ಬ್ರಶ್ಟಾಚಾರ

ರಾಜು ಎಲ್.ಎಸ್.

ಕ್ಶಾರ ಕಳೆದುಕೊಂಡ ಆಚಾರ
ಬ್ರಶ್ಟರಿಗೆ ಸಿಕ್ಕಿ ತನ್ನ ಕಂಪು ಕಳೆದ ಬ್ರಶ್ಟಾಚಾರ

ಸತ್ಯ ಕೆಲಸವೆಂದು ಅದರ ಕೆಳಗೆ ಕುಳಿತು
ವಾಮ ಹಸ್ತವ ರಂಗೋಲಿ ಕೆಳಗೆ ಚಾಚಿ
ಬರುವಿಕೆಗೆ ಜೊಲ್ಲು ಸುರಿಸುವ
ಕಾಯಕದ ಬ್ರಶ್ಟದ ಪರಿ

ಇದ್ದರೂ ಮರಣಿಸಿ ಕೊಟ್ಟ ಪತ್ರ ಪ್ರಮಾಣ
ಇದ್ದವನಿಗೆ ಇಹುದೆ ನರಕವೆನಿಸಿ
ನಿಜ ಪ್ರಾಣ ಬಿಟ್ಟರೇ ಹೋಗುವುದೆಲ್ಲಿಗೆ
ರಕ್ಕಸರಂತೆ ಕಾಣುವುದು ಬ್ರಶ್ಟದ ಪರಿ

ಗುಂಡಿ ಗೊಟರಗಳ ಮುಚ್ಚಲು ಅನುದಾನ ಕೋಟಿ
ಗುಂಡಿ ತುಂಬಿತೆನ್ನುವಶ್ಟರಲ್ಲಿ ಗೋಚರಿಸಿದ ಪಕ್ಕದ ಗುಂಡಿ
ತುಂಬಿದವನಿಗೆ ತುಂಬಿ ಕಿತ್ತು ಹೊರಬರದ ಅಂಗಿಯ ಗುಂಡಿ
ಬವಣೆ ತಪ್ಪಲಿಲ್ಲ ಕಟ್ಟಿದ ತೆರಿಗೆಯವನಿಗೆ ಬ್ರಶ್ಟದ ಪರಿ

ಬೆವರಿಳಿಸಿ ಪಡೆದ ಗುಂಟೆ ಬೂಮಿಯೊಂದು
ನೊಂದಿಸಲು ನೊಂದಣಿಗೆ ಕಾಯುತಿಹನು ತನ್ನ ಶೇಕಡ ಪಾಲು
ಕೊಡದ ಪಾಲಿಗೆ ಚಪ್ಪಲಿ ಸವೆಯುವಶ್ಟು ಅಲೆತ
ಪಡೆದ ಗುಂಟೆಗಿಂತ ಕಳೆದ ಗಂಟು ಹೆಚ್ಚು ಬ್ರಶ್ಟದ ಪರಿ

ಅಂಗಲಾಚಿ ಪಾದವ ಸ್ಪರ‍್ಶಿಸುತ ಬೇಡುವ ಮತ
ಮತಸಿಕ್ಕಿತೆಂದು ಮತಕೊಟ್ಟವ ಅವರ ಕಾಲಿಗೆ ಬೀಳುವ ಪ್ರಬುತ್ವದ ಪ್ರಜೆ
ಮತ ಬೇಡಿದ ಕರ‍್ಚು ಮತ್ತೆ ತುಂಬುವ ಚಿಂತೆ
ನಗಣ್ಯವಾಯಿತು ಪ್ರಜೆ ಚಿಂತೆ ಬ್ರಶ್ಟದ ಪರಿ

ಜೀವನ ಕರ‍್ಮ ಪಾವನಕ್ಕೆ ದೇವ ಗುಡಿ
ಗ್ರಹಚಾರದ ಗೋಚಾರಪಲಕ್ಕೆ ಶಾಂತಿ ಮಾಡೆನ್ನಲು
ಅರ್‍ಚನೆ ಬೇಡಿದರೆ ಇಟ್ಟು ಕೇಳು ಆರತಿ ತಟ್ಟೆಗೆ
ಹನಿ ತೀರ‍್ತ ಕೇಳಿದರೆ ಮುಕವ ತಿರುಗಿಸುವ ಪರಿ
ದೇವರ ಸನಿಹವೂ ಬಿಡದ ಈ ಬ್ರಶ್ಟದ ಪರಿ

ದಾಕಲೆ ದಾಕಲಾತಿಗಳ ಕೊರತೆ ನಡುವೆ ಸಾದಿಸಿದ ಕೆಲಸ
ಆಚಾರ ಮರೆತು ನಾವೇ ಕೊಟ್ಟು ಬೆಳೆಸಿದ ಅನಾಚಾರ ಪರಿ
ಒಮ್ಮೆ ರಕ್ತ ರುಚಿ ನೋಡಿ ಮತ್ತೆ ಬೆನ್ನತ್ತುವ
ವ್ಯಾಗ್ರದಂತೆ ಈ ಬ್ರಶ್ಟದ ಪರಿ

ಕಿತ್ತರೂ ಮತ್ತೆ ಹುಟ್ಟುವ ರಕ್ತಬೀಜಾಸುರನಂತೆ
ಮತ್ತೆ ದೇವಿ ಅವತರಿಸಿದರೂ ಸಿಗದ ಅಸುರ
ಆಚಾರದ ಕಂಪು ಕಳೆದು ಆಳವಾದ ಬೇರು
ಇಳಿಸಿದ ಈ ಬ್ರಹ್ಮಾಂಡದ ಬ್ರಶ್ಟಾಚಾರ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: