ಸುಗ್ಗಿಯ ಹಿಗ್ಗಿನ ಸಂಕ್ರಾಂತಿ
ಇಂದು ನಮ್ಮ ನಾಡಿನ ಸುಗ್ಗಿ, ಮಕರ ಸಂಕ್ರಾಂತಿ ಎಂಬ ಸುಗ್ಗಿಯ ಹಿಗ್ಗಿನ ಹಬ್ಬ. ಹೆಂಗೆಳೆಯರು ಮೊಗ್ಗಿನ ಜಡೆ ಹಾಕಿಕೊಂಡು, ಹಿರಿ ಹಿಗ್ಗಿದ ಹಿರಿಯರು, ಹೈದರುಗಳೆಲ್ಲ ಹೊಸಬಟ್ಟೆಯುಟ್ಟು, ನೆಂಟರು ಮತ್ತು ಗೆಳಯರ ಮನೆಮನೆಗೆ ತೆರಳಿ ಕಬ್ಬಿನ ತುಂಡಿನ ಜೊತೆ ಎಳ್ಳು ಬೀರುವುದು ಹೆಚ್ಚಿನ ವಾಡಿಕೆ. ಗದ್ದೆಯ ಪೈರಿನ ಕದಿರನ್ನು ಮನೆ ಬಾಗಿಲಿಗೆ ಕಟ್ಟುವುದು, ಹೊಸ ಅಕ್ಕಿಯಲ್ಲಿ ತಿಂಡಿ ತಿನಿಸುಗಳನ್ನು ಮಾಡುವುದು, ಆರಂಬಕ್ಕೆ ನೆರವಾದ ದನಕರುಗಳನ್ನು ಮತ್ತು ನಗ, ನೇಗಿಲುಗಳನ್ನು ಪೂಜೆ ಮಾಡಿ ಕಿಚ್ಚು ಹಾಯಿಸುವುದು, ಇವು ಹಬ್ಬವನ್ನು ಕೊಂಡಾಡುವ ಕೆಲಬಗೆಗಳು.
ಮಾಗಿಯ ಚಳಿಗೆ ಮುದುಡಿದ ಮನಕ್ಕೆ ಮುದ, ಸಂತಸ ನೀಡುವ ಈ ಹಬ್ಬ ಮಕರ ಸಂಕ್ರಾಂತಿ. ಜನವರಿ ತಿಂಗಳ ಕೊರೆಯುವ ಚಳಿಯಲ್ಲಿ ಆಚರಿಸಲ್ಪಡುವ ಸಂಕ್ರಾಂತಿ ಎಂದರೆ ಎಲ್ಲೆಡೆ ಬಳಕೆಯಲ್ಲಿರುವ ಸುಗ್ಗಿ ಹಬ್ಬ.ಸಂಕ್ರಾಂತಿ ಬರುವ ಹೊತ್ತಾದರೂ ಎಂತಹುದು? ಹಲವೆಂಟು ಪೈರಿನ ಪಸಲುಗಳು, ಬೆಳೆದ ಬೇಳೆ ಕಾಳುಗಳು, ಮನೆಯ ಮೂಲೆ-ಮೂಲೆಯಲಿರುವ ಚೀಲ, ಗುಡಾಣ, ಹರಿವಿ, ಮಡಕೆ ಸಾಲುಗಳು, ಕಣಜವೇ ಮುಂತಾದವುಗಳಲ್ಲಿ ತುಂಬಿ ಇಟ್ಟಾಡುವ ಕಾಲ. ಎಂತಹ ಬಡವರ ಮನೆಯಲ್ಲೂ ಕಾಳು-ಕಡಿಗಳು ತುಂಬಿ-ತುಳುಕುವ ಈ ಸಮಯದಲ್ಲಿ ಆ ಸಂತಸಕ್ಕೆ ಮತ್ತು ಏಳಿಗೆಗೆ ಕಾರಣವಾದ ದನ-ಕರುಗಳನ್ನು ನಲ್ಮೆಯಿಂದ ಕಾಣುವ ಸಲುವಾಗಿಯೇ ಕೊಂಡಾಡುವುದು ಸಂಕ್ರಾಂತಿ.
ಕರ‍್ನಾಟಕ, ತಮಿಳುನಾಡು, ಆಂದ್ರ, ತೆಲಂಗಾಣಗಳಲ್ಲಿ ಸರಿಸುಮಾರು ಒಂದೇ ಸಮಯಕ್ಕೆ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬದ ಮೂಲ ಹಿನ್ನೆಲೆ ಒಂದೇ ಆದರೂ ಮಾಡುವ ನಡೆ ನುಡಿಯಲ್ಲಿ ತುಸು ಬಿನ್ನಾಣಗಳಿವೆ. ಈ ಹಬ್ಬಕ್ಕೆ ಹಲವಾರು ಹೆಸರುಗಳಿವೆ. ಕೆಲವರು ಹಿಗ್ಗಿನಿಂದ ಸುಗ್ಗಿ ಎಂದರೆ, ಮತ್ತೆ ಕೆಲವರು ಪೊಂಗಲ್ ಎನ್ನುತ್ತಾರೆ. ಸಾಮಾನ್ಯವಾಗಿ ಜನವರಿ 14ರಂದೇ ಬರುವ ಈ ಹಬ್ಬ ಕೆಲವೊಮ್ಮೆ ಜ.15ರಂದು ಬರುವುದೂ ಉಂಟು.
ಜನವರಿ ತಿಂಗಳ ನಡುಬಾಗ ಸುಗ್ಗಿಯ ಕಾಲ.ಹಿಂಗಾರು ಬೆಳೆ ಬರುವ ಕಾಲ. ಹೊಸ ಬತ್ತದ ಪಸಲು ಬರುವ ಕಾಲ. ಹೀಗಾಗಿ ಸೊಂಪಾಗಿ ಬೆಳೆದ ಬತ್ತವನ್ನು ಕುಟ್ಟಿ ಇಲ್ಲವೇ ಗಿರಣಿಯಿಂದ ಅಕ್ಕಿ ಹಿಟ್ಟು ಮತ್ತು ರವೆ ಮಾಡುತ್ತಾರೆ. ಹಿಟ್ಟಿನಲ್ಲಿ ಹಲವು ತಿನಿಸುಗಳನ್ನು ಮಾಡಿ, ಹೊಸ ಅಕ್ಕಿಯಲ್ಲಿ ಸಿಹಿ ಪಾಯಸ ಮಾಡಿ ಅನ್ನ ನೀಡಿದ ದೇವರಿಗೆ ನನ್ನಿ ಸಲ್ಲಿಸಿ ಅದರಲ್ಲಿ ಸ್ವಲ್ಪ ಬಾಗವನ್ನು ದೇವರಿಗೆ ಪ್ರಸಾದವಾಗಿ ಅರ‍್ಪಿಸುವುದು ಹಬ್ಬದ ಹಿರಿಮೆಗಳಲ್ಲೊಂದು.
ವರುಶಪೂರ‍್ತಿ ಮೈಮುರಿದು ದುಡಿದ ರೈತನ ಮೊಗದಲ್ಲಿ ಮಂದಹಾಸ ಮೂಡುವ ಈ ಸಡಗರವೇ ಈ ಸುಗ್ಗಿ. ಹಳೆ ಮೈಸೂರು ಸೀಮೆಯಲ್ಲಿ ಹೊಸ ಮಡಕೆಯಲ್ಲಿ, ಹೊಸ ಅಕ್ಕಿಯಲ್ಲಿ ಮಾಡುವ ಸಿಹಿ ಹುಗ್ಗಿ ಬಲು ರುಚಿ. ಅದಕ್ಕಾಗಿಯೇ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಅಂದು ಸಿಹಿ ಹುಗ್ಗಿ ಮಾಡುತ್ತಾರೆ, ಹೀಗಾಗಿ ಇದನ್ನು ಹುಗ್ಗಿ ಹಬ್ಬ ಎಂದೂ ಕರೆಯುತ್ತಾರೆ. ಅದೇ ರೀತಿಯಲ್ಲಿ ಸಂಕ್ರಾಂತಿ ಸುಗ್ಗಿಯ ಕಾಲವಾದ್ದರಿಂದ ಈ ಹಬ್ಬಕ್ಕೆ ಸುಗ್ಗಿ ಎಂಬ ಹೆಸರೂ ಬಂದಿದೆ. ಈ ದಿನದ ಮತ್ತೊಂದು ಹಿರಿಮೆ ಏನೆಂದರೆ ಬಿಳಿ ಎಳ್ಳು, ಕೊಬ್ಬರಿ, ಹುರಿಗಡಲೆ ಹಾಗೂ ಬೆಲ್ಲ ಹಾಕಿ ತಿನಿಸುಗಳನ್ನು ಮಾಡುವರು. ಹಲವು ಬಾಗದಲ್ಲಿ ಇದಕ್ಕೆ “ಎಳ್ಳು” ಎಂದು ಕರೆಯುವವರು.
ಉತ್ತರ ಕರ‍್ನಾಟಕದಲ್ಲಿ ಹೆಚ್ಚಾಗಿ ಮಕ್ಕಳಿಗೆ, ಹೊಸದಾಗಿ ಮದುವೆಯಾದವರಿಗೆ ಕುಸುರೆಳ್ಳಿನಿಂದ ಮಾಡಿದ ಒಡವೆಗಳನ್ನು ತೊಡಿಸಿ ಸಂತಸಪಡುತ್ತಾರೆ. ಅಂದು ಬೆಳಗ್ಗೆ ಬೇಗನೆ ಎದ್ದು, ಎಣ್ಣೆ ಸ್ನಾನ ಮಾಡಿ, ಕುಲದೇವರ ಮುಂದೆ ಮಾಡಿದ ಎಳ್ಳು-ಬೆಲ್ಲ, ಸಕ್ಕರೆ ಅಚ್ಚನ್ನಿಟ್ಟು ನೈವೇದ್ಯ ಮಾಡಿ, ಮನೆಗೆ ಬಂದವರಿಗೆಲ್ಲಾ ಎಳ್ಳು ನೀಡಿ, ಒಳ್ಳೆಯ ಮಾತನಾಡಿ ಎನ್ನುವುದು ವಾಡಿಕೆ. ಸಂಜೆ 5 ವರುಶದೊಳಗಿನ ಮಕ್ಕಳಿಗೆ ಮಣಿ ಸರ ಹಾಕಿ ಎಲಚಿ ಹಣ್ಣು ಹಾಗೂ ಹಣವನ್ನು ಮೇಲಕ್ಕೆ ಎಸೆದು ಒಳ್ಳೆಯದಾಗಲಿ ಎಂದು ಹಾರೈಸುತ್ತ ಆರತಿ ಮಾಡುತ್ತಾರೆ. ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು, ಸಿಂಗರಿಸಿಕೊಂಡು ಮನೆ ಮನೆಗೆ ಹೋಗಿ ಎಳ್ಳು ಬೀರುತ್ತಾರೆ.
ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಸಂಕ್ರಾಂತಿ ಬಲು ಸಡಗರದ ಹಬ್ಬ. ತೆಂಕಣ ಕರುನಾಡಿನ ಹಳ್ಳಿಗಳಲ್ಲಿ ಕಣಜದ ಪೂಜೆ, ನೆಲದ ಪೂಜೆ, ಕುಣಿತಗಳು ಹೆಚ್ಚಾಗಿ ಕಂಡು ಬರುತ್ತವೆ. ಕೊಡಗಿನವರು ಸಂಕ್ರಾಂತಿ ಹಿಂದೆ-ಮುಂದೆ ‘ಹುತ್ತರಿ ಹಬ್ಬ’ ಆಚರಿಸಿ ತಮ್ಮನ್ನು ಕಾಪಾಡುವ `ಇಗ್ಗುತಪ್ಪ’ನಿಗೆ ಬಕುತಿಯಿಂದ ನನ್ನಿ ಸಲ್ಲಿಸುವರು.
ತಮಿಳುನಾಡಿನಲ್ಲಿ ಪೊಂಗಲ್ ನಾಡಹಬ್ಬವಾಗಿ ಆಚರಿಸಲ್ಪಡುತ್ತದೆ. ಹಳೆ ಮೈಸೂರು ಬಾಗದಲ್ಲಿ ರಾಗಿಕಣದಲ್ಲಿ ನಡೆಯುವ ಸುಗ್ಗಿಯ ಕದಿರು ಕಟ್ಟುವುದು ಒಂದು ತೆರನಾದರೆ, ಉತ್ತರ ಕರ‍್ನಾಟಕದ ಜೋಳದ ಹೊಲದಲ್ಲಿ ನಡೆಯುವ ಸುಗ್ಗಿಯ ಸಿರಿ ಮತ್ತೊಂದು ತೆರನಾದದ್ದು. ಮಲೆನಾಡಿನ ಬತ್ತ, ಅಡಿಕೆಯ ಸುಗ್ಗಿಯ ಸೊಗಸೇ ಬೇರೆ. ಉತ್ತರ ಕರ‍್ನಾಟಕದ ಕಡೆ ಇಂದು ಹೊಸ ಅಕ್ಕಿ, ಹೆಸರು ಬೇಳೆಯಿಂದ ಮಾಡುವ ಹುಗ್ಗಿ, ಹೊಸ ಹುಣಸೆ ಹಣ್ಣಿನಿಂದ ತಯಾರಿಸುವ ಹಸಿಹುಳಿ, ಸಿಹಿ ಹುಗ್ಗಿ, ಹೊಸ ಹುಣಸೆಕಾಯಿ ತೊಕ್ಕು ಮಾಡಿ ಮನೆ ಮಂದಿಯೆಲ್ಲ ಸಂತಸದಿಂದ ಊಟ ಮಾಡುವರು.
ಮೈಸೂರು ಬಾಗದಲ್ಲಿ ಸಂಕ್ರಾಂತಿಯ ಎಳ್ಳು ಬೀರುವ ಸೊಬಗು, ಸೊಗಸು ಬಲುಚಂದ. ಆ ದಿನ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಮಗ್ಗಿನ ಜಡೆ ಹಾಕಿಕೊಂಡು, ಹೊಸ ಸೀರೆಯುಟ್ಟು ನೆಂಟರು ಮತ್ತು ಗೆಳೆಯರ ಮನೆಗೆ ತೆರಳಿ ಕಬ್ಬಿನ ತುಂಡಿನ ಜೊತೆ ಎಳ್ಳು-ಬೆಲ್ಲ ಬೀರುವ ವಾಡಿಕೆ ಇದೆ. ಜೊತೆಗೆ ದೇವರ ಚಿಕ್ಕ ಚಿಕ್ಕ ಮೂರುತಿಗಳನ್ನ ಕೊಡುವುದು ಸಹ ವಾಡಿಕೆಯಲ್ಲಿದೆ .ಇನ್ನು ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಉದ್ದನೆಯ ರೇಶ್ಮೆಲಂಗ- ದಾವಣಿ ಹಾಕಿಕೊಂಡು ಎಳ್ಳು ಬೀರಿ ಸಂತಸಪಡುತ್ತಾರೆ. ಸಂಕ್ರಾಂತಿಯ ಮುನ್ನಾ ದಿನವನ್ನು ಬೋಗಿಹಬ್ಬ ಎಂದೂ, ಮಾರನೆಯ ದಿನ ಕನೂ ಹಬ್ಬ ಎಂದೂ ಹಲವೆಡೆ ಆಚರಿಸಲಾಗುತ್ತದೆ. ಕರುನಾಡಿನಲ್ಲಿ ಈ ಹಬ್ಬವನ್ನು ಉಪಕಾರದ ಸಂಕೇತವಾಗಿ ಆಚರಿಸಲಾಗುತ್ತದೆ. ಪೈರಿನ ಪಸಲನ್ನು ನೀಡುವ ನೆಲತಾಯಿಗೆ, ಪೈರಿನ ರಾಶಿಗೆ, ಕ್ರುಶಿ ಕೆಲಸಕ್ಕೆ ಸಹಾಯ ಮಾಡಿದ ಎತ್ತಿನ ಬಂಡಿಗೆ, ದನಗಳಿಗೆ ಸಿಂಗಾರ ಮಾಡಿ ಪೂಜಿಸುತ್ತಾರೆ. ದನಕರುಗಳು ಬೆಚ್ಚದಿರಲಿ, ಬೆದರದಿರಲೆಂದು ಹಾಗು ಅವುಗಳಿಗೆ ದ್ರುಶ್ಟಿ ತಾಗದಿರಲೆಂದು ಬೆಂಕಿಯ ಮೇಲೆ ಹಾರಿಸುತ್ತಾರೆ. ಇದನ್ನು ‘ಕಿಚ್ ಹಾಯ್ಸೋದು’ ಎಂದು ಕರೆಯುತ್ತಾರೆ. ಸುಗ್ಗಿ ಒಳ್ಳೆತನದ ಹಿರಿಮೆಯಲ್ಲಿ ಆಚರಿಸುವ ಹಿಗ್ಗಿನ ಹಬ್ಬ.
