“ಒಬ್ಬ ಇದ್ದಾನೆ ಸಾರ್”

ಸಿ.ಪಿ.ನಾಗರಾಜ

ನಗರದ ಬಡಾವಣೆಯೊಂದರಲ್ಲಿದ್ದ ದೊಡ್ಡ ನಿವೇಶನದಲ್ಲಿ ಪುಟ್ಟ ಮನೆಯೊಂದಿತ್ತು. ನಿವೇಶನದ ಸುತ್ತಲೂ ತಂತಿ ಬೇಲಿಯಿತ್ತು. ಸುಮಾರು ಇಪ್ಪತ್ತು ವರುಶಗಳ ಹಿಂದೆ ಕಟ್ಟಿದ್ದ ಈ ಮನೆಯಲ್ಲಿ ಮಯ್-ಕಯ್ ತೊಳೆದುಕೊಳ್ಳಲು ಬಳಸುವ ನೀರುಮನೆ ಮತ್ತು ಕಕ್ಕಸಿನ ಕೊಟಡಿಗಳು ಮನೆಯ ಹೊರಗಡೆಯಿದ್ದವು. ಈ ಮನೆಯಲ್ಲಿ ಜಗದೀಶನು ತನ್ನ ಹೆಂಡತಿ ಮತ್ತು ಮಗುವಿನೊಡನೆ ಕಳೆದ ಎರಡು ವರುಶಗಳಿಂದ ನೆಲೆಸಿದ್ದನು. ಜಗದೀಶ ದಿನಸಿ ಅಂಗಡಿಯ ಮಾಲೀಕನಾಗಿದ್ದ. ಅವನ ಹೆಂಡತಿಯು ನಗರದ ಶಾಲೆಯೊಂದರಲ್ಲಿ ಟೀಚರ್ ಆಗಿದ್ದಳು.

ಇದುವರೆಗೂ ನೆಮ್ಮದಿಯಿಂದಿದ್ದ ಈ ಕುಟುಂಬಕ್ಕೆ, ಈಗ ಎರಡು ತಿಂಗಳಿಂದ ಕಳ್ಳರ ಕಾಟ ಶುರುವಾಗಿತ್ತು. ನೀರುಮನೆಗೆ ಹಾಕಿದ್ದ ಬೀಗವನ್ನು ಒಡೆದು, ಅಲ್ಲಿ ಹೂತಿದ್ದ ಹಂಡೆಯನ್ನು ಹಾರೆಯಿಂದ ಮೀಟಿ ತೆಗೆದು, ನೀರಿನ ಹಂಡೆಯನ್ನು ಒಂದು ಇರುಳು ಯಾರೋ ಕದ್ದು ಒಯ್ದರು. ಬೆಲೆಬಾಳುವ ತಾಮ್ರದ ಹಂಡೆಯು ಕಳೆದುಹೋದ ಸಂಕಟಕ್ಕಿಂತ ಹೆಚ್ಚಾಗಿ, ಕಳ್ಳರು ಮನೆಗೆ ನುಗ್ಗಿ ಬಂದಿದ್ದುದು ಗಂಡಹೆಂಡತಿಯರಲ್ಲಿ ಹೆದರಿಕೆಯನ್ನು ಹುಟ್ಟಿಸಿತ್ತು. ಹಂಡೆ ಕಳುವಾದ ಸಂಗತಿಯನ್ನು ನೆರೆಹೊರೆಯವರೊಡನೆ ಹೇಳಿಕೊಂಡರೇ ಹೊರತು, ಪೋಲಿಸರಿಗೆ ದೂರು ಕೊಡಲಿಲ್ಲ. ಮತ್ತೆ ಹೊಸದೊಂದು ಹಂಡೆಯನ್ನು ಕೊಂಡು ತಂದು, ಪ್ರತಿದಿನ ಬೆಳಗ್ಗೆ ನೀರುಮನೆಯಲ್ಲಿ ಮೂರು ದೊಡ್ಡ ಕಲ್ಲುಗಳ ಮೇಲಿಟ್ಟು ನೀರನ್ನು ಕಾಯಿಸಿಕೊಂಡು ಬಳಸುತ್ತಾ, ಇರುಳು ಕವಿಯುತ್ತಿದ್ದಂತೆಯೇ ಹಂಡೆಯನ್ನು ಮನೆಯೊಳಕ್ಕೆ ಎತ್ತಿಟ್ಟುಕೊಳ್ಳುತ್ತಿದ್ದರು.

ಒಂದು ದಿನ ಎಡಹಗಲಿನಲ್ಲಿ ಮಗುವಿನೊಡನೆ ಸಣ್ಣ ನಿದ್ದೆಯನ್ನು ಮಾಡಿದ ನಂತರ, ಹೆಂಡತಿಯು ಮೊಕ ತೊಳೆಯಲೆಂದು ನೀರುಮನೆಗೆ ಹೋದಾಗ, ಹಂಡೆ ಕಣ್ಮರೆಯಾಗಿತ್ತು. ಅಂಗಡಿಯಿಂದ ಅಂದಿನ ಇರುಳು ಮನೆಗೆ ಹಿಂತಿರುಗಿದ ಜಗದೀಶನಿಗೆ ಸಂಗತಿಯನ್ನು ತಿಳಿಸುತ್ತಾ-

“ಆಡುಹಗಲಲ್ಲೇ ಜನ ಮನೆಯೊಳಗೆ ಇರುವಾಗಲೇ, ತಂತಿ ಬೇಲಿ ದಾಟಿ ಬಂದು ಹಂಡೆಯನ್ನು ಎತ್ತಿಕೊಂಡು ಹೋಗಿದ್ದಾರಲ್ಲ !… ಹಿಂಗಾದ್ರೆ ಮುಂದಕ್ಕೆ ಏನ್ರಿ ಮಾಡೋದು ?.. ನಂಗ್ಯಾಕೊ ಕಯ್ ಕಾಲೇ ಬಿದ್ದೋದಂಗೆ ಹೆದರಿಕೆ ಆಗುತ್ತೆ ಕಣ್ರೀ” ಎಂದಾಗ, ಜಗದೀಶನೂ ಬಹಳ ಆತಂಕಕ್ಕೆ ಒಳಗಾದ. ಆದರೆ ಅದನ್ನು ತೋರ‍್ಪಡಿಸಿಕೊಳ್ಳದೆ, ಹೆಂಡತಿಯ ಅಂಜಿಕೆಯನ್ನು ಹೋಗಲಾಡಿಸಲೆಂದು –

“ಯಾರೋ ಸಣ್ಣಪುಟ್ಟ ಕಳ್ಳರೇನೋ ಕಣೆ.. ಅದಕ್ಯಾಕೆ ಹಿಂಗೆ ಹೆದರ‍್ಕೊಳ್ತೀಯೆ” ಎಂದ.

“ನಾವು ತಪ್ಪು ಮಾಡ್ಬಿಟ್ಟೊ ಕಣ್ರಿ. ಮೊದಲನೇ ಹಂಡೆ ಕಳುವಾದಾಗ್ಲೇ ಪೋಲಿಸರಿಗೆ ಒಂದು ಕಂಪ್ಲೇಂಟ್ ಕೊಡಬೇಕಾಗಿತ್ತು”.

“ಅಯ್ಯೋ.. ಸುಮ್ನಿರೆ. ನಾವು ಕಂಪ್ಲೇಂಟ್ ಕೊಟ್ಟ ಮಾತ್ರಕ್ಕೆ ಅವರೇನು ಕಳ್ಳರನ್ನು ಹಿಡಿದು ಜಯ್ಲಿಗೆ ಹಾಕ್ಬುಡ್ತಿದ್ರಾ ?”.

“ಹಾಕ್ತಿದ್ರೊ.. ಬಿಡ್ತಿದ್ರೊ.. ನಮ್ಮ ಬಡಾವಣೆಯಲ್ಲಿ ಪದೇಪದೆ ಕಳ್ಳತನಗಳು ಆಗ್ತಾ ಇವೆ ಅನ್ನೋದನ್ನಾದರೂ ಪೋಲಿಸರ ಗಮನಕ್ಕೆ ತಂದಂಗೆ ಆಗ್ತಿರಲಿಲ್ವೆ?”.

“ಲೇ..ನಿಂಗೆ ಪೋಲಿಸ್ನೋರ ಸಾವಾಸ ಎಂತದು ಅಂತ ಗೊತ್ತಿಲ್ಲ. ಅದಕ್ಕೆ ಹಿಂಗೆಲ್ಲಾ ಮಾತಾಡ್ತೀಯೆ. ನಮ್ಮಪ್ಪ ಹೇಳ್ತಾಯಿದ್ರು… ಪೋಲಿಸ್ ಸ್ಟೇಶನ್ನಿಗೆ.. ಕೋರ‍್ಟಿಗೆ.. ಆಸ್ಪತ್ರೆಗೆ ಏಕದಮ್ ಹೋಗ್ಬಾರದು. ತೀರಾ ಹೋಗದೇ ಇದ್ರೆ ಆಗೋದೆ ಇಲ್ಲ ಅನ್ನುಸುದ್ರೆ ಮಾತ್ರ… ಅವುಗಳ ಮೆಟ್ಟಿಲು ಹತ್ತಬೇಕು ಅಂತ”.

“ರ್‍ರೀ.. ನೀವು ಯಾವುದೋ ಓಬಿರಾಯನ ಕಾಲದಲ್ಲಿ ಇದ್ದೋರಂಗೆ ಮಾತಾಡ್ತ ಇದ್ದೀರಲ್ಲ ! ಏನಾದರಾಗ್ಲಿ, ಬೆಳಗ್ಗೆ ನೀವು ಅಂಗಡಿಗೆ ಹೋಗೂದಕ್ಕೆ ಮುಂಚೆ ಪೋಲಿಸ್ ಸ್ಟೇಶನ್ನಿಗೆ ಹೋಗಿ ಹೇಳಲೇಬೇಕು” ಎಂದು ಪಟ್ಟು ಹಿಡಿದಾಗ, ಒಲ್ಲದ ಮನಸ್ಸಿನಿಂದಲೇ ಒಂದು ಕಂಪ್ಲೇಂಟನ್ನು ಬರೆದಿಟ್ಟುಕೊಂಡು, ಮಾರನೆಯ ದಿನ ಬೆಳಗ್ಗೆ ಜಗದೀಶ ಪೋಲಿಸ್ ಸ್ಟೇಶನ್ನಿನ ಮೆಟ್ಟಿಲನ್ನು ತುಳಿದ.

ಒಂದು ಬಗೆಯ ಅಂಜಿಕೆಯಿಂದಲೇ ಸ್ಟೇಶನ್ನಿನ ಆವರಣವನ್ನು ಹೊಕ್ಕ ಜಗದೀಶನಿಗೆ, ತುಸು ನೆಮ್ಮದಿಯನ್ನು ತಂದುಕೊಟ್ಟ ಸಂಗತಿಯೆಂದರೆ, ಅಂದು ಸ್ಟೇಶನ್ನಿನಲ್ಲಿ ಒಬ್ಬ ಪೇದೆ ಮತ್ತು ದಪೇದಾರ್ ಅವರನ್ನು ಬಿಟ್ಟರೆ ಮತ್ತಾರು ಇರಲಿಲ್ಲ. ಪೇದೆಯ ಸೂಚನೆಯಂತೆ ದಪೇದಾರ್ ಅವರ ಬಳಿಗೆ ತೆರಳಿ, ಅವರಿಗೆ ಕಂಪ್ಲೇಂಟಿನ ಹಾಳೆಯನ್ನು ಕೊಟ್ಟಾಗ, ಅವರು ಒಮ್ಮೆ ಜಗದೀಶನನ್ನು ಅಡಿಯಿಂದ ಮುಡಿಯವರೆಗೆ ದಿಟ್ಟಿಸಿ ನೋಡಿ, ಅನಂತರ ಕಂಪ್ಲೇಂಟನ್ನು ಓದತೊಡಗಿದರು. ಓದಿ ಮುಗಿಸಿದ ನಂತರ, ಜಗದೀಶನನ್ನು ತಮ್ಮ ಎದುರಿಗಿದ್ದ ಸ್ಟೂಲಿನ ಮೇಲೆ ಕುಳಿತುಕೊಳ್ಳಲು ಹೇಳಿ, ಅಗತ್ಯವಾದ ಮಾಹಿತಿಗಳನ್ನು ಕಲೆಹಾಕಲೆಂದು ದಪೇದಾರ್ ಅವರು ವಿಚಾರಣೆಯನ್ನು ಶುರುಮಾಡಿದರು.

“ನಿಮ್ಮ ಮನೆಯಲ್ಲಿ ಎಶ್ಟು ಜನ ಇದ್ದೀರಿ ?”.

“ಮೂರು ಜನ ಇದ್ದೀವಿ ಸಾರ್. ನಾನು-ನನ್ನ ಹೆಂಡ್ತಿ-ನಮ್ಮದೊಂದು ಮಗು”.

“ಸಾಮಾನ್ಯವಾಗಿ ನಿಮ್ಮ ಮನೆಗೆ ಯಾರ‍್ಯಾರು ಬಂದು ಹೋಗ್ತಿರ‍್ತರೆ ?”.

“ನಮ್ಮ ನೆಂಟರಿಶ್ಟರು… ಗೆಳೆಯರು ಆಗಾಗ್ಗೆ ಬರ‍್ತಿರ‍್ತರೆ ಸಾರ್”.

“ಅವರಲ್ಲಿ ನಿಮಗೆ ಯಾರ ಮೇಲಾದರೂ ಅನುಮಾನ ಇದೆಯಾ ?”.

“ಇದೇನ್ ಸಾರ್ ಹಿಂಗೆ ಕೇಳ್ತೀರಿ ! ಮನೆಗೆ ಬಂದೋರ್ ಮೇಲೆಲ್ಲಾ ಸಂಶಯ ಪಡೋದು ಸರೀನಾ ಸಾರ್”.

“ನೋಡ್ರಿ.. ಇದು ಸರಿ-ತಪ್ಪಿನ ಪ್ರಶ್ನೆಯಲ್ಲ. ಹೇಳಿ ಕೇಳಿ ನಮ್ಮದು ಪೋಲಿಸ್ ಡಿಪಾರ‍್ಟ್‌ಮೆಂಟ್. ಅನುಮಾನಾಸ್ಪದವಾಗಿ ಕಂಡು ಬಂದರೆ… ಹೆತ್ತ ಅಪ್ಪ-ಅವ್ವನೇ ಆಗಿರ‍್ಲಿ.. ಯಾರನ್ನೂ ಬಿಡದೇನೆ ವಿಚಾರಣೆ ಮಾಡೋದು ನಮ್ಮ ಇಲಾಕೆಯ ದರ‍್ಮ”.

ಪೋಲಿಸರ ವಿಚಾರಣೆಯ ಬಗೆಯನ್ನು ಕಂಡು, ಜಗದೀಶ ತುಸು ಗಾಬರಿಗೊಂಡ. ದಪೇದಾರ್ ಅವರು ಹಾಕುತ್ತಿರುವ ಪ್ರಶ್ನೆಗಳು ಎದುರಾಳಿ ಬಿಡುತ್ತಿರುವ ಬಾಣಗಳಂತೆ ಕಂಡುಬಂದವು.

“ನಿಮ್ಮ ಮನೆಗೆ ಹೊರಗಿನವರು ಯಾರಾದರೂ ಬಂದು ಹೋಗುವುದು ಉಂಟೇನ್ರಿ ?… ಚೆನ್ನಾಗಿ ನೆನಪಿಸಿಕೊಂಡು ಹೇಳಿ”.

“ಸಾರ್.. ನನ್ನ ಹೆಂಡತಿ ಮಿಡಲ್‌ಸ್ಕೂಲ್ ಮೇಡಮ್ ಆಗಿದ್ದಾಳೆ. ಹತ್ತು ಹನ್ನೆರಡು ಹುಡುಗರು ಪ್ರತಿನಿತ್ಯ ಸಂಜೆ ವೇಳೆ ಟ್ಯೂಶನ್‌ಗೆ ಅಂತ ಮನೆಗೆ ಬಂದು ಹೋಗ್ತಾರೆ ಸಾರ್”.

“ಅವರಲ್ಲೇ ಒಬ್ಬ ಯಾಕೆ.. ಈ ಕಳ್ಳತನ ಮಾಡಿರ‍್ಬಾರದು ?”.

“ಅವರೆಲ್ಲಾ ದೊಡ್ಡ ದೊಡ್ಡ ಆಪೀಸರ‍್ಸ್ ಮಕ್ಕಳು ಸಾರ್ “.

“ಆದರೇನ್ರಿ… ಆಪೀಸರ‍್ಸ್‌ಗಳಲ್ಲೇ ಸಾಕಶ್ಟು ಮಂದಿ ಕಳ್ಳರಿಲ್ವೇನ್ರಿ ?.. ಲಂಚ ಹೊಡಿಯುವುದು.. ಕಳ್ಳತನಕ್ಕಿಂತ ಕೆಟ್ಟದ್ದಲ್ವೇನ್ರಿ ?”.

ಲಂಚದ ಬಗ್ಗೆ ದಪೇದಾರ್ ಅವರ ಅನಿಸಿಕೆಯನ್ನು ಕೇಳಿ ಜಗದೀಶ ನಿಬ್ಬೆರಗಾದ. ಆದರೂ ಅವರ ಅನುಮಾನವನ್ನು ತಳ್ಳಿಹಾಕುತ್ತಾ-

“ಟ್ಯೂಶನ್ನಿಗೆ ಬರೋರೆಲ್ಲಾ ತುಂಬಾ ಚಿಕ್ಕ ವಯಸ್ಸಿನ ಸಣ್ಣ ಮಕ್ಕಳು ಸಾರ್”.

“ಅವರಲ್ಲೇ ನಿಮ್ಮ ಹಂಡೆಯನ್ನು ಹೊತ್ತುಕೊಂಡು ಹೋಗುವಶ್ಟು ಶಕ್ತಿಯಿರುವ ದೊಡ್ಡ ಹುಡುಗರು ಯಾರಾದರೂ ಇದ್ದರೆ, ಅಂತಾವರನ್ನು ಗುರುತಿಸಿ ಹೇಳಿ”.

ಈಗ ಜಗದೀಶ ಇಕ್ಕುಳಕ್ಕೆ ಸಿಲುಕಿದ ಅಡಕೆಯಂತಾಗಿದ್ದ. ತನ್ನನ್ನು ಪೋಲಿಸ್ ಸ್ಟೇಶನ್ನಿಗೆ ಬರುವಂತೆ ಮಾಡಿದ್ದ ಹೆಂಡತಿಯನ್ನು ಮನದಲ್ಲಿಯೇ ಶಪಿಸುತ್ತಾ… ಏನು ಹೇಳಬೇಕೆಂದು ತೋಚದೆ ಸುಮ್ಮನೆ ಕುಳಿತ. ಮತ್ತೆ ದಪೇದಾರ್ ಅವರಿಂದ ಹುಕುಮ್ ಹೊರಟಿತು.

“ಸರಿಯಾಗಿ ನೆನಪಿಸಿಕೊಂಡು ಹೇಳ್ರಿ”.

ಜಗದೀಶ ಈಗ.. ಟ್ಯೂಶನ್ನಿಗೆ ಬರುತ್ತಿದ್ದ ಹುಡುಗರಲ್ಲಿ ಎತ್ತರವಾಗಿ ದಪ್ಪನಾಗಿದ್ದವರನ್ನು ನೆನಪಿಸಿಕೊಳ್ಳತೊಡಗಿದ. ಒಂದೆರಡು ಗಳಿಗೆಯ ನಂತರ-

“ಒಬ್ಬ ಇದ್ದಾನೆ ಸಾರ್” ಎಂದ.

“ಅವನ ಹೆಸರೇನು ? .. ಯಾರ ಮಗ ಅವನು ?.. ಅವನ ಮನೆ ಎಲ್ಲಿದೆ ?” ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಕರೆದರು.

ಈಗ ಜಗದೀಶ ಬಾಯಿತಪ್ಪಿ ಮಾತನಾಡಿದವನಂತೆ.. ತನ್ನ ಕೆಳತುಟಿಯನ್ನು ಕಚ್ಚಿಕೊಂಡು ಕುಳಿತ.

“ಇದ್ಯಾಕ್ರಿ ಹಿಂಗೆ ಹಿಂಜರಿತೀರ ?.. ಅವನೆಂತ ಅಪಲತ್ಗಾರನ ಮೊಮ್ಮಗನೇ ಆಗಿರ‍್ಲಿ .. ಇಲ್ಲವೇ.. ದೊಡ್ಡ ಆಪೀಸರ್ ಮಗನೇ ಆಗಿರ‍್ಲಿ… ಸ್ಟೇಶನ್ನಿಗೆ ಎಳೆದು ತರಿಸಿ ಬಾಯಿ ಬಿಡಿಸ್ತೀನಿ. ನೀವೇನು ಹೆದರ‍್ಕೊಬ್ಯಾಡಿ.. ಅವನು ಯಾರು ಅಂತ ಹೇಳಿ.. ಯಾರ ಮಗ ಅವನು” ಎಂದು ಪೀಡಿಸತೊಡಗಿದರು. ಹೇಳಲೋ ಬೇಡವೋ ಎಂದು ಒಂದೆರಡು ಗಳಿಗೆ ತೊಳಲಾಡುತ್ತಿದ್ದ ಜಗದೀಶ.. ದಪೇದಾರರ ಒತ್ತಾಯವನ್ನು ತಡೆಯಲಾಗದೆ.. ಕೊನೆಗೂ ಬಾಯ್ಬಿಟ್ಟ-

“ಆ ದೊಡ್ಡ ಹುಡುಗ.. ನಿಮ್ಮ ಸರ‍್ಕಲ್ ಇನ್‌ಸ್ಪೆಕ್ಟರ ಮಗ ಸಾರ್”

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: