ಏಳಿಗೆ ಮತ್ತು ಏಳಿಗೆಯ ಮರೀಚಿಕೆ!

ರೋಹಿತ್ ರಾವ್

desert-mirage-577x384

ಏಳಿಗೆ ಎಂದು ಒಂದು ಇದೆ. ಮತ್ತೊಂದು ಏಳಿಗೆಯ ಮರೀಚಿಕೆ! ಮಂದಿ ಏಳಿಗೆ ಹೊಂದಿದ್ದಾರೋ ಅತವಾ ಏಳಿಗೆಯ ಮರೀಚಿಕೆಯನ್ನೇ ಏಳಿಗೆ ಎಂದು ನಂಬಿ ಬದುಕುತ್ತಿದ್ದಾರೋ ಎಂಬುದು ಬಹಳ ಮುಕ್ಯವಾದ ಕೇಳ್ವಿ. ಈ ಕೇಳ್ವಿಗೆ ಹೇಳ್ವಿ ಪಡೆಯದೇ ನಾಡು ಕಟ್ಟಿಕೊಂಡು ಬದುಕು ಮುಂದುವರೆಸಿದಾಗ ಹುಟ್ಟುವ ಗೊಂದಲಗಳಲ್ಲೇ ನಾಡು ಒಡೆಯುವ ಚಿಂತನೆಗಳು ಹೊರಹೊಮ್ಮುವವು. ತಮ್ಮದಲ್ಲದ ನುಡಿಗಳ ಬೆನ್ನು ಹತ್ತಿ ಅದರಿಂದ ಏಳಿಗೆ ಪಡೆಯುವೆವು ಎಂಬುದು ಈ ಏಳಿಗೆ-ಮರೀಚಿಕೆಯ ಒಂದು ಉದಾಹರಣೆ.

ಏಳಿಗೆಯ ಮರೀಚಿಕೆಗಳಿಗೆ ಗಡಿಯುಂಟು, ಆದ್ದರಿಂದಲೇ ಈ ಮರೀಚಿಕೆ ಒಂದು ನುಡಿಸಮುದಾಯದ ನಡುವೆಯೇ ಜನರನ್ನು ಹಾಗೂ ಜಾಗಗಳನ್ನು ಏಳಿಗೆಹೊಂದಿದ ಮತ್ತು ಏಳಿಗೆಹೊಂದಿಲ್ಲದ ಎಂಬ ಒಡಕಿದ್ದಂತೆ ಮೂಡಿಸುತ್ತದೆ. ಅದೇ ನಿಜವಾದ ಏಳಿಗೆಗೆ ಯಾವುದೇ ಬಗೆಯ ಗಡಿಗಳಿಲ್ಲ. ಒಂದು ನುಡಿಸಮುದಾಯವು ತಮ್ಮ ಏಳಿಗೆಯನ್ನು ತಾವು ಆಡುವ ನುಡಿಯ ಬುಡದ ಮೇಲೆ ಕಂಡುಕೊಂಡರೆ ಸಾಕು, ಆ ನುಡಿಯನ್ನಾಡುವ ಮಂದಿ ಬುವಿಯಲ್ಲಿ ಎಲ್ಲೇ ಇರಲಿ, ಅವರ ಏಳಿಗೆಯ ದಾರಿಯನ್ನು ಆ ನುಡಿಯೇ ತೋರಿಸಿಕೊಡಬಲ್ಲದು. ಹೀಗಿರುವಾಗ ಏಳಿಗೆಹೊಂದಿದ ಮತ್ತು ಏಳಿಗೆಹೊಂದಿರದ ಎಂದು ಗುಂಪುಗಾರಿಕೆಯ ಸನ್ನಿವೇಶವೇ ಹುಟ್ಟುವುದಿಲ್ಲ. ನಿಜವಾದ ಏಳಿಗೆ ಹೊಂದಿದ ನುಡಿಸಮುದಾಯಗಳು ಒಡಕನ್ನು ಕಾಣುವ ತೆರಹುಗಳೇ ಇಲ್ಲ. ರಾಜಕೀಯವಾಗಿ ಎದುರಾಗಬಲ್ಲ ತೊಡಕುಗಳನ್ನೂ ಇದೇ ಏಳಿಗೆಯ ಬುನಾದಿ ಹೋಗಲಾಡಿಸಿಕೊಳ್ಳಲು ನೆರವಾಗಬಲ್ಲದು. ಬಾರತ ದೇಶದಲ್ಲಿ ನಾಡುಗಳ ಏಳಿಗೆಗೆ ಎದುರಾಗಬಲ್ಲ ರಾಜಕೀಯ ಅಡ್ಡಕಲ್ಲುಗಳ ಬಗ್ಗೆ ಇನ್ನೊಮ್ಮೆ ಮಾತನಾಡಬಹುದು.

ಇನ್ನು ತಮ್ಮ ನುಡಿಯ ಮೂಲಕ ಏಳಿಗೆಯನ್ನು ಇನ್ನೂ ಹೊಂದಿರದ ಜನರನ್ನು ಉದಾಹರಣೆಯಾಗಿ ಕಂಡರೆ ಆ ಸಮುದಾಯದ ಜನರು ದೂರವಾಗುವ/ಬೇರೆಯಾಗುವ ಕೆಲಸಕ್ಕೆ ಕೈ ಹಾಕುವುದು ಒಳ್ಳೆಯದೇ ಅಲ್ಲ. ಒಂದೇ ನುಡಿಯ ಜನರು ಏಳಿಗೆಯ ಕಾರಣವೊಡ್ಡಿ ಬೇರೆಯಾಗುವುದು ಮೂರ‍್ಕತನವೇ ಸರಿ. ಏಕೆಂದರೆ ಹೆಚ್ಚು ಜನರು ಸೇರಿ, ಹೆಚ್ಚು ಅನುಬವಗಳನ್ನು, ಹೆಚ್ಚು ಅನಿಸಿಕೆಗಳನ್ನು, ಹೆಚ್ಚು ಹೊಳಹುಗಳನ್ನು (ideas) ಒಗ್ಗೂಡಿಸಿದಾಗಲೇ ಒಂದು ನುಡಿಯ ಏಳಿಗೆಯಾಗುವುದು, ಆ ನುಡಿಸಮುದಾಯದ ಏಳಿಗೆಯೂ ಆಗುವುದು.

ನುಡಿಸಮುದಾಯಗಳ ಏಳಿಗೆಯ ಮರ‍್ಮ ಈ ರೀತಿ ಇರುವಾಗ, ನುಡಿಯಾದಾರದ ಮೇಲೆ ಕಟ್ಟಲಾಗಿರುವ ಬಾರತ ದೇಶದ ನಾಡುಗಳು (ಕನ್ನಡ ನಾಡು, ತಮಿಳು ನಾಡು, ತೆಲುಗು ನಾಡು ಮುಂತಾದವು…) ಇಂದು ಯಾವ ಆಕಾರ ಮತ್ತು ಗಾತ್ರವಾಗಿ ನಿಂತಿವೆಯೋ ಅದಕ್ಕೆ ಕಾರಣ ಆಯಾ ನಾಡುಗಳ ಜನರು ಆಡುತ್ತಿರುವ ನುಡಿಯಶ್ಟೇ ಆಗಿದೆ ಹೊರತು, ಆಯಾ ನಾಡಿನ ಜನರು ತಮ್ಮ ಏಳಿಗೆಗೆ ಬಳಸುತ್ತಿರುವ ನುಡಿಯಾಗಿಲ್ಲ. ಯಾವತ್ತು ಬಾರತದ ನಾಡುಗಳ ರೂಪು-ರೇಶೆಗಳ ಆದಾರ ಆ ನಾಡಿನ ಜನರು ತಮ್ಮ ಏಳಿಗೆಗೆ ಬಳಸುವ ನುಡಿಯಾಗುತ್ತದೆಯೋ, ಯಾವತ್ತು ಆ ನುಡಿ ಆ ಜನರ ಸ್ವಂತ ನುಡಿಯೇ ಆಗುತ್ತದೆಯೋ, ಅವತ್ತು ಯಾರೋ ಕೆಲವರ ಬೇರೆಯಾಗುವ ಕೂಗುಗಳು ನಿಜವಾಗಿಯೂ ಆ ನಾಡಿನ ಜನರನ್ನು ಬೇರೆ ಮಾಡಲಾಗದು.

ಮೇಲೆ ಕಂಡಂತಹ ಏಳಿಗೆಯ ಮರೀಚಿಕೆಯಿಂದ ಬಳಲುತ್ತಿರುವ ಜನ ಯಾವ ನಾಡಿನಲ್ಲಿರುತ್ತಾರೋ ಆ ನಾಡಿನಲ್ಲಿ ಕೆಲವರು ಈ ರೀತಿ ತಮ್ಮ ಏಳಿಗೆ ತಾವೇ ಪಡೆದುಕೊಳ್ಳುವ ಕೂಗನ್ನು ಏರಿಸಿ, ಬೇರೆಯಾಗುವ ಮಾತನ್ನಾಡುತ್ತಾರೆ. ಆದರೆ ಏಳಿಗೆಯ ಮರ‍್ಮವನ್ನು ಕಾಣದ ಇವರು ನಿಜವಾದ ಏಳಿಗೆಯನ್ನು ಕಾಣುವಂತಾಗುತ್ತಾರಾ? ನಾಡಿನ ಏಳಿಗೆಯಲ್ಲಿ ನುಡಿಯ ಪಾತ್ರವನ್ನು ಅರಿಯದೇ ಹೋದರೆ ಈ ಕೇಳ್ವಿ ಉಳಿದೇ ಹೋಗುತ್ತದೆ, ಜನರ ಮನಸ್ಸುಗಳಲ್ಲಿ ಏಳಿಗೆಯ ಮರೀಚಿಕೆಯೇ ಏಳಿಗೆಯಾಗಿ ಉಳಿದಿಕೊಂಡು ಹೋಗುತ್ತದೆ. ಒಡಕಿನ ಮಾತುಗಳೇ ಗೆಲ್ಲುವಂತಾಗುತ್ತದೆ ಹೊರತು ಒಡಕಿನ ಸೂತ್ರವಾಗಿದ್ದ ಏಳಿಗೆಯಂತೂ ಎಂದೂ ನಮ್ಮದಾಗುವುದಿಲ್ಲ.

(ಚಿತ್ರ ಸೆಲೆ: cles.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: