ಗ್ಲುಟೆನ್ ಗುಮ್ಮ
ಇತ್ತೀಚಿನ ದಿನಗಳಲ್ಲಿ ಗ್ಲುಟೆನ್ ಇಲ್ಲದ ತಿನಿಸುಗಳ ಬಗೆಗಿನ ಚರ‍್ಚೆಗಳು ಕೇಳಿಬರುತ್ತಿವೆ. ಇಂತಹ ಚರ‍್ಚೆಗಳು ನಮ್ಮ ಕಿವಿಯ ಮೇಲೆ ಬಿದ್ದಾಗ, ನಮ್ಮಲ್ಲಿ ಮೂಡುವ ಕೇಳ್ವಿಗಳೆಂದರೆ. ಗ್ಲುಟೆನ್ ಎಂದರೆ ಏನು? ಗ್ಲುಟೆನ್ ಇರುವ ತಿನಿಸನ್ನು ತಿನ್ನುವುದರಿಂದ ಆಗುವ ತೊಡಕುಗಳಾದರೂ ಏನು?
ಗ್ಲುಟೆನ್ ಎಂದರೆ ಏನು?
ಗೋದಿ ಹಾಗು ಗೋದಿ-ಜಾತಿಗೆ ಸೇರಿದ ಜವೆ (barley) ಮುಂತಾದ ಕಾಳುಗಳಲ್ಲಿ ಕಂಡುಬರುವ ‘ಗ್ಲುಟೆನ್’ ಅಂಶವು ಗ್ಲಿಯಾಡಿನ್ (gliadin) ಮತ್ತು ಗ್ಲುಟೆನಿನ್ (glutenin) ಎಂಬ ಮುನ್ನುಗಳಿಂದ (protein) ಮಾಡಲ್ಪಟ್ಟಿರುತ್ತದೆ (ತಿಟ್ಟ 1). ಕಣಕಗಳಲ್ಲಿ (dough) ಗ್ಲುಟೆನ್ ಇದ್ದರೆ, ಅದು ಕಣಕಕ್ಕೆ ಪುಟಿಯುವಿಕೆ (elasticity) ಹಾಗು ಜಗಿಯುವಿಕೆಯ (chewy) ಗುಣವನ್ನು ಕೊಡುತ್ತದೆ. ಗ್ಲುಟೆನ್ ಇರುವ ಕಣಕವನ್ನು ಬೇಯಿಸಿದಾಗ, ಗ್ಲುಟೆನ್ ಅಂಶವು ಕಣಕವನ್ನು ಉಬ್ಬಿಸುವಲ್ಲಿ ನೆರವಾಗುತ್ತದೆ. ಅಂದುಗೆಗಳನ್ನು (cosmetics) ಮಾಡುವಲ್ಲಿಯೂ ಗ್ಲುಟೆನ್ ಬಳಕೆಯಾಗುತ್ತದೆ. ಒಟ್ಟಾರೆ ಹೇಳುವುದಾದರೆ, ನಮ್ಮ ಮಯ್ಗೆ ಬೇಕಾದ ಆರಯ್ವಗಳಲ್ಲಿ (nutrients) ಗ್ಲುಟೆನ್ ಮುನ್ನು (gluten protein) ಕೂಡ ಒಂದು.
ಇಂತಹ ಒಳ್ಳೆಯ ಗುಣಗಳನ್ನು ಹೊಂದಿರುವ ಹಾಗು ಹಲ ಬಳಕೆಯನ್ನು ಕಾಣುತ್ತಿರುವ ಗ್ಲುಟೆನ್ನಿಂದ ಆಗುವ ತೊಡಕಾದರು ಏನು?
ಕೆಲವು ಮಂದಿ ಗ್ಲುಟೆನ್ ಇರುವ ತಿನಿಸುಗಳನ್ನು ತಿಂದಾಗ, ಅವರಲ್ಲಿ ಸೀಲಿಯಾಕ್ ಬೇನೆಯು (celiac disease) ಉಂಟಾಗುತ್ತದೆ. ಸೀಲಿಯಾಕ್ ಬೇನೆಯು ಅರಗೇರ‍್ಪಾಟನ್ನು ಬಾದಿಸುವ ತನ್ಮರೆಗಾಪಿನ (autoimmune) ಬೇನೆ.
ತನ್ಮರೆಗಾಪು ಎಂದರೇನು?
ಹೊರಗಿನ ಕೆಡುಕುಗಳು ನಮ್ಮ ಮಯ್ಯಲ್ಲಿ ತೊಡಕುಂಟುಮಾಡದಂತೆ ಕಾಯುವ ಕೆಲಸವನ್ನು ಕಾಪೇರ‍್ಪಾಟು (immune system) ಮಾಡುತ್ತದೆ. ಒಂದು ಉಸಿರುಗ (organism) ಅತವ ಒಬ್ಬ ಮನುಶ್ಯನ ಕಾಪೇರ‍್ಪಾಟು, ತನ್ನ ಮಯ್ಬಾಗವನ್ನು ಇಲ್ಲವೆ ಮಯ್ಬಾಗದ ಅಂಶಗಳನ್ನು ಹೊರಗಿನ ಅಂಶವೆಂದು ತಪ್ಪಾಗಿ ಗುರುತಿಸುವ ಹಾಗು ಆ ಬಾಗಗಳನ್ನು ಮುದಿಪುಗೆಡಿಸಲು (damage) ದಾಳಿಮಾಡುವ ಹಮ್ಮುಗೆಯನ್ನು ತನ್ಮರೆಗಾಪು (autoimmunity) ಎಂದು ಹೇಳಬಹುದು.
ಗ್ಲುಟೆನ್ ಇರುವ ತಿನಿಸನ್ನು ತಿಂದಾದ, ಸೀಲಿಯಾಕ್ ಬೇನೆಗೆ ತುತ್ತಾಗುವವರ ಕಾಪೇರ‍್ಪಾಟು, ಗ್ಲುಟೆನ್ ಅಂಶವನ್ನು ಮಯ್ಗೆ ಕೇಡುಂಟು ಮಾಡುವ ಹೊರಗಿನ ಕೆಡುಕೆಂದು ತಪ್ಪಾಗಿ ತಿಳಿದು, ಅವುಗಳ ಎದುರಾಗಿ ಎದುರುಕಗಳನ್ನು (antibody) ಮಾಡುತ್ತವೆ. ಈ ಎದುರುಕಗಳು ಸಣ್ಣ ಕರುಳಿನ ಪಸೆಯ (lining) ಮೇಲೆ ಅಂಟಿಕೊಂಡ ಗ್ಲುಟೆನ್ ಜೊತೆಗೆ ಪಸೆಯ ಮೇಲೂ ದಾಳಿ ಮಾಡುತ್ತವೆ, ಅರಗಿದ ಊಟದಲ್ಲಿ ಇರುವ ಆರಯ್ವಗಳನ್ನು ಹೀರಿಕೊಳ್ಳಲೆಂದು, ಸಣ್ಣ ಕರುಳಿನ ಪಸೆಗಳ ಮೇಲೆ ಬೆರಳುಗಳ ಆಕಾರದ ಎಳೆಗೊಂಡೆಗಳು (villi) ಇರುತ್ತವೆ. ಎದುರುಕಗಳ ದಾಳಿಯಿಂದ, ಸಣ್ಣ ಕರುಳಿನಲ್ಲಿ ಉರಿಯೂತವು (inflammation) ಉಂಟಾಗಿ, ಎಳೆಗೊಂಡೆಗಳು ಮುದಿಪುಗೆಡುತ್ತವೆ (damage) (ತಿಟ್ಟ 2). ಕೆಟ್ಟಿರುವ ಎಳೆಗೊಂಡೆಗಳಿಂದ ಆರಯ್ವಗಳನ್ನು ಹೀರಿಕೊಳ್ಳಲಾಗದ ಕಾರಣ, ಸೀಲಿಯಾಕ್ ಬೇನೆಯಿಂದ ಬಳಲುವ ಮನುಶ್ಯ ಎಶ್ಟು ತಿಂದರೂ ಆರಯ್ವಗಳ ಕೊರತೆಯನ್ನು ಎದುರಿಸುತ್ತಾನೆ.
ಗ್ಲುಟೆನ್ ಒಂದಶ್ಟು ಮಂದಿಯಲ್ಲಶ್ಟೆ ಸೀಲಿಯಾಕ್ ಬೇನೆಯನ್ನು ಉಂಟು ಮಾಡಲು ಕಾರಣವೇನು?
ಒಂದು ಅಂಶವು ತನ್ನ ಮಯ್ಬಾಗಕ್ಕೆ ಸೇರಿದ್ದು ಇಲ್ಲವೇ ತನ್ನ ಮಯ್ಗೆ ಕೇಡುಂಟು ಮಾಡುವ ಹೊರಗಿನ ಕೆಡುಕೆಂದು ಗುರುತಿಸಲು ಕಾಪೇರ‍್ಪಾಟಿನ ಅಡಿಯಲ್ಲಿ ಒಗ್ಗದಿಕ-ಗುರುತಿಸುವ ಪಡೆಕದೇರ‍್ಪಾಟು (antigen-presenting receptor system) ಕೆಲಸ ಮಾಡುತ್ತದೆ. ಈ ಏರ‍್ಪಾಟಿನ ಬಾಗಗಳಲ್ಲೊಂದು HLD-DQ ಮುನ್ನು. ಈ ಮುನ್ನು ಏಳು ಬಗೆಗರುತ್ತವೆ, ಅವೆಂದರೆ HLA-DQ2, DQ4, DQ5,DQ6, DQ7, DQ8 ಮತ್ತು DQ9. ಹದುಳದಿಂದಿರುವ (healthy) ಒಬ್ಬ ಮನುಶ್ಯ, ಈ ಏಳರಲ್ಲಿ ಒಂದು ಬಗೆಯನ್ನಶ್ಟೇ ಹೊಂದಿರುತ್ತಾನೆ ಆದರೆ ಸೀಲಿಯಾಕ್ ಬೇನೆಗೆ ತುತ್ತಾಗುವ ಹೆಚ್ಚಿನವರಲ್ಲಿ (>95%), DQ2 ಇಲ್ಲವೇ DQ8 ಬಗಗಳಿರುತ್ತವೆ.
ಈ ಮುನ್ನುಗಳನ್ನು ಮಾಡಲು ಇರಬೇಕಾದ ಪೀಳಿಗಳನ್ನು ಒಂದು ಪೀಳಿಗೆಯಿಂದ (ಅಪ್ಪ/ಅಮ್ಮನಿಂದ) ಮುಂದಿನ ಪೀಳಿಗೆ (ಮಕ್ಕಳಿಗೆ) ಮರುಪಡೆಯಬಹುದಾಗಿದೆ (inherit). ಉಳಿದ ಪಡೆಕಗಳಿಗೆ ಹೋಲಿಸಿದರೆ, DQ2/DQ8 ಮುನ್ನುಗಳನ್ನು ಹೊಂದಿರುವ ಪಡೆಕಗಳು (antigen-presenting receptors), ಗ್ಲುಟೆನ್ ಅಂಶದ ಬಾಗವಾದ ಗ್ಲಿಯಾಡಿನ್ ಮುನ್ನಿಗೆ ಬಿಗಿಯಾಗೆ ಅಂಟಿಕೊಳ್ಳುತ್ತವೆ.
ಈ ಬಗೆಯ ಅಂಟಿಕೊಳ್ಳುವಿಕೆ, ‘T’ ಬಗೆಯ ಹಾಲ್ರಸ ಕಣಗಳನ್ನು (T-lymphocyte) ಕೆರಳಿಸುವ ಮೂಲಕ ತನ್ಮರೆಗಾಪಿನ ಹಮ್ಮುಗೆಯನ್ನು ಉಂಟುಮಾಡುತ್ತದೆ. ಕೆರಳಿದ T-ಹಾಲ್ರಸ ಕಣಗಳು ಹಾಗು ಗ್ಲುಟೆಗೆ ಎದುರಾರಿ ಮಾಡಲ್ಪಟ್ಟ ಎದುರುಕಗಳು ಸಣ್ಣ ಕರುಳಿನ ಎಳೆಗೊಂಡೆಗಳನ್ನು ಹಾಳುಮಾಡುತ್ತವೆ.
ಸ್ತಿತಿ-ಗತಿ:
ಜಗತ್ತಿನೆಲ್ಲೆಡೆಯ ಅಂಕಿ-ಅಂಶಗಳ ಪ್ರಕಾರ 100 ರಿಂದ 300 ಮಂದಿಯಲ್ಲಿ ಒಬ್ಬರಂತೆ ಈ ಬೇನೆಯ ಕಾಡುತ್ತದೆ. ಮುಂದುವರೆದ ನಾಡುಗಳಲ್ಲಿ, ತಲಾ 33 ಮುಂದಿಯಲ್ಲಿ ಒಬ್ಬರಂತೆ ಸೀಲಿಯಾಕ್ ಬೇನೆಯು ಬಾದಿಸುತ್ತದೆ. ಇತ್ತೀಚೀನ ದಿನಗಳವರೆಗೂ, ಸೀಲಿಯಾಕ್ ಬೇನೆಯು ಬಾರತಿಯರನ್ನು ಕಾಡುವುದಿಲ್ಲವೆಂದೇ ತಿಳಿಯಲಾಗಿತ್ತು. ಸದ್ಯದ ವರದಿಗಳಂತೆ, ಬಾರತೀಯರಲ್ಲಿಯೂ, ಅದರಲ್ಲೂ ಬಡಗ-ಬಾರತೀಯರಲ್ಲಿ (north Indians) ಈ ಬೇನೆಯನ್ನು ಗುರುತಿಸಲಾಗಿದೆ.
ಬೇನೆಯ ಕುರುಹುಗಳು ಹಾಗು ತೊಡಕುಗಳು:
1) ಅರಗೇರ‍್ಪಾಟಿನ ತೊಂದರೆಗಳು: ಬಾಯಿ ಹುಣ್ಣು, ಹೊಟ್ಟೆ ಊದಿಕೊಳ್ಳುವುದು, ಹೊಟ್ಟೆನೋವು, ಬಿಳುಚಿದ ಕಕ್ಕ ಹಾಗು ಮಯ್ ತೂಕ ಇಳಿಮುಕವಾಗುವುದನ್ನು ಗುರುತಿಸಬಹುದಾಗಿದೆ. ಹೆಚ್ಚು ದಿನಗಳವರೆಗೆ ಸೀಲಿಯಾಕ್ ಬೇನೆಯಿಂದ ಬಳಲುತ್ತಿದ್ದರೆ, ಕರುಳಿನ ಏಡಿಹುಣ್ಣುಗಳಾಗುವ (cancer) ಸಾದ್ಯತೆಗಳೂ ಉಂಟು.
2) ತೊಗಲಿನ ಮೇಲೆ ಬಿರುಸಾದ ಗಂದೆಗಳು ಮೂಡಬಹುದು.
3) ಕಬ್ಬಿಣದ ಕೊರತೆಯಿಂದಾಗಿ ಉಂಟಾಗುವ ಕೆನೆಕಣಕೊರತೆ (anemia) ಉಂಟಾಗುತ್ತದೆ.
4) ಹುರಿಕಟ್ಟಿನ ತೊಂದರೆ: ಮಯ್ ಕಂಡ, ಕೀಲು ಹಾಗು ಎಲುಬುಗಳ ನೋವುಗಳು ಕಾಣಿಸಿಕೊಳ್ಳುತ್ತವೆ. ಕ್ಯಾಲ್ಶಿಯಮ್ ಹಾಗು ‘D’ ಬಳುಳುಪುಗಳ (vitamin D) ಕೊರತೆಯು ಜೊಳ್ಳೆಲುಬನ್ನು (osteoporosis) ಉಂಟುಮಾಡುತ್ತದೆ. ಹದುಳದ ಮೂಳೆಗಳಿಗೆ ಹೋಲಿಸಿದರೆ ಜೊಳ್ಳೆಲುಬುಗಳು ಮೂಳೆಮುರಿತ್ತಕ್ಕೆ (bone fracture) ಈಡಾಗುವ ಸಾದ್ಯತೆ ಹೆಚ್ಚು.
5) ಮಕ್ಕಳಲ್ಲಿ ಕಾಣಿಸಿಕೊಂಡರೆ, ಆರಯ್ವಗಳ ಕೊರತೆಯಿಂದಾಗಿ ಅವರ ಮಯ್ ಬೆಳವಣಿಗೆಯ ಗತಿ ಕುಗ್ಗುತ್ತದೆ.
6) ನರದೇರ‍್ಪಾಟಿನ ತೊಂದರೆಗಳು: ಸೆಳವು (seizures) ಹಾಗು ಕ್ಯಾಲ್ಸಿಯಮ್ ಕೊರತೆಯಿಂದ ಉಂಟಾಗುವ ನರಗಳ ನಲುಗುವಿಕೆ ಕಾಲುಗಳಲ್ಲಿ ಜುಮ್ಮಿಕ್ಕುವಿಕೆಯನ್ನು (tingling) ಉಂಟುಮಾಡುತ್ತದೆ.
7) ಹೆಂಗಸರಲ್ಲಿ ಈ ಬೇನೆಯು ಕಾಣಿಸಿಕೊಂಡರೆ, ಮುಟ್ಟಿನ ಸುತ್ತುಗಳಲ್ಲಿ (menstrual cycle) ಏರುಪೇರು, ಬಂಜೆತನ ಹಾಗು ಬಸಿರಳಿತಗಳು (miscarriage) ಉಂಟಾಗಬಹುದು.
ಕುತ್ತುದೊರೆತ (diagnosis):
1) ಬೇನೆಯ ಕುರುಹುಗಳನ್ನು ಗಮನಿಸುವುದು.
2) ಮಯ್ ಒರೆತ (physical examination).
3) ನೆತ್ತರು ಒರೆತ:
- ಗ್ಲುಟೆನ್ ಎದುರಾಗಿ ಕಾರ‍್ಪೆರ‍್ಪಾಟು ಮಾಡಿರಬಹುದಾದ ಎದುರುಕಗಳ ಇರುವಿಕೆಗೆ ನೆತ್ತರನ್ನು ಒರೆಹಚ್ಚುವುದು.
- ಆರಯ್ವಗಳ ಕೊರತೆಯನ್ನು ನಿಕ್ಕಿ ಮಾಡಿಕೊಳ್ಳಲು (confirm), ನೆತ್ತರಿನಲ್ಲಿ ಕಬ್ಬಿಣ ಹಾಗು ಇತರ ಆರಯ್ವಗಳ ಮಟ್ಟವನ್ನು ಅಳೆಯುವುದು.
4) ಹೇಸಿಗೆಯೊರೆತ (stool test): ಸೀಲಿಯಾಕ್ ಬೇನೆಯ ಮನುಶ್ಯರ ಸಣ್ಣ ಕರುಳು ಕೊಬ್ಬಿನ ಅಂಶವನ್ನು ಹೀರಿಕೊಳ್ಳಲಾಗದು. ಈ ಕೊಬ್ಬಿನ ಅಂಶವು ಹೇಸಿಗೆ ಮೂಲಕ ಮಯ್ಯಿಂದ ಹೊರ ಹೋಗುತ್ತದೆ. ಹೇಸಿಗೆಯನ್ನು ಕೊಬ್ಬಿನ ಅಂಶಕ್ಕೆ ಒರೆಹಚ್ಚುವುದರಿಂದ, ಬೇನೆಯನ್ನು ಗುರುತಿಸುವಲ್ಲಿ ನೆರವಾಗುತ್ತದೆ.
5) ಬಾಳುಂಡಿಗೆ (biopsy) ಒರೆತ: ಒಳತೋರುಗದ (endoscope) ನೆರವಿನಿಂದ, ಸಣ್ಣ ಕರುಳಿನ ಎಳೆಗೊಂಡೆಗಳ ಬಾಳುಂಡಿಗೆಗಳನ್ನು ಹೊರತೆಗೆದು, ಅವುಗಲ್ಲಿ ಸೀಲಿಯಾಕ್ ಬೇನೆಯಿಂದ ಆಗಿರಬಹುದಾದ ಉರಿಯೂತ ಹಾಗು ಮುದಿಪಿನ ಕುರುಹುಗಳನ್ನು ಸೀರುತೋರ‍್ಪಿನ (microscope) ನೆರವಿನಿಂದ ಹುಡುಕುವುದು.
ಮಾಂಜುಗೆ (treatment):
ಸೀಲಿಯಾಕ್ ಬೇನೆಯ ಮುಕ್ಯ ಆರಯ್ಕೆ ಎಂದರೆ, ಗ್ಲುಟೆನ್ ಅಂಶವನ್ನು ಹೊಂದಿರುವ ಗೋದಿ ಹಾಗು ಗೋದಿ ಜಾತಿಗೆ ಸೇರಿದ ತಿನಿಸುಗಳನ್ನು ತಿನ್ನದಿರುವುದು. ಇದರಿಂದ, ಸೀಲಿಯಾಕ್ ಬೇನೆಯ ಕುರುಹುಗಳು ನಿದಾನವಾಗಿ ತಂತಾನೇ ಕಡಿಮೆಯಾಗುತ್ತವೆ. ಗ್ಲುಟೆನ್ ಇಲ್ಲದ ತಿನಿಸನ್ನು ತಿನ್ನಲು ಆರಂಬಿಸಿದ ಕೆಲವೇ ತಿಂಗಳುಗಳಲ್ಲಿ, ಸಣ್ಣ ಕರುಳಿನ ಎಳೆಗೊಂಡೆಗಳು ಕೂಡ ವಾಸಿಯಾಗುತ್ತವೆ. ಒಬ್ಬ ಮನುಶ್ಯ ಗ್ಲುಟೆನ್ನಿಂದ ಸೀಲಿಯಾಕ್ ಬೇನೆಗೆ ತುತ್ತಾಗುತ್ತಾನೆ ಎಂದು ಗೊತ್ತುಮಾಡಿಕೊಂಡ ಮೇಲೆ, ಅವನು ತನ್ನ ಬಾಳ್ವಿಕೆಯ ಕಾಲದುದ್ದಕ್ಕೂ ಗ್ಲುಟೆನ್ ಇರುವು ತಿನಿಸುಗಳನ್ನು ತಿನ್ನುವಂತಿಲ್ಲ. ಹಾಗೇನಾದರು ತಿಂದಲ್ಲಿ ಮತ್ತೆ ಸೀಲಿಯಾಕ್ ಬೇನೆ ಕಾಡಲಾರಂಬಿಸುತ್ತದೆ.
ಕಡೆನುಡಿ: ಗ್ಲುಟೆನ್ ಉಂಟುಮಾಡುವ ಸೀಲಿಯಾಕ್ ಬೇನೆಗೆ ತುತ್ತಾಗುವವರು ಗ್ಲುಟೆನ್ ಉಳ್ಳ ತಿನಿಸುಗಳನ್ನು ತಿನ್ನುವಂತಿಲ್ಲ ಎಂದರೆ, ರುಚಿಯಾದ ತಿನಿಸಿಸುಗಳನ್ನೂ ತಿನ್ನಲಾಗದು ಎಂದೇನು ಇಲ್ಲ. ರುಚಿಯಾದ ಗ್ಲುಟೆನ್ ಇಲ್ಲ ತಿನಿಸಿಸುಗಳು ಬಹಳಶ್ಟಿವೆ. ಅವುಗಳಲ್ಲಿ ಕೆಲವು ತಿನಿಸುಗಳನ್ನು ಪಟ್ಟಿಯಲ್ಲಿ ಕಾಣಬಹುದು.
ಗ್ಲುಟೆನ್ ಇಲ್ಲದ ತಿನಿಸುಗಳ ಪಟ್ಟಿಯಲ್ಲಿ ನಮ್ಮ ದಿನಬಳಕೆಯ ಅಕ್ಕಿ ಹಾಗು ರಾಗಿಯಿಂದ ಮಾಡಲ್ಪಡುವ ತಿನಿಸುಗಳೂ ಇರುವುದು ಬಾರತೀಯರಿಗೆ, ಅದರಲ್ಲೂ ಕರ‍್ನಾಟದ ಮಂದಿಗೆ ಕೊಂಚ ನೆಮ್ಮದಿ ಹಾಗು ನಲಿವನ್ನು ಮೂಡಿಸುವ ವಿಶಯ.
(ಮಾಹಿತಿ ಮತ್ತು ತಿಟ್ಟ ಸೆಲೆಗಳು:
1.mayoclinic.org, 2.webmd.com, 3.en.wikipedia.org, 4.celiacdiseaseindia.com, 5.worldgastroenterology, 6.sciprose.blogspot.com)
ಇತ್ತೀಚಿನ ಅನಿಸಿಕೆಗಳು