ಸಂಕ್ರಾಂತಿಯ ಹಿನ್ನೆಲೆಯೇನು?
ನೇಸರನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ದಾಟುವ ಹೊತ್ತು ಹಾಗು ನೇಸರನು ಮಕರರಾಶಿಯನ್ನು ಸೇರುವ ದಿನ ಮತ್ತು ಅಂದು ನಡೆಸುವ ಹಬ್ಬಕ್ಕೆ ಸಂಕ್ರಾಂತಿ ಎಂದು ಹೆಸರು. ನೆಲದರಿಮೆಯಂತೆ(Geography) ಯಾವುದೇ ನೆಲದಲ್ಲಿ ಸರಿಸಮವಾಗಿ ಹೊತ್ತುಮೂಡುವುದು ಮತ್ತು ಹೊತ್ತುಕಂತುವುದು ವರಶದ ಏರೆಡೇ ದಿನಗಳು, ಆ ದಿನಗಳನ್ನು ಸರಿಯಿರುಳು (equinox) ಎಂದು ಕರೆಯುತ್ತಾರೆ.
ಅಂದು ಹಗಲಿರುಳುಗಳು ದಿನವನ್ನು ಸರಿಪಾಲಾಗಿ,ಅಂದರೆ ತಲಾ 12 ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರುಶದ ಉಳಿದ ದಿನಗಳಲ್ಲಿ ಹಗಲಿರುಳುಗಳು ಸರಿಸಮನಾಗಿರದೆ ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ ಮತ್ತು ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು ಇರುತ್ತದೆ. ಸರಿಯಿರುಳಿನ ದಿನಗಳ ಹೊರತಾಗಿ ಹೊತ್ತುಮೂಡುಗೆ(Sunrise) ಮೂಡಣದ ಬಲಕ್ಕೆ ಅಂದರೆ ಬಡಗಣಕ್ಕೆ ಇಲ್ಲವೇ ಎಡಕ್ಕೆ ಅಂದರೆ ತೆಂಕಣಕ್ಕೆ ಆಗುತ್ತದೆ. ಚಳಿಗಾಲ ಹೆಚ್ಚಾದಂತೆ ಹೊತ್ತುಮೂಡುಗೆಯು ಹೆಚ್ಚು ತೆಂಕಣ ದಿಕ್ಕಿಗೆ ವಾಲುವುದು ಕಾಣುತ್ತದೆ. ಕೊನೆಗೆ ಒಂದು ದಿನ ತೆಂಕಣ ತುತ್ತ ತುದಿಯ ಹಂತವನ್ನು ತಲುಪಿ ನಿಲುಗಡೆಗೊಂಡು, ಮರುದಿನದಿಂದ ಹೊತ್ತುಮೂಡುಗೆಯು ಮರಳಿ ಎದುರು ದಿಕ್ಕಿನಲ್ಲಿ ಆಗುತ್ತಾ ಹೋಗುತ್ತದೆ.
ಅಂದರೆ ನೇಸರ ಇನ್ನು ತೆಂಕಣ ದಿಕ್ಕಿನತ್ತದ ತನ್ನ ಓಟವನ್ನು ನಿಲ್ಲಿಸಿ ಬಡಗಣ ದಿಕ್ಕಿನತ್ತ ಸಾಗುತ್ತಾನೆ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ನರಿವು ಹಾಗು ಇದನ್ನು ಚಳಿಗಾಲದ ನೇಸರ ತಿರುವು’ (Winter Solstice with Tropical of Capricorn) ಎಂದೂ ಕರೆಯುವರು, ಗ್ರೆಗೋರಿಯನ್ ನಾಳುತೋರ‍್ಪುಕದಲ್ಲಿ ಡಿಸೆಂಬರ್ 22ರಂದು ಸಂಕ್ರಮಣವಾದರೆ (Winter Solstice) ನಮ್ಮ ಸಾಂಪ್ರದಾಯಿಕ ನಾಳುತೋರ‍್ಪುವಿನಂತೆ ಜನವರಿ 14 ಮಕರ ಸಂಕ್ರಮಣ ಆಗುತ್ತದೆ (Sun moves into the Capricorn zodiac known as Makara Sankanti).
ಈ ಹಬ್ಬವನ್ನು ಹಲವು ನಾಡುಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಬಗೆ ಬಗೆಯ ಹೆಸರುಗಳ ಪಟ್ಟಿ ಇಂತಿದೆ
ನಾಡು | ಸುಗ್ಗಿ ಹಬ್ಬದ ಹೆಸರು |
ಕರ‍್ನಾಟಕ | ಸುಗ್ಗಿ, ಮಕರ ಸಂಕ್ರಮಣ, ಸಂಕ್ರಾಂತಿ |
ಕೇರಳ | ಮಕರವಿಳಕ್ಕು, ಪೊಂಗಲ್, ಸಂಕ್ರಾಂತಿ |
ತಮಿಳುನಾಡು | ಪೊಂಗಲ್, ಸಂಕ್ರಾಂತಿ |
ಆಂದ್ರ ಮತ್ತು ತೆಲಂಗಾಣ | ಬೋಗಿ, ಸಂಕ್ರಾಂತಿ |
ಬಡಗಣ ಬಾರತದ ಬಾಗಗಳು | ಸಂಕ್ರಾಂತಿ, ಮಕರ ಸಂಕ್ರಮಣ, ಉತ್ತರಾಯಣ್, ಕಿಚ್ಡಿ(ಪಡುವಣ ಬಿಹಾರ), ಕುಮಾಂವ್ (ಉತ್ತರಾಕಂಡ್) |
ಹರ‍್ಯಾಣ, ಹಿಮಾಚಲ ಪ್ರದೇಶ, ಪಂಜಾಬ್ (ಪಂಜಾಬದಲ್ಲಿ ಸಂಕ್ರಾಂತಿಯ ಹಿಂದಿನ ದಿನವನ್ನು ಲೋಹರಿ ಎಂದು ಕರೆಯುವರು) | ಮಾಗಿ. |
ಅಸ್ಸಾಂ | ಬೋಗಲಿ ಬಿಹು |
ಕಾಶ್ಮೀರ | ಶಿಶುರ್ ಸೆಂಕ್ರಾತ್ |
ನೇಪಾಳ | ಮಗೆ ಸಂಕ್ರಾಂತಿ |
ತೈಲ್ಯಾಂಡ್ | ಸೊಂಗ್ಕ್ರಾನ್ |
ಲಾವೋಸ್ | ಪಿಮಾಲೋ |
ಮಯನ್ಮಾರ್ | ತಿಂಗ್ಯಾನ್ |
ಕಾಂಬೋಡಿಯ | ಮೋಹ ಸಾಂಗ್ಕ್ರಾನ್ |
ಬಡಗಣ ಶ್ರೀಲಂಕ | ಪೊಂಗಲ್ |
ಚೀನಾ | ದೊಂಗ್ಜಿ (Part of Winter solstice) |
(ಮಾಹಿತಿಯ ಸೆಲೆಗಳು: prajavani.net, kannadaratna.com, thehindu.com, wikipedia, lifeisavacation)
(ಚಿತ್ರ ಸೆಲೆ: vikrama.in)
ಬಹಳ ಚೆನ್ನಾಗಿ ಮಾಹಿತಿ ಸಂಗ್ರಹ ಮಾಡಿ ಲೇಖನ ಸಿದ್ಧಪಡಿಸಿದ್ದೀರಿ. ಬಹಳಷ್ಟು ವಿಷಯ ತಿಳಿದಂತಾಯ್ತು. ಧನ್ಯವಾದಗಳು ನಿಮಗೆ