ಕನ್ನಡಿಗ ಉದ್ದಿಮೆದಾರರನ್ನು ಬೆಳೆಸುವ ಅದಿಕಾರ ಕನ್ನಡಿಗರಿಗಿರಬೇಕು

 ಪ್ರಿಯಾಂಕ್ ಕತ್ತಲಗಿರಿ.

Business feature

 

ಕಳೆದ ವಾರವಶ್ಟೇ ಒಕ್ಕೂಟ ಸರಕಾರದ ಬಜೆಟ್ ಹೊರಬಂದಿದೆ. ಮುಂಬರುವ ವರುಶದಲ್ಲಿ ಸರಕಾರದ ಕರ‍್ಚುಗಳು ಹೇಗಿರುತ್ತದೆ ಎಂಬ ಬಗ್ಗೆ ದಿಕ್ಕು-ತೋರುಗ ಎಂದೇ ಬಜೆಟ್ಟನ್ನು ಕರೆಯಬಹುದು. ಬಿಜೆಪಿ ಸರಕಾರದ ಮೊದಲ ಬಜೆಟ್ ಇದಾಗಿದ್ದರಿಂದ, ಸರಕಾರವು ಏನನ್ನು ಮಾಡಲು ಬಯಸುತ್ತದೆ ಎಂಬುದನ್ನರಿಯಲೂ ಬಜೆಟ್ಟನ್ನು ಗಮನಿಸಬೇಕಾಗುತ್ತದೆ.

ಉದ್ದಿಮೆದಾರರನ್ನು ಬೆಳೆಸಲು ಬಜೆಟ್:
“ಹೆಚ್ಚೆಚ್ಚು ಉದ್ದಿಮೆದಾರರು ಹುಟ್ಟಿಕೊಂಡರೆ, ಅವರುಗಳೇ ಹಣಕಾಸು ಏರ‍್ಪಾಡನ್ನು ಸರಿದಿಕ್ಕಿನೆಡೆಗೆ ಕರೆದೊಯುತ್ತಾರೆ” ಎಂಬ ಅನಿಸಿಕೆ ತೋರ‍್ಪಡಿಸುತ್ತಾ, ಹಣಕಾಸು ಮಂತ್ರಿಯಾದ ಅರುಣ್ ಜೇಟ್ಲಿಯವರು, ಸಣ್ಣ ಮತ್ತು ದೊಡ್ಡ ಉದ್ದಿಮೆದಾರರಿಗೆ ನೆರವಾಗುವಂತಹ ಹಮ್ಮುಗೆಗಳನ್ನು ಬಿಡಿಸಿಟ್ಟರು. ಒಂದು ನಾಡಿನಲ್ಲಿ ಹೆಚ್ಚೆಚ್ಚು ಉದ್ದಿಮೆದಾರರು ಹೇಗೆ ಹುಟ್ಟುತ್ತಾರೆ, ಉದ್ದಿಮೆಗಾರಿಕೆ ಬೆಳೆಯಲು ಸರಕಾರ ಕಯ್ಗೊಳ್ಳಬೇಕಾದ ಕೆಲಸವೇನು ಎಂಬುದನ್ನರಿಯಲು, ಹಿಂದಿನ ದಿನಗಳಲ್ಲಿ ಸರಕಾರಗಳು ಏನು ಮಾಡಿದ್ದವು ಎಂಬುದನ್ನು ನೋಡಬೇಕಾಗುತ್ತದೆ.

ನೆಹರು ಎತ್ತಿಕೊಂಡ ಕೆಲಸಗಳು:
ಎಕನಾಮಿಕ್ ಟಯ್ಮ್ನ್ಸ್ ಎಂಬ ಸುದ್ದಿಹಾಳೆಯಲ್ಲಿ ವಾರಕ್ಕೊಂದು ಅಂಕಣ ಬರೆಯುವ ಟಿ. ಕೆ. ಅರುಣ್ ಅವರು, ಇಂಡಿಯಾದಲ್ಲಿ ಉದ್ದಿಮೆಗಾರಿಕೆ ಚಿಗುರೊಡೆದು ಬೆಳೆಯಲು ನೆಹರು ಹೇಗೆ ಕಾರಣರಾದರು ಎಂಬುದನ್ನು ತಮ್ಮ ಈ ಒಂದು ಅಂಕಣದಲ್ಲಿ ವಿವರಿಸಿದ್ದಾರೆ. “ನೆಹರು ಒಬ್ಬ ಸಮಾಜವಾದಿ, ಅವರಿಂದ ಉದ್ದಿಮೆಗಾರಿಕೆ ಬೆಳೆಯಲಿಲ್ಲ” ಎಂಬುದೇ ಇವತ್ತಿನ ದಿನ ಹೆಚ್ಚಿನವರಲ್ಲಿನ ನಂಬಿಕೆಯಾಗಿದೆ. ಟಿ. ಕೆ. ಅರುಣ್ ಅವರು ಈ ನಂಬಿಕೆಯನ್ನು ತಮ್ಮ ಅಂಕಣದಲ್ಲಿ ಅಲ್ಲಗಳೆಯುತ್ತಾರೆ.
ನೆಹರು ಮತ್ತು ಅವರ ಬಳಿಕ ಕಾಂಗ್ರೆಸ್ ಆಳ್ವಿಕೆಯ ಹಲವಾರು ವರುಶಗಳ ಕಾಲ, ಹೊರನಾಡಿನ ಕಂಪನಿಗಳಿಗೆ ಇಂಡಿಯಾದಲ್ಲಿ ವಹಿವಾಟು ಮಾಡಲು ಬಿಡಲಿಲ್ಲ. ಈ ಮೂಲಕ, ಇಂಡಿಯಾದ ಕಂಪನಿಗಳಿಗೆ ಸ್ಪರ‍್ದೆಯಿಲ್ಲದ ಮಾರುಕಟ್ಟೆ ಒದಗಿಸಿದ್ದಲ್ಲದೇ, ಹೆಚ್ಚಾಗಿ ಬೇಸಾಯವನ್ನು ನೆಚ್ಚಿಕೊಂಡಿದ್ದ ದೇಶದಲ್ಲಿ ಹಣಕಾಸು ಒಗ್ಗೂಡಿಸಲು ನೆರವಾಯಿತು ಎನ್ನುತ್ತಾರೆ ಟಿ.ಕೆ. ಅರುಣ್.

1948ರಲ್ಲಿ ಕಟ್ಟಲಾದ ಅಯ್.ಎಪ್.ಸಿ.ಅಯ್ (IFCI) ಎಂಬ ಸಂಸ್ತೆ, 1956ರಲ್ಲಿ ಕಟ್ಟಲಾದ ಅಯ್.ಸಿ.ಅಯ್.ಸಿ.ಅಯ್ (ICICI) ಎಂಬ ಸಂಸ್ತೆ, ಮತ್ತು 1964ರಲ್ಲಿ ಕಟ್ಟಲಾದ ಅಯ್.ಡಿ.ಬಿ.ಅಯ್ (IDBI) ಎಂಬ ಸಂಸ್ತೆ, ಇವೆಲ್ಲವೂ ಜನರಿಂದ ಉಳಿತಾಯದ ರೂಪದಲ್ಲಿ ಹಣವನ್ನು ಒಗ್ಗೂಡಿಸಿ, ಉದ್ದಿಮೆದಾರರಿಗೆ ಸಾಲದ ರೂಪದಲ್ಲಿ ಬಂಡವಾಳ ಒದಗಿಸುವ ಕೆಲಸ ಮಾಡಿದುವು ಎನ್ನುತ್ತಾರೆ ಟಿ. ಕೆ. ಅರುಣ್.

ಸರಕಾರವೇ ಮುಂದೆ ನಿಂತು ಉಕ್ಕು ಕಾರ‍್ಕಾನೆಗಳನ್ನು ತೆಗೆದು, ಎಚ್.ಎಮ್.ಟಿ.ಯಂತಹ ಸಂಸ್ತೆಗಳನ್ನು ಕಟ್ಟಿದ್ದರಿಂದ, ಹೆಚ್ಚು ಮಂದಿ ನುರಿತ ಕೆಲಸಗಾರರೂ ಹುಟ್ಟುಕೊಂಡರು. ಅಯ್.ಅಯ್.ಟಿ ಮತ್ತು ಅಯ್.ಅಯ್.ಎಂ.ನಂತಹ ಸಂಸ್ತೆಗಳಿಂದ ಬೇರೆ ಬೇರೆ ವಲಯಗಳಲ್ಲಿ ಪಳಗಿದವರು ಮೂಡಿಬಂದರು. ಯಾವುದೇ ಉದ್ದಿಮೆಗೆ ಬೇಕಾದ, ಹಣಕಾಸು, ಮಾರುಕಟ್ಟೆ ಮತ್ತು ನುರಿತ ಕೆಲಸಗಾರರ ದೊಡ್ಡ ಗುಂಪನ್ನು ಕಟ್ಟಿಕೊಡುವ ಕೆಲಸ ನೆಹರು ಮಾಡಿದ್ದರು, ಅದುವೇ ಇವತ್ತಿನ ಇಂಡಿಯಾದ ಉದ್ದಿಮೆಗಾರಿಕೆ ಬೀಜ ಎನ್ನುತ್ತಾರೆ ಟಿ.ಕೆ. ಅರುಣ್.

ಕನ್ನಡಿಗರ ಉದ್ದಿಮೆಗಾರಿಕೆ ಬೆಳೆಸುವ ಬಗೆ:
ಟಿ. ಕೆ. ಅರುಣ್ ಅವರು ಮುಂದಿಡುವ ವಾದದಂತೆಯೇ, ನೆಹರು ಅವರಿಂದ ಉದ್ದಿಮೆಗಾರಿಕೆ ಇಂಡಿಯಾದಲ್ಲಿ ಚಿಗುರೊಡೆದಿರಬಹುದು. ಆದರೆ, ಕನ್ನಡಿಗರಲ್ಲಿ ಉದ್ದಿಮೆಗಾರಿಕೆ ಚಿಗುರೊಡೆದಿದೆಯೇ ಎಂದು ನೋಡಿದರೆ “ಇಲ್ಲ” ಎಂಬುದೇ ಉತ್ತರವಾಗಿ ಕಣ್ಣಿಗೆ ರಾಚುತ್ತದೆ. ನೆಹರು ಅವರು ಮಾಡಿದ ಕೆಲಸದಲ್ಲಿ, ಕರ‍್ನಾಟಕ ಮತ್ತು ಕನ್ನಡಿಗರು ಮಾರುಕಟ್ಟೆಯಾಗಿ ಉಳಿದರೇ ಹೊರತು, ಉದ್ದಿಮೆದಾರರಾಗಿ ರೂಪುಗೊಳ್ಳಲಿಲ್ಲ. ಗುಜರಾತಿಗಳು, ಮಾರವಾಡಿಗಳು, ಸಿಂದಿಗಳು, ಆಂದ್ರಪ್ರದೇಶದ ಕಮ್ಮಗಳಲ್ಲಿ ಹುಟ್ಟಿದಂತಹ ಉದ್ದಿಮೆಗಾರಿಕೆ ಕನ್ನಡಿಗರಲ್ಲಿ ಮೂಡಲಿಲ್ಲ. ಕರ‍್ನಾಟಕದ ಜನರೇ ಕಟ್ಟಿದ್ದ ಬ್ಯಾಂಕುಗಳು ಉದ್ದಿಮೆಗಾರಿಕೆ ಬೆಳೆಸುವ ನಿಟ್ಟಿನಲ್ಲಿ ತುಸು ಕೆಲಸ ಮಾಡುತ್ತಿದ್ದವೇನೋ, ಆದರೆ ಆ ಬ್ಯಾಂಕುಗಳನ್ನು ನ್ಯಾಶನಲಯ್ಸ್ ಮಾಡಲಾಯಿತು.

ಬಹುಶ, ಕನ್ನಡಿಗರಲ್ಲಿ ಉದ್ದಿಮೆಗಾರಿಕೆ ದೊಡ್ಡ ಮಟ್ಟದಲ್ಲಿ ಬೆಳೆಯಲು ನೆಹರು ಮಾಡಿದಶ್ಟೇ ಕೆಲಸಗಳು ಸಾಕಾಗುವುದಿಲ್ಲ. ಕರ‍್ನಾಟಕದ ಮಾರುಕಟ್ಟೆಯಲ್ಲಿ ಕನ್ನಡಿಗ ಉದ್ದಿಮೆದಾರರಿಗೆ ಬೆಳೆಯಲು ಅವಕಾಶ ಒದಗಿಸಿ, ಕನ್ನಡಿಗ ಉದ್ದಿಮೆದಾರರಿಗೆ ಹಣಕಾಸು ಬಂಡವಾಳ ಒದಗಿಸುವಂತಹ ಸಂಸ್ತೆಗಳನ್ನು ಕಟ್ಟಿ, ಕನ್ನಡಿಗರಿಗೆ ಕೆಲಸದಲ್ಲಿ ಪಳಗಲು ಬೇಕಾದಂತಹ ಸಂಸ್ತೆಗಳನ್ನು ಕಟ್ಟಿ ಕೆಲ ವರುಶಗಳ ಕಾಲ ನಡೆಸಬೇಕಾಗಬಹುದು. ಆದರೆ, ಇಂತಹ ಕೆಲಸಗಳನ್ನು ಮಾಡುವ ಅದಿಕಾರ ಕನ್ನಡಿಗರ ಸರಕಾರಕ್ಕೆ ಇಲ್ಲವಲ್ಲ. ಕರ‍್ನಾಟಕದ ಮಾರುಕಟ್ಟೆಯಲ್ಲಿ ಯಾರ‍್ಯಾರು ಪಾಲ್ಗೊಳ್ಳಬಹುದು ಎಂಬುದನ್ನು ದೆಹಲಿಯಲ್ಲಿ ಕೂತ ಸರಕಾರ ಮಾತ್ರ ನಿರ‍್ದಾರ ಮಾಡಬಲ್ಲುದು ಎಂಬಂತಿರುವಾಗ, ನಮ್ಮಲ್ಲಿ ಉದ್ದಿಮೆಗಾರಿಕೆ ಬೆಳೆಯುವಂತೆ ನೋಡಿಕೊಳ್ಳುವುದು ಕಶ್ಟವೇ.

(ಮಾಹಿತಿ ಸೆಲೆeconomictimes.indiatimes.com)

(ಚಿತ್ರ ಸೆಲೆ: admission.sunyocc)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: