ವ್ಯವಸಾಯ – ಆರೋಗ್ಯ

– ಸಿ.ಪಿ.ನಾಗರಾಜ.

cane_1902992b

ಮದ್ದೂರಿನ ಸರ‍್ಕಾರಿ ಮಿಡಲ್‍ಸ್ಕೂಲಿನಲ್ಲಿ ಆರನೆಯ ತರಗತಿಯಲ್ಲಿ ನಾನು ಓದುತ್ತಿದ್ದಾಗ ನಡೆದ ಪ್ರಸಂಗವಿದು.

ಆಗ ಅಯ್ದನೆಯ ತರಗತಿಯಿಂದ ತೇರ‍್ಗಡೆಯಾಗಿ ಆರನೆಯ ತರಗತಿಗೆ ಬರುತ್ತಿದ್ದ ವಿದ್ಯಾರ‍್ತಿಗಳು “ವ್ಯವಸಾಯ/ಆರೋಗ್ಯ” ಎಂಬ ಎರಡು ಸಬ್ಜೆಕ್ಟ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಎಂಟನೆಯ ತರಗತಿಯ ತನಕ ಓದುವ ಅವಕಾಶವಿತ್ತು. ನಮ್ಮ ತರಗತಿಯಲ್ಲಿದ್ದ ವಿದ್ಯಾರ‍್ತಿಗಳಲ್ಲಿ ಅಯ್ದು ಮಂದಿ ಹುಡುಗಿಯರನ್ನು ಹೊರತುಪಡಿಸಿ, ಇನ್ನುಳಿದ ನಲವತ್ತು ಮಂದಿ ಹುಡುಗರೆಲ್ಲರೂ ಅಯ್ದನೆಯ ತರಗತಿಯಲ್ಲಿದ್ದಾಗಲೇ ಮುಂದೆ ವ್ಯವಸಾಯವನ್ನು ತೆಗೆದುಕೊಳ್ಳಬೇಕೆಂಬ ನಿಲುವನ್ನು ಹೊಂದಿದ್ದೆವು. ಇದಕ್ಕೆ ಕಾರಣವೇನೆಂದರೆ ವ್ಯವಸಾಯದ ಬಗೆಗಿನ ಆಸಕ್ತಿಯಿಂದಲ್ಲ; ಆರೋಗ್ಯಶಾಸ್ತ್ರವನ್ನು ಪಾಟ ಮಾಡುತ್ತಿದ್ದ ಮೇಸ್ಟ್ರು ರಂಗೇಗವುಡರ ಬಗೆಗಿನ ಹೆದರಿಕೆಯಿಂದ.

ಸುಮಾರು ನಲವತ್ತರ ಪ್ರಾಯದ ರಂಗೇಗವುಡರು ಹುಡುಗರನ್ನು ಚೆನ್ನಾಗಿ ತದಕುವುದರಲ್ಲಿ ಇಡೀ ಸ್ಕೂಲಿನಲ್ಲಿಯೇ ಎತ್ತಿದ ಕಯ್. ಸಣ್ಣಪುಟ್ಟ ಕಾರಣಕ್ಕೆಲ್ಲಾ ವಿದ್ಯಾರ‍್ತಿಗಳ ಮಯ್-ಕಯ್ ಮೇಲೆಲ್ಲಾ ಬಾಸುಂಡೆಗಳು ಏಳುವಂತೆ ಬೆತ್ತದಿಂದ ಸಿಕ್ಕಾಬಟ್ಟೆ ಬಡಿಯುತ್ತಾರೆಂಬ ಸುದ್ದಿಯು ನಮ್ಮೆಲ್ಲರನ್ನೂ ಹೆಚ್ಚಿನ ಆತಂಕಕ್ಕೆ ಗುರಿಮಾಡಿತ್ತು. ಕೆಲವೊಮ್ಮೆ ಅವರು ತಮ್ಮ ತರಗತಿಯಲ್ಲಿನ ವಿದ್ಯಾರ‍್ತಿಗಳ ಬೆನ್ನಿನ ಮೇಲೆ ಗುದ್ದುತ್ತಿದ್ದಾಗ ಉಂಟಾಗುತ್ತಿದ್ದ ಶಬ್ದ, ಅಕ್ಕಪಕ್ಕದಲ್ಲಿದ್ದ ನಮ್ಮ ಕೊಟಡಿಗೂ ಕೇಳಿಸುತ್ತಿದ್ದು, ನಮ್ಮೆಲ್ಲರನ್ನೂ ಅಂಜುವಂತೆ ಮಾಡಿತ್ತು. ಇಂತಹ ಮೇಸ್ಟರ ಸಹವಾಸವೇ ಬೇಡವೆಂಬ ಒಕ್ಕೊರಲಿನ ಒಮ್ಮತದ ತೀರ‍್ಮಾನಕ್ಕೆ ಬಂದಿದ್ದ ನಮಗೆ ವ್ಯವಸಾಯದ ಮೇಸ್ಟರು ಸೀತಾರಾಮಯ್ಯನವರ ಬಗ್ಗೆ ಬಹಳ ಒಳ್ಳೆಯ ಒಲವಿತ್ತು. ವಯಸ್ಸಿನಲ್ಲಿ ಅಯ್ವತ್ತರ ಗಡಿಯನ್ನು ದಾಟಿದ್ದ ಸೀತಾರಾಮಯ್ಯನವರು ಯಾವೊಬ್ಬ ವಿದ್ಯಾರ‍್ತಿಯನ್ನಾಗಲಿ ತೀವ್ರವಾಗಿ ದಂಡಿಸುವುದಿಲ್ಲವೆಂದೂ, ಎಲ್ಲೋ ಅಪರೂಪಕ್ಕೆ ಒಮ್ಮೊಮ್ಮೆ ಕೋಪ ಬಂದಾಗ, ತಮ್ಮ ಕೊಡೆಯಾಕಾರದ ಉದ್ದನೆಯ ವಾಕಿಂಗ್‍ಸ್ಟಿಕ್ ಅನ್ನು ವಿದ್ಯಾರ‍್ತಿಗಳ ಕೊರಳಿಗೆ ಹಾಕಿ, ತಮ್ಮ ಬಳಿಗೆ ಎಳೆದುಕೊಂಡು, ಕಪಾಳಕ್ಕೆ ಒಂದೋ ಎರಡೋ ಬಾರಿಸುತ್ತಾರೆಂಬ ಸುದ್ದಿ ಕೇಳಿಬಂದಿತ್ತು. ರಂಗೇಗವುಡರ ದೊಡ್ಡ ದಂಡನೆಯ ಮುಂದೆ, ಇದು ಏನೇನು ಅಲ್ಲದ ಸಾದಾ ಸಜ ಎನಿಸಿತ್ತು.

ವ್ಯವಸಾಯವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಇದ್ದ ಮತ್ತೊಂದು ಕಾರಣವೆಂದರೆ, ಶಾಲೆಯಿಂದ ಎರಡು ಪರ‍್ಲಾಂಗು ದೂರದಲ್ಲಿದ್ದ ನಮ್ಮ ಶಾಲೆಯ ಒಡೆತನಕ್ಕೆ ಸೇರಿದ್ದ ಒಂದು ಎಕರೆ ಹಣ್ಣಿನ ತೋಟದ ಸೆಳೆತ. ಈ ತೋಟದಲ್ಲಿ ಸೀಬೆಕಾಯಿ-ನೆಲ್ಲಿಕಾಯಿ-ಪರಂಗಿ-ಹಲಸು-ಸಪೋಟ-ಸೀತಾಪಲ-ರಾಂಪಾಲ-ತೆಂಗು ಮುಂತಾದ ಬಗೆಬಗೆಯ ಹಣ್ಣುಕಾಯಿಗಳ ಮರಗಿಡಗಳು ಸೊಂಪಾಗಿ ಕಂಗೊಳಿಸುತ್ತಿದ್ದವು. ಸೀಬೆಕಾಯಿ ಮತ್ತು ನೆಲ್ಲಿಕಾಯಿ ಗಿಡಗಳು ವಿದ್ಯಾರ‍್ತಿಗಳನ್ನು ಅಯಸ್ಕಾಂತದಂತೆ ತಮ್ಮತ್ತ ಸೆಳೆಯುತಿದ್ದವು. ವಾರದಲ್ಲಿ ಎರಡು ದಿನ ಒಂದೆರಡು ಗಂಟೆಗಳ ಕಾಲ ಈ ತೋಟದಲ್ಲಿ ಬೇಸಾಯಕ್ಕೆ ಸಂಬಂದಪಟ್ಟ ಕೆಲಸಗಳನ್ನು ಮಾಡಿ ಶ್ರಮಪಟ್ಟಿದ್ದಕ್ಕಿಂತ ಹೆಚ್ಚಾಗಿ, ತೋಟದಲ್ಲಿನ ಹಣ್ಣುಗಳನ್ನು ಕದ್ದು ತಿಂದು, ಅವುಗಳ ರುಚಿಯನ್ನು ಬಣ್ಣಿಸುತ್ತಿದ್ದ ನಮ್ಮ ಮುಂದಿನ ತರಗತಿಯ ವಿದ್ಯಾರ‍್ತಿಗಳ ಸಾಹಸದ ಕೆಲಸಗಳನ್ನು ಕೇಳುತ್ತಿದ್ದರೆ, ಆರನೆಯ ತರಗತಿಗೆ ನಾವು ಯಾವಾಗ ಹೋಗುತ್ತೇವೆಯೋ ಎಂದು ಮನಸ್ಸು ಹಂಬಲಿಸುತ್ತಿತ್ತು. ಅಂತಹ ದಿನ ನಮ್ಮ ಪಾಲಿಗೆ ಬಂದೇ ಬಿಟ್ಟಿತು. ಅಯ್ದನೆಯ ತರಗತಿಯಿಂದ ತೇರ‍್ಗಡೆಯಾಗಿ ಆರನೆಯ ತರಗತಿಗೆ ಬಂದು ಕುಳಿತ ಮೊದಲನೆಯ ದಿನದಂದು ನಡುಹಗಲಿನ ಮೂರು ಗಂಟೆಯ ಕನ್ನಡದ ತರಗತಿಯು ಮುಗಿಯುತ್ತಿದ್ದಂತೆಯೇ, ಕನ್ನಡದ ಮೇಸ್ಟರು ಚವುಡಯ್ಯನವರು ನಮ್ಮೆಲ್ಲರನ್ನೂ ಕುರಿತು –

“ಪ್ರತಿ ಸೋಮವಾರ ಮತ್ತು ಶುಕ್ರವಾರ ಮೂರು ಗಂಟೆಯಿಂದ ನಾಲ್ಕು ಗಂಟೆಯವರೆಗೆ ವ್ಯವಸಾಯ ಮತ್ತು ಆರೋಗ್ಯಶಾಸ್ತ್ರದ ತರಗತಿಗಳು ನಿಮಗೆ ನಡೆಯುತ್ತವೆ. ಆರೋಗ್ಯಶಾಸ್ತ್ರವನ್ನು ತೆಗೆದುಕೊಳ್ಳುವ ವಿದ್ಯಾರ‍್ತಿಗಳು ಇದೇ ರೂಮಿನಲ್ಲಿ ಕುಳಿತುಕೊಂಡಿರಿ, ರಂಗೇಗವುಡರು ಬಂದು ತರಗತಿಯನ್ನು ತೆಗೆದುಕೊಳ್ಳುತ್ತಾರೆ. ವ್ಯವಸಾಯವನ್ನು ತೆಗೆದುಕೊಳ್ಳುವವರು ಪಕ್ಕದ ರೂಮಿಗೆ ಎದ್ದು ಹೋಗಿ” ಎಂದು ಹೇಳಿ, ಹೊರಕ್ಕೆ ಹೋಗುತ್ತಿದ್ದಂತೆಯೇ, ನಾವೆಲ್ಲಾ ” ಹೊಂಗ್ಲೋ…” ಎಂದು ಅರಚುತ್ತಾ ಪಕ್ಕದ ಕೊಟಡಿಯತ್ತ ಬಿದ್ದಂಬೀಳ ಓಡಿದೆವು. ಬೇಸಾಯದ ಉಪಕರಣಗಳಿಂದ ತುಂಬಿಹೋಗಿ, ತುಸು ಇಕ್ಕಟ್ಟಾಗಿದ್ದ ವ್ಯವಸಾಯದ ಕೊಟಡಿಯ ನೆಲದ ಮೇಲೆ ನಾವು ನಲವತ್ತು ಮಂದಿ ತುಂಬಾ ಉತ್ಸಾಹದಿಂದ ಜಾಗ ಮಾಡಿಕೊಂಡು ಕುಳಿತುಕೊಂಡೆವು. ಸೀತಾರಾಮಯ್ಯನವರು ನಮ್ಮೆಲ್ಲರನ್ನೂ ನೋಡಿ, ಅಚ್ಚರಿಗೊಂಡು-

“ಇದೇನ್ರೋ…ಎಲ್ಲಾ ಬಂದ್‍ಬುಟ್ರಿ ” ಎಂದು ಉದ್ಗಾರವೆಳೆದರು.

“ಹುಡುಗೀರೆಲ್ಲಾ ಅಲ್ಲೇ ಅವ್ರೆ ಸಾರ್ ” ಎಂದು ಜೋರಾಗಿ ಕೂಗಿ ಹೇಳಿದೆವು.

ವ್ಯವಸಾಯವನ್ನು ತೆಗೆದುಕೊಳ್ಳುವುದಕ್ಕೆ ಹುಡುಗಿಯರಿಗೆ ಅವಕಾಶವಿರಲಿಲ್ಲ . ಆದ್ದರಿಂದ ಅವರು ಅನಿವಾರ‍್ಯವಾಗಿ ಅಲ್ಲೇ ಕುಳಿತಿದ್ದಾರೆಂಬುದನ್ನು ಅರಿತಿದ್ದ ಸೀತಾರಾಮಯ್ಯನವರು-

“ಅಲ್ಲಾ ಕಣ್ರೋ…ಹುಡುಗರಲ್ಲಿ ಕೆಲವರಾದರೂ ಆರೋಗ್ಯದ ತರಗತಿಯಲ್ಲಿ ಇರ‍್ಲೇಬೇಕು” ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿರುವಾಗಲೇ, ಹೆಡ್‍ಮಾಸ್ಟರ್ ಅವರ ಜತೆಗೂಡಿ ರಂಗೇಗವುಡರು ಬೆತ್ತ ಹಿಡಿದುಕೊಂಡೇ ವ್ಯವಸಾಯದ ಕೊಟಡಿಯೊಳಕ್ಕೆ ದೊಡ್ಡ ಹೆಜ್ಜೆಗಳನ್ನು ಇಡುತ್ತ ಬಂದರು. ಮತ್ತೆ ಎದ್ದು ಕುಳಿತ ನಾವೆಲ್ಲಾ ರಂಗೇಗವುಡರ ಕೆಂಗಣ್ಣಿನ ನೋಟವನ್ನು ಎದುರಿಸಲಾಗದೆ ಬೆಚ್ಚಿ ಬೆದರಿದೆವು. ಹೆಡ್‍ಮಾಸ್ಟರ್ ಅವರು ಮುಗುಳ್ನಗುತ್ತಾ-

“ಏನ್ ಸೀತಾರಾಮಯ್ಯನವರೇ…ಎಲ್ಲರನ್ನೂ ನೀವೇ ಕರ‍್ಕೊಂಡ್ರೆ…ಆರೋಗ್ಯಶಾಸ್ತ್ರದ ತರಗತಿ ಏನಾಗಬೇಕು?” ಎಂದು ಕೇಳಿದರು.

“ಅದನ್ನೇ ನಾನು ಈ ಹುಡುಗರಿಗೆ ಹೇಳ್ತಿದ್ದೆ ಸಾರ್. ನಿಮ್ಮಲ್ಲಿ ಕೆಲವರಾದರೂ ಆರೋಗ್ಯದ ಕ್ಲಾಸಿಗೆ ಹೋಗಿ ಅಂತ” ಎಂದು ವಿನಮ್ರವಾಗಿ ನುಡಿದರು. ಈಗ ರಂಗೇಗವುಡರು ನಮ್ಮೆಲ್ಲರನ್ನೂ ಕೆಲವು ಗಳಿಗೆಯ ಕಾಲ ಕ್ರೂರವಾಗಿ ದಿಟ್ಟಿಸಿ ನೋಡುತ್ತಿದ್ದು –

“ಕೋಟೆಬೀದಿಯಿಂದ ಬರ‍್ತಾಯಿರುವ ಬ್ರಾಹ್ಮಣ ಹುಡುಗರು ಯಾರ‍್ಯಾರು ಇದ್ದೀರಿ…ಎದ್ದು ನಿಂತ್ಕೊಳಿ” ಎಂದು ಅಬ್ಬರಿಸಿದರು. ಸುಮಾರು ಹದಿನಯ್ದು ಮಂದಿ ಒಬ್ಬೊಬ್ಬರಾಗಿ ಎದ್ದು ನಿಂತರು. ರಂಗೇಗವುಡರು ಅವರನ್ನು ಕೆಕ್ಕರಿಸಿದ ಕಣ್ಣುಗಳಿಂದ ನೋಡುತ್ತ –

“ನೀವು ಯಾವ ಗದ್ದೆ ತೆವರಿ ಕಡಿದು ನಾಟಿ ಹಾಕಬೇಕಾಗಿದೆಯೋ…ಬನ್ರೋ…ಈ ಕಡೆ” ಎಂದು ಮುಂದಕ್ಕೆ ಕರೆದು, ಬೆತ್ತದಿಂದ ಪ್ರತಿಯೊಬ್ಬರ ಕಯ್ ಮೇಲೆ ಒಂದೊಂದು ಏಟನ್ನು ಬಾರಿಸುತ್ತಾ –

“ನಡೀರಿ…ಆ ರೂಮಿಗೆ” ಎಂದು ತಳ್ಳಿದರು. ಏಟುಗಳನ್ನು ತಿಂದ ಬ್ರಾಹ್ಮಣ ಹುಡುಗರು ಕಯ್ಗಳನ್ನು ತೀಡಿಕೊಳ್ಳುತ್ತಾ ಅತ್ತ ತೆರಳುತ್ತಿದ್ದಂತೆಯೇ, ಇತ್ತ ಮತ್ತೆ ರಂಗೇಗವುಡರ ದನಿ ಗುಡುಗಿತು.

“ಪೇಟಿಬೀದಿಯಿಂದ ಬರ‍್ತಾಯಿರುವ ಸೆಟ್ಟರ ಹುಡುಗರೆಲ್ಲಾ ಎದ್ದು ನಿಂತ್ಕೊಳಿ”.

ಅಯ್ದಾರು ಮಂದಿ ಅಂಜಿಕೆಯಿಂದಲೇ ಎದ್ದು ನಿಂತರು.

“ಲೇ…ನೀವೇನು ಗೊಬ್ಬರ ಹೊರುವುದಕ್ಕೆ ಹೋಗ್ತಿರೇನೋ” ಎಂದು ಅಣಕವಾಡುತ್ತ, ಅವರೆಲ್ಲರನ್ನೂ ಬೆತ್ತದಿಂದ ಬಡಿದು , ಆರೋಗ್ಯಶಾಸ್ತ್ರದ ಕೊಟಡಿಯತ್ತ ದಬ್ಬಿದರು.

ಇನ್ನುಳಿದ ನಾವೆಲ್ಲಾ ಒಕ್ಕಲಿಗ-ಲಿಂಗಾಯತ-ಈಡಿಗ-ಅಗಸ-ದಲಿತ-ಮತ್ತು ಇನ್ನಿತರ ಜಾತಿಗಳಿಗೆ ಸೇರಿದವರಾಗಿದ್ದೆವು. ಮೇಗಳಕೇರಿ, ಕೆಳಗಲಕೇರಿ, ಹೊಳೆಬೀದಿ ಹಾಗೂ ದಲಿತರಕೇರಿಗಳಿಂದ ಶಾಲೆಗೆ ಬರುತ್ತಿದ್ದೆವು. ರಂಗೇಗವುಡರು ಇನ್ನು ಯಾವ ಯಾವ ಜಾತಿಗಳ ವಿಚಾರಣೆ ಮಾಡಿ, ನಮ್ಮಲ್ಲಿ ಯಾರ‍್ಯಾರನ್ನು ಬಡಿದು ಆರೋಗ್ಯಶಾಸ್ತ್ರದ ಕಡೆಗೆ ಎಳೆದೊಯ್ಯುತ್ತಾರೆಯೋ ಎಂದು ನಡುಗತೊಡಗಿದೆವು. ಅಶ್ಟರಲ್ಲಿ ಹೆಡ್‍ಮಾಸ್ಟರ್ ಅವರು ರಂಗೇಗವುಡರತ್ತ ತಿರುಗಿ –

“ರಂಗೇಗವುಡರೇ…ಇನ್ನು ಸಾಕು ಬಿಡಿ. ಆರೋಗ್ಯಶಾಸ್ತ್ರಕ್ಕೆ ಹುಡುಗಿಯರೂ ಸೇರಿದಂತೆ ಇಪ್ಪತ್ತಯ್ದರ ಮೇಲೆ ಆಯ್ತಲ್ಲ. ವ್ಯವಸಾಯಕ್ಕೂ ಒಂದು ಹದಿನಯ್ದು-ಇಪ್ಪತ್ತು ಮಂದಿ ಇರ‍್ಲಿ” ಎಂದಾಗ ರಂಗೇಗವುಡರು ಮರುಮಾತಿಲ್ಲದೇ ಹೊರಟರು. ಇದುವರೆಗೂ ಎಡಗಯ್ಯಲ್ಲಿ ಜೀವ ಹಿಡಿದುಕೊಂಡು ಕುಳಿತಿದ್ದ ನಾವೆಲ್ಲಾ ವ್ಯವಸಾಯದಲ್ಲೇ ಉಳಿಯುವುದಕ್ಕೆ ನೆರವಾದ ಕೆಳಜಾತಿಯಲ್ಲಿ ಹುಟ್ಟಿದ್ದಕ್ಕಾಗಿ ಅಂದು ತುಂಬಾ ಹೆಮ್ಮೆಪಟ್ಟುಕೊಂಡೆವು.

(ಚಿತ್ರ ಸೆಲೆ: telegraph.co.uk )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. sir namaskara neevu yava maddurinalli odiddu ………?

Nagaraja Chekkere Puttegowda ಗೆ ಅನಿಸಿಕೆ ನೀಡಿ Cancel reply

%d bloggers like this: