ಹಿಂದಿ ಹೇರಿಕೆ ವಿರೋದಿ ಹೋರಾಟ – ಬಾಗ 1

– ರತೀಶ ರತ್ನಾಕರ.

Hindi 3‘ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು’ ಎಂಬ ತಳಹದಿಯ ಮೇಲೆ ಯಾವುದೇ ನಾಡಿನ ಮಂದಿಯಾಳ್ವಿಕೆ ನಡೆಯಬೇಕು. ಆದರೆ ಈ ಮಂದಿಯಾಳ್ವಿಕೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ಹುಳುಕುಗಳು ಹಲವು ನಾಡಿನ ಆಳ್ವಿಕೆಗಳಲ್ಲಿರುತ್ತವೆ. ಅಂತೆಯೇ ಇಂಡಿಯಾದ ಒಕ್ಕೂಟದ ಆಳ್ವಿಕೆಯಲ್ಲಿ ಇರುವ ದೊಡ್ಡದಾದ ಹುಳುಕು ಎಂದರೆ ‘ಹಿಂದಿ ಹೇರಿಕೆ‘! ಬೇರೆ ಬೇರೆ ನುಡಿಯನ್ನಾಡುವ ನಾಡುಗಳು ಒಗ್ಗೂಡಿ ಇಂಡಿಯಾದ ಒಕ್ಕೂಟದಾಳ್ವಿಕೆ ಮೂಡಿದೆ. ಈ ಆಳ್ವಿಕೆಯಲ್ಲಿ ಹಿಂದಿ ನುಡಿಗೆ ಮಾತ್ರ ಎಲ್ಲಿಲ್ಲದ ಮನ್ನಣೆಯನ್ನು ನೀಡಿ, ಉಳಿದ ನುಡಿಗಳನ್ನು ಮತ್ತು ಆ ಮೂಲಕ ಉಳಿದ ನುಡಿಯಾಡುಗರನ್ನು ಎರಡನೇ ದರ‍್ಜೆಯ ನಾಗರಿಕರನ್ನಾಗಿ ಮಾಡುತ್ತಿರುವ, ಕೇಂದ್ರ ಸರ‍್ಕಾರವೇ ಪೊರೆಯುತ್ತಿರುವ ಪಿಡುಗು ಎಂದರೆ ಹಿಂದಿ ಹೇರಿಕೆ.

ಇತರ ನುಡಿಗಳಿಗೆ ಮಾರಕವಾಗುತ್ತಿರುವ ಈ ಹಿಂದಿಹೇರಿಕೆಯನ್ನು ಉಳಿದ ನುಡಿಯಾಡುಗರೇನು ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುತ್ತಿಲ್ಲ. ಕಾಲದಿಂದ ಕಾಲಕ್ಕೆ ವ್ಯವಸ್ತಿತವಾಗಿ ಕೇಂದ್ರ ಸರಕಾರದಿಂದ ನಡೆಯುತ್ತಿರುವ ಹಿಂದಿ ಹೇರಿಕೆಯನ್ನು ಅಶ್ಟೇ ತೀವ್ರವಾಗಿ ಇತರೆ ನುಡಿಯಾಡುವ ಜನಾಂಗ ಎದುರಿಸಿ ಹೋರಾಡುತ್ತಾ ಬಂದಿವೆ. ಹಾಗಾಗಿ, ಹಿಂದಿ ಹೇರಿಕೆ ಹಾಗು ಹಿಂದಿ ಹೇರಿಕೆಯ ಎದುರಿನ ಹೋರಾಟದ ಹಿನ್ನಲೆ ಇಂದು ನಿನ್ನೆಯದಲ್ಲ, 50ಕ್ಕೂ ಹೆಚ್ಚಿನ ವರುಶಗಳ ಹಳಮೆಯನ್ನು ಇದು ಹೊಂದಿದೆ! ಉಪವಾಸ, ಗದ್ದಲ, ದೊಂಬಿ, ಮುತ್ತಿಗೆ, ಸೆರೆವಾಸ, ಕೊನೆಗೆ ಹಿಂದಿ ಹೇರಿಕೆಯ ಹೋರಾಟದಲ್ಲಿ ಮಡಿದ ಮಂದಿಯೂ ಇದ್ದಾರೆ! ಇದೊಂದು ನೆತ್ತರು ಮೆತ್ತಿದ ಹಳಮೆಯ ಅದ್ಯಾಯ, ಆದರು ಈ ಹೋರಾಟ ಇನ್ನೂ ಕೊನೆಯಾಗಿಲ್ಲ! ಕಾರಣ ಹಿಂದಿ ಹೇರಿಕೆಯಿಂದ ಇತರೆ ನುಡಿಯಾಡುವವರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ!

1937-40ರ ಮೊದಲ ಹಿಂದಿ ಹೇರಿಕೆ ಎದುರಿಸಿ ಹೋರಾಟ:
ಅದು ಹತ್ತೊಂಬತ್ತನೇ ನೂರೇಡಿನ ಮೊದಲ ಬಾಗ, ಬ್ರಿಟಿಶರ ಆಳ್ವಿಕೆಯಡಿಯಲ್ಲಿದ್ದ ಮದ್ರಾಸ್ ಪ್ರಾಂತ್ಯದಲ್ಲಿ ಚುನಾವಣೆಗಳನ್ನು ನಡೆಸಲಾಗಿತ್ತು. ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಶವು ಆ ಚುನಾವಣೆಗಳಲ್ಲಿ ಗೆದ್ದಿತ್ತು, ಕಾಂಗ್ರೆಸ್ ಪಕ್ಶದ ರಾಜಾಜಿ (ಸಿ. ರಾಜಗೋಪಾಲಚಾರಿ) ಮದ್ರಾಸು ಪ್ರಾಂತ್ಯದ ಮುಕ್ಯಮಂತ್ರಿಯಾದರು. ಮುಕ್ಯಮಂತ್ರಿಯಾದವರೇ ಕಾಂಗ್ರೆಸ್ ಪಕ್ಶದ ದ್ಯೇಯದಂತೆ ಹಿಂದಿ ನುಡಿಯನ್ನು ಹಿರಿಯ ಪ್ರಾತಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಸಬೇಕೆಂಬ ಸುತ್ತೋಲೆಯನ್ನು ಹೊರಡಿಸಿದರು. ಈ ಸುತ್ತೋಲೆಯು ಮದ್ರಾಸು ಪ್ರಾಂತ್ಯದ ಮಂದಿಯ ಕೆಂಗಣ್ಣಿಗೆ ಗುರಿಯಾಯಿತು. ತಮಿಳು ತಾಯ್ನುಡಿಯಿರುವ ಜಾಗದಲ್ಲಿ ಅನಗತ್ಯವಾಗಿ ಹಿಂದಿಯನ್ನು ತಂದು ತುರುಕುವ, ನುಡಿಗಳ ನಡುವೆ ತಾರತಮ್ಯ ಎಸಗುವ ಈ ಕೆಲಸವನ್ನು ಮಂದಿಯು ಟೀಕಿಸಿದರು. ಆಗಿನ ಎದುರಿನ ಪಕ್ಶವಾಗಿದ್ದ ‘ಜಸ್ಟಿಸ್ ಪಾರ‍್ಟಿ’ ಮತ್ತು ತನ್ತಕ್ಕಮೆ ಚಳವಳಿಯ (self respect movement) ನಾಯಕರಾದ ಪೆರಿಯಾರ್ ಅವರು ಸರಕಾರದ ಹಿಂದಿ ಹೇರಿಕೆಯ ನಡೆಯನ್ನು ವಿರೋದಿಸಿದರು ಮತ್ತು ಅದರ ಎದುರಿನ ಹೋರಾಟದ ಮುಂದಾಳ್ತನವನ್ನು ವಹಿಸಿದರು.

ರಾಜಾಜಿಯವರ ಹಿಂದಿ ಹೇರಿಕೆಯ ನಿಲುವಿಗೆ ಮದ್ರಾಸು ಪ್ರಾಂತ್ಯದ ತುಂಬಾ ಎದುರಿನ ಹೋರಾಟಗಳು ನಡೆದವು. ತಮಿಳು ನಲ್ಬರಹ ಕೂಟದವರು, ಹೆಂಗಳೆಯರ ಸಂಗಟನೆಗಳು, ತಮಿಳು ಮುಸ್ಲಿಮ್ ಸಂಗಟನೆ, ವಿದ್ಯಾರ‍್ತಿ ಸಂಗಟನೆಗಳು ಹೀಗೆ ಹಲವಾರು ಕೂಟದವರು ಈ ಹೋರಾಟದಲ್ಲಿ ಪಾಲ್ಗೊಂಡರು. ಉಪವಾಸ, ದಾರಿತಡೆ, ಹಿಂದಿಯನ್ನು ಕಲಿಸುತ್ತಿದ್ದ ತರಗತಿಗಳನ್ನು ತಡೆಯುವುದು, ಹಿಂದಿಯನ್ನು ಬಳಸುತ್ತಿದ್ದ ಸರಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವುದು, ಕಪ್ಪು ಬಾವುಟ ಹಾರಿಸುವುದು ಹಾಗು ಮೆರವಣಿಗೆ ಮುಂತಾದ ಹಲವು ಬಗೆಯ ಹೋರಾಟಗಳನ್ನು ಹಿಂದಿ ಹೇರಿಕೆಯ ಎದುರು ನಡೆಸಿದರು. ಈ ಹೋರಾಟದಲ್ಲಿ ಹಲವಾರು ಕಡೆಗಳಲ್ಲಿ ಪೋಲಿಸ್ ಲಾಟಿಯೇಟುಗಳು ಬಿದ್ದವು, ಸಾಕಶ್ಟು ಮಂದಿ ಸೆರೆಯಾದರು.

ದಿನದಿಂದ ದಿನಕ್ಕೆ ಕಾವನ್ನು ಪಡೆದುಕೊಳ್ಳುತ್ತಿದ್ದ ಹೋರಾಟವನ್ನು ಹತ್ತಿಕ್ಕಲು ರಾಜಾಜಿಯವರು ಕೂಡ ಹಲವು ಪ್ರಯತ್ನಗಳನ್ನು ಮಾಡಿದರು, ಹಿಂದಿಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸುವ ಪ್ರಯತ್ನಗಳನ್ನು ನಡೆಸಿದರು. ಆದರೆ ಅವು ಯಾವು ಕೈಗೂಡಲಿಲ್ಲ. ಸತ್ಯಮೂರ‍್ತಿ ಮತ್ತು ಸರ‍್ವಪಲ್ಲಿ ರಾದಾಕ್ರಿಶ್ಣರಂತಹ ಕಾಂಗ್ರೆಸ್ಸಿನ ನಾಯಕರೇ ಹಿಂದಿ ಹೇರಿಕೆಯನ್ನು ಮಾಡಬಾರದೆಂದು ಹೇಳಿ ರಾಜಾಜಿಯವನ್ನು ಬೆಂಬಲಿಸಿರಲಿಲ್ಲ. ಸುಮಾರು ಎರಡು ವರುಶಗಳ ಕಾಲ ಎಡಬಿಡದೇ ನಡೆದ ಸರಕಾರದ ಎದುರಿನ ಹೋರಾಟದಲ್ಲಿ 1,198 ಮಂದಿ ಸೆರೆಯಾಗಿದ್ದರು, ಅದರಲ್ಲಿ 73 ಹೆಂಗಸರು ಮತ್ತು 32 ಮಕ್ಕಳೂ ಕೂಡ ಇದ್ದರು. ಈ ಹೋರಾಟದಲ್ಲಿ ಸೆರೆಯಾಗಿದ್ದ ತಾಳಮುತ್ತು ಮತ್ತು ನಟರಾಜನ್ ಎಂಬ ಇಬ್ಬರು ಹೋರಾಟಗಾರರು ಸೆರೆಯಲ್ಲಿದ್ದಾಗಲೇ ಸಾವನ್ನಪ್ಪಿದರು. ಹಿಂದಿ ಹೇರಿಕೆಯ ಎದುರಿನ ಹೋರಾಟದಲ್ಲು ಸಾವನ್ನಪ್ಪಿದ ಮೊದಲೆರೆಡು ಜೀವಗಳಿವು.

1939 ಅಕ್ಟೋಬರ್ ನಲ್ಲಿ, ಎರಡನೇ ಮಹಾಯುದ್ದಕ್ಕೆ ಇಂಡಿಯಾದ ಪಾಲ್ಗೊಳ್ಳುವಿಕೆಯನ್ನು ವಿರೋದಿಸಿ ರಾಜಾಜಿಯವರ ಸರಕಾರವು ರಾಜಿನಾಮೆಯನ್ನು ನೀಡಿತು. ಇದರಿಂದ ಮದ್ರಾಸು ಪ್ರಾಂತ್ಯವು ಬ್ರಿಟಿಶ್ ರಾಜ್ಯಪಾಲರ ಆಳ್ವಿಕೆಗೆ ಬಂದಿತು. ಆ ಹೊತ್ತಿಗೆ ಪೆರಿಯಾರ್ ತಮ್ಮ ಹೋರಾಟವನ್ನು ನಿಲ್ಲಿಸಿ ಬ್ರಿಟಿಶ್ ರಾಜ್ಯಪಾಲರನ್ನು ಹಿಂದಿ ಹೇರಿಕೆಯನ್ನು ತಡೆಯುವಂತೆ ಕೇಳಿಕೊಂಡರು, ಆಗಿನ ರಾಜ್ಯಪಾಲರಾಗಿದ್ದ ಅರ್‍ಸ್ಕಿನ್ ಅವರು ಹಿಂದಿಯ ಕಡ್ಡಾಯ ಕಲಿಕೆಯ ನಿಯಮವನ್ನು ಹಿಂತೆಗೆದುಕೊಂಡರು. ಅಲ್ಲಿಗೆ ಹಿಂದಿ ಹೇರಿಕೆಯ ಮೊದಲ ಹೋರಾಟಕ್ಕೆ ಒಂದು ಅರೆತಡೆ ಸಿಕ್ಕಿತು!

1946 – 50 ಹೋರಾಟ:
1947 ರಲ್ಲಿ ಬ್ರಿಟಿಶರಿಂದ ಬಿಡುಗಡೆಯಾಗಿ ಇಂಡಿಯಾ ಒಕ್ಕೂಟವು ರಚನೆಯಾಗುವತ್ತ ಹೆಜ್ಜೆ ಇಡುತ್ತಿತ್ತು. ಆಗ ಮತ್ತೊಮ್ಮೆ ಈ ಹಿಂದಿ ಹೇರಿಕೆಯೆಂಬ ಪೆಡಂಬೂತ ಅಡಿಯಿಟ್ಟಿತು. ಇಂಡಿಯಾದ ಒಕ್ಕೂಟದ ರಚನೆಯಲ್ಲಿ ಮುಕ್ಯ ಪಾತ್ರ ವಹಿಸುತ್ತಿದ್ದ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ಸಿನ ನೆಹರೂ ಮತ್ತು ಇನ್ನಿತರ ಬಡಗಣ ಇಂಡಿಯಾದ ನಾಯಕರುಗಳಿಗೆ ಹಿಂದಿಯನ್ನು ಒಕ್ಕೂಟದ ಆಡಳಿತ ನುಡಿಯನ್ನಾಗಿ ಮಾಡಬೇಕು ಮತ್ತು ಹಿಂದಿಯನ್ನು ನಾಡಿನ ಎಲ್ಲಾ ಮಂದಿಯು ಕಡ್ದಾಯವಾಗಿ ಕಲಿಯುವಂತೆ ಮಾಡಬೇಕು ಎಂಬ ಬಯಕೆ ಇತ್ತು. ಇತರ ನುಡಿಗಳ ನಾಶಕ್ಕೆ ಮುನ್ನುಡಿ ಬರೆಯುವ ಇಂತಹ ಬಯಕೆಯನ್ನು ಮತ್ತೆ ತಡೆಯುವ ಪ್ರಯತ್ನಗಳು ನಡೆದವು.

ಆಗ ಮದ್ರಾಸ್ ಪ್ರಾಂತ್ಯದಲ್ಲಿದ್ದ ಜಸ್ಟಿಸ್ ಪಾರ‍್ಟಿಯ ಹೆಸರು ದ್ರಾವಿಡ ಕಳಗಂ ಎಂದು ಬದಲಾಗಿತ್ತು, ಅದರ ಮುಂದಾಳ್ತನವನ್ನು ಪೆರಿಯಾರ್ ವಹಿಸಿಕೊಂಡಿದ್ದರು. ಇನ್ನು ರಚನೆಯಾಗುತ್ತಿರುವ ಒಕ್ಕೂಟ ಸರಕಾರದ ಹಿಂದಿ ಹೇರಿಕೆಯ ನಡೆಯನ್ನು ಪೆರಿಯಾರ್ ಸೇರಿದಂತೆ ತೆಂಕಣ ಇಂಡಿಯಾದ ಹಲವು ನಾಯಕರು ಪ್ರಶ್ನಿಸಿದರು. ಮದ್ರಾಸ್ ಪ್ರಾಂತ್ಯದ ಹಲವೆಡೆ ಮತ್ತೆ ಹೋರಾಟಗಳು ಶುರುವಾದವು. 1937 ರಲ್ಲಿ ನಡೆದ ಹೋರಾಟದ ತೀವ್ರತೆಯನ್ನು ಕಂಡಿದ್ದ ನೆಹರು ಹಾಗು ಕಾಂಗ್ರೆಸ್ ನಾಯಕರು, ಹಿಂದಿಯನ್ನು ರಾಶ್ಟ್ರಬಾಶೆಯನ್ನಾಗಿ ಮಾಡುವ ತೀರ‍್ಮಾನವನ್ನು ಕೈಬಿಟ್ಟು ಹಿಂದಿಯನ್ನು ಆಡಳಿತ ನುಡಿಯನ್ನಾಗಿ ಮಾಡಿದರು. ಮತ್ತು ಇಂಗ್ಲೀಶನ್ನು ಮುಂದಿನ 15 ವರುಶಗಳವರೆಗೆ ಆಡಳಿತ ನುಡಿಯನ್ನಾಗಿ ಹಿಂದಿಯ ಜೊತೆ ಬಳಸಲಾಗುವುದು ಎಂದು ಹೇಳಿದರು.

ಹಿಂದಿ ರಾಶ್ಟ್ರಬಾಶೆ ಆಗದೆ ಇದ್ದುದ್ದರಿಂದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡೆವು ಎಂದು ಹಲವು ತೆಂಕಣ ಇಂಡಿಯಾದ ನಾಯಕರು ಅಂದುಕೊಂಡರೆ, ಹಿಂದಿಯನ್ನು ಹೇಗಾದರು ಮಾಡಿ ಹರಡಲೇ ಬೇಕೆಂದು ಟೊಂಕ ಕಟ್ಟಿ ನಿಂತಿದ್ದ ಕೇಂದ್ರ ಸರಕಾರ ಹಿಂದಿಯನ್ನು ಒತ್ತಾಯ, ಆಮಿಶ ಮತ್ತು ವಿಶ್ವಾಸದ ಮೂಲಕ ಹಿಂದಿಯೇತರರಿಗೆ ಹೇರಲು ಬೇಕಾದ ಸಂವಿದಾನದ ಸಾಲುಗಳನ್ನು ಆರ‍್ಟಿಕಲ್ 343 ರಿಂದ 351 ತನಕ ಮಾಡಿಕೊಂಡಿತು. ಹಲವಾರು ತಂತ್ರಗಳ ಮೂಲಕ ಹಿಂದಿಯನ್ನು ಹರಡುವ ಕೆಲಸ ಮುಂದುವರಿಸಿತು.

ಮುಂದಿನ ಹದಿನೈದು ವರುಶಗಳ ತನಕ ಇಂಡಿಯಾದ ಇತರ ಯಾವುದೇ ನುಡಿಗೆ ಆಡಳಿತ ನುಡಿಯ ಸ್ತಾನಮಾನ ನೀಡಲಾಗದಂತೆ ನೋಡಿಕೊಳ್ಳಲಾಯಿತು. ನೋಡ ನೋಡುತ್ತಿದ್ದಂತೆ ಹದಿನೈದು ವರುಶಗಳು ಕಳೆಯುತ್ತಾ ಬಂದಿತು, ಆಡಳಿತ ನುಡಿಯ ಜಾಗದಲ್ಲಿದ್ದ ಇಂಗ್ಲಿಶನ್ನು ತೆಗೆದು ಹಿಂದಿಯನ್ನು ಮಾತ್ರ ಉಳಿಸಿಕೊಳ್ಳುವ ಕೆಲಸಕ್ಕೆ ಜೋರಾಗಿಯೇ ತಯಾರಿಗಳು ನಡೆದವು. ಇದನ್ನು ಅರಿತ ಇತರ ನುಡಿಗಳ ಪಂಗಡವು ಕೂಡ ಈ ಹಿಂದಿ ಹೇರಿಕೆಯ ಎದುರಿನ ಮತ್ತೊಂದು ಹೋರಾಟಕ್ಕೆ ಸಿದ್ದವಾದವು. ಒಕ್ಕೂಟದ ಆಳ್ವಿಕೆಯಲ್ಲಿ ಎಲ್ಲಾ ನುಡಿಗಳಿಗೆ ಒಂದೇ ಸ್ತಾನಮಾನ ನೀಡಬೇಕೆಂಬ ಕೂಗು ಕೇಳಿ ಬಂತು. 1965 ರಲ್ಲಿ ಇದಕ್ಕಾಗಿ ದೊಡ್ಡ ಹೋರಾಟವೇ ನಡೆಯಿತು, ಹೋರಾಟದ ಹಾದಿಯಲ್ಲಿ ಸಾಕಶ್ಟು ಮಂದಿಯು ಸಾವನ್ನಪ್ಪಿದರು, ಸೆರೆಯಾದರು, ಲಾಟಿಯೇಟು ತಿಂದರು, ಈ ನೆತ್ತರು ಮೆತ್ತಿದ ಕತೆಯನ್ನು ಮುಂದಿನ ಬರಹದಲ್ಲಿ ಅರಿಯೋಣ.

(ಮಾಹಿತಿ ಸೆಲೆ: wikipedia)

(ಚಿತ್ರ ಸೆಲೆ: promortelinguisticequality)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 23/01/2015

    […] ರತ್ನಾಕರ.ಹಿಂದಿ ಹೇರಿಕೆ ವಿರೋದಿ ಹೋರಾಟ – ಬಾಗ 1 ರಲ್ಲಿ ಮೊತ್ತ ಮೊದಲ ಹಿಂದಿ ಹೇರಿಕೆಯ […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *