ಹೊಸ ಹೊತ್ತಗೆ – ‘ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ’

– ಬರತ್ ಕುಮಾರ್.

ಹಿನ್ನೆಲೆ
ಹೊಸಗಾಲದಲ್ಲಿ, ಅರಿಮೆಯನ್ನು ತನ್ನಲ್ಲಿ ಅಡಗಿಸಿ ಬರಹವು ಹೊನಲಾಗಿ ಹರಿಯುತ್ತಿದೆ. ಆದರೆ ಇದು ಹೆಚ್ಚಾಗಿ ಇಂಗ್ಲಿಶಿನಲ್ಲಿ ಹರಿಯುತ್ತಿದೆ. ಅಂತಹ ಅರಿಮೆಯ ಹೊನಲನ್ನು ಕನ್ನಡಕ್ಕೆ ತರಲು ಕನ್ನಡದ್ದೇ ಆದ ಪದಗಳ ದೊಡ್ಡ ಕೊರತೆಯೇ ಎದುರಾಗಿದೆ. ಆದ್ದರಿಂದ ಇಂಗ್ಲಿಶಿನಿಂದ ಅರಿಮೆಯನ್ನು ಕನ್ನಡಕ್ಕೆ ತರಲಾಗುತ್ತಿಲ್ಲ. ಅಲ್ಲಲ್ಲಿ ಅರಿಮೆಯನ್ನು ಕನ್ನಡಕ್ಕೆ ತರುವ ಮೊಗಸುಗಳೆಲ್ಲ ಸಂಸ್ಕ್ರುತಕ್ಕೆ ಜೋತುಬಿದ್ದು ಇಂಗ್ಲಿಶಿನ ಬರಹಗಳಿಗಿಂತ ಕನ್ನಡ ಬರಹಗಳು ಸಿಕ್ಕಲಾಗಿ ಮಂದಿಯನ್ನು ಮುಟ್ಟದೇ ಸೋಲುತ್ತಿವೆ.

ಈ ಹಿನ್ನಲೆಯಲ್ಲಿ ಹಿರಿಯ ನುಡಿಯರಿಗರಾದ ಡಾ| ಡಿ.ಎನ್.ಶಂಕರಬಟ್ಟರು ’ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು’ ಎಂಬುದನ್ನು 2010-2011 ರಲ್ಲಿ ಹೊರತಂದರು. ಇದರಲ್ಲಿ ಇಂಗ್ಲಿಶ್ ಪದಗಳಿಗೆ ಹೆಚ್ಚು ಹೆಚ್ಚು ಕನ್ನಡದ್ದೇ ಬೇರಿನ ಪದಗಳನ್ನು ಉಂಟುಮಾಡಿದ್ದರು. ಮುಂದೆ ಈ ಹೊತ್ತಗೆ ಮಂದಿಯೊಲವನ್ನು ಗಳಿಸಿ ಹೆಚ್ಚು ಹೆಚ್ಚು ಮಾರಾಟವಾಯಿತು. ಆದರೆ ನಮಗೆ ಬೇಕಾಗಿರುವ ಪದಗಳ ಎಣಿಕೆ ಮತ್ತು ಹರವನ್ನು ನೋಡಿದರೆ ಪದಕಟ್ಟಣೆ ಎಂಬುದು ಒಬ್ಬರು ಇಲ್ಲವೆ ಇಬ್ಬರು ಮಾಡಬಹುದಾದ ಕೆಲಸವಲ್ಲ ಎಂದು ತಿಳಿಯುತ್ತದೆ. ಬೇರೆ ಬೇರೆ ನೆಲೆಯಲ್ಲಿ ಮತ್ತು ವಲಯಗಳಲ್ಲಿ ಕೆಲಸ ಮಾಡುವ ಕನ್ನಡಿಗರು ಈ ಕೆಲಸದಲ್ಲಿ ಕಯ್ ಜೋಡಿಸಬೇಕಾಗಿದೆ. ಇದನ್ನು ಮನಗಂಡ ಡಿ.ಎನ್.ಶಂಕರಬಟ್ಟರು ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ ಎಂಬ ಹೊತ್ತಗೆಯನ್ನು ಈಗ ಹೊರತಂದಿದ್ದಾರೆ. ಈ ಹೊತ್ತಗೆ ಇಂಗ್ಲಿಶ್ ಪದಕ್ಕೆ ಕನ್ನಡದ್ದೇ ಪದ ಕಟ್ಟಬೇಕೆನ್ನುವವರಿಗೆ ’ದಾರಿದೀವಿಗೆ’ಯಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

ಹೊತ್ತಗೆಯಲ್ಲೇನಿದೆ?

kannadadalle_bookಈ ಹೊತ್ತಗೆಯಲ್ಲಿ ಎರಡು ತುಂಡುಗಳಿವೆ. ಮೊದಲನೇ ತುಂಡಿನಲ್ಲಿ ಕನ್ನಡದ ಪದಕಟ್ಟಣೆಯಲ್ಲಿ ಎಂತಹ ಒಲವುಗಳಿವೆ ಎಂಬುದನ್ನು ಹೆಸರುಪದ, ಎಸಕಪದ ಮತ್ತು ಪರಿಚೆಪದಗಳ ಮೂಲಕ ವಿವರಿಸಲಾಗಿದೆ. ಎರಡನೇ ತುಂಡಿನಲ್ಲಿ ಈ ಒಲವುಗಳನ್ನು ಬಳಸಿಕೊಂಡು ಇಂಗ್ಲಿಶ್ ಪದಗಳಿಗೆ ಹೇಗೆ ಕನ್ನಡದ್ದೇ ಪದಗಳನ್ನು ಕಟ್ಟಬಹುದು ಎಂದು ತೋರಿಸಲಾಗಿದೆ.

ಮುಕ್ಯವಾಗಿ ಪದಕಟ್ಟಣೆಯಲ್ಲಿ ಎರಡು ಬಗೆಯವು ಎಂದು ಬರಹಗಾರರು ತೋರಿಸಿಕೊಟ್ಟಿದ್ದಾರೆ. ಪದಗಳಿಗೆ ಒಟ್ಟುಗಳನ್ನು ಸೇರಿಸಿ ಹೊಸ ಪದ ಉಂಟುಮಾಡುವುದು ಒಂದು ಬಗೆಯಾದರೆ, ಕನ್ನಡದ ಎರಡು ಪದಗಳನ್ನು ಒಟ್ಟು ಸೇರಿಸಿ ಜೋಡುಪದ/ಕೂಡುಪದಗಳನ್ನು ಉಂಟುಮಾಡುವುದು ಇನ್ನೊಂದು ಬಗೆ. ಇಂತಹ ಇನ್ನು ಹಲವು ಕಂಡುಕೊಳ್ಳುವಿಕೆಗಳು ಈ ಹೊತ್ತಗೆಯಲ್ಲಿವೆ.

ಇದಲ್ಲದೇ, ಈಗಾಗಲೇ ಬಳಕೆಯಲ್ಲಿರುವ ಕನ್ನಡದ್ದೇ ಪದಗಳ ಹುರುಳಿನ ಹರವನ್ನು ಹೆಚ್ಚಿಸಬೇಕೆಂದು ಬರಹಗಾರರು ಬಯಸುತ್ತಾರೆ. ನಮ್ಮ ಅರಿಮೆಯ ಬರಹಗಾರರು ದಿಟಕ್ಕೂ ಗಮನಿಸಬೇಕಾದ ವಿಶಯವಿದು ಏಕೆಂದರೆ ಕನ್ನಡ ನುಡಿಗೆ ಬಲ ಬರಬೇಕೆಂದರೆ ಕನ್ನಡ ಪದಗಳಿಗೆ ಬಲ ಬರಬೇಕು. ಕನ್ನಡ ಪದಗಳಿಗೆ ಬಲ ಬರಬೇಕೆಂದರೆ ಕನ್ನಡದ್ದೇ ಆದ ಪದಗಳ ಹುರುಳಿನ ಹರವು ಹೆಚ್ಚಬೇಕು. ಇದು ಕನ್ನಡದ ಬರಹಗಾರರ ಕಯ್ಯಲ್ಲೇ ಇದೆ.

ಇನ್ನು ಇಂಗ್ಲಿಶ್ ನುಡಿಯ ಹಲವು ಮುನ್ನೊಟ್ಟುಗಳು, ಹಿನ್ನೊಟ್ಟುಗಳು, ಹೆಸರುಪದಗಳು, ಎಸಕಪದಗಳು, ಪರಿಚೆಪದಗಳು, ಕೂಡುಪದಗಳು – ಇವುಗಳನ್ನು ಹಲವು ಎತ್ತುಗೆಗಳ ಮೂಲಕ ಕನ್ನಡ ಪದಕಟ್ಟಣೆಯನ್ನು ವಿವರಿಸಿರುವುದರಿಂದ ಓದುಗರಿಗೆ ಚೆನ್ನಾಗಿ ಮನದಟ್ಟಾಗುತ್ತದೆ. ಈ ಹೊತ್ತಗೆಯಲ್ಲಿರುವ ವಿಶಯಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ನುಡಿಯರಿಮೆಯ ಅರಿಮೆಪದಗಳ ಪರಿಚಯ ನೆರವಾಗಬಲ್ಲುದು.

ತೀರಮೆ
ಕನ್ನಡದಲ್ಲೇ ಪದಕಟ್ಟಣೆಯ ಬಗ್ಗೆ ಈವರೆಗೆ ಇಂತಹ ಹೊತ್ತಗೆ ಓದುಗರಿಗೆ ಸಿಕ್ಕಿರಲಿಲ್ಲ. ಕನ್ನಡದಲ್ಲೇ ಪದ ಕಟ್ಟಬೇಕೆನ್ನುವವರು ಯಾವ ವಲಯದಲ್ಲೇ ಕೆಲಸ ಮಾಡುತ್ತಿರಲಿ ಈ ಹೊತ್ತಗೆ ಅವರಿಗೆ ನೆರವಾಗಲಿದೆ. ಬೇರೆ ಬೇರೆ ಅರಿಮೆಯ ನೆಲೆಗಳಲ್ಲಿ ಕೆಲಸ ಮಾಡುತ್ತಿರುವವರೇ ಈ ಪದಗಳನ್ನು ಚೆನ್ನಾಗಿ ಕಟ್ಟಲು ಸಾದ್ಯ ಏಕೆಂದರೆ ಪದ ಕಟ್ಟಲು ಆ ವಿಶಯದ ಆಳವಾದ ತಿಳಿವು ಬೇಕಾಗುತ್ತದೆ. ವಿಶಯದ ಬಗೆಗಿನ ತಿಳಿವಿದ್ದರೆ, ಈ ಹೊತ್ತಗೆಯಲ್ಲಿ ಕೊಟ್ಟಿರುವ ಪದಕಟ್ಟಣೆಯ ಚಳಕಗಳನ್ನು ಬಳಸಿಕೊಂಡು ಕನ್ನಡದ್ದೇ ಆದ ಪದಗಳನ್ನು ಕಟ್ಟಲು ಕನ್ನಡಿಗರು ಇನ್ನು ಮುಂದೆ ಪರದಾಡಬೇಕಾಗಿಲ್ಲ.

(ಈ ಹೊತ್ತಗೆಯು ನವ ಕರ‍್ನಾಟಕ ಪ್ರಕಾಶನದ ಮಳಿಗೆಗಳು ಮತ್ತು ಇತರ ಹೊತ್ತಗೆ ಅಂಗಡಿಗಳಲ್ಲಿ ದೊರೆಯುತ್ತದೆ)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. bharata kumara sariyaagi heeliddaare. sanskrutake jootu biddu inglish barahagaliginta kannada sikkaalaagi baruttide. ntn nalli iiga science and technology barahgalu kannaddalli baralu shuru aagive. avarige tilisabeeku

  1. 19/08/2014

    […] ಇದನ್ನು ಮನಗಂಡ ಶಂಕರಬಟ್ಟರು ಈಗ ’ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ’ ಎಂಬ ಹೊತ್ತಗೆಯನ್ನು […]

ಅನಿಸಿಕೆ ಬರೆಯಿರಿ:

%d bloggers like this: