ಅಲ್ಪನ ಮದಕ್ಕೆ ಆರಿಹೋದ ಅರಿಮೆಯ ಬೆಳಕು

ಗಿರೀಶ ವೆಂಕಟಸುಬ್ಬರಾವ್.

ಕಳೆದ ವಾರಗಳಲ್ಲಿ ನಾವು ಮೇಲರಿಮೆಗಾರ ಆರ‍್ಕಿಮಿಡೀಸ್‍ರು ಎಣಿಕೆಯರಿಮೆಗೆ (Mathematics), ಗೆರೆಯರಿಮೆಗೆ (Geometry), ಪುರುಳರಿಮೆಗೆ (Physics), ನೀರೊತ್ತರಿಮೆಗೆ (Hydraulics), ಕದಲರಿಮೆಗೆ (Mechanics) ಹಾಗೂ ಬಿಣಿಗೆಯರಿಮೆಗೆ(Engineering) ಇತ್ತ ಕೊಡುಗುಗೆಗಳನ್ನು ಅರಿತೆವು. ಈ ಬರಹದಲ್ಲಿ ಅವರು ಕೊನೆಯಾದ ಪರಿಯನ್ನು ಓದೋಣ.

ಯೇಸುಹುಟ್ಟುವ ಮುನ್ನ ಸುಮಾರು 734 ಇಲ್ಲವೆ 733 ರಲ್ಲಿ ಗ್ರೀಕ್ ಪೊಳಲಿಕೆಯು(Civilization) ಬದಿಯ ಮೆಡಿಟೇರಿಯನ್, ಅಯೋನಿಯನ್ ಹಾಗು ಟೆರ‍್‌ಹೆನೀಯನ್ ಸಮುದ್ರದ ನಡುವೆ ಮುಕ್ಕೋನದಂತಿರುವ ಸಿರಾಕಸ್ ನಡುಗುಡ್ಡೆಗೂ(Island) ಹಬ್ಬಿತ್ತು. ಕೆಳಗಿನ ನಾಡತಿಟ್ಟವನ್ನು (Map) ನೋಡಿ.

map

ಗ್ರೀಸಿನಿಂದ ಇಲ್ಲಿಗೆ ಬಂದು ನೆಲೆಯೂರುವ ಮಂದಿ ಈ ನಾಡನ್ನು ಕಟ್ಟುತ್ತಾರೆ. ಯೇಸುಹುಟ್ಟುವ ಎರಡನೆಯ ನೂರುವರುಶಗಳ ಹಿಂದೆ, ಚಂದದ ಸಿರಾಕಸ್ ನಡುಗುಡ್ಡೆಯು ಗ್ರೀಕ್ ದೊರೆ ಎರಡನೆಯ ಹೀರೋನ ಆಳ್ವಿಕೆಯಲ್ಲಿದ್ದಾಗ, ಆರ‍್ಕಿಮಿಡೀಸ್‍ ದೊರೆಗೆ ಎದುರಾಗುತ್ತಿದ್ದ ತೊಡಕುಗಳನ್ನು ಬಿಡಿಸುವ ಸಲಹೆಗಾರರಾಗಿರುತ್ತಾರೆ. ಅಲೆಗ್ಸಾಂಡ್ರಿಯಾ ಮೇಲ್ಕಲಿಕೆಮನೆಯಲ್ಲಿ (university) ಓದುವುದಕ್ಕಾಗಿ ಹೊರಗಿದ್ದದ್ದು ಬಿಟ್ಟರೆ ಉಳಿದ 75 ವರುಶಗಳ ಬದುಕನ್ನು ಆರ‍್ಕಿಮಿಡೀಸ್ ಅವರು ಕಳೆದದ್ದು ಸಿರಾಕಸ್‌ನಲ್ಲಿಯೆ. ತಮ್ಮ ಕಂಡುಹಿಡಿತಗಳನ್ನು ಮಂದಿಯ ದಿನ ಬಳಕೆಗೂ ನಾಡನ್ನು ಕಾಪಾಡಲೂ ತರುವಲ್ಲಿ ಆರ‍್ಕಿಮಿಡೀಸ್‍ರ ಪಾಲು ಬಲು ದೊಡ್ಡದು.

ಮೆಡಿಟೇರಿಯನ್ ಸಮುದ್ರದ ಮೂಡಣ (Eastern) ಹಾಗೂ ಪಡುವಣ (Western) ನಾಡುಗಳ ನಡುವೆ ಕಾಳಗ ನಡೆಯುತ್ತಿರುತ್ತದೆ. ಇದನ್ನು ರೋಮನ್ನರ ಹಾಗೂ ಕಾರ‍್‌ತೇಜಿಯನರ ನಡುವಿನ ಪ್ಯುನಿಕ್ ಕಾಳಗವೆಂದೂ ಕರೆಯುತ್ತಾರೆ. ಆಪ್ರಿಕಾ ಹಾಗು ಯುರೋಪುಗಳ ನಡುವಿನ ಕೊಂಡಿಯಾಗಿದ್ದ ಸಿರಾಕಸ್ ಅನ್ನು ತಮ್ಮ ಆಳ್ವಿಕೆಗೆ ತೆಗೆದುಕೊಳ್ಳಲು ಆ ದಿನಗಳಲ್ಲೇ ರೋಮನರಿಂದ ಹಾಗೂ ಕಾರ‍್‌ತೇಜಿಯನರಿಂದ ಹಲವು ದಾಳಿಗಳು ನಡೆದಿರುತ್ತದೆ. ಆದರೆ ದೊರೆಯೂ ರೋಮನರ ಹಾಗೂ ಕಾರ‍್‌ತೇಜಿಯನರ ಜತೆ ಒಪ್ಪಂದಗಳನ್ನು ಮಾಡಿಕೊಳ್ಳುವುದರಿಂದಲೂ, ಆ ಒಪ್ಪಂದ ಮೀರಿಯೂ ದಾಳಿಗಳಾದಾಗ, ಆರ‍್ಕಿಮಿಡೀಸ್‍ರಂತಹ ಅರಿಮೆಗಾರನ ನೆರವಿನಿಂದಲೂ ಸಿರಾಕಸ್ ಪಡೆಯು ಆ ಎಲ್ಲಾ ದಾಳಿಗಳಿನ್ನೂ ಮೆಟ್ಟಿನಿಂತಿರುತ್ತದೆ. [ಹಿಂದಿನ ಬರಹವೊಂದರಲ್ಲಿ, ಒಂದು ಪುಟ್ಟಸನ್ನೆಗೋಲಿನ ಕಟ್ಟಲೆಯನ್ನು ಅಳವಡಿಸಿಕೊಂಡಂತಹ ಪೆರ‍್‌ಚೂಟಿ: ಆರ‍್ಕಿಮಿಡೀಸ್‍ ಉಗುರಂಗಯ್(Claw) ಬಳಸಿ ಹೇಗೆ ಎದುರಾಳಿಯ ದೊಡ್ಡ ಹಡಗುಗಳನ್ನು ಬುಡಮೇಲು ಮಾಡುತ್ತಿದ್ದರೆಂಬ ಪರಿಯನ್ನು ಆಗಲೆ ಓದಿದ್ದೇವೆ].

ಯೇಸುಹುಟ್ಟುವ ಮುಂಚಿನ 212 ವರುಶದಲ್ಲಿ, ರೋಮನರು ಹಾಗೂ ಕಾರ‍್‌ತೇಜಿಯನರು ಎರಡನೆಯ ಪ್ಯುನಿಕ್ ಕಾಳಗದಲ್ಲಿ ತೊಡಗುತ್ತಾರೆ. ಸಿರಾಕಸ್ ನಾಡಿನ ಮೇಲೆ ಹಿಡಿತ ಸಾಗಿಸಲು ಮತ್ತೊಮ್ಮೆ ರೋಮನರ ಹಾಗು ಕಾರ‍್‌ತೇಜಿಯನರ ನಡುವೆ ಪಯ್‍ಪೋಟಿ ಏರ‍್‌ಪಡುತ್ತದೆ. ಈ ಬಾರಿಯ ರೋಮನ್ ದಾಳಿಯ ಮುಂದಾಳತ್ವವನ್ನು ದಳವಾಯಿ (General) ಮಾರ‍್‌ಕಸ್ ಕ್ಲಾಡಿಯಸ್ ಮಾರ‍್‌ಸೆಲುಸ್ ವಹಿಸಿಕೊಂಡಿರುತ್ತಾನೆ. ತನ್ನ ಕೆಚ್ಚಿನಿಂದ, ಹಂಬಲದಿಂದ ಆತನೊಬ್ಬ ಪಳಗಿದ ದಳವಾಯಿಯಾಗಿ ಈ ಕಾಳಗದಲ್ಲಿ ರೋಮನರನ್ನು ಮುನ್ನಡೆಸುತ್ತಿರುತ್ತಾನೆ.

ಹಿಂದಿನ ಎಲ್ಲಾ ದಾಳಿಗಳಲ್ಲೂ ಸಿರಾಕಸ್‌ನ ಪಡೆಗಳು ಎದುರಾಳಿಯು ಎಣಿಸದಂತಾ ಹೊಡೆತಗಳನ್ನು ನೀಡಿ, ರೋಮನರನ್ನು ಕಂಗೆಡಿಸಿ ಬಿಟ್ಟಿರುತ್ತದೆ. ಆದ್ದರಿಂದ ರೋಮನ್ ಪಡೆಗಳಿಗೆ ಆ ನಡುಗುಡ್ಡೆಯ ಬಗೆಗಿನ ಅರಿವು ಅಲ್ಪಮಟ್ಟದಲ್ಲೇ ಇರುತ್ತದೆ. ನೇರವಾದ ಕಾಳಗದಲ್ಲಿ ಸಿರಾಕಸ್ ನಡುಗುಡ್ಡೆಯ ಬಳಿಗೆ ಬರುವುದೂ ದೂರದ ಮಾತಾಗಿರುತ್ತದೆ. ಹೀಗಿದ್ದಾಗ ರೋಮನರ ನೆರವಿಗೆ ಬರುವುದು: ಸಿರಾಕಸ್‌ಮಂದಿಯು ತಮ್ಮ ದೇವತೆಯಾದ ಆರ‍್‌ಟೆಮಿಸ್‌ಗೆ ನಡೆಸುತ್ತಿದ್ದ ಹಬ್ಬ ಹಾಗೂ ಸಿರಾಕಸ್‌ನ ನಂಬುಗೆಮುರಿದ (Betray) ಕೆಲವು ಅಲ್ಪರು.

ನಂಬುಗೆಮುರಿವು ಎಂತಹ ಬಲಶಾಲಿಗಳನ್ನೂ ನೆಲೆಕಚ್ಚಿಸಿ ಬಿಡುವುದನ್ನು ನಮಗೆ ಹಿನ್ನಡುವಳಿಯು(History) ಬಹಳಶ್ಟು ಸಲ ತೋರಿದೆ. ಸಿರಾಕಸ್‌ನ ಮಂದಿ ಹಬ್ಬದಾಚರಣೆಯಲ್ಲಿ ಮಯ್ ಮರೆತಿದ್ದಾಗ, ಒಂದು ಬದಿಯ ತಡೆಗೋಡೆಯನ್ನು ರೋಮನ್ ಪಡೆ ತಲುಪುತ್ತದೆ. ನಂಬುಗೆಮುರಿದ ಮಂದಿಯು ಬಾಗಿಲನ್ನು ತೆರೆದು ಬಿಡುತ್ತಾರೆ. ಮಾರ‍್‌ಸೆಲುಸ್‌ನ ಕಾದಾಳುಗಳು ಒಳನುಗ್ಗಿ ಸಿರಾಕಸ್ ಪಟ್ಟಣವನ್ನು ಹಿಡಿತಕ್ಕೆ ತೆಗೆದುಕೊಂಡುಬಿಡುತ್ತಾರೆ. ರೋಮನ್ ಪಡೆಗಳು ಸಿರಾಕಸ್ ಪಟ್ಟಣವನ್ನು ಕೊಳ್ಳೆಹೊಡೆಯ ತೊಡಗುತ್ತಾರೆ. ಮಾರ‍್‌ಸೆಲುಸ್‌ಗೆ, ಗ್ರೀಕರ ಈ ಮೇರು ಅರಿಮೆಗಾರ ಆರ‍್‌ಕಿಮಿಡೀಸರರ ಬಗೆಗೆ ತಿಳಿದಿದ್ದು ತುಂಬಾ ತಕ್ಕಮೆಯನ್ನೂ(Respect) ಹೊಂದಿರುತ್ತಾನೆ. ತನ್ನ ಪಡೆಯಾಳುಗಳಿಗೆ ಆರ‍್‌ಕಿಮಿಡೀಸರನ್ನು ಕರೆತರಲು ಅಪ್ಪಣೆ ನೀಡುತ್ತಾನೆ.

ಇತ್ತ ಆರ‍್ಕಿಮಿಡೀಸ್‍ರೋ ಇದಾವುದರ ಅರಿವೂ ಇಲ್ಲದೇ, ಎಂದಿನಂತೆ ತೊಡಕುಗಳನ್ನು ಬಿಡಿಸುತ್ತಾ ತಮ್ಮದೇ ಅರಿಮೆಯ ಜಗದಲ್ಲಿರುತ್ತಾರೆ. ಸುತ್ತುಗಳನ್ನು ಬಿಡಿಸುತ್ತಿರುತ್ತಾರೆ. ಆಗ ಅಲ್ಲಿಗೆ ನುಗ್ಗುವ ಪಡೆಯಾಳು, ಆರ‍್ಕಿಮಿಡೀಸ್‍ರನ್ನು ತಮ್ಮ ದಳವಾಯಿಯ ಬಳಿಗೆ ಬರಬೇಕೆಂದು ಹೇಳುತ್ತಾನೆ. ತಮ್ಮ ಕೆಲಸದಲ್ಲೇ ತೊಡಗಿಕೊಂಡಿದ್ದ ಅರಿಮೆಗಾರರ ಕಿವಿಗೆ ಅದು ಬೀಳದಿದ್ದಾಗ ಅವರ ಬಳಿಯೇ ಬರುವ ಆ ಪಡೆಯಾಳು, ಅವರನ್ನು ಎಳೆದೊಯ್ಯಲು ಯತ್ನಿಸುತ್ತಾನೆ. ಅವನನ್ನು ಹಿಂದೆ ತಳ್ಳುವ ಆರ‍್ಕಿಮಿಡೀಸ್‍ರು

ನನ್ನ ಸುತ್ತುಗಳನ್ನು ಹಾಳುಗೆಡವ ಬೇಡ!!

ಎಂದು ಕೂಗುತ್ತಾರೆ. ಆಗಲೇ ಗೆಲುವಿನ ಮದದಲ್ಲಿದ್ದ ಆ ಆಲ್ಪ, ಕುಪಿತನಾಗಿ ತನ್ನ ಕತ್ತಿಯನ್ನು ಒರೆಯಿಂದೆಳೆದು ಅರಿಮೆಗಾರರನ್ನು ಇರಿದು ಕೊಂದೇ ಬಿಡುತ್ತಾನೆ.

Screenshot - 10_1_2014 , 9_10_54 PM

ಇದು ಕೆಲವು ಹಿನ್ನಡುವಳಿಗೆಗಾರರು (Historians) ಸಾರಿರುವ ಬಗೆ. ಇನ್ನು ಕೆಲವರು ಸಾರಿರುವ ಪರಿಯೆಂದರೆ: ಆರ‍್ಕಿಮಿಡೀಸ್‍ರು ತಮ್ಮ ಮುಟ್ಟುಗಳ(Instruments) ಪೆಟ್ಟಿಗೆಯನ್ನು ಹೊತ್ತು ಸಾಗುತಿದ್ದಾಗ ಹಿಡಿವ ರೋಮನರು, ಆ ಮುಟ್ಟುಗಳನ್ನು ಅರಿಯದೆ, ಅವು ಯಾವುದೋ ಕೊಲ್ಲಣಿಗಳೆಂದು(Weapons) ಬಗೆದೋ ಇಲ್ಲವೆ ತಾವೆಣಿಸಿದಂತೆ ಹೊನ್ನು ಇಲ್ಲದಿರುವುದರಿಂದ ಕಳಲಿನಿಂದ(Disappoint) ಅವರನ್ನು ಕೂಡಲೇ ಕೊಂದರೆಂದು. ಏನೇ ನಡೆದಿರಲಿ, ಆದರೆ ಆರ‍್‌ಕಿಮಿಡೀಸರಂತಹ ಅರಿಮೆಯ ಬೆಳಕಂತೂ ಅಲ್ಪನ(ರ) ಮದಕ್ಕೆ ಆರಿಹೋಗಿದ್ದಂತೂ ದಿಟ. ಆರ‍್‌ಕಿಮಿಡೀಸರನ್ನು ತನ್ನ ಪಡೆ ಕೊಂದು ಹಾಕಿದ್ದನ್ನು ಅರಿತ ಮಾರ‍್‌ಸೆಲುಸ್ ಕಳಲುತ್ತಾನೆ. ಆ ಮೇಲುಅರಿಮೆಗಾರರ ಕಳೇಬರಕ್ಕೆ ತಕ್ಕಮೆಯನ್ನು ಮಾಡಿ, ಒಂದು ಹೂಳುಕಟ್ಟಡವನ್ನು (Tomb) ಕಟ್ಟಿಸುತ್ತಾನೆ.

ಮುಂದಿನ ಬರಹದಲ್ಲಿ ಆರ‍್ಕಿಮಿಡೀಸ್‍ರ ಈ ಹೂಳುಕಟ್ಟಡ ಗುರುತಿಸಿದ ಪರಿಯನ್ನು ಅರಿಯೋಣ.

(ಮಾಹಿತಿ ಮತ್ತು ತಿಟ್ಟಸೆಲೆಗಳು: www.vroma.org, www.math.nyu.edu)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.