ಉಳಿಸಿರಿ ಬೆಳೆಸಿರಿ ನಮ್ಮಯ ನುಡಿಸಿರಿ
– ರತೀಶ ರತ್ನಾಕರ.
ಉಳಿಸಿರಿ ಬೆಳೆಸಿರಿ ನಮ್ಮಯ ನುಡಿಸಿರಿ
ಒಡೆಯದೇ ಒಂದಾಗಿರಿ
ಆರದೆ ಎಂದು ಬೆಳಗುತಿರಿ||
ಯಾರೋ ಎಸೆದ ಚೂರಲ್ಲ
ಮಾರಿಕೊಳ್ಳಲು ಒಬ್ಬರದಲ್ಲ
ಇದು ನೆತ್ತರ ಬಸಿದು
ಬೆವರನು ಸುರಿದು
ಹಿರಿಯರು ಕೊಟ್ಟ ಕೊಡುಗೆಯಿದು
ಕರುನಾಡಿದು… ಸಿರಿಬೀಡಿದು…
ನೆನ್ನೆ ಮೊನ್ನೆಯ ನಾಡಲ್ಲ
ಇನ್ನು ಬಲಿಯದ ಕೂಸಲ್ಲ
ಹಲದೊರೆಗಳು ಆಳಿ
ತಲೆಮಾರುಗಳುರುಳಿ
ಹೊನ್ನಿನ ಅಚ್ಚಿದೆ ಹಳಮೆಯ ಪುಟದಲಿ
ಹೊಳೆಯಲಿ ಇದು ಮುಂದಿನ ಬದುಕಲಿ|
ಏರುಪೇರಿನ ಏಳಿಗೆ
ಹೆರದಾಳ್ವಿಕೆ ಕೊಟ್ಟ ಕೊಡುಗೆ
ಕಿಡಿ ಸಿಡಿಯಲಿ
ನಮ್ಮವರೆದೆಯಲಿ
ಹಂಗನು ತೊರೆದು ತಾನೇ ಮೆರೆಯಲಿ
ಮಿನುಗಲಿ ಮಿಂಚಲಿ ಬಾನಗಲದಲಿ|
ಹೊಂಚು ಹಾಕಿಹರು ಹೆರವರು
ಹರಿದಂಚಿ ತಿನ್ನಲು ತವರು
ಇರಲೊಗ್ಗಟ್ಟು
ಕಾಣು ಕಣ್ಬಿಟ್ಟು
ಕರುನಾಡ ಮುರಿಯುವರ ಹೊರಗಟ್ಟು
ಒಗ್ಗಟ್ಟೇ ನಮ ಗೆಲುವಿನ ಗುಟ್ಟು|
ನನ್ನುಡಿಗಿದೆ ಹೊಸೆಯುವ ಕಸುವು
ಮೀರಿ ಮೆರೆಯಲು ಎಲ್ಲೆಯ ಹರವು
ಕಲಿ ಕನ್ನಡ
ದುಡಿ ಕನ್ನಡ
ನಿನ್ನಾಳ್ಕೆಯ ನಡೆಯಲು ಕನ್ನಡ
ಏಳಿಗೆಗಿರುವ ದಾರಿಯೆ ಕನ್ನಡ|
ಇತ್ತೀಚಿನ ಅನಿಸಿಕೆಗಳು