ಕುಗ್ಗುಬಡ್ಡಿ ಹಣಕಾಸಿನ ಏರ್ಪಾಡಿಗೆ ಒಳಿತು ಮಾಡಬಲ್ಲುದೇ?
ಮಂದಿ ತಮ್ಮ ಇಡುಪಡೆಗಳಲ್ಲಿ (account) ಕೂಡಿಡುವ ಹಣವನ್ನು ಹೆಚ್ಚಿಸುವ ಸಲುವಾಗಿ ಹಣಮನೆಗಳು (banks) ಆ ಹಣಕ್ಕೆ ‘ಬಡ್ಡಿ’ಯನ್ನು ಕೊಡುವುದು ಗೊತ್ತೇ ಇದೆ. ಆದರೆ ಹಾಗೆ ಕೂಡಿಡುವ ಹಣವನ್ನು ಹೆಚ್ಚಿಸುವಂತ ಬಡ್ಡಿಯನ್ನು ಕೊಡದೆ, ಅದನ್ನು ಕಡಿಮೆಗೊಳಿಸುವ ಬಡ್ಡಿಯನ್ನು (negative interest) ಕೊಡುವ ಏರ್ಪಾಡೊಂದಿದೆ ಎನ್ನುವುದು ಅಚ್ಚರಿಯ ಸಂಗತಿ. ಯುರೋಪಿನ ಕೆಲ ಹಣಮನೆಗಳು ತಮ್ಮಲ್ಲಿ ಇಡುಪಡೆಗಳನ್ನು ಹೊಂದಿರುವ ಮಂದಿಯ ದುಡ್ಡನ್ನು ತುಸು ಕಡಿಮೆ ಮಾಡುವಂತ ಏರ್ಪಾಡನ್ನು ಜಾರಿಗೆ ತಂದಿರುವ ಸುದ್ದಿ ಬಂದಿದೆ. ಹಣಕಾಸರಿಗರು (economists), ಸದ್ಯದ ಪರಿಸ್ತಿತಿಯಲ್ಲಿ ಯಾವ ಹಣಮನೆಗಳೂ ಹೀಗೆ ಮಾಡಲಾರವು ಎಂದೇ ಅಂದುಕೊಂಡಿದ್ದರು. ಆದರೆ ಯೂರೋಪಿನ ಕೆಲ ಹಣಮನೆಗಳು ಅವರ ಎಣಿಕೆಯನ್ನು ಸುಳ್ಳು ಮಾಡಿವೆ.
ಏನಿದು ಕುಗ್ಗುಬಡ್ಡಿ (negative interest)?
ಒಬ್ಬ ವ್ಯಕ್ತಿಯ ಕಡೆ 100 ರೂ ಇರುತ್ತದೆ ಎಂದು ಅಂದುಕೊಳ್ಳೋಣ. ತನ್ನ ಬಳಿ ಇಡುಪಡೆಯೊಂದನ್ನು ಹೊಂದಿದರೆ, ಒಂದು ವರುಶಕ್ಕೆ ಆ ಇಡುಪಡೆಯಲ್ಲಿರುವ ದುಡ್ಡಿಗೆ ಶೇ 5 ರಂತೆ ಬಡ್ಡಿ ನೀಡುವೆನು ಎಂದು ಹೇಳುವ ಹಣಮನೆ ಇರುತ್ತದೆ ಎಂದುಕೊಳ್ಳೋಣ. ಆ ಹಣಮನೆಯಲ್ಲಿ ಈ ವ್ಯಕ್ತಿ 100 ರೂ ಇಟ್ಟರೆ, 100 ಕ್ಕೆ 5 ರೂ ನಂತೆ ಆತನಿಗೆ ಒಂದು ವರುಶದ ಬಳಿಕ 105 ರೂ ಸಿಗುತ್ತದೆ ಎನ್ನುವುದೇ ಇದರ ತಿರುಳು. ಒಂದು ವೇಳೆ, ಆ ಹಣಮನೆಯು ತನ್ನಲ್ಲಿ ಕೂಡಿಡುವ ಹಣವನ್ನು ಕಡಿಮೆ ಮಾಡುವ ಶೇ 1 ರಶ್ಟು ಬಡ್ಡಿ ಕೊಡುತ್ತದೆ ಎಂದಂದುಕೊಂಡರೆ, 100 ರೂ ಹೊಂದಿದ ವ್ಯಕ್ತಿಗೆ ಒಂದು ವರುಶದ ಬಳಿಕ, ಹಣಮನೆಯಿಂದ 99 ರೂ ಸಿಗುತ್ತದೆ ಎಂದು ತಿಳಿಯಬಹುದು. ಹೆಚ್ಚು ದಿನ ಹಣವನ್ನು ಹಣಮನೆಯಲ್ಲಿ ಇಟ್ಟಶ್ಟು ಹಣವು ಕಡಿಮೆ ಆಗುತ್ತದೆ ಎಂದು ಸುಳುವಾಗಿ ಹೇಳಬಹುದು. ವ್ಯಕ್ತಿಯ ದುಡ್ಡನ್ನು ಕಡಿಮೆ ಮಾಡುವ ಆ ಶೇ 1 ರಶ್ಟು ಬಡ್ಡಿ, ಕುಗ್ಗುಬಡ್ಡಿ ಎಂದು ಕರೆಸಿಕೊಳ್ಳುತ್ತದೆ.
ಕುಗ್ಗುಬಡ್ಡಿ ಜಾರಿಗೊಳಿಸುತ್ತಿರುವುದು ಏಕೆ?
ಒಂದು ನಾಡಿನ ಹಣಕಾಸಿನ ವಹಿವಾಟುಗಳಲ್ಲಿ ಮತ್ತು ಏರ್ಪಾಡಿನಲ್ಲಿ ಬೆಲೆತಗ್ಗಿಕೆ (deflation) ಎಂಬುದು ಆಗಾಗ ಕೇಳಿ ಬರುತ್ತಿರುತ್ತದೆ. ಮಾಡುಗೆಗಳ (products), ಸರಕುಗಳ ಮತ್ತು ಸೇವೆಗಳ ಬೆಲೆಯು ದಿನ ಕಳೆದಂತೆ ಕಡಿಮೆ ಆಗುತ್ತಿದ್ದರೆ, ಅದು ಹಣದ ಬೆಲೆಯನ್ನು (value) ಹೆಚ್ಚಿಸುತ್ತಾ ಹೋಗುತ್ತದೆ. ಎತ್ತುಗೆಗೆ, ನಿನ್ನೆ 10 ರೂಪಾಯಿಗೆ 10 ಸೇಬುಹಣ್ಣುಗಳನ್ನು ಕೊಳ್ಳಬಹುದಾಗಿತ್ತು ಎಂದುಕೊಳ್ಳೋಣ. ಇಂದು ಅದೇ ಹತ್ತು ರೂಪಾಯಿಗಳಿಗೆ 15 ಸೇಬುಗಳನ್ನು ಕೊಳ್ಳಬಹುದಾದರೆ ಮತ್ತು ಹೀಗೆಯೇ ಬಹುತೇಕ ಸರಕುಗಳ ಬೆಲೆಯೂ ಕುಸಿತ ಕಾಣುತ್ತಿದ್ದರೆ ಹಣದ ಬೆಲೆ ಜಾಸ್ತಿ ಆಗಿದೆ ಎಂದರ್ತ.
ಈ ಬೆಲೆತಗ್ಗಿಕೆಯ ಅಡ್ಡ ಪರಿಣಾಮಗಳೆಂದರೆ – ಹಣದ ಬೆಲೆ ಜಾಸ್ತಿ ಆದಂತೆ ದುಡಿಯುವವರ ಸಂಬಳ ಕಡಿತ ಮಾಡುವ ಸಾದ್ಯತೆ ಹೆಚ್ಚಿರುತ್ತದೆ. ಆದಾಯ ಕಡಿಮೆ ಆದಂತೆ ಮಂದಿಯು ಕರ್ಚು ಮಾಡುವುದು ಕಡಿಮೆ ಆಗುತ್ತದೆ. ಸರಕುಗಳ ಬೆಲೆ ಇನ್ನೂ ಕಡಿಮೆ ಆಗಬಹುದು ಎಂದು ಮಂದಿಯು ತಮ್ಮ ದುಡ್ಡನ್ನು ಕರ್ಚು ಮಾಡದೇ ಕೂಡಿಡಲು ಮುಂದಾಗುತ್ತಾರೆ. ಕೊಳ್ಳುವ ವಹಿವಾಟುಗಳು ಕಡಿಮೆ ಆದಂತೆ ಮಾಡುಗೆಗಳನ್ನು ಹೆಚ್ಚಿನ ಎಣಿಕೆಯಲ್ಲಿ ತಯಾರಿಸುವುದು ಬೇಕಾಗುವುದಿಲ್ಲ. ಇದರಿಂದ ಬಹಳಶ್ಟು ಮಂದಿ ಕೆಲಸವನ್ನು ಕಳೆದುಕೊಳ್ಳಲೂಬಹುದು.
ಈ ಎಲ್ಲ ಬೆಳವಣಿಗೆಗಳಿಂದ ಒಂದು ನಾಡಿನಲ್ಲಿ ಹಣಕಾಸಿನ ಹರಿವು ಕಡಿಮೆ ಆಗುತ್ತದೆ. ಹಣಕಾಸಿನ ವಹಿವಾಟುಗಳು ಕಡಿಮೆ ಆದಂತೆ ಆ ನಾಡಿನ ಸರಕಾರಕ್ಕೆ ಬರುವ ಆದಾಯ ಕಡಿಮೆ ಆಗುತ್ತದೆ. ಯೂರೋಪಿನ ಕೆಲ ನಾಡುಗಳಲ್ಲಿ ಇಂತ ಹಣಕಾಸಿನ ಬಿಕ್ಕಟ್ಟು ತಲೆದೋರಿದ್ದು, ಅದರಿಂದ ಹೊರಬರಲು ಅಲ್ಲಿನ ಕೆಲವು ಹಣಮನೆಗಳು ಕುಗ್ಗುಬಡ್ಡಿಯನ್ನು ಜಾರಿಗೊಳಿಸುವ ಹೆಜ್ಜೆಯನ್ನಿಟ್ಟಿದ್ದಾರೆ. ಹೀಗಾದರೂ ಮಂದಿ ಕೂಡಿಟ್ಟಿರುವ ಹಣವನ್ನು ಕರ್ಚು ಮಾಡುತ್ತಾ ಹಣಕಾಸಿನ ಹರಿವನ್ನು ಹೆಚ್ಚಿಸಲಿ ಎಂಬ ಎಣಿಕೆ ಅವರದು!
ಕುಗ್ಗುಬಡ್ಡಿ – ಹಣಕಾಸು ಸ್ತಿತಿ ಸರಿಪಡಿಸುವ ಒಂದು ದಾರಿ ?
ಕುಗ್ಗುಬಡ್ಡಿಯ ಹಿಂದಿನ ಉದ್ದೇಶ ಆ ನಾಡಿನಲ್ಲಿನ ಹಣಕಾಸು ವಹಿವಾಟು ಮತ್ತು ಏರ್ಪಾಡನ್ನು ಸಹಜ ಸ್ತಿತಿಗೆ ತರುವುದಾಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಕುಗ್ಗುಬಡ್ಡಿಯನ್ನು ಹೆಚ್ಚು ದಿನ ಜಾರಿಯಲ್ಲಿಡುವುದಿಲ್ಲ. ಅದು ಕೇವಲ ಅರೆಹೊತ್ತಿನ (temporary) ಏರ್ಪಾಡಾಗಿರುತ್ತದೆ. ಆದರೂ ಅದನ್ನು ಜಾರಿಗೊಳಿಸುವ ಹಿಂದೆ ಇರುವ ಲೆಕ್ಕಾಚಾರ ಏನು ಎಂದು ತಿಳಿಯುವುದು ಕುತೂಹಲವೇ ಸೈ!
ಗಳಿಕೆ ಇಲ್ಲದ ಮತ್ತು ಹಣ ಕಳೆಯುವ ಕುಗ್ಗುಬಡ್ಡಿಯನ್ನು ಜಾರಿ ಇಡುವುದರಿಂದ ಹೂಡಿಕೆದಾರರು ತಮ್ಮ ದುಡ್ಡನ್ನು ಹಣಮನೆಗಳಲ್ಲಿಡದೇ ಹೊರನಾಡಿನಲ್ಲಿ ಹೂಡಲು ಮುಂದಾಗುತ್ತಾರೆ. ಹೆಚ್ಚಿನ ಗಳಿಕೆಗಾಗಿ ಹೆಚ್ಚು ಹಣ ಹೊರನಾಡಿನಲ್ಲಿ ಹೂಡಿಕೆ ಆಗುತ್ತಿದ್ದಂತೆ ಈ ನಾಡಿನ ದುಡ್ಡಿನ ಬೆಲೆ ಹೊರನಾಡಿನ ದುಡ್ಡಿನ ಬೆಲೆಯ ಎದಿರು ಕುಗ್ಗುತ್ತದೆ (currency depreciation). ಅದು ಹೊರನಾಡಿನಿಂದ ಆಮದು ಮಾಡಿಕೊಳ್ಳುವ ಸರಕು, ಮಾಡುಗೆ ಮತ್ತು ಸೇವೆಗಳು ತುಟ್ಟಿಯಾಗುವಂತೆ ಮಾಡುತ್ತದೆ. ಇದರಿಂದ, ಈ ನಾಡಿನಿಂದ ಸರಕು/ಮಾಡುಗೆ/ಸೇವೆಗಳನ್ನು ಹೊರನಾಡುಗಳಿಗೆ ರಪ್ತು ಮಾಡಲು ಹುರಿದುಂಬಿಸಿ ರಪ್ತು ವಲಯದಲ್ಲಿ ಚಟುವಟಿಕೆಗಳು ಹೆಚ್ಚಾಗುವಂತೆ ಮಾಡುತ್ತವೆ. ರಪ್ತು ಮತ್ತು ಆಮದು – ಈ ಎರಡೂ ಚಟುವಟಿಕೆಗಳ ಹಣಕಾಸಿನ ವಹಿವಾಟುಗಳಿಂದ ದುಡ್ಡಿನ ಹರಿವು ಹೆಚ್ಚಾಗಿ, ನಾಡಿನ ಹಣಕಾಸಿನ ಸ್ತಿತಿ ಸರಿಪಡಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.
(ಚಿತ್ರ ಸೆಲೆ :bloomberg.com)
(ಮಾಹಿತಿ ಸೆಲೆ : economist.com, economicshelp.org, economicshelp.org, en.wikipedia.org)
ಕುಗ್ಗುಬಡ್ಡಿಯಲ್ಲಿ ನಿರಂತರವಾಗಿ ಹಣ ಇದ್ದರೆ ಅದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದು ಒಂದು ದಿನ ಅದು ಸೊನ್ನೆ ಆಗಬಹುದು. ಬ್ಯಾಂಕಿನಲ್ಲಿ ಹಣ ಇಡುವುದರ ಬದಲು ಭೂಮಿಯಲ್ಲಿ ಹೂತಿಡಲು ಆರಂಭಿಸಬಹುದು. ಕುಗ್ಗು ಬಡ್ಡಿ ವ್ಯವಸ್ಥೆಯಲ್ಲಿ ಸಾಲದ ಮೇಲಿನ ಬಡ್ಡಿ ಯಾವ ರೀತಿ ಇರಬಹುದು ಎಂಬ ಕುತೂಹಲ.
ಹಣಕಾಸಿನ ಬಿಕ್ಕಟ್ಟು ತಲೆದೋರಿದಾಗ ಹಣಮನೆಗಳು ಸಾಮಾನ್ಯವಾಗಿ ಬಡ್ಡಿಯನ್ನು ( ಇಡುಪಡೆಗಳಲ್ಲಿ ಕೂಡಿಡುವ ದುಡ್ಡಿಗೆ ಕೊಡುವ ಬಡ್ಡಿಯಾಗಿರಬಹುದು ಅತವಾ ಕೊಳ್ಳುಗರು ತೆಗೆದುಕೊಳ್ಳುವ ಸಾಲದ ಮೇಲೆ ಹಾಕುವ ಬಡ್ಡಿಯಾಗಿರಬಹುದು ) ಕಡಿತಗೊಳಿಸುವ ತೀರ್ಮಾನ ಕೈಗೊಳ್ಳುತ್ತವೆ. ‘ಕುಗ್ಗುಬಡ್ಡಿ’ ಜಾರಿ ಇದ್ದಾಗಲೂ ಕೂಡ ಸನ್ನಿವೇಶ ಇದಕ್ಕಿಂತ ಬೇರೆ ಇರುವುದಿಲ್ಲ. ಸಾಲದ ಮೇಲೆ ಬಡ್ಡಿ ಕಡಿಮೆ ಇದ್ದಾಗ ಸಾಲ ತೆಗೆದುಕೊಳ್ಳಲು ಹೆಚ್ಚು ಹೆಚ್ಚು ಮಂದಿ ಮನಸ್ಸು ಮಾಡುವವರು ಎಂಬ ಯೋಚನೆ ಹಣಮನೆಗಳದ್ದು. ಆದರೆ ಇಡುಪಡೆಗಳಿಂದ ಹಣವನ್ನು ತೆಗೆದು ಮನೆಯಲ್ಲಿ ಅತವಾ ನೆಲದಲ್ಲಿ ಮಂದಿ ಇಡಲು ಶುರು ಮಾಡಿದರೆ, ಸಾಲವಾಗಿ ಪಡೆಯುವವರಿಗೆ ಕೊಡಲು ಬೇಕಾಗಿರುವ ದುಡ್ಡು ಹಣಮನೆಗಳಲ್ಲಿ ಕಡಿಮೆ ಆಗತೊಡಗುತ್ತದೆ. ಈ ಪರಿಸ್ತಿತಿ ಸಾಲಕ್ಕಾಗಿ ಬೇಡಿಕೆಯನ್ನು ಮೆಲ್ಲಗೆ ಹೆಚ್ಚಿಸುತ್ತ, ಬಡ್ಡಿಯ ದರವನ್ನೂ ಹೆಚ್ಚಿಸುವಂತೆ ಮಾಡುತ್ತದೆ. ಇದರಿಂದ ಹಣಕಾಸಿನ ವಹಿವಾಟುಗಳು ಮೊದಲಿನಂತಾಗುವವು ಎಂಬ ಲೆಕ್ಕಾಚಾರವೂ ಇದರಲ್ಲಿ ಅಡಗಿದೆ.