“ಇಟಲಿಯು ಸಾಯುತ್ತಿದೆ”

– ಅನ್ನದಾನೇಶ ಶಿ. ಸಂಕದಾಳ.

italy-tfr

ಇಟಲಿಯು ಸಾಯುತ್ತಿದೆ

ಇಂತ ಒಂದು ಅಚ್ಚರಿಯ ಮತ್ತು ಇಟಲಿಯನ್ನರಿಗೆ ದಿಗಿಲುಂಟು ಮಾಡುವ ಹೇಳಿಕೆಯನ್ನು, ಆ ನಾಡಿನ ಆರೋಗ್ಯ ಮಂತ್ರಿಗಳಾದ ಬಿಯಾಟ್ರೀಸ್ ಲೋರೆನ್ಜಿನ್ ಅವರು ನೀಡಿದ್ದಾರೆ. ಇಟಲಿಯನ್ನರ ಮಂದಿಯೆಣಿಕೆ (population) ಕಮ್ಮಿಯಾಗುತ್ತಿರುವುದರಿಂದ ಅವರು ಈ ಬಗೆಯ ಮಾತುಗಳನ್ನಾಡಿದ್ದಾರೆ. ಇಟಲಿಯನ್ನರ ಎಣಿಕೆ ಕಡಿಮೆಯಾಗುತ್ತಿರುವ ಬಗ್ಗೆ ಬರಹಗಾರರಾದ ಇಂಗ್ಲೆಂಡಿನ ಜಾನ್ ಹೂಪರ್ ಎಂಬುವವರು ಕೂಡ ತಮ್ಮ ‘ದ ಇಟಾಲಿಯನ್ಸ್‘ ಹೊತ್ತಗೆಯಲ್ಲಿ ನಮೂದಿಸಿದ್ದಾರೆ. ಕಡಿಮೆ ‘ಹೆರುವೆಣಿಕೆ‘ (Total Fertility Rate – TFR) ಮತ್ತು ಹೆಚ್ಚಿನ ವಲಸೆ’ – ಇವು ಇಟಲಿ ನಾಡಿನ ಸಮಸ್ಯೆಗಳು ಎಂದು ಜಾನ್ ಹೂಪರ್ ಅವರು ತಮ್ಮ ಹೊತ್ತಗೆಯ ಬಗ್ಗೆ ಮಾತಾಡುವಾಗ ಹೇಳಿದ್ದಾರೆ. ನೂರಾರು ವರುಶಗಳ ಹಿನ್ನಡವಳಿ (history) ಹೊಂದಿದ್ದರೂ ಕಡಿಮೆ ಹೆರುವೆಣಿಕೆ ಹೊಂದಿರುವುದರಿಂದ ಇಟಲಿಯ ಬವಿಶ್ಯ ನೆಚ್ಚಲಾಗದಂತದ್ದು ಎಂದೂ ಅವರು ಹೇಳುತ್ತಾರೆ.

ಏನಿದು ಹೆರುವೆಣಿಕೆ?

ಒಂದು ಊರಿನಲ್ಲಿ ಗಂಡ-ಹೆಂಡತಿ ಇಬ್ಬರಿದ್ದಾರೆಂದುಕೊಳ್ಳೋಣ. ಆ ದಂಪತಿಗೆ ಎಶ್ಟು ಮಕ್ಕಳಿರುವವು ಎಂದು ತಿಳಿಸುವ ಗುರುತೇ ಹೆರುವೆಣಿಕೆ. ಹೀಗೆಂದುಕೊಳ್ಳಿ, ಈ ದಂಪತಿಗಳು ಕಾಲ ಕಳೆದಂತೆ ವಯಸ್ಸಾಗಿ ಇಲ್ಲವಾಗುತ್ತಾರೆ. “ಹಾಗಾದರೆ ಈ ದಂಪತಿಗಳ ಬದಲಿಗೆ ಅವರ ಜಾಗ ತುಂಬಲು ಎಶ್ಟು ಮಂದಿ ಬೇಕು?” ಅಂತ ಕೇಳಿದರೆ, ಕಡಿಮೆ ಅಂದರೂ ಇಬ್ಬರು ಬೇಕು ಎಂಬುದು ತಟ್ಟನೇ ಹೊಳೆಯುವ ಉತ್ತರ. ಈ ಹೆರುವಣಿಕೆಯನ್ನು ಒಂದು ಸಮುದಾಯಕ್ಕೆ ಅತವಾ ಬುಡಕಟ್ಟಿಗೆ (race) ವಿಸ್ತರಿಸಿ ನೋಡುವುದಾದರೆ, ಆ ಸಮುದಾಯವು ತನ್ನ ಗುರುತನ್ನು ಎಲ್ಲ ಕಾಲಕ್ಕೂ ಉಳಿಸಿಕೊಳ್ಳಬೇಕಾದರೆ ಆ ಸಮುದಾಯದಲ್ಲಿರುವ ದಂಪತಿಗಳ ಹೆರುವೆಣಿಕೆ ಕಡಿಮೆ ಅಂದರೂ 2.1 ಆಗಿರಬೇಕು. ಅಂದರೆ, ತಲಾ ಹತ್ತು ದಂಪತಿಗಳಿಗೆ ಇಪ್ಪತ್ತೊಂದು ಮಕ್ಕಳಿದ್ದರೆ ಆ ಬುಡಕಟ್ಟು ಅಳಿವು ಕಾಣುವುದಿಲ್ಲ ಎಂಬುದನ್ನು ವಿಶ್ವಸಂಸ್ತೆ ಹೇಳಿದೆ. ಇಲ್ಲದಿದ್ದರೆ, ಕಾಲ ಸರಿದಂತೆ ಆ ಸಮುದಾಯದವರು ತಮ್ಮ ಇರುವನ್ನೇ ಕಳೆದುಕೊಂಡು ಇಲ್ಲವಾಗುತ್ತಾರೆ ಎಂದು ಸುಳುವಾಗಿ ಹೇಳಬಹುದು. ಇಟಲಿಯನ್ನರ ಸದ್ಯದ ಹೆರುವೆಣಿಕೆ 1.42!

ಕಡಿಮೆ ಹೆರುವೆಣಿಕೆಯಿಂದಾಗುವ ಸಮಸ್ಯೆಗಳು:

ಸರಾಸರಿ 2.1 ಕ್ಕಿಂತಾ ಕಡಿಮೆ ಹೆರುವಣಿಕೆ ಇದ್ದರೆ, ಕಾಲ ಕಳೆದಂತೆ ಒಂದು ಸಮುದಾಯ/ಬುಡಕಟ್ಟು ತನ್ನ ಇರುವು ಕಳೆದುಕೊಳ್ಳುವಂತಾಗುತ್ತದೆ. ಹಾಗೆಯೇ ವಯಸ್ಸಾದವರ ಎಣಿಕೆ ಹೆಚ್ಚಾಗುತ್ತಾ ದುಡಿಯುವವರ ಎಣಿಕೆ ಕಡಿಮೆ ಆಗುತ್ತದೆ. ದುಡಿಯುವ ಕೈಗಳು ಕಡಿಮೆಯಾದಂತೆ ನಾಡಿನ ಏಳಿಗೆ ಕುಂಟುತ್ತಾ ಸಾಗುತ್ತದೆ. ಸರಕಾರಕ್ಕೆ ಆದಾಯ ಬರುವುದು ತಪ್ಪುತ್ತದೆ. ಆ ನಾಡಿನ ಸರಕಾರ, ಹಮ್ಮುಗೆಗಳನ್ನು ಹಾಕಿಕೊಳ್ಳದಂತಾ ಮತ್ತು ಹಾಕಿಕೊಂಡ ಹಮ್ಮುಗೆಗಳು ಗೆಲುವು ಕಾಣದಂತಾ ಸನ್ನಿವೇಶ ಉಂಟಾಗುತ್ತದೆ. ಹುಟ್ಟುವ ಎಣಿಕೆಯನ್ನು ಸಾವಿನ ಎಣಿಕೆಯು ಮೀರಿಸುವ ಸ್ತಿತಿ, ಆ ನಾಡಿನ ಗುರುತನ್ನೂ ಅಳಿಸ ಹಾಕಬಲ್ಲದಾಗಿದೆ. ಇಟಲಿಯಲ್ಲಿ ಆಗುತ್ತಿರುವುದು ಇದೇ! ಆದ್ದರಿಂದ ಆಳುವವರು ತುಂಬಾ ಕಳವಳಗೊಂಡಿದ್ದಾರೆ ಮತ್ತು ಇಟಲಿಯನ್ನರಲ್ಲಿ ಹೆರುವೆಣಿಕೆಯನ್ನು ಏರಿಸಲು ಹಮ್ಮುಗೆಗಳನ್ನೂ ಹಾಕತೊಡಗಿದ್ದಾರೆ.

ಹೆರುವೆಣಿಕೆ – ಇಟಲಿ ಮತ್ತು ಕರ‍್ನಾಟಕ : ಒಂದು ಹೋಲಿಕೆ

2013 ವರುಶದ ವರದಿಯ ಪ್ರಕಾರ ಕರ‍್ನಾಟಕದ ಹೆರುವೆಣಿಕೆ 1.9. ಈ ಅಂಕಿ 2.1 ತಲುಪದೇ ಹೋದರೆ, ಇಟಲಿಯನ್ನರಂತೆ ಕನ್ನಡಿಗರೂ ತಮ್ಮ ಇರುವನ್ನು ಕಳೆದುಕೊಳ್ಳುವುದು ಕಂಡಿತ. ಮುಂದುವರೆದ ನಾಡಾಗಿರುವ ಇಟಲಿಯವರೇ ಎಚ್ಚೆತ್ತುಕೊಂಡು ತಮ್ಮ ನಾಡಿನಲ್ಲಿರುವ ‘ಕಡಿಮೆ ಹೆರುವೆಣಿಕೆ’ಯನ್ನು ಸಮಸ್ಯೆ ಎಂದು ಒಪ್ಪಿಕೊಂಡಿದ್ದಾರೆ. ಮುಂದುವರೆದ ನಾಡುಗಳ ಸಾಲಿನಲ್ಲಿರುವ ಜಪಾನಿನ ಪಾಡೂ ಕೂಡ ಹೆರುವೆಣಿಕೆಯ ವಿಶಯದಲ್ಲಿ ಇಟಲಿಗಿಂತ ಬೇರೆ ಏನಿಲ್ಲ. ಜಪಾನಿನ ಸದ್ಯದ ಹೆರುವೆಣಿಕೆ 1.40. ಪಕ್ಕದ ಸೀಮಾಂದ್ರ ರಾಜ್ಯದ ಮುಕ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡುರವರು, ತಮ್ಮ ರಾಜ್ಯದಲ್ಲೂ ಎರಡರ ಸರಾಸರಿಗಿಂತ ಕಡಿಮೆ ಇರುವ ಹೆರುವೆಣಿಕೆಯನ್ನು ಅರಿತು, “ತಮ್ಮ ರಾಜ್ಯ ಜಪಾನಿನಂತಾಗಬಾರದು” ಎಂಬ ಹೇಳಿಕೆಯನ್ನು ಇತ್ತೀಚೆಗಶ್ಟೇ ನೀಡಿದ್ದಾರೆ. ಹಾಗಿರುವಾಗ ಕರ‍್ನಾಟಕ ಸರಕಾರ, ಕಡಿಮೆಯಿರುವ ಕನ್ನಡಿಗ ಜನಾಂಗದ ಹೆರುವೆಣಿಕೆಯ ಸಮಸ್ಯೆಯನ್ನು ಅರಿತು ಅದರ ಬಗ್ಗೆ ಮಂದಿಯಲ್ಲಿ ಅರಿವನ್ನು ಮೂಡಿಸುವ ಮತ್ತು ಅದನ್ನು ಸರಿಪಡಿಸುವ ಬಗೆಯನ್ನು ಆದಶ್ಟು ಬೇಗ ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ಕರ‍್ನಾಟಕ ಮತ್ತು ಕನ್ನಡಿಗರು ಹಿನ್ನಡವಳಿಯ ಪುಟ ಸೇರುವ ದಿನಗಳು ದೂರ ಉಳಿಯುವುದಿಲ್ಲ.

(ಮಾಹಿತಿ ಸೆಲೆ :theguardian.com, ndtv.comdata.worldbank.org, cia.goveconomist.com, en.wikipedia.orgpsrcentre.org )

( ಚಿತ್ರ ಸೆಲೆ : ciaobambino.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: