಕ್ಕೆ ಹಂಚಿಕೆಯಾಗಿದೆ. 31, ಡಿಸೆಂಬರ್ 2010 ರಂದು ಕ್ರಿಶ್ಣಾ ನ್ಯಾಯಾದಿಕರಣದ ಅಯ್ ತೀರ‍್ಪು ಹೊರಬಿದ್ದಿತು. ಈ ತೀರ‍್ಪಿನಿಂದ ರಾಜ್ಯಕ್ಕೆ 100 ಟಿಎಮ್ ಸಿ ನೀರು(ಸುಮಾರು 6.5 ಕೋಟಿ ಜನರಿಗೆ ದಿನಬಳಕೆಗೆ ಬೇಕಾಗುವಶ್ಟು ನೀರು) ಕಯ್ ತಪ್ಪಿ ಅನ್ಯಾಯವಾಯಿತು. ಈ ತೀರ‍್ಪಿನಂತೆ ಇನ್ನು ಮುಂದೆ 2050 ರವರೆಗೂ ಈ ವಿವಾದದ ಬಗ್ಗೆ ಸೊಲ್ಲೆತ್ತುವ ಹಾಗಿಲ್ಲ. ಆದರೆ ರಾಜ್ಯದ ರಾಜಕೀಯ ನಾಯಕರು ಈ ತೀರ‍್ಪನ್ನೇ ದೊಡ್ಡ ಗೆಲುವಿನಂತೆ ಬಿಂಬಿಸಿ ಸಂಬ್ರಮಿಸಿದರು. ಈಗಲೂ ಆಂದ್ರಪ್ರದೇಶ ಆಲಮಟ್ಟಿ ಜಲಾಶಯದ ಎತ್ತರವನ್ನು ಏರಿಸಬೇಕೆನ್ನುವ ಕರ‍್ನಾಟಕದ ನಡೆಗೆ ತಡೆಯೊಡ್ಡಿ ತನ್ನ ಅಕ್ರಮ ನೀರಾವರಿ ಯೋಜನೆಗಳನ್ನು ಮುಂದುವರೆಸುತ್ತಿದೆ. ನಾಡಿನ ಬಗ್ಗೆ ಕಾಳಜಿಯಿರದ ರಾಶ್ಟ್ರೀಯ ಬಣಗಳ ಸಂಸದರು ನಮ್ಮನ್ನು ಪ್ರತಿನಿದಿಸುತ್ತಿರುವುದೇ ಇಂತಹ ಅನ್ಯಾಯವಾಗುದಕ್ಕೆ ಮೂಲ ಕಾರಣ.

ಹೊಗೇನಕಲ್ ವಿವಾದ:
ಕರ‍್ನಾಟಕದ ಬಾಗವಾದ ಹೊಗೇನಕಲ್ ನಲ್ಲಿ ಕರ‍್ನಾಟಕವು ಕೈಗೆತ್ತಿಕೊಂಡ ಮೇಕೆದಾಟು ವಿದ್ಯುತ್ ಯೋಜನೆಗೆ ತಮಿಳುನಾಡು ಸರಕಾರ ಅಡ್ಡಿ ಮಾಡಿ, ಹೊಗೇನಕಲ್ ಗಡಿಯ ಅತಿಕ್ರಮಣ ಮಾಡಿ ತಮಿಳುನಾಡಿನ ದರ‍್ಮಪುರಿ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆಯನ್ನು ನಿರಾತಂಕವಾಗಿ ಮುಂದುವರೆಸಿತು. ನಾವಾರಿಸಿ ಕಳುಹಿಸಿದ ನಾಡಿನ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈ ವಿಶಯದಲ್ಲೂ ದಿಟ್ಟ ನಾಯಕತ್ವ ತೋರದೆ ನಾಡಿಗೆ ಅನ್ಯಾಯವಾಗುವಂತೆ ನಡೆದುಕೊಂಡರು.

(ಚಿತ್ರ ಸೆಲೆ: ibnlive)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.