ಇ-ಕಾಮರ‍್ಸ್

ಪ್ರಿಯದರ‍್ಶಿನಿ ಶೆಟ್ಟರ್.

e-com

ಕಳೆದ ವಾರ ನಾನು, ನನ್ನ ತಂಗಿ, ನನ್ನಮ್ಮ ಇತ್ತೀಚೆಗೆ ಹೆಚ್ಚಾಗುತ್ತಿರುವ ಇ-ಕಾಮರ‍್ಸ್‍ನ ಕುರಿತು ಚರ‍್ಚೆ ಮಾಡುತ್ತಿದ್ದೆವು. ಮನೆಯಲ್ಲಿಯೇ ಕುಳಿತು ಬೇಕಾದ ಸಾಮಗ್ರಿ ತರಿಸುವುದೇನೋ ಸರಿ. ಆದರೆ ಕೆಲವರು ತಾವಿರುವ ಪ್ರದೇಶದಲ್ಲಿಯೇ ತಮಗೆ ಬೇಕಾದ ವಸ್ತು ಸಿಕ್ಕರೂ ಅದರೆಡೆಗೆ ಗಮನ ಕೊಡದೇ ಎಲ್ಲವನ್ನೂ ಕಂಪ್ಯೂಟರ್ ಮೂಲಕವೇ ಕೊಂಡುಕೊಳ್ಳುವುದರ ಬಗ್ಗೆ ನಾವು ಮಾತನಾಡುತ್ತಿದ್ದೆವು. ಕೆಲವು ವರ‍್ಶಗಳ ಹಿಂದೆ ಮಾಲ್ ಸಂಸ್ಕ್ರುತಿಗೆ ಜನರು ಮಾರು ಹೋದಾಗ, ಚಿಲ್ಲರೆ ವ್ಯಾಪಾರಸ್ತರು ದಿವಾಳಿಯಾಗುವ ಬಯದಲ್ಲಿದ್ದ ಹಾಗೆ ಮುಂಬರುವ ವರ‍್ಶಗಳಲ್ಲಿ ಜನರು ಇದೇ ರೀತಿ ಅಂತರ್‍ಜಾಲದ ಮೂಲಕ ತಮ್ಮ ವ್ಯಾಪಾರ-ವಹಿವಾಟು ಮುಂದುವರೆಸಿದರೆ, ಬಹುಶಹ ಮಾಲ್‍ಗಳ ಹಾಗೂ ದೊಡ್ಡ ಶಾಪಿಂಗ್ ಸೆಂಟರ್‍ಗಳ ಮಾಲೀಕರಿಗೂ ಈ ಬಯ ಬರಬಹುದೇನೋ?

ಅಂದಹಾಗೆ ಮಾಲ್‍ಗಳು ಬರೀ ಶ್ರೀಮಂತ ವರ‍್ಗದ ಮೇಲೆ ಅವಲಂಬಿತವಾಗಿರದೇ ಅವು ಮದ್ಯಮ ವರ‍್ಗದ ಜನರನ್ನು ತಮ್ಮೆಡೆ ಸೆಳೆಯಲು ಹಲವಾರು ಸೌಲಬ್ಯಗಳನ್ನು ಒದಗಿಸಲು ತಯಾರಾಗಿರುತ್ತವೆ. ‘ಒಂದನ್ನು ಕೊಂಡರೆ ಮತ್ತೊಂದು ಪ್ರೀ’, ‘ಶೇ __ ಇಶ್ಟು ರಿಯಾಯಿತಿ’, ‘ಕನಿಶ್ಟ ಇಶ್ಟು ಬೆಲೆಯ ಸಾಮಾನು ಕರೀದಿಸಿದರೆ, ಒಂದು ಉಡುಗೊರೆ’, ಇತ್ಯಾದಿ ಜಾಹೀರಾತುಗಳನ್ನು ನಾವು ದಿನನಿತ್ಯ ಟಿ.ವಿ.ಯಲ್ಲಿ, ಪತ್ರಿಕೆಯಲ್ಲಿ ನೋಡುತ್ತಲೇ ಇರುತ್ತೇವೆ. ಅಪರೂಪಕ್ಕೊಮ್ಮೆ ಇಂತಹ ಜಾಲತಾಣಗಳಲ್ಲಿ ವ್ಯವಹರಿಸುವ ಬದಲು, ದಿನನಿತ್ಯ ಉಪಯೋಗಿಸುವ ಸಾಮಾನುಗಳನ್ನು ಈ ಮೂಲಕ ಪಡೆಯುವುದು ನಮ್ಮ ದುಂದುವೆಚ್ಚಕ್ಕೆ ಕಾರಣವಾಗುತ್ತದೆ.

ಹೀಗೆ ಮಾತಾಡುತ್ತ ಕುಳಿತಿರುವಾಗ ನನ್ನಮ್ಮ ಗಟನೆಯೊಂದನ್ನು ಹೇಳಿದರು: ಒಂದು ಸಂಜೆ ಅಮ್ಮ ಕೆಲಸದಿಂದ ಹಿಂದಿರುವಾಗ ಬಸ್ಸಿನಲ್ಲಿ ಸೀಟು ಸಿಕ್ಕು ಕುಳಿತಿದ್ದರಂತೆ. ಮುಂದಿನ ಸ್ಟಾಪಿನಲ್ಲಿ ಒಬ್ಬ ವಯೋವ್ರುದ್ದೆ ಬಸ್ಸು ಹತ್ತಿದಳಂತೆ. ಆಕೆಗೆ ನಿಲ್ಲಲೂ ಬಾರದಶ್ಟು ವಯಸ್ಸಾಗಿತ್ತು – ಸುಮಾರು 75. ಬಸ್ಸಿನಲ್ಲಿ ಯಾವ ಸೀಟೂ ಕಾಲಿ ಇಲ್ಲ. ಆಕೆಯ ಅವತಾರ ನೋಡಿದವರಿಗೆ ಆಕೆಯನ್ನು ತಮ್ಮ ಹತ್ತಿರ ಕೂರಿಸಿಕೊಳ್ಳಲು ಹಿಂಜರಿಕೆಯಾಗುವಶ್ಟು ಆಕೆಯ ಚರ‍್ಮದ ಮೇಲೆ ಮಣ್ಣು ಅಂಟಿಕೊಂಡಿತ್ತಂತೆ. ಆದರೂ ಮೂವರು ಜನ ಕೂರಬಹುದಾದ ಸೀಟಿನಲ್ಲಿ ನನ್ನ ಅಮ್ಮ ಆಕೆಗೆ ಕೂರಲು ಸ್ತಳ ಕೊಟ್ಟು ಕುಳಿತುಕೊಳ್ಳಲು ಹೇಳಿದರಂತೆ. ಸ್ವಲ್ಪ ಹೊತ್ತಿನ ಬಳಿಕ ಬಸ್ಸಿನಲ್ಲಿದ್ದ ಒಬ್ಬ ಯುವಕ ಆಕೆಯನ್ನು “ಮಾರ‍್ಕೆಟ್‍ಗೆ ಹೋಗಿದ್ದೇನು?” ಎಂದು ಕೇಳಿದನಂತೆ. ಆಕೆ ಹೌದೆಂದೂ ಹಾಗೂ ತನ್ನ ಬೆಳೆಗೆ ಸಿಕ್ಕ ಹಣ 16 ಸಾವಿರವಾಯಿತೆಂದೂ ಹೇಳಿದಳಂತೆ. ಅನಕ್ಶರಸ್ತೆಯಾಗಿದ್ದರೂ ಅಕೆಯ ದುಡಿಮೆ ಹಾಗೂ ಇಳಿವಯಸ್ಸಿನಲ್ಲೂ ಆಕೆಗಿರಬಹುದಾದ ವ್ಯಾಪಾರ ಕೌಶಲ್ಯವನ್ನು ಮೆಚ್ಚಲೇಬೇಕು. ಆಗ ಅಮ್ಮನಿಗೆ -‘ಇಂತಹ ಜನ ದುಡಿದಾಗಲಲ್ಲವೇ ನಾವು ಅನ್ನ ಕಾಣುವುದು?’ ಅಂತ ಅನಿಸಿತಂತೆ.

ಎಲ್ಲವನ್ನೂ ಕಡಿಮೆ ರೇಟಿಗೆ ಸಿಗುತ್ತದೆ ಎಂದ ಮಾತ್ರಕ್ಕೆ ಕೊಳ್ಳುವ ಬದಲು, ‘ಆ ಪದಾರ‍್ತ ನಿಜಕ್ಕೂ ನಮಗೆ ಅವಶ್ಯಕವಾಗಿದೆಯೇ’ ಎಂಬ ಯೋಚನೆ ನಮಗೆ ಬರಬೇಕಲ್ಲವೇ? ಶ್ರೀಮಂತರಿಗೆ ಹಣ ಕೊಡುವ ಬದಲು, ಬಡವರಿಗೆ ಆ ಹಣ ಕೊಟ್ಟರೆ ಅದು ಅವರ ಒಂದು ಹೊತ್ತಿನ ಊಟಕ್ಕಾದರೂ ಆದೀತು.

( ಚಿತ್ರ ಸೆಲೆ: fbs-sd.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: