ಸೋವಿಯತ್ ಒಕ್ಕೂಟ ಕುಸಿತ – ಒಂದು ನೋಟ

– ಅನ್ನದಾನೇಶ ಶಿ. ಸಂಕದಾಳ.

soviet-union

 

ಹಿಂದಿನ ಬರಹದಲ್ಲಿ ಸೋವಿಯತ್ ಒಕ್ಕೂಟದ ಹುಟ್ಟಿನ ಬಗ್ಗೆ ಬರೆಯಲಾಗಿತ್ತು. 1922 ರಲ್ಲಿ ರಶ್ಯನ್, ಯುಕ್ರೇನಿಯನ್, ಬಿಯಲೋರಶ್ಯನ್, ಟ್ರಾನ್ಸ್ ಕಾಕೆಶಿಯನ್ ರಿಪಬ್ಲಿಕ್ ಗಳು ಸೇರಿ ಹುಟ್ಟುಹಾಕಿದ ಈ ಒಕ್ಕೂಟವು ಕಾಲ ಸರಿದಂತೆ 15 ರಿಪಬ್ಲಿಕ್ ನಾಡುಗಳ ಒಕ್ಕೂಟವಾಗಿ ಬೆಳೆಯುತ್ತದೆ. ಜಗತ್ತಿನ ಎರಡನೇ ಕಾಳಗದಲ್ಲಿ (2nd World War) ಮುಕ್ಯ ಪಾತ್ರ ವಾಹಿಸಿದ ಈ ಒಕ್ಕೂಟವು ಅಮೇರಿಕಾದೆದುರು ಪೈಪೋಟಿಗೂ ನಿಲ್ಲುತ್ತದೆ. ಇಶ್ಟೆಲ್ಲಾ ಹೆಸರು ಮಾಡಿ ಈ ಮಟ್ಟಿಗೆ ಬೆಳವಣಿಗೆ ಕಂಡಿದ್ದ ಇಂತ ಗಟ್ಟಿಯಾದ ಒಕ್ಕೂಟ ಕೊನೆಗೆ 1991 ರಲ್ಲಿ ಒಡೆಯುತ್ತದೆ. ಒಕ್ಕೂಟ ಒಡೆಯಲು ಹಲವಾರು ಕಾರಣಗಳಿದ್ದರೂ ಅಲ್ಲಿ ಕಂಡು ಬಂದ ನುಡಿ ಅಸಮಾನತೆ ಒಕ್ಕೂಟದ ಕುಸಿತಕ್ಕೆ ಪ್ರಮುಕ ಕಾರಣಗಳಲ್ಲೊಂದು.

ಸೋವಿಯತ್ ಒಕ್ಕೂಟದಲ್ಲಿ 15 ಸದಸ್ಯ ನಾಡುಗಳ ಒಕ್ಕೂಟವಿದ್ದರೂ, ಅವುಗಳಲ್ಲೆಲ್ಲ ದೊಡ್ಡ ನಾಡು ರಶ್ಯಾವಾಗಿತ್ತು. ಇಡೀ ಸೋವಿಯತ್ ಒಕ್ಕೂಟದ ಮಂದಿಯೆಣಿಕೆಯ ಅರ‍್ದದಶ್ಟು ಮಂದಿ ರಶ್ಯಾ ನಾಡಿನಲ್ಲಿದ್ದರು ಮತ್ತು ರಶ್ಯನ್ನರ ಎಣಿಕೆ ಹೆಚ್ಚಿದ್ದರಿಂದ ಸೋವಿಯತ್ ಒಕ್ಕೂಟ 69 ವರುಶಗಳ ಕಾಲ ರಶ್ಯನ್ನರ ಹಿಡಿತದಲ್ಲೇ ಇತ್ತು ಎಂದು ಹೇಳಲಾಗುತ್ತದೆ. ಸೋವಿಯತ್ ಒಕ್ಕೂಟ ಹುಟ್ಟುವ ಮೊದಲೇ, ತಾವು ಎಣಿಕೆಯಲ್ಲಿ ಹೆಚ್ಚಿರುವುದನ್ನೇ ಬಂಡವಾಳವಾಗಿಟ್ಟುಕೊಂಡು ರಶ್ಯನ್ನವರಲ್ಲದವರನ್ನು ರಶ್ಯನ್ ನುಡಿಯಾಡುಗರನ್ನಾಗಿ ಮಾಡುವ ಕಾಯಕ ರಶ್ಯನ್ನರು ಮಾಡುತ್ತಿದ್ದರು. ಆ ಕೆಲಸವೇ ರಶ್ಶಿಸಿಕೆ (Russification). ಒಕ್ಕೂಟವಾದ ಮೇಲೆ ರಶ್ಶಿಸಿಕೆಯನ್ನು ನಿಲ್ಲಿಸುವ ತೀರ‍್ಮಾನಕ್ಕೆ ಬಂದರೂ ರಶ್ಯನೈಜೇಶನ್ ಎನ್ನುವ ಹೆಸರಿನಲ್ಲಿ ರಶ್ಶಿಸಿಕೆಯ ಮತ್ತೊಂದು ಬಾಗವನ್ನು ಮುಂದುವರೆಸುತ್ತಾರೆ.

ರಶ್ಯಾ ಸಾಮ್ರಾಜ್ಯದ ಹಿನ್ನಡವಳಿಯನ್ನು (History) ನೋಡಿದಾಗ ಅಲ್ಲಿ ಅನೇಕ ದಂಗೆಗಳು ನಡೆದಿರುವುದು ತಿಳಿದುಬರುತ್ತದೆ. ನುಡಿಯ ನೆಲೆಯಲ್ಲಿ ‘ತಾವು ಬೇರೆ, ತಮ್ಮ ಗುರುತು ಬೇರೆ’ ಎಂಬ ಬಾವನೆ ಮಂದಿಯಲ್ಲಿ ಬರದಂತೆ ಮಾಡಲು ಎಲ್ಲರೂ ಒಂದೇ ನುಡಿಯಾಡುವಂತೆ ಮಾಡುವ ಮತ್ತು ಒಂದೇ ಸಂಸ್ಕ್ರುತಿಯನ್ನು ಹೊಂದುವಂತ ರಶ್ಶಿಸಿಕೆ ಆಗಬೇಕು ಎಂಬುದು ರಶ್ಯನ್ನರ ನಂಬಿಕೆಯಾಗಿತ್ತು. ಆ ನಿಟ್ಟಿನಲ್ಲಿ, ರಶ್ಯನ್ನರಿಗೆ ಮಾತ್ರ ಅನುಕೂಲವಾಗುವಂತ ಕಟ್ಟುಪಾಡುಗಳನ್ನು ಮಾಡುವುದು, ರಶ್ಯನ್ನರಿಗೆ ಆಡಳಿತದ ಮೇಲ್ ದರ‍್ಜೆಯ ಹುದ್ದೆಗಳನ್ನು ನೀಡುವುದು ಮತ್ತು ಅವರನ್ನು ಸೋವಿಯತ್ ಒಕ್ಕೂಟದ ಸಂಸ್ತೆಗಳ ಒಳ್ಳೆಯ ಹುದ್ದೆಗಳಿಗೆ ನೇಮಿಸುವುದು – ‘ರಾಜಕೀಯ ರಶ್ಶಿಸಿಕೆ‘ (Political Russification) ಎಂದೆನಿಸಿಕೊಳ್ಳುತ್ತದೆ. ರಶ್ಯನ್ ನುಡಿಗೆ ಎಲ್ಲೆಡೆ ಒತ್ತು ಕೊಟ್ಟು ರಶ್ಯನ್ ನುಡಿ ಹೇರುವುದು ಮತ್ತು ಆ ಮೂಲಕ ಉಳಿದವರನ್ನೂ ರಶ್ಯನ್ ನುಡಿಯಾಡುಗರನ್ನಾಗಿ ಮಾಡುವುದು ‘ಸಾಂಸ್ಕ್ರುತಿಕ ರಶ್ಶಿಸಿಕೆ‘ (Cultural Russification)ಎಂದೆನಿಸಿಕೊಳ್ಳುತ್ತದೆ.

ussr-collapse ಸೋವಿಯತ್ ಒಕ್ಕೂಟವಾದ ಹೊಸತರಲ್ಲಿ ಎಲ್ಲ ನುಡಿಗಳನ್ನು ಬೆಳೆಸುವ      ಹಮ್ಮುಗೆಗಳನ್ನು ಹಾಕಿಕೊಳ್ಳಲಾಗಿತ್ತು. ಆದರೆ ಹೊತ್ತು ಕಳೆದಂತೆ ರಶ್ಯನ್ ನುಡಿಗೆ  ಒತ್ತು ಕೊಡುವ ಕೆಲಸಕ್ಕೆ ಕೈ ಹಾಕಲಾಗುತ್ತದೆ. ಅದಿಕ್ರುತವಾಗಿ ಕಟ್ಟಳೆಯನ್ನು  ಮಾಡದಿದ್ದರೂ ರಶ್ಯನ್ ನುಡಿಯಾಡುಗರ ಹಕ್ಕುಗಳನ್ನು ಸದಾ ಕಾಯುವಂತ  ಕೆಲಸಗಳು ಸೋವಿಯತ್ ಒಕ್ಕೂಟದಲ್ಲಿ ನಡೆಯುತ್ತಿದ್ದವು.

ರಶ್ಯನ್  ನುಡಿಯಾಡುವವರು ಸೋವಿಯತ್ ಒಕ್ಕೂಟದೊಳಗಿನ ಯಾವುದೇ ನಾಡಿಗೆ  ಹೋದರೂ ಆ ನಾಡಿನ ನುಡಿಯನ್ನು ಕಲಿಯದೇ ಇರಬಹುದೆಂಬ ಮತ್ತು ರಶ್ಯನ್  ನುಡಿಯನ್ನೇ ಬಳಸಬಹುದೆಂಬ ಪರಿಸ್ತಿತಿ ನಿರ‍್ಮಾಣವಾಗತೊಡಗುತ್ತದೆ. 1938 ರ ಬಳಿಕ ಎಲ್ಲಾ ರಶ್ಯನ್ನೇತರ ಕಲಿಕೆಮನೆಗಳಲ್ಲಿ(schools) ರಶ್ಯನ್ ನುಡಿಯನ್ನು ಕಡ್ಡಾಯ ಮಾಡಲಾಗುತ್ತದೆ. ರಶ್ಯನ್ ಅಲ್ಲದ ನುಡಿಗಳಲ್ಲಿ ಕಲಿಯುವವರಿಗೆ, ಅವರು ಕಲಿಯುವ ವಿಶಯಗಳಲ್ಲಿ ರಶ್ಯನ್ ಪದಗಳನ್ನೇ ಬಳಸಿ ಕಲಿಸುವ ಮೂಲಕ ರಶ್ಯನ್ ನುಡಿಯ ಕಲಿಕೆಯನ್ನು ಸುಳು ಮಾಡಲಾಗುತ್ತದೆ. ರಶ್ಯನ್ ನುಡಿಯನ್ನು ಬರೆಯಲು ಬಳಸುತ್ತಿದ್ದ ಸಿರಿಲಿಕ್ ಬರಿಗೆಗಳನ್ನೇ ಎಲ್ಲೆಡೆ ಬಳಸುತ್ತಾ ರಶ್ಯನ್ ನುಡಿಗೆ ಹೆಚ್ಚು ಪ್ರಚಾರ ಕೊಟ್ಟು, ಆ ನುಡಿಯನ್ನು ಮಂದಿಗೆ ಒಗ್ಗಿಸುವಂತ ಕೆಲಸಗಳು ನಡೆಯುತ್ತವೆ. ಸೋವಿಯತ್ ಒಕ್ಕೂಟದ ಆಯಾ ರಿಪಬ್ಲಿಕ್ ನಾಡುಗಳಲ್ಲಿ ಹೆಚ್ಚಿನ ಎಣಿಕೆಯಲ್ಲಿ ಮಾತಾಡುವ ನುಡಿಗಳೇ ಆ ನಾಡಿನ ‘ರಾಶ್ಟ್ರೀಯ ನುಡಿಗಳು’ ಎಂದೆನೆಸಿಕೊಂಡರೂ, ರಶ್ಯನ್ ನುಡಿಯೊಂದನ್ನೇ ಸೋವಿಯತ್ ಒಕ್ಕೂಟದ ಕೊಂಡಿ-ನುಡಿಯನ್ನಾಗಿ ಮಾಡುವ ಪ್ರಯತ್ನಗಳು ನಡೆದೇ ಇರುತ್ತವೆ.

ತಮ್ಮ ನಿಜವಾದ ಗುರುತನ್ನೇ ಅಳಿಸುವಂತ ರಶ್ಶಿಸಿಕೆ ಅತವಾ ರಶ್ಯನೈಜೇಶನ್ನಿಗೆ ಸೋವಿಯತ್ ಒಕ್ಕೂಟದ ಬಹುತೇಕ ನಾಡುಗಳು ಮೆಲ್ಲನೆ ತುತ್ತಾಗುತ್ತವೆ. ಎಲ್ಲವನ್ನೂ ‘ರಶ್ಯನ್ ಮಯ’ ವಾಗಿ ಮಾಡುವಂತ ಕೆಲಸವು ಮಂದಿಗೆ ಹಿಡಿಸುವುದಿಲ್ಲ. ಎಲ್ಲವನ್ನೂ ಕೇಂದ್ರದಿಂದಲೇ ನಡೆಸುವ ಸೋವಿಯತ್ ಒಕ್ಕೂಟದ ಆಡಳಿತ ಬಗೆಯಿಂದ ಬೇಸತ್ತಿದ್ದ ಬೇರೆ ಬೇರೆ ನಾಡಿನ ಮಂದಿ ತಮ್ಮಾಳ್ವಿಕೆಯತ್ತ ಮನಸ್ಸು ಮಾಡುತ್ತಾರೆ.1990 ರ ಹೊತ್ತಿಗೆ ಈ ಒಕ್ಕೂಟವು ದೊಡ್ಡ ಮಟ್ಟದ ಹಣಕಾಸಿನ ಮುಗ್ಗಟ್ಟನ್ನೂ ಎದುರಿಸ ಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಸೋವಿಯತ್ ಒಕ್ಕೂಟ 1991 ರಲ್ಲಿ ಒಡೆಯುವದರೊಂದಿಗೆ, ‘ಮೊದಲ ಕಮುನಿಸ್ಟ್ ಒಕ್ಕೂಟ’ ಎಂಬ ಹೆಗ್ಗಳಿಕೆ ಹೊಂದಿದ್ದ ಒಕ್ಕೂಟವೊಂದು ಇಲ್ಲವಾಗುತ್ತದೆ.

(ಮಾಹಿತಿ ಸೆಲೆ :  Russificationwiki-Russification, wiki-SovietUnionccat.sas.upenn.edu)

( ಚಿತ್ರ ಸೆಲೆ : economist.com, hum3bg.com )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: