ಎಲ್ಲರಕನ್ನಡ ಮತ್ತು ಹಳೆಯ ಹೊತ್ತಗೆಗಳ ಪ್ರಶ್ನೆ

ಕಿರಣ್ ಬಾಟ್ನಿ.Books

ಎಲ್ಲರಕನ್ನಡವೆನ್ನುವುದು ಬರಹವನ್ನು ಎಲ್ಲ ಕನ್ನಡಿಗರಿಗೂ ಹತ್ತಿರ ತರುವ ಒಂದು ಪ್ರಯತ್ನ. ಕನ್ನಡದ ಬರಹಜಗತ್ತಿನಲ್ಲಿ ಇದೊಂದಂಶವನ್ನು ಇಲ್ಲಿಯವರೆಗೆ ನಮ್ಮ ಬರಹಗಾರರು ಇಂದು ಬೇಕೆನಿಸುವಶ್ಟು ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲದಿರುವುದು ಕಂಡು ಬರುತ್ತದೆ. ತಾವು ಬರೆಯುವುದು ವಿಶೇಶವಾದ ಗುಂಪೊಂದಕ್ಕೆ ಎಂಬ ಅನಿಸಿಕೆ ಕನ್ನಡದ ಕೂಡಣದಲ್ಲಶ್ಟೇ ಅಲ್ಲ, ಬಾರತದ ಎಲ್ಲ ನುಡಿಕೂಡಣಗಳಲ್ಲೂ ಇಂದು ಎದ್ದು ಕಾಣುತ್ತದೆ. ಇದು ಬಾರತದ ನುಡಿಗಳನ್ನೆಲ್ಲ ಕೈಹಿಡಿದು ಇಲ್ಲಿಯವರೆಗೆ ನಡೆಸಿಕೊಂಡು ಬಂದ, ಮತ್ತು ನಮ್ಮ ಗೌರವಕ್ಕೆ ಎಂದೆಂದಿಗೂ ಪಾತ್ರರಾಗಿರುವ, ಆ ಹಿರಿಯರ ಮೇಲೆ ನನ್ನ ದೂರಲ್ಲ, ಎಶ್ಟು ಬಿಡಿಸಿ ಹೇಳಿದರೂ ಹಾಗೆಂದೇ ಬಗೆಯುವವರ ಬೈಗುಳಕ್ಕೆ ಗುರಿಯಾದರೂ ಇರುವುದನ್ನು ಇದ್ದಂತೆ ಹೇಳುವ ಹಟ.

ನಿಜಕ್ಕೂ ಇಂದಿನ ಕೂಡಣವಿಡುತ್ತಿರುವ ಬೇಡಿಕೆಗಳನ್ನು ಹಿಂದಿನ ಬರಹಗಾರರು ಈಡೇರಿಸಲಿಲ್ಲವೆಂದು ಅವರನ್ನು ದೂರುವುದು ತಪ್ಪು. ಅವರು ಇಂದಲ್ಲ, ಅಂದಿದ್ದದ್ದು. ಹಾಗೆಯೇ, ಹಿಂದಿನಿಂದ ನಡೆದುಕೊಂಡು ಬಂದಿರುವುದನ್ನು ಬದಲಾದ ಬೇಡಿಕೆಗಳ ಇಂದು ಕೂಡ ಒಂದು ಚೂರೂ ಬದಲಾಗದೆ ಮುಂದುವರೆಸಿಕೊಂಡು ಹೋಗಬೇಕೆನ್ನುವುದೂ ತಪ್ಪು. ಈ ತಪ್ಪನ್ನು ಮಾಡಬಾರದೆಂದೇ ಎಲ್ಲರಕನ್ನಡವು ಹುಟ್ಟಿಕೊಂಡಿರುವುದು.

ಎಲ್ಲರಕನ್ನಡವನ್ನು ತಪ್ಪುಹೆಜ್ಜೆಯೆನ್ನುವ ನಮ್ಮ ಗೆಳೆಯರಿಗೆ ಒಂದು ದೊಡ್ಡ ಹೆದರಿಕೆಯಿದೆ. ಇಲ್ಲಿಯವರೆಗೆ ಕನ್ನಡದ ಬರಹಜಗತ್ತಿನಲ್ಲಿ ಮೂಡಿರುವ ಎಣಿಕೆಮೀರಿದ ಹೊತ್ತಗೆಗಳನ್ನೆಲ್ಲ ಈ ಚಳುವಳಿಯು ಕಸದ ಬುಟ್ಟಿಗೆ ಎಸೆಯುತ್ತಿದೆ ಎಂಬುದೇ ಅದು. ನಿಜಕ್ಕೂ ಈ ಹೆದರಿಕೆಗೆ ಕಾರಣವಿಲ್ಲ. ಏಕೆಂದರೆ, ಹಾಗೆ ನಮ್ಮ ಹಿಂದಿನವರು ಮಾಡಿಟ್ಟಿರುವುದನ್ನು ಕಡೆಗಣಿಸಿದರೆ ಕನ್ನಡಕ್ಕೆ ಉಳಿಗಾಲವಿಲ್ಲವೆಂಬ ಅರಿವು ನಮಗೆ ಇದ್ದೇ ಇದೆ. ’ನಮ್ಮವರು ಗಳಿಸಿದ ಹೆಸರುಳಿಸಲು’ ನಾವು ಟೊಂಕ ಕಟ್ಟಿ ನಿಂತಿರುವವರೇ. ಅವರಿಂದ ಪಡೆಯುವುದನ್ನು ಪಡೆದು ನಮ್ಮದೂ ಒಂದು ಜಗತ್ತಿದೆಯಲ್ಲ, ಅದನ್ನು ಅವರಿಗೆ ಕೈಮುಗಿದು ನಾವೇ ಕಟ್ಟಿಕೊಳ್ಳಬೇಕೆಂದು ನಾವು ಹೇಳುತ್ತಿದ್ದೇವಶ್ಟೆ.

ಮಾರ‍್ಪಾಟೆಂದಮೇಲೆ ಹೆದರಿಕೆ ಇದ್ದದ್ದೇ. ಮಾರ‍್ಪಾಟು ಒಂದು ದಡದಿಂದ ಇನ್ನೊಂದು ದಡಕ್ಕೆ ಈಸಿಕೊಂಡು ಹೋಗುವಂತೆ. ಇರುವ ದಡವನ್ನು ಬಿಟ್ಟು ನೀರಿಗೆ ದುಮುಕಿದರೆ ನಾವು ಬದುಕುತ್ತೇವಾ? ನೀರಿನಲ್ಲಿ ಸುಳಿಯಿದ್ದರೆ? ಮೊಸಳೆಯಿದ್ದರೆ? ಹಾವಿದ್ದರೆ? ನಡುವೆ ಉಸಿರು ಕಟ್ಟಿದರೆ? ದೂರದ ದಡ ಸಿಗದೆ ಹೋದರೆ? ಹಿಂತಿರುಗಿ ಈ ದಡಕ್ಕೆ ಬರುವುದಕ್ಕೂ ಆಗದಿದ್ದರೆ? ಇಂತಹ ಹೆದರಿಕೆಗಳು ಮೊದಮೊದಲಿಗೆ ಈಜುಗಾರರಿಗೆ ಬರುವುದು ಸಹಜ. ಈ ಹೆದರಿಕೆಗಳನ್ನೆಲ್ಲ ಮೆಟ್ಟಿ ನಿಂತವರೇ ಈಜುವುದು, ಈಜಿ ಗುರಿದಡಕ್ಕೆ ತಲುಪುವುದು. ತಲುಪುವ ಆಸೆಯೇ ಅವರನ್ನು ಮುನ್ನುಗ್ಗುವಂತೆ ಮಾಡುವುದು. ಇದು ಎಲ್ಲರಕನ್ನಡವೆಂಬ ಈ ಮಾರ‍್ಪಾಡಿಗೂ ಒಪ್ಪುತ್ತದೆ. ಕೆಲವರಿಗೆ ತಮ್ಮ ಹೆದರಿಕೆಗಳನ್ನು ಮೆಟ್ಟಿ ನಿಲ್ಲಲಾರದೆ ಈಜುವುದೇ ಬೇಡವೆನಿಸುತ್ತಿದೆಯಶ್ಟೆ.

ಮೇಲೆ ತಿಳಿಸಿದ ಹಿಂದಿನ ಹೊತ್ತಗೆಗಳ ಬಗೆಗಿನ ಹೆದರಿಕೆಯನ್ನು ಹೇಗೆ ಹೋಗಲಾಡಿಸಿಕೊಳ್ಳುವುದು? ಮೊಟ್ಟಮೊದಲಿಗೆ, ಹಳೆಯ ಹೊತ್ತಗೆಗಳನ್ನು ನಾವು ಓದಬಾರದು ಎಂದು ಹೇಳುತ್ತಲೇ ಇಲ್ಲ. ಅವುಗಳ ಬಗ್ಗೆ ಬರೆಯಬಾರದು, ಅವುಗಳಿಂದ ಉಲ್ಲೇಕಿಸಬಾರದು ಎಂದೂ ಹೇಳುತ್ತಿಲ್ಲ. ಅದೆಲ್ಲವನ್ನು ನಾವು ಮಾಡಲೇ ಬೇಕು, ಆದ್ದರಿಂದ ಮಾಡಬಾರದು ಎನ್ನುತ್ತಿದ್ದೇವೆ ಎಂಬ ಹೆದರಿಕೆ ಬೇಡ. ಆದರೆ ಅದನ್ನು ಮಾಡುವುದೇ ಬರವಣಿಗೆಯ ಗುರಿಯಲ್ಲವೆಂದು ಕೂಡ ’ಬೇಡ’ವೆನ್ನುವವರು ಮನಗಾಣಬೇಕು; ಹಿರಿಯರು ಹಾಕಿಕೊಟ್ಟ ಆಲದಮರಕ್ಕೆ ಹೋಗಿ ನೇತುಹಾಕಿಕೊಳ್ಳುವುದೇ ಕಿರಿಯರ ಬಾಳಿನ ಗುರಿಯಲ್ಲ. ಆದ್ದರಿಂದ ಹಳೆಯದನ್ನು ಹಳೆಯ ಬರವಣಿಗೆಯಲ್ಲೇ ಉಲ್ಲೇಕಿಸಿದರಾಯಿತು. ಅದರಲ್ಲಿ ಮಹಾಪ್ರಾಣಗಳಿದ್ದರೆ ಇರಲಿ, ಋಕಾರವಿದ್ದರೆ ಇರಲಿ, ಷಕಾರವಿದ್ದರೆ ಇರಲಿ, ಅದಕ್ಕೇನಂತೆ? ಸಂಸ್ಕ್ರುತದ ಪದಗಳೇ ಹೆಚ್ಚಿದ್ದರೆ ಇರಲಿ, ಅದಕ್ಕೇನಂತೆ? ಉಲ್ಲೇಕಿಸುವಾಗ ಹಳೆಯದನ್ನು ಉಳಿಸಿಕೊಂಡು ಅದರ ಬಗ್ಗೆ ನಮ್ಮ ಮಾತನ್ನು ಹೊಸ ಬರವಣಿಗೆಯಲ್ಲಿ ಬರೆದರಾಯಿತು. ಹಳೆಗನ್ನಡದಲ್ಲಿ ಱಕಾರ ಮತ್ತು ೞಕಾರಗಳನ್ನು ಹೀಗೇ ಅಲ್ಲವೇ ನಾವು ನಡೆಸಿಕೊಳ್ಳುತ್ತಿರುವುದು?

ಇಲ್ಲಿ, ’ಹಳೆಯದನ್ನು ಉಳಿಸಿಕೊಳ್ಳಲು ನಿಮಗೆ ಆಗುತ್ತಿರುವುದೇ ಆದರೆ ಮಾರ‍್ಪಾಡೇತಕ್ಕೆ?’ ಎಂಬ ಪ್ರಶ್ನೆ ಬರಬಹುದು. ನಿಜಕ್ಕೂ ಈ ಪ್ರಶ್ನೆ ಹುಟ್ಟುವುದು ಎಲ್ಲರಕನ್ನಡವು ಹುಟ್ಟಿರುವುದು ಏತಕ್ಕೆಂದು ಮನಸ್ಸಿನಲ್ಲಿ ನೆಲೆನಿಲ್ಲದಿರುವುದರಿಂದ. ಹಳೆಯದನ್ನು ಉಳಿಸಿಕೊಳ್ಳಲು ’ಆಗುತ್ತಿರುವುದು’ ಕೆಲವರಿಗೆ ಮಾತ್ರ: ಯಾರು ಆ ಹಳೆಯ ಹೊತ್ತಗೆಗಳನ್ನು ಅರಿದು ಕುಡಿದಿರುವವರೋ ಅಂತವರಿಗೆ, ಮತ್ತು ಯಾರಿಗೆ ಅದರ ಬಗ್ಗೆ ಕಾಳಜಿಯಿದೆಯೋ ಅವರಿಗೆ. ಆ ಹಳೆಯದನ್ನು ಎಲ್ಲ ಕನ್ನಡಿಗರೂ ಓದಿ ಅರಗಿಸಿಕೊಳ್ಳಲು ಆಗದೆ ಹೋಗಿರುವುದೇ ತೊಂದರೆ. ಆ ತೊಂದರೆಯನ್ನು ಹೋಗಲಾಡಿಸುವ ಮತ್ತು ಹಿಂದಿನವರ ಬರವಣಿಗೆಯನ್ನು ಎಲ್ಲರಿಗೂ ತಲುಪಿಸುವ ಹೊಣೆ ಮಾರ‍್ಪಾಡು ಬೇಕೆನ್ನುತ್ತಿರುವವರದು. ಅವರು ಮಾಡುತ್ತಾರೆ, ಅಶ್ಟೆ. ಎಲ್ಲರಿಗೂ ಅದನ್ನು ಮಾಡಲಾಗುತ್ತದೆ ಎಂದುಕೊಳ್ಳಬಾರದು. ಆಗಿದ್ದರೆ ಎಲ್ಲರಕನ್ನಡವೆಂಬುದು ಬೇಕಿರಲೇ ಇಲ್ಲ. ಬೇಡದಿದ್ದಾಗ ನಮ್ಮ ಬೆವರನ್ನೇಕೆ ಸುಮ್ಮನೆ ಸುರಿಸುತ್ತಿದ್ದೆವು?

ಮೇಲೆ ಹೇಳಿದಂತೆ ಹಳೆಯದನ್ನು ಹೊಸದರಲ್ಲಿ ಹಾಸುಹೊಕ್ಕಂತೆ ಉಳಿಸಿಕೊಂಡು ಹೋಗುವ ಒಂದು ಎತ್ತುಗೆಯನ್ನು ಕೊಟ್ಟು ಈ ಬರಹವನ್ನು ಮುಗಿಸುತ್ತೇನೆ. ಈ ಎತ್ತುಗೆಯಲ್ಲಿ ಬರುವ ಹೆಸರಿನ ಕಡೆ ಗಮನ ಹರಿಸದೆ ಓದಬೇಕೆಂದು ಕೋರಿ ಮುಂದುವರೆಯುತ್ತೇನೆ. ಒಂಬತ್ತನೇ ಶತಮಾನದ ’ಕವಿರಾಜಮಾರ‍್ಗ’ವು ಕನ್ನಡದ ಹಳೆಯ ಹೊತ್ತಗೆಯೆಂಬುದರಲ್ಲಿ ಎರಡು ಮಾತಿಲ್ಲವಾದುದರಿಂದ, ಮತ್ತು ಬಹಳ ಹೆಸರುವಾಸಿಯಾಗಿರುವುದರಿಂದ ಅದನ್ನು ಆಯ್ದುಕೊಳ್ಳೋಣ. ಅದರ ಬಗ್ಗೆ ತಿಳಿಸುವ ಬಹಳ ಹೆಸರುವಾಸಿಯಾದ ಕೆ.ವಿ. ಸುಬ್ಬಣ್ಣನವರ ’ಕವಿರಾಜಮಾರ‍್ಗ ಮತ್ತು ಕನ್ನಡ ಜಗತ್ತು’ ಎಂಬ ಹೊತ್ತಗೆಯ ಬೆನ್ನುಡಿ ಹೀಗಿದೆ:

‘ಕವಿರಾಜಮಾರ‍್ಗ’ವು ತನ್ನ ಕಿರುಭಾಷೆಯ ಅಂಗೈನೆಲದಲ್ಲಿ ಪ್ರಪಂಚಜಗತ್ತನ್ನು ಆವಾಹಿಸಿ ಅರಗಿಸಿಕೊಂಡು ಕನ್ನಡವೆಂಬ ನಿಸ್ಸೀಮೆಯ ಪ್ರತಿಜಗತ್ತನ್ನು ಹೇಗೆ ಸೃಷ್ಟಿಸಿಕೊಳ್ಳಬೇಕೆಂಬುದನ್ನು ಕುರಿತು ಚಿಂತಿಸುತ್ತದೆ. ‘ಕವಿರಾಜಮಾರ‍್ಗ’ ದಲ್ಲಿನ ಒಂದು ಕಿರು ಕಂದಪದ್ಯವು ಅದನ್ನು ಮನೋಜ್ಞವಾಗಿ ಬಣ್ಣಿಸುತ್ತದೆ. ‘ಕಾವೇರಿಯಿಂದಂ – ಆ – ಗೋದಾವರಿವರಂ – ಇರ‍್ದ – ನಾಡು – ಅದು ಆ ಕನ್ನಡದೊಳ್‌ ಭಾವಿಸಿದ ಜನಪದಂ’. ಈ ನಾಡು ಮತ್ತು ಜನಪದವು ತತ್ಕಾಲದಲ್ಲಿ ಕಾಣಿಸುತ್ತಿದ್ದ ಭೌಗೋಲಿಕ ಘಟಕವಷ್ಟೇ ಅಲ್ಲ; ಅದು ‘ಭಾವಿತ’ವಾದದ್ದು; ‘ಕನ್ನಡ’ ವೆಂಬುದರ ಒಳಗಡೆ — ಆ ಚಿಪ್ಪಿನ ಒಳಗೆ ಎನ್ನಿ — ‘ಭಾವಿತ’ ವಾದದ್ದು. ಅಂದರೆ, ‘ಕನ್ನಡ’ ವೆಂಬುದು ಒಂದು ಚಿತ್-ಜಗತ್ತು, ಒಂದು ಕಣಸು, ದರ‍್ಶನ; ಮೊದಲು ಚಿತ್ – ಜಗತ್ತಿನೊಳಗೆ ಮೈದಾಳಿದ್ದಾಗಿ ಅನಂತರ ನಿರ‍್ಮಿತಗೊಂಡಿದೆ. ಮತ್ತು ಇದು, ‘ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’. ವಸುಧಾ (ಭೂಮಿ) ಎನ್ನುವುದು ಅನಂತ ಬ್ರಹ್ಮಾಂಡದೊಳಗಿನ ಒಂದು ‘ವಲಯ’ ಅಷ್ಟೇ; ಮತ್ತು ‘ಕನ್ನಡ’ ವೆಂಬ ‘ವಿಷಯ’ (ನಾಡು) ವು ಆ ವಸುಧಾವಲಯದಲ್ಲಿ ‘ವಿಲೀನ’ ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳುಗಿಹೋದದ್ದಲ್ಲ; ತನ್ನದೇ ‘ವಿಶೇಷ’ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ — ಇದು ‘ವಿಶದ’ ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು. ಯಾಕೆಂದರೆ ಇದು, ‘ವಸುಧಾವಲಯ ವಿಲೀನ, ವಸುಧೆಯ ಒಳಗಿನ ಒಂದು ಕಿರುಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ ‘ಕನ್ನಡ’ ದ ಇಂಥ ಪ್ರತಿಮೆಯನ್ನು ‘ಕವಿರಾಜಮಾರ‍್ಗ’ವು ಕಂಡರಿಸಿಟ್ಟಿದೆ.

ಇಲ್ಲಿ ನಾವು ಹೇಳುತ್ತಿರುವುದೇನೆಂದರೆ, ಈ ಮಾತುಗಳನ್ನು ಇನ್ನೂ ಸರಳವಾದ ಪದಗಳನ್ನು ಬಳಸಿ ಕನ್ನಡಿಗರ ಮುಂದೆ ಇಡಬಹುದು, ಇಡಬೇಕು. ಹಾಗಿಡುವಾಗ ಕವಿರಾಜಮಾರ‍್ಗದಲ್ಲಿರುವ ಪದಗಳನ್ನು ಹಾಗೇ ಉಳಿಸಿಕೊಳ್ಳದೆ ಬೇರೆ ದಾರಿಯಿಲ್ಲ; ಇಲ್ಲವಾದರೆ ನಾವು ಕವಿರಾಜಮಾರ‍್ಗದ ಬಗ್ಗೆ ಬರೆದಂತಾಗುವುದಿಲ್ಲ. ಆದರೆ ಅವುಗಳ ಬಗ್ಗೆ ಬರೆಯುವಾಗ ಆದಶ್ಟು ಅಚ್ಚಗನ್ನಡದ ಪದಗಳನ್ನೇ ಬಳಸಿ ಹೀಗೆ ಬರೆಯಬಹುದು:

’ಕವಿರಾಜಮಾರ‍್ಗ’ವು ತನ್ನ ಕಿರುನುಡಿಯ ಅಂಗೈನೆಲದಲ್ಲಿ ಇಡೀ ಜಗತ್ತನ್ನು ಕಂಡುಕೊಂಡು, ಅದನ್ನರಗಿಸಿಕೊಂಡು, ಕನ್ನಡವೆಂಬ ಎಲ್ಲೆಯಿಲ್ಲದ ಇದಿರುಜಗತ್ತನ್ನು ಹೇಗೆ ಕಟ್ಟಿಕೊಳ್ಳಬೇಕೆಂಬುದನ್ನು ಕುರಿತು ಚಿಂತಿಸುತ್ತದೆ. ‘ಕವಿರಾಜಮಾರ‍್ಗ’ ದಲ್ಲಿನ ಒಂದು ಕಿರು ಕಂದಪದ್ಯವು ಅದನ್ನು ಬಲುವಂದವಾಗಿ ಬಣ್ಣಿಸುತ್ತದೆ. ‘ಕಾವೇರಿಯಿಂದಂ-ಆ – ಗೋದಾವರಿವರಂ – ಇರ‍್ದ – ನಾಡು – ಅದು ಆ ಕನ್ನಡದೊಳ್‌ಭಾವಿಸಿದ ಜನಪದಂ’. ಈ ನಾಡು ಮತ್ತು ಜನಪದವು ಆ ಗಳಿಗೆಯಲ್ಲಿ ಕಾಣಿಸುತ್ತಿದ್ದ ನೆಲದ ತುಣುಕಶ್ಟೇ ಅಲ್ಲ; ಅದು ‘ಭಾವಿತ’ವಾದದ್ದು; ‘ಕನ್ನಡ’ ವೆಂಬುದರ ಒಳಗಡೆ — ಆ ಚಿಪ್ಪಿನ ಒಳಗೆ ಎನ್ನಿ — ಒಣರಿಕೊಂಡಿರುವುದು. ಅಂದರೆ, ‘ಕನ್ನಡ’ ವೆಂಬುದು ಒಂದು ಬಗೆಲೋಕ, ಒಂದು ಕಣಸು, ನೋಟ; ಮೊದಲು ಬಗೆಲೋಕದೊಳಗೆ ಮೈದಾಳಿದಾಗಿ ಅನಂತರ ಕಟ್ಟಲ್ಪಟ್ಟಿದೆ. ಮತ್ತು ಇದು, ‘ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’. ’ವಸುಧಾ’ (ಲೋಕ) ಎನ್ನುವುದು ಕೊನೆಯಿಲ್ಲದ ಬ್ರಹ್ಮಾಂಡದೊಳಗಿನ ಒಂದು ‘ವಲಯ’ ಅಶ್ಟೇ; ಮತ್ತು ‘ಕನ್ನಡ’ ವೆಂಬ ‘ವಿಷಯ’ (ನಾಡು) ಆ ಲೋಕವಲಯದಲ್ಲಿ ‘ವಿಲೀನ’ ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದಮಾತ್ರಕ್ಕೆ ಇದು ತನ್ನತನದ ಕುರುಹುಗಳಿಲ್ಲದೆ ಲೋಕದಲ್ಲಿ ಗುರುತು ಸಿಗದಂತೆ ಮುಳುಗಿಹೋದದ್ದಲ್ಲ; ತನ್ನದೇ ‘ವಿಶೇಷ’ (ಬೇರೆತನ) ಇರುವ ನಾಡು. ಅಶ್ಟೇ ಅಲ್ಲ — ಇದು ‘ವಿಶದ’ ವಾದದ್ದು; ಲೋಕ ಇಲ್ಲವೇ ಬ್ರಹ್ಮಾಂಡದಶ್ಟೇ ಹರವಿನದು. ಯಾಕೆಂದರೆ ಇದು, ‘ವಸುಧಾವಲಯ ವಿಲೀನ’ ವಸುಧೆ’ಯ ಒಳಗಿನ ಒಂದು ತೊಟ್ಟಾಗಿದ್ದು ತನ್ನೊಳಗೆ ಆ ಲೋಕವನ್ನೇ ಅರಗಿಸಿಕೊಂಡಿರುವ ‘ಕನ್ನಡ’ ದ ಇಂತಹ ಪ್ರತಿಮೆಯನ್ನು ‘ಕವಿರಾಜಮಾರ‍್ಗ’ವು ಕಂಡರಿಸಿಟ್ಟಿದೆ.

ಎಲ್ಲರಕನ್ನಡವೆಂದರೆ ಇಲ್ಲಿ ನಾನು ಮೇಲೆ ಬರೆದಿದ್ದೇನಲ್ಲ, ಹಾಗೇ ಬರೆಯಬೇಕು ಎಂದು ಹೇಳುತ್ತಿಲ್ಲ, ಇದು ಒಂದು ಬಗೆಯಶ್ಟೆ. ನಾನು ಸುಬ್ಬಣ್ಣನವರ ಇಂಗಿತವನ್ನು ನೂರಕ್ಕೆ ನೂರು ಈ ನನ್ನ ಮಾತುಗಳಲ್ಲಿ ಉಳಿಸಿಕೊಂಡಿದ್ದೇನೆ ಎಂಬ ಎದೆಗಾರಿಕೆಯೂ ನನಗಿಲ್ಲ. ಆದರೆ ಇಲ್ಲಿ ನಾನು ಎತ್ತಿ ತೋರಿಸ ಬಯಸುವ ಅಂಶಗಳು ಕೆಲವಿವೆ. ’ಕಿರುಭಾಷೆ’ ಎನ್ನುವ ಬದಲು ’ಕಿರುನುಡಿ’, ’ಆವಾಹಿಸಿ’ ಎನ್ನುವ ಬದಲು ’ಕಂಡುಕೊಂಡು’, ’ನಿಸ್ಸೀಮೆಯ ಪ್ರತಿಜಗತ್ತು’ ಎನ್ನುವ ಬದಲು ’ಎಲ್ಲೆಯಿಲ್ಲದ ಇದುರುಜಗತ್ತು’, ’ಸೃಷ್ಟಿಸಿಕೊಳ್ಳಬೇಕು’ ಎನ್ನುವ ಬದಲು ’ಕಟ್ಟಿಕೊಳ್ಳಬೇಕು’, ’ತತ್ಕಾಲದಲ್ಲಿ’ ಎನ್ನುವ ಬದಲು ’ಆ ಗಳಿಗೆಯಲ್ಲಿ’, ’ ಭೌಗೋಲಿಕ ಘಟಕ’ ಎನ್ನುವ ಬದಲು ’ನೆಲದ ತುಣುಕು’, ’ಭಾವಿತವಾದದ್ದು’ ಎನ್ನುವ ಬದಲು ’ಒಣರಿಕೊಂಡಿರುವುದು’, ’ಚಿತ್-ಜಗತ್ತು’ ಎನ್ನುವ ಬದಲು ’ಬಗೆಲೋಕ’, ’ದರ‍್ಶನ’ ಎನ್ನುವ ಬದಲು ’ನೋಟ’, ’ನಿರ‍್ಮಿತಗೊಂಡಿದೆ’ ಎನ್ನುವ ಬದಲು ’ಕಟ್ಟಲ್ಪಟ್ಟಿದೆ’, ’ಅನಂತ ಬ್ರಹ್ಮಾಂಡ’ ಎನ್ನುವ ಬದಲು ’ಕೊನೆಯಿಲ್ಲದ ಬ್ರಹ್ಮಾಂಡ’, ’ಸ್ವಂತಿಕೆಯ ಚಹರೆ’ ಎನ್ನುವ ಬದಲು ’ತನ್ನತನ ಕುರುಹು’, ’ವೈಶಿಷ್ಟ್ಯ’ ಎನ್ನುವ ಬದಲು ’ಬೇರೆತನ’, ’ವ್ಯಾಪಕವಾದದ್ದು’ ಎನ್ನುವ ಬದಲು ’ಹರವಿನದು’, ’ಕಿರುಬಿಂದು’ ಎನ್ನುವ ಬದಲು ’ತೊಟ್ಟು’, ಹೀಗೆ ಆದಶ್ಟೂ ಕನ್ನಡದ್ದೇ ಮತ್ತು ಕನ್ನಡಿಗರಿಗೆ ಹತ್ತಿರವಾದದ್ದೇ ಪದಗಳನ್ನು ಬಳಸಿ ಬರೆಯುವುದು ಇಂದು ಕನ್ನಡಿಗರಿಗೆಲ್ಲ ಇದನ್ನು ಮುಟ್ಟಿಸುವ ನಿಟ್ಟಿನಲ್ಲಿ ಬಹಳ ಮುಕ್ಯವಾದುದು. ಇನ್ನು ಕವಿರಾಜಮಾರ‍್ಗದ ಪದಗಳನ್ನು ಹಾಗೇ ಉಳಿಸಿಕೊಂಡಿರುವುದು ನಿಮ್ಮ ಕಣ್ಣಿಗೆ ಬಿದ್ದಿರಲೇ ಬೇಕು.

ಮೇಲೊಮ್ಮೆ ಹೇಳಿರುವೆನಾದರೂ ಮತ್ತೊಮ್ಮೆ ಒಂದು ಮಾತು ಹೇಳಬೇಕಿದೆ. ಅದೇನೆಂದರೆ, ಇಲ್ಲಿ ನಾನು ಕೆ.ವಿ.ಸುಬ್ಬಣ್ಣನವರನ್ನು ಬೊಟ್ಟು ಮಾಡಿ ಹೇಳುತ್ತಿಲ್ಲ. ಸುಬ್ಬಣ್ಣನವರೇ ಹೀಗೆ ಬರೆಯಬೇಕಿತ್ತು, ಏಕೆ ಬರೆಯಲಿಲ್ಲ ಎಂದು ಪ್ರಸ್ನಿಸುತ್ತಿಲ್ಲ. ಎತ್ತುಗೆಯನ್ನು ತೆಗೆದುಕೊಳ್ಳಲೇ ಬೇಕೆಂದು ತೀರ‍್ಮಾನಿಸಿರುವುದರಿಂದ ಒಂದನ್ನು ತೆಗೆದುಕೊಂಡಿದ್ದೇನಶ್ಟೆ. ನಿಜಕ್ಕೂ ಅವರೊಬ್ಬರೇ ಅಲ್ಲ, ಹಿಂದಿನವರೆಲ್ಲರೂ, ಇಂದು ಅವರ ದಾರಿಯಲ್ಲಿ ನಡೆಯುತ್ತಿರುವವರೆಲ್ಲರೂ, ಇಲ್ಲಿ ಅವರಂತೆಯೇ ಬರೆಯುವವರು ಮತ್ತು ಆದಶ್ಟು ಸಂಸ್ಕ್ರುತದ ಪದಗಳನ್ನು ಬಳಸುವುದು ಒಳ್ಳೆಯದೆಂಬ ಅನಿಸಿಕೆಯನ್ನೇ ಉಳ್ಳವರಾಗಿದ್ದರೆನ್ನಬಹುದು. ಇನ್ನು ಮುಂದೆ ’ಕವಿರಾಜಮಾರ‍್ಗ ಮತ್ತು ಕನ್ನಡ ಜಗತ್ತಿ’ನಂತಹ ಹೊತ್ತಗೆಗಳು ಎಲ್ಲ ಕನ್ನಡಿಗರಿಗೂ ತಲುಪಬೇಕು ಎಂಬ ಹಂಬಲವು ಈಡೇರಬೇಕಾದರೆ ಇಲ್ಲಿ ಸೂಚಿಸಿರುವಂತಹ ಮಾರ‍್ಪಾಡನ್ನು ಮಾಡಿಕೊಂಡು ಹೊತ್ತಗೆಗಳನ್ನು ಬರೆಯುವುದು ಒಳ್ಳೆಯದು ಎಂದು ಹೇಳುತ್ತಿದ್ದೇನಶ್ಟೆ. ಹೂಂ, ಸುಬ್ಬಣ್ಣನವರ ಹೊತ್ತಗೆಯೂ ’ಹಳೆಯ ಹೊತ್ತಗೆ’ಯೇ, ಏಕೆಂದರೆ ಅದು ಈಗಾಗಲೇ ಇದೆ! ಅದರಿಂದ ಉಲ್ಲೇಕಿಸುವಾಗಲೂ ಅವರು ಬರೆದಿರುವಂತೆಯೇ ಬರೆಯಬೇಕು ಎಂಬುದೇ ನನ್ನ ನಿಲುವು. ಇಲ್ಲಿ ಅವರ ಹೊತ್ತಗೆಯನ್ನು ಮೇಲಿನಂತೆ ಬರೆದಿದ್ದರೆ ಇನ್ನೂ ಜನರಿಗೆ ಹೆಚ್ಚು ಹತ್ತಿರವಾಗುತ್ತಿತ್ತು ಎಂದು ತೋರಿಸಲು ಅವರ ಹೊತ್ತಗೆಯ ಎತ್ತುಗೆಯನ್ನು ತೆಗೆದುಕೊಂಡಿದ್ದೇನಶ್ಟೆ.

ಒಟ್ಟಿನಲ್ಲಿ, ಹಳೆಯದನ್ನು ಎಸೆದುಬಿಡುತ್ತೇವೆ, ಕಡೆಗಣಿಸಿಬಿಡುತ್ತೇವೆ, ಇಲ್ಲವೇ ಸರಿಯಾದ ರೀತಿಯಲ್ಲಿ ಉಳಿಸಿಕೊಳ್ಳದೆ ಹೋಗುತ್ತೇವೆ ಎಂಬ ಹೆದರಿಕೆ ಈ ಬರಹದಿಂದ ಕೊಂಚ ಕಡಿಮೆಯಾಗಿದ್ದರೆ ನನ್ನ ಮನಸ್ಸಿಗೆ ನೆಮ್ಮದಿ!

(ಚಿತ್ರ ಸೆಲೆ: ochaplin.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

 1. cmariejoseph says:

  ನಿಮ್ಮ ಅನಸಿಕೆಗಳನ್ನು ನಾನು ಬಹಳವಾಗಿ ಒಪ್ಪುತ್ತೇನೆ ಕಿರಣ ಅವರೇ.
  ಆದರೆ ಇಲ್ಲಿ ತೊಡಕಿನ ಸಂಗತಿ/ಅಂಶ ಏನೆಂದರೆ ಈಗಾಗಲೇ ಒಗ್ಗಿಹೋಗಿದ್ದ ಪದಗಳಿಗೆ ಹೊಸದಾದ ಆದರೆ
  ಕನ್ನಡದ್ದೇ ಆದ ಪದ ನೀಡುವಾಗ ಅದಕ್ಕೆ ಇನ್ನೊಂದು ಹೊಳಹು ಇದೆಯೇ, ಆ ಪದಕ್ಕೆ ಮತ್ತೊಂದು
  ಸ್ಟ್ಯಾಂಡರ್ಡ್ ಆದಂತ ಪದವಿದೆಯೇ ಎಂಬುದನ್ನು ಮಾತಿಗೊಡ್ಡಿ ಬಳಕೆಗೆ ತರಬೇಕಾಗಿದೆ.
  ಹಾಗೂ ಅನ್ತ ಪದಗಳ ಒಂದು ಪಟ್ಟಿಯನ್ನು ಮಿಂಬಲೆಯಲ್ಲಿ ತೇಲಿ ನೀಡಬೇಕಾಗುತ್ತದೆ.
  ಆಗ ಒಂದು ಪದವನ್ನು ಇನ್ನೊಂದು ಬಗೆಯಲ್ಲಿ ತೆಗೆದುಕೊಳ್ಳಲಾಗಿದೆಯೇ, ಇನ್ನೊಂದು ರೂಹಿಗೆ
  ಎಡೆಯಾಗುತ್ತಿದೆಯೇ ಎಂಬುದನ್ನು ನೋಡಬಹುದು.
  ಅಲ್ಲದೆ ಹಿಂದಿನ ಯಾವುದಾದರೂ ಕಾವ್ಯ ಶಾಸನ ತಾಮ್ರಪತ್ರ ಕಾಗದಪತ್ರ ಆಡುನುಡಿಗಳಲ್ಲಿ ಅನ್ತ
  ಪದಬಳಕೆ ಆಗಿರುವುದನ್ನೂ ತೋರಿದರೆ ಒಳಿತಾದೀತು.
  ಏಕೆಂದರೆ ಒಂದೇ ಪದವು ಅದು ಬಳಕೆಯಾಗುವ ತಾಣದಲ್ಲಿ ಬೇರೊಂದು ರೂಹು ತಳೆಯಬಹುದು.
  ನನ್ನ ಕೆಲಸದ ತಾಣದಲ್ಲಿ ಹೊಸ ಪದಗಳನ್ನು ಕಟ್ಟುವಾಗ ಇನ್ತ ತೊಡಕನ್ನು ನಾನು ಎದುರಿಸಿದ್ದೇನೆ.

 1. 07/09/2015

  […] ಮೊದಲ ಬಾರಿಗೆ 2015ರ ಮಾರ್ಚ್ ತಿಂಗಳಲ್ಲಿ “ಹೊನಲು” ಮಿಂಬಾಗಿಲಿನಲ್ಲಿ ಮೂಡಿ […]

ಅನಿಸಿಕೆ ಬರೆಯಿರಿ:

Enable Notifications OK No thanks