ಮೋಸಹೋದವರು
– ರತೀಶ ರತ್ನಾಕರ.
ಆಗಶ್ಟೇ ಮಳೆ ಬಂದು ನಿಂತಿತ್ತು. ಹೆಬ್ಬೂರಿನ ಚಿಕ್ಕ ರೈಲು ನಿಲ್ದಾಣದಲ್ಲಿ ಅಲ್ಲಲ್ಲಿ ನಿಂತಿದ್ದ ನೀರನ್ನು ಪಚ್ ಪಚ್ ಎಂದು ತುಳಿಯುತ್ತ ಗಡಿಬಿಡಿಯಲ್ಲಿ ಮಂದಿ ಓಡಾಡುತ್ತಿದ್ದರು. ಆ ಮಂದಿಯ ನಡುವೆ ನುಗ್ಗಿಕೊಂಡು ಕೊನೆಗೂ ನಾನು ಹೋಗಬೇಕಿದ್ದ ರೈಲಿಗೆ ಹತ್ತಿದೆ. ನಾನು ಹತ್ತಿದ ಬೋಗಿಯ ಒಳಗೆ ಬೆರಳಣಿಕೆಯಶ್ಟು ಮಂದಿ ಕೂತಿದ್ದರು, ಕೂರಲು ಸಾಕಶ್ಟು ಜಾಗವಿತ್ತು. ಬಸ್ಸಿನಲ್ಲಾಗಲಿ, ರೈಲಿನಲ್ಲಾಗಲಿ ಕಿಟಕಿಯ ಬದಿಯಲ್ಲಿ ಕೂರುವುದು ನನಗೆ ತುಂಬಾ ಇಶ್ಟ. ಸಾಗುತ್ತಿರುವ ಬಂಡಿಯ ಕಿಟಕಿಯಿಂದ ಕಾಣುವ ಜಗತ್ತೇ ಬೇರೆ. ಅಲ್ಲದೇ ಹೊರಗಿನ ತಂಗಾಳಿ ಬೀಸುವಾಗ ಮನಸ್ಸು ಮುದಗೊಂಡು ಹಲವು ಬಾವನೆಗಳು ಅರಳುತ್ತವೆ. ಅಂತೆಯೇ ಒಂದು ಕಿಟಕಿಯ ಬದಿಯನ್ನು ಹಿಡಿದು ಕುಳಿತೆ. ಇನ್ನೇನು ರೈಲು ಹೊರಡಬೇಕು ಎನ್ನುವಶ್ಟರಲ್ಲಿ ಒಂದು ಅಜ್ಜಿ ಹಾಗು ಸುಮಾರು ಎಂಟು ವರುಶ ವಯಸ್ಸಿರಬಹುದಾದ ಹುಡುಗಿ ಅವಸರದಲ್ಲಿ ಹತ್ತಿ ಬಂದು ಎದುರಿನ ಜಾಗದಲ್ಲಿ ಕುಳಿತರು.
ಅಜ್ಜಿಯ ಜೊತೆ ಇದ್ದ ಹುಡುಗಿ ಮೊಮ್ಮಗಳಿರಬೇಕೆಂದು ಎನಿಸಿತು. ಅಜ್ಜಿಯ ಹಣ್ಣಾದ ಕೂದಲು ಆಕೆಯ ಬದುಕು ಸಾಗಿದ ದೂರವನ್ನು ತೋರಿಸುತ್ತಿತ್ತು. ಆ ಕೂದಲಿಗೆ ಚೆನ್ನಾಗಿ ಎಣ್ಣೆಹಾಕಿ ಬಾಚಿ, ತುರುಬನ್ನು ಕಟ್ಟಿದ್ದರು. ಕೊಂಚ ಬಣ್ಣ ಮಾಸಿದ ಸೀರೆ ಆದರೆ ಸೀರೆಯಲ್ಲಿ ಕೊಳೆ ಕಾಣುತ್ತಿರಲಿಲ್ಲ. ಕುತ್ತಿಗೆಯಲ್ಲೊಂದು ಕರಿದಾರ ಮತ್ತು ಅದರಲ್ಲಿ ಒಂದು ತಾಮ್ರದ ತಾಯತ ನೇತಾಡುತ್ತಿತ್ತು. ಅಜ್ಜಿಯ ಬಲಗೈ ಮುಂಗೈ ಮೇಲೆ ಒಂದು ಹಚ್ಚೆ ಇತ್ತು, ತುಂಬಾ ಹಳೆಯ ಹಚ್ಚೆಯಾದ್ದರಿಂದ ಅದು ಏನೆಂದು ಸರಿಯಾಗಿ ತಿಳಿಯುತ್ತಿರಲಿಲ್ಲ. ಕಾಲಿನಲ್ಲಿ ಮೆಟ್ಟಿರಲಿಲ್ಲ, ಮೆಟ್ಟನ್ನು ಹಾಕಿಕೊಂಡು ಓಡಾಡಿದ ಕಾಲಿನ ಹಾಗೆ ಅದು ಕಾಣಲೂ ಇಲ್ಲ. ಒಡಕಿನ ಕಾಲುಗಳು, ಒರಟಾಗಿದ್ದ ಕೈಗಳು ಆಕೆ ಬದುಕನ್ನು ಸವೆಸಿದ ಬಗೆಯನ್ನು ತೋರಿಸುತ್ತಿದ್ದವು. ಬಿಳಿ-ಹಸಿರು ಬಣ್ಣದ ಉದ್ದುದ್ದ ಪಟ್ಟಿಗಳಿರುವ, ಪ್ಲಾಸ್ಟಿಕ್ ನೂಲಿನಿಂದ ನೇಯ್ದಿರುವ ಚೀಲವೊಂದು ಆಕೆಯ ಕೈಯಲ್ಲಿತ್ತು, ಅದರೊಳಗೆ ಏನಿದೆ ಎಂಬುದರ ಬಗ್ಗೆ ನನಗೆ ಅಶ್ಟು ಕುತೂಹಲವಿರಲಿಲ್ಲ.
ಇನ್ನು ಜೊತೆಗಿದ್ದ ಪುಟ್ಟ ಹುಡುಗಿ ಆಕೆಯ ಮೊಮ್ಮಗಳು ಎಂದು ಅವರ ಮಾತುಕತೆಯಿಂದ ತಿಳಿಯುತ್ತಿತ್ತು. ನೇರಳೆ ಬಣ್ಣದ ಪಟ್ಟಿಯಲ್ಲಿ ಕಟ್ಟಿದ ಎರೆಡು ಪುಟ್ಟ ಜುಟ್ಟುಗಳು, ಕಿವಿಯಲ್ಲಿ ನೇತಾಡುತ್ತಿದ್ದ ಪ್ಲಾಸ್ಟಿಕ್ ಲೋಲಾಕು, ಬಣ್ಣದ ಕೈಬಳೆ, ಕಡುಕೆಂಪು ಬಣ್ಣದ ಮೊಣಕಾಲು ಮುಚ್ಚುವ ಲಂಗ, ಅದಕ್ಕೆ ಕೆಂಪು ಮತ್ತು ಬಿಳಿ ಚಚ್ಚೌಕಗಳಿದ್ದ ಅಂಗಿ. ಅವಳ ಬಟ್ಟೆ ಸ್ಕೂಲಿನ ಒಂತರದ ಉಡುಪು ಎಂದು ನೋಡಿದರೆ ಗೊತ್ತಾಗುತ್ತಿತ್ತು.
ಯಾವ ತಡವೂ ಮಾಡದೆ ಸರಿಯಾದ ಹೊತ್ತಿಗೆ ರೈಲು ಹೊರಟಿತ್ತು. ನನಗೋ ಜೊತೆಯಲಿ ಮಾತನಾಡಲು ಯಾರಿರಲಿಲ್ಲ. ಮಳೆಗೆ ಹಸಿಯಾಗಿದ್ದ ನೆಲವನ್ನೊಮ್ಮೆ ಹೊರಗೆ ನೋಡುವುದು, ಅಜ್ಜಿ ಮೊಮ್ಮಗಳ ಮಾತನ್ನು ಅಲ್ಲಲ್ಲಿ ಕೇಳುವುದೇ ನನ್ನ ಕೆಲಸವಾಗಿತ್ತು.
“ಊರಿಗೆ ಹೋದ ಮ್ಯಾಲೆ ನಂಗೆ ಜರಿ ಇರೋ ಲಂಗ ಕೊಡ್ಸೆ ಕೊಡ್ಸಿತಿಯಲ್ಲ ನೀನು.”
“ಆಯ್ತು ಕಣವ್ವ, ನಿಂಗೆ ಲಂಗಾ, ಪುಟ್ಟಣ್ಣನ ಕೈಗೆ ಮಣಿಸರ, ಕಾಲಿಗೆ ಕಡಗ, ಆಮ್ಯಾಕೆ ನಿಮ್ಮಮ್ಮಂಗೆ ರವಿಕೆ ತುಂಡುನ್ನು ತಗಳನಂತೆ.”
“ಅಜ್ಜಿ, ಪುಟ್ಟಣ್ಣ… ಬಾಯಿಂದ ‘ಬುರ‍್ರ್’ ಅಂತ ಎಂಜ್ಲು ಹಾರಸ್ಕಂಡು ಹ್ಹಿ ಹ್ಹಿ ಹ್ಹಿ ಅಂತ ನಗ್ತಾನೆ ಗೊತ್ತಾ?” – ಅಜ್ಜಿಗೆ ತಿಳಿಯದ ಯಾವುದೋ ದೊಡ್ಡ ಸುದ್ದಿಯನ್ನು ತಿಳಿಸಿದೆ ಎಂಬ ಹೆಮ್ಮೆಯಲ್ಲಿ ಮೊಮ್ಮಗಳು ಹೇಳ್ತಾ ಇದ್ಲು.
ಆ ಮಾತುಕತೆ ನಡುವೆಯೇ ಅವರ ಕಡೆ ನೋಡಿದೆ. ಅಜ್ಜಿಯ ಕೈಯಲ್ಲಿ ಮುದುಡಿದ ಕೈಚೀಲವಿತ್ತು. ಕೆಲವು ಹತ್ತು ಮತ್ತು ಅಯ್ವತ್ತು ರೂಪಾಯಿಗಳ ನೋಟುಗಳನ್ನು ಸರಿಪಡಿಸಿಕೊಂಡು ಕೈಚೀಲದೊಳಗೆ ಇಡುತ್ತಿತ್ತು. ಆ ನೋಟುಗಳ ನಡುವೆಯೇ ಇದ್ದ ತನ್ನ ಪ್ರಯಾಣದ ರೈಲು ಚೀಟಿಯನ್ನು ತೆಗೆದುಕೊಂಡು ಒಮ್ಮೆ ದಿಟ್ಟಿಸಿ ನೋಡಿತು. ಪಕ್ಕದಲ್ಲಿದ್ದ ಮೊಮ್ಮಗಳು, “ನಾನೂ ವಸಿ ನೋಡ್ತಿನಿ” ಅಂತ ಅಜ್ಜಿಯ ಕೈಯಿಂದ ಚೀಟಿ ಕಿತ್ಕೊಂಡು, ತಿರುಗಿಸಿ ಮುರುಗಿಸಿ ನೋಡಿತು. ಚೀಟಿಯನ್ನು ನೋಡುತ್ತ ಕಣ್ಣನ್ನು ಪಿಳಪಿಳನೆ ಬಿಡುತ್ತಿತ್ತು. “ಏಯ್… ಕೊಡು ಮಗ ಇಲ್ಲಿ, ಕಳದು ಗಿಳದು ಹಾಕಿಯಾ. ನಾವು ಇಳಿಯೋ ತನಕ ಚೀಟಿ ಕಳಿದಂಗೆ ಇಟ್ಕಬೇಕು, ಕೊಡಿಲ್ಲಿ.” ಅಂತ ಅವಳ ಕೈಯಿಂದ ಚೀಟಿ ತೆಗೆದುಕೊಂಡು, ನೋಟುಗಳ ನಡುವೆ ಜೋಪಾನವಾಗಿ ಸೇರಿಸಿ, ಕೈಚೀಲವನ್ನು ಮುದುರಿ ತನ್ನ ಸೆರಗಿನ ಹಿಂಬದಿಯ ರವಿಕೆಯೊಳಗೆ ಸೇರಿಸಿತು.
ಮೊಮ್ಮಗಳಾಗಲಿ, ಅಜ್ಜಿಯಾಗಲಿ ನನ್ನ ಕಡೆ ನೋಡಿದರೆ ನಾನು ಕಣ್ಣು ತಿರುಗಿಸಿ ಹೊರಗೆ ನೋಡುವುದು. ಇಲ್ಲವಾದರೆ ಅವರ ಕಡೆ ನೋಡುವುದು ಮತ್ತು ಅವರ ಮಾತನ್ನು ಕೇಳುವುದು ನನ್ನ ಆಟವಾಗಿತ್ತು. ಮುಗ್ದ ಮನಸ್ಸಿನ ಮೊಮ್ಮಗಳ ಕೇಳ್ವಿಗಳು, ಅದಕ್ಕೆ ಅಶ್ಟೇ ತಾಳ್ಮೆಯಿಂದ ಮರುನುಡಿಯುತ್ತಿದ್ದ ಅಜ್ಜಿಯ ಮಾತುಗಳು, ಇಬ್ಬರ ಮಾತುಕತೆಯು ಹುಸಿಯನರಿಯದ ಮಕ್ಕಳ ಮಾತುಕತೆಯಂತೆ ನನಗನಿಸುತ್ತಿತ್ತು. ತಣ್ಣನೆಯ ಗಾಳಿ ಹೆಚ್ಚಾಗಿಯೇ ಬೀಸುತ್ತಿತ್ತು, ರೈಲಿನ ಓಟಕ್ಕೆ, ಚುಕುಬುಕು ಜೋಗುಳಕ್ಕೆ ನಿದ್ದೆಯ ಮಂಪರು ಹತ್ತಿತು. ಅದು ಯಾವಾಗ ನಿದ್ದೆಗೆ ಜಾರಿದೆ ಎಂದು ನೆನಪಿಲ್ಲ.
“ಹೊಟ್ಟೆಗೆ ಅನ್ನ ತಿನ್ನೋರು ಸಾಮಿ ನಾವು, ಸಗಣಿ ತಿನ್ನೋ ಕೆಲಸ ನಾವ್ಯಾಕೆ ಮಾಡೋಣ…”
“ನಿನ್ನಂತೋರನ್ನ ನನ್ನ ಸರ‍್ವಿಸ್‍ನಲ್ಲಿ ಎಶ್ಟೊಂದು ನೋಡಿಲ್ಲ. ಸುಮ್ನೆ ನಾಟಕ ಮಾಡಬೇಡ ಕಣಮ್ಮ ನೀನು…”
ತಟ್ ಅಂತ ಎಚ್ಚರ ಆಯ್ತು. ಮೇಲಿನ ಎರೆಡು ಮಾತುಗಳು ಕಿವಿಗೆ ಸ್ವಲ್ಪ ಜೋರಾಗಿಯೇ ಬಿತ್ತು, ಅದಕ್ಕೆ ಎಚ್ಚರ ಆಯ್ತು ಅನ್ಸುತ್ತೆ. ಕಣ್ಣುಜ್ಜಿಕೊಂಡು ನೋಡಿದರೆ ಕರಿಕೋಟು ಹಾಕ್ಕೊಂಡು, ಕಾಕಿ ರಟ್ಟು ಹಿಡಿದ ರೈಲಿನ ಟಿಸಿ ಅಜ್ಜಿ ಜೊತೆ ಜೋರಾಗಿಯೇ ಮಾತನಾಡ್ತಾ ಇದ್ರು. ಒಮ್ಮೆ ಅಜ್ಜಿ ಕಡೆ ನೋಡಿದೆ, ಆಕೆ ಟಿಸಿಯ ಕಡೆಗೇ ನೋಡುತ್ತ ಆತನಿಗೆ ಏನನ್ನೋ ಒಪ್ಪಿಸಲು ತಡಕಾಡುತ್ತಿರುವ ಹಾಗೆ ಕಾಣುತಿತ್ತು. ಮೊಮ್ಮಗಳ ಕಣ್ಣಲ್ಲಿ ಹೆದರಿಕೆ, ಅಜ್ಜಿಗೆ ಒತ್ತಿಕೊಂಡು ಕುಳಿತು, ಒಂದು ಕೈಯಿಂದ ಅಜ್ಜಿಯ ಸೀರೆಯನ್ನು ಗಟ್ಟಿಯಾಗಿ ಮುದುಡಿ ಹಿಡಿದುಕೊಂಡಿದ್ದಳು. ‘ಒಹ್ ಹೋ… ಮೊಮ್ಮಗಳೆಲ್ಲೋ ಮತ್ತೆ ಅಜ್ಜಿಯಿಂದ ಚೀಟಿ ಕಿತ್ಕೊಂಡು ಆಟ ಆಡ್ತಾ ಕಳೆದಿರಬೇಕು, ಆಮೇಲೆ ಟಿಸಿ ಬಂದು ಚೀಟಿ ಕೇಳಿದ್ದಾರೆ, ಆದ್ರೆ ಚೀಟಿ ಇಲ್ಲ. ಪಾಪ, ಸುಮ್ನೆ ಸಿಕ್ಕಿಹಾಕಿಕೊಂಡ್ರು ಅನ್ಸುತ್ತೆ.’ ಎಂದು ನನ್ನ ತಲೆ ಲೆಕ್ಕಾಚಾರ ಹಾಕಿತು.
ಆದರೆ ನನ್ನ ಲೆಕ್ಕಾಚಾರ ಕೂಡಲೆ ಬುಡಮೇಲಾಯಿತು. ಟಿಸಿಯ ಕೈಯಲ್ಲಿ ಅಜ್ಜಿಯ ಚೀಟಿ ಇತ್ತು.
“ನೋಡಮ್ಮ, ಕಡೆದಾಗಿ ಹೇಳ್ತಾ ಇದಿನಿ, ನೀನು ಚೀಟಿ ತಗೆದುಕೊಂಡಿರೋದು ಹೆಬ್ಬೂರಿಂದ ದೊಡ್ಡಮಾದೂರಿಗೆ. ನೀನು ನೋಡುದ್ರೆ ದಂಬದೂರಿಗೆ ಹೋಗ್ತಾ ಇರೋದು ಅಂತಿಯಾ. ಈ ರೈಲು ಈಗಾಗ್ಲೆ ದೊಡ್ಡಮಾದೂರು ದಾಟಿ ಮುಂದೆ ಬಂದಾಗಿದೆ, ದಂಬದೂರು ಬರೋಕೆ ಇನ್ನೂ ಅಯ್ದು ಸ್ಟೇಶನ್ ಮುಂದೆ ಹೋಗಬೇಕು. ದೊಡ್ಡಮಾದೂರಿಂದ ದಂಬದೂರಿಗೆ ನೀನು ಚೀಟಿ ತಗೊಂಡಿಲ್ಲ. ಅದಕ್ಕೆ ದಂಡ ಕಟ್ಲೇ ಬೇಕಾಗುತ್ತೆ. ನಂಗೆ ನಿನ್ನ ಹತ್ರ ಜಗಳ ಮಾಡ್ಕೊಂಡು ನಿಲ್ಲೋಕೆ ಹೊತ್ತಿಲ್ಲ, ಬೇಗ ಇನ್ನೂರ ಅಯ್ವತ್ತು ರೂಪಾಯಿ ತೆಗಿ ಅಶ್ಟೇ…”
ನನಗೆ ಈಗ ಸುದ್ದಿ ತಿಳಿಯಾಯ್ತು, ಅಜ್ಜಿಗೂ ಟಿಸಿಗೂ ನಡೆಯುತ್ತಿರುವ ಜಟಾಪಟಿ ಚೀಟಿ ಕಳ್ಕೊಂಡಿದ್ದಕ್ಕೆ ಅಲ್ಲ ಚೀಟಿ ತಪ್ಪಾಗಿ ತಗೆದುಕೊಂಡಿದ್ದಕ್ಕೆ. ‘ಅದು ಹೋಗ್ಲಿ ಈ ಅಜ್ಜಿ ಯಾಕಪ್ಪ ಸುಮ್ನೆ ಚೀಟಿ ತಗೋಳೋದು ಒಂದು ಕಡೆ, ಇಳಿಯೋದ್ ಇನ್ನೊಂದು ಕಡೆ ಮಾಡುತ್ತೆ.’ ಅಂತ ನಾನೇ ಅಂದು ಕೊಳ್ತಾ ಇದ್ದೆ.
“ದಿನಕ್ಕೆ ಸಾವರ ಮಂದಿನ ನೋಡ್ತಿವಿ ನಾವು, ನಿಮ್ಮಂತೋರು ಒಂದಲ್ಲ ಒಂದು ಬೋಗಿಲಿ ಇದ್ದೇ ಇರ‍್ತೀರಾ. ಕೆಲವರ ಹತ್ರ ಚೀಟಿನೇ ಇರಲ್ಲ, ಇನ್ನು ಕೆಲವರು ನಿನ್ನ ಹಂಗೆ ಕಮ್ಮಿ ದುಡ್ಡು ಕೊಟ್ಟು, ಹತ್ರದ್ ಸ್ಟೇಶನ್ ಗೆ ಚೀಟಿ ತಗೊಂಡು ಇನ್ನೆಲ್ಲೋ ದೂರದ ಸ್ಟೇಶನಲ್ಲಿ ಇಳಿಯೋದು.” ಈ ಮಾತುಕತೆ ನಡೆಯುತ್ತಾ ಎಶ್ಟು ಹೊತ್ತಾಯಿತೋ ಗೊತ್ತಿಲ್ಲ. ಟಿಸಿ ಮಾತ್ರ ಅಜ್ಜಿಗೆ ಜೋರಾಗಿಯೇ ದಬಾಯಿಸುತ್ತಾ ಇದ್ದ. ನನಗ್ಯಾಕೋ ಅಜ್ಜಿ ಮುಕ ನೋಡಿದರೆ ಟಿಸಿ ಹೇಳಿದ ಕೆಲಸ ಮಾಡೋರು ಅಂತ ಅನಿಸಲಿಲ್ಲ.
ಹಾಗಂತ ಅಜ್ಜಿನೂ ಮಾತಿಗೆ ಬಿಟ್ಟುಕೊಡ್ತಾ ಇರಲಿಲ್ಲ. –
“ಆಯ್ಯೋ, ನಾನಿನ್ನ ಎಶ್ಟು ಸಲ ಹೇಳ್ಲಿ, ನಾನು ಚೀಟಿ ಕೇಳಿದ್ದು ದಂಬದೂರಿಗೇನೆ, ಆ ಚೀಟಿ ಕೊಡೋ ವಯ್ಯ ಅದ್ಯಾವುದೋ ದೊಡ್ಮಾದೂರಿಗೆ ಕೊಟ್ರೆ ನಾನೇನಪ್ಪ ಮಾಡ್ಲಿ. ರೇಲ್ ಬೇರೆ ಹೊರಡಂಗಿತ್ತು, ಅದ್ಕೆಯ ಚೀಟಿ ತಗಂಡು ಬಿರ‍್ರನೆ ಬಂದ್ವು ಕಣಯ್ಯ…”
“ಅಲ್ಲ ಕಣಮ್ಮ… ದಂಬದೂರಿಗೆ ಜಾಸ್ತಿ ದುಡ್ಡು, ದೊಡ್ಡಮಾದೂರಿಗೆ ಕಡಿಮೆ ದುಡ್ಡು. ಹಂಗಾದ್ರೆ, ಚೀಟಿಕೊಡೋನು ನಿನ್ನ ಹತ್ರ ಜಾಸ್ತಿ ದುಡ್ಡು ತೆಗೊಂಡು ಕಮ್ಮಿ ದುಡ್ದಿನ ಚೀಟಿ ಕೊಟ್ನಾ? ನೀನು ಹೇಳೋ ಸುಳ್ಳಿನ ಕತೆನ ನಾನು ನಂಬಬೇಕಾ?”
“ನಾನು ದಂಬದೂರು ಅಂತ ಕೇಳ್ದೆ, ಅವನು ಚೀಟಿ ಕೊಟ್ಟ. ಅದ್ರಲ್ಲಿ ದುಡ್ಡು ಎಶ್ಟು ಬರಿದಿತ್ತು ಅಂತ ನೋಡಿದ ಮೇಲೆ ನಾನು ಆವಯ್ಯಂಗೆ ಅಶ್ಟು ದುಡ್ಡು ಕೊಟ್ಟಿದ್ದು. ನಾನು ಸಂತೆಲಿ ಕಾರ ಬಟಾಣಿ ಯಾಪಾರ ಮಾಡೋಳು ಕಣಪ್ಪ. ನಂಗು ಲೆಕ್ಕ ಬರ‍್ತದೆ. ಅಪರೂಪಕ್ಕೆ ರೇಲಿಗ್ ಹತ್ತೋ ನಮ್ಗೆ ಈ ಊರಿಗ್ ಈಟೇ ಇರ‍್ತದೆ ಅಂತ ಗ್ಯಾಪ್ನ ಇರ‍್ತದ?”
“ಸರಿ ಹೋಯ್ತು, ನೀನೆ ಸಿಕ್ಕಿ ಹಾಕಿಕೊಂಡ್ಯಲ್ಲ. ಚೀಟಿಲಿ ದುಡ್ಡು ಎಶ್ಟು ಬರೆದಿದೆ ಅಂತ ನೋಡ್ದೋಳಿಗೆ, ಚೀಟಿನಾ ಯಾವೂರಿಗೆ ಕೊಟ್ಟಿದಾರೆ ಅಂತ ನೋಡಿಲ್ವ ನೀನು. ಕಳ್ಳಾಟ ಎಲ್ಲಾ ಸಾಕು, ತೆಗಿ ತೆಗಿ ಇನ್ನೂರ್ ಅಯ್ವತ್ತು ದಂಡ ತೆಗಿ.”
“ದುಡುದು ತಿಂದಿದ್ದೆ ಮಯ್ಗೆ ಹತ್ತಲ್ಲ, ಇನ್ನ ಹೊಡುದು ತಿಂದಿದ್ದು ಹತ್ತುತ್ತನಪ್ಪ. ಆ ಚೀಟಿನಾಗೆ ಯಾವ ಊರು ಬರ‍್ದಿದ್ರು ಅಂತ ನಂಗೆ ಗೊತ್ತಾಗ್ನಿಲ್ಲ. ಕಳ್ಳಾಟ ಎಲ್ಲಾ ಕಂಡೋರಲ್ಲ ನಾವು. ನಿಯತ್ತಿಗೆ ಬಾಳ್ಮೆ ಮಾಡೋರು ನಾವು.” – ಟಿಸಿಯ ಮಾತುಗಳಿಂದ ಅಜ್ಜಿಯ ತನ್ನತನಕ್ಕೆ ಪೆಟ್ಟು ಬಿತ್ತು ಅಂತ ಅನಿಸ್ತು. ಅಜ್ಜಿಗೂ ಕೊಂಚ ಸಿಟ್ಟು ಹೆಚ್ಚಾಯಿತು. ಟಿಸಿಯು ತನ್ನ ಪಟ್ಟನ್ನು ಬಿಡದವನ ಹಾಗೆ ಕಾಣಿಸಿತು. ಎಳೆಯ ಕಣ್ಣುಗಳನ್ನು ಪಿಳಪಿಳನೆ ಬಿಡುತ್ತಾ ಎಲ್ಲವನ್ನು ನೋಡುತ್ತಿತ್ತು ಮೊಮ್ಮಗಳು.
“ನೋಡಮ್ಮ, ಇನ್ನು ಹೆಚ್ಗೆ ಮಾತಾಡ್ದೆ ಅಂದ್ರೆ ಮುಂದಿನ ಸ್ಟೇಶನ್ ಅಲ್ಲಿ ಪೋಲಿಸ್ ಇರ‍್ತಾರೆ. ನೀನು ಅವರ ಹತ್ರಾನೆ ನಿನ್ನ ಮಾತುಕತೆ ಮಾಡ್ಕ.” – ಟಿಸಿ ತನ್ನ ಕೊನೆಯ ತೀರ‍್ಮಾನದಂತೆ ಹೇಳಿದ.
“ಸಂತೆ ಮಾಳದಲ್ಲಿ ನೆಮ್ಮದಿಲಿ ಯಾಪಾರ ಮಾಡಕೆ ಬಿಡದೆ ಕಿತ್ಕಂಡು ತಿನ್ನೋ ಪೋಲಿಸ್ನೋರು, ಇಲ್ಗೂ ಬಂದು ಕಿತ್ಕಂಡು ಹೋಯ್ತಾರಾ… ಅಯ್ಯೋ ನಮ್ಮಪ್ಪನೆ, ಎಲ್ಲಿಗೆ ಹೋದ್ರು ಕಾಟ ತಪ್ಪಲಿಲ್ಲ.” -ಪೋಲಿಸರ ಬಳಿ ಹೋದ್ರೆ ನೂರಂಟು ತಕರಾರು, ಮಾಡದ ತಪ್ಪಿಗೆ ಮತ್ತೆಶ್ಟು ಹೆಚ್ಚು ದಂಡ ತೆರಬೇಕೋ ಏನೋ ಎಂದು ಅಜ್ಜಿ ಯೋಚಿಸಿತು. ರವಿಕೆಯೊಳಗಿನ ಕೈಚೀಲ ಹೊರಬಂತು, ಹತ್ತು-ಅಯ್ವತ್ತರ ನೋಟನ್ನು ಎಣಿಸಿ ಟಿಸಿಗೆ ಕೊಟ್ಟಳು. ದೊಡ್ಡದ್ದೇನೋ ಸಾದಿಸಿದಂತೆ ಹಣ ಪಡೆದು ರಸೀತಿಯನ್ನು ಹರಿದುಕೊಟ್ಟು ಟಿಸಿಯು ಮುಂದೆ ಹೋದ. ರಸೀತಿಯನ್ನು ಮಡಚಿ ನೋಟುಗಳ ನಡುವೆ ಸೇರಿಸಲು ಅಜ್ಜಿ ಮುಂದಾದಳು, ಆದರೆ ಅಲ್ಲಿ ಮೊದಲಿಗಿಂತ ತೀರಾ ಕಡಿಮೆ ನೋಟುಗಳು ಕಂಡವು. ಅಯ್ವತ್ತರ ಒಂದೋ ಎರೆಡೋ ನೋಟುಗಳು ಇದ್ದವು. ಜೋರಾದ ನಿಟ್ಟುಸಿರು ಬಿಟ್ಟು ಕೈಚೀಲ ಮುದುರಿ ಮತ್ತೆ ರವಿಕೆಯೊಳಗೆ ಸೇರಿಸಿದಳು ಅಜ್ಜಿ.
“ಇವತ್ತು ಯಾರ ಮಕ ನೋಡುದ್ನೋ ಏನೋ. ಉಂಡಿದ್ದಿಲ್ಲ, ತಿಂದಿದ್ದಿಲ್ಲ ಇನ್ನೂರು ಅಯ್ವತ್ತು ರೂಪಾಯಿ ಹೋಯ್ತು. ಒಂದು-ಎರಡು ರೂಪಾಯಿಗೆ ಕಾರಾ ಬಟಾಣಿ ಮಾರಿ, ಹೊಟ್ಟೆ-ಬಟ್ಟೆ ಕಟ್ಟಿ ಕೊಡಿಟ್ಟ ದುಡ್ಡು ಹೋಯ್ತು. ನನ್ನ ದರಿದ್ರಕ್ಕೆ, ಮಗಳ ಬಾಣಂತನಕ್ಕೆ ಮನೆಗೇ ಕರ‍್ಸಿ ನೋಡಕೆ ಆಗ್ನಿಲ್ಲ. ಅಲ್ಲಿಗೇ ಹೋಗಿ ಹುಟ್ಟಿದ ಕೂಸಿಗೆ ಏನಾದ್ರು ಕೊಡ್ಸೋಣ, ಮಗಳಿಗೆ ಏನಾದ್ರು ತಿನ್ಸೋಣ ಅಂದ್ರೆ ಅದ್ಕೂ ಕಲ್ಲುಬಿತ್ತು. ಓದಾಕೆ ಬರೆಯಾಕೆ ನಮ್ಗೆ ಜಾಸ್ತಿ ತಿಳಿಯಕ್ಕಿಲ್ಲ, ಆದ್ರೂ ಬಟಾಣಿ ಕಟ್ಟೊ ಹಾಳೆನಾ ವಸಿ ಓದ್ತಿನಿ, ಆ ಚೀಟಿಲಿ ಪಾರಿನ್ ಬಾಸೆಲಿ ಬರುದ್ರೆ ನಾನು ಹೆಂಗೆ ಓದ್ಲಿ? ಬಾರೀ ಓದ್ಕೊಂಡು, ಕರಿಕೋಟು ಹಾಕ್ಕೊಂಡಿರೋ ಆ ಯಪ್ಪಂಗೆ ಅದೂ ಗೊತ್ತಾಗಕಿಲ್ವ? ಇನ್ನು ಆ ದುಡ್ಡು ದುಡಿಯಾಕೆ ನಾನು ಎಶ್ಟು ಬಿಸಿಲು ಕಾಯಬೇಕೋ, ಎಶ್ಟು ಹೊಟ್ಟೆ-ಬಟ್ಟೆ ಕಟ್ಟಬೇಕೋ…”
ದೊಡ್ಡದ್ದನ್ನು ಕಳೆದುಕೊಂಡ ದುಗುಡ ಅಜ್ಜಿಯ ಮಾತುಗಳಲ್ಲಿತ್ತು. ತನ್ನ ಜರಿ ಲಂಗದ ಕನಸಿಗೆ ಬೆಂಕಿ ಬಿತ್ತೇನೋ ಎಂಬ ಅರಿವು ಮೊಮ್ಮಗಳಿಗೆ ಆದಂತಿತ್ತು. ಜರಿ ಲಂಗ, ಮಣಿಸರ, ಕಾಲಿನ ಕಡಗ, ರವಿಕೆ ತುಂಡು, ತಿಂಡಿ ತಿನಿಸು ಎಲ್ಲದಕ್ಕಿಂತ ಮಿಗಿಲಾಗಿ ಅಜ್ಜಿಯ ಬಯಕೆ ಮತ್ತು ದುಡಿಮೆಯ ಕೂಡಿಕೆಗಳು ದಂಡದ ಚೀಟಿಯಾಗಿತ್ತು. ಒಮ್ಮೆ ನನ್ನ ಚೀಟಿಯನ್ನು ತೆಗೆದು ನೋಡಿದೆ, ಹೌದು, ಅಜ್ಜಿ ಅರಿಯುವ ನುಡಿಯಲ್ಲಿ ಅಲ್ಲಿ ಏನೂ ಇರಲಿಲ್ಲ! ಅಜ್ಜಿಯ ಎದೆಯ ಗುಡುಗಿಗೆ ಹೊರಗೆ ಹನಿ ಬೀಳತೊಡಗಿತು. ಈ ಬಾರಿ ಮಳೆ ಜೋರಾಗಿಯೇ ಬಿತ್ತು, ಬೀಳುವ ಮಳೆಯನ್ನಾಗಲಿ ಅಜ್ಜಿಗಾದ ಅನ್ಯಾಯವನ್ನಾಗಲಿ ಅಲ್ಲಿ ಯಾರೂ ಕೇಳುವರು ಇರಲಿಲ್ಲ, ನಾನು ಕೂಡ!
(ಚಿತ್ರ ಸೆಲೆ: flicker.com)
Konege kannu odde aaytu. Chennagi bardiddira…