ಕಾರುಗಳ ಬಗೆಯತ್ತ ಒಂದು ನೋಟ
ನಾವೆಲ್ಲರೂ ದಿನ ನಿತ್ಯ ಹಲವಾರು ಬಗೆ ಕಾರುಗಳನ್ನು ನೋಡಿರುತ್ತೇವೆ. ಕಾರು ಬಂಡಿಗಳಲ್ಲಿ ಹಲವು ಬಗೆ. ಕಾರು ಕೊಂಡುಕೊಳ್ಳಬೇಕೆನ್ನುವರಿಗೆ ಇಂದಿನ ಮಾರುಕಟ್ಟೆಯಲ್ಲಂತೂ ಸಾಕಶ್ಟು ಆಯ್ಕೆಗಳು. ಮೇಲಿಂದ ಮೇಲೆ ಮಾರುಕಟ್ಟೆಗೆ ಹೊಸ ಬಂಡಿಗಳು ಬರುತ್ತಲೇ ಇವೆ. ಈ ಬಗೆ ಬಗೆಯ ಆಕಾರ ಗಾತ್ರದಲ್ಲಿ ಕಂಡುಬರುವ ಕಾರು ಬಂಡಿಗಳ ಬಗ್ಗೆ ಒಂದು ಕಿರುನೋಟ ಇಲ್ಲಿದೆ.
ಹ್ಯಾಚ್-ಬ್ಯಾಕ್ (ಕಿರು / ಹಿಂಗದ) ಕಾರುಗಳು:
ಕಾರಿನ ಹಿಂಬಾಗದಲ್ಲಿ ಮೇಲೆಳೆದುಕೊಳ್ಳುವ ಬಾಗಿಲು ಹೊಂದಿರುವರಿಂದ ಇವುಗಳನ್ನು ಹ್ಯಾಚ್-ಬ್ಯಾಕ್ ಕಾರುಗಳೆನ್ನಲಾಗುತ್ತದೆ. ಇವುಗಳು ನೋಡಲು ಚಿಕ್ಕವು. 3 ಪಯಣಿಗರು ಜೊತೆಗೆ ಒಬ್ಬ ಓಡಿಸುಗ, ಒಟ್ಟು ನಾಲ್ವರು ಕೂತು ಸಾಗಲು ಅನುವಾಗುವ ಕಿರಿದಾದ ಕಾರುಗಳು ಇವು. ಸರಕುಚಾಚು ಅಂದರೆ ಡಿಕ್ಕಿಯಲ್ಲಿ ಪುಟ್ಟದಾದ ಕೆಲವೇ ವಸ್ತುಗಳನ್ನು ಇವುಗಳಲ್ಲಿರಿಸಿ ಸಾಗಬಹುದಾಗಿದೆ.
ಹ್ಯಾಚ್-ಬ್ಯಾಕ್ ಕಾರುಗಳನ್ನು ಮುಕ್ಯವಾಗಿ 2 ಪೆಟ್ಟಿಗೆಯಂತೆ ವಿಬಾಗಿಸಿರಲಾಗಿರುತ್ತದೆ (2-box design). ಮುಂಬಾಗದ ಬಿಣಿಗೆ (engine) ಒಂದು ಪೆಟ್ಟಿಗೆಯ ಬಾಗವಾದರೆ, ಪಯಣಿಗರು ಕೂಡುವ ಜಾಗ ಮತ್ತು ಸರಕುಚಾಚು ಸೇರಿ ಇನ್ನೊಂದು ಪೆಟ್ಟಿಗೆಯಾಗುತ್ತದೆ. ಈ ಕಾರುಗಳು ನಾಲ್ಕು ಇಲ್ಲವೇ ಅಯ್ದು ಬಾಗಿಲುಗಳನ್ನು ಹೊಂದಿರುತ್ತವೆ. ಬಾರತ ದೇಶದಲ್ಲಿ ಇಂತ ಕಿರುಕಾರುಗಳಿಗೆ ಬಲು ಬೇಡಿಕೆಯಿದೆ. ಇದೀಗ ಮಾರುಕಟ್ಟೆಯಲ್ಲಿ ತರತರದ ಹ್ಯಾಚ್-ಬ್ಯಾಕ್ ಕಾರುಗಳು ಕಾಣಸಿಗುತ್ತವೆ. ಮಾರುತಿ ಸುಜುಕಿಯಂತೂ ಹಲವು ಮಾದರಿಗಳನ್ನು ಹೊಂದಿದೆ. ಇವುಗಳಲ್ಲಿ ಸ್ವಿಪ್ಟ್, ಅಲ್ಟೋ, ವ್ಯಾಗನ್-ಆರ್, ಸೆಲೆರಿಯೋ ಮುಂತಾದವುಗಳು ಹೆಸರುವಾಸಿಯಾಗಿವೆ. ಹ್ಯುಂಡಾಯ್ ಆಯ್-10, ಪೊಕ್ಸ್ ವ್ಯಾಗನ್ ಪೊಲೊ, ಪೊರ‍್ಡ್ ಪಿಗೊ, ಪಿಯಾಟ್ ಪುಂಟೊ, ಟೊಯೊಟಾ ಲಿವಾ, ಡಾಟ್ಸನ್ ಗೋ, ರೆನೋ ಪಲ್ಸ್, ನಿಸ್ಸಾನ್ ಮಯ್ಕ್ರಾ ಹೀಗೆ ನಿಮ್ಮ ಅವಶ್ಯಕತೆಗೆ ತಕ್ಕಂತೆ ಆಯ್ಕೆಗಳು ಸಾಕಶ್ಟಿವೆ.
ಸೆಡಾನ್/ ಸಲೂನ್ ಕಾರುಗಳು:
‘ಸೆಡೆ’ ಎಂಬುದು ಇಟಾಲಿಯನ್ ನುಡಿಯಲ್ಲಿ ಕುರ‍್ಚಿ ಎಂಬರ‍್ತವಾಗುತ್ತದೆ, ಲ್ಯಾಟಿನ್ ನಲ್ಲಿ ಸೆಡೆರ‍್- ಎಂದರೆ ಕುಳಿತುಕೊಳ್ಳು ಎಂಬರ‍್ತ. ಇಟಾಲಿಯನ್, ಲ್ಯಾಟಿನ್ ಮೂಲದಿಂದ ಸೇಡಾನ್ ಪದದ ಬಳಕೆ ಶುರುವಾಯಿತು ಎಂದು ಹೇಳುವುದುಂಟು.
ಬಡಗಣ ಅಮೇರಿಕೆಯ ನಾಡುಗಳು, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದೆಡೆಗಳಲ್ಲಿ ಇವುಗಳನ್ನು ಸೆಡಾನ್ ಎಂದರೆ ಬ್ರಿಟನ್, ಆಯರ‍್ಲೆಂಡ್ ಕಡೆಗಳಲ್ಲಿ ಸಲೂನ್ ಕಾರುಗಳೆಂದು ಹೇಳುವರು. ಸೆಡಾನ್ ಕಾರುಗಳನ್ನು 3-ಪೆಟ್ಟಿಗೆ ಮಾದರಿಯಲ್ಲಿ (3-box design) ಮಾಡಲಾಗಿರುತ್ತದೆ. ಬಿಣಿಗೆ, ಪಯಣಿಗರು ಮತ್ತು ಸರಕುಚಾಚು ಹೀಗೆ 3-ಪೆಟ್ಟಿಗೆಯಾಕಾರದಲ್ಲಿ ಇವುಗಳನ್ನು ಬೇರ‍್ಪಡಿಸಬಹುದು.
ನಾಲ್ಕು ಇಲ್ಲವೇ ಐದು ಬಾಗಿಲಿರುವ ಸೆಡಾನ್ ಕಾರುಗಳು ಹೆಚ್ಚಿನ ಕಾಲುಚಾಚು (legroom), ಸರಕುಚಾಚು(boot space) ಹೊಂದಿರುತ್ತವೆ. ಇದರಿಂದ ಇವು ಕಿರುಕಾರುಗಳಿಗಿಂತ ದೊಡ್ಡದೆನೆಸಿಕೊಳ್ಳುತ್ತವೆ. ಕಾರುಕೊಳ್ಳುಗರಿಗೆ ಸೆಡಾನ್ ಕಾರುಗಳು ಅಚ್ಚುಮೆಚ್ಚು, ಮನೆಯವರೆಲ್ಲ ಒಟ್ಟಾಗಿ ಸೇರಿ ಪ್ರಯಾಣ ಮಾಡಲು ಇವು ತಕ್ಕುದಾಗಿವೆ.
ಮಾರುತಿ ಸುಜುಕಿಯ ಎಸ್.ಎಕ್ಸ್-4, ಹ್ಯುಂಡಾಯ್ ವೆರ‍್ಣಾ, ಪೋಕ್ಸ್ ವ್ಯಾಗನ್ ವೆಂಟೊ, ನಿಸ್ಸಾನ್ ಸನ್ನಿ, ರೆನೋ ಸ್ಕಲಾ, ಟೊಯೊಟಾ ಈಟಿಯೊಸ್, ಹೊಂಡಾ ಸಿಟಿ, ಸ್ಕೋಡಾ ರಾಪಿಡ್, ಪೊರ‍್ಡ್ ಪೀಯಸ್ಟಾ, ಟಾಟಾ ಇಂಡಿಗೋ ಮಾಂಜಾ ಮುಂತಾದವುಗಳು ಮಾರುಕಟ್ಟೆಯಲ್ಲಿ ಕಂಡುಬರುತ್ತವೆ.
ಮರ‍್ಸಿಡಿಸ್ ಬೆಂಜ್, ಅವ್ಡಿ, ಬಿ.ಎಮ್.ಡ್ಬ್ಲ್ಯೂ, ಟೊಯೊಟಾ ಕೊರೊಲ್ಲಾ ಕಾರುಗಳು ಸಿರಿಮೆಯ (ಲಕ್ಸರಿ) ಸೆಡಾನ್ ಸಾಲಿಗೆ ಸೇರುತ್ತವೆ. ಸಾಮಾನ್ಯ ಸೆಡಾನ್ ಕಾರಿನಂತೆ ಅಲ್ಲದೇ ಇವುಗಳಲ್ಲಿ ಸಿರಿಮೆಯ ಹೆಚ್ಚಿನ ವಿಶೇಶತೆಗಳನ್ನು ನೀಡಿರಲಾಗುತ್ತದೆ. ಬಾರತದಲ್ಲಿ ಇಂತ ಕಾರುಗಳ ಸಂಕ್ಯೆಯು ಹೆಚ್ಚಳವಾಗಿದೆ.
ಕಿರುಸೆಡಾನ್ (ಕಾಂಪ್ಯಾಕ್ಟ್ ಸೆಡಾನ್):
ನಮ್ಮ ಮಾರುಕಟ್ಟೆಯೇ ಹೀಗೆ, ಮಂದಿ ಬೇಡಿಕೆಗಳು ಮೇಲಿಂದ ಮೇಲೆ ಬದಲಾಗುತ್ತಲೇ ಇರುತ್ತವೆ ಅದಕ್ಕೆಂದೇ ಬಾರತದಲ್ಲಿ ಇದೀಗ ಕಿರು ಸೆಡಾನ್ ಕಾರುಗಳು ಅಣಿಗೊಂಡಿವೆ. ಇವುಗಳು ಅತ್ತ ಹ್ಯಾಚ್-ಬ್ಯಾಕ್ ಅಲ್ಲದೇ ಇತ್ತ ಸೆಡಾನ್ ಅಲ್ಲದೇ ಕಿರು-ಸೆಡಾನ್ ಎಂಬ ಹಣೆಪಟ್ಟಿ ಹೊತ್ತಿವೆ. ಸಾಮಾನ್ಯ ಸೆಡಾನ್ ಗಿಂತ ಕಡಿಮೆ ಬೆಲೆ, ಹ್ಯಾಚ್-ಬ್ಯಾಕ್ ಕಾರಿಗಿಂತ ಹೆಚ್ಚು ಸರಕುಚಾಚು ಹೊಂದಿರುವ ಕಿರು ಸೆಡಾನ್ ಕಳೆದೆರಡು ವರುಶಗಳಲ್ಲಿ ಹೆಚ್ಚಿನ ಮಂದಿಯನ್ನು ಸೆಳೆಯುತ್ತಿವೆ. ಹೊಂಡಾ ಅಮೆಜ್, ಸುಜುಕಿ ಸ್ವಿಪ್ಟ್ ಡಿಜಾಯರ್, ಹ್ಯುಂಡಾಯ್ ಅಕ್ಸೆಂಟ್ ಮತ್ತು ಟಾಟಾ ಜೆಸ್ಟ್ ಇವುಗಳಲ್ಲಿ ಪ್ರಮುಕವಾದವು.
ಆಟೋಟದ (sports) ಇಲ್ಲವೇ ಬಿರುಸಿನ ಕಾರು:
ಮಯ್ ನವಿರೇಳಿಸುವ ವೇಗ, ಅಳವುತನ (efficiency), ಹೆಚ್ಚಿನ ಬಲದಿಂದ ಮಾಡಲ್ಪಟ್ಟಿರುವ ಕಾರುಗಳೇ ಆಟೋಟ ಇಲ್ಲವೇ ಬಿರುಸಿನ ಕಾರುಗಳು ಎಂದು ಕರೆಯಬಹುದಾದ ಪಟ್ಟಿಗೆ ಸೇರಿವೆ. ಆಟೋಟದ ಕಾರುಗಳು ಓಡಿಸುಗರಿಗೆ ಮನತಲ್ಲಣಿಸುವ ಅನುಬವ ನೀಡುವಂತವು. ಹೆಚ್ಚಾಗಿ ಇವುಗಳಲ್ಲಿ ಇಬ್ಬರು ಕುಳಿತುಕೊಳ್ಳುವಶ್ಟೇ ಜಾಗ ಹೊಂದಿರುತ್ತವೆ. ಓಡಿಸುಗನ ಹಿಡಿತಕ್ಕೆ ಅನುವಾಗಲೆಂದು ಆಟೋಟದ ಕಾರುಗಳು ಕಡಿಮೆ ತೂಕ ಹೊಂದುವಂತೆ ಮಾಡಿರುತ್ತಾರೆ. ಇವುಗಳು ಎರಡು ಕದಗಳನ್ನು ಮಾತ್ರ ಹೊಂದಿರುತ್ತವೆ.
ಪೊರ‍್ಶ್, ಲಾಂಬೋರ‍್ಗಿನಿ, ಪೆರಾರಿ, ಮರ‍್ಸಿಡಿಸ್ ಮೆಕ್ಲಾರೆನ್, ಬಿ.ಎಂ.ಡ್ಬ್ಲ್ಯೂ, ಬೆಂಟ್ಲೆ, ಆಸ್ಟನ್ ಮಾರ‍್ಟಿನ್, ಜಾಗ್ವಾರ್ ಮುಂತಾದ ಕೂಟಗಳು ಇಂತ ಆಟೋಟದ ಕಾರುಗಳನ್ನು ಮಾಡುವುದರಲ್ಲಿ ಕ್ಯಾತಿ ಪಡೆದಿವೆ. ಪಾರ‍್ಮುಲಾ-1 ಪಣಗಳಲ್ಲಿ ಈ ಕಾರುಗಳದ್ದೇ ಕಾರುಬಾರು.
ಕೂಪೇ-ಕೂಪ್ ಕಾರುಗಳು:
ಪ್ರೆಂಚ್ ಪದ “ಕೂಪೇ”ಯಿಂದ ಈ ಕಾರುಗಳಿಗೆ ಹೆಸರು ಬಂದಿದೆ. ಇಂಗ್ಲಿಶ್ ನುಡಿಯಾಡುವರು ಇವನ್ನು ಕೂಪ್ ಎಂದು ಕರೆದರೆ, ಪ್ರೆಂಚ್ ರ ಪ್ರಬಾವ ಹೆಚ್ಚಿದ್ದ ಯೂರೋಪ್ ನಲ್ಲಿ ಇವುಗಳು ಕೂಪೇ ಕಾರುಗಳೆಂದೇ ಹೆಸರು ಪಡೆದಿದ್ದವು. ಕೂಪೇ ಕಾರುಗಳು ಆಟೋಟದ ಬಂಡಿಯಂತೆ ಎರಡು ಬಾಗಿಲು ಮತ್ತು ಇಬ್ಬರು ಕೂಡಲಶ್ಟೇ ಜಾಗ ಹೊಂದಿರುತ್ತವೆ. ಕೆಲವು ಕೂಪೇಗಳು ಹಿಂಬದಿಯಲ್ಲಿ ಕಿರಿದಾದ ಕೂರುವ ಜಾಗ ಹೊಂದಿರುತ್ತಿದ್ದವು. ಆದರೆ ಇವುಗಳು ಸೆಡಾನ್ ನಂತೆ ಮಯ್ ಪಡೆದಿರುವುದರಿಂದ ಇವುಗಳನ್ನು ಎರಡು ಬಾಗಿಲಿನ ಸೆಡಾನ್ ಎನ್ನಬಹುದು. 1930-40 ಹೊತ್ತಿನಲ್ಲಿ ಈ ಕಾರುಗಳು ಬಲು ಮೆಚ್ಚುಗೆಗಳಿಸಿದ್ದವು. ಮಂದಿಯ ಬಳಕೆಗೆ ತಕ್ಕಂತೆ ಕೂಪೇಗಳಲ್ಲೂ ಕ್ಲಬ್ ಕೂಪೇ, ಬಿಜಿನೆಸ್ ಕೂಪೇ, ಒಪೇರಾ ಕೂಪೇ ಗಳೆಂದು ಹಲವು ಬಗೆಗಳಾಗಿ ಬೇರ‍್ಪಡಿಸಲಾಗಿತ್ತು. ಇತ್ತಿಚೀನ ದಿನಗಳಲ್ಲಿ ಕೂಪೇ ಕಾರುಗಳು ಕಾಣಸಿಗುವುದು ಕಶ್ಟ.
ಮಾರ‍್ಪುಗಳು (convertibles):
ಹೆಸರೇ ಸೂಚಿಸುವಂತೆ ಇವುಗಳನ್ನು ಮಾರ‍್ಪಡಿಸಬಹುದು. ಕಾರಿನ ಮೇಲ್ಚಾವಣಿಯನ್ನು ಮಡಚಿ ಗಾಳಿಗೆ ತೆರೆದುಕೊಳ್ಳುವ ಕಾರುಗಳನ್ನಾಗಿಸಬಹುದು ಮತ್ತು ನಮಗೆ ಬೇಕೆಂದಾಗ ಮೇಲ್ಚಾವಣಿಯನ್ನು ಸೇರಿಸಿ ಸಾಮಾನ್ಯ ಬಂಡಿಗಳಂತೆ ಇವುಗಳನ್ನು ಬಳಸಬಹುದು. ಈ ಬಂಡಿಗಳು ಹೆಚ್ಚಾಗಿ ಅಮೇರಿಕಾ, ಯೂರೋಪ್ ನ ಬೀದಿಗಳಲ್ಲಿ ಕಾಣಸಿಗುತ್ತವೆ. ಮಾರ‍್ಪು ಕಾರುಗಳು ಹೆಚ್ಚಾಗಿ ಬಿಡುವಿನ ಹೊತ್ತಿನಲ್ಲಿ ದೂರದ ಊರಿನ ಪಯಣಗಳಿಗೆ ಬಳಸಲ್ಪಡುತ್ತವೆ. ಮರ‍್ಸಿಡಿಸ್, ಬಿ.ಎಂ.ಡ್ಬ್ಲ್ಯೂ ಮುಂತಾದ ಕೂಟಗಳ ಮಾರ‍್ಪು ಬಂಡಿಗಳು ಬಾರತದಲ್ಲೂ ಮಾರಾಟಕ್ಕಿವೆ.
ಲಿಮೊಸಿನ್ ಕಾರು:
ಉದ್ದನೆಯ, ಅತಿ ಹೆಚ್ಚಿನ ಗಾಲಿಗಳ ನಡುವಿನ ದೂರ ಹೊಂದಿರುವ ಲಿಮೊಸಿನ್ ಕಾರುಗಳನ್ನು ಸುಲಬವಾಗಿ ಗುರುತಿಸಬಹುದು. ಲಿಮೊಸಿನ್ ಕಾರುಗಳಲ್ಲಿ ಓಡಿಸುಗ ಮತ್ತು ಪಯಣಿಗರು ಕೂರುವ ಜಾಗಗಳು ಇತರೆ ಕಾರುಗಳಂತೆ ಇರದೇ, ಗೋಡೆಯಿಂದ ಬೇರ‍್ಪಟ್ಟಿರುತ್ತವೆ. ಲಿಮೊಸಿನ್ ಕಾರು, ಪ್ರೆಂಚ್ ನಾಡಿನ ಲಿಮೊಸ್ ಬಾಗದಿಂದ ಈ ಹೆಸರನ್ನು ಪಡೆದುಕೊಂಡಿದೆ. ಲಿಮೊಸ್ ಬಾಗದ ಮಂದಿ ತೊಡುಗೆಯಂತೆ ಈ ಕಾರುಗಳನ್ನು ಮಾಡಲಾಗಿರುತ್ತದಂತೆ.
ಲಿಮೊಸಿನ್ಗಳು ಮದುವೆಯಲ್ಲಿ ಮದುಮಕ್ಕಳ ಹೊತ್ತೊಯ್ಯಲು, ಅವ್ತಣ ಕೂಟ ಇಂತ ಮೊದಲಾದ ಸಮಾರಂಬಗಳಲ್ಲಿ ಬಳಕೆ ಮಾಡಲಾಗುತ್ತದೆ.
ಹಲ ಬಳಕೆಯ ಬಂಡಿಗಳು (Multi Utility Vehicles – MUV):
ಹಲ ಬಳಕೆಯ ಬಂಡಿಗಳು ಸಾಮಾನ್ಯದ ಕಾರುಗಳಿಗಿಂತ ದೊಡ್ಡದಾಗಿದ್ದು 5 ಹೆಚ್ಚಿನ ಜನರು ಕುಳಿತು ಸಾಗಲು ಮಾಡಲಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನ ಸರಕನ್ನು ಸಾಗಿಸಲು ಜಾಗವಿರುತ್ತದೆ. ಇವುಗಳಲ್ಲಿ ಕೂಡ ಹಲ ಬಳಕೆಯ, ಆಟೋಟದ ಬಳಕೆಯ ಬಂಡಿಗಳೆಂದು ಬೇರ‍್ಮೆ ಇದೆ. ಹಲ ಬಳಕೆಯ ಬಂಡಿಗಳು ಹೆಚ್ಚಾಗಿ ಜನರನ್ನು ಮತ್ತು ಸರಕನ್ನು ಹೊತ್ತೊಯ್ಯಲು ತಕ್ಕ ಆಕಾರ, ಗಾತ್ರದಲ್ಲಿ ಸಿದ್ದಗೊಳಿಸಿರಲಾಗುತ್ತದೆ. ಆದರೆ ಆಟೋಟದ ಬಳಕೆಯ ಬಂಡಿಗಳು ಗುಡ್ಡಗಾಡು, ಕಣಿವೆ, ಬಿರುಸಿನ ತಿರುವುಗಳ ಕಿರಿದಾರಿಗಳಲ್ಲಿ ಸುಲಬವಾಗಿ ಮುನ್ನುಗ್ಗುವ ಬಲ ಪಡೆದುಕೊಂಡಿರುತ್ತವೆ. ಆಟೋಟದ ಬಳಕೆಯ ಬಂಡಿಗಳು ಸರಕು ಸಾಗಣೆಗಿಂತಲೂ ಹೆಚ್ಚಾಗಿ ಮಂದಿಯ ಪಯಣಕ್ಕೆ ಬಳಕೆಯಾಗುತ್ತವೆ.
ಬಾರತದ ಮಹೀಂದ್ರಾ ಮತ್ತು ಮಹೀಂದ್ರಾ ಹಲ ಬಳಕೆಯ ಬಂಡಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಬೊಲೆರೊ, ಸ್ಕಾರ‍್ಪಿಯೊ, ಜಾಯ್ಲೊ, ಎಕ್ಸ್.ಯು.ವಿ.5.ಒ.ಒ ಮುಂತಾದ ಮಾದರಿಗಳು ಮಹೀಂದ್ರಾ ಕೂಟ ಮಾರಾಟ ಮಾಡುತ್ತಿರುವ ಹಲಬಳಕೆಯ ಬಂಡಿಗಳು. ಪೋರ‍್ಡ್ ಎಂಡೆವರ್, ಟೊಯೊಟಾ ಪಾರ‍್ಚುನರ್, ಮಿಟ್ಸುಬಿಸಿ ಪಾಜೆರೊ, ಟಾಟಾ ಸ್ಟಾರ‍್ಮ್, ಹೊಂಡಾ ಸಿಆರ‍್ವಿ, ಜಿ.ಎಂ.ನವರ ಟವೆರಾ ಬಾರತದ ಮಾರುಕಟ್ಟೆಯಲ್ಲಿರುವ ಪ್ರಮುಕ ಹಲಬಳಕೆಯ ಬಂಡಿಗಳು.
(ತಿಟ್ಟ ಮತ್ತು ಮಾಹಿತಿ ಸೆಲೆಗಳು: wikipedia.org, www.infovisual.info, www.m3forum.net)
ಇತ್ತೀಚಿನ ಅನಿಸಿಕೆಗಳು