ಕ್ರಿಕೆಟ್ ಎಸೆತಗಾರಿಕೆಯ ಗುಟ್ಟು

 ಹರ‍್ಶಿತ್ ಮಂಜುನಾತ್.

12345

ದಾಂಡಾಟ(Cricket)ದ ಪೋಟಿಯಲ್ಲಿ ಎಸೆತಗಾರಿಕೆ(Bowling)ಯು, ಒಬ್ಬ ಎಸೆತಗಾರ(Bowler)ನು ತನ್ನ ಓಡುಗೆಯಿಂದ (Run up) ಚೆಂಡಿನ ತುದಿಬಿಡುಗೆ (Point of release)ಯ ತನಕ ಮಾಡುವ ಬೇರೆ ಬೇರೆ ಚಲನೆಯ ಪಲಿತಾಂಶವಾಗಿರುತ್ತದೆ. ಸಾಮಾನ್ಯವಾಗಿ ಕಯ್ ತಿರುಗಿಸಿ ಎಸೆತ ಎಸೆದರೆ ಸಾಕು ಎನ್ನುವುದು ನಮ್ಮ ಅಬಿಪ್ರಾಯ. ಆದರೆ ಅದು ತಪ್ಪು. ದಾಂಡಾಟದಲ್ಲಿ ಪ್ರತಿಯೊಂದಕ್ಕೂ ಒಂದು ನಿಯಮವಿದೆ, ಅಂತೆಯೇ ಎಸೆತಗಾರಿಕೆಗೂ ಕೂಡ. ಎಸೆತಗಾರನೊಬ್ಬ ಎಸೆಯುವ ಪ್ರತಿ ಎಸೆತವು ನಿಯಮ ಬದ್ದವಾಗಿರಬೇಕು ಎಂದು ಅಯ್.ಸಿ.ಸಿ ನಿಯಮಾವಳಿಗಳು ಹೇಳುತ್ತವೆ. ಅದರಂತೆ ಪ್ರತಿಯೊಬ್ಬ ಎಸೆತಗಾರನೂ ಅವನದೇ ಆದ ರೀತಿಯಲ್ಲಿ ಎಸೆತಗಾರಿಕೆಯನ್ನು ನಡೆಸುವ ಅವಕಾಶವನ್ನು ಅಯ್.ಸಿ.ಸಿ ನೀಡಿದೆ. ಆದರೆ ಎಸೆತಗಾರಿಕೆಯ ರೀತಿಯು ಅಯ್.ಸಿ.ಸಿ ನಿಯಮಾವಳಿಗೆ ಒಳಪಟ್ಟಿರಬೇಕಶ್ಟೆ.

ಸಾಮಾನ್ಯವಾಗಿ ಎಸೆತಗಾರಿಕೆಯಲ್ಲಿ ಮುಕ್ಯವಾಗಿ ಮೂರು ಬಗೆಗಳಿರುತ್ತವೆ ಅವು ವೇಗದ ಎಸೆತ, ನಡುವೇಗದ ಎಸೆತ ಮತ್ತು ತಿರುಗೆಸೆತ. ಈ ಮೂರು ರೀತಿಯ ಎಸೆತಗಾರಿಕೆಯೂ ಆ ಎಸೆತಗಾರನ ಓಡುಗೆಯನ್ನು ಆದರಿಸಿರುತ್ತದೆ. ಆದರೆ ವೇಗದ ಎಸೆತ (Fast bowling) ಮತ್ತು ನಡುವೇಗದ ಎಸೆತಗಳ (Medium pace bowling) ಎಸೆತಗಾರಿಕೆಯ ಬಗೆಗಳು ಹೆಚ್ಚಾಗಿ ಹೋಲುತ್ತವೆ. ಇನ್ನುಳಿದಂತೆ ತಿರುಗೆಸೆತ(Spin bowling)ವು ಬೇರೆಯದೇ ಆದ ಎಸೆತಗಾರಿಕೆಯ ಬಗೆಯನ್ನು ಹೊಂದಿರುತ್ತದೆ.

ಎಸೆತಗಾರಿಕೆಯ ಬಗೆಗಳು:
ಸಾಮಾನ್ಯವಾಗಿ ಗಟ್ಟಿ ಚರ‍್ಮಗಳಿಂದ ಮಾಡಲ್ಪಡುವ ಡಾಂಡಾಟದ ಚೆಂಡನ್ನು ಆದಶ್ಟು ವೇಗವಾಗಿ ಎಸೆಯುವುದು, ಪಿಚ್‍ಗೆ ಚೆಂಡು ತಾಕಿದೊಡನೆ ನಿಯಮಿತ ರೀತಿಯಲ್ಲಿ ಪುಟಿಯುವಂತೆ ಮಾಡುವುದು, ಅತವಾ ಗಾಳಿಯ ನೆರವನ್ನು ಪಡೆದು ತೇಲೆಸೆತಗಳನ್ನು ಎಸೆಯುವುದು ವೇಗದ ಎಸೆತಗಾರಿಕೆಯ ಮುಕ್ಯ ಗುರಿಯಾಗಿದೆ.

  • ನಿಯಮಿತವಾಗಿ ಗಂಟೆಗೆ 146 ಕಿಲೋ ಮೀಟರ್ ಮತ್ತು ಅದಕ್ಕೂ ಹೆಚ್ಚಿನ ವೇಗದಲ್ಲಿ ದಾಂಡುಗಾರನತ್ತ ತೂರಿಬರುವ ಎಸೆತಗಳನ್ನು ವೇಗದ ಎಸೆತಗಳ ಗುಂಪಿಗೆ ಸೇರಿಸಿಲಾಗಿದೆ
  • ಗಂಟೆಗೆ 145 ಕಿ.ಮೀ ಮತ್ತು ಅದಕ್ಕಿಂತ ಕಡಿಮೆ ವೇಗದ ಎಸೆತಗಳನ್ನು ನಡುವೇಗದ ಎಸೆತಗಳೆನ್ನುವರು

ಪಾಕಿಸ್ತಾನದ ಎಸೆತಗಾರ ಶೋಯಬ್ ಅಕ್ತರ್ ಇಂಗ್ಲೆಂಡ್ ವಿರುದ್ದದ ಪಯ್ಪೋಟಿಯಲ್ಲಿ 161.3 ಕಿ.ಮೀ ವೇಗದಲ್ಲಿ ಎಸೆದ ಚೆಂಡು, ಅದಿಕ್ರುತವಾಗಿ ಈ ವರೆಗಿನ ದಾಂಡಾಟದ ಅತೀ ವೇಗದ ಎಸೆತವಾಗಿದೆ.

ವೇಗದ ಎಸೆತಗಳು ಕೇವಲ ಎಸೆತಗಾರರನ್ನಶ್ಟೇ ಆದರಿಸದೇ, ಪಿಚ್‍ನ ಗುಣ ಮತ್ತು ಗಾಳಿಪಾಡನ್ನೂ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇಂಡಿಯಾ, ಶ್ರೀಲಂಕಾದಂತಹ ಉಪಕಂಡಗಳಲ್ಲಿ ವೇಗದ ಎಸೆತಗಳು ಅಶ್ಟು ಪರಿಣಾಮಕಾರಿ ಎಂದೆನಿಸುವುದಿಲ್ಲ. ಕಾರಣ ಇಲ್ಲಿನ ಪಿಚ್‍ಗಳು ಮತ್ತು ಗಾಳಿಪಾಡುಗಳು ವೇಗದ ಎಸೆತಕ್ಕೆ ಅಶ್ಟಾಗಿ ನೆರವಾಗುವುದಿಲ್ಲ. ಆದರೆ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಗಾಳಿಪಾಡು ಮತ್ತು ಪಿಚ್‍ನ ಸ್ತಿತಿ ವೇಗದ ಎಸೆತಗಾರಿಕೆಗೆ ಹೇಳಿ ಮಾಡಿಸಿದಂತಹುದು. ಒಂದಶ್ಟು ದೂರದಿಂದ ಓಡಿಬಂದು ತನ್ನ ಬಲವನ್ನೆಲ್ಲಾ ಬಳಸಿ ಎಸೆತಕ್ಕೆ ವೇಗ ನೀಡುವುದೆಂದರೆ ಅಶ್ಟು ಸುಲಬದ ಮಾತಲ್ಲ. ಅದಕ್ಕೆ ಅದರದ್ದೇ ಆದ ಚಳಕ, ಚಟುವಟಿಕೆ, ಜಾಣತನ ಮತ್ತು ಅನುಸರಿಸುವ ನಿಯಮಗಳಲ್ಲಿ ಪಕ್ವತೆಯ ಅವಶ್ಯಕತೆಯಿದೆ.

ಚೆಂಡಿನ ಹಿಡಿತ

ಚೆಂಡಿನ ಹಿಡಿತ

ಎಸೆತಗಾರಿಕೆಯ ಚಟುವಟಿಕೆಗಳು:

ಎಸೆತಗಾರನು ತಾನು ಎಸೆತ ಎಸೆಯುವುದಕ್ಕೂ ಮುನ್ನ ಚೆಂಡನ್ನು ಸರಿಯಾಗಿ ಹಿಡಿದುಕೊಳ್ಳುವ ಮೂಲಕ ಚೆಂಡಿನ ಮೇಲೆ ಹಿಡಿತ ಸಾದಿಸುವುದು ಅತಿ ಮುಕ್ಯವಾದ ಕೆಲಸವಾಗಿದೆ. ಏಕೆಂದರೆ ಎಸೆತಗಾರನು ಹೆಚ್ಚಿನ ವೇಗವನ್ನು ಪಡೆದುಕೊಳ್ಳುವಲ್ಲಿ ಚೆಂಡಿನ ಹಿಡಿತವು ಹೆಚ್ಚಿನ ಪಾತ್ರ ವಹಿಸುತ್ತದೆ. ಚೆಂಡಿನ ಹೊಲಿಗೆಯ ನಡುಗೆರೆ(Seam)ಗೆ ನೇರವಾಗುವಂತೆ ಚೆಂಡನ್ನು ಹಿಡಿದುಕೊಂಡು, ನಡುಗೆರೆಗೆ ಹತ್ತಿರವಿರುವಂತೆ ತೋರುಬೆರಳು ಮತ್ತು ಮದ್ಯದ ಬೆರಳನ್ನು ಇರಿಸಿಕೊಂಡು, ಹೆಬ್ಬೆರಳನ್ನು ಚೆಂಡಿನ ಕೆಳಬಾಗದಲ್ಲಿ ಸರಿಯಾಗಿ ನಡುಗೆರೆಗೆ ಹಿಡಿದುಕೊಳ್ಳಬೇಕು ಮತ್ತು ಚೆಂಡು ಕಯ್ಯಿಂದ ಸುಲಬವಾಗಿ ಜಾರಿಹೋಗುವಂತಿರಬೇಕು. ಇದು ಸಾಮಾನ್ಯವಾಗಿ ಎಸೆತಗಾರನು ಚೆಂಡಿನ ಮೇಲೆ ಹಿಡಿತ ಸಾದಿಸುವ ಬಗೆ.

ಇದಲ್ಲದೇ ಎಸೆತಗಾರನು ಇತರ ಬೇರೆ ರೀತಿಯ ಹಿಡಿತಗಳನ್ನು ಕೂಡ ಸಾದಿಸುತ್ತಾನೆ. ಇದರಿಂದ ಹಲವು ತರದ ಚೆಂಡೆಸೆತವನ್ನು ಕಾಣಬಹುದಾಗಿದೆ. ಎಸೆತಗಾರನು ಎಸೆತ ಎಸೆಯುವ ಮುನ್ನ ಇಂತಿಶ್ಟು ದೂರದಿಂದ ಓಡಿ ಬಂದು ತನ್ನ ಎಸೆತಗಾರಿಕೆಯ ಮೇಲೆ ಹಿಡಿತ ಸಾದಿಸುವುದನ್ನು ಓಡುಗೆ ಎನ್ನುವರು. ಆದರೆ ವೇಗದ ಎಸೆತಗಾರ, ನಡುವೇಗದ ಎಸೆತಗಾರ ಮತ್ತು ತಿರುಗಿಸುಗನ ಓಡುಗೆಯಲ್ಲಿ ಬಹಳಶ್ಟು ವ್ಯತ್ಯಾಸಗಳಿವೆ.

ವೇಗದ ಎಸೆತಗಾರನು ತನ್ನ ಎಸೆತಕ್ಕೆ ಸರಿಯಾದ ರಬಸ ಮತ್ತು ಗತಿ ನೀಡುವ ಸಲುವಾಗಿ ಓಡುಗೆಯನ್ನು ಗಡಿರೇಕೆಯಿಂದ ದೂರವಾಗಿ ಶುರುವಿಟ್ಟರೆ, ನಡುವೇಗದ ಎಸೆತಗಾರನು ಗಡಿರೇಕೆಗೆ ತುಸು ದೂರದಲ್ಲಿ ಓಡುಗೆಯನ್ನು ಪ್ರಾರಂಬಿಸುತ್ತಾನೆ. ಹಾಗೆಯೇ ತಿರುಗಿಸುಗನು ಗಡಿರೇಕೆಗೆ ಹತ್ತಿರವಾಗಿ ಓಡುಗೆಯನ್ನು ಮಾಡುತ್ತಾನೆ. ಬಹುತೇಕ ವೇಗದ ಎಸೆತಗಾರರು ವೇಗ, ನಡು ವೇಗ, ಕಡುವೇಗದಂತಹ ಮಿಶ್ರಣದ ಎಸೆತಗಳನ್ನು ಎಸೆಯುತ್ತಾರೆ. ಆದರೆ ವೇಗದ ಎಸೆತ ಮತ್ತು ನಡುವೇಗದ ಎಸೆತಗಳ ಎಸೆತಗಾರಿಕೆಯ ರೀತಿಯು ಸಾಮಾನ್ಯವಾಗಿ ಒಂದೇ ಆಗಿರುವುದರಿಂದ, ಎಸೆತಗಾರರ ಚಟುವಟಿಕೆಯೂ ಹೆಚ್ಚಾಗಿ ಹೋಲುತ್ತದೆ. ಹೀಗೆ ಓಡುಗೆಯಲ್ಲಿ ಏನೇ ಬದಲಾವಣೆಗಳನ್ನು ಮಾಡಿಕೊಂಡರೂ ಎಸೆತಗಾರಿಕೆಯ ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತದೆ.

chest on

ಎದೆಮುಂದು

ಎದೆಬದಿಗೆ

ಎದೆಬದಿಗೆ

ಓಡುಗೆಯ ಕೊನೆಯಲ್ಲಿ ಎಸೆತಗಾರನು ಎದೆಮುಂದು (Chest on) ಅತವಾ ಎದೆಬದಿಗೆ (Side on) ಎಂಬ ಕ್ರಿಯೆಗೆ ಒಳಗಾಗುತ್ತಾನೆ. ಎದೆಮುಂದಿನ ಬಗೆಯಲ್ಲಿ ಎಸೆತಗಾರನು ಚೆಂಡನ್ನು ಎಸೆಯುವ ತುಸು ಹೊತ್ತಿಗೂ ಮೊದಲು ತನ್ನ ಹಿಂದಿನ ಕಾಲನ್ನು ನೆಲೆದ ಮೇಲಿಟ್ಟು, ಆತನ ಎದೆ ಮತ್ತು ಸೊಂಟದ ಬಾಗಗಳನ್ನು ದಾಂಡುಗಾರನೆಡೆಗೆ ಸರಿಹೊಂದುವಂತೆ ತಿರುಗಿಸಿಕೊಳ್ಳುತ್ತಾನೆ. ಎದೆಬದಿಗೆಯಲ್ಲಿ ಎಸೆತಗಾರನು ಹಿಂದಿನ ಕಾಲನ್ನು ನೆಲಕ್ಕೆ ಇಟ್ಟ ಕೂಡಲೆ ಆತನ ಎದೆ ಮತ್ತು ಸೊಂಟವನ್ನು ದಾಂಡುಗಾರನಿಗೆ ತೊಂಬತ್ತು ಡಿಗ್ರಿಯಲ್ಲಿರುವಂತೆ ತಿರುಗಿಸಿಕೊಂಡು ತನ್ನ ಮಂಡಿಯನ್ನು ಆದಶ್ಟು ನೇರವಾಗಿಸುವುದರೊಂದಿಗೆ ಮುಂದಿನ ಕಾಲನ್ನು ಗಡಿರೇಕೆಯ ಬಳಿತಂದು ಚೆಂಡನ್ನು ಬಿಡುತ್ತಾನೆ. ಇದು ಎಸೆತದ ವೇಗವನ್ನು ಹೆಚ್ಚಿಸಲು ನೆರವಾಗುತ್ತದೆ.

ವಿಶೇಶವೆಂದರೆ, ಚೆಂಡಿನ ತುದಿಬಿಡುಗೆ ಮಾಡಲು ಬಲಗಯ್ ಎಸೆತಗಾರರು ತಮ್ಮ ಎಡಗಾಲನ್ನು ಮುಂಕಾಲೂರಿಕೆಯಾಗಿ ಮತ್ತು ಬಲಗಾಲನ್ನು ಹಿಂಕಾಲೂರಿಕೆಯಾಗಿ ಬಳಸಿಕೊಂಡರೆ, ಎಡಗಯ್ ಎಸೆತಗಾರರು ತಮ್ಮ ಬಲಗಾಲನ್ನು ಮುಂಕಾಲೂರಿಕೆಯಾಗಿ ಮತ್ತು ಎಡಗಾಲನ್ನು ಹಿಂಕಾಲೂರಿಕೆಯಾಗಿ ಬಳಸಿಕೊಳ್ಳುತ್ತಾರೆ. ಬಳಿಕ ಎಸೆತಗಾರನು ಎಸೆತ ಎಸೆಯಲು ಬಳಸುವ ಕಯ್ಯನ್ನು ಅವರ ತಲೆಯ ಮೇಲೆ ತಂದು, ತಾನು ಪಿಚ್ ಮೇಲೆ ಚೆಂಡನ್ನು ಪುಟಿಸಲು ಬಯಸುವ ಕಡೆ ಎಸೆಯುತ್ತಾನೆ.

ಎಸೆತಗಾರಿಕೆಯ ಹೊತ್ತಲ್ಲಿ ತನ್ನ ಮೊಣಕೈಯನ್ನು ಬಗ್ಗಿಸಿ ಚೆಂಡನ್ನು ಎಸೆಯುವುದರಿಂದ ದಾಂಡುಗಾರ ಅತವಾ ಹುತ್ತರಿಯನ್ನು ಗುರಿಯಾಗಿಸಿಕೊಳ್ಳಲು ಸಹಾಯಕವಾಗುತ್ತದೆ. ಚೆಂಡನ್ನು ಎಸೆದ ಬಳಿಕ ಎಸೆತಗಾರನು ಹಿಂಬಾಲಿಕೆ(Follow through)ಯಲ್ಲಿ ಮುಂದುವರಿಯುತ್ತಾನೆ. ಇವುಗಳಲ್ಲಿ ಪಿಚ್‍ನ ಮೇಲೆ ಹೆಜ್ಜೆಗಳನ್ನಿರಿಸದಂತೆ ಪಿಚ್‍ನ ಪಕ್ಕಕ್ಕೆ ಹೋಗುವುದು ಮತ್ತು ಜೊತೆ ಜೊತೆಗೆ ತನ್ನ ವೇಗವನ್ನು ಕುಗ್ಗಿಸಿಕೊಳ್ಳಲು ಇನ್ನು ಕೆಲವು ಹೆಜ್ಜೆಗಳನ್ನು ತೆಗೆದು ಕೊಳ್ಳುವುದು ಮತ್ತು ದಾಂಡುಗಾರನ ಹೊಡೆತಗಳತ್ತ ಗಮನಹರಿಸುವುದೂ ಆಗಿದೆ.

ಜಗತ್ತಿನಾದ್ಯಂತ ಎಲ್ಲಾ ದಾಂಡಾಟದ ತಂಡಗಳು ಬೇರೆಯದೇ ಆದ ವೇಗ ಮತ್ತು ಎಸೆತಗಾರಿಕೆಯ ಬಗೆಯನ್ನು ಹೊಂದಿರುವ ಎಸೆತಗಾರರನ್ನು ಹೊಂದಿದೆ. ಆದರೂ ನಿಕರವಾದ ಎಸೆತಗಾರಿಕೆಯ ಚಳಕಗಳನ್ನು ಪೋಟಿಯ ಗತಿ, ಪಿಚ್‍ನ ಸ್ತಿತಿ, ಗಾಳಿಪಾಡು, ಎಸೆತಗಾರರ ಜಾಣ್ಮೆ ಸೇರಿದಂತೆ ಅನೇಕ ಅಂಶಗಳಿಂದ ನಿರ‍್ದರಿಸಲಾಗುತ್ತದೆ. ಸಾಮಾನ್ಯವಾಗಿ ಎಸೆತಗಾರಿಕೆಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ.

ಪೋಟಿಯ ಸ್ತಿತಿಯ ಆದಾರದ ಮೇಲೆ ಕೆಲವೊಮ್ಮೆ ಒಳ್ಳೆಯ ಎಸೆತಗಾರನಿಂದ ಒಂದರ ಹಿಂದೊಂದರಂತೆ ನಾಲ್ಕು-ಅಯ್ದು ಎಸೆತಗಟ್ಟು(Over)ಗಳನ್ನು ತಂಡದ ನಾಯಕ ಎದುರು ನೋಡುತ್ತಾನೆ. ಈ ಕಾರಣದಿಂದ ಪೋಟಿ ಸಾಗಿದಂತೆ ಕೊನೆಯ ಸುತ್ತುಗಳ ಎಸೆತಗಟ್ಟುಗಳನ್ನು ನಿಕರವಾದ ಜಾಗದಲ್ಲಿ ಮತ್ತು ಕ್ರಮಗಳಲ್ಲಿ ಪರಿಣಾಮಕಾರಿಯಾಗಿ ನಡೆಸಲು ಎಸೆತಗಾರನಿಗೆ ಕಶ್ಟವಾಗಬಹುದು. ಇಂತಹ ಹೊತ್ತಲ್ಲಿ ಎಸೆತಗಾರಿಕೆಯ ಚಳಕಗಳು ಎಸೆತಗಾರನಿಗೆ ಕಗ್ಗಂಟಾಗಿಯೇ ಉಳಿಯುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: bbc.co, wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: