ಕಾನೂನು : ಒಂದು ಇಣುಕುನೋಟ

– ಅನ್ನದಾನೇಶ ಶಿ. ಸಂಕದಾಳ.

law

“ಕಾರಿನಲ್ಲಿ ಹೋಗುತ್ತಿದ್ದರೆ, ಮುಂದುಗಡೆ ಕುಳಿತವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿರಬೇಕು..ಇಲ್ಲದಿದ್ದರೆ < … ರೂ> ದಂಡ ಎಂದೆನ್ನುತ್ತದೆ ಕಾನೂನು”

“ಗಾಡಿ ಓಡಿಸುವವರು ಅಲೆಯುಲಿಯಲ್ಲಿ ಮಾತಾಡುತ್ತಿದ್ದರೆ ಮೋಟಾರು ವಾಹನ ಕಾಯ್ದೆ ಪ್ರಕಾರ < … ರೂ> ದಂಡ”

“ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು ಇದೆ ಎಂದು ಕಾನೂನು ಹೇಳುತ್ತದೆ”

” ಗಂಡ ಹೆಂಡತಿ ಬೇರೆಯಾದರೆ ಅವರ ಮಕ್ಕಳು ಯಾರ ಸುಪರ‍್ದಿಯಲ್ಲಿರಬೇಕು ಎಂದು ಕಾನೂನು ಹೇಳುತ್ತದೆ?”

” ಈ ವಿಚಾರದಲ್ಲಿ ಕಾನೂನು ಪ್ರಕಾರ ಯಾವುದು ಸರಿ ಯಾವುದು ತಪ್ಪು?”

ಇಂತ ಹಲವಾರು ಸುದ್ದಿಗಳನ್ನು ಒಂದಲ್ಲ ಒಂದು ಹೊತ್ತಿನಲ್ಲಿ  ಓದಿರುತ್ತೇವೆ/ಕೇಳಿರುತ್ತೇವೆ ಅತವಾ ಈ ತರಹದ ಕೇಳ್ವಿಗಳು ನಮ್ಮಲ್ಲಿ ಮೂಡಿರುತ್ತವೆ. ಈ ಮೇಲಿನ ಎಲ್ಲಾ ವಿಶಯಗಳಲ್ಲಿ ಸಾಮಾನ್ಯವಾಗಿ ಕಂಡು ಬಂದದ್ದು – ‘ಕಾನೂನು/ಕಾಯ್ದೆ‘ ಎಂಬುದು. ಸುಳುವಾಗಿ ಹೇಳಬೇಕೆಂದರೆ ಕಾನೂನು/ಕಾಯ್ದೆಯನ್ನು ಕಟ್ಟಳೆಗಳು ಎಂದು ಹೇಳಬಹುದು. ಕಟ್ಟಳೆಗಳು ಅಂತ ಮಾಡಿದ ಮೇಲೆ ಅವುಗಳನ್ನು ಮೀರುವಂತಿಲ್ಲ, ಪಾಲಿಸಲೇಬೇಕು. ಅದರಂತೆ ನಡೆದುಕೊಳ್ಳಲೇಬೇಕು. ನಿಜ. ಆದರೆ ಈ ಕಟ್ಟಳೆಗಳನ್ನು ಹೇಗೆ ಮಾಡುವರು? ಕಟ್ಟಳೆಗಳಿಗೆ ಮೂಲ ಯಾವುದು? ಎಂಬ ಯೋಚನೆಗಳೂ ಬರದೇ ಇರುವುದಿಲ್ಲ. ನನ್ನ ತಿಳಿವಿನ ಮಿತಿಯಲ್ಲಿ ಇದರ ಬಗ್ಗೆ ತಿಳಿಸುವುದೇ ನನ್ನ ಈ ಬರಹದ ಉದ್ದೇಶ.

ಕಾನೂನು ಬಗ್ಗೆ ತಿಳಿದುಕೊಳ್ಳುವ ಮುನ್ನ, ಕಾನೂನು ಅತವಾ ಕಟ್ಟಳೆಗಳು ಯಾಕೆ ಬೇಕಾಯಿತು ಎಂದು ತಿಳಿಯಬೇಕಾಗುತ್ತದೆ. ಯಾವುದೇ ಕೆಲಸವಿರಲಿ/ವಿಚಾರವಿರಲಿ, ಅದರಲ್ಲಿ ಸರಿ ಅತವಾ ಸರಿಯಲ್ಲದ್ದು ಅತವಾ ಸರಿ-ತಪ್ಪು ಇದ್ದೇ ಇರುತ್ತದೆ. ಸರಿಯಾದುದದನ್ನು ಮುಂದುವರೆಸುವುದು ಮತ್ತು ತಪ್ಪಿರುವುದನ್ನು, ತಪ್ಪು ಮಾಡುವುದನ್ನು ತಡೆಯುವುದೇ ಕಾನೂನಿನ ಗುರಿ. ನ್ಯಾಯವೇ ಕಾನೂನಿಗೆ ಅಡಿಪಾಯ. ನ್ಯಾಯ ದೊರಕಿಸಿಕೊಡುವುದೇ ಕಾನೂನಿನ ಉದ್ದೇಶ. ಕೂಡಣ (ಸಮಾಜ) ಅಂತ ಒಂದಿದ್ದ ಮೇಲೆ ಆ ಕೂಡಣದ ಒಳಿತಿಗಾಗಿ ಕಟ್ಟಳೆಗಳನ್ನು ಮಾಡಬೇಕಾಗುತ್ತದೆ. ಬರೀ ಕೂಡಣವನ್ನಶ್ಟೇ ಅಲ್ಲದೆ, ನಾಡು-ಗಡಿ ಮೀರಿ ಒಪ್ಪುವಂತ ಕಾನೂನುಗಳನ್ನು ಮಾಡಿರುವುದಿದೆ. ಇಂತಿಪ್ಪ ಕಾನೂನು-ಕಟ್ಟಳೆಗಳನ್ನು ಹೇಗೆ ಮತ್ತು ಯಾರು ಮಾಡುವರು ಎಂಬ ಕೇಳ್ವಿ ಸಹಜವಾದುದ್ದೇ. ಇದರ ಬಗ್ಗೆ ತಿಳಿಯುವ ಮುನ್ನ ನಾಡು-ನಾಡಿನ ಆಳ್ವಿಕೆಯ ಏರ‍್ಪಾಡನ್ನು ತಿಳಿಯುವುದು ಅನುಕೂಲಕರ.

ಮನುಶ್ಯನ ಎಣಿಕೆ ಕಡಿಮೆ ಇದ್ದದ್ದು – ಒಳ್ಳೆ ಬದುಕನ್ನು ಅರಸುತ್ತಾ ಅಲೆದಾಡುತ್ತಿದ್ದುದು – ಆ ಎಣಿಕೆ ಕ್ರಮೇಣ ಹೆಚ್ಚಾಗುತ್ತಾ, ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಮಾನವರ ಗುಂಪು ನೆಲೆ ಕಂಡುಕೊಂಡಿದ್ದುದು – ಆ ಗುಂಪು ಕಾಲ ಕಳೆದಂತಲ್ಲಾ ತನ್ನದೇ ಆದ ರೀತಿ ನೀತಿಗಳಿಂದ ಬೇರೆ ಬೇರೆ ಕೂಡಣಗಳಾಗಿ ಬದಲಾದುದು – “ಬೇರೊಬ್ಬರು ನನ್ನ ಹತೋಟಿಯಲ್ಲಿರಲಿ” ಎಂಬ ಮಾನವನ ಹುಟ್ಟುಗುಣದಿಂದ, ಒಂದು ಸಮುದಾಯದ ಮಂದಿ ಇನ್ನೊಂದು ಸಮುದಾಯದ ಮಂದಿಯನ್ನು ಆಳಿದ್ದುದು – ಬಿಡುಗಡೆಗಾಗಿ ಕಾಳಗಗಳು, ಹೋರಾಟ ನಡೆದಿದ್ದುದು – ನಂತರ, ತಮ್ಮನ್ನು, ತಮ್ಮ ಗುರುತನ್ನು ಕಾಪಾಡಿಕೊಳ್ಳಲು, ತಮ್ಮನ್ನು ತಾವು ಆಳಿಕೊಳ್ಳಲು ನಾಡನ್ನು ಕಟ್ಟಿಕೊಂಡಿದ್ದುದು – ಇದೆಲ್ಲಾ ಹಿನ್ನಡವಳಿಯಿಂದ (history) ತಿಳಿದು ಬರುತ್ತದೆ.

ನಾಡು ಅಂತಾದ ಮೇಲೆ ನಾಡಿನ ಮತ್ತು ನಾಡಿನ ಮಂದಿಯ ಹಿತವೇ ಮೊದಲಾಗುತ್ತದೆ. ನಾಡಿಗೆ ಏನು ಬೇಕು ಏನು ಬೇಡ, ತನ್ನ ಮಂದಿಗೆ ಯಾವುದು ಸರಿ ಯಾವುದು ಬೇಡ ಎಂಬುದನ್ನು ತೀರ‍್ಮಾನಿಸಬೇಕಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಹೊಂದುವಂತ ಕಟ್ಟಳೆಗಳನ್ನು ಮಾಡಲೇಬೇಕಾಗುತ್ತದೆ. ಆದರೆ ತಿಳಿಯಬೇಕಾದ ವಿಚಾರವೆಂದರೆ, ನಾಡಿನ ಎಲ್ಲರಿಗೂ ಕಾನೂನು ಮಾಡುವ ಅದಿಕಾರ (authority) ಇರುವುದಿಲ್ಲ. ಎಲ್ಲರಿಗೂ ಕಾನೂನು ಮಾಡುವ ಅವಕಾಶವಿತ್ತರೆ ಏನಾಗುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ. ಕೂಡಣದಲ್ಲಿನ ಎಲ್ಲರನ್ನೂ ಒಳಗೊಂಡು ಕಟ್ಟಳೆಗಳನ್ನು ಮಾಡುವಂತೆ, ಮಂದಿಯೇ ತಮ್ಮಲ್ಲಿ ಕೆಲವು ಮಂದಿಯನ್ನು ತಮ್ಮ ಪ್ರತಿನಿದಿಯಾಗುವಂತೆ ಆರಿಸುತ್ತಾರೆ. ಇಂತ ಹಲವಾರು ಪ್ರತಿನಿದಿಗಳ ಕೂಟವೇ ಮಂದಿಯನ್ನಾಳುವ ಸರಕಾರವಾಗುತ್ತದೆ. ಬಹುತೇಕ ನಾಡುಗಳಲ್ಲಿ ಮಂದಿಯಿಂದಲೇ ಮಂದಿಗಾಗಿ ಸರಕಾರವನ್ನು ಆಯ್ಕೆ ಮಾಡುವ ಕಟ್ಟುಪಾಡಿದೆ. ಅದನ್ನು ಮಂದಿಯಾಳ್ವಿಕೆ (democracy) ಎಂದೆನ್ನುವರು.

ಹೀಗೆ ಜನರಿಂದ ಆಯ್ಕೆಗೊಂಡ ಸರಕಾರದ ಇಟ್ಟಳ (structure) ಹೇಗಿರಬೇಕು, ಆಡಳಿತ ಏರ‍್ಪಾಡುಗಳು ಹೇಗಿರಬೇಕು, ಕಟ್ಟಳೆಗಳನ್ನು ಯಾರು ಮತ್ತು ಹೇಗೆ ಮಾಡಬೇಕು, ಕಾನೂನಿನ ಪರಿಪಾಲನೆ ಯಾರ ಹೊಣೆಗಾರಿಕೆ, ನಾಡಿನ ಶಾಂತಿಯನ್ನು ಕಾಪಾಡುವುದು ಯಾರ ಜವಾಬ್ದಾರಿ, ಆ ನಾಡಿನ ಮಂದಿ ಹೊಂದಿರುವ ಹಕ್ಕುಗಳೇನು, ಇತ್ಯಾದಿ ಇತ್ಯಾದಿ ಹಲವಾರು ಮುಕ್ಯವಾದ ಅಂಶಗಳನ್ನು ತಿಳಿಸುವುದು ಆ ನಾಡಿನ ಸಂವಿದಾನ (constitution). ಒಂದು ನಾಡಿನ ಸಂವಿದಾನವು ಆ ನಾಡಿನ ಮೇಲ್ಮಟ್ಟದ (high level) ಚಿತ್ರಣವನ್ನು ಕೊಡುತ್ತದೆ. ಅದನ್ನು ‘ನಾಡ ನಡವಳಿಕೆಯ ಚೌಕಟ್ಟು’ ಎಂದರೆ ತಪ್ಪಾಗಲಾರದು. ಬಾರತ ಸಂವಿದಾನದ ಪ್ರಕಾರ, ಕೇಂದ್ರ ಸರಕಾರವು ಕಾರ‍್ಯಾಂಗ (executive), ಶಾಸಕಾಂಗ (legislative) ಮತ್ತು ನ್ಯಾಯಾಂಗ (judiciary) ಗಳನ್ನು ಹೊಂದಿರುತ್ತದೆ. ಬಾರತವು ಹಲವಾರು ರಾಜ್ಯಗಳ ಒಕ್ಕೂಟವಾಗಿರುವುದರಿಂದ, ರಾಜ್ಯಗಳು ತಮ್ಮದೇ ಸರಕಾರ ಹೊಂದಬಹುದಾಗಿದ್ದು, ಮೇಲೆ ತಿಳಿಸಿದ 3 ಅಂಗಗಳನ್ನು ರಾಜ್ಯಸರಕಾರವೂ ಹೊಂದಿರುತ್ತದೆ. ಕಟ್ಟಳೆಗಳನ್ನು ಮಾಡುವುದು ಶಾಸಕಾಂಗದ ಕೆಲಸವಾದರೆ, ನ್ಯಾಯ ಪರಿಪಾಲನೆ ಮಾಡುವುದು – ಸರಕಾರ ನಡೆಯನ್ನು ಸಂವಿದಾನದ ಆಶಯಕ್ಕೆ ಪೂರಕವಾಗಿದೆಯೋ ಇಲ್ಲವೋ ಎಂದು ಒರೆಗೆ ಹಚ್ಚುವುದು – ಸಂವಿದಾನ ಮಂದಿಗೆ ನೀಡಿರುವ ಹಕ್ಕುಗಳನ್ನು ಕಾಯುವುದು ನ್ಯಾಯಾಂಗದ ಕೆಲಸ. ಮೇಲೆ ತಿಳಿಸಿರುವದಶ್ಟೆ ಶಾಸಕಾಂಗ-ನ್ಯಾಯಾಂಗದ ಕೆಲಸಗಳಲ್ಲ, ತಾವು ನಿಬಾಯಿಸಬೇಕಾದ ಮುಕ್ಯವಾದ ಕೆಲಸಗಳಲ್ಲಿ ಅವುಗಳೂ ಒಂದು.

ಕಾನೂನು ಕಟ್ಟಳೆಗಳನ್ನು ಮಾಡುವ ಬಗೆ – ಮುಂದಿನ ಬರಹಗಳಲ್ಲಿ

 

( ಚಿತ್ರ ಸೆಲೆ: nigeriannewsservice.com )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: