ಪದ ಪದ ಕನ್ನಡ ಪದಾನೇ! ಕಟ್ಟಣೆಯ ಹಾದಿಯಲ್ಲಿ ಮೂರು ವರುಶ!

ಸಂದೀಪ್ ಕಂಬಿ.

3

ಕನ್ನಡದಲ್ಲೇ ಪದಗಳನ್ನು ಕಟ್ಟಿ, ಎಲ್ಲ ಅರಿಮೆ ತಿಳಿವುಗಳನ್ನು ಕಟ್ಟುವ ಗುರಿಯಿಂದ ‘ಪದ ಪದ ಕನ್ನಡ ಪದಾನೇ!‘ ಎಂಬ ಗುಂಪನ್ನು ತೊಡಗಿಸಿ ನಡೆಸುತ್ತ ಬಂದಿರುವುದು ನಿಮಗೆಲ್ಲ ತಿಳಿದೇ ಇದೆ. ಇಂದಿಗೆ, ಈ ಗುಂಪು ತೊಡಗಿ ಮೂರು ವರುಶಗಳು ತುಂಬಿವೆ. ಹುರುಪಿನಿಂದ ತೊಡಗಿಕೊಂಡು ಎಡೆಬಿಡದೆ ಹೊಸ ಪದಗಳನ್ನು ಕಟ್ಟುವ ಕಾಯಕದಲ್ಲಿ ತೊಡಗಿರುವ ಗುಂಪಿನ ಎಲ್ಲ ಸದಸ್ಯರಿಗೂ ಗುಂಪಿನ ನಡೆಸುಗರ ಕಡೆಯಿಂದ ನನ್ನಿ! ಇಂತಹ ಪದಗಳನ್ನು ಕಟ್ಟುವವರು ಮತ್ತು ಬಳಸುವವರ ಅನುಬವ ಮಹಲಿಂಗ ರಂಗನು ಹೇಳಿರುವಂತೆ  ಕನ್ನಡ ಪದಗಳು ‘ಸುಲಿದ ಬಾಳೆಯ ಹಣ್ಣಿನಂದದಿ’ ಎಂಬಂತೆಯೇ ಆಗಿದೆ.

ಎತ್ತುಗೆಗೆ ‘ವ್ಯಾಸ’, ‘ಮಾಸಿಕ’, ‘ದ್ಯುತಿ’ ಎಂಬ ಪದಗಳಿಗಿಂತ ಕನ್ನಡದವೇ ಆದ ‘ಅಡ್ಡಳತೆ’, ‘ತಿಂಗಳ’, ‘ಬೆಳಕು’ ಎಂಬಂತಹ ಪದಗಳು ಮನಸಿಗೆ, ಬಾವನೆಗಳಿಗೆ ಹತ್ತಿರ ಮಾತ್ರವಲ್ಲದೆ, ತಿಳಿವಿಗೂ ಹತ್ತಿರವಾಗಿವೆ.

ಈ ನಮ್ಮ ತೊಡಗಿಕೆಯನ್ನು ಕಂಡ ಕೆಲವರು ಇರುವ ಪದಗಳನ್ನೇ ಬಳಸುತ್ತ ಅದೇ ಮಾದರಿಯಲ್ಲಿ ಪದಗಳನ್ನು ಕಟ್ಟುವುದು ಮುಂದುವರಿಸಬಹುದು ಎಂದರೆ ಇನ್ನು ಕೆಲವರು ಇಂಗ್ಲಿಶ್ ನುಡಿ ಮತ್ತು ಅದರ ಪದಗಳು ಇರುವಾಗ ಇದು ಅನಗತ್ಯ ಎಂಬ ತಪ್ಪು ತಿಳುವಳಿಕೆಯಲ್ಲಿದ್ದಾರೆ. ಇಂಗ್ಲಿಶ್ ನುಡಿಯಲ್ಲಿ ‘Not Invented Here Syndrome’ ಅಂದರೆ ‘ಇಲ್ಲಿ ಕಟ್ಟಿದ್ದು ಅಲ್ಲ ಬೇನೆ’ ಎಂಬ ನುಡಿಗಟ್ಟು ಇದೆ. ಏನಾದರೂ ಮಾಡುಗೆ (product) ಇಲ್ಲವೇ ಬಗೆಹರಿಕೆ (solution) ಕಟ್ಟುವಾಗ ಹೊರಗಿನವರ ಯಾವುದೇ ವಸ್ತುಗಳನ್ನು ಬಳಸಲು ಕೆಲವರು (ಕೆಲ ಕಂಪನಿಗಳು) ಹಿಂಜರಿಯುತ್ತಾರೆ ಇಲ್ಲವೇ ಹೆದರುತ್ತಾರೆ.  ಅದಕ್ಕೇ ಇದನ್ನು ಬೇನೆ ಎಂದು ಕರೆಯಲಾಗುತ್ತದೆ. ಎತ್ತುಗೆಗೆಗೆ, ಮನೆ ಕಟ್ಟುವಾಗ, ಮನೆಯ ಗೋಡೆಗಳಿಗೆ ಬಳಿಯುವ ಬಣ್ಣವನ್ನು ನೀವೇ ತಯಾರಿಸುತ್ತೀರೋ, ಇಲ್ಲವೇ ಬೇರೆಯವರು (ಬೇರೆ ಕಂಪನಿಯವರು) ತಯಾರಿಸಿರುವ ಬಣ್ಣವನ್ನು ತಂದು ಬಳಿಸುತ್ತೀರೋ ಎಂದು ಕೇಳಿದರೆ  ಸಹಜವಾಗಿ ನಿಮ್ಮ ಉತ್ತರ ಬೇರೆಯವರು ಮಾಡಿರುವ ಬಣ್ಣವನ್ನು ತರಿಸಿ ಬಳಿಸುತ್ತೇವೆ ಎಂದೇ ಆಗಿರುತ್ತದೆ ಅಲ್ಲವೇ? ಹಾಗೆಯೇ, ಈಗಾಗಲೇ ಇರುವ ಪದಗಳನ್ನೇ, ಪದಕಟ್ಟುವ ಬಗೆಗಳನ್ನೇ ಮುಂದುವರಿಸುವುದು ಒಳ್ಳೆಯದಲ್ಲವೇ?  ‘ಪದ ಪದ ಕನ್ನಡ ಪದಾನೇ!‘, ಹೊನಲು ಮುಂತಾದ ಪ್ರಯತ್ನಗಳು ‘ಇಲ್ಲಿ ಕಟ್ಟಿದ್ದಲ್ಲ ಬೇನೆ’ಯನ್ನು ತೋರಿಸುತ್ತವೆಯಲ್ಲವೇ ಎಂಬ ಕೇಳ್ವಿಗಳನ್ನು ಹಲವರು ಕೇಳಿದ್ದಾರೆ.

‘ಇಲ್ಲಿ ಕಟ್ಟಿದಲ್ಲ ಬೇನೆ’ ಬಗ್ಗೆ ಜೋಯೆಲ್ ಸ್ಪೋಲ್ಸ್ಕಿ ಎಂಬವರು ತಮ್ಮ ಒಂದು ಬರಹದಲ್ಲಿ ಬರೆಯುತ್ತ ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದಾರೆ. ಇವರು ಮೈಕ್ರೋಸಾಪ್ಟ್ ಕೂಟದಲ್ಲಿ ಎಕ್ಸೆಲ್ ತಂಡದ ಹಮ್ಮುಗೆಯ ಮೇಲಾಳು (program manager) ಆಗಿದ್ದವರು. ಎಕ್ಸೆಲ್ ತಂಡವು ಮೇಲುಮಟ್ಟದ ಮಾಡುಗೆಯನ್ನು ಕಟ್ಟಿ ನೀಡುತ್ತಿದ್ದರಲ್ಲದೆ, ಹೊತ್ತಿಗೆ ಸರಿಯಾಗಿ ಕೆಲಸ ಮುಗಿಸುತ್ತಿದ್ದರಂತೆ. ಹಾಗಿದ್ದಾಗ ಅವರು ಇತರರು ಕಟ್ಟಿದ ವಸ್ತುಗಳನ್ನು ಬೇಕಾದಂತೆ ಬಳಸುತ್ತ, ‘ಇಲ್ಲಿ ಕಟ್ಟಿದಲ್ಲ ಬೇನೆ’ಗೆ ಒಳಗಾಗಿರಲಿಲ್ಲ ಎಂದು ಊಹಿಸುವುದು ಸಹಜ. ಆದರೆ ನಿಮಗೆ ಕೇಳಿ ಅಚ್ಚರಿಯಾಗಬಹುದು, ಆ ತಂಡವು ಹೊರಗಿನಿಂದ ಆದಶ್ಟೂ ಕಡಿಮೆ ಪಡೆದುಕೊಳ್ಳುತ್ತಿದರು ಮತ್ತು ಎಶ್ಟರ ಮಟ್ಟಿಗೆ ತಮ್ಮದೇ ಸಲಕರಣೆಗಳನ್ನು ಬಳಸುತ್ತಿದರೆಂದರೆ C ಒಟ್ಟುಕವನ್ನೂ (compiler) ತಾವೇ ಕಟ್ಟಿಕೊಂಡಿದ್ದರು! ಮೊದಲು ಜೋಯೆಲ್ ಅವರಿಗೂ ಇದು ಅತಿರೇಕ ಎನ್ನಿಸಿತ್ತಂತೆ, ಆದರೆ ಮುಂದೆ ಇದು ಸರಿಯಾದ ಬಗೆ ಎಂದು ಅವರಿಗೆ ಅರಿವಾಯಿತು.

ಹೀಗೆ ಮಾಡಿದ್ದರಿಂದ ಬೇರೆಯವರು ಕಟ್ಟಿದ್ದ ಕಂಪೈಲರುಗಳಲ್ಲಿ ಇದ್ದ ಹಲವು ತೊಡಕುಗಳನ್ನು ಎಕ್ಸೆಲ್ ತಂಡ ತಮಗೆ ಬೇಕಾದಂತೆ ತಾವೇ ಬಗೆಹರಿಸಿಕೊಂಡರಲ್ಲದೆ, ತಮ್ಮ ಮಾಡುಗೆ ಚಿಕ್ಕದಾಗಿ, ಚೊಕ್ಕದಾಗಿ, ಮತ್ತು ಚುರುಕಾಗಿ ಕೆಲಸ ನಡೆಸುವಂತೆ ಕಟ್ಟಿಕೊಳ್ಳಲು ಇದು ಅವರಿಗೆ ನೆರವಾಯಿತಂತೆ. ಇದೇ ಕಾರಣಕ್ಕಾಗಿಯೇ ಎಕ್ಸೆಲ್ ಗೆಲುವು ಸಾದಿಸಿದ್ದು. ಜೋಯೆಲ್ ಅವರು ಹೇಳುವುದು ಇಶ್ಟೇ! ‘ನೀವು ಏನೇ ಮಾಡಿದರೂ/ ಕಟ್ಟಿದರೂ ತಿರುಳನ್ನು ಮಾತ್ರ ನೀವೇ ಕಟ್ಟಿಕೊಳ್ಳಿ’ ಎಂದು. ಮನೆ ಕಟ್ಟುವ ಎತ್ತುಗೆಯನ್ನೇ ತೆಗೆದುಕೊಂಡರೆ, ಅದಕ್ಕೆ ಕಟ್ಟುವ ಪಾಯ, ಕಂಬ ಮುಂತಾದವು ಅಂಗಡಿಯಿಂದ ತಂದು ನಿಲ್ಲಿಸಲು ಆಗುವುದಿಲ್ಲ. ಅವುಗಳನ್ನು ಎಶ್ಟೇ ಕಶ್ಟವಾದರೂ, ದಣಿವಾದರೂ ನಿಂತು ಕಟ್ಟಬೇಕು. ಆದರೆ ಬಣ್ಣವನ್ನು ನೇರವಾಗಿ ಅಂಗಡಿಯಿಂದ ತಂದು ಬಳಿಯಬಹುದು. ಜಗತ್ತಿನ ಮೇಲುಮಟ್ಟದ ಕೂಟಗಳಾದ ಮೈಕ್ರೋಸಾಪ್ಟ್, ಗೂಗಲ್, ಅಮೇಜಾನ್, ಆಪಲ್ ಮುಂತಾದ ಕಂಪನಿಗಳು ತಮ್ಮಲ್ಲೇ ಹೊಸತಾಗಿ ಕಟ್ಟಿಕೊಳ್ಳಲು ಹಿಂಜರಿಯುವುದಿಲ್ಲ. ಅದರಲ್ಲೂ ತಮ್ಮ ತಿರುಳಿನ ಮಾಡುಗೆ/ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ, ಅವುಗಳನ್ನು ಬೇರೆಯವರ ಕಯ್ಯಲ್ಲಿ ಮಾಡಿಸುವುದಿಲ್ಲ. ಇದೇ ಈ ಮೇಲುಮಟ್ಟದ ಕೂಟಗಳಿಗೂ ಇತರೆ ಕೂಟಗಳಿಗೂ ಇರುವ ಬೇರೆತನ.

ನುಡಿಯು, ಅದನ್ನು ನುಡಿಯುವ ಮಂದಿಗೆ ಹೊರಗಿನ ಜಗತ್ತನ್ನು ನೋಡಿ ಅರಿತುಕೊಳ್ಳುವ ಸಲಕರಣೆ ಇದ್ದಂತೆ. ಕನ್ನಡಿಗರ ಅರಿವು-ತಿಳಿವುಗಳ ತಿರುಳು ಇರುವುದು ಕನ್ನಡ ನುಡಿಯಲ್ಲಿ. ಈ ತಿರುಳನ್ನು ಗಟ್ಟಿಗೊಳಿಸುವುದರಿಂದ ಅಡಿಪಾಯವನ್ನು ಗಟ್ಟಿಗೊಳಿಸಿದಂತಾಗುತ್ತದೆ. ಈ ಅಡಿಪಾಯದ ಮೇಲೆ ಯಾವುದೇ ಅರಿವು, ತಿಳಿವಳಿಕೆಯನ್ನು ಕಟ್ಟಿಕೊಳ್ಳಬಹುದು. ಇಡೀ ಕನ್ನಡ ಸಮುದಾಯಕ್ಕೆ ಸುಲಬವಾಗಿ ಕನ್ನಡದಲ್ಲೇ ಓದಿ, ತಿಳಿದುಕೊಂಡು ಬೆಳೆಯಬಲ್ಲ ಅವಕಾಶಗಳನ್ನು ತೆರೆದಿಟ್ಟಂತೆ ಆಗುತ್ತದೆ. ಇದು ಬಿಟ್ಟು ಏಳಿಗೆಗೆ ಬೇರೆ ದಾರಿಯಿಲ್ಲ ಎಂಬುದನ್ನು ಮುಂದುವರಿದ ನಾಡುಗಳು ಅರಿತುಕೊಂಡಿರುವುದರಿಂದಲೇ ಅವರು ಎಲ್ಲ ಅರಿಮೆಗಳನ್ನೂ ತಮ್ಮದೇ ನುಡಿಗಳಲ್ಲಿ ಕಟ್ಟಿಕೊಂಡಿದ್ದಾರೆ. ಕನ್ನಡ ನುಡಿಸಮುದಾಯದ ಏಳಿಗೆಯೂ ಈ ಬಗೆಯ ಕಟ್ಟುವಿಕೆಯಿಂದಲೇ ಸಾದ್ಯ. ಮತ್ತು ಇದು ಕನ್ನಡಿಗರು ಒಗ್ಗೂಡಿ ತಾವಾಗಿಯೇ ತಮ್ಮ ಕಯ್ಯಾರೆ ಮಾಡಬೇಕಾದ ಕೆಲಸ, ಬೇರೆಯವರಿಂದ ಮಾಡಿಸುವುದು ಇಲ್ಲವೇ ಪಡೆದುಕೊಳ್ಳುವಂತಹುದಲ್ಲ. ಈ ಕಟ್ಟುವಿಕೆಯ ಹಾದಿಯಲ್ಲಿ ಮೊದಲ ಹೆಜ್ಜೆಯನ್ನಿಟ್ಟು, ಮುಂದೆ ಸಾಗುತ್ತ ಈಗ ಮೂರು ವರುಶ ಮುಗಿಸಿದೆ  ‘ಪದ ಪದ ಕನ್ನಡ ಪದಾನೇ!‘ ಗುಂಪು!

ಈ ವರುಶ ಕಟ್ಟಿದ್ದು 2300 ಪದಗಳು!

ಕಳೆದ ಸಲ ಗುಂಪಿನಲ್ಲಿ ಕಟ್ಟಲಾದ ಸುಮಾರು ಮೂರು ಸಾವಿರ ಹೊಸಪದಗಳನ್ನು ಬಿಡುಗಡೆ ಮಾಡಿದ್ದೆವು. ಈ ವರುಶ ಕೂಡ ಗುಂಪಿನಲ್ಲಿ ಹಲವು ಸಾವಿರ ಪದಗಳನ್ನು ಕಟ್ಟಿದ್ದೇವೆ. ಇವುಗಳನ್ನು ಕೊಂಚ ಸೋಸಿ, ಒಟ್ಟುಗೂಡಿಸಿ ಒಂದು ಕಡತವಾಗಿ ಹೊರತಂದಿದ್ದೇವೆ. ಇದರಲ್ಲಿ ಸುಮಾರು ಸಾವಿರ ಇಂಗ್ಲಿಶ್ ಪದಗಳಿಗೆ ಸುಮಾರು ಎರಡು ಸಾವಿರದ ಮುನ್ನೂರು ಕನ್ನಡ ಪದಗಳು ಇವೆ! ಇದನ್ನು ನೀವು ಇಲ್ಲಿಂದ ಕೆಳಗೆ ಇಳಿಸಿಕೊಂಡು, ಬಳಸಿಕೊಳ್ಳಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು. ಹಾಗೆಯೇ, ಈ ಕಟ್ಟುವಿಕೆಯಲ್ಲಿ ನಿಮಗೆ ಕಯ್ ಜೋಡಿಸುವ ಆಸಕ್ತಿಯಿದ್ದರೆ, ಇಲ್ಲಿ ಒತ್ತಿ, ಗುಂಪಿಗೆ ಸೇರಿಕೊಳ್ಳುವ ಕೋರಿಕೆಯನ್ನು ಕಳುಹಿಸಿ.

(ಚಿತ್ರ ಸೆಲೆ: revit clinic)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: