ಅರಿಮೆಯ ಪಸಲಿಗೆ ಕನ್ನಡವೇ ನೇಗಿಲು

ವಲ್ಲೀಶ್ ಕುಮಾರ್ ಎಸ್.

ThaaynnuDi Dina

ಇಂದು ವಿಶ್ವ ತಾಯ್ನುಡಿ ದಿನ. ಈ ಹೊತ್ತಿನಲ್ಲಿ ಕನ್ನಡಿಗರು ತಮ್ಮ ತಾಯ್ನುಡಿಯಾದ ಕನ್ನಡವನ್ನು ಹೇಗೆ ನೋಡಬೇಕು ಅನ್ನುವ ಬಗ್ಗೆ ಒಂದು ಸೀಳುನೋಟ ಇಲ್ಲಿದೆ. ಕನ್ನಡಿಗರು ಕನ್ನಡವನ್ನು ಹೇಗೆ ಕಾಣುತ್ತಾ ಬಂದಿದ್ದೇವೆ? ಕನ್ನಡವನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ? ಕನ್ನಡವನ್ನು ಹೇಗೆ ಕಾಣಬೇಕು? ಏಕೆ ಹಾಗೆ ಕಾಣಬೇಕು ಅನ್ನುವ ಕುರಿತು ಒಂದು ಇಣುಕುನೋಟ ಬೀರೋಣ ಬನ್ನಿ.

ಕನ್ನಡವನ್ನು ಕನ್ನಡಿಗರು ಪೂಜನೀಯವಾಗಿ ಕಾಣುವುದು ಎಲ್ಲರಿಗೂ ತಿಳಿದಿರುವುದೇ. ಆದರೆ ಕನ್ನಡವನ್ನು ಒಂದು ಅಣಿಗೆ (tool) ಆಗಿ ಬಳಸುವ ಬಗೆಯೂ ಹೆಚ್ಚಬೇಕಿದೆ. ರೈತನೊಬ್ಬನನ್ನು ಗಮನಿಸಿ – ಅವನ ಕೆಲಸ ಉಳುಮೆ, ಅವನ ಅಣಿಗೆ “ನೇಗಿಲು”. ಅವನು ತನ್ನ ನೇಗಿಲನ್ನು ಹಬ್ಬದ ದಿನ ಪೂಜಿಸುತ್ತಾನೆ. ಉಳಿದ ದಿನವೆಲ್ಲಾ ಅದನ್ನು ಬಳಸುತ್ತಾನೆ, ಬೆಳೆ ಬೆಳೆಯುತ್ತಾನೆ, ಮತ್ತು ಆ ಮೂಲಕ ಹಣ ಗಳಿಸುತ್ತಾನೆ. ಹಿಂದಿನ ದಿನಗಳಲ್ಲಿ ರೈತನೊಬ್ಬ ಉಳುಮೆ ಮಾಡುತ್ತಿದ್ದ ರೀತಿ ಇಂದು ಉಳುಮೆ ಮಾಡುತ್ತಿರುವ ರೀತಿಗಿಂತ ಬೇರೆಯದೇ ಆಗಿತ್ತು. ರೈತನು ಇಂದಿನ ಕಾಲಕ್ಕೆ ತಕ್ಕಂತೆ ತನ್ನ ಅಣಿಗೆಯನ್ನು ಹೊಸದಾಗಿಸಿಕೊಂಡಿದ್ದಾನೆ. ಕಬ್ಬಿಣದ ನೇಗಿಲನ್ನು ಹೊಂದಿದ ಟ್ರ್ಯಾಕ್ಟರ್ ಬಳಸುತ್ತಾನೆ. ಅದರಿಂದ ತನ್ನ ಪಸಲನ್ನು ಹೆಚ್ಚಿಸಿಕೊಂಡಿದ್ದಾನೆ. ಅವನು “ಅಯ್ಯೋ! ನನ್ನ ಮರದ ನೇಗಿಲು… ನನ್ನ ಅಜ್ಜ ಮುತ್ತಜ್ಜಂದಿರು ಬಳಸಿದ ನೇಗಿಲು, ಇದನ್ನು ನಾನು ಹೇಗೆ ತೊರೆಯಲಿ? ಹೇಗೆ ಹೊಸ ನೇಗಿಲು ಕೊಳ್ಳಲಿ?” ಅನ್ನುತ್ತಾ ಕುಳಿತಿದ್ದರೆ ಅವನು ಹೊಸ ಪೀಳಿಗೆಯ ವೇಗದೊಂದಿಗೆ ಪೈಪೋಟಿ ನಡೆಸಲು ಆಗದೆ ಸೋಲಬೇಕಾಗುತ್ತದೆ. ಜಾಗತೀಕರಣದ ವೇಗಕ್ಕೆ ಸರಿಸಮಾನವಾಗಿ ಮುನ್ನುಗ್ಗಬೇಕಾದರೆ ನಾವು ಹೊಸತನಕ್ಕೆ ಒಗ್ಗಿಕೊಳ್ಳುವ ರೈತನ ಮಾದರಿಯನ್ನು ಅನುಸರಿಸಬೇಕು. ಕನ್ನಡವೆಂಬ ಅಣಿಗೆಯನ್ನು ಹೊಸತನಕ್ಕೆ ಹೊಂದಿಸಿಕೊಳ್ಳಬೇಕು.

ತಮ್ಮ ನುಡಿಯನ್ನು ಹೊಸತನಕ್ಕೆ ಒಗ್ಗಿಸಿಕೊಂಡು ಮುನ್ನಡೆಯುವ ಕಾಯಕ ಮಾಡಿದ ಅನೇಕ ನುಡಿ ಸಮುದಾಯಗಳು ಇಂದು ಅರಿಮೆಯ ಸೆಣಸಿನಲ್ಲಿ ಮುಂಚೂಣಿಯಲ್ಲಿವೆ. ಈ ಪಟ್ಟಿಯಲ್ಲಿ ನಮಗೆ ತೋಚುವ ಹೆಸರುಗಳು ಕೊರಿಯನ್, ಟರ‍್ಕಿಶ್ ಮತ್ತು ಚೀನೀ ನುಡಿಗಳದ್ದು. ಚೀನಾ ದೇಶದಲ್ಲಿ ಲಿಪಿ ಬದಲಾವಣೆ ಮಾಡಿಕೊಂಡ ಬಳಿಕ, ಕಲಿತವರ ಎಣಿಕೆ (literacy rate) ಹೆಚ್ಚಾಗಿದೆ. ಹೆಚ್ಚು ಮಂದಿ ಕಲಿಕೆ ಪಡೆದುಕೊಂಡು ದುಡಿಮೆ ನಡೆಸುತ್ತಿರುವುದು ಚೀನಾಕ್ಕೆ ಆನೆಬಲವನ್ನು ತಂದುಕೊಟ್ಟಿದೆ. ಚೈನೀಸ್ ನುಡಿಯೂ ಕೂಡ ಚಳಕದರಿಮೆ (technology), ಮಿಂಬಲೆ (internet), ಉನ್ನತ ಕಲಿಕೆ (higher education) ಹೀಗೆ ಹಲವು ವಲಯಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಕನ್ನಡವನ್ನು ಇಂದಿನ ವೇಗದ ಯುಗಕ್ಕೆ ಒಗ್ಗಿಸಿಕೊಳ್ಳಲು ಕನ್ನಡಿಗರು ಇಂತಹುದೇ ಮಾರ‍್ಪಾಡುಗಳನ್ನು ಮಾಡಿಕೊಳ್ಳುತ್ತಾ ಸಾಗಬೇಕು. ಹಾಗಾಗಲು ಕಲಿಕೆ ಮತ್ತು ದುಡಿಮೆಗೆ ಕನ್ನಡವನ್ನು ಒಂದು ಅಣಿಗೆಯಾಗಿ ಬಳಸುವ ನಿಟ್ಟಿನಲ್ಲಿ ಕನ್ನಡಿಗರು ನೋಡಲು ತೊಡಗಬೇಕು.

ಇಶ್ಟಕ್ಕೂ ಕನ್ನಡವನ್ನು ಒಂದು ಅಣಿಗೆಯಾಗಿ ನೋಡುವ ಬಗೆ ಹೊಸದೇನಲ್ಲ. ಹಿಂದೆ ಜನಪದ, ದಾಸರ ಪದ ಸೇರಿದಂತೆ ಹಲವಾರು ಬಗೆಯ ನಲ್ಬರಹಗಳನ್ನು ಹೆಣೆಯಲು ಕನ್ನಡ ಬಳಕೆಯಾಗಿದೆ. ಆಡಳಿತದಲ್ಲಿ ಕದಂಬರ ಕಾಲದಿಂದಲೂ ಕನ್ನಡ ಬಳಕೆಯಾಗಿದೆ. ಮನರಂಜನೆಯಲ್ಲಿಯೂ ಕನ್ನಡ ಹಾಡು-ಹಸೆ, ಸಿನಿಮ, ಹೀಗೆ ಹಲವಾರು ಬಗೆಗಳಲ್ಲಿ ಬಳಕೆಯಾಗಿದೆ. ಇಲ್ಲಿ ನಾವು ಗಮನಿಸಬೇಕಾದುದು ಏನೆಂದರೆ ಮೇಲಿನ ಎಲ್ಲಾ ವಿಶಯಗಳಲ್ಲಿ ಕನ್ನಡಿಗರು ಕನ್ನಡವನ್ನು “ಬಳಸಿದ್ದಾರೆ” ಮತ್ತು ಅದರಿಂದ ಆ ವಲಯವನ್ನು ತಮಗೆ ಹತ್ತಿರವಾಗಿಸಿಕೊಂಡಿದ್ದಾರೆ. ಇಂದಿಗೆ ಅರಿಮೆಯನ್ನು ಕನ್ನಡಕ್ಕೆ ತರುವ ಕೆಲಸದ ಹಿಂದೆಯೂ ಇರುವ ಉದ್ದೇಶ ಅದೇ ಆಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಹೌದು. ಜನಪದ ಹಾಗು ದಾಸರ ಪದಗಳು ತಿಳಿಗನ್ನಡ/ಎಲ್ಲರಕನ್ನಡಲ್ಲಿ ಇದ್ದಿದ್ದ್ರಿಂದ ಇವತ್ತಿಗೂ ಚಲವಣೆಯಲ್ಲಿವೆ. ನಾವದನ್ನೇ ಮುಂದುವರಿಸಬೇಕಶ್ಟೆ…!

ಅನಿಸಿಕೆ ಬರೆಯಿರಿ:

Enable Notifications OK No thanks