LHC ಎಂಬ ಪೆರ‍್ಚೂಟಿ

ಪ್ರಶಾಂತ ಸೊರಟೂರ.

ವಸ್ತುಗಳಿಗೆ ರಾಶಿಯನ್ನು ಒದಗಿಸುತ್ತವೆ ಎಂದು ಗಣಿತದ ನೆಲೆಯಲ್ಲಿ ಅರುಹಿದ ಹಿಗ್ಸ್ ಬೋಸಾನ್ (Higgs boson) ತುಣುಕುಗಳ ಹುಟ್ಟಿನ ಬಗ್ಗೆ ಹಿಂದಿನ ಬರಹದಲ್ಲಿ ತಿಳಿದುಕೊಂಡೆವು. ಹಿಗ್ಸ್ ಬೋಸಾನ್ಸ್ ದಿಟವಾಗಿ ಇವೆಯೇ? ಇಲ್ಲವೇ ಇವುಗಳು ಬರೀ ಅರಿಮೆಯ ಊಹೆಯೇ? ಎನ್ನುವುದನ್ನು ಒರೆಗೆಹಚ್ಚಲು ನಡೆಸಿದ ಕೆಲಸವು ಮನುಶ್ಯರು ಇಲ್ಲಿಯವರೆಗೆ ಮಾಡಿರದ ಎಲ್ಲಕ್ಕಿಂತ ದೊಡ್ಡ ಸಲಕರಣೆಯನ್ನು ಕಟ್ಟುವಂತೆ ಮಾಡಿತು. ಅದುವೇ ಸ್ವಿಟ್ಸರ‍್ಲೆಂಡ್ ಮತ್ತು ಪ್ರಾನ್ಸ್ ಗಡಿಯ ನೆಲದಡಿಯಲ್ಲಿ ಸುಮಾರು 27 ಕೀ.ಮೀ. ಸುತ್ತಳತೆಯಲ್ಲಿ ಕಟ್ಟಿರುವ ಪಾರ‍್ಟಿಕಲ್ ಎಕ್ಸಲರೇಟರ‍್ ಅಂದರೆ ತುಣುಕುಗಳ ವೇಗಯೇರಿಸುಕ ಎಂಬ ಪೆರ‍್ಚೂಟಿ (machine). ಇದನ್ನು ಕೂಡುವಣಿಗಳ ದೊಡ್ಡ ಗುದ್ದುಕ (Large Hadron Collider – LHC) ಅಂತಾನೂ ಕರೆಯುತ್ತಾರೆ.

LHC_tommytoy.typepad.com

ಹೊಸಗಾಲದ ಇರುವರಿಮೆಯಲ್ಲಿ (modern physics) ಅಣುಗಳ ಒಳರಚನೆಯ ಬಗ್ಗೆ ಸಾಕಶ್ಟು ತಿಳುವಳಿಕೆಯಿದ್ದರೂ ಹಿಗ್ಸ್ ಬೋಸಾನ್ ತುಣುಕಗಳ ಕುರಿತು ಮತ್ತು ಎಲ್ಲ ಬಗೆಯ ಕಿರುತುಣುಕುಗಳ ಒಟ್ಟಾರೆ ನೋಟವನ್ನು ಒದಗಿಸುವ ಒಂತನದ ಮಾದರಿಯ (standard model) ಕುರಿತು ಹಲವಾರು ಪ್ರಶ್ನೆಗಳು ಇರುವರಿಗರ ನಿದ್ದೆಗೆಡಿಸಿದ್ದವು. ಇವುಗಳು ಇದ್ದಿರಬಹುದು ಅಂತಾ ತಿಳಿದುಕೊಳ್ಳಬೇಕೆಂದರೂ ಮನುಶ್ಯರು ಹಿಂದೆಂದೂ ಮಾಡಿರದ ಕೆಲಸಕ್ಕೆ ಕೈಹಾಕಬೇಕಿತ್ತು. ಏಕೆಂದರೆ ಗಣಿತದ ನೆಲೆಯಲ್ಲಿ ಮೈದಾಳಿದ್ದ ಹಿಗ್ಸ್ ಬೋಸಾನ್ ತುಣುಕುಗಳನ್ನು ಕಾಣಬೇಕೆಂದರೆ ನಮ್ಮ ಒಟ್ಟವ (universe) ಹುಟ್ಟುವ ಹೊತ್ತಿನಲ್ಲಿದ್ದ ಹೇರಳವಾದ ಬಿಸುಪು, ತುಣುಕುಗಳ ಗುದ್ದಾಟ, ಎಲ್ಲೆ ಮೀರಿದ ವೇಗವನ್ನು ಮತ್ತೇ ಹುಟ್ಟುಹಾಕಬೇಕು.

ಒಟ್ಟವದ ಬಗ್ಗೆ ಈಗಿರುವ ನಮ್ಮ ತಿಳುವಳಿಕೆಯೆಂದರೆ, ಗ್ರಹಗಳು, ಅರಿಲುಗಳು, ಬಾನಬಂಡೆಗಳು ಒಟ್ಟಾರೆಯಾಗಿ ನಾವಿಂದು ಬೇರೆ ಬೇರೆಯಾಗಿವೆಯೆಂದು ಊಹಿಸಬಹುದಾದ ಬಾನತುಣುಕುಗಳು ಒಂದು ಚಿಕ್ಕ ಚಂಡಿನ ಅಳತೆಯಲ್ಲಿ ಅಡಕಗೊಂಡಿದ್ದವು. ಈ ಅಡಕಗೊಂಡ ಇಟ್ಟಳ ಸುಮಾರು 13.8 ಬಿಲಿಯನ್ ವರುಶಗಳ ಹಿಂದೆ ಪಸರಿಸಲು ಶುರುವಾಯಿತು. ಆಗ ಶುರುವಾದ ಪಸರಿಸುವಿಕೆಯು ಮೊದಲಿಗೆ ಕಿರುತುಣುಕುಗಳು ಆಮೇಲೆ ಅಣುಗಳು, ವಸ್ತುಗಳು, ಗ್ರಹಗಳು, ಅರಿಲುಗಳು ಮುಂತಾದ ಅಡಕಗಳಾಗಿ ಮೈದಾಳಿದವು. ಅಡಕದಿಂದ ಪಸರಿಸುವಿಕೆ ಶುರುವಾದ ಪಾಡನ್ನು ಬಿಗ ಬ್ಯಾಂಗ್ ಅಂದರೆ ದೊಡ್ಡ ಹಬ್ಬುವಿಕೆ ಇಲ್ಲವೇ ಹಿರಿ ಹಬ್ಬು ಎಂದು ಕರೆಯಲಾಗುತ್ತದೆ.

big-bang

ಹಿರಿ ಹಬ್ಬುವಿಕೆ ಮೊದಲಗೊಂಡ ಹೊತ್ತಿನಲ್ಲಿ ಒಳಗೆ ಅಡಕಗೊಂಡಿದ್ದ ಹೇರಳವಾದ ಕಸುವು ಬಿಡುಗಡೆಯಾಗ ತೊಡಗಿತು. ಮುಂದೆ ಹಲವು ಬಿಲಿಯನ್ ಎಣಿಕೆಯಲ್ಲಿ ಕಿರುತುಣುಕುಗಳು ಮೈದಾಳಿದಾಗ ಅವುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವುದು, ಕೆಲವು ತುಣುಕುಗಳು ಒಂದಕ್ಕೊಂದು ಬೆಸೆದುಕೊಳ್ಳುವಂತಹ ಬೆಳವಣಿಗೆಗಳಾದವು.

ಈ ಗುದ್ದಾಟದಲ್ಲಿ ಕಳೆವಣಿಗಳು, ಕೂಡುವಣಿಗಳಂತಹ ಕೆಲವು ಕಿರುತುಣುಕುಗಳು ನೆಲೆನಿಂತವು ಅದೇ ಇನ್ನೂ ಹಲವು ಪುಟಾಣಿ ತುಣುಕುಗಳು ಕೆಲ ಗಳಿಗೆಯವರೆಗೆ ಮೈದಾಳಿ ಬೇರೆ ತುಣುಕುಗಳಾಗಿ ಮಾಯಾವಾದವು. ಹಾ…ಹೀಗೆ ಕೆಲ ಗಳಿಗೆಯವರೆಗೆ ಕಾಣಿಸಿಕೊಂಡು ಮಾಯಾವಾದ ಇಂತಹ ತುಣುಕುಗಳಲ್ಲಿ ಹಿಗ್ಸ್ ಬೋಸಾನ್ ತುಣುಕುಗಳೂ ಒಂದು. ಇವುಗಳನ್ನು ಮತ್ತೇ ಕಾಣಬೇಕೆಂದರೆ ಹಿರಿ ಹಬ್ಬುವಿಕೆಯ ಪಾಡನ್ನು ಮರುಹುಟ್ಟಿಸುವುದನ್ನು ಬಿಟ್ಟು ಅರಿಗರಿಗೆ ಬೇರೆ ದಾರಿಯಿರಲಿಲ್ಲ. ಹೀಗೆ ಶುರುವಾದ ದಾರಿ ಮೇಲೆ ತಿಳಿಸಿದ ಪೆರ‍್ಚೂಟಿಯ ಕಟ್ಟಣೆಯ ಕೆಲಸದೆಡೆಗೆ ಸಾಗಿತು.

ಅಣು ನಡುವಣ ಅರಸುವಿಕೆಯ ಯುರೋಪ್ ಒಕ್ಕೂಟ (European Organization for Nuclear Research – CERN) 1998 ರಿಂದ 2008 ರವರೆಗೆ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸಲಕರಣೆಯಾದ ’ತುಣುಕುಗಳ ವೇಗಯೇರಿಸುಕ’ವನ್ನು (particle accelerator) ಕಟ್ಟಿ ಅಣಿಗೊಳಿಸಿತು. ಈ ಕಟ್ಟಣೆಯ ಕೆಲಸದಲ್ಲಿ 100 ದೇಶಗಳ ಸುಮಾರು 10,000 ಅರಿಗರು ಪಾಲ್ಗೊಂಡರು. ಈ ಪೆರ‍್ಚೂಟಿಯ ಬಾಗಗಳು, ಅವುಗಳು ಕೆಲಸ ಮಾಡುವ ಬಗೆಯ ಕುರಿತು ಈಗ ತಿಳಿದುಕೊಳ್ಳೋಣ.

’ತುಣುಕುಗಳ ವೇಗಯೇರಿಸುಕ’ವು ಮುಕ್ಯವಾಗಿ 5 ಹಂತಗಳನ್ನು ಒಳಗೊಂಡಿದೆ.

1. ನೇರ ವೇಗಯೇರಿಸುಕ (linear accelerator – LINAC 2, 3)
2. ಕೂಡುವಣಿಗಳ ಮೇಳೈಕೆಯ ಒತ್ತುಕ (Proton Synchrotron Booster)
3. ಕೂಡುವಣಿಗಳ ಮೇಳೈಕ (Proton Synchrotron)
4. ಕೂಡುವಣಿಗಳ ಮೀರಿದ ಮೇಳೈಕ (Super Proton Synchrotron)
5. ಕೂಡುವಣಿಗಳ ದೊಡ್ಡ ಗುದ್ದುಕ (Large Hadron Collider – LHC)

particle-accelerator-lhc

ಮೊದಲ ಹಂತದಲ್ಲಿ ಹೈಡ್ರೋಜನ್ ಆವಿಯನ್ನು ಒತ್ತಡವಿರುವ ಕಿರುಕೋಣೆಯೊಳಗೆ ಹರಿಸಲಾಗುತ್ತದೆ. ಇಲ್ಲಿ ಹೈಡ್ರೋಜನ್ ಅಣುಗಳಲ್ಲಿರುವ ಕಳೆವಣಿಗಳನ್ನು ಬೇರ‍್ಪಡಿಸಿ ಬರೀ ಕೂಡುವಣಿಗಳನ್ನು ನೇರ ವೇಗಯೇರಿಸುಕದೊಳಗೆ ಸಾಗಿಸಲಾಗುತ್ತದೆ. ವೇಗಯೇರಿಸುಕದಲ್ಲಿ ಕೂಡು ಹುರುಪಿನ (positive charge) ನೆರವಿನಿಂದ ಕೂಡುವಣಿಗಳ ವೇಗವನ್ನು ಹೆಚ್ಚಿಸಲಾಗುತ್ತದೆ. ಈ ಹಂತದಲ್ಲಿ ಕೂಡುವಣಿಗಳು ಬೆಳಕಿನ ವೇಗದ ಸುಮಾರು 1/3 ನಶ್ಟು ವೇಗವನ್ನು ಪಡೆದುಕೊಳ್ಳುತ್ತವೆ. ಅಂದರೆ ಕೂಡುವಣಿಗಳು ಇಲ್ಲಿ ಪ್ರತಿ ಸೆಕೆಂಡಿಗೆ ಸುಮಾರು 1 ಲಕ್ಶ ಕಿ.ಮೀ. ವೇಗವನ್ನು ಪಡೆದುಕೊಳ್ಳುತ್ತವೆ.

ಎರಡನೆಯ ಹಂತದಲ್ಲಿ ಕೂಡುವಣಿಗಳ ವೇಗವನ್ನು ಇನ್ನಶ್ಟು ಹೆಚ್ಚಿಸಲು ಸುಮಾರು 157 ಮೀ ಸುತ್ತಳತೆ ಹೊಂದಿರುವ ನಾಲ್ಕು ಒತ್ತುಕಗಳಿಗೆ ಸಾಗಿಸಲಾಗುತ್ತದೆ. ಇವುಗಳಿಗೆ ಕೂಡುವಣಿಗಳ ಮೇಳೈಕೆಯ ಒತ್ತುಕ (Proton Synchrotron Booster) ಎನ್ನುತ್ತಾರೆ. ಇಲ್ಲಿ ಮಿಂಚು (electricity) ಮತ್ತು ಸೂಜಿಗಲ್ಲಿನ (magnet) ನೆರವಿನಿಂದ ಕೂಡುವಣಿಗಳ ವೇಗ ಹೆಚ್ಚಿಸುವುದರ ಜತೆಗೆ, ಅವುಗಳನ್ನು ಒಂದು ಸುತ್ತಿನಲ್ಲಿ ಹರಿಯುವಂತೆ ಮಾಡಲಾಗುತ್ತದೆ. ಸುತ್ತಿನಲ್ಲಿ ಹರಿಸಿದರೆ ವೇಗವನ್ನು ಹೆಚ್ಚಿಸಲು ಸುಲಬವಾಗುತ್ತದೆ. ಈ ಹಂತದಲ್ಲಿ ಕೂಡುವಣಿಗಳ ವೇಗವು ಬೆಳಕಿನ ವೇಗದ ಸುಮಾರು 91.6% ರಶ್ಟು ಮಟ್ಟವನ್ನು ತಲುಪುತ್ತದೆ.

ಮೂರನೆಯ ಹಂತವು ಕೂಡುವಣಿಗಳ ವೇಗವನ್ನು ಇನ್ನಶ್ಟು ಹೆಚ್ಚಿಸಲು ಸುಮಾರು 628 ಮೀ. ಸುತ್ತಳತೆ ಹೊಂದಿರುವ ಕೂಡುವಣಿಗಳ ಮೇಳೈಕ (Proton Synchrotron) ಎಂಬ ಸಲಕರಣೆಯನ್ನು ಹೊಂದಿರುತ್ತದೆ. ಇಲ್ಲಿ ಹೆಚ್ಚಿಸಲಾದ ಕೂಡುವಣಿಗಳ ವೇಗವು ಬೆಳಕಿನ ವೇಗದ 99.9% ರಶ್ಟಿರುತ್ತದೆ. ಅಂದರೆ ಈ ಹಂತದಲ್ಲಿ ಕೂಡುವಣಿಗಳು ಪ್ರತಿ ಸೆಕೆಂಡಿಗೆ ಸುಮಾರು 3 ಲಕ್ಶ ಕಿ.ಮೀ. ವೇಗದಲ್ಲಿ ಸಾಗುತ್ತವೆ. ಈ ಹಂತದಲ್ಲಿ ಕೂಡುವಣಿಗಳು ಸುಮಾರು 25 GeV ನಶ್ಟು ಶಕ್ತಿಯನ್ನು ಪಡೆದುಕೊಳ್ಳುತ್ತವೆ.

(1 ವೋಲ್ಟ್ ಕಸುವನ್ನು ನೀಡಿದಾಗ ಕಳೆವಣಿಯು ಪಡೆಯುವ ಶಕ್ತಿಯ ಪ್ರಮಾಣವನ್ನು 1 eV ಅನ್ನುತ್ತಾರೆ. ಇದು 1.6 × 10-19 joules ಗೆ ಸಾಟಿಯಾಗಿರುತ್ತದೆ. ’G’/ಗಿಗಾ ಅಂದರೆ 109)

ಇಲ್ಲಿ ಒಂದು ವಿಶಯವನ್ನು ಗಮನಿಸಬೇಕು, ಐನ್‍ಸ್ಟೀನ್‍ರ ಹೋಲಿಕೆಯ ಕಟ್ಟಲೆಯ (theory of relativity) ಪ್ರಕಾರ,

ಯಾವೊಂದು ವಸ್ತುವೂ ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಗಲಾರದು. ವಸ್ತುವು ಬೆಳಕಿನ ವೇಗದ ಹತ್ತಿರಕ್ಕೆ ತಲುಪಿದಾಗ ಇನ್ನಶ್ಟು ಶಕ್ತಿಯನ್ನು ನೀಡಿದರೆ, ಆ ಶಕ್ತಿಯು ವಸ್ತುವಿನ ವೇಗವನ್ನು ಹೆಚ್ಚಿಸದೇ ಅದರ ರಾಶಿಯನ್ನು ಹೆಚ್ಚಿಸುತ್ತದೆ.

ಈ ತಿಳುವಳಿಕೆಯಂತೆ ಮೇಲಿನ ಮೂರನೆಯ ಹಂತದಲ್ಲಿ ಕೂಡುವಣಿಗಳ ವೇಗವು ಬೆಳಕಿನ ವೇಗಕ್ಕೆ ತುಂಬಾ ಹತ್ತಿರದಲ್ಲಿರುವುದರಿಂದ ಮತ್ತು ಸುಮಾರು 25 GeV ಶಕ್ತಿಯನ್ನು ಹೊಂದಿರುವುದರಿಂದ, ರಾಶಿಯು ಅವುಗಳು ನೆಲೆನಿಂತಾಗ ಹೊಂದಿದ್ದ ರಾಶಿಗಿಂತ ಸುಮಾರು 25 ಪಟ್ಟು ಹೆಚ್ಚಿರುತ್ತದೆ.

ನಾಲ್ಕನೆಯ ಹಂತದಲ್ಲಿ ಕೂಡುವಣಿಗಳಿಗೆ ಇನ್ನಶ್ಟು ಶಕ್ತಿಯನ್ನು ಹರಿಸಲಾಗುತ್ತದೆ. ಸುಮಾರು 7 ಕಿ.ಮೀ. ಸುತ್ತಳತೆ ಹೊಂದಿರುವ ಈ ಹಂತದ ಸಲಕರಣೆಯನ್ನು ಕೂಡುವಣಿಗಳ ಮೀರಿದ ಮೇಳೈಕ (Super Proton Synchrotron) ಎಂದು ಕರೆಯಲಾಗುತ್ತದೆ. ಇಲ್ಲಿ ಕೂಡುವಣಿಗಳು ಸುಮಾರು 450 GeV ಶಕ್ತಿಯನ್ನು ಪಡೆದುಕೊಳ್ಳುತ್ತವೆ.

ಇನ್ನು, ಐದನೆಯ ಹಂತವೇ ಸುಮಾರು 27 ಕಿ.ಮೀ. ಸುತ್ತಳತೆಯಲ್ಲಿ ಹರಡಿರುವ ಕೊಳವೆಗಳ ದೊಡ್ಡ ಸಲಕರಣೆ. ಇದನ್ನು ಕೂಡುವಣಿಗಳ ದೊಡ್ಡ ಗುದ್ದುಕ (Large Hadron Collider – LHC) ಎಂದು ಕರೆಯಲಾಗುತ್ತದೆ. ಹೆಸರೇ ಹೇಳುವಂತೆ ಕೂಡುವಣಿಗಳ ಗುದ್ದಾಟಕ್ಕೆ ಅಣಿಗೊಂಡಿರುವ ಸಲಕರಣೆಯಿದು.

ಕೂಡುವಣಿಗಳು ನಾಲ್ಕನೆಯ ಹಂತದಿಂದ ಈ ಸಲಕರಣೆಯೆಡೆಗೆ ಎರಡು ಕವಲುಗಳಾಗಿ ಸಾಗುತ್ತವೆ. ಕೂಡುವಣಿಗಳ ಒಂದು ಗೊಂಚಲು ಬಲತಿರುವಿನಲ್ಲಿ ಸುತ್ತಿದರೆ ಇನ್ನೊಂದು ಗೊಂಚಲು ಎಡತಿರುವಿನಲ್ಲಿ ಸುತ್ತುತ್ತವೆ. ನಾಲ್ಕನೆಯ ಹಂತದಿಂದ ಈ ಸಲಕರಣೆಗೆ ಹಂತ ಹಂತವಾಗಿ ಸುಮಾರು 28,808 ಕೂಡುವಣಿಗಳ ಗೊಂಚಲುಗಳನ್ನು ಸಾಗಿಸಲಾಗುತ್ತದೆ. ಈ ಹಂತದಲ್ಲಿ ಮೊದಲಿಗೆ ಕೂಡುವಣಿಗಳಿಗೆ ಇನ್ನಶ್ಟು ಹೆಚ್ಚಿನ ಶಕ್ತಿಯನ್ನು ನೀಡಲಾಗುತ್ತದೆ. ಇಲ್ಲಿ ಕೂಡುವಣಿಗಳು ಸುಮಾರು 4 TeV (Terra-T =1012) ಶಕ್ತಿಯನ್ನು ಹೊಂದುತ್ತವೆ. ಇಶ್ಟೊಂದು ಹೇರಳವಾದ ಶಕ್ತಿಯನ್ನು ಪಡೆದುಕೊಂಡ ಕೂಡುವಣಿಗಳ ಗುದ್ದಾಟಕ್ಕೆ ಇನ್ನೇನು ಅಂಕಣ ಅಣಿಯಾದಂತಾಯಿತು.

ಬಲತಿರುವಿನಲ್ಲಿ ಮತ್ತು ಎಡತಿರುವಿನಲ್ಲಿ ಸುತ್ತುತ್ತಿರುವ ಕೂಡುವಣಿಗಳನ್ನು ಒಂದಕ್ಕೊಂಡು ಡಿಕ್ಕಿ ಹೊಡೆಯುವಂತೆ ಮಾಡಲಾಗುತ್ತದೆ. ಹೀಗೆ ಹೇರಳವಾದ ಶಕ್ತಿಯನ್ನು ಹೊಂದಿ, ಬೆಚ್ಚಿ ಬೀಳಿಸುವ ವೇಗದಲ್ಲಿ ಒಂದಕ್ಕೊಂದು ಗುದ್ದಿದ ಕೂಡುವಣಿಗಳು ಬಿಗ್ ಬ್ಯಾಂಗ್‍ನಲ್ಲಿ ಉಂಟಾದ ಹಲವು ಕಿರುತುಣುಕುಗಳನ್ನು ಒಂದು ಕ್ಶಣ ತೋರಿಸಬಲ್ಲವು. ಈ ಗುದ್ದುವಿಕೆಯ ಕ್ಶಣಗಳನ್ನು ಒರೆಗೆಹಚ್ಚಲು ಗುದ್ದುಕದ ನಾಲ್ಕು ಕಡೆ ಕಾಣುವೆಗಳನ್ನು (detectors) ಅಣಿಗೊಳಿಸಲಾಗಿರುತ್ತದೆ.

ಈ ಪೆರ‍್ಚೂಟಿಯ ಕೆಲಸ ಮಾಡುವ ಬಗೆಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು…

[youtube https://www.youtube.com/watch?v=qQNpucos9wc&w=560&h=315]

2008 ರಲ್ಲಿ ಹೀಗೆ ಕೆಲಸಕ್ಕಿಳಿದ ದೊಡ್ಡ ಗುದ್ದುಕದಿಂದ ನಮಗೆ ದೊರೆತದ್ದೇನು? ಹಿಗ್ಸ್ ಬೋಸಾನ್ಸ್ ಕಂಡವೇ? ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆಗಳೇನು? ಅನ್ನುವುದನ್ನು ಮುಂದಿನ ಬರಹದಲ್ಲಿ ತಿಳಿದುಕೊಳ್ಳೋಣ.

(ತಿಳಿವಿನ ಮತ್ತು ತಿಟ್ಟಸೆಲೆಗಳು: CERN, wikipedia.org, www.redorbit.comtommytoy.typepad.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 23/03/2015

    […] ಅಣಿಗೊಳಿಸಿದ್ದರ ಕುರಿತು ಕಳೆದ ಬರಹದಲ್ಲಿ ತಿಳಿದುಕೊಂಡೆವು. ಕೂಡುವಣಿಗಳ (protons) […]

ಅನಿಸಿಕೆ ಬರೆಯಿರಿ